ಪುರುಷ ಸೂಕ್ತ



ಪುರುಷ ಸೂಕ್ತ

ಭೂಮಿಕ :

ಪುರುಷ ಸೂಕ್ತ ( ಅಥವಾ ಪೌರುಷ ) ಎಂದು ಪ್ರಚಲಿತವಾದ ಸೂಕ್ತವು ಮೂಲದಲ್ಲಿ ಋಗ್ವೇದದಲ್ಲಿ ಕಂಡುಬರುವುದು. ಅದು ಶುಕ್ಲ ಯಜುರ್ವೇದ ವಾಜಸನೇಯ ಸಂಹಿತೆ, ಶತಪಥ ಬ್ರಾಹ್ಮಣ, ತೈತ್ತಿರೀಯ ಆರಣ್ಯಕ, ಆಪಸ್ತಂಭ ಶ್ರೌತ ಸೂತ್ರಗಳಲ್ಲೂ ಕಾಣುವುದು.
ಈ ಸೂಕ್ತವು ವೃದ್ಧಹಾರೀತ ಸಂಹಿತೆಯಲ್ಲಿ 'ಸಹಸ್ರಶೀರ್ಷ ಸೂಕ್ತ" ವೆಂದೂ ಉಲ್ಲೆಖಿಸಲಾಗಿದೆ. ಇದಲ್ಲದೇ ತೈತ್ತಿರೀಯ ಆರಣ್ಯಕದಲ್ಲಿ 13 ಮಂತ್ರಗಳ ಮಹಾನಾರಾಯಣೋಪನಿಷದ್ ಮತ್ತೊಂದು ಪುರುಷ ಸೂಕ್ತ. ಇದು " ಸಹಸ್ರಶೀರ್ಷಂ ದೇವಮ್" ಎಂಬ ಪದಗಳಿಂದ ಪ್ರಾರಂಭವಾಗುತ್ತದೆ. ಈ ಸೂಕ್ತದಲ್ಲೂ ಪುರುಷನ ಕಲ್ಯಾಣ ಗುಣಗಳನ್ನು ಸ್ತುತಿಸಲಾಗಿದೆ. ಇದನ್ನು "ಮಹಾ ನಾರಾಯಣೀಯಮ್" ಎಂದು ಕರೆಯಲಾಗಿದೆ. ಪುರುಷ ಸೂಕ್ತದ ಋಷಿಯಾದ ನಾರಾಯಣನಿಗೆ ಇದು ಸಂಬಂಧಪಟ್ಟಿದೆ.
ಋಗ್ವೇದ ಸಂಹಿತೆಯ ಪುರುಷ ಸೂಕ್ತದಲ್ಲಿ 16 ಮಂತ್ರಗಳಿವೆ ಹಾಗೂ ಈ ಎಲ್ಲಾ 16 ಮಂತ್ರಗಳೂ ಯಜುರ್ವೇದದಲ್ಲೂ ಕೆಲವು ವ್ಯತ್ಯಾಸಗಳೊಂದಿಗೆ ಕಾಣುವುದು. ಯಜುರ್ವೇದದಲ್ಲಿ ಕೃಷ್ಣ ಹಾಗೂ ಶುಕ್ಲ ಯಜುರ್ವೇದ ಶಾಖೆಗಳಿವೆ. ಕೃಷ್ಣ ಯಜುರ್ವೇದದ ತೈತ್ತಿರೀಯ ಶಾಖೆಯಲ್ಲಿ ಪುರುಷನನ್ನು ಕುರಿತು 18 ಮಂತ್ರಗಳಿವೆ. ಅದರಲ್ಲಿ ಋಗ್ವೇದದ ಎಲ್ಲಾ 16 ಮಂತ್ರಗಳೂ ಇರುವುದು. ತೈತ್ತಿರೀಯ ಆರಣ್ಯಕದಲ್ಲಿ ಮಂತ್ರದ ನಿರೂಪಣಾ ಕ್ರಮವು ಋಗ್ವೇದದಲ್ಲಿನ ಕ್ರಮಕ್ಕಿಂತಲೂ ಬೇರೆಯಾಗಿದೆ. ತೈತ್ತರೀಯ ಆರಣ್ಯಕದ 16 ಮತ್ತು 17 ನೇ ಮಂತ್ರಗಳು ಋಗ್ವೇದದಲ್ಲಿ ಇರುವುದಿಲ್ಲ. ಆದರೆ ಶ್ವೇತಾಶ್ವತರ ಉಪನಿಷತ್ತಿನಲ್ಲಿ 16ನೇ ಮಂತ್ರವು ಇರುವುದು.

ಯಜುರ್ವೇದಿಗಳು ಪುರುಷ ಸೂಕ್ತದ ಮುಂದುವರೆದ ಭಾಗವೆಂದು ತೈತ್ತಿರೀಯ ಆರಣ್ಯಕದಲ್ಲಿನ ಹೆಚ್ಚಿನ ಆರು ಮಂತ್ರಗಳನ್ನು ಪಠಿಸುವರು. ಇದರಲ್ಲಿ ಮೊದಲನೇ ಮಂತ್ರವು "ಅದ್ಭ್ಯಃ ಸಂಭೂತಃ" ಎಂಬ ಪದದಿಂದ ಪ್ರಾರಂಭವಾಗುತ್ತದೆ.

ಇದಲ್ಲದೇ ವಿಶ್ವ ಪುರುಷ ನಾರಾಯಣ ಸೂಕ್ತದಲ್ಲಿನ 12 ಮಂತ್ರಗಳ ಸೂಕ್ತವೂ ಸಹ ಪುರುಷನೊಂದಿಗೆ ಸಂಬಂಧಿಸಲ್ಪಟ್ಟಿದೆ. ಈ ಸೂಕ್ತವೂ ತೈತ್ತಿರೀಯ ಆರಣ್ಯಕದಲ್ಲಿ ಮತ್ತು ಮಹಾನಾರಾಯಣೋಪನಿಷತ್ತಿ ನಲ್ಲಿ ಕಂಡುಬರುವುದು.

ಸಾಮಾನ್ಯವಾಗಿ ಎಲ್ಲಾ ಪ್ರಮುಖ ಉಪನಿಷತ್ತುಗಳಲ್ಲಿ ಪುರುಷ ಕಲ್ಪನೆಯು ಸವಿಸ್ತಾರವಾಗಿ ಚರ್ಚಿಸಲ್ಪಟ್ಟಿದ್ದರೂ ಸಹ, ಈ ಅಂಶವು ವ್ಯಾಪಕವಾಗಿ ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ.

ಋಗ್ವೇದದಲ್ಲಿ ಕಂಡುಬರುವ ಗಾಯತ್ರೀ ಮಂತ್ರದ ದೇವತೆಯಾದ ಸವಿತೃವು ಋಗ್ವೇದದ ಪುರುಷ ಸೂಕ್ತದ ಪುರುಷನ ತದ್ರೂಪವಾಗಿದೆ ಹಾಗೂ ಇಡೀ ವೈದಿಕ ಸಂಪ್ರದಾಯವು ಪುರುಷ ಸೂಕ್ತದ ಮೇಲ್ಪಂಕ್ತಿಯನ್ನು ಅನುಸರಿಸುತ್ತದೆ. ಛಾಂದೋಗ್ಯ ಉಪನಿಷತ್ತಿನಲ್ಲಿ ಗಾಯತ್ರಿ ಮಂತ್ರದ ನಾಲ್ಕು ಸಾಲುಗಳ ಮತ್ತು ಪುರುಷನ ನಾಲ್ಜು ಹೆಜ್ಜೆಗಳ ನಡುವಿನ ಸಾಮ್ಯತೆಯನ್ನು ನಿರೂಪಿಸುತ್ತದೆ.

ಪುರುಷ ಶಬ್ದವು ಮಾನವನೆಂದು ಅರ್ಥೈಸುವುದು ಯುಕ್ತವಲ್ಲವಾದಾಗ್ಯೂ ಸಹ, ಕಾಲಾನಂತರ ಈ ಅರ್ಥವು ಬಳಕೆಯಲ್ಲಿ ಪ್ರಚಲಿತವಾಯಿತು. ಆದರೆ ಅದು ವೇದ ಸೂಕ್ತಗಳಲ್ಲಿ ಈ ಅರ್ಥದಲ್ಲಿ ಎಂದಿಗೂ ಉಪಯೋಗಿಸಲ್ಪಟ್ಟಿಲ್ಲ.

ಪುರುಷ ಪದವು " ಯಾವುದು ಮುಂದೆ ಸಾಗುತ್ತದೆಯೋ ಅದು ". " ಯಾವುದು ಸಮಸ್ತವನ್ನು ಬಲದಿಂದ ತುಂಬಿಸುತ್ತದೆಯೋ", " ಯಾವುದು ಪುರದಲ್ಲಿ ( ಶರೀರದಲ್ಲಿ) ನೆಲಸಿದೆಯೋ" ಎಂಬೆಲ್ಲಾ ಅರ್ಥಗಳನ್ನು ನೀಡುತ್ತವೆ. ಅದು "ಪೃ" ಧಾತುವಿನಿಂದ ಉತ್ಪತ್ತಿಯಾಗಿ "ರಕ್ಷಿಸು, ವ್ಯಾಪಿಸುತುಂಬಿಸು " ಎಂಬರ್ಥಗಳನ್ನು ಸೂಚಿಸುತ್ತದೆ. " ಆತ್ಮ " ಎಂಬ ಅರ್ಥವನ್ನು ಸೂಚಿಸುವ ಪುರುಷ ಪದವು ಪ್ರಕೃತಿಯ ( ಜಡ ) ತದ್ವಿರುದ್ದವಾಗಿದೆ. ಸಾಂಖ್ಯ ಚಿಂತನೆಯಲ್ಲಿ ಪುರುಷನು ಪ್ರಕೃತಿಯಿಂದ ವಿಭಿನ್ನನಾಗಿದ್ದಾನೆ. ಪ್ರಕೃತಿಯು ವಿಕಸಿಸುತ್ತದೆ, ಪರಿವರ್ತನೆ ಹೊಂದುತ್ತದೆ ಹಾಗೂ ಬಂಧಿಸುತ್ತದೆ; ಆದರೆ ಅದು ಜಡತ್ವದಿಂದ ಕೂಡಿರುತ್ತದೆ. ಆದ್ದರಿಂದ ಅದು ಚೈತನ್ಯ, ಪ್ರಚೋದನೆ ಹಾಗೂ ಶಾಂತಿಯನ್ನು ಪಡೆಯಲು ಪುರುಷನ ಸಾನ್ನಿಧ್ಯವನ್ನು ಅವಲಂಬಿಸಬೇಕಾಗುತ್ತದೆ.

ಪುರುಷನನ್ನು ಹಾಗೆಂದು ಕರೆಯಲು ಕಾರಣವೆಂದರೆ ಅವನು ಸಮಸ್ತ ಜೀವಿಗಳು ( ಪುರಗಳು ), ಮಾನವರು, ಮೃಗಗಳು, ಋಷಿಗಳು ಮತ್ತು ದೇವತೆಗಳನ್ನು ಸೃಷ್ಟಿಸುತ್ತಾನೆ ಹಾಗೂ ಆತ್ಮನ ಸ್ವರೂಪದಲ್ಲಿ ಸಮಸ್ತ ಜೀವಿಗಳಲ್ಲಿ ನೆಲಸಿರುತ್ತಾನೆಇನ್ನೊಂದು ರೀತಿಯಲ್ಲಿ ಪುರುಷನು ವಿಷ್ಣುವೆಂದು ಗುರುತಿಸಲ್ಪಟ್ಟಿದ್ದಾನೆ, ಏಕೆಂದರೆ  ಅವನು ಪುರ ಎಂದು ಕರೆಯಲ್ಪಡುವ ಶರೀರದೊಳಗೆ ಸ್ಥಿರವಾಗಿ ನೆಲೆಗೊಂಡಿದ್ದಾನೆ. ಋಗ್ವೇದದ ಸೂಕ್ತಗಳಲ್ಲಿ ಹಾಗೂ ಉಪನಿಷತ್ತಿನಲ್ಲಿ ಪುರುಷನು ಅಂತಿಮ ಹಾಗೂ ಎಕೈಕ ವೈಶ್ವಿಕ ತತ್ವ ಹಾಗೂ ಸೂಕ್ಷ್ಮಾತಿ ಸೂಕ್ಷ್ಮ ರೂಪವುಳ್ಳದ್ದಾಗಿ ಕಂಡುಬರುತ್ತದೆ.

ಮೈತ್ರಾಯಣಿಯ ಉಪನಿಷತ್ತಿನ ಪ್ರಕಾರ ಸೂರ್ಯನು ಅಂತದೃಷ್ಟಿಯ ಸಾಧನ. ವ್ಯಕ್ತಿಯ ವಿಶಿಷ್ಟ ಪ್ರಕ್ರಿಯೆಗಳು ಇದನ್ನು ಅವಲಂಬಿಸಿದೆಯಾದ್ದರಿಂದ ಅದು ಸತ್ಯವಾಗಿದೆ ಹಾಗೂ ಪುರುಷನು ಕಣ್ಣುಗಳಲ್ಲಿ ಸ್ಥಿರವಾಗಿದ್ದಾನೆ.

ವಿಶ್ವದಲ್ಲಿ ಸೌರವ್ಯೂಹ ಮತ್ತು ವ್ಯಕ್ತಿಯಲ್ಲಿ ದೃಷ್ಟಿಯ ಸಾಧನಗಳ ನಡುವಿನ ಹೋಲಿಕೆಯು ಉಪನಿಷತ್ತಿನ ಬೋಧನೆಗಳಲ್ಲಿ ಪ್ರಚಲಿತ ಅಂಶವಾಗಿದೆ. ಕಣ್ಣನ್ನು ವ್ತಕ್ತಿಯ ಅಂತರ್ಯದ ಸೂರ್ಯನೆಂದು ಪರಿಗಣಿಸಲಾಗಿದೆ. ಹೇಗೆ ಸೂರ್ಯನು ಹಗಲು ಮತ್ತು ರಾತ್ರೆಗಳನ್ನು, ಜೀವಿಗಳ ಆಯುಷ್ಯಾವಧಿ, ವಸ್ತುಗಳ ವಿಕಾಸ ಮತ್ತು ಅವನತಿ, ದಿಕ್ಕುಗಳು ಮತ್ತು ಅವಧಿಗಳನ್ನು ನಿಗದಿಪಡಿಸುತ್ತಾನೋ, ಹಾಗೆಯೇ ಕಣ್ಣುಗಳೂ ಸಹ ಗ್ರಹಿಸುತ್ತವೆ, ನಿಶ್ಚಯಿಸುತ್ತದೆ, ಸಂಕಲ್ಪಿಸುತ್ತದೆ, ಯೋಚಿಸುತ್ತದೆ ಮತ್ತು ಸಾಮಾನ್ಯ ನಡವಳಿಕೆಯನ್ನು ಅನುವಾಗಿಸುತ್ತದೆ. ಸೂರ್ಯ ಹಾಗೂ ಕಣ್ಣುಗಳ ಹಿಂದಿರುವ ತತ್ವವು ಪುರುಷನಾಗಿದ್ದಾನೆ.
ಬೃಹದಾರಣ್ಯಕ ಉಪನಿಷತ್ತಿನಲ್ಲಿ ಪ್ರತ್ಯೇಕ ವ್ಯಾಖ್ಯಾನ ಮಾಡಲಾಗಿದೆ. ಅಂದರೆ ಸೌರವ್ಯೂಹದಲ್ಲಿ ಅಂತರಾತ್ಮನಾಗಿ ನೆಲೆಸಿರುವ ಪುರುಷನು ಹಾಗೂ ಜೀವಿಯ ಬಲಗಣ್ಣಿನಲ್ಲಿ ಸ್ಥಿರವಾಗಿರುವ ಪುರುಷನು ( ಎಡಗಣ್ಣು ಚಂದ್ರನಿಂದ ಪ್ರತಿನಿಧಿಸಲ್ಪಟ್ಟಿದೆ) ಒಬ್ಬರಲ್ಲಿ ಮತ್ತೊಬ್ಬರು ಸ್ಥಾಪಿಸಲ್ಪಟ್ಟಿದ್ದಾರೆ. ಇಬ್ಬರೂ ಸಂಪೂರ್ಣ ಬೆಳಕು ಮತ್ತು ಶಕ್ತಿಯನ್ನುಳ್ಳವರು. ಒಬ್ಬನು ಪ್ರಕಾಶದ ಕಿರಣಗಳಿಂದ ಸ್ಥಾಪಿಸಲ್ಪಟ್ಟಿದ್ದರೆ, ಮತ್ತೊಬ್ಬನು ಪ್ರಾಣಶಕ್ತಿಗಳಿಂದ ಸ್ಥಾಪಿಸಲ್ಪಟ್ಟಿದ್ದಾನೆ.

ಶತಪಥ ಬ್ರಾಹ್ಮಣವು ಹದಿನೇಳು ಅಂಗಗಳುಳ್ಳ, ಸೌರ ರೂಪಕ್ಕಿಂತ ಹೆಚ್ಚು ಮಾನವ ಚಹರೆಯನ್ನು ಹೋಲುವ ಪುರುಷನ ಬಗ್ಗೆ ಹೇಳುತ್ತದೆ. ಆ ಅಂಗಗಳು ಯಾವುವೆಂದರೆ - ಹತ್ತು ಪ್ರಾಣಗಳು ( ಐದು ಪ್ರಧಾನ ಮತ್ತು ಐದು ಅಪ್ರಧಾನ), ನಾಲ್ಕು ಅಂಗಗಳು (ಎರಡು ತೋಳುಗಳು ಮತ್ತು ಎರಡು ಕಾಲುಗಳು), ಹದಿನೈದನೆಯದು ಪೂರ್ಣ ಶರೀರ ( ಇಲ್ಲಿ ಆತ್ಮನೆಂದ ಕರೆಯಲಾಗಿದೆ), ಹದಿನಾರನೆಯದು ಕತ್ತು ಮತ್ತು ಕೊನೆಯದು ಶಿರಸ್ಸು, ಅಗ್ನಿಗೆ ಸರಿಸಮಾನವಾದ ವ್ಯಾಪ್ತಿಯುಳ್ಳ ಈ ಪುರುಷನು ಪ್ರಜಾಪತಿಯೆಂದು ಕರೆಯಲ್ಪಟ್ಟಿದ್ದಾನೆ. ಇಲ್ಲಿ ಪುರುಷನು ಭೂಮಿಯಲ್ಲಿ ಸೂರ್ಯನ ಪ್ರತಿನಿಧಿಯಾಗಿರುವ ಅಗ್ನಿಯೊಂದಿಗೆ ಗುರುತಿಸಲ್ಪಟ್ಟಿದ್ದಾನೆ.

ಪರಮೋಚ್ಚದ ರೂಪ ಪರಿವರ್ತನೆ :

ಉಪನಿಷತ್ತಿನ ದೃಷ್ಟಿಯ ಪ್ರಕಾರ - ಸೃಷ್ಟಿಯು ಸೂಕ್ಷ್ಮ, ಅತೀಂದ್ರಿಯ ಅವ್ಯಕ್ತ ಜಡತ್ವ ಸ್ಥಿತಿಯಿಂದ ಸ್ಥೂಲವಾದ ಭೌತಿಕ ಪ್ರಪಂಚದೆಡೆಗೆ ಹೊರಹೊಮ್ಮುವ ಕ್ರಿಯೆ.
ಈ ಕ್ರಿಯೆಯಲ್ಲಿ ಪರಮೋಚ್ಚ ಶಕ್ತಿ ಹಾಗೂ ಎಲ್ಲ ಅಸ್ತಿತ್ವದ ಆಧಾರವಾಗಿರುವ ಹಾಗೂ ಏಕೈಕ ಶಕ್ತಿಯು ಮೂರು ರೂಪಗಳನ್ನು ಪಡೆಯುತ್ತಾನೆ. ಅತೀಂದ್ರಿಯ ಪರಮೋಚ್ಚ ದೈವ, ಪುರುಷನು ಪರಮಾತ್ಮ ಅಥವಾ ಈಶ್ವರನೆಂದು ಪ್ರಕಟಗೊಳ್ಳುವನು. ಬ್ರಹ್ಮನ ಮೂಲಕ ಪುರುಷನು ವಿಶ್ವದ ಸೃಷ್ಟಿಕ್ರಿಯೆಯನ್ಜು ಪ್ರಾರಂಭಿಸಿದಾಗ ಅವನು ವಿಶ್ವದ ಸೂಕ್ಷ್ಮ ಶರೀರಿಯಾಗಿ ಗುರುತಿಸಿಕೊಳ್ಳುತ್ತಾನೆ. ಆಗ ಅವನು ಹಿರಣ್ಯ-ಗರ್ಭ ಎಂದಾಗುವನು. ಪುರುಷನು ಭೌತಿಕ ವಿಶ್ವವಾದಾಗ ಅವನ ಸಮಸ್ತ ದೈಹಿಕ ಶರೀರವು ವಿರಾಟ್ ಎಂದಾಗುತ್ತದೆ.

ಆಧ್ಯಾತ್ಮಿಕ ತತ್ತ್ವಗಳನ್ನು ಮನದಲ್ಲಿರಿಸಿಕೊಂಡು - "ಯಥಾ ಬ್ರಹ್ಮ-ಅಂಡ ತಥಾ ಪಿಂಡ-ಅಂಡ" - "ಮೇಲೆ ಹೇಗೋ ಕೆಳಗೂ ಹಾಗೇ" - ಅಣುರೂಪವು ಬ್ರಹ್ಮಾಂಡ ರೂಪದ ಪ್ರತಿರೂಪ. ಬಾಹ್ಯ ವಿಶ್ವದ ಹೊರಹೊಮ್ಮುವಿಕೆ ಹಾಗೂ ವಿಕಾಸವು ವ್ಯಕ್ತಿಗತ ವಿಕಸನಕ್ಕೆ ಸಮಾನಾಂತರವಾಗಿರುವುದು.

ಮಾಂಡೂಕ್ಯೋಪನಿಷತ್ತಿನ ಪ್ರಕಾರ ಬ್ರಹ್ಮನ್ ಒಂದು ಚತುಷ್ಪಥಿ ಬೆಕ್ಕಿನರೀತಿ, ಹಾಗೂ ಅದರ ನಾಲ್ಕು ತತ್ತ್ವಗಳು - ಬ್ರಹ್ಮನ್, ಈಶ್ವರ, ಹಿರಣ್ಯಗರ್ಭ ಮತ್ತು ವಿರಾಟ್.

ಪುರುಷ ಸೂಕ್ತವು ಪುರುಷನಿಂದ ಸೃಷ್ಟಿಸಲ್ಪಟ್ಟ ವಿಶ್ವವನ್ನು ಕುರಿತು ಅಪರೋಕ್ಷವಾಗಿ ಹೇಳುತ್ತದೆ. ಅದೇ ರೀತಿಯಲ್ಲಿ ನಾಸದೀಯ ಸೂಕ್ತವು ಸೃಷ್ಟಿಯ ಬಗ್ಗೆ ಪ್ರಸ್ತಾಪಿಸುತ್ತದೆ. ತೈತ್ತಿರೀಯ ಆರಣ್ಯಕವು ಪುರುಷನನ್ನು ಪ್ರಜಾಪತಿ ಎಂಬುದಾಗಿ ಕರೆಯುತ್ತದೆ ಹಾಗೂ ಪುರುಷನು ಹೇಗೆ ಸೃಷ್ಟಿಗೆ ಹೊಣೆಗಾರನಾದನೆಂದು ವರ್ಣಿಸುತ್ತದೆ. ಆದಿಯಲ್ಲಿ ಅಲ್ಲಿ ಎಲ್ಲವೂ ಜಲಾವೃತವಾಗಿತ್ತು ಮತ್ತು ಪ್ರಜಾಪತಿಯು ಆಕಾರವನ್ನು ತಾಳಿದನು ಹಾಗೂ ತಾವರೆ ಎಲೆಯ ಮೇಲೆ ತೇಲಿದನು. ಆಗ ಅವನ ಮನಸ್ಸಿನಲ್ಲಿ, ಅಂತರಾಳದಲ್ಲಿ ಈ ಸಮಸ್ತವನ್ನೂ ಸೃಷ್ಟಿಸುವ ಬಯಕೆಯುಂಟಾಯಿತು. ಜೀವಿಯಲ್ಲಿ ಯಾವುದೇ ಬಯಕೆ ಉಂಟಾದರೆ, ಅವನು ಅದನ್ನು ಕೃತಿ ಮತ್ತು ಮಾತುಗಳ ಮೂಲಕ ವ್ಯಕ್ತಪಡಿಸುತ್ತಾನೆ. ಇದುವೆ ಅಸ್ತಿತ್ವ ಪಡೆಯದ ಮತ್ತು ಅಸ್ತಿತ್ವ ಪಡೆದ ವಸ್ತುಗಳ ನಡುವೆ ಇರುವ ಸೇತುವೆಯಾಗಿದೆ. ಈ ಅಂತರವು ತಪಸ್ಸು ಎಂಬ ಸಾಧನೆಯಿಂದ ಪೂರೈಸಲ್ಪಡುವುದು, ಈ ಪದವು ತಪಶ್ಚರ್ಯ , ಪ್ರಾಯಶ್ಚಿತ್ತ, ಧ್ಯಾನ , ಅತಿಯಾದ ಉಷ್ಣವನ್ನು ಸೂಚಿಸುತ್ತದೆ. ಸೃಷ್ಟಿಯು ಕೇವಲ ತಪಸ್ಸಿನ ಮೂಲಕ ಸಿದ್ಧಿಸುವುದು.

ತಪಸ್ಸಿನಿಂದ ಆಹ್ಲಾದಗೊಂಡ ಪ್ರಜಾಪತಿಯು ತನ್ನ ರೂಪವನ್ನು ಬಲವಾಗಿ ಕುಲುಕಿದನು. ಆವನ ಆಕಾರದಿಂದ ಮಾಂಸವನ್ನು ಹೋಲುವ ಅವಯವಗಳಿಂದ ಅರುಣರು, ಕೇತುಗಳು ಮತ್ತು ವಾತರಶನರು ಎಂಬ ಹೆಸರಿನಿಂದ ಕರೆಯಲ್ಪಡುವ ಋಷಿಗಳು ಉತ್ಪನ್ನರಾದರು, ಉಗುರಿನಂಥ ಭಾಗಗಳಿಂದ ವೈಖಾನಸರು ಹಾಗೂ ರೋಮದಂಥ ಭಾಗಗಳಿಂದ ವಾಲಖಿಲ್ಯರು ಎಂಬ ಋಷಿಗಳು ಹೊರಹೊಮ್ಮಿದರು. ಘನೋದಕದ ಮುಖ್ಯ ಅಂಶವು ಆಮೆಯ ಆಕಾರದಲ್ಲಿ ಘನೀಕೃತವಾಗಿ ಹೊರಬಂದಿತು. ಅದನ್ನು ಪ್ರಜಾಪತಿಯು " ಸ್ವಯಂ ತನ್ನ ಚರ್ಮ ಮತ್ತು ಮಾಂಸಗಳಿಂದ ಜನ್ಮವೆತ್ತಿದ ಸಂತತಿಯೋ ನೀನು " ಎಂದು ಪ್ರಶ್ನಿಸಿದನು.ಆ ಆಮೆಯು, " ಇಲ್ಲ, ನಾನು ಎಲ್ಲಾತ್ಮ ಕಾಲದಿಂದಲೂ ಅಲ್ಲಿ ಇದ್ದವನು, ಈಗ ಹೊರಬಂದಿರುವ ಈ ಎಲ್ಲಾ ಜೀವಿಗಳು ಬರುವ ಮುಂಚಿನಿಂದಲೂ ಇದ್ದೇನೆ" ಆಮೆಯ ಆಕಾರವು ಈಗಷ್ಟೇ ಗೋಚರವಾಗಿದೆ. ಆದರೆ ಅದರ ಆತ್ಮವು ಅಲ್ಲಿ ಎಂದೆಂದಿಗೂ ಇತ್ತು. ಹಾಗೂ ಈ ಅತ್ಮನೇ ಪುರುಷನು. ಪುರುಷನು ತನ್ನ ಮಹಿಮೆಯನ್ನು ಪ್ರಮಾಣೀಕರಿಸಲು ಸಾವಿರಾರು ಶಿರಸ್ಸುಗಳು , ಕಣ್ಣುಗಳುಪಾದಗಳಿಂದ ಪ್ರಕಟನಾದನು. ಸಾವಿರಾರು ಸಂಖ್ಯೆಯು ವೈಶಾಲ್ಯತೆಯನ್ನು ಹಾಗೂ ಅಪರಿಮಿತ ಸೃಷ್ಟಿಕಾರ್ಯವನ್ನು ಸೂಚಿಸುತ್ತದೆ.

ಪುರುಷನ ಪುರುಷ ಸ್ವರೂಪವನ್ನು ಸೂಚಿಸುವ ಸಂದರ್ಭಕ್ಕನುಗುಣವಾಗಿ ಸೂಕ್ತದ ಮಂತ್ರದ ಮೊದಲ ಪದಗಳು ಪುನರಾವೃತ್ತಿಯಾಗಿವೆ. ಸೃಷ್ಟಿಯ ಅಸಂಖ್ಯಾತ ಆಕಾರಗಳೆಲ್ಲಾ ಒಂದೇ ಬುನಾದಿಯಿಂದ ಹೊರಹೊಮ್ಮಲ್ಪಟ್ಟಿವೆ: ಪ್ರಜಾಪತಿಯ ಬಯಕೆ. ಇದು ಪುರುಷಸೂಕ್ತದ ಪೂರ್ವ ಕಲ್ಪನೆಯಾಗಿದೆ. ಯಾವ ಜಲರಾಶಿಯ ಮೇಲೆ ಪ್ರಜಾಪತಿಯು ತೇಲಿದನೋ ಅದು ಸೃಷ್ಟ್ಯಾದಿಯ ಆಮೆಯ ಸತ್ವವಷ್ಟೇ ಸರಿ, ಅದು ಪ್ರಕೃತಿಯನ್ನು ಪ್ರತಿನಿಧಿಸುತ್ತದೆ; ಪ್ರಕೃತಿಯು ಪುರುಷನ ಸಾನ್ನಿಧ್ಯದಲ್ಲಿ, ತನ್ನ ಪರಿಪರಿಯ ಸ್ವರೂಪವನ್ನು ಪ್ರಕಟಿಸಿ, ಇದನ್ನು ವಿರಾಟ್ ಎಂದು ಕರೆಯುವರು. ಪ್ರಕೃತಿಯ ಒಂದು ಅಂಶವಾಗಿರುವ ಇದನ್ನೂ ಸಹ ಸೂಕ್ತದಲ್ಲಿ ಪ್ರಸ್ತಾಪಿಸಲಾಗಿದೆ.

ಪುರುಷನನ್ನು ವಿಶ್ವ ಕ್ರಮ ಸರಣಿಯಲ್ಲಿ ಆದ್ಯ ಜಾತನೆಂದು ಸೂಕ್ತವು ಗುರುತಿಸುತ್ತದೆ (ಪ್ರಥಮಜಾ ಋತಸ್ಯ).  ಇಲ್ಲಿನ ಋತ ಪದದ ಮೂಲ ಅರ್ಥವಾದ ಬಯಕೆಯು (ಕಾಮ) ಪ್ರಜಾಪತಿಯನ್ನು ವಿಶಿಷ್ಟನನ್ನಾಗಿಸಿತು. ಸೃಷ್ಟ್ಯಾದಿಯ ಜಲರಾಶಿಯ ಸತ್ವವಾದ ಆಮೆಯೇ "ಬಯಕೆಯ" ಅಭಿವ್ಯಕ್ತವಾಗಿದ್ದಿತು. ಬ್ರಹ್ಮಾಂಡದ ಆದ್ಯ ಶಿಶು ಪ್ರಜಾಪತಿಯು ಸೃಷ್ಟ್ಯಾದಿಯ ಜಲರಾಶಿಯು ಒದಗಿಸಿದಂಥ ಸಾಮಗ್ರಿಗಳಿಂದ ಅಥವಾ ಕೂರ್ಮಾಕಾರ ಸ್ವರೂಪದಲ್ಲಿ ಅಡಗಿದ್ದ ಅವುಗಳ ಸತ್ವಗಳಿಂದ ಸಮಸ್ತ ಲೋಕಗಳು, ಸಮಸ್ತ ಜೀವಿಗಳು ಮತ್ತು ಸಮಸ್ತ ಪ್ರದೇಶಗಳನ್ನು ಸೃಷ್ಟಿಸಿದನುಸಮಸ್ತ ವಸ್ತುಗಳನ್ನು ತನ್ನಿಂದಲೇ ಸೃಷ್ಟಿಸಿದ ನಂತರ, ಅವನು ಸ್ವತಃ ಸಮಸ್ತ ವಸ್ತುಗಳಲ್ಲಿ ಪ್ರವೇಶಿಸುತ್ತಾನೆ. ವಿಶ್ವವು ಪ್ರಜಾಪತಿಯ ಸ್ವರೂಪದಲ್ಲಿ ಹೊರಹೊಮ್ಮಿರುವ ಅಥವಾ ಪ್ರಕಟವಾಗಿರುವ ಅಂಶವಷ್ಟೇ. ಅವನು ಸಮಸ್ತ ವಸ್ತುಗಳನ್ನು ವ್ಯಾಪಿಸಿಕೊಂಡಿರುತ್ತಾನೆ, ಅಂದರೆ ಅವನು ಈ ಸಮಸ್ತ ವಸ್ತುಗಳನ್ನು ತನ್ನಲ್ಲೇ ಹೊಂದಿರುತ್ತಾನೆ; ಮತ್ತು ಈ ಸಮಸ್ತ ವಸ್ತುಗಳೂ ತನ್ನ ನಿಯಂತ್ರಣದಲ್ಲಿ ಇರುವುದಕ್ಕಾಗಿ ಹಾಗೂ ಯಾವುದೂ ಅವನನ್ನು ಮೀರಿ ಹೋಗದಂತೆ ಅವನು ಸ್ವತಃ ತನ್ನಲ್ಲಿ ಇವುಗಳಿಗೆ ಎಡೆಮಾಡಿಕೊಡುತ್ತಾನೆ. ಸೃಷ್ಟಿಸಲ್ಪಟ್ಟಿರುವ ಬ್ರಹ್ಮಾಂಡವು ಅವನನ್ನು ಅತಿಕ್ರಮಿಸುವುದಿಲ್ಲ; ವಾಸ್ತವವಾಗಿ, ಅವನು ಅದನ್ನು ಅತಿಶಯಿಸಿದ್ದಾನೆ ಹಾಗೂ ಸ್ವಯಂ ಸ್ವರೂಪದಲ್ಲಿ ನೆಲಸಿರುತ್ತಾನೆ. ಪ್ರಜಾಪತಿಯ ಈ ಸ್ವರೂಪಕ್ಕೆ ಪುರುಷನೆಂದು ಹೆಸರಿಸಲಾಗಿದೆ.

ಶತಪಥ ಬ್ರಾಹ್ಮಣದಲ್ಲಿ ಪುರುಷನು ನಾರಾಯಣನೊಂದಿಗೆ ಗುರುತಿಸಲ್ಪಟ್ಟಿದ್ದಾನೆ. ಈ ಪುರುಷ ನಾರಾಯಣನೇ ಸೃಷ್ಟಿಸಲ್ಪಟ್ಟ ವಿಶ್ವವನ್ನು ಅತಿಶಯಿಸಲು, ಸಮಸ್ತ ವಸ್ತುಗಳನ್ನು ವ್ಯಾಪಿಸಲು ಮತ್ತು ಸಮಸ್ತವೂ ತಾನೇ ಆಗಬೇಕೆಂದು ಬಯಸುತ್ತಾನೆ.

ಪುರುಷಸೂಕ್ತದ ಋಷಿ ನಾರಾಯಣ ಹಾಗೂ ಸೂಕ್ತದ ದೇವತೆ ಪುರುಷ ಎಂದು ತಿಳಿಸುವ ಉಲ್ಲೇಖ ಸ್ವಾರಸ್ಯವಾಗಿದೆ. ಈ ಇಬ್ಬರೂ ವಾಸ್ತವವಾಗಿ ಒಂದೇ ಸ್ವರೂಪವಾಗಿದ್ದು, ಪ್ರಸಕ್ತ ಸೂಕ್ತವು ಯಾಸ್ಕರ ವರ್ಣನೆಯ ಆತ್ಮಸ್ತುತಿಯ ಅಥವಾ ಆಧ್ಯಾತ್ಮಿಕ ಸೂಕ್ತಗಳಿಗೆ ಉತ್ತರ ನೀಡಬಲ್ಲದ್ದಾಗಿದೆ. ಮನು ಋಷಿಯ ವಿವರಣೆಯನುಸಾರ, "ನಾರಾಯಣ" ಪದವು ಆದಿ-ಸೃಷ್ಟಿಯ ಹಂತದಲ್ಲಿ ಸೃಷ್ಟ್ಯಾದಿಯ ಜಲರಾಶಿಯ ( ನಾರಾ, ಆಪಃ) ಆತ್ಮನ ವಿಶ್ರಾಂತಿ-ಧಾಮ (ಅಯನ) ಎಂದಾಗುತ್ತದೆ.

ಜಲರಾಶಿಗಳು ತಮ್ಮನ್ನು ಸೃಷ್ಟಿಸಿದ ಆತ್ಮನ ಸಂತತಿಯೇ ಆಗಿವೆ. ಅವುಗಳು ಆತ್ಮನ ಸಹಜ ಆವಾಸಸ್ಥಾನ. ಸ್ವಯಂ ತನ್ನ ಸ್ವಾಭಾವಿಕ ಸ್ಥಿತಿಯಲ್ಲಿ ನೆಲೆಸಿರುವ ಆತ್ಮನೇ ಪುರುಷನಾಗಿದ್ದಾನೆ. ಸೃಷ್ಟಿ ಸಂಕಲ್ಪದ ಬಯಕೆ ಹೊಂದಿರುವ ಇದೇ ಆತ್ಮನು ಸಮಸ್ತ ಜೀವಿಗಳ ರಕ್ಷಕ ಅಥವಾ ಸೃಷ್ಟಿಕರ್ತನಾದ ಪ್ರಜಾಪತಿಯ ಸ್ವರೂಪವಾಗಿದ್ದಾನೆ. ಪುರುಷನಾಗಬೇಕಾದರೆ ಅವಸ್ಥೆಯನ್ನು ತ್ಯಜಿಸಬೇಕಾಗುತ್ತದೆ.

ಶಾಂತಿ ಮಂತ್ರ : ಸಂಸ್ಕೃತದಲ್ಲಿ :

ಓಂ ತಚ್ಚಂ ಯೋರಾವೃಣೀಮಹೇ | ಗಾತುಂ ಯಙ್ಞಾಯ|
ಗಾತುಂ ಯಙ್ಞಪತಯೇ | ದೈವೀ ಸ್ವಸ್ತಿರಸ್ತು ನಃ |
ಸ್ವಸ್ತಿರ್ಮಾನುಷೇಭ್ಯಃ | ಊರ್ಧ್ವಂ ಜಿಗಾತು ಭೇಷಜಮ್|
ಶಂ ನೋ ಅಸ್ತು ದ್ವಿಪದೇ  | ಶಂ ಚತುಷ್ಪದೇ |
ಓಂ ಶಾಂತಿಃ ಶಾಂತಿಃ ಶಾಂತಿಃ  ||

ಅನುವಾದ :

ನಮ್ಮ ದುಃಖವನ್ನು ಹೋಗಲಾಡಿಸುವ ಮತ್ತು ನಮ್ಮ ಧಾರ್ಮಿಕ ಕ್ರಿಯೆಗಳಿಗೆ ಫಲವನ್ನು ನೀಡುವ ಭಗವಂತನನ್ನು ಪ್ರಾರ್ಥಿಸುತ್ತೇವೆ. ದೇವತೆಗಳು ಯಾವ ಬಗೆಯ ಒಳಿತನ್ನು ಹೊಂದುವರೊ, ನಾವೂ ಅದನ್ನೆ ಪಡೆಯುವಂತಾಗಲಿ ! ಎಲ್ಲ ಮಾನವರೂ ಮಂಗಳವನ್ನು ಹೊಂದಲಿ ! ಮುಂದೆಯೂ ಅಷ್ಟೆ. ಜೀವನದ ಸಕಲ ದುರಿತಗಳೂ ದೂರವಾಗಲಿ ! ಮಾನವರೂ ಹಾಗೂ ಸಾಕಿರುವಂತಹ ಪ್ರಾಣಿಗಳೂ ಸುಖವನ್ನು ಹೊಂದಲಿ.

ವಿವರಣೆ :

ಇದು ಪುರುಷಸೂಕ್ತದ ಮೊದಲು ಹಾಗೂ ಕೊನೆಯಲ್ಲಿ ಪಠಿಸುವ ಶಾಂತಿಮಂತ್ರ. ಅಮಂಗಲವನ್ನು ದೂರಮಾಡಲು ಮಾಡುವ ಶಾಂತಿಕರ್ಮಗಳಲ್ಲಿ ಹಾಗೂ ಅಭಿಷೇಕ ಕರ್ಮಗಳಲ್ಲಿ ಬಳಸುವ ದಶಶಾಂತಿ ಮಂತ್ರಗಳಲ್ಲಿ ಪ್ರಸ್ತುತ ಶಾಂತಿಮಂತ್ರವೂ ಒಂದಾಗಿ ಪರಿಗಣಿಸಲ್ಪಟ್ಟಿದೆ. ಇದನ್ನು ಸಂಧ್ಯಾವಂದನೆಯಲ್ಲಿ ಉಪಸ್ಥಾನಮಂತ್ರವನ್ನಾಗಿಯೂ ಬಳಸಬಹುದು.

ಮೊದಲ ಪದವಾದ "ಶಂಯೋಃ" ಎಂಬುದನ್ನು, "ನಮ್ಮ ಪೂರ್ವ ಕುಕರ್ಮಗಳ ಫಲವಾಗಿ ಈಗಾಗಲೇ ಪ್ರಾಪ್ತವಾಗಿರುವ ಹಾಗೂ ಮುಂದೆ ಬರಬಹುದಾದಂತಹ ರೋಗರುಜಿನಗಳು ಮತ್ತು ಕಷ್ಟಗಳು" ಎಂಬುದಾಗಿಯೂ ಅರ್ಥೈಸಲಾಗುವುದು.

ಯಜ್ಞಗಳನ್ನು ಮಾಡುವುದು ನಮ್ಮ ಕೈಯಲ್ಲಿದ್ದರೂ, ಅವುಗಳ ಫಲದಾತನು ಭಗವಂತನೆ. ಆದ್ದರಿಂದ ಫಲಪ್ರಾಪ್ತಿಗಾಗಿ ಹಾಗೂ ಯಜ್ಞವನ್ನು ನೆರವೇರಿಸಿದ ಯಜಮಾನನ ಇಷ್ಟಸಿದ್ಧಿಗಾಗಿ ಭಗವಂತನಿಗೆ ಪ್ರಾರ್ಥಿಸಲಾಗುದೆ.

ಮಂತ್ರವು, ಎಲ್ಲ ಮಾನವರ ಹಾಗೂ ಸಾಕುಪ್ರಾಣಿಗಳ ಮಂಗಳಕ್ಕಾಗಿ ಪ್ರಾರ್ಥನೆಯನ್ನು ಒಳಗೊಂಡಿರುವುದನ್ನು ಗಮನಿಸಲು ಸ್ವಾರಸ್ಯಕರವಾಗಿದೆ ಹಾಗೂ ಬೋಧಪ್ರದವಾಗಿದೆ.

ಮೂರು ಬಗೆಯ ತೊಂದರೆಗಳನ್ನು ನಿವಾರಿಸಲು, ಮೂರು ಬಾರಿ " ಶಾಂತಿಃ " ಎಂದು ಉಚ್ಚರಿಸಲಾಗುತ್ತದೆ - ಆಧ್ಯಾತ್ಮಿಕ 
(ರೋಗವೇ ಮೊದಲಾದ ದೇಹಕ್ಕೆ ಸಂಬಂಧಿಸಿದ ), ಆಧಿಭೌತಿಕ (ವನ್ಯಪ್ರಾಣಿ ಅಥವಾ ಸರೀಸೃಪಗಳಂತಹ ಇತರ ಜೀವಿಗಳಿಂದ ಉಂಟಾದ ತೊಂದರೆಗಳು) ಹಾಗೂ ಆಧಿದೈವಿಕಗಳೇ ( ಭೂಕಂಪ, ಕ್ಷಾಮ, ನೆರೆ ಮೊದಲಾದ ಪ್ರಾಕೃತಿಕ ವಿಕೋಪಗಳಿಂದ ಉಂಟಾದ ಆಪತ್ತುಗಳು) ಆ ಮೂರು ತೊಂದರೆಗಳು.        

ಮಂತ್ರ - 1 -ಸಂಸ್ಕೃತದಲ್ಲಿ :

ಸಹಸ್ರ ಶೀರ್ಷಾ ಪುರುಷಃ ಸಹಸ್ರಾಕ್ಷಃ ಸಹಸ್ರಪಾತ್
ಸ ಭೂಮಿಮ್ ವಿಶ್ವತೋ  ವೃತ್ವಾ ಅತ್ಯತಿಷ್ಠತ್ ದಶಾಂಗುಲಮ್

ಕನ್ನಡದಲ್ಲಿ :

ಸಾವಿರ ಶಿರಗಳ ಪುರುಷನು ಸಾವಿರ ಕಣ್ ಸಾವಿರ ಪಾದ ಆವರಿಸಿ ಬುವಿಯೆಲ್ಲವನ್ನೂ ಹತ್ತಂಗುಲ ಎತ್ತರವೀತ  

ವಿವರಣೆ :

ಪುರುಷನು ಸಾವಿರಾರು ತಲೆಯುಳ್ಳವನು, ಸಾವಿರಾರು ಕಣ್ಣುಗಳುಳ್ಳವನು ಮತ್ತು ಸಾವಿರಾರು ಕಾಲುಗಳುಳ್ಳವನು. ಅವನು ವಿಶ್ವವನ್ನೆಲ್ಲಾ ಆವರಿಸಿಕೊಂಡಿದ್ದಾನೆ ಮತ್ತು ಅದನ್ನು ಹತ್ತು ಅಂಗುಲಗಳಿಂದ ಮೀರಿದ್ದಾನೆ.

ಮಂತ್ರ - 2 -ಸಂಸ್ಕೃತದಲ್ಲಿ :

ಪುರುಷ ಏವೇದಂ ಸರ್ವಂ ಯತ್ ಭೂತಂ ಯತ್ ಚ ಭವ್ಯಮ್ |
ಉತ ಅಮೃತತ್ವಸ್ಯ ಈಶಾನೋ ಯತ್ ಅನ್ನೇನ ಅತಿರೋಹತಿ ||

ಕನ್ನಡದಲ್ಲಿ :

ಪುರುಷನೆ ಈಗಿಹುದೆಲ್ಲವು ಹಿಂದಿದ್ದುದು ಮುಂದಿನದೂ
ಅಮೃತತ್ವಕೆ ಒಡೆಯನವ ಆಳುವ ಮರ್ತ್ಯರನೂ   

ವಿವರಣೆ :

ಹಿಂದೆ ಆಗಿಹೋಗಿರುವ ಮತ್ತು ಮುಂದೆ ಭವಿಷ್ಯತ್ತಿನಲ್ಲಿ ಆಗಲಿರುವ (ಮತ್ತು ಈಗ ವರ್ತಮಾನದಲ್ಲಿರುವ ಈ ಎಲ್ಲ ಜಗತ್ತೂ ಪುರುಷನೇ ಹಾಗೂ ದೇವತ್ವಕ್ಕೂ ಈ ಪುರುಷನು ಅಧಿಪತಿಯುಏಕೆಂದರೆ ಪ್ರಾಣಿಗಳ (ಭೋಗ್ಯವಾದ) ಅನ್ನದಿಂದ ತನ್ನ ಕಾರಣಾವಸ್ಥೆಯನ್ನೂ ಮೀರಿ ದೃಶ್ಯವಾದ ಜಗದ್ರೂಪವನ್ನು ತಾಳುತ್ತಾನೆ. (ಆದುದರಿಂದಲೇ ಪ್ರಾಣಿಗಣ ಕರ್ಮಫಲ ಭೋಗಕ್ಕಾಗಿ ಜಗದ್ರೂಪವನ್ನು ತಾಳುವುದರಿಂದ ಈ ಜಗದ್ರೂಪವು ಆ ಪುರುಷನ ವಸ್ತುತತ್ತ್ವವಲ್ಲ).

ಮಂತ್ರ - 3 -ಸಂಸ್ಕೃತದಲ್ಲಿ :

ಏತಾವಾನ್ ಅಸ್ಯ ಮಹಿಮಾ ಅತೋ ಜ್ಯಾಯಾನ್ ಚ  ಪೂರುಷಃ
ಪಾದೋ ಅಸ್ಯ ವಿಶ್ವಾ ಭೂತಾನಿ ತ್ರಿಪಾದ್ ಅಸ್ಯ ಅಮೃತಂ ದಿವಿ ||

ಕನ್ನಡದಲ್ಲಿ :

ಇವನ ಮಹಿಮೆಯಿದು ಇದಕೂ ಉನ್ನತನೀ ಪುರುಷ
ಜೀವಿಗಳೆಲ್ಲವು ಅವನೊಂದಂಶ ಸಾವಿಲ್ಲದ ಮೂರಿವೆ ಮೇಲೆ  

ವಿವರಣೆ :

ಇಷ್ಟೆಲ್ಲವೂ ಆ ಪುರುಷನ ಮಹಿಮೆಯೇ ಆಗಿದೆ. ಆದರೆ ಆ ಪುರುಷನು ಈ ಜಗದ್ರೂಪವಾದ ಮಹಿಮೆಗಿಂತಲೂ ಅಧಿಕನಾದವನು. ಅತೀತ, ಅನಾಗತ ಮತ್ತು ವರ್ತಮಾನವೆಂಬ ಮೂರು ಕಾಲಗಳ ಸಮಸ್ತ ಪ್ರಾಣಿಗಳೂ ಆ ಪುರುಷನ ಪಾದ ಮಾತ್ರ (ನಾಲ್ಕನೆಯ ಒಂದಂಶ ಮಾತ್ರ). (ಉಳಿದ) ಆ ಪುರುಷನ ತ್ರಿಪಾತ್ ಸ್ವರೂಪವು (ಮುಕ್ಕಲು ಭಾಗ ಸ್ವರೂಪವು) ಅಮೃತರೂಪವಾಗಿದ್ದು ಸ್ವಪ್ರಕಾಶ ರೂಪವಾದ ದಿವಿಯಲ್ಲಿ ನೆಲಸಿದೆ. (ಪರಬ್ರಹ್ಮಕ್ಕೆ ವಸ್ತುತಃ ನಾಲ್ಕು ಭಾಗಗಳಿಲ್ಲ. ಈ ಜಗತ್ತು ಬ್ರಹ್ಮಸ್ವರೂಪಕ್ಕಿಂತಲೂ ಅತ್ಯಲ್ಪವಾದುದು ಎಂದು ತಿಳಿಸಲು ಭಾಗಗಳ ಕಲ್ಪನೆಯನ್ನು ಮಾಡಲಾಗಿದೆ).

ಮಂತ್ರ - 4 -ಸಂಸ್ಕೃತದಲ್ಲಿ :

ತ್ರಿಪಾತ್ ಊರ್ಧ್ವ ಉದೈತ್ ಪುರುಷಃ ಪಾದೋ ಅಸ್ಯ ಇಹ ಅಭವತ್ ಪುನಃ
ತತೋ ವಿಶ್ವಗ್ಂ ವಿ ಅಕ್ರಾಮತ್ ಸಾಶನ ಅನಶನೇ ಅಭಿ||

ಕನ್ನಡದಲ್ಲಿ :

ಅಲ್ಲಿ ಶೋಭಿಪನು ಮೂರುಪಾದದದಲಿ ಇಹುದು ಪಾದವಿಲ್ಲೊಂದು
ಎಲ್ಲೆಡೆ ವ್ಯಾಪಿಸಿ ನಿಯಮಿಸುವನುಣ್ಣುವ ಉಣ್ಣದ ಎಲ್ಲವನು    

ವಿವರಣೆ :

ತ್ರಿಪಾದ್ರೂಪಿಯಾದ ಪುರುಷನು ಈ ಸಂಸಾರಕ್ಕಿಂತಲೂ ಮೇಲೆ ( ಅಂದರೆ ಈ ಸಂಸಾರ ದೋಷಗಳಿಂದ ಅಸ್ಪೃಷ್ಟನಾಗಿ ) ನೆಲೆಸಿದ್ದಾನೆ. ಆ ಪುರುಷನ ಅಲ್ಪವಾದ ಪಾದ ಭಾಗವು ಈ ಮಾಯೆಯಲ್ಲಿ ಪುನಃ ಉಂಟಾಯಿತು. ಆ ಪುರುಷನು ಮಾಯೆಯೊಳಗೆ ಬಂದ ಮೇಲೆ ದೇವತಿರ್ಯಕ್ ಮೊದಲಾದ ರೂಪದಿಂದ ನಾನಾ ವಿಧವಾಗಿ ವ್ಯಾಪಿಸಿದನು. ಆ ಪುರುಷನು ಭೋಜನಾದಿಗಳಿಂದ ಸಹಿತವಾದ ಚೇತನರೂಪವಾಗಿಯೂ ಭೋಜನರಹಿತವಾದ ಪರ್ವತ-ನದೀ ಮುಂತಾದ ಅಚೇತನರೂಪವಾಗಿಯೂ ವ್ಯಾಪಿಸಿದನು.

ಮಂತ್ರ - 5 -ಸಂಸ್ಕೃತದಲ್ಲಿ :

ತಸ್ಮಾದ್ ವಿರಾಟ್ ಅಜಾಯತ ವಿರಾಜೋ ಅಧಿ ಪೂರುಷಃ
ಸ ಜಾತೋ ಅತು ಅರಿಚ್ಯತ ಪಶ್ಚಾತ ಭೂಮಿಮ್ ಅಥೋ ಪುರಃ

ಕನ್ನಡದಲ್ಲಿ :

ಹುಟ್ಟಿತವನಿಂದ ಬ್ರಹ್ಮಾಂಡವದರಿಂದ ಹುಟ್ಟಿದನು ಬ್ರಹ್ಮ
ಮೆಟ್ಟಿನಿಂತನವ ಹುಟ್ಟಿದ ನಂತರ ಬುವಿಯನೆಲ್ಲ ಲೋಕಗಳ  

ವಿವರಣೆ :

ಆ ಆದಿಪುರುಷನಿಂದ ಬ್ರಹ್ಮಾಂಡದೇಹ ರೂಪಿಯಾದ ವಿರಾಟ್ ಪುರುಷನು ಉತ್ಪನ್ನನಾದನು. ಆ ವಿರಾಟ್ ದೇಹದ ಮೇಲೆ ಇದ್ದ ದೇಹವನ್ನೇ ಆಶ್ರಯಿಸಿ ಆ ದೇಹಾಭಿಮಾನಿಯಾದ ಪುರುಷನು ಹುಟ್ಟಿದನು. (ಅಂದರೆ ಸರ್ವವೇದಾಂತವೇದ್ಯನಾದ ಪರಮಾತ್ಮನೇ ತನ್ನ ಮಾಯೆಯಿಂದ ಬ್ರಹ್ಮಾಂಡರೂಪವಾದ ವಿರಾಟ್ ದೇಹವನ್ನು ಸೃಷ್ಟಿಸಿ ಅದರೊಳಗೆ ಜೀವರೂಪದಿಂದ ಪ್ರವೇಶಿಸಿ ಬ್ರಹ್ಮಾಂಡಾಭಿಮಾನಿಯೂ ದೇವತಾ ರೂಪಿಯೂ ಆದ ಜೀವನಾದನು.) ಉತ್ಪನ್ನವಾದ ಆ ವಿರಾಟ್ ಪುರುಷನು ಅತಿರಿಕ್ತವಾಗಿ ಆದನು. (ವಿರಾಟ್ ದೇಹಕ್ಕಿಂತಲೂ ಬೇರೆಯಾಗಿ ದೇವ-ತಿರ್ಯಕ್-ಮನುಷ್ಯ ಮೊದಲಾದ ರೂಪವಾಗಿ ಆದನು). ದೇವ ಮೊದಲಾದ ಜೀವಭಾವನ್ನು ತಾಳಿದ ಮೇಲೆ ಭೂಮಿಯನ್ನು ಸೃಷ್ಟಿಸಿದನು. ಭೂಮಿಯನ್ನು ಸೃಷ್ಟಿಸಿದ ಮೇಲೆ ಆ ಜೀವರುಗಳಿಗೆ ಬೇಕಾದ ಸಪ್ತಧಾತುಮಯ ಪುರರೂಪವಾದ ಶರೀರಗಳನ್ನು ಸೃಷ್ಟಿಸಿದನು.

ಮಂತ್ರ - 6 -ಸಂಸ್ಕೃತದಲ್ಲಿ :

ಯತ್ ಪುರುಷೇಣ ಹವಿಷಾ ದೇವಾ ಯಜ್ಞಂ ಅತನ್ವತ
ವಸಂತೋ ಅಸ್ಯಾಸೀತ್ ಆಜ್ಯಂ ಗ್ರೀಷ್ಮ ಇಧ್ಮಃ ಶರದ್ ಹವಿಃ

ಕನ್ನಡದಲ್ಲಿ :

ಪುರುಷನನುಗ್ರಹದಿಂದ ಸುರರು ಹವಿಯೆರೆದು ಯಜ್ಞ ಕೈಗೊಳಲು
ಘೃತವಾಯಿತದಕೆ ವಸಂತ ಗ್ರೀಷ್ಮವಿಂಧನ ಹವಿ ಶರದ ಋತು   

ವಿವರಣೆ :

ಯಾವಾಗ ದೇವತೆಗಳು ಪುರುಷನೆಂಬ ಹವಿಸ್ಸಿನಿಂದ ಒಂದು ಯಜ್ಞವನ್ನು ಅನುಷ್ಠಾನ ಮಾಡಿದರೋ (ಬಾಹ್ಯವಾದ ದ್ರವ್ಯವು ಇನ್ನೂ ಉತ್ಪನ್ನವಾಗಿರಲಿಲ್ಲವಾದ ಕಾರಣ ಬಾಹ್ಯವಾದ ಹವಿಸ್ಸು ಇರಲಿಲ್ಲವಾದ್ದರಿಂದ ಪುರುಷ ರೂಪವನ್ನೇ ಮನಸ್ಸಿನಿಂದ ಹವಿಸ್ಸಿನ ರೂಪವಾಗಿ ಸಂಕಲ್ಪಮಾಡಿ ಆ ಪುರುಷನೆಂಬ ಹವಿಸ್ಸಿನಿಂದಲೇ ಮಾನಸಿಕವಾದ ಯಜ್ಞವನ್ನು ಯಾವಾಗ ಅನುಷ್ಠಾನ ಮಾಡಿದರೋ) ಆಗ ಈ ಯಜ್ಞಕ್ಕೆ ವಸಂತ ಋತುವೇ ಆಜ್ಯವಾಯಿತು; ಗ್ರೀಷ್ಮ ಋತುವೇ ಇಧ್ಮವಾಯಿತು; ಶರದೃತುವೇ ಪುರೋಡಾಶ ಮುಂತಾದ ಹವಿಸ್ಸಿನ ರೂಪವಾಗಿ ಆಯಿತು. (ಮೊದಲು ಪುರುಷನನ್ನು ಸಾಮಾನ್ಯ ಹವಿಸ್ಸಿನ ರೂಪವಾಗಿ ಸಂಕಲ್ಪ ಮಾಡಿ ವಸಂತ ಮೊದಲಾದ ಋತುಗಳನ್ನು ಆಜ್ಯ ಮುಂತಾದ ವಿಶೇಷ ಹವಿಸ್ಸಿನ ರೂಪವಾಗಿ ಸಂಕಲ್ಪ ಮಾಡಿ ಮಾನಸಿಕ ಯಜ್ಞವನ್ನು ಆಚರಿಸಿದರು ಎಂಬ ಅಭಿಪ್ರಾಯ).

ಮಂತ್ರ - 7 -ಸಂಸ್ಕೃತದಲ್ಲಿ :

ಸಪ್ತಾಸ್ಯಾಸನ್ ಪರಿಧಯಸ್ ತ್ರಿಃ ಸಪ್ತ ಸಮಿಧಃ ಕೃತಾಃ
ದೇವಾ ಯತ್ ಯಜ್ಞಂ ತನ್ವಾನಾ ಅಬದ್ ನನ್ ಪುರುಷಂ ಪಶುಂ

ಕನ್ನಡದಲ್ಲಿ :
ಏಳು ಧಾತುಗಳೆ ಪರಿಧಿ ಮೂರೇಳು ಸಮಿತ್ತುಗಳದಕೆ
ಪುರುಷನ ಬಿಗಿದರು ಪಶುವಾಗಿ ಸುರರೀ ಯಜ್ಞಕ್ಕೆ              

ವಿವರಣೆ :

ಸರ್ವಸೃಷ್ಟಿಗೆ ಮೊದಲು ಪುರುಷರೂಪನಾಗಿ ಉತ್ಪನ್ನನಾದ ಆ ಯಜ್ಞಸಾಧನರೂಪನಾದ ಪುರುಷನನ್ನು ಪಶುತ್ವಭಾವನೆಯಿಂದ ಯೂಪಸ್ತಂಭದಲ್ಲಿ ಕಟ್ಟಿ ಮಾನಸಿಕವಾದ ಯಜ್ಞದಲ್ಲಿ ಪ್ರೋಕ್ಷಿಸಿದರು. ಪಶುವಾಗಿ ಭಾವಿಸಲ್ಪಟ್ಟ ಆ ಪುರುಷನಿಂದಲೇ ದೇವತೆಗಳು (ಪ್ರಜಾಪತಿದೇವನ ಪ್ರಾಣ-ಇಂದ್ರಿಯಗಳು) ಮಾನಸಿಕವಾದ ಯಜ್ಞವನ್ನು ಆಚರಿಸಿದರು. ಸೃಷ್ಟಿಸಾಧನ ಯೋಗ್ಯರಾದ ಪ್ರಜಾಪತಿಯ ಪ್ರಾಣಾದಿಗಳ ರೂಪರಾದ ಸಾಧ್ಯರು ಮತ್ತು ಮಂತ್ರದ್ರಷ್ಟೃಗಳಾದ ಋಷಿಗಳು ಯಾರು ಉಂಟೋ ಅವರೆಲ್ಲರೂ ಸೇರಿ ಮಾನಸಿಕ ಯಜ್ಞವನ್ನು ಆಚರಿಸಿದರು.

ಮಂತ್ರ- 8 -ಸಂಸ್ಕೃತದಲ್ಲಿ :

ತಂ ಯಜ್ಞಂ ಬರ್ಹಿಷಿ ಪ್ರೌಕ್ಷನ್ ಪುರುಷಂ ಜಾತಂ ಅಗ್ರತಃ
ತೇನ ದೇವಾ ಅಯಜಂತ ಸಾಧ್ಯಾ ಋಷಯಃ ಚ ಯೇ

ಕನ್ನಡದಲ್ಲಿ :

ಹವಿ ಚಿಮುಕಿಸಿದರು ಯಜ್ಞದಿ ಮೊದಲಾಹುತಿ ಮೊದಲುದಿಸಿದ ಪುರುಷ
ಯಾಗಮಾಡಿದರು ಸುರರು ಸಾಧ್ಯರು ಋಷಿಗಳೇನು ಹರುಷ    

ವಿವರಣೆ :

ಸರ್ವಾತ್ಮಕನಾದ ಆ ಪುರುಷನೇ ಆ ಯಜ್ಞದಲ್ಲಿ ಹೋಮಮಾಡಲ್ಪಟ್ಟಿದ್ದರಿಂದ ಅವನು ಸರ್ವಹುತನೆನಿಸಿದನು. ಆ ಯಜ್ಞದಿಂದ ಪೃಷದಾಜ್ಯವು (ದಧಿ-ಆಜ್ಯ ಮುಂತಾದ ಭೋಗ್ಯಪದಾರ್ಥ ಸಮೂಹವು) ಸಂಪಾದಿತವಾಯಿತು. ಅಂತೆಯೇ ( ಆ ಯಜ್ಞದಿಂದ) ವಾಯುದೇವತಾಕವಾದ ಪಶುಗಳನ್ನೂ ಅರಣ್ಯದಲ್ಲಿ ವಾಸಮಾಡುವ ಪಶುಗಳನ್ನೂ ಸೃಷ್ಟಿಸಿದರು. ಗ್ರಾಮದಲ್ಲಿ ಯಾವ ಪಶುಗಳು ಇರುತ್ತವೆಯೋ ಅವುಗಳನ್ನೂ ಸೃಷ್ಟಿಸಿದರು.

ಮಂತ್ರ - 9 -ಸಂಸ್ಕೃತದಲ್ಲಿ :

ತಸ್ಮಾತ್ ಯಜ್ಞಾತ್ ಸರ್ವಹುತಃ ಸಂಭೃತಂ ಪೃಷತ್- ಆಜ್ಯಂ
ಪಶೂನ್ ತಾನ್ ಚಕ್ರೇ ವಾಯವ್ಯಾನ್ ಆರಣ್ಯಾನ್ ಗ್ರಾಮ್ಯಾಃ ಚ ಯೇ

ಕನ್ನಡದಲ್ಲಿ :

ಎಲ್ಲವ ಭುಜಿಸಿದ ಯಜ್ಞನಿಂದ ಉಂಟಾಯಿತು ತುಪ್ಪವು ಮೊಸರು
ಕಾಡಿನ ನಾಡಿನ ಪಶುಗಳಾದವು ಎಲ್ಲಕು ಕಾರಣ ವಾಯು    

ವಿವರಣೆ :

ಎಲ್ಲವನ್ನೂ ಆಹುತಿಯಾಗಿಸಿಕೊಂಡ ಈ ಯಜ್ಞದಿಂದ ಕೆನೆಗಟ್ಟಿರುವ ಅಥವಾ ಹೆಪ್ಪುಗಟ್ಟಿರುವ ತುಪ್ಪವು ಕ್ರೋಢೀಕರಿಸಲ್ಪಟ್ಟಿತು; ಮತ್ತು ಸಮಸ್ತ ಪಕ್ಷಿಗಳು, ಕಾಡಿನ ಹಾಗೂ ಸಾಧು ಪ್ರಾಣಿಗಳು ಸೃಷ್ಟಿಸಲ್ಪಟ್ಟವು.

ಮಂತ್ರ-  10 -ಸಂಸ್ಕೃತದಲ್ಲಿ :

ತಸ್ಮಾತ್ ಯಜ್ಞಾತ್ ಸರ್ವಹುತ ಋಚಃ ಸಾಮಾನಿ ಜಜ್ಞಿರೇ
ಛಂದಾಂಸಿ ಜಜ್ಞಿರೇ ತಸ್ಮಾತ್ ಯಜುತ್ ತಸ್ಮಾತ್ ಅಜಾಯತ

ಕನ್ನಡದಲ್ಲಿ :
ಎಲ್ಲವ ಭುಜಿಸಿದ ಯಜ್ಞನಿಂದ ಋಗು ಸಾಮಗಳಾಯ್ತು
ಛಂದಗಳುದಿಸಿತವನಿಂದ ಅವನಿಂದಾಯಿತು ಯಜುಸು   

ವಿವರಣೆ :

ಆ ಪುರುಷನು ಸರ್ವಹುತನು. ಆ ಯಜ್ಞದಿಂದ ಋಕ್ ಗಳು, ಸಾಮಗಳು ಹುಟ್ಟಿದವು. ಅದೇ ಯಜ್ಞದಿಂದ ಗಾಯತ್ರೀ ಮೊದಲಾದ ಛಂದಸ್ಸುಗಳು ಹುಟ್ಟಿದವು. ಅದೇ ಯಜ್ಞದಿಂದ ಯಜುಸ್ ಹುಟ್ಟಿತು.

ಮಂತ್ರ - 11 -ಸಂಸ್ಕೃತದಲ್ಲಿ :

ತಸ್ಮಾತ್ ಅಶ್ವಾ ಅಜಾಯಂತ ಯೇ ಕೇ ಚ ಉಭಯಾದತಃ
ಗಾವೋ ಹ ಜಜ್ಞಿರೇ ತಸ್ಮಾತ್ ತಸ್ಮಾತ್ ಜಾತಾ ಅಜಾವಯಃ

ಕನ್ನಡದಲ್ಲಿ :

ಅವನಿಂದ ಕುದುರೆಗಳಾದವು ಎರಡೆಡೆ ದವಡೆಯ ಹಲ್ಲಿನವು
ಗೋವುಗಳಾದವು ಅವನಿಂದಲೆ ಅವನಿಂದಲೆ ಕುರಿ ಆಡು   

ವಿವರಣೆ :

ಆ ಯಜ್ಞದಿಂದ ಕುದುರೆಗಳು ಹುಟ್ಟಿದವು. ಮೇಲೆ ಮತ್ತು ಕೆಳಗಿನ ಭಾಗಗಳಲ್ಲಿ ದಂತಗಳುಳ್ಳ ಗರ್ದಭಗಳು, ಅಶ್ವತರ (ಹೇಸರಕತ್ತೆ) ಗಳು ಹುಟ್ಟಿದವು. ಆ ಯಜ್ಞದಿಂದ ಗೋವುಗಳು, ಮೇಕೆಗಳು, ಕುರಿಗಳು ಹುಟ್ಟಿದವು.

ಮಂತ್ರ - 12 -ಸಂಸ್ಕೃತದಲ್ಲಿ :

ಯತ್ ಪುರುಷಂ ವಿ ಅದಧುಃ  ಕತಿಧಾ ವಿ ಅಕಲ್ಪಯನ್
ಮುಖಮ್ ಕಿಮ್ ಅಸ್ಯ ಕೌ ಬಾಹೂ ಕಾ ಊರೂ ಪಾದಾ ಉಚ್ಯೇತೇ

ಕನ್ನಡದಲ್ಲಿ :

ಪರಮಪುರುಷನ ಭಾವಿಸುವಲ್ಲೆನಿತು ಬಗೆಯ ಊಹೆ
ಯಾವುದವನ ಮುಖ ತೋಳಾವುದು ಯಾವುದು ಕಾಲು ತೊಡೆ 

ವಿವರಣೆ :

ಪ್ರಜಾಪತಿಯ ಪ್ರಾಣರೂಪರಾದ ದೇವತೆಗಳು ಯಾವಾಗ ವಿರಾಡ್ರೂಪನಾದ ಪುರುಷನನ್ನು ಸಂಕಲ್ಪದಿಂದ ಸೃಷ್ಟಿಸಿದಾಗ ಎಷ್ಟು ಪ್ರಕಾರಗಳಿಂದ ನಾನಾ ವಿಧವಾಗಿ ಕಲ್ಪಿಸಿದರು ? ಆ ಪುರುಷನ ಮುಖ ಯಾವುದು, ಬಾಹುಗಳು ಯಾವುವು ? ತೊಡೆಗಳು ಯಾವುವು ? ಯಾವುವು ಪಾದಗಳಾಗಿ ಉಕ್ತವಾಗುತ್ತವೆ ?

ಮಂತ್ರ - 13 -ಸಂಸ್ಕೃತದಲ್ಲಿ :

ಬ್ರಾಹ್ಮಣೋ ಅಸ್ಯ ಮುಖಂ ಆಸೀತ್ ಬಾಹೂ ರಾಜನ್ಯಃ ಕೃತಃ
ಊರೂ ತದ್ ಅಸ್ಯ ಯದ್ ವೈಶ್ಯಃ ಪದ್ಭ್ಯಾಂ ಶೂದ್ರೋ ಅಜಾಯತ

ಕನ್ನಡದಲ್ಲಿ :

ಮುಖವಾದನು ಬ್ರಾಹ್ಮಣನು ಕ್ಷತ್ರಿಯ ತಾ ತೋಳುಗಳಾದ
ವೈಶ್ಯನುದಿಸಿದನವನ ತೊಡೆಯಿಂದ ಶೂದ್ರನು ಕಾಲಿಂದ     

ವಿವರಣೆ :

ಬ್ರಾಹ್ಮಣನು ವಿರಾಟ್ ಪುರುಷನ ಮುಖವಾಗಿ ಆದನು. ಕ್ಷತ್ರಿಯನು ಬಾಹುಗಳಾಗಿ ಮಾಡಲ್ಪಟ್ಟನು. ವೈಶ್ಯನೆಂಬುವನು ಈ ವಿರಾಟ್ ಪುರುಷನ ತೊಡೆಗಳು. ಪಾದಗಳಿಂದ ಶೂದ್ರನು. (ಬ್ರಾಹ್ಮಣಾದಿಗಳು ವಿರಾಟ್ ಪುರುಷನ ದೇಹದಿಂದ ಹುಟ್ಟಿದರು).

ಮಂತ್ರ - 14 -ಸಂಸ್ಕೃತದಲ್ಲಿ :

ಚಂದ್ರಮಾ ಮನಸೋ ಜಾತಃ ಚಕ್ಷೋಃ ಸೂರ್ಯೋ ಅಜಾಯತ
ಮುಖಾತ್ ಇಂದ್ರಃ ಚ ಅಗ್ನಿಃ ಪ್ರಾಣಾತ್ ವಾಯುರ್ ಅಜಾಯತ

ಕನ್ನಡದಲ್ಲಿ :

ಚಂದ್ರನುದಿಸಿದನು ಮನದಿಂದ ರವಿಯುದಿಸಿದ ಕಣ್ಣಿಂದ
ಮುಖದಿಂದಾದರು ಇಂದ್ರಾಗ್ನಿಗಳು ಶ್ವಾಸದಿ ಜನಿಸಿದ ವಾಯು  

ವಿವರಣೆ :

ವಿರಾಟ್ ಪುರುಷನ ಮನಸ್ಸಿನಿಂದ ಚಂದ್ರ, ನೇತ್ರದಿಂದ ಸೂರ್ಯ, ಮುಖದಿಂದ ಇಂದ್ರ ಮತ್ತು ಅಗ್ನಿಗಳು ಹುಟ್ಟಿದರು. ಪ್ರಾಣದಿಂದ ವಾಯುವು ಹುಟ್ಟಿದನು.

ಮಂತ್ರ - 15 -ಸಂಸ್ಕೃತದಲ್ಲಿ :

ನಾಭ್ಯಾ ಆಸೀತ್ ಅಂತರಿಕ್ಷಂ ಶೀರ್ಷ್ಣೋ ದ್ಯೌಃ ಸಮವರ್ತತ
ಪದ್ಭ್ಯಾಂ ಭೂಮರ್ ದಿಶಃ ಶ್ರೋತ್ರಾತ್ ತಥಾ ಲೋಕಾನ್ ಅಕಲ್ಪಯನ್

ಕನ್ನಡದಲ್ಲಿ :

ಹೊಕ್ಕುಳಿನಿಂದಾಕಾಶವು ಶಿರದಲಿ ಮೂಡಿದ್ದು ಸ್ವರ್ಗ
ದಿಕ್ಕುಗಳ ಕಿವಿಯಿಂದ ಬುವಿಯ ಕಾಲಿಂದಲಿಂತೆ ಕಲ್ಪಿಸಿದರು ಲೋಕ  

ವಿವರಣೆ :

ನಾಭಿಯಿಂದ ಅಂತರಿಕ್ಷವು, ಶೀರ್ಷದಿಂದ ದಿವಿಯು, ಪಾದಗಳಿಂದ ಭೂಮಿಯು ಉಂಟಾಯಿತು. ಶ್ರೋತ್ರದಿಂದ ದಿಕ್ಕುಗಳು ಉತ್ಪನ್ನವಾದವು. ಹೀಗೆ ಪ್ರಜಾಪತಿಯ ಶರೀರ ಭಾಗದಿಂದ ಅಂತರಿಕ್ಷ ಮೊದಲಾದ ಲೋಕಗಳನ್ನು ಕಲ್ಪಿಸಿದರು.

ಮಂತ್ರ - 16 -ಸಂಸ್ಕೃತದಲ್ಲಿ :

ವೇದಾಹಮೇತಂ ಪುರುಷಂ ಮಹಾಂತಮ್ ಆದಿತ್ಯವರ್ಣಂ ತಮಸಸ್ತು ಪಾರೇ
ಸರ್ವಾಣಿ ರೂಪಾಣಿ ವಿಚಿತ್ಯ ಧೀರಃ
ನಾಮಾನಿ ಕೃತ್ವಾಭಿವದನ್, ಯದಾಸ್ತೇ

ಕನ್ನಡದಲ್ಲಿ :

ಬಲ್ಲೆ ನಾನೀ ಪರಮಪುರುಷನನು
ಸೂರ್ಯನೊಲು ಬಣ್ಣ ಕತ್ತಲಾಚೆಗಿಹನು
ಎಲ್ಲ ರೂಪಿಸಿದ ಸರ್ವಜ್ಞ ತಾನು
ಹೆಸರುಗಳನಿರಿಸಿ ನೋಡುತಿಹನು                 

ವಿವರಣೆ :

ಯಾವ ಪುರುಷನು ದೇವ-ಮನುಷ್ಯ-ಇತ್ಯಾದಿ ರೂಪವಾದ ಸಮಸ್ತ ಶರೀರಗಳನ್ನೂ ವಿಶೇಷವಾಗಿ ಉತ್ಪಾದಿಸಿ ಇವನು ದೇವ-ಇವನು ಮನುಷ್ಯ-ಇದು ಪಶುವು  - ಎಂದು ಹೆಸರುಗಳನ್ನು ಮಾಡಿ ಆ ಹೆಸರುಗಳಿಂದ ಸರ್ವವಿಧವಾಗಿ ವ್ಯವಹರಿಸುತ್ತಾ ಇದ್ದಾನೆಯೋ ಅಂತಹ ಸಮಸ್ತ ಗುಣಗಳಿಂದಲೂ ಅಧಿಕನಾಗಿರುವ ಆದಿತ್ಯನಂತೆ ಸ್ವಪ್ರಕಾಶ ರೂಪನಾಗಿರುವ ಈ ವಿರಾಟ್ ಪುರುಷನನ್ನು ನಾನು ಧ್ಯಾನದಿಂದ ಸದಾ ಅನುಭವರೂಪವಾಗಿ ತಿಳಿಯುತ್ತೇನೆ. ಆ ಪುರುಷನು ತಮಸ್ಸಿನ ರೂಪವಾದ ಅಜ್ಞಾನಕ್ಕಿಂತಲೂ ಆಚೆ ಬೆಳಗುತ್ತಾನೆ.

ಮಂತ್ರ- 17 -ಸಂಸ್ಕೃತದಲ್ಲಿ :

ಧಾತಾ ಪುರಸ್ತಾದ್ಯಮುದಾಜಹಾರ
ಶಕ್ರಃ ಪ್ರವಿದ್ವಾನ್-ಪ್ರದಿಶಶ್ಚತಸ್ರಃ
ತಮೇವಂ ವಿದ್ವಾನಮೃತ ಇಹ ಭವತಿ
ನಾನ್ಯಃ ಪಂಥಾ ಅಯನಾಯ ವಿದ್ಯತೇ

ಕನ್ನಡದಲ್ಲಿ :

ಸೃಷ್ಟಿಗೂ ಮೊದಲವನ ಪಾಡಿದನು ಬ್ರಹ್ಮ
ಶತವರುಷ ತಪಗೈದು ನಾಲ್ದೆಸೆಗಳರಿತವನು
ಅವನನಿಂತರಿವವನೆ ಗೆಲುವ ಸಾವನ್ನು
ಬೇರೆದಾರಿಯೆ ಇರದು ಆ ಪಯಣಕಿನ್ನು

ವಿವರಣೆ :

ಪ್ರಜಾಪತಿಯು ಯಾವ ವಿರಾಟ್ ಪುರುಷನನ್ನು ಮೊದಲು ಧ್ಯಾನಿಸುವವರ ಉಪಕಾರಕ್ಕಾಗಿ ಪ್ರಖ್ಯಾತಗೊಳಿಸಿದನೋ, ನಾಲ್ಕು ದಿಕ್ಕುಗಳಲ್ಲಿ ಮತ್ತು ನಾಲ್ಕು ಅವಾಂತರ (ಆಗ್ನೇಯ ಇತ್ಯಾದಿ) ದಿಕ್ಕುಗಳಲ್ಲಿ ಇರುವ ಸಮಸ್ತ ಪ್ರಾಣಿಗಳನ್ನೂ ಚೆನ್ನಾಗಿ ಬಲ್ಲವನಾದ ಇಂದ್ರನು ಧ್ಯಾನಿಸುವವರ ಅನುಗ್ರಹಕ್ಕಾಗಿ ಯಾವ ಪುರುಷನನ್ನು ಪ್ರಖ್ಯಾತಗೊಳಿಸಿದನೋ ಆ ವಿರಾಟ್ ಪುರುಷನನ್ನು ಈ ರೀತಿಯಾಗಿ (ಇಂದ್ರನ ಉಪದೇಶದಿಂದ) ಸಾಕ್ಷಾತ್ಕರಿಸಿಕೊಂಡವನು ಈ ಜನ್ಮದಲ್ಲೇ ಅಮೃತನಾಗುತ್ತಾನೆ. ಅಮೃತತ್ವಪ್ರಾಪ್ತಿಗೆ ಬೇರೆ ದಾರಿಯಿಲ್ಲ.

ಮೂಲಗಳು : ಸಂಸ್ಕೃತ ಮಂತ್ರಗಳು ಹಾಗೂ ಅದರ ಕನ್ನಡದ ಅವತರಿಣಿಕೆ - ಶ್ರೀ.ಬಿ.ಎಸ್.ಚಂದ್ರಶೇಖರ ಅವರ ಕೃತಿ "ಸವಿಗನ್ನಡ ಸ್ತೋತ್ರಚಂದ್ರಿಕೆ"
ವಿವರಣೆಗಳು :- "ಸಸ್ವರ ಮಹಾನ್ಯಾಸಾದಿ ಮಂತ್ರಾಃ " - ವಿದ್ವಾನ್ ಶೇಷಾಚಲ ಶರ್ಮಾ.





















Comments

  1. ಗುರುಗಳೇ ನಿಮ್ಮನ್ನ ಸಂಪರ್ಕ ಮಾಡಬೇಕು ನಿಮ್ಮ ಇಮೇಲ್ ಕೊಡಿ

    ReplyDelete
  2. ನರವರ್ಮನ ಪುರುಷ ಸೂಕ್ತ ಬಗ್ಗೆ ತಿಳಿಸಿ

    ReplyDelete
  3. ಆತ್ಮೀಯರೇ, ದ್ವಾದಶಸ್ತ್ರೋತ್ರ ಮತ್ತು ಇದರ ಅರ್ಥವುಳ್ಳ ಪಿಡಿಎಫ್ ಇದ್ದರೆ ದಯವಿಟ್ಟು ಕಳುಹಿಸಿಕೊಡಿ.

    ReplyDelete
  4. ಪುರುಷ ಸೂಕ್ತ , ಶ್ರೀ ಸೂಕ್ತ ದ ಅರ್ಥ ವಿವರಣೆ ಇರುವ ಇದನ್ನು PDF format ನಲ್ಲಿ ಇದ್ದರೆ , ದಯಮಾಡಿ ತಿಳಿಸಿ ಎಂದು ಪ್ರಾರ್ಥನೆ.

    ReplyDelete

Post a Comment

Popular posts from this blog

ಶಿವ ಸಂಕಲ್ಪ ಸೂಕ್ತ ( ಶುಕ್ಲಯಜುರ್ವೇದ, ವಾಜಸನೇಯ ಸಂಹಿತಾ)

ಮಂತ್ರಪುಷ್ಪ (ತೈತ್ತರೀಯ ಆರಣ್ಯಕ)