ಮಂತ್ರಪುಷ್ಪ (ತೈತ್ತರೀಯ ಆರಣ್ಯಕ)



ಮಂತ್ರಪುಷ್ಪ (ತೈತ್ತರೀಯ ಆರಣ್ಯಕ)

ಶ್ಲೋಕ - 1 - ಸಂಸ್ಕೃತದಲ್ಲಿ :

ಯೋsಪಾ ಪುಷ್ಪಂ ವೇದ | ಪುಷ್ಪವಾನ್ ಪ್ರಜಾವಾನ್ ಪಶುಮಾನ್ ಭವತಿ | ಚಂದ್ರಮಾ ವಾ ಅಪಾಂ ಪುಷ್ಪಂ | ಪುಷ್ಪವಾನ್ ಪ್ರಜಾವಾನ್ ಪಶುಮಾನ್ ಭವತಿ | ಯ ಏವಂ ವೇದ | ಯೋsಪಾಮಾಯತನಂ ವೇದ | ಆಯತನವಾನ್ ಭವತಿ ||
ಕನ್ನಡದಲ್ಲಿ :

ಜಲದ ಪುಷ್ಪಗಳನರಿತಾತ ಪುಷ್ಪ ಪ್ರಜೆ ಪಶುಸಂಪನ್ನನಹನು ಚಂದ್ರಮನೆ ಜಲದ ಪುಷ್ಪ ಇದನರಿತವನು
ಪುಷ್ಪ ಪ್ರಜೆ ಪಶುಸಂಪನ್ನನಹನು ಜಲದ ನೆಲೆಯರಿತವನು ನೆಲೆಯುಳ್ಳವನಹನು.

ವಿವರಣೆ :

ಚಂದ್ರಮಂಡಲವು ಅಮೃತಮಯವಾಗಿರುವುದರಿಂದ ಜಲದ ಪುಷ್ಪಸ್ಥಾನೀಯವಾಗಿದೆ. ಜಲದ ಪುಷ್ಪವಾದ ಚಂದ್ರಮಂಡಲವನ್ನು ಯಾವನು ತಿಳಿಯುತ್ತಾನೋ ಅವನು ತನ್ನ ಭೋಗಕ್ಕೆ ಬೇಕಾದ ಪುಷ್ಪವಂತನೂ ಪ್ರಜಾವಂತನೂ ಪಶುಸಮೃದ್ಧಿ ಸಂಪನ್ನನೂ ಆಗುತ್ತಾನೆ. ಚಂದ್ರನೇ ಜಲದ ಪುಷ್ಪವು. ಈ ರೀತಿಯಾಗಿ ತಿಳಿದವನು ಪುಷ್ಪವಂತನೂ ಪ್ರಜಾವಂತನೂ ಪಶುಸಮೃದ್ಧಿ ಸಂಪನ್ನನೂ ಆಗುತ್ತಾನೆ. (ಪ್ರೇರಣೆ ಮಾಡಲು ಆರಂಭದಲ್ಲೂ ಉಪಸಂಹಾರಕ್ಕಾಗಿ ಕೊನೆಯಲ್ಲೂ ಫಲಕಥನವನ್ನು ಮಾಡಲಾಗಿದೆ.

ಶ್ಲೋಕ - 2 - ಸಂಸ್ಕೃತದಲ್ಲಿ :

ಅಗ್ನಿರ್ವಾ ಅಪಾಮಾಯತನಮ್ | ಆಯತನವಾನ್ ಭವತಿ |
ಯೋsಗ್ನೇರಾಯತನಂ ವೇದ | ಆಯತನವಾನ್ ಭವತಿ |
ಆಪೋ ವಾ ಅಗ್ನೇರಾಯತನಮ್ | ಆಯತನವಾನ್ ಭವತಿ |
ಯ ಏವಂ ವೇದ | ಯೋsಪಾಮಾಯತನಂ ವೇದ | ಆಯತನವಾನ್ ಭವತಿ ||
ಕನ್ನಡದಲ್ಲಿ :

ಅಗ್ನಿಯ ಜಲದ ನೆಲೆಯಹುದು ಇದನರಿತವನು ನೆಲೆಯುಳ್ಳವನಹನು
ಅಗ್ನಿಯ ನೆಲೆಯನರಿತವನು ನೆಲೆಯುಳ್ಳವನಹನು
ಜಲವೆ ಅಗ್ನಿಯ ನೆಲೆಯಹುದು ಇದನರಿತವನು ನೆಲೆಯುಳ್ಳವನಹನು
ಜಲದ ನೆಲೆಯರಿತವನು ನೆಲೆಯುಳ್ಳವನಹನು

ವಿವರಣೆ :

ಜಲದ ಆಶ್ರಯವಾದ ಅಗ್ನಿಯನ್ನು ತಿಳಿದವನು ಆಶ್ರಯವುಳ್ಳವನಾಗುತ್ತಾನೆ. ಅಗ್ನಿಯೇ ಜಲದ ಆಶ್ರಯವು. ಹೀಗೆ ತಿಳಿದವನು ಆಶ್ರಯವುಳ್ಳವನಾಗುತ್ತಾನೆ. ಅಗ್ನಿಯ ಆಯತನವಾದ ಜಲವನ್ನು ತಿಳಿದವನು ಆಶ್ರಯವುಳ್ಳವನಾಗುತ್ತಾನೆ. ಜಲವೇ ಅಗ್ನಿಯ ಆಶ್ರಯವು. ಮಹಾಸೃಷ್ಟಿಯಲ್ಲಿ ಜಲವು ಅಗ್ನಿಯ ಕಾರ್ಯವಾಗಿದ್ದರೂ ಬ್ರಹ್ಮಾಂಡ ಮೊದಲಾದ ಅವಾಂತರ ಸೃಷ್ಟಿಯಲ್ಲಿ ಶ್ರುತಿವಾಕ್ಯಕ್ಕನು ಸಾರವಾಗಿ (ಆಪೋವಾ ಇದಮಗ್ರೇಸಲಿಲಮಾಸೀತ್ - ಎಂದು ಶ್ರುತಿವಾಕ್ಯವಿದೆ). ಸರ್ವಕಾರಣವಾದುದು ಜಲವು. ಈ ರೀತಿಯಾಗಿ ತಿಳಿದವನು ಆಶ್ರಯವುಳ್ಳವನಾಗಿ ಆಧಾರ ಗೃಹವುಳ್ಳವನಾಗಿ ಆಗುತ್ತಾನೆ. (ಆರಂಭದಲ್ಲಿ ಪ್ರರೋಚನೆಗಾಗಿಯೂ ಮತ್ತೆ ಕೊನೆಯಲ್ಲಿ ಫಲಶ್ರುತಿಗಾಗಿಯೂ ಈ ರೀತಿ ಹೇಳಲಾಗಿದೆಯೆಂದು ತಿಳಿಯಬೇಕು). (ಇದು ಜಲತತ್ತ್ವದ ಪ್ರಶಂಸೆಯಾಗಿದೆ). (ಜಲ ಮತ್ತು ಅಗ್ನಿಗಳ ಪರಸ್ಪರ ಆಶ್ರಯ ಭಾವವನ್ನು ತಿಳಿಸಲಾಗಿದೆ).

ಶ್ಲೋಕ - 3 - ಸಂಸ್ಕೃತದಲ್ಲಿ :

ವಾಯುರ್ವಾ ಅಪಾಮಾಯತನಮ್ | ಆಯತನವಾನ್ ಭವತಿ | ಯೋ ವಾಯೋರಾಯತನಂ ವೇದ | ಆಯತನವಾನ್ ಭವತಿ | ಆಪೋ ವೈ ವಾಯೋರಾಯತನಮ್ | ಆಯತನವಾನ್ ಭವತಿ | ಯ ಏವಂ ವೇದ | ಯೋsಪಾಮಾಯತನಂ ವೇದ | ಆಯತನವಾನ್ ಭವತಿ ||
ಕನ್ನಡದಲ್ಲಿ :

ವಾಯುವೆ ಜಲದ ನೆಲೆಯಹುದು ಇದನರಿತವನು ನೆಲೆಯುಳ್ಳವನಹನು
ವಾಯುವಿನ ನೆಲೆಯನರಿತವನು ನೆಲೆಯುಳ್ಳವನಹನು
ಜಲವೆ ವಾಯುವಿನ ನೆಲೆಯಹುದು ಇದನರಿತವನು ನೆಲೆಯುಳ್ಳವನಹನು
ಜಲದ ನೆಲೆಯರಿತವನು ನೆಲೆಯುಳ್ಳವನಹನು

ವಿವರಣೆ :

ಜಲದ ಆಶ್ರಯವಾದ ವಾಯುವನ್ನು ತಿಳಿದವನು . ಆಶ್ರಯವುಳ್ಳವನಾಗುತ್ತಾನೆ. ವಾಯುವೇ ಜಲದ ಆಶ್ರಯವಾಗಿದೆ. ಹೀಗೆ ತಿಳಿದವನು ಆಶ್ರಯವುಳ್ಳವನಾಗಿ ಆಗುತ್ತಾನೆ. ವಾಯುವಿನ ಆಶ್ರಯವಾದ ಜಲವನ್ನು ತಿಳಿದವನು ಆಶ್ರಯವುಳ್ಳವನಾಗುತ್ತಾನೆ. ಜಲವೇ ವಾಯುವಿನ ಆಶ್ರಯವು. ("ವಾಯೋರಗ್ನಿಃ | ಅಗ್ನೇರಾಪಃ" | ಎಂಬ ಶ್ರುತಿಗನುಸಾರವಾಗಿ ವಾಯುವು ಜಲದ ಕಾರಣವಾಗಿರುವುದರಿಂದ ವಾಯುವು ಜಲದ ಆಶ್ರಯವಾಗಿದೆ. ಆದರೆ ಅವಾಂತರ ಸೃಷ್ಟಿಯಲ್ಲಿ ಹಿಂದೆ ತಿಳಿಸಿದ ಶ್ರುತಿಗೆ ಅನುಸಾರವಾಗಿ ಜಲವು ವಾಯುವಿನ ಆಶ್ರಯವಾಗಿದೆ). ಹೀಗೆ ತಿಳಿದವನು ಆಶ್ರಯವುಳ್ಳವನಾಗುತ್ತಾನೆ.

ಶ್ಲೋಕ - 4 - ಸಂಸ್ಕೃತದಲ್ಲಿ :

ಅಸೌ ವೈ ತಪನ್ನಪಾಮಾಯತನಮ್ | ಆಯತನವಾನ್ ಭವತಿ | ಯೋsಮುಷ್ಯ ತಪತ ಆಯತನಂ ವೇದ | ಆಯತನವಾನ್ ಭವತಿ | ಆಪೋ ವಾ ಅಮುಷ್ಯ ತಪತ ಆಯತನಂ | ಆಯತನವಾನ್ ಭವತಿ | ಯ ಏವಂ ವೇದ | ಯೋsಪಾಮಾಯತನಂ ವೇದ | ಆಯತನವಾನ್ ಭವತಿ ||
ಕನ್ನಡದಲ್ಲಿ :

ಉರಿವ ಸೂರ್ಯನು ಜಲದ ನೆಲೆಯಹನು
ಇದನರಿತವನು ನೆಲೆಯುಳ್ಳವನಹನು
ಉರಿವ ಸೂರ್ಯನ ನೆಲೆಯನರಿತವನು ನೆಲೆಯುಳ್ಳವನಹನು
ಜಲವೆ ಉರಿವ ಸೂರ್ಯನ ನೆಲೆಯಹುದು
ಇದನರಿತವನು ನೆಲೆಯುಳ್ಳವನಹನು
ಜಲದ ನೆಲೆಯರಿತವನು ನೆಲೆಯುಳ್ಳವನಹನು

ವಿವರಣೆ :

ಜಲದ ಆಶ್ರಯವಾದ ಆದಿತ್ಯನನ್ನು ತಿಳಿದವನು ಆಶ್ರಯವುಳ್ಳವನಾಗುತ್ತಾನೆ. ಧಗಧಗಿಸುತ್ತಿರುವ ಆ ಆದಿತ್ಯನೇ ಜಲದ ಆಶ್ರಯವಾಗಿದ್ದಾನೆ. ಹೀಗೆ ತಿಳಿದವನು ಆಶ್ರಯವುಳ್ಳವನಾಗುತ್ತಾನೆ. ಧಗಧಗಿಸುತ್ತಿರುವ ಆ ಆದಿತ್ಯನ ಆಶ್ರಯವಾದ ಜಲವನ್ನು ತಿಳಿದವನು ಆಶ್ರಯವುಳ್ಳವನಾಗುತ್ತಾನೆ. ಜಲವೇ ಧಗಧಗಿಸುತ್ತಿರುವ ಆ ಆದಿತ್ಯನ ಆಶ್ರಯವಾಗಿದೆ. ("ಆದಿತ್ಯಾಜ್ಜಾಯತೇ ವೃಷ್ಟಿಃ " ಎಂಬ ಸ್ಮೃತಿಗೆ ಅನುಸಾರವಾಗಿ ಆದಿತ್ಯನು ಜಲದ ಕಾರಣರೂಪನು. ಆದರೆ ಅವಾಂತರ ಸೃಷ್ಟಿಯ ಪ್ರಕಾರ ಜಲವು ಆದಿತ್ಯನ ಆಶ್ರಯವಾಗಿದೆ). ಹೀಗೆ ತಿಳಿದವನು ಆಶ್ರಯವುಳ್ಳವನಾಗುತ್ತಾನೆ. (ಜಲತತ್ತ್ವದ ಪ್ರಶಂಸೆಗಾಗಿ ಹೀಗೆ ಪರಸ್ಪರ ಆಶ್ರಯ ಭಾವವನ್ನು ವರ್ಣಿಸಲಾಗಿದೆ).

ಶ್ಲೋಕ - 5 - ಸಂಸ್ಕೃತದಲ್ಲಿ :

ಚಂದ್ರಮಾ ವಾ ಅಪಾಮಾಯತನಮ್ | ಆಯತನವಾನ್ ಭವತಿ | ಯಶ್ಚಂದ್ರಮಸ ಆಯತನಂ ವೇದ | ಆಯತನವಾನ್ ಭವತಿ | ಆಪೋ ವೈ ಚಂದ್ರಮಸ ಆಯತನಂ | ಆಯತನವಾನ್ ಭವತಿ | ಯ ಏವಂ ವೇದ| ಯೋsಪಾಮಾಯತನಂ ವೇದ | ಆಯತನವಾನ್ ಭವತಿ ||
ಕನ್ನಡದಲ್ಲಿ :

ಚಂದ್ರಮನು ಜಲದ ನೆಲೆಯಹನು
ಇದನರಿತವನು ನೆಲೆಯುಳ್ಳವನಹನು
ಚಂದ್ರಮನ ನೆಲೆಯನರಿತವನು ನೆಲೆಯುಳ್ಳವನಹನು
ಜಲವೆ ಚಂದ್ರಮನ ನೆಲೆಯಹುದು ಇದನರಿತವನು ನೆಲೆಯುಳ್ಳವನಹನು
ಜಲದ ನೆಲೆಯರಿತವನು ನೆಲೆಯುಳ್ಳವನಹನು

ವಿವರಣೆ :

ಜಲದ ಆಧಾರವಾದ ಚಂದ್ರನನ್ನು ತಿಳಿದವನು ಆಶ್ರಯವುಳ್ಳವನಾಗುತ್ತಾನೆ. ಚಂದ್ರನೇ ಜಲದ ಆಶ್ರಯವು. ಹೀಗೆ ತಿಳಿದವನು ಆಶ್ರಯವುಳ್ಳವನಾಗುತ್ತಾನೆ. ಚಂದ್ರನ ಆಯತನವಾದ ಜಲವನ್ನು ತಿಳಿದವನು ಆಶ್ರಯವುಳ್ಳವನಾಗುತ್ತಾನೆ. ಜಲವೇ ಚಂದ್ರನ ಆಶ್ರಯವಾಗಿದೆ. (ಹಿಮಕಿರಣಗಳು ಚಂದ್ರನಿಂದ ಉತ್ಪನ್ನವಾಗುವುದರಿಂದ ಚಂದ್ರನು ಜಲದ ಆಧಾರವಾಗಿದ್ದಾನೆ. ಆದರೆ ಅವಾಂತರ ಸೃಷ್ಟಿಯ ಪ್ರಕಾರ ಜಲವು ಚಂದ್ರನ ಆಶ್ರಯವಾಗಿದೆ). ಹೀಗೆ ತಿಳಿದವನು ಆಶ್ರಯವುಳ್ಳವನಾಗುತ್ತಾನೆ. (ಇದೂ ಮುಖ್ಯವಾಗಿ ಜಲತತ್ತ್ವದ ಪ್ರಶಂಸೆಯಾಗಿರುವುದರಿಂದ ಹೀಗೆ ಪರಸ್ಪರ ಆಶ್ರಯ ಭಾವವನ್ನು ವರ್ಣಿಸಲಾಗಿದೆ).

ಶ್ಲೋಕ - 6 - ಸಂಸ್ಕೃತದಲ್ಲಿ :

ನಕ್ಷತ್ರಾಣಿ ವಾ ಅಪಾಮಾಯತನಮ್ | ಆಯತನವಾನ್ ಭವತಿ | ಯೋ ನಕ್ಷತ್ರಾಣಾಮಾಯತನಂ ವೇದ | ಆಯತನವಾನ್ ಭವತಿ ಆಪೋ ವೈ ನಕ್ಷತ್ರಾಣಾಮಾಯತನಮ್ | ಆಯತನವಾನ್ ಭವತಿ| ಯ ಏವಂ ವೇದ | ಯೋsಪಾಮಾಯತನಂ ವೇದ | ಆಯತನವಾನ್ ಭವತಿ ||
ಕನ್ನಡದಲ್ಲಿ :

ನಕ್ಷತ್ರಗಳೆ ಜಲದ ನೆಲೆಯಹುದು ಇದನರಿತವನು ನೆಲೆಯುಳ್ಳವನಹನು
ನಕ್ಷತ್ರಗಳ ನೆಲೆಯನರಿತವನು ನೆಲೆಯುಳ್ಳವನಹನು
ಜಲವೆ ನಕ್ಷತ್ರಗಳ ನೆಲೆಯಹುದು ಇದನರಿತವನು ನೆಲೆಯುಳ್ಳವನಹನು
ಜಲದ ನೆಲೆಯರಿತವನು ನೆಲೆಯುಳ್ಳವನಹನು

ವಿವರಣೆ :

ಜಲದ ಆಧಾರವಾದ ನಕ್ಷತ್ರಗಳನ್ನು ತಿಳಿದವನು ಆಶ್ರಯವುಳ್ಳವನಾಗುತ್ತಾನೆ. ನಕ್ಷತ್ರಗಳೇ ಜಲದ ಆಶ್ರಯವು. ಹೀಗೆ ತಿಳಿದವನು ಆಶ್ರಯವುಳ್ಳವನಾಗುತ್ತಾನೆ. ನಕ್ಷತ್ರಗಳ ಆಶ್ರಯವಾದ ಜಲವನ್ನು ತಿಳಿದವನು ಆಶ್ರಯವುಳ್ಳವನಾಗುತ್ತಾನೆ. ಜಲವೇ ನಕ್ಷತ್ರಗಳ ಆಶ್ರಯವಾಗಿದೆ. (ಪುಷ್ಯ, ಆಶ್ಲೇಷ ಮುಂತಾದ ಮಹಾನಕ್ಷತ್ರಗಳಲ್ಲಿ ವೃಷ್ಟಿಯು ಅಧಿಕನಾಗಿ ಕಂಡುಬರುವುದರಿಂದ ನಕ್ಷತ್ರಗಳು ಜಲದ ಆಧಾರವಾಗಿವೆ. ಆದರೆ ಅವಾಂತರ ಸೃಷ್ಟಿಯ ಪ್ರಕಾರ ಜಲವು ನಕ್ಷತ್ರಗಳ ಆಶ್ರಯವಾಗಿದೆ). ಹೀಗೆ ತಿಳಿದವನು ಆಶ್ರಯವುಳ್ಳವನಾಗುತ್ತಾನೆ. (ಇದೂ ಜಲತತ್ತ್ವದ ಪ್ರಶಂಸೆ. ಅದಕ್ಕಾಗಿ ಪರಸ್ಪರ ಆಶ್ರಯಭಾವವನ್ನು ವರ್ಣಿಸಲಾಗಿದೆ).

ಶ್ಲೋಕ - 7 - ಸಂಸ್ಕೃತದಲ್ಲಿ :

ಪರ್ಜನ್ಯೋ ವಾ ಅಪಾಮಾಯತನಮ್ | ಆಯತನವಾನ್ ಭವತಿ |
ಯಃ ಪರ್ಜನ್ಯಸ್ಯಾಯತನಂ ವೇದ | ಆಯತನವಾನ್ ಭವತಿ |
ಆಪೋ ವೈ ಪರ್ಜನ್ಯಸ್ಯಾಯತನಮ್ | ಆಯತನವಾನ್ ಭವತಿ |
ಯ ಏವಂ ವೇದ | ಯೋsಪಾಮಾಯತನಂ ವೇದ | ಆಯತನವಾನ್ ಭವತಿ ||
ಕನ್ನಡದಲ್ಲಿ :

ಮೇಘಗಳೆ ಜಲದ ನೆಲೆಯಹವು
ಇದನರಿತವನು ನೆಲೆಯುಳ್ಳವನಹನು
ಮೇಘಗಳ ನೆಲೆಯನರಿತವನು ನೆಲೆಯುಳ್ಳವನಹನು
ಜಲವೆ ಮೇಘಗಳ ನೆಲೆಯಹುದು
ಇದನರಿತವನು ನೆಲೆಯುಳ್ಳವನಹನು
ಜಲದ ನೆಲೆಯರಿತವನು ನೆಲೆಯುಳ್ಳವನಹನು


ವಿವರಣೆ :

ಜಲದ ಆಧಾರವಾದ ಪರ್ಜನ್ಯ (ಮೇಘ) ವನ್ನು ತಿಳಿದವನು ಆಶ್ರಯವುಳ್ಳವನಾಗುತ್ತಾನೆ. ಪರ್ಜನ್ಯವೇ ಜಲದ ಆಧಾರ. ಹೀಗೆ ತಿಳಿದವನು ಆಶ್ರಯವುಳ್ಳವನಾಗುತ್ತಾನೆ. ಪರ್ಜನ್ಯದ ಆಶ್ರಯವಾದ ಜಲವನ್ನು ತಿಳಿದವನು ಆಶ್ರಯವುಳ್ಳವನಾಗುತ್ತಾನೆ. ಜಲವೇ ಪರ್ಜನ್ಯದ ಆಶ್ರಯವಾಗಿದೆ. (ವೃಷ್ಟಿಯ ಮೂಲಕ ಪರ್ಜನ್ಯವೆಂಬ ಮೇಘವು ಜಲಾಧಾರವಾಗಿರುವುದರಿಂದ ಪರ್ಜನ್ಯವು ಜಲದ ಆಧಾರವಾಗಿದೆ. ಆದರೆ ಅವಾಂತರ ಸೃಷ್ಟಿಯ ಪ್ರಕಾರ ಜಲವು ಪರ್ಜನ್ಯದ ಆಶ್ರಯವಾಗಿದೆ). ಹೀಗೆ ತಿಳಿದವನು ಆಶ್ರಯವುಳ್ಳವನಾಗುತ್ತಾನೆ. (ಇದೂ ಜಲದ ಪ್ರಶಂಸೆಯಾಗಿದೆ. ಆದುದರಿಂದ ಪರಸ್ಪರವಾಗಿ ಆಶ್ರಯಭಾವವನ್ನು ವರ್ಣಿಸಲಾಗಿದೆ).

ಶ್ಲೋಕ - 8 - ಸಂಸ್ಕೃತದಲ್ಲಿ :

ಸಂವತ್ಸರೋ ವಾ ಅಪಾಮಾಯತನಮ್| ಆಯತನವಾನ್ ಭವತಿ | ಯಸ್ಸಂವತ್ಸರಸ್ಯಾಯತನಂ ವೇದ | ಆಯತನವಾನ್ ಭವತಿ | ಆಪೋ ವೈ ಸಂವತ್ಸರಸ್ಯಾಯತನಮ್ | ಆಯತನವಾನ್ ಭವತಿ | ಯ ಏವಂ ವೇದ | ಯೋsಪ್ಸುನಾವಂ ಪ್ರತಿಷ್ಠಿತಾಂ ವೇದ| ಪ್ರತ್ಯೇವ ತಿಷ್ಠತಿ ||
ಕನ್ನಡದಲ್ಲಿ :

ಸಂವತ್ಸರವೆ ಜಲದ ನೆಲೆಯಹುದು
ಇದನರಿತವನು ನೆಲೆಯುಳ್ಳವನಹನು
ಸಂವತ್ಸರದ ನೆಲೆಯನರಿತವನು ನೆಲೆಯುಳ್ಳವನಹನು
ಜಲವೆ ಸಂವತ್ಸರದ ನೆಲೆಯಹುದು
ಇದನರಿತವನು ನೆಲೆಯುಳ್ಳವನಹನು
ಜಲದೊಳಿಹ ನೌಕೆಯನರಿತವನು ಆ ನೌಕೆಯಲಿ ಪ್ರತಿಷ್ಠಿತನಹನು

ವಿವರಣೆ :

ಜಲದ ಆಧಾರವಾದ ಸಂವತ್ಸರವನ್ನು ತಿಳಿದವನು ಆಶ್ರಯವುಳ್ಳವನಾಗುತ್ತಾನೆ. ಸಂವತ್ಸರವೇ ಜಲದ ಆಧಾರವಾಗಿದೆ. ಹೀಗೆ ತಿಳಿದವನು ಆಶ್ರಯವುಳ್ಳವನಾಗುತ್ತಾನೆ. ಸಂವತ್ಸರದ ಆಶ್ರಯವಾದ ಜಲವನ್ನು ತಿಳಿದವನು ಆಶ್ರಯವುಳ್ಳವನಾಗುತ್ತಾನೆ. ಜಲವೇ ಸಂವತ್ಸರದ ಆಶ್ರಯವಾಗಿದೆ. (ವರ್ಷಋತುವಿನ ಮೂಲಕವಾಗಿ ಸಂವತ್ಸರವು ಜಲದ ಆಧಾರವಾಗಿರುವುದರಿಂದ ಸಂವತ್ಸರವು ಜಲದ ಆಧಾರವಾಗಿದೆ. ಆದರೆ ಅವಾಂತರ ಸೃಷ್ಟಿಯ ಪ್ರಕಾರ ಜಲವು ಸಂವತ್ಸರದ ಆಶ್ರಯವಾಗಿದೆ). ಹೀಗೆ ತಿಳಿದವನು
ಆಶ್ರಯವುಳ್ಳವನಾಗುತ್ತಾನೆ. (ಜಲದ ಪ್ರಶಂಸೆಗಾಗಿ ಹೀಗೆ ಪರಸ್ಪರ ಆಶ್ರಯಭಾವವನ್ನು ವರ್ಣಿಸಲಾಗಿದೆ).

ಜಲದಲ್ಲಿ ಪ್ರತಿಷ್ಟಿತವಾದ ನೌಕೆಯನ್ನು ತಿಳಿದವನು ಈ ಲೋಕದಲ್ಲಿ ಸ್ವಯಂ ಪ್ರತಿಷ್ಠಿತನಾಗುತ್ತಾನೆ. (ಭೂರಾದಿ ಈ ಲೋಕಗಳೆಲ್ಲವೂ ಜಲದಲ್ಲಿ ಪ್ರತಿಷ್ಟಿತವಾದ ನೌಕೆಯಂತೆ ಇವೆ. ಆದುದರಿಂದ ಸಮಸ್ತ ಲೋಕಗಳಿಗೂ ಜಲವು ಆಧಾರವಾದುದು. ಹೀಗೆ ತಿಳಿದವನು ಪ್ರತಿಷ್ಠಿತನಾಗುತ್ತಾನೆ. ಜಲವು ಶಿವನ ವಿಭೂತಿಯಾದ್ದರಿಂದ ಇದು ಶಿವನ ಪ್ರಶಂಸಾರೂಪವಾದ ಮಂತ್ರಪುಷ್ಪವಾಗಿದೆ).

ಶ್ಲೋಕ - 9 - ಸಂಸ್ಕೃತದಲ್ಲಿ :

ರಾಜಾಧಿರಾಜಾಯ ಪ್ರಸಹ್ಯ ಸಾಹಿನೇ | ನಮೋ ವಯಂ ವೈsಶ್ರವಣಾಯ ಕುರ್ಮಹೇ |
ಸ ಮೇ ಕಾಮಾನ್ಕಾಮಕಾಮಾಯ ಮಹ್ಯಮ್ | ಕಾಮೇಶ್ವರೋ ವೈsಶ್ರವಣೋ ದದಾತು |
ಕುಬೇರಾಯ ವೈಶ್ರವಣಾಯ| ಮಹಾರಾಜಾಯ ನಮಃ |
ಭವಾನೀ ಶಂಕರ ಸ್ವಾಮಿನೇ ನಮಃ | ವೇದೋಕ್ತ ಮಂತ್ರಪುಷ್ಪಾಣಿ ಸಮರ್ಪಯಾಮಿ ||
ಕನ್ನಡದಲ್ಲಿ :

ರಾಜರುಗಳಧಿರಾಜ ಶೀಘ್ರಜಯವೀವ ವೈಶ್ರವಣಂಗೆರಗುವೆವು
ಕಾಮೇಶ್ವರನಾಗಿ ವೈಶ್ರವಣ ಪೂರೈಸಲೆನ್ನ ಕಾಮನೆಗಳ
ಕುಬೇರನಹ ವೈಶ್ರವಣ ಮಹಾರಾಜಂಗೆ ನಮಿಪೆ
ಭವಾನೀ ಶಂಕರಸ್ವಾಮಿಗೆ ನಮಿಪೆ
ವೇದೋಕ್ತ ಮಂತ್ರಪುಷ್ಪಗಳನಿಡುವೆ.


ವಿವರಣೆ :

ರಾಜರುಗಳಿಗೂ ಅಧಿರಾಜನಾಗಿರುವವನೂ ಹಠಾತ್ತಾಗಿ (ಶೀಘ್ರವಾಗಿ) ಸಮಸ್ತ ಅರ್ಥಗಳನ್ನು ಸಾಧಿಸುವವನೂ ಆದ ವೈಶ್ರವಣನಿಗೆ (ರುದ್ರರೂಪನಿಗೆ) ನಾವು ನಮಸ್ಕಾರಗಳನ್ನು ಮಾಡುತ್ತೇವೆ. ಆ ವೈಶ್ರವಣನು ನನ್ನ ಇಷ್ಟಾರ್ಥಗಳನ್ನು ಇಷ್ಟಾರ್ಥಕಾಮನಾದ ನನಗೆ ಶೀಘ್ರವಾಗಿ ಕಾಮೇಶ್ವರನಾಗಿ ನೀಡಲಿ. ವೈಶ್ರವಣನೂ ಮಹಾರಾಜನೂ ಆದ ಕುಬೇರನಿಗೆ (ರುದ್ರಸ್ವರೂಪನಿಗೆ) ನಮಸ್ಕಾರ.
ಭವಾನೀ ಶಂಕರ ಸ್ವಾಮಿಗೆ ನಮಸ್ಕಾರ. ವೇದೋಕ್ತವಾದ ಮಂತ್ರಪುಷ್ಪಗಳನ್ನು ಸಮರ್ಪಿಸುತ್ತೇನೆ.

ಮೂಲಗಳು : ಸಂಸ್ಕೃತ ಮಂತ್ರಗಳು ಹಾಗೂ ಅದರ ಕನ್ನಡದ ಅವತರಿಣಿಕೆ - ಶ್ರೀ.ಬಿ.ಎಸ್.ಚಂದ್ರಶೇಖರ ಅವರ ಕೃತಿ "ಸವಿಗನ್ನಡ ಸ್ತೋತ್ರಚಂದ್ರಿಕೆ"
ವಿವರಣೆಗಳು :- "ಸಸ್ವರ ಮಹಾನ್ಯಾಸಾದಿ ಮಂತ್ರಾಃ " - ವಿದ್ವಾನ್ ಶೇಷಾಚಲ ಶರ್ಮಾ.







Comments

Popular posts from this blog

ಶಿವ ಸಂಕಲ್ಪ ಸೂಕ್ತ ( ಶುಕ್ಲಯಜುರ್ವೇದ, ವಾಜಸನೇಯ ಸಂಹಿತಾ)

ಪುರುಷ ಸೂಕ್ತ