ಶ್ರೀಸೂಕ್ತ




ಶ್ರೀಸೂಕ್ತ 



ಪ್ರಸ್ತಾವನೆ :
ಋಗ್ವೇದದ ಐದನೇ ಮಂಡಲದ ಕಡೆಯಲ್ಲಿ ಹಾಗೂ ಆರನೇ ಮಂಡಲದ ಆದಿಭಾಗದಲ್ಲಿ ಶ್ರೀಸೂಕ್ತವನ್ನು ಕಾಣಬಹುದು. ಈ ಮಂಡಲವನ್ನು ಆತ್ರೇಯ ಮಂಡಲವೆಂದೂ ಕರೆಯಲಾಗುವುದು. ಈ ಸೂಕ್ತದಲ್ಲಿ 29 ಮಂತ್ರಗಳಿರುವುದು. ಆದರೆ ಸಾಯಣರು ಹದಿನೈದು ಮಂತ್ರಗಳಿಗೆ ಭಾಷ್ಯವನ್ನು ರಚಿಸಿದ್ದಾರಾದ್ದರಿಂದ ಇವುಗಳನ್ನು ಸಾಮಾನ್ಯವಾಗಿ ಎಲ್ಲ ಸಂದರ್ಭಗಳಲ್ಲೂ ಪಠಿಸಲಾಗುವುದು. ಹದಿನಾರನೇ ಮಂತ್ರವನ್ನು ಫಲಶ್ರುತಿಯನ್ನಾಗಿ ಪರಿಗಣಿಸಲಾಗಿದೆ. ಈ ಪ್ರಸ್ತುತಿಯ ಕಡೆಯಲ್ಲಿ ಉಳಿದ ಮಂತ್ರಗಳನ್ನು (ನಿರುಕ್ತಿಕಾರರ ಪ್ರಕಾರ ಫಲಶ್ರುತಿಗಳೆಂದು ಪ್ರಸಿದ್ಧವಾದ) ಅರ್ಥಸಹಿತ ವಿವರಿಸಲಾಗಿದೆ. ಶ್ರೀಸೂಕ್ತದಲ್ಲಿ ಹದಿನೈದು ಋಗ್ ಮಂತ್ರಗಳಿರುವುದರಿಂದ ಇದನ್ನು "ಪಂಚಾದಶಾರ್ಚ" ಎಂದೂ ಕರೆಯಲಾಗುವುದು. 

ಪುರುಷಸೂಕ್ತದ 16 ಮಂತ್ರಗಳಿಂದ ಭಗವಂತನನ್ನು ಪೂಜಿಸುವಂತೆ ಶ್ರೀಲಕ್ಷ್ಮಿಯ ಆರಾಧನೆಯನ್ನು ಶ್ರೀಸೂಕ್ತದ ಮೂಲಕ ಮಾಡಬಹುದೆಂದು ಪದ್ಮಪುರಾಣದಲ್ಲಿ ಉಲ್ಲೇಖಿಸಲಾಗಿದೆ. 

ಈ ಸೂಕ್ತದಲ್ಲಿ ಲಕ್ಷ್ಮಿಯನ್ನು ಕೇವಲ ಧನಾಧಿಪತಿಯೆಂದು ಸಂಬೋಧಿಸದೇ ಮಹಾವಿಷ್ಣುವಿನ ಪತ್ನಿಯನ್ನಾಗಿಯೂ ಗುರುತಿಸಲಾಗಿದೆ. ಈ ಸೂಕ್ತವು ವಿಶ್ವದ ಮಾತೆಯನ್ನು ಕುರಿತು ಪ್ರಾರ್ಥಿಸುವುದಾಗಿದೆ. ಲಕ್ಷ್ಮಿಯನ್ನು ಸೂರ್ಯ ಚಂದ್ರರ ಹಿಂದಿರುವ ಶಕ್ತಿಯನ್ನಾಗಿ ಗುರುತಿಸಲಾಗಿದೆ. ಅವಳನ್ನು ಅಗ್ನಿ ಅಥವಾ ಬೆಂಕಿಯೊಂದಿಗೂ ಗುರುತಿಸಲಾಗಿದೆ. ಉಳಿದ ದೇವರುಗಳಾದ ಶಿವ ಹಾಗೂ ವಿಷ್ಣುವೂ ಸಹ ತಮ್ಮ ತಮ್ಮ ಕರ್ತವ್ಯಗಳನ್ನು ನಿಭಾಯಿಸಲು ಈ ವಿಶ್ವ ಶಕ್ತಿಯನ್ನೇ ಅವಲಂಬಿಸುತ್ತಾರೆ. ಈಕೆಯು ಮಹಾವಿಷ್ಣುವಿನ ಶಕ್ತಿ "ನಾರಾಯಣಿ" ಹಾಗೂ ಅದೇರೀತಿ ಇವಳು ಮುಕ್ಕಣ್ಣನ ಸತಿಯಾದ "ತ್ರಯಂಬಕೆ" ಯಾಗಿಯೂ ಗುರುತಿಸಲ್ಪಡುವಳು. 

ಶ್ರೀ ಎಂಬ ಪದವು " ಶ್ರ್" ಧಾತುವಿನಿಂದ ಉಗಮವಾಗಿದೆ. ಇದರ ಅರ್ಥವೆಂದರೆ "ಆಶ್ರಯವನ್ನು ಪಡೆಯುವುದು" ಅಥವಾ "ಸೇವಿಸುವುದು". ಈ ಧಾತು ಅಕ್ಷರಕ್ಕೆ " ಇಙ್" ಉಪಸರ್ಗವನ್ನು ಸೇರಿಸಿದಾಗ ನಮಗೆ ಸಿಗುವುದೇ "ಶ್ರೀ" ಪದವು. 

"ಶ್ರೀಯತೆ ಸರ್ವೈಃ ಇತಿ ಶ್ರೀಃ" - ಅಂದರೆ ಏಲ್ಲ ಜೀವಿಗಳಿಗೂ ಆಶ್ರಯ ನೀಡುವ ವಿಶ್ವಶಕ್ತಿಯೇ ಶ್ರೀ. ಪ್ರತಿಯೊಂದು ಜೀವಿಯಲ್ಲೂ ಶ್ರೀ ಯು ಉಸಿರಾಗಿ ಮತ್ತು ಭೌದ್ಧಿಕವಾಗಿ ಮಹತ್ತರವಾದ ಸಂಪತ್ತಾಗಿ ನೆಲೆಸಿರುವಳು. 

ಹೀಗೆ ಮಾರ್ಕಂಡೇಯ ಪುರಾಣದಲ್ಲಿ - "ಯಾ ದೇವೀ ಸರ್ವ ಭೂತೇಷು ಲಕ್ಷ್ಮಿ ರೂಪೇಣ ಸಂಸ್ಥಿತಾ " ಎಂಬುದಾಗಿ ವರ್ಣಿಸಲಾಗಿದೆ. 

ಲಕ್ಷ್ಮಿಯನ್ನು ಚೈತನ್ಯ ಮತ್ತು ವಿಭೂತಿ (ಶಕ್ತಿ ಅಥವಾ ಮಹೋನ್ನತಿ)ಯನ್ನಾಗಿಯೂ ಅರ್ಥೈಸಲಾಗಿದೆ. ಈ ಮಹಾನ್ ದೇವತೆಯನ್ನು ವಿಶ್ವದ ಮಹೋನ್ನತ ಧುರೀಣೆ "ಈಶ್ವರಿ" ಎಂದು ದುರ್ಗಾ ಸಪ್ತಶತಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಶ್ರೀ ಯು ಸಂಪತ್ತಿನ ಅಧಿದೇವತೆಯಲ್ಲದೇ ಶ್ರೀದೇವಿಯ ವಿಶಾಲಾರ್ಥದಲ್ಲಿ ವಿಶ್ವದ ಮಾತೆಯೂ ಹೌದು. ಕಾಳಿಕಾ ಪುರಾಣದಲ್ಲಿ ಶ್ರೀದೇವಿಯನ್ನು ಆತ್ಮವಿದ್ಯಾ ಮತ್ತು ಮಹಾವಿದ್ಯಾ ಎಂಬುದಾಗಿ ಕರೆಯಲಾಗಿದೆ - ಇವೆರಡೂ ಮುಕ್ತಿ ಪಥದ ಮಹಾಜ್ಞಾನವಾಗಿದೆ. ಹೀಗಾಗಿ ಅವಳನ್ನು ಪರಬ್ರಹ್ಮನ ಪ್ರತಿರೂಪವೆಂದೂ ಅರ್ಥೈಸಲಾಗಿದೆ. "ಶ್ರೀ" ಪದವು ಸ್ತ್ರೀಲಿಂಗ. ಹೀಗಾಗಿ ಶ್ರೀ ಲಕ್ಷ್ಮಿಗೆ ಸ್ತ್ರೀಲಿಂಗವನ್ನು ಅರ್ಥೈಸಲಾಗಿದೆ. ಆದರೆ ಶ್ರೀ ಪದದ ಮಹಾನ್ ತತ್ವವು ಲಿಂಗ ಮತ್ತು ರೂಪಗಳ ಸೀಮಿತ ದೃಶ್ಯೀಕರಣಕ್ಕಿಂತ ಮಿಗಿಲಾದದ್ದು. 

ದಕ್ಷಿಣಾಮೂರ್ತಿ ಸಂಹಿತೆಯಲ್ಲಿ ವಿವರಿಸಿರುವಂತೆ - "ಯೋಶಿತ್ ಪುರುಷ ರೂಪೇಣ ಸ್ಫುರಂತೀ ವಿಶ್ವಮಾತೃಕಾ" 

ವಿಶ್ವದ ಮೂಲ ಕಾರಣವಾದ ಈ ಮಹಾನ್ ತತ್ವವು ಸ್ತ್ರೀ-ಪುರುಷವೆರಡೂ ರೂಪದಲ್ಲೂ ಪ್ರಕಾಶಿಸುತ್ತದೆ. ಹಾಗಾಗಿ ಶ್ರೀ ತತ್ವವು ಪುರುಷ-ಪ್ರಕೃತಿಯೆರಡನ್ನೂ ಪ್ರತಿನಿಧಿಸುತ್ತದೆ. 

ಶ್ರೀ ಯ ಮೂಲ ರೂಪವು "ಪರಬ್ರಹ್ಮನ್". ಶ್ರೀಯ ನಿಯಮಾಧೀನ ರೂಪವೇ "ಪರಾಶಕ್ತಿ". ಜ್ಞಾನಿಗಳ ಅಂತರ್ಯದಲ್ಲಿ ಅಜ್ಞಾನದ ಅಂಧಕಾರವನ್ನು ನಾಶಮಾಡುವ ಬೆಳಗುತ್ತಿರುವ ಬೆಂಕಿಯ ಮಹೋನ್ನತ ಸ್ತಂಭವೇ "ಶ್ರೀ". 

ದೇವೀ ಉಪನಿಷತ್ತಿನಲ್ಲಿ ಶ್ರೀದೇವಿಯನ್ನು "ನೀನು ಯಾರು" ಎಂಬ ಪ್ರಶ್ನೆಗೆ ಶ್ರೀದೇವಿಯು "ನಾನೇ ಬ್ರಹ್ಮನ್, ನನ್ನಿಂದಲೇ ವಿಶ್ವವು ಪ್ರಕೃತಿ-ಪುರುಷರನ್ನು ಹೊಂದಿದೆ". ಎಂಬುದಾಗಿ ಉತ್ತರಿಸುತ್ತಾರೆ. ಈ ಸಂಭಾಷಣೆಯ ಮೂಲ ಉದ್ದೇಶವೆಂದರೆ ಈ ಪ್ರಕೃತಿ-ಪುರುಷರ ಪ್ರತ್ಯೇಕರಹಿತ ಸ್ಥಿತಿಯನ್ನು ಸೂಚಿಸುವುದು. ಹಾಗಾಗಿ ಸ್ತ್ರೀರೂಪದ ಶಕ್ತಿ ತತ್ವ ಹಾಗೂ ಪುರುಷರೂಪದ ಶಿವತತ್ವವು ಚಂದ್ರ ಮತ್ತು ಅದರ ಪ್ರಕಾಶದಂತೆ ಬೇರೆ ಬೇರೆಯದಲ್ಲ. 

ಶ್ರೀಸೂಕ್ತದ ಆಳವಾದ ತಾತ್ವಿಕ ವಿಶೇಷತೆಯೊಡನೆ ಈ ಸೂಕ್ತವನ್ನು ಸಗುಣ ಬ್ರಹ್ಮನ ರೂಪವಾದ ಶ್ರೀ ಮಹಾಲಕ್ಷ್ಮಿಯನ್ನಾಗಿ ಅಂತರಂಗದಲ್ಲಿ ಸೃಷ್ಟಿಸಿಕೊಂಡು ಸುಂದರ ಮಾರ್ಗದಲ್ಲಿ ಪೂಜೆಯ ಮೂಲಕ ಪಠಿಸಲಾಗುವುದು. ಶ್ರೀಸೂಕ್ತದ ಅಧಿದೇವತೆಯು ಪಾವಿತ್ರ್ಯತೆ ಹಾಗೂ ಸಮೃದ್ಧಿಯನ್ನೊಳಗೊಂಡಿರುವುದು. 

ಖಿಲ ಸೂಕ್ತದಲ್ಲಿ ಬರುವ ಶ್ರೀಸೂಕ್ತಕ್ಕೆ ಅನೇಕರು ಭಾಷ್ಯವನ್ನು ಬರೆದಿದ್ದಾರೆ. ಸಮಗ್ರ ವೇದಗಳಿಗೆ ಭಾಷ್ಯವನ್ನು ರಚಿಸಿರುವ ಸಾಯನಾಚಾರ್ಯ ಮತ್ತು ಪೃಥ್ವೀಧರಾಚಾರ್ಯರು ಶ್ರೀಸೂಕ್ತಕ್ಕೆ ಭಾಷ್ಯವನ್ನು ರಚಿಸಿರುವರು. ಶ್ರೀಸೂಕ್ತದ ಸರಿಯಾದ ಅರ್ಥವನ್ನರಿಯಬೇಕಾದರೆ ಈ ಭಾಷ್ಯವನ್ನು ಪರಾಮರ್ಶಿಸಬೇಕು. ಮತ್ತೊಬ್ಬ ಶೈವ ವಿದ್ವಾಂಸ ಶ್ರೀಕಂಠ ರೂ ಕೂಡಾ ಶ್ರೀಸೂಕ್ತಕ್ಕೆ ಸುಂದರವಾದ ಭಾಷ್ಯವನ್ನು ರಚಿಸಿರುವರು. ಅವರು ತಮ್ಮ ಭಾಷ್ಯದಲ್ಲಿ ಶ್ರೀ ಯನ್ನು ಗೌರಿಯನ್ನಾಗಿಯೂ ಜಾತವೇದನನ್ನು ಶಿವನನ್ನಾಗಿಯೂ ಗುರುತಿಸುತ್ತಾರೆ. ಇದಲ್ಲದೇ ಮಂತ್ರ ಶಾಸ್ತ್ರದ ದೃಷ್ಟಿಯಿಂದ ಶ್ರೀಸೂಕ್ತದ ಬಗೆಗೆ ಅನೇಕ ಕೃತಿಗಳಿವೆ. ಅವುಗಳಲ್ಲಿ ಕೆಲವು :- ಮಂತ್ರಕಲ್ಪಾರ್ಣವ , ವೈಖಾನಸವಿದ್ಯ , ಲಕ್ಷ್ಮೀಯಮಳ , ಶ್ರೀರತ್ನಕೋಶ , ಶ್ರೀತತ್ವ , ಮಹಾಲಕ್ಷ್ಮೀರತ್ನಕೋಶ , ಶ್ರೀವಿದ್ಯಾವಿಲಾಸ , ಇತ್ಯಾದಿ. 

ಈ ಸೂಕ್ತದ ಪ್ರತಿಯೊಂದು ಮಂತ್ರಕ್ಕೂ ಬೇರೆ ಬೇರೆ ಋಷಿ , ಛಂದಸ್ಸು , ದೇವತೆ ಮತ್ತು ವಿನಿಯೋಗಗಳು ಇರುವುದು. ಸಮಗ್ರವಾಗಿ ಸೂಕ್ತವನ್ನು ಪರಿಗಣಿಸಿದಾಗ ಅದರ ಋಷಿಗಳು :- 
ಆನಂದ , ಚಿಕ್ಲೀತ , ಕರ್ದಮ , ಶ್ರೀಪ್ರದ. ಇವರೆಲ್ಲರೂ ಮಹಾಲಕ್ಷ್ಮಿಯ ಪುತ್ರರು. 
ಸಮಗ್ರ ಸೂಕ್ತದ ಎರಡು ದೇವತೆಗಳೆಂದರೆ - ಅಗ್ನಿ ಹಾಗೂ ಶ್ರೀ ದೇವಿ.
ಸಮಗ್ರ ಸೂಕ್ತದ ಬೀಜವೇ - ಹಿರಣ್ಯವರ್ಣಾಮ್
ಸಂಪೂರ್ಣ ಮಂತ್ರವು ಜನ್ಮಿಸುವುದಕ್ಕೆ ಬೀಜವೇ ಮೂಲ.
ಸಮಗ್ರ ಸೂಕ್ತದ ಶಕ್ತಿ - ತಾಂ ಮ ಆವಹ
ಶಕ್ತಿಯು ಮಂತ್ರದ ಒಂದು ಭಾಗ ಹಾಗೂ ಇದರಲ್ಲಿ ಮಂತ್ರದ ಸಂಪೂರ್ಣ ಶಕ್ತಿಯು ಅಡಕವಾಗಿರುತ್ತದೆ.
ಸೂಕ್ತದ ಕೀಲಕವು - ಕೀರ್ತಿಮೃದ್ಧಿಮ್
ಕೀಲಕ ಎಂದರೆ ಕಂಭ ಅಥವಾ ಮೊಳೆ. ಇದರಲ್ಲಿ ಮಂತ್ರವನ್ನು ಪಠಿಸುವವನು ತನ್ನ ಮನಸ್ಸನ್ನು ಸಂಪೂರ್ಣ ಏಕಾಗ್ರತೆಯಿಂದ ಬಂಧಿಸಬೇಕು.
ಪ್ರತಿಯೊಂದು ಮಂತ್ರದ ಧ್ಯಾನ ಶ್ಲೋಕಗಳನ್ನು ಆ ಮಂತ್ರದ ವ್ಯಾಖ್ಯಾನದ ಕೊನೆಯ ಭಾಗದಲ್ಲಿ ಪ್ರಸ್ತುತ ಪಡಿಸಲಾಗಿದೆ.

ಮಹಾಲಕ್ಷ್ಮಿಯ ಹದಿನೆಂಟು ಪುತ್ರರ ಹೆಸರುಗಳು -
ಹೆಸರು              ಧ್ಯಾನಿಸುವ ಮಂತ್ರ ದೇವಸಖ           ಓಂ ದೇವಸಖಾಯ ನಮಃ
ಚಿಕ್ಲೀತ               ಓಂ ಚಿಕ್ಲೀತಾಯ ನಮಃ
ಆನಂದ              ಓಂ ಆನಂದಾಯ ನಮಃ
ಕರ್ದಮ              ಓಂ ಕರ್ದಮಾಯ ನಮಃ 

ಶ್ರೀಪ್ರದ              ಓಂ ಶ್ರೀಪ್ರದಾಯ ನಮಃ
ಜಾತವೇದ          ಓಂ ಜಾತವೇದಾಯ ನಮಃ 
ಅನುರಾಗ           ಓಂ ಅನುರಾಗಾಯ ನಮಃ
ಸಂವಾದ            ಓಂ ಸಂವಾದಾಯ ನಮಃ
ವಿಜಯ              ಓಂ ವಿಜಯಾಯ ನಮಃ 
ವಲ್ಲಭ                ಓಂ ವಲ್ಲಭಾಯ ನಮಃ
ಮದ                  ಓಂ ಮದಾಯ ನಮಃ
ಹರ್ಷ                 
ಓಂ ಹರ್ಷಾಯ ನಮಃ 
ಬಲ                   ಓಂ ಬಲಾಯ ನಮಃ
ತೇಜ                 ಓಂ ತೇಜಸೆ ನಮಃ
ದಮಕ               ಓಂ ದಮಕಾಯ ನಮಃ
ಸಲಿಲ                ಓಂ ಸಲಿಲಾಯ ನಮಃ
ಗುಗ್ಗುಲ              ಓಂ ಗುಗ್ಗುಲಾಯ ನಮಃ
ಕುರುಂಟಕ          ಓಂ ಕುರುಂಟಕಾಯ ನಮಃ
ಪ್ರತಿ ಶುಕ್ರವಾರದಲ್ಲೂ ಭಕ್ತರು ಮಹಾಲಕ್ಷ್ಮಿಯ ಪೂಜೆಯ ವೇಳೆ ಮೇಲೆ ವಿವರಿಸಿದ ಅಷ್ಟಾದಶ ಮಂತ್ರಗಳ ಮೂಲಕ ದೇವಿಯನ್ನು ಆರಾಧಿಸಿ ಆಶೀರ್ವಾದವನ್ನು ಪಡೆಯುತ್ತಾರೆ.

ಶ್ರೀಸೂಕ್ತ - ಪ್ರಾರಂಭ 


ಹಿರಣ್ಯ ವರ್ಣಾಮಿತಿ ಪಂಚದಶರ್ಚಸ್ಯ ಸೂಕ್ತಸ್ಯ ಆನಂದ ಕರ್ದಮ ಚಿಕ್ಲೀತೇಂದಿರಾ ಸುತಾ ಋಷಯಃ (ಶಿರಸಿ) ಶ್ರೀರಗ್ನಿಶ್ಚ ದೇವತಾ ( ಹೃದಯೇ) ಅಧ್ಯಾಃ ತಿಸ್ರೋ ಅನುಷ್ಟಭುಃ, ಚತುರ್ಥೀ ಬೃಹತೀ | ಪಂಚಮೀ ಷಷ್ಠ್ಯೊ ತ್ರಿಷ್ಟುಭೌ | ತತೋsಷ್ಟೌವನುಷ್ಟುಭಃ ಅಂತ್ಯಾಪ್ರಸ್ತಾರ ಪಂಕ್ತಿಃ (ಮುಖೇ) | ಮಮ ಅಲಕ್ಷ್ಮೀ ಪರಿಹಾರದ್ವಾರ ಶ್ರೀಲಕ್ಷ್ಮೀಪ್ರಸಾದ ಸಿದ್ಧ್ಯರ್ಥೇ ಜಪೇ ವಿನಿಯೋಗಃ ||

ಅಂಗನ್ಯಾಸ : - ಓಂ ಹಿರಣ್ಯ ವರ್ಣಾಂ .... ಮ ಆವಹ ||
ಓಂ ನಮೋ ಭಗವತ್ಯೈ ಮಹಾಲಕ್ಷ್ಮ್ಯೈ || (ಶಿರಸಿ)
ತಾಂ ಮ ಆವಹ ....ಪುರುಷಾನಹಂ ||
ಓಂ ನಮೋ ಭಗವತ್ಯೈ ಮಹಾಲಕ್ಷ್ಮ್ಯೈ || (ನೇತ್ರಯೋಃ)
ಅಶ್ವಪೂರ್ವಾಂ ....ಜುಷತಾಂ ||
ಓಂ ನಮೋ ಭಗವತ್ಯೈ ಮಹಾಲಕ್ಷ್ಮ್ಯೈ || (ಕರ್ಣಯೋಃ)
ಕಾಂಸೋಸ್ಮಿತಾಂ .....ಶ್ರಿಯಂ ||
ಓಂ ನಮೋ ಭಗವತ್ಯೈ ಮಹಾಲಕ್ಷ್ಮ್ಯೈ || (ನಾಸಿಕಯಾಂ)
ಚಂದ್ರಾಂ ಪ್ರಭಾಸಾಂ ....ತ್ವಾಂ ವರ್ಣೇ ||
ಓಂ ನಮೋ ಭಗವತ್ಯೈ ಮಹಾಲಕ್ಷ್ಮ್ಯೈ || (ಮುಖೇ)||
ಆದಿತ್ಯವರ್ಣೇ .....ಅಲಕ್ಷ್ಮೀಃ ||
ಓಂ ನಮೋ ಭಗವತ್ಯೈ ಮಹಾಲಕ್ಷ್ಮ್ಯೈ || (ಕಂಠೇ)
ಉಪೈತುಮಾಂ .....ದದಾತುಮೇ ||
ಓಂ ನಮೋ ಭಗವತ್ಯೈ ಮಹಾಲಕ್ಷ್ಮ್ಯೈ || (ಬಾಹ್ವೋಃ)
ಕ್ಷುತ್ಪಿಪಾಸಾಂ .....ಗೃಹಾತ್ ||
ಓಂ ನಮೋ ಭಗವತ್ಯೈ ಮಹಾಲಕ್ಷ್ಮ್ಯೈ || (ಹೃದಯೇ)
ಗಂಧದ್ವಾರಂ .....ಶ್ರಿಯಂ ||
ಓಂ ನಮೋ ಭಗವತ್ಯೈ ಮಹಾಲಕ್ಷ್ಮ್ಯೈ || (ನಾಭೌ)
ಮನಸಃ ಕಾಮಂ ... .ಯಶಃ ||
ಓಂ ನಮೋ ಭಗವತ್ಯೈ ಮಹಾಲಕ್ಷ್ಮ್ಯೈ || (ಗುಹ್ಯೇ)
ಕರ್ದಮೇನ .....ಮಾಲಿನೀಂ ||
ಓಂ ನಮೋ ಭಗವತ್ಯೈ ಮಹಾಲಕ್ಷ್ಮ್ಯೈ || (ಪಾಯೌ)
ಆಪಸೃಜಂತು ..... ಮೇಕುಲೇ ||
ಓಂ ನಮೋ ಭಗವತ್ಯೈ ಮಹಾಲಕ್ಷ್ಮ್ಯೈ || (ಊರ್ವೋಃ)
ಆರ್ದ್ರಾ ಪುಷ್ಕರಿಣೀಂ ..... ಮ ಆವಹ ||
ಓಂ ನಮೋ ಭಗವತ್ಯೈ ಮಹಾಲಕ್ಷ್ಮ್ಯೈ || (ಜಾನ್ವೋಃ)
ತಾಂ ಮ ಆವಹ ..... ಪುರುಷಾನಹಂ ||
ಓಂ ನಮೋ ಭಗವತ್ಯೈ ಮಹಾಲಕ್ಷ್ಮ್ಯೈ || (ಪಾದಯೋಃ)
ಕರನ್ಯಾಸ :- ಓಂ ನಮೋ ಭಗವತ್ಯೈ ಮಹಾಲಕ್ಷ್ಮ್ಯೈ
ಹಿರಣ್ಯವರ್ಣಾಯ್ಯೆ - ಅಂಗುಷ್ಟಾಭ್ಯಾಂ ನಮಃ |
ಓಂ ನಮೋ ಭಗವತ್ಯೈ ಮಹಾಲಕ್ಷ್ಮ್ಯೈ
ಹರಿಣ್ಯೈ - ತರ್ಜನೀಭ್ಯಾಂ ನಮಃ |
ಓಂ ನಮೋ ಭಗವತ್ಯೈ ಮಹಾಲಕ್ಷ್ಮ್ಯೈ
ಸುವರ್ಣರಜತ ಸ್ರಜಾಯ್ಯೆ - ಮಧ್ಯಮಾಭ್ಯಾಂ ನಮಃ |
ಓಂ ನಮೋ ಭಗವತ್ಯೈ ಮಹಾಲಕ್ಷ್ಮ್ಯೈ
ಚಂದ್ರಾಯ್ಯೆ -ಅನಾಮಿಕಾಭ್ಯಾಂ ನಮಃ |
ಓಂ ನಮೋ ಭಗವತ್ಯೈ ಮಹಾಲಕ್ಷ್ಮ್ಯೈ
ಹಿರಣ್ಮಯ್ಯೈ - ಕನಿಷ್ಟಿಕಾಭ್ಯಾಂ ನಮಃ |
ಓಂ ನಮೋ ಭಗವತ್ಯೈ ಮಹಾಲಕ್ಷ್ಮ್ಯೈ
ಲಕ್ಷ್ಮ್ಯೈ - ಕರತಲಕರಪೃಷ್ಠಾಭ್ಯಾಂ ನಮಃ ||

ಧ್ಯಾನ ಶ್ಲೋಕ :- ಅರುಣಕಮಲ ಸಂಸ್ಥಾ ತದ್ರಜಃ ಪೂಜವರ್ಣಾ |
ಕರಕಮಲ ದೃತೇಷ್ಟಾ ಭೀತಿಯುಗ್ಮಾಂಬುಜಾತಾ |
ಮಣಿಮುಕುಟ ವಿಚಿತ್ರಾಲಂಕೃತಿಃ ಪದ್ಮಮಾಲಾ |
ಭವತು ಭುವನ ಮಾತಾ ಸತತಂ ಶ್ರೇಯಸಂ ನಃ ||
ಕಮಲಂ ಕಲಶಂ ಧೇನುಂ ಜ್ಞಾನ ಮಂಜಲಿ ಮೇವ ಚ
ಪಂಚಮುದ್ರಾಃ ಪ್ರದಶ್ಯಾರ್ಥ ಶ್ರೀಸೂಕ್ತಂ ಪ್ರಜಪೇದ್ಬುಧಃ||

ಶ್ಲೋಕ - 1 - ಸಂಸ್ಕೃತದಲ್ಲಿ : ಓಂ || ಹಿರಣ್ಯವರ್ಣಾಂ ಹರಿಣೀಂ ಸುವರ್ಣ ರಜತಸ್ರಜಾಮ್ |
ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ ||

ಕನ್ನಡದಲ್ಲಿ : ಹೊನ್ನ ಬಣ್ಣ ಹರಿಯ ಮನದನ್ನೆ ಬೆಳ್ಳಿಬಂಗಾರ ಹಾರ
ಚಂದ ಚಂದ್ರನೊಲು ಲಕ್ಷ್ಮಿಯೆನಗವಳ ಹರಕೆ ತಾ ಜಾತವೇದ

ತಾತ್ಪರ್ಯ : ಓ ಜಾತವೇದಾಗ್ನಿಯೇ ! ಸುವರ್ಣದ ಕಾಂತಿಯಂತೆ ಕಾಂತಿಯುಳ್ಳ , ಹರಿತವರ್ಣವುಳ್ಳ , ಚಿನ್ನದ ಪುಷ್ಪಗಳ ಮತ್ತು ರಜತ ಪುಷ್ಪಗಳ ಮಾಲೆಗಳನ್ನುಳ್ಳ , ಚಂದ್ರನಂತೆ ಪ್ರಕಾಶಮಾನವಾದ, ಹಿರಣ್ಯ ಸ್ವರೂಪವಾಗಿರುವ , ಸಂಪತ್ತನ್ನು ನನಗೆ ಉಂಟಾಗುವಂತೆ ಬರಮಾಡು. ಅಗ್ನಿಯು ದೇವತೆಗಳನ್ನು ಆಹ್ವಾನಿಸುವವನಾದ್ದರಿಂದ ಲಕ್ಷ್ಮೀದೇವಿಯನ್ನು ಬರಮಾಡುವುದು ಅಗ್ನಿಗೆ ಅಧೀನವಾಗಿದೆ.

ವಿವರಣೆ : ಈ ಶ್ಲೋಕವು ಅಗ್ನಿಯನ್ನು ಕುರಿತಾದ ಪ್ರಾರ್ಥನೆ. ವೈದಿಕ ಧರ್ಮಾಚರಣೆಯ ಪ್ರಕಾರ ಅಗ್ನಿಗೆ ಸಮರ್ಪಿಸುವ ಮೂಲಕ ಸಮಸ್ತ ದೇವಾನುದೇವತೆಗಳನ್ನು ತೃಪ್ತಿಪಡಿಸುವುದು. ಆದ್ದರಿಂದ ಇಲ್ಲಿ ಸೂಚಿಸಿರುವ ದೈವವು ಲಕ್ಷ್ಮಿಯಾದರೂ ಪ್ರಾರ್ಥನೆಯನ್ನು ಸಲ್ಲಿಸುವುದು ಅಗ್ನಿಗೆ ಮಾತ್ರ.
ಜಾತವೇದ ಪದಕ್ಕೆ ಅನೇಕ ಅರ್ಥಗಳಿವೆ. ಈ ಸೂಕ್ತಕ್ಕೆ ಸಂಬಂಧಿಸಿದ ಕೆಲವು ಅರ್ಥಗಳು ಈ ಕೆಳಕಂಡಂತೆ :
"ವೇದಾಃ ತ್ವದರ್ಥಮ್ ಜಾತಾಃ" (ಮಹಾಭಾರತ 231 - 41) ವೇದಗಳು ನಿನಗಾಗಿ ಜನ್ಮಿಸಿವೆ.

ವೇದಗಳ ಮಹಾನ್ ಪುರುಷನಾದ ಜಾತವೇದನಿಗಾಗೇ ಉಗಮಿಸಿವೆ. ಎಲ್ಲ ವೇದ ಮಂತ್ರಗಳು ದೇವತೆಗಳ ಅವಾಹನೆಗೆ ಸಂಬಂಧಿಸಿರುವುದು. ಸಾಮಾನ್ಯ ಮಾನವನಿಗೆ ದೇವತೆಗಳ ರೂಪವನ್ನು ಕಲ್ಪಿಸಿಕೊಳ್ಳಲು ಅಸಾಧ್ಯ. ಹಾಗಾಗಿ ಪ್ರತಿಯೊಬ್ಬರೂ ದೇವತೆಗಳ ರೂಪವನ್ನು ಅಗ್ನಿ ಅಥವಾ ಯಜ್ಞಕ್ಕೆ ಸಂಬಂಧಿಸಿದ ಅಗ್ನಿಯ ಮಾಧ್ಯಮದ ಮೂಲಕವೇ ದೃಶ್ಯೀಕರಿಸಿಕೊಳ್ಳುತ್ತಾರೆ. ದೇವತೆಗಳಿಗೆ ಅರ್ಪಿಸುವ ಕಾಣಿಕೆಗಳನ್ನು ಪವಿತ್ರಾಗ್ನಿಗೇ ಅರ್ಪಿಸುತ್ತಾರೆ. ಅಗ್ನಿಯು ಈ ಕಾಣಿಕೆಗಳನ್ನು ಹವಿಸ್ಸನ್ನಾಗಿ ಪರಿವರ್ತಿಸಿ ಅದನ್ನು ಆಯಾ ದೇವತೆಗಳಿಗೆ ತಲುಪಿಸುತ್ತಾನೆಂಬ ನಂಬಿಕೆ. ಹಾಗಾಗಿ ಅಗ್ನಿಯನ್ನು ಹವ್ಯವಾಹನನೆಂದೂ ಕರೆಯುತ್ತಾರೆ. ವೇದ ಪದವು ವಿದ್ (ಎಂದರೆ ಪ್ರಜ್ಞಾ) ಮೂಲದಿಂದ ಉದ್ಭವಿಸಿದೆ. ಯಾವುದರ ಮೂಲಕ ಈ ಪ್ರಜ್ಞೆ ಅಥವಾ ಅರಿವನ್ನು ಸಂಪೂರ್ಣವಾಗಿ ವ್ಯಕ್ತಪಡಿಸುವುದೋ ಅದನ್ನೇ ಜಾತವೇದ ಎನ್ನಲಾಗಿದೆ.

ಯಾರಿಗೆ ಸಂಪೂರ್ಣ ಜ್ಞಾನ ಅಥವಾ ಅರಿವು ಇರುವುದೋ ಅವನೇ ಜಾತವೇದ. ವೇದ ಎಂದರೆ ಶಾಸ್ತ್ರ ಅಥವಾ ಧರ್ಮಗ್ರಂಥ ಎಂದೂ ಅರ್ಥೈಸಲಾಗುವುದು. ಶಾಸ್ತ್ರವೆಂದರೆ ಆದೇಶಿಸುವುದು ಅಥವಾ ಆಜ್ಞಾಪಿಸುವುದು. ವೇದಗಳನ್ನು "ಪ್ರಭುಸಮ್ಮಿತ" ಎಂದೂ ಅರ್ಥೈಸಲಾಗುವುದು ಏಕೆಂದರೆ ಅದರಲ್ಲಿ ಶಾಶ್ವತವಾದ ಆದೇಶವಾದ ಪರಬ್ರಹ್ಮವನ್ನು ವಿವರಿಸಲಾಗಿದೆ. ಎಲ್ಲ ಧಾರ್ಮಿಕ ಕಾನೂನು,ಮತ್ತು ನಿಯಮಗಳ ಮೂಲವು ವೇದದಲ್ಲಿರುವುದು. ವೇದಗಳ ಬುನಾದಿಯೇ ಯಜ್ಞ. ಯಜ್ಞಕ್ಕೆ ಅಗ್ನಿಯು ಬಹುಮುಖ್ಯ. ಅಗ್ನಿ ಅಥವಾ ಯಜ್ಞಪುರುಷನು ಶಾಸ್ತ್ರಯೋನಿ ಅಥವಾ ಧಾರ್ಮಿಕ ಕಟ್ಟಣೆಗಳ ಮೂಲ. ಯಾರು ವೇದಗಳ ಕರ್ತವ್ಯಗಳನ್ನು ನೆರವೇರಿಸುವನೋ ಅವನೇ ಜಾತವೇದ. ವೇದಗಳು ಕರ್ಮ ಹಾಗೂ ಕರ್ಮಫಲವನ್ನು ನಿಗದಿಪಡಿಸುತ್ತವೆ. ಮನುಷ್ಯರು ಯಜ್ಞವನ್ನು ಲಾಭದಾಯಕ ಫಲಸಿದ್ಧಿಗಾಗಿ ಆಚರಿಸುವರು. 

ಈ ಫಲವನ್ನು ಧನ, ಕನಕಗಳಿಗೆ ಹೋಲಿಸಬಹುದು. ಮನುಷ್ಯನ ಕರ್ಮಗಳಿಗೆ ಫಲವನ್ನು ದೇವನು ಅಗ್ನಿಯ ಮೂಲಕ ನೀಡುವನು. ಹಾಗಾಗಿ ವೇದಗಳಲ್ಲಿ ಪ್ರಸ್ತುತ ಪಡಿಸಿರುವ ನಿಯಮಗಳ ಪ್ರಕಾರ ಜಾತವೇದನು ಕರ್ಮಫಲವನ್ನು ಕರುಣಿಸುವನು. ಹೀಗೆ ಜಾತವೇದ ಎಂಬ ಪದಕ್ಕೆ ಅನೇಕ ಅರ್ಥಗಳಿವೆ. ಈ ಜಾತವೇದಾಗ್ನಿಯನ್ನು ಅನೇಕ ಬಾರಿ ಯಜ್ಞನಾರಾಯಣನೆಂದೂ ಉಲ್ಲೆಖಿಸಲಾಗಿದೆ, ಏಕೆಂದರೆ ಧರ್ಮಗ್ರಂಥಗಳು ಯಜ್ಞದ ಅಧಿಕಾರವನ್ನು ಮಹಾವಿಷ್ಣುವಿಗೆ ನಿಯೋಜಿಸಿವೆ. ಕರ್ತೃವು ಶ್ರೀಲಕ್ಷ್ಮಿಯನ್ನು ಆಹ್ವಾನಿಸಬೇಕಾದರೆ ಅದು ಸಾಧ್ಯವಾಗುವುದು ಕೇವಲ ಆಕೆಯ ದೈವೀ ಸಂಗಾತಿಯಾದ, ಜಾತವೇದಾಗ್ನಿಯೆಂದೂ ಗುರುತಿಸುವ ನಾರಾಯಣನನ್ನು ಕೇಳಿಕೊಂಡಾಗ ಮಾತ್ರ. 
ಈ ಹಕ್ಕನ್ನು ಶ್ರುತಿಯಲ್ಲಿಯೂ -
"ಯಜ್ಞೋ ವೈ ವಿಷ್ಣುಃ" (ತೈತ್ತರೀಯ ಸಂಹಿತೆ - 1, 7, 4 ) ಎಂಬುದಾಗಿ ಸಮರ್ಥಿಸಲಾಗಿದೆ .
ಅದೇ ರೀತಿ ಯಜ್ಞಪುರುಷನನ್ನು ಭಗವಾನ್ ರುದ್ರನೆಂದೂ "ಅಗ್ನಿಸ್ತು ರುದ್ರ ಏವ " ಎಂದು ಗುರುತಿಸಲಾಗಿದೆ. ರುದ್ರನ ಪತ್ನಿ ಉಮೆಯನ್ನು ಶ್ರೀ ಎಂಬುದಾಗಿ ಆಕೆಯ ಅನುಗ್ರಹವನ್ನು ಈ ಶ್ಲೋಕದಲ್ಲಿ ಕೋರಿಕೊಳ್ಳಲಾಗಿದೆ.

ಲಕ್ಷ್ಮಿ ಎಂದರೆ ಯಾರಲ್ಲಿ ಗುರುತು ಅಥವಾ ಚಿನ್ಹೆ ಇರುವುದು. ಯಾಸ್ಕರ ನಿರುಕ್ತದಲ್ಲಿ - "ಲಕ್ಷ್ಮಿಯು ಮಾನವನು ಬಯಸುವ ಸುಖ, ಸಂಪತ್ತುಗಳ ಗುರುತು ಅಥವಾ ಚಿನ್ಹೆ". ಲಕ್ಷ್ಮಿ ಪದವು ಲಶ್ ಧಾತುವಿನಿಂದ ಅಂದರೆ "ಪಡೆಯುವುದು" ಪದದಿಂದ ಉಗಮವಾದದ್ದು. ಕವಿಗಳ ಹೃದಯದಲ್ಲಿ ಯಾವಾಗಲೂ ಲಕ್ಷ್ಮಿಯನ್ನು ಕಮಲ ಪುಷ್ಪದೊಂದಿಗೆ ಗುರುತಿಸಲಾಗುತ್ತದೆ. ಶ್ರೀ ಮಹಾಲಕ್ಶ್ಮೀ ಧ್ಯಾನ ಶ್ಲೋಕವು "ಅಮಲ ಕಮಲ ಸಂಸ್ಥಾ" ಅಂದರೆ ಶುಭ್ರ ಶ್ವೇತ ಕಮಲದಲ್ಲಿರುವ ಎಂಬುದಾಗಿ ವರ್ಣಿಸಿದೆ. ದೇವಿಯು ತನ್ನ ಹಸ್ತದಲ್ಲಿ ಕಮಲ ಪುಷ್ಪವನ್ನು ಹಿಡಿದಿರುವ ಜೊತೆಗೆ ಕಮಲ ಪುಷ್ಪದ ಮಾಲೆಯನ್ನು ಧರಿಸಿರುವಳು. ಶ್ರೀದೇವಿಯನ್ನು ಪೂಜಿಸಲು ಉಪಯೋಗಿಸುವ ಮಂಡಲವನ್ನು "ಪದ್ಮ ಮಂಡಲ" ವೆಂದು ವರ್ಣಿಸಲಾಗಿದೆ. ಇಲ್ಲಿನ ಉಲ್ಲೇಖವೆಂದರೆ ಮನುಷ್ಯನ ಶರೀರದಲ್ಲಿರುವ ಆರು ಯೋಗಚಕ್ರ. ಶ್ರೀದೇವಿಯು ಮಹಾ ಕುಂಡಲಿನಿ ಶಕ್ತಿಯಾಗಿ ಈ ಪದ್ಮ ಪುಷ್ಪಗಳಲ್ಲಿ ನೆಲಸಿರುವಳು . 

ಲಕ್ಷ್ಮೀ ಪದವನ್ನು "ಲ" ಪದದ ಮೂಲದಿಂದ ಉತ್ಪತಿಯಾಗಿದೆಯೆಂದೂ ಹಾಗೂ "ಲ" ಎಂದರೆ ಕೊಡುವುದು ಎಂಬರ್ಥ ಮತ್ತು "ಕ್ಷಿಪ್" ಎಂದರೆ "ಸ್ಫೂರ್ತಿ ನೀಡು" ಎಂದು. ಹಾಗಾಗಿ ಲಕ್ಷ್ಮಿ ಎಂದರೆ ಜ್ಞಾನ ಸಂಪತ್ತನ್ನು ನೀಡಿ ಅದರೊಂದಿಗೆ ಮಹೋನ್ನತವಾದ ಆತ್ಮದ ಬಗೆಗಿನ ಅರಿವನ್ನು ತಲುಪಲು ಸ್ಫೂರ್ತಿದಾತೆ. 
"ಮಾ ಆವಾಹ " ಎಂದರೆ "ಅವಳನ್ನು ನನ್ನ ಬಳಿ ಕಳುಹಿಸು" ಅಥವಾ "ಅವಳನ್ನು ಆಹ್ವಾನಿಸು" ಎಂದು. ಈ ಬೇಡಿಕೆಯು ಅಗ್ನಿಗೆ ಹಾಗೂ ಅವನು ಬೇರೆ ಯಾರೂ ಅಲ್ಲ, ಅವನೇ ಶ್ರೀಮನ್ನಾರಾಯಣ. ಕೇವಲ ಈ ಮಹೋನ್ನತ ದೈವ ಮಾತ್ರವೇ ನಿತ್ಯ ಜ್ಞಾನ ಸಂಪತ್ತಾದ ಶ್ರೀ ಅನ್ನು ನೀಡುವ ಶಕ್ತಿಯುಳ್ಳವನು. ಅಂದರೆ ವೈದಿಕ ಯಜ್ಞಗಳನ್ನು ಮಾಡುವುದರ ಮೂಲಕ ಕರ್ತೃವುಾ ಲಕ್ಷ್ಮೀದೇವಿಯ ಗಮನವನ್ನು ತನ್ನೆಡೆಗೆ ನೀಡುವಂತೆ ಮಾಡುವನು.
ಹಿರಣ್ಯ ಅಂದರೆ ಹೆಣ್ಣು ಜಿಂಕೆ. ಪುರಾಣದಲ್ಲಿ ಲಕ್ಷ್ಮಿಯನ್ನು ಒಮ್ಮೆ ಹೆಣ್ಣು ಜಿಂಕೆಯಾಗಿ ಭೂಮಿಗೆ ಬಂದಿರುವುದನ್ನು ವಿವರಿಸಲಾಗಿದೆ. ಜಿಂಕೆಯು ಸೌಂದರ್ಯ ಮತ್ತು ಆಕರ್ಷಣೆಗಳನ್ನೂ ಸೂಚಿಸುತ್ತದೆ. ಇವೆರಡೂ ಲಕ್ಷ್ಮಿಯ ಅಂತರ್ಗತ ಗುಣಗಳು. ಆದರೆ ಜಿಂಕೆಯು ಅತ್ಯಂತ ವೇಗದಿಂದ ಚಲಿಸುವ ಪ್ರಾಣಿ ಹಾಗೂ ಅದನ್ನು ಹಿಡಿಯಲು ಶಕ್ತಿ ಮತ್ತು ದೃಢ ನಿರ್ಧಾರವಿರಬೇಕು. ಅದೇ ರೀತಿ ಆಧ್ಯಾತ್ಮಿಕ ಸಂಪತ್ತನ್ನು ಹೊಂದಲು ಕಷ್ಟಪಡಬೇಕು ಮತ್ತು ಸಂಚಿತ ಕರ್ಮಗಳ ಪ್ರಭಾವವನ್ನು ಪರಿಹರಿಸಿಕೊಳ್ಳಬೇಕು. ಅತ್ಯಂತ ಮಹೋನ್ನತ ನಿಧಿಯಾದ ಆತ್ಮಜ್ಞಾನವನ್ನು ಪಡೆಯಲು ಸತತ ಸಾಧನೆ ಹಾಗೂ ಆತ್ಮದ ಬಗ್ಗೆ ಚಿಂತನೆಯಿಂದ ಮಾತ್ರ ಸಾಧ್ಯ. ಬ್ರಹ್ಮ ವೈವರ್ತ ಪುರಾಣದಲ್ಲಿ ಶಿವನು ದಕ್ಷಯಜ್ಞವನ್ನು ನಾಶಮಾಡಿದ ಘಟನೆಯ ಬಗೆಗೆ ವಿವರಿಸಲಾಗಿದೆ. ಶಿವನ ಭಯಂಕರವಾದ ಮಹಾಕಾಳ ರೂಪವನ್ನು ಕಂಡು ಯಜ್ಞಪುರುಷನು ಜಿಂಕೆಯ ರೂಪವನ್ನು ಧರಿಸಿ ಅಲ್ಲಿಂದ ಓಡತೊಡಗಿದನು. ಆದರೆ ರುದ್ರನು ಕ್ಷಣಾರ್ಧದಲ್ಲೆ ಜಿಂಕೆಯನ್ನು ತನ್ನ ಹಸ್ತದಲ್ಲಿ ಹಿಡಿದನು. ಯಜ್ಞಪುರುಷನೇ ನಿರ್ಗುಣ ಪರಬ್ರಹ್ಮ - ಮಹಾವಿಷ್ಣು. ಜಿಂಕೆಯ ರೂಪವನ್ನು ತಾಳಿದ ಯಜ್ಞಪುರುಷನು ವೈಷ್ಣವೀ ಶಕ್ತಿ ಅಂದರೆ ಲಕ್ಷ್ಮಿಯ ರೂಪವೆ. 
ಮಹಾಭಾರತದಲ್ಲಿ ವಿಷ್ಣುವನ್ನು ಹರಿಣ ಎಂಬುದಾಗಿ ಕರೆಯಲಾಗಿದೆ (13, 17, 119). ವಿಷ್ಣುವಿನ ಶಾಶ್ವತ ಸಂಗಾತಿಯಾದ ಲಕ್ಷ್ಮಿಯನ್ನು ಹರಿಣಿ ಎನ್ನಲಾಗಿದೆ. ಶ್ರೀದೇವಿಯನ್ನೂ ಹರಿಣಿ ಎಂದು ಕರೆಯಲಾಗುವುದು ಏಕೆಂದರೆ ಅವಳಿಗೆ ಬಂಗಾರದ ಹಳದಿ ಹೊಳಪಿರುವುದು. ಅನೇಕ ಪುರಾಣ ಹಾಗೂ ತಂತ್ರ ಶಾಸ್ತ್ರಗಳಲ್ಲಿ ದೇವಿಯನ್ನು "ಹರಿದ್ರಾಭಾ" ಎಂದು ಗುರುತಿಸಲಾಗುವುದು ಏಕೆಂದರೆ ಅವಳಿಗೆ ಅರಿಶಿನದ ಮೈಬಣ್ಣವಿರುವುದು. ಭಾಗವತ ಪುರಾಣದಲ್ಲಿ ಶ್ರೀದೇವಿಯನ್ನು ಅರಿಶಿನದ ಮೂರ್ತಿಯಾಗಿ ಮಾಡಿ ಪೂಜಿಸುವ ಹರಿದ್ರಾ ಗೌರಿ ವ್ರತದ ಬಗ್ಗೆ ವಿವರಿಸಲಾಗಿದೆ. ಈ ರೀತಿಯ ಶ್ರೀದೇವಿಯ ಅರಿಶಿನದೊಂದಿಗಿನ ಸಹಯೋಗದಿಂದಾಗಿಯೂ ಅವಳನ್ನು "ಹರಿಣಿ" ಎಂದು ಕರೆಯಲಾಗುವುದು. 
ಶ್ರೀದೇವಿಯನ್ನು "ಸುವರ್ಣ ರಜತಸ್ರಜಾಮ್" ಎಂದು ಬಣ್ಣಿಸಲಾಗಿದೆ. "ಸ್ರಜ" ಎಂದರೆ ಹಾರ ಅಥವಾ ಮಾಲೆ. ದೇವಿಯು ಬೆಳ್ಳಿ , ಬಂಗಾರದ ಮಾಲೆಯನ್ನು ಧರಿಸಿರುವಳು. ಹಿಂದೆ ಶ್ರೀದೇವಿಯು ಕಮಲ ಪುಷ್ಪದ ಮಾಲೆಯನ್ನು ಧರಿಸಿರುವಳು ಎಂದು ವರ್ಣಿಸಲಾಗಿದೆ. ಈಗ ಇದು ತದ್ವಿರುದ್ಧವನ್ನು ಸೂಚಿಸುವುದೇ ? ಇಲ್ಲ, ಏಕೆಂದರೆ ಎಳೆಯ ಕಮಲ ಪುಷ್ಪವು ನೈಸರ್ಗಿಕವಾಗಿ ಬಂಗಾರದ ಬಣ್ಣದಿಂದ ಪ್ರಕಾಶಿಸುತ್ತಿರುತ್ತದೆ ಹಾಗೂ ಶ್ವೇತ ಬಣ್ಣದ ಬೆಳ್ಳಿ ಛಾಯೆಯನ್ನು ಹೊಂದಿರುವುದು. ಹಾಗಾಗಿ ಇದೂ ಕೂಡಾ ಕಮಲ ಪುಷ್ಪದ ಮಾಲೆಯೆಂದೇ ಅರ್ಥೈಸುತ್ತದೆ. ಹಾಗಾಗಿ ದೇವಿಯು ನೈಸರ್ಕಿಗವಾದ ಹಾಗೂ ಮಾನವ ನಿರ್ಮಿತ ಆಭರಣಗಳಿಂದ ಕಂಗೊಳಿಸುವಳು. ಹೀಗೆ ಶ್ರೀದೇವಿಯು ಆದ್ಯಶಕ್ತಿ - ಚೇತನಾಚೇತನ ಸೃಷ್ಟಿಯ ಹಿಂದಿರುವ ಶಕ್ತಿ ಹಾಗೂ ಸಮಸ್ತ ವ್ಯವಹಾರಗಳನ್ನು ನಿರ್ವಹಿಸುವವಳು. ಈ ಶ್ಲೋಕದಲ್ಲಿ "ಸುವರ್ಣ " ಪದವು ಸ್ವರ ಮತ್ತು "ರಜತ" ಪದವು "ವ್ಯಂಜನ". ಹೀಗೆ ದೇವಿಯು "ಮಾತ್ರಿಕ ಮಾಲೆ" - ಅಕ್ಷರಗಳ ಮಾಲೆಯನ್ನು ಧರಿಸಿರುವಳು. ಈಗ ಸಮಸ್ತ ಸೃಷ್ಟಿಯು ಶಬ್ದವಾದದ ಪ್ರಕಾರ ಶಬ್ದದಿಂದ ಉಂಟಾಗಿರುವುದು. ಹೀಗೆ ಶ್ರೀದೇವಿಯು ಮಹಾ ಯೋನಿ ಹಾಗೂ ಇದರ ಮೂಲಕವೇ ವಿಶ್ವ ಸೃಷ್ಟಿಯಾಯಿತು. ಮಾತ್ರಿಕ ಅಕ್ಷರಗಳ ಅನೇಕ ಸಂಯೋಜನೆ ಮತ್ತು ಕ್ರಮಪಲ್ಲಟದಿಂದಾಗಿ ಉದ್ಭವಿಸಿರುವ ಸಮಸ್ತ ಮಂತ್ರಗಳ ಸಾರಗಳ ಮೂಲವೇ ದೇವಿಯು. "ಚಂದ್ರಾಮ್" - ಚಂದ್ರ ಪದವು "ಚದಿ" ಮೂಲದಿಂದ ಬಂದಿರುವುದು. ಇದರ ಅರ್ಥವೆಂದರೆ - ಶುಭ್ರವಾದ ಅಥವಾ ಆಹ್ಲಾದಕರವಾದ ಅಥವಾ ಬೆಳಗುವುದು. ಶ್ರೀದೇವಿಯು ಚಂದ್ರನಂತೆ ಪ್ರಕಾಶಿಸುವವಳಾದ್ದರಿಂದ ಅವಳನ್ನು "ಚಂದ್ರಾ"ಎಂದು ಕರೆಯಲಾಗುವುದು. ಹೇಗೆ ಚಂದ್ರನು ಎಲ್ಲರಿಗೂ ಆನಂದವನ್ನುಂಟುಮಾಡುವನೋ ಅದೇ ರೀತಿ ಶ್ರೀದೇವಿಯೂ ಕೂಡ ಯಾರು ತಮ್ಮ ಅಂತರಂಗದಲ್ಲಿ ದೇವಿಯನ್ನು ಕಾಣುವರೋ ಅವರಿಗೆ ಪರಮಾನಂದ ವನ್ನುಂಟುಮಾಡುವಳು. ಭೌತಿಕ ಚಂದ್ರನು ಭೌತಿಕ ನೇತ್ರಗಳಿಗೆ ಆನಂದವನ್ನುಂಟುಮಾಡಿದರೆ ಶ್ರೀದೇವಿಯು ಅಂತರಂಗದ ನೇತ್ರಗಳಿಗೆ ಪರಮಾನಂದವನ್ನುಂಟು ಮಾಡುವಳು.
ಶ್ರೀದೇವಿಯ ಅನೇಕ ರೂಪಗಳಲ್ಲಿ ಚಂದ್ರನು ವಿಶೇಷವಾದ ಆಭರಣ ರೂಪದಲ್ಲಿ ಕಂಗೊಳಿಸುವನು. ಶ್ರೀಚಕ್ರದ ತಿಥಿ ನಿತ್ಯ ಪೂಜೆಯು ಚಂದ್ರಕಲಾ ಮಾದರಿಯನ್ನು ಅನುಸರಿಸುವುದು ಅಥವಾ ಚಂದ್ರನ ಅಂಕಿಯ ಮಾದರಿಯನ್ನು ಅನುಸರಿಸಲಾಗುವುದು. ಅನೇಕ ಧರ್ಮ ಗ್ರಂಥಗಳಲ್ಲಿ ಶ್ರೀವಿದ್ಯ ವನ್ನು ಚಂದ್ರವಿದ್ಯ ಅಥವಾ ಚಂದ್ರಕಲಾ ವಿದ್ಯಾ ಎಂಬುದಾಗಿಯೂ ಸೂಚಿಸಲಾಗಿದೆ. ಹಾಗೂ ಶ್ರೀವಿದ್ಯಾದ ಒಂದು ರೂಪದಲ್ಲಿ ಚಂದ್ರನನ್ನು ಋಷಿಯನ್ನಾಗಿ ಪರಿಗಣಿಸಲಾಗಿದೆ. ಕಲ್ಪಸೂತ್ರದಲ್ಲಿನ ಆಯುಷ್ಕರ ಪ್ರಯೋಗದಲ್ಲಿ ಶ್ರೀದೇವಿಯನ್ನು ಕುರಿತ ಧ್ಯಾನವನ್ನು ಚಂದ್ರ ಮಂಡಲದಲ್ಲಿ ಮಾಡಬೇಕೆಂದು ಸೂಚಿಸಲಾಗಿದೆ. 
"ಹಿರಣ್" - ಅಂದರೆ ಬಂಗಾರ. ಇದರ ಬಗ್ಗೆ ನಾವು ಈಗಾಗಲೇ ಚರ್ಚಿಸಿರುವೆವು. ಈ ಮೂಲಪದಕ್ಕೆ "ಮಯತ್" ಎಂಬ ಪ್ರತ್ಯಯವನ್ನು ಸೇರಿಸಿದಾಗ ಹಿರಣ್ಮಯಿ ಪದವು ಬರುತ್ತದೆ. ಈ ಪ್ರತ್ಯಯವು ಪ್ರಾಚುರ್ಯಾರ್ಥ ಮತ್ತು ವಿಕಾರಾರ್ಥಗಳಲ್ಲಿ ಬೇರೆ ಬೇರೆ ಅರ್ಥಗಳನ್ನು ನೀಡುತ್ತದೆ. ಶ್ರೀದೇವಿಗೆ ಬಂಗಾರದ ಗುಣಗಳನ್ನು ಅನ್ವಯಿಸಿರುವುದರಿಂದ ಅವಳು ಹಿರಣ್ಯಸ್ವರೂಪಿಣಿಯೆಂಬುದಾಗಿ ನೋಡಲಾಗುವುದು. ಇದು ಪ್ರಾಚುರ್ಯಾರ್ಥ. ಹಾಗೇ ಶ್ರೀದೇವಿಯು ಬಂಗಾರದ ಬಣ್ಣದಿಂದ ಕಂಗೊಳಿಸುವುದರಿಂದ ಅವಳನ್ನು ಬಂಗಾರದಿಂದಲೇ ಸೃಷ್ಟಿಸಿರುವಂತೆ ಅಂದರೆ ಹಿರಣ್ಯವಿಗ್ರಹವಾಗಿ ನೋಡಲಾಗುವುದು. ಇದು ವಿಕಾರಾರ್ಥ. ಹಿರಣ್ಯ ಅಂದರೆ ಪವಿತ್ರವೆಂದೂ - "ಪವಿತ್ರಂ ವೈ ಹಿರಣ್ಯಂ" ಅರ್ಥೈಸಲಾಗುವುದು. ರೂಪರಹಿತಳಾದ ಮಹಾದೇವಿಯು ಬಹುರೂಪಗಳನ್ನು ಧರಿಸಿ ಭಕ್ತರ ಹೃದಯದಲ್ಲಿ ಬಂಗಾರದ ಹೊಳಪಿನಿಂದ ಬೆಳಗುವಳು. ಹೀಗಾಗಿ ಶ್ರೀದೇವಿಯನ್ನು ಹಿರಣ್ಮಯಿ ಎನ್ನಲಾಗಿದೆ. ಈ ವಿಧದ ಪರಿಣಾಮವನ್ನು ಹಿರಣ್ಯದ ಮೂಲಕ ತೋರಿಸಲಾಗಿದೆ. ಬಂಗಾರವು ತನ್ನ ರೂಪವನ್ನು ಬದಲಿಸಿ ಹೊಳಪು ಹಾಗೂ ಕಾಂತಿಯನ್ನು ಪಡೆಯಲು ಅನೇಕ ಹಂತಗಳಲ್ಲಿ ಸಂಸ್ಕರಣೆಯಾಗಬೇಕು. ಭಗವಾನ್ ಶಂಕರನನ್ನು ಹಿರಣ್ಯರೇತಸ ಎಂದೂ ಕರೆಯಲಾಗುವುದು. ಇಲ್ಲಿ ಹಿರಣ್ಯ ಎಂದರೆ ಪ್ರಕೃತಿ ಮತ್ತು ಶಿವನು ಅದರ ಮೂಲ ಬೀಜ. ಕಾಳಿಕಾ ಪುರಾಣವು ಹಿರಣ್ಯರೇತಸನ ಶಕ್ತಿಯು ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣವಾಗಿ ಇದನ್ನು ಹಿರಣ್ಮಯಿ ಎಂದು ವಿವರಿಸಿದೆ. 
ಈ ಮಂತ್ರದ ವಿನಿಯೋಗ ಅಥವಾ ಧಾರ್ಮಿಕ ಬಳಕೆಯು , ಆದಿಭೌತಿಕ, ಆದಿದೈವಿಕ ಹಾಗೂ ಆಧ್ಯಾತ್ಮಿಕ ರೂಪಗಳಲ್ಲಿ ಆಗುವುದು. ಈ ಮೂರೂ ರೂಪಗಳನ್ನು ಮೂರು ವಿನಿಯೋಗಗಳ ದೈವವಾದ ಅಗ್ನಿ ಸೂರ್ಯಚಂದ್ರರು ಮತ್ತು ಕರ್ತೃಗಳಿಗೆ ಅನ್ವಯಿಸಲಾಗಿದೆ. ಮೊದಲನೇ ವಿನಿಯೋಗದಲ್ಲಿ ಮಂತ್ರದ ಕೊನೆಯಲ್ಲಿ " ಸ್ವಾಹಾ " ಎಂಬುದನ್ನು ಸೇರಿಸುವುದು ಹಾಗೂ ಯಜ್ಞಾಗ್ನಿಗೆ ತುಪ್ಪವನ್ನು ಅರ್ಪಿಸುವುದು. ಎರಡನೇ ವಿನಿಯೋಗದಲ್ಲಿ ಶ್ರೀದೇವಿಯನ್ನು ಕುರಿತು ಚಂದ್ರಮಂಡಲ ಮಧ್ಯದಲ್ಲಿ ಕುಳಿತು ಧ್ಯಾನಿಸುವುದು. ಮೂರನೇ ವಿನಿಯೋಗದಲ್ಲಿ ದೇವಿಯನ್ನು ತನ್ನಲ್ಲೇ ಆಹ್ವಾನಿಸಿಕೊಂಡು ಪ್ರಾಣಾಗ್ನಿಹೋತ್ರದೊಂದಿಗೆ ಪೂಜಿಸುವುದು. 
ಮಹರ್ಷಿ ಅಗಸ್ತ್ಯ ಮುನಿಗಳ ವಿವರಣೆಯಂತೆ - ಮನಸ್ಸಿನಲ್ಲಿರುವ ಬುದ್ಧಿಶಕ್ತಿ, ಸೂರ್ಯನಲ್ಲಿರುವ ಬೆಳಕು, ಚಂದ್ರನಲ್ಲಿರುವ ಪ್ರಭೆಯು, ಬಂಗಾರದಲ್ಲಿರುವ ಹೊಳಪು, ಹಾಲಿನಲ್ಲಿರುವ ಬೆಣ್ಣೆ - ಇವೆಲ್ಲವೂ ಮಹಾಲಕ್ಷ್ಮಿಯ ರೂಪಗಳು.
ಮೊದಲನೇ ಮಂತ್ರದ ಧ್ಯಾನ ಶ್ಲೋಕ :- ಮೊದಲನೇ ಮಂತ್ರದ ಧ್ಯಾನ ಶ್ಲೋಕವನ್ನು ಗಜಲಕ್ಷ್ಮಿಗೆ ಅರ್ಪಿಸಲಾಗಿದೆ :
" ಕಾಂತ್ಯಾ ಕಂಚನ-ಸನ್ನಿಭಾಮ್ ಹಿಮಗಿರಿ-ಪ್ರಖೈರ್ಷ್-ಚತುರ್ಭಿರ್-ಗಜೈಃ
ಹಸ್ತೋತ್-ಕ್ಷಿಪ್ತ-ಹಿರಣ್ಮಯ-ಅಮೃತ-ಘಟ-ರಾಸಿಚ್ಯಮಾನಾಂ-ಶ್ರಿಯಮ್
ನಾನಾ-ರತ್ನ-ಸಮುಜ್ವಲಾಂ ಕರಲ-ಸತ್ಪಾದಾಮ್ ಕಿರೀಟೋಜ್ವಲಂ
ಕ್ಷೌಮ-ಅಬದ್ಧ-ನಿತಂಬ-ಬಿಂಬ-ಲಸಿತಾಂ ವಂದೇ-ಅರವಿಂದ-ಸ್ಥಿತಾಮ್ ||"
ಈ ಮಂತ್ರದ :-
ಋಷಿ - ಜಾತವೇದ ( ಅಗ್ನಿ); ಛಂದಸ್ಸು - ಅನುಷ್ಟುಪ್ ; ದೇವತೆ - ಮಹಾಲಕ್ಷ್ಮಿ; ಬೀಜ - ಶ್ರೀಂ ; ಶಕ್ತಿ - ಹ್ರೀಂ ; ಕೀಲಕ- ಕ್ಲೀಂ; ಇದರ ವಿನಿಯೋಗವು ಮೂರು ಪಟ್ಟು - ಆಧಿಭೌತಿಕ, ಆಧಿದೈವಿಕ ಮತ್ತು ಆಧ್ಯಾತ್ಮಿಕ. ಈ ಮೂರೂ ವಿನಿಯೋಗವು ಕ್ರಮವಾಗಿ ಅಗ್ನಿದೇವ , ಸೂರ್ಯ ಮತ್ತು ಚಂದ್ರ ಹಾಗೂ ಸ್ವಯಂ ಅನ್ವಯವಾಗುತ್ತದೆ.
***********
ಶ್ಲೋಕ - 2 - ಸಂಸ್ಕೃತದಲ್ಲಿ : ತಾಂ ಮ ಆವಹ ಜಾತವೇದೋ ಲಕ್ಷ್ಮೀಮನಪಗಾಮಿನೀಮ್ |
ಯಸ್ಯಾಂ ಹಿರಣ್ಯಂ ವಿಂದೇಯಂ ಗಾಮಶ್ವಂ ಪುರುಷಾನಹಮ್ ||
ಕನ್ನಡದಲ್ಲಿ : ತಾ ಜಾತವೇದ ಎನಗವಳ ಹರಕೆ ಕರಗಿ ಹೋಗದಾ ಸಿರಿಯ
ಪಡೆವೆ ಕುದುರೆ ಪಶು ಸೇವಕರನು ಅವಳಿಂದ ಹೊನ್ನ ಪಡೆದೇನು
ತಾತ್ಪರ್ಯ: ಓ ಜಾತವೇದಾಗ್ನಿಯೇ ! ಯಾವಾಗಲೂ ಬಿಟ್ಟಗಲದೆ ಅಂದರೆ ನನ್ನ ಆರಾಧನೆಯನ್ನು ಸ್ವೀಕರಿಸುತ್ತಾ, ಸುವರ್ಣವನ್ನು, ಹಸು, ಕ್ಷೇತ್ರ, ಕುದುರೆ, ಸ್ನೇಹಿತರು, ಹಾಗೂ ಸೇವಕರನ್ನು ನನಗೆ ಅನುಗ್ರಹಿಸುತ್ತಾ ಇರುವಂತೆ ನನ್ನಲ್ಲಿಗೆ ಲಕ್ಷ್ಮಿಯನ್ನು ಬರಮಾಡು.

ವ್ಯಾಖ್ಯಾನ :

"ಜಾತವೇದ, ತಾಂ ಲಕ್ಷ್ಮೀಮ್ ಮೇ ಆವಃ ", ಈ ಪದಗಳು ಮೊದಲನೇ ಶ್ಲೋಕದಲ್ಲಿರುವಂತೇ ಇವೆ. ಆದರೆ, ಇಲ್ಲಿ ಶ್ರೀದೇವಿಗೆ "ಅನಪಗಾಮಿನಿ" ಎಂಬ ಹೊಸ ವಿಶೇಷಣವನ್ನು ನೀಡಲಾಗಿದೆ. ಇದರ ಅರ್ಥ ಲಕ್ಷ್ಮಿಯು ಬೇರೆಲ್ಲಿಗೂ ಹೋಗದೆ ಸಾಧಕನನ್ನು ಬಿಟ್ಟುಹೋಗದೆ ಅವನಲ್ಲೇ ಸ್ಥಿರವಾಗಿ ನೆಲೆಸುವಳು ಎಂದು. ಬಂಗಾರವು ಸ್ಥಾವರ ಸಂಪತ್ತಾದರೆ ಹಸು, ಅಶ್ವಗಳು ಮತ್ತು ಮನುಷ್ಯನು ಜಂಗಮ ಸಂಪತ್ತು. ಶ್ರೀದೇವಿಯ ಅನುಗ್ರಹದಿಂದ ಸಾಧಕನು ಇವೆರಡೂ ಸಂಪತ್ತುಗಳನ್ನು ಪಡೆಯುವನು. ಈ ಮಂತ್ರದಲ್ಲಿ ಬರುವ "ಪುರುಷಾನ್" ಎಂದರೆ ಮಕ್ಕಳು, ಸ್ನೇಹಿತರು, ಸೇವಕರು ಹಾಗೂ ಸಂಸಾರ (ಪುತ್ರಮಿತ್ರದಾಸಭೂತಾನ್ - ಸಾಯಣ ಭಾಷ್ಯ). ರಾಜ್ಯಲಕ್ಷ್ಮಿ ಹೃದಯದಲ್ಲಿ ಶ್ರೀದೇವಿಯ ಅಂಗರಕ್ಷಕರು ಅಥವಾ ಹಿಂಬಾಲಕರೆಂದರೆ ಹಸುಗಳು, ಅಶ್ವಗಳು ಮತ್ತು ಆನೆಗಳು. ಹೀಗಾಗಿ ಸಾಧಕನೆಡೆಗ ಆಗಮಿಸಿದ ಲಕ್ಷ್ಮಿಯೊಡನೆ ಅವಳ ಹಿಂಬಾಲಕರೂ ಬಂದು ಸಾಧಕನಲ್ಲಿ ಶಾಶ್ವತವಾಗಿ ಹಾಗೂ ಸ್ಥಿರವಾಗಿ ನೆಲೆಸುವರು. ಹಸುವು ಸತ್ವಗುಣವನ್ನು ಪ್ರತಿನಿಧಿಸಿದರೆ ರಜೋಗುಣವನ್ನು ಅಶ್ವಗಳು ಹಾಗೂ ತಮೋಗುಣವನ್ನು ಆನೆಗಳು ಇಲ್ಲಿ ಪ್ರತಿನಿಧಿಸುತ್ತವೆ. ಈ ಮೂರೂಗುಣಗಳಿಂದ ಸೇವಿಸಲ್ಪಟ್ಟ ಶ್ರೀದೇವಿಯಾದರೋ ಇವೆಲ್ಲಕ್ಕೂ ಅತೀತಳು ಹಾಗೂ ಅವಳು ತ್ರಿಗುಣಾತೀತಳು. ಸಾಧಕನ ಸಾಧನೆಯ ಮಟ್ಟವನ್ನವಲಂಬಿಸಿ ಅವನಿಗೆ ಶ್ರೀದೇವಿಯು ಮೂರರೊಲ್ಲೊಂದು ರೂಪದಲ್ಲಿ ಕಾಣಿಸುವಳು (ಆನೆ ಅಥವಾ ಕುದುರೆ ಇಲ್ಲವೇ ಹಸುವಿನ ರೂಪ). ಈ ಮಂತ್ರದಲ್ಲೂ ಜಾತವೇದನೇ ಋಷಿಯು ಹಾಗೂ ಮಂತ್ರದ ಛಂದಸ್ಸು ಅನುಷ್ಟುಪ್ ಮತ್ತು ಅಧಿದೇವತೆಯು ರಾಜ್ಯಲಕ್ಷ್ಮಿ.
ಎರಡನೇ ಮಂತ್ರದ ಧ್ಯಾನ ಶ್ಲೋಕ : ಚತುರಂಗ ಬಲೋಪೇತಂ ಧನ ಧಾನ್ಯ ಸುಖೇಶ್ವರೀಂ
ಅಶ್ವಾರೂಢ ಮಹಾವಂದೇ ರಾಜ್ಯಲಕ್ಷ್ಮೀಂ ಹಿರಣ್ಮಯಿಮ್
ಎರಡನೇ ಮಂತ್ರದ ಧ್ಯಾನ ಶ್ಲೋಕವನ್ನು ರಾಜ್ಯಲಕ್ಷ್ಮಿಗೆ ಅರ್ಪಿಸಲಾಗಿದೆ. ಬಂಗಾರ ವರ್ಣದ ರಾಜ್ಯಲಕ್ಷ್ಮಿಯು ಕುದುರೆಯ ಮೇಲೆ ಸವಾರಿ ಮಾಡುತ್ತಾ ಮತ್ತು ಚದುರಂಗ ದಳವನ್ನು ಮುನ್ನಡೆಸುತ್ತಾ ( ಪದಾತಿ ಸೈನ್ಯ , ಅಶ್ವದಳ , ಗಜಪಡೆ ಮತ್ತು ರಥಗಳು ), ಹೇರಳವಾಗಿ ಕಾಳುಗಳನ್ನು (ಪೌಷ್ಟಿಕ ಆಹಾರ), ಸಂಪತ್ತು ಮತ್ತು ಸಂತೋಷವನ್ನು ಕರುಣಿಸುವಳು.
ಎರಡನೇ ಮಂತ್ರದ :- ಋಷಿ - ಜಾತವೇದ ( ಅಗ್ನಿ); ಛಂದಸ್ಸು - ಅನುಷ್ಟುಪ್ ; ದೇವತೆ - ರಾಜ್ಯಲಕ್ಷ್ಮಿ; ಬೀಜ - ಹ್ರೀಂ ; ಶಕ್ತಿ - ಶ್ರೀಂ ; ಕೀಲಕ- ಕ್ಲೀಂ ; ಇದರ ವಿನಿಯೋಗವು ಸಕಲ-ಸಂಪತ್-ಸಿದ್ಧಿ.
*******
ಶ್ಲೋಕ - 3 - ಸಂಸ್ಕೃತದಲ್ಲಿ : ಅಶ್ವಪೂರ್ವಾಂ ರಥಮಧ್ಯಾಂ ಹಸ್ತಿನಾದ-ಪ್ರಬೋಧಿನೀಮ್ |
ಶ್ರಿಯಂ ದೇವೀಮುಪಹ್ವಯೇ ಶ್ರೀರ್ಮಾ ದೇವೀರ್ಜುಷತಾಮ್ ||

ಕನ್ನಡದಲ್ಲಿ : ಮುಂದಿರುವ ಕುದುರೆ ಮಧ್ಯೆ ರಥ ಘೀಳಿಡುವಾನೆಗಳ ಮೋದ
ಶ್ರೀದೇವಿಯನು ಕರೆವೆ ಹರಸಲಿ ಮಾತೆ ಸಿರಿ ಎನ್ನನೊಲುಮೆಯಿಂದ

ತಾತ್ಪರ್ಯ : ಕುದುರೆಗಳು ಪುರೋಗಾಮಿಗಳಾಗಿರುವ, ಮುಂದೆ ಕುದುರೆಗಳು, ಮಧ್ಯದಲ್ಲಿರುವ ರಥಗಳು, ಗಜಗಳ ಗರ್ಜನೆಯನ್ನು ಪ್ರಕರ್ಷವಾಗಿ ಜ್ಞಾಪಿಸುವ , ಪ್ರಕಾಶಮಾನಳಾದ ದೇವಿಯಾದ , ಸೇನಾರೂಪಳಾದ ಆಶ್ರಯಣೀಯಳಾದ ಲಕ್ಷ್ಮೀದೇವಿಯನ್ನು ಬಳಿಗೆ ಆಹ್ವಾನಿಸುತ್ತೇನೆ. ಆ ಶ್ರೀದೇವಿಯು ನನ್ನನ್ನು ಪ್ರೀತಿಯಿಂದ ಆಶೀರ್ವದಿಸಿ ನನ್ನನ್ನು ಸಂಮೃದ್ಧನನ್ನಾಗಿ ಮಾಡಲಿ. ಈ ಮಂತ್ರಸಿದ್ಧಿಯಿಂದ ಲಕ್ಷ್ಮೀ ಸಂಪತ್ತಿಯು ಉಂಟಾಗುತ್ತದೆ.

ವ್ಯಾಖ್ಯಾನ :

ಈ ಮಂತ್ರವು ಸಾಧಕನಿಗೆ ಆನಂದಿಂದ ಆಗಮಿಸುವ ಶ್ರೀದೇವಿಯ ಚಿತ್ರಣವನ್ನು ನೀಡುತ್ತದೆ. ಅವಳ ಮೆರವಣಿಗೆಯಲ್ಲಿ ಸಾಲು ಸಾಲು ಅಶ್ವಗಳು ನೇತೃತ್ವ ವಹಿಸುತ್ತವೆ. ಇದರನಂತರ ದೇವಿಯ ಸುಂದರ ರಥವು ಬರುತ್ತದೆ. ದೇವಿಯ ಹಿಂಭಾಗದಲ್ಲಿ ತುತ್ತೂರಿಯ ಶಬ್ದದಂತೇ ಜೋರಾಗಿ ಘೀಳಿಡುತ್ತಿರುವ ಆನೆಗಳ ಹಿಂಡನ್ನೇ ವೀಕ್ಷಿಸಬಹುದು. ಈ ರೀತಿಯಾಗಿ ಶ್ರೀದೇವಿಯು ಅಶ್ವಗಳಿಂದ ಎಳೆಯಲ್ಪಟ್ಟ ರಥದಲ್ಲಿ ಆಗಮಿಸುತ್ತಿರುವಳು. ಹಿಂದಿನ ಎರಡು ಶ್ಲೋಕಗಳಲ್ಲಿ ಸಾಧಕನು ಜಾತವೇದನನ್ನು ಶ್ರೀದೇವಿಯನ್ನು ಕರೆತರುವಂತೆ ಪ್ರಾರ್ಥಿಸಿದ್ದನು. ಅವನ ಪ್ರಾರ್ಥನೆಯ ಫಲವಾಗಿ ಈ ಮಂತ್ರದಲ್ಲಿ ವಿವರಿಸಿರುವಂತೆ ಲಕ್ಷ್ಮಿಯನ್ನು ಸಾಧಕನ ಬಳಿಗೆ ಕರೆತರಲಾಗಿದೆ. ಶ್ರೀದೇವಿಯು ಬರುತ್ತಿರುವುದನ್ನು ತಿಳಿದ ಸಾಧಕನು ಅವಳನ್ನು ತನ್ನ ಬಳಿಗೇ ನೇರವಾಗಿ ಬರುವಂತೆ ಪ್ರಾರ್ಥಿಸುವನು. "ಉಪಹ್ವಯೇ" ಪದದ ಅರ್ಥವೆಂದರೆ ಶ್ರೀದೇವಿಯನ್ನು ತನ್ನ ಬಳಿಗೆ ಬರುವಂತೆ ಆಹ್ವಾನಿಸುವುದು. 



ಮುಂದುವರೆದು "ದೇವೀ ಮಾ ಜುಷತಾಮ್" ಅಂದರೆ "ಮಹಾನ್ ದೇವತೆಯನ್ನು ತನ್ನ ಬಳಿಗೆ ಅಥವಾ ಹತ್ತಿರಕ್ಕೆ ಬರಲಿ" ಎಂಬುದಾಗಿ. ಇಲ್ಲಿ "ಮಾ " ಪದವನ್ನು ಬರೀ "ಮಾಮ್" ಪದದ ಛಂದಸ್ಸಿಗೆ ಹೊಂದಿಕೆಯಾಗಿರುವಂತೆ ಸೇರಿಸಿರುವ ಅಕ್ಷರವಾಗಿ ಕಾಣದೇ ಅದನ್ನು "ನನ್ನ" ಎಂಬುದಾಗಿ ಭಾವಿಸಬೇಕು. ಇದನ್ನು ಮಾತೆ ಎಂದೂ ಅರ್ಥೈಸಬಹುದು. ಶ್ರೀದೇವಿಯು ಇನ್ನು ಮುಂದೆ ಸಾಧಕನ ಬಳಿಯೇ ಶಾಶ್ವತವಾಗಿ ನೆಲಸುವುದರಿಂದ ಸಾಧಕನು ದೇವಿಯೊಂದಿಗೆ ಯಾವುದಾದರೂ ಒಂದು ರೀತಿಯ ತನ್ನೊಂದಿಗಿನ ಸಂಬಂಧವನ್ನು ಕಂಡುಕೊಳ್ಳಬೇಕು. ದೇವಿಯು ಸಮಸ್ತ ಸೃಷ್ಟಿಗೆ ಮೂಲವಾದ್ದರಿಂದ ಆಕೆಯನ್ನು ಮಾತೆಯಾಗಿ ಗುರುತಿಸುವುದು ಸಹಜವೇ ಆಗಿದೆ. ಶ್ರೀದೇವಿಯ ಮೆರವಣಿಗೆಯಲ್ಲಿರುವ ಅಶ್ವಗಳು ಮನುಷ್ಯನ ಇಂದ್ರಿಯಗಳನ್ನು ಪ್ರತಿನಿಧಿಸುತ್ತವೆ (ಇಂದ್ರಿಯಾಣಿ ಹಯಾನಿ ಆಹುಃ). ರಥವು ಸಾಧಕನ ಶರೀರ (ಶರೀರಂ ರಥಮೇವ ತು). ರಥದಲ್ಲಿ ಉಪಸ್ಥಿತಳಾಗಿರುವ ಶ್ರೀದೇವಿಗೆ ರಥವು ಅವಳ ವಾಸಸ್ಥಳವಾಗಿ ಅದು ಸಾಧಕನ ಹೃದಯ ಮಧ್ಯಬಾಗವಾಗಿರುವುದು ಅಥವಾ ಜೀವಿಯ ಮಧ್ಯಭಾಗ. ಹೀಗಾಗಿ ಅವಳನ್ನು ಸಾಧಕನ ಸ್ವಯಂ ಆಗಿ ಗುರುತಿಸಲ್ಪಡುವಳು. ಯೋಗದ ದೃಷ್ಟಿಯಿಂದ ನೋಡಿದಲ್ಲಿ ಆನೆಗಳ ಘೀಳಿನ ಶಬ್ದವು ಕುಂಡಲಿನಿಯ ಜಾಗೃತಿಯನ್ನು ತೋರಿಸುತ್ತದೆ. ಅನೇಕ ಯೋಗಿಗಳ ಕುಂಡಲಿನೀ ಶಕ್ತಿಯು ಜಾಗೃತವಾದಾಗ ಈ ರೀತಿಯ ಶಬ್ದವನ್ನು ಅನುಭವಿಸುತ್ತಾರೆ. 

" ಶ್ರೀ " ಅಂದರೆ "ಶ್ರಯನ್ನೀಯಾ"- ಯಾರೊಬ್ಬರಲ್ಲಿ ಆಶ್ರಯವನ್ನು ಪಡೆಯುವುದು. "ದೇವಿ" ಪದವು" ದಿವ್ " ಧಾತುವಿನಿಂದ ಉತ್ಪತ್ತಿಯಾಗಿದೆ - ಅಂದರೆ "ಪ್ರಕಾಶಿಸು" ಅಥವಾ " ಆಡಿಸು ". ದೇವಿಯ ಪ್ರಭೆಯು ಸಾಧಕನಲ್ಲಿರುವುದರಿಂದಾಗಿ ಅವನಿಗೆ ಸರ್ವಸ್ವವೂ ಅರಿವಾಗುವುದು. ಮೂಲಭೂತವಾದ " ಅಹಂ " ಮತ್ತು " ಇದಂ " ಗಳ ಬಗ್ಗೆ ಅರಿವುಂಟಾಗುವುದೂ ಕೂಡಾ ಶ್ರೀದೇವಿಯ ವಿಮರ್ಶಾಶಕ್ತಿಯ ಮೂಲಕದ ಇರವು. ಬ್ರಹ್ಮ ಸೂತ್ರದಲ್ಲಿ ವಿವರಿಸಿರುವಂತೆ ಸಮಸ್ತ ವಿಶ್ವವೂ ಅವಳ ನಾಟಕ ರಂಗ ಅಥವಾ ಲೀಲೆ ಮಾತ್ರ (ಲೋಕವತ್ತು ಲೀಲಾ ಕೈವಲ್ಯಮ್ ). ಹಾಗಾಗಿ ಈಕೆಯನ್ನು ದೇವಿ ಎಂದು ಕರೆಯಲಾಗಿದೆ. ಈಕೆಯನ್ನು ಶ್ರೀದೇವಿಯೆಂದು ಕರೆಯುವುದರ ಕಾರಣವೆಂದರೆ ಅವಳು ವಿಷ್ಣುವಿನೊಡಗೂಡಿ ವಿಶ್ವದ ಸಮಸ್ತ ಆಗುಹೋಗುಗಳಲ್ಲಿ ಮುಳುಗಿರುವಳು, ಹಾಗೂ ಶ್ರೀ ಅಂದರೆ ಪಾವಿತ್ರ್ಯತೆಯೆಂಬ ಅರ್ಥ ಬರುವ ಪದವನ್ನು ಪ್ರತಿನಿಧಿಸುವಳು. ಹೀಗಾಗಿ ಶ್ರೀದೇವಿಯು ಮೂಲಪ್ರಕೃತಿ ಅಥವಾ ಮೂಲಭೂತ ಪ್ರಕೃತಿ, ಪುರುಷನೊಂದಿಗೆ ಅವಿಭಾಜ್ಯವಾಗಿರುವವಳು. 
ಮೂರನೇ ಮಂತ್ರದ ಧ್ಯಾನ ಶ್ಲೋಕ :
ಈ ಧ್ಯಾನಶ್ಲೋಕವನ್ನು ಪರಮ ಪವಿತ್ರಳಾದ ಸೌಭಾಗ್ಯ ಲಕ್ಷ್ಮಿಗೆ ಅರ್ಪಿಸಲಾಗಿದೆ.
" ತದಿದ್ವರ್ಣಪೂರ್ಣಾಂ ಶಶಿಲಾಪನತಾಟಂಕಯುಗಳಾಂ
ದರಸ್ಮೇರಾಧೀರಾಂ ಕರಕಲಿತ ಪದ್ಮಾಮ್ ದ್ವಿನಯನಾಮ್
ಲಸದ್ಗ್ರಿವಾಂ ಕ್ಷೌಮಾಂಶುಕ ವಿಶದ ನಾಭೀ ಸರಸಿಜಾಂ
ಭಜಾಮಿ ತ್ವಾಂ ದೇವೀಂ ಪ್ರಣತಜನಸೌಭಾಗ್ಯ
ಜನನೀಮ್ " ||
ಈ ಮಂತ್ರದ :-
ಋಷಿ - ಆನಂದ - ಲಕ್ಷ್ಮಿಯ ಮಾನಸ ಪುತ್ರ ; ಛಂದಸ್ಸು - ಅನುಷ್ಟುಪ್ ; ದೇವತೆ - ಶ್ರೀಲಕ್ಷ್ಮಿ; ಬೀಜ - ಉ; ಶಕ್ತಿ - ತ ; ಕೀಲಕ- ಶ್ರೀಂ ; ಇದರ ವಿನಿಯೋಗವು ಶತ್ರು ಜಯಂ, ರಾಜ್ಯ-ಪ್ರಾಪ್ತಿ.
********
ಶ್ಲೋಕ - 4 - ಸಂಸ್ಕೃತದಲ್ಲಿ : ಕಾಂ ಸೋಸ್ಮಿತಾಂ ಹಿರಣ್ಯಪ್ರಾಕಾರಾಮಾರ್ದ್ರಾಂ ಜ್ವಲಂತೀಂ ತೃಪ್ತಾಂ ತರ್ಪಯಂತೀಮ್ |
ಪದ್ಮೇ ಸ್ಥಿತಾಂ ಪದ್ಮವರ್ಣಾಂ ತಾಮಿಹೋಪಹ್ವಯೇ ಶ್ರಿಯಮ್ ||

ಕನ್ನಡದಲ್ಲಿ : ಮಿಂಚುನಗೆ ಮಿಸುನಿಯ ಕೋಟೆಯಲಿ ಬೆಳಗುತ ತಣಿದು ತಂಪೆರೆವ ದೇವಿ
ತಾವರೆಯೆ ನೆಲೆದಾಣ ತಾವರೆಯ ಬಣ್ಣವಹ ಸಿರಿಯೆ ಕರೆಯುವೆನು ಬಾಗಿ

ತಾತ್ಪರ್ಯ :
ಅನಿರ್ವಚನೀಯಳೂ ಪರಬ್ರಹ್ಮ ಸ್ವರೂಪಳೂ ಸ್ವಲ್ಪವಾದ ಮಂದಹಾಸಯುಕ್ತಳೂ ಸುವರ್ಣದ ಆಕಾರವುಳ್ಳವಳೂ ಆರ್ದ್ರಾನಕ್ಷತ್ರೋತ್ಪನ್ನಳೂ ಶ್ರೀ ರುದ್ರ ರೂಪಳೂ ಪ್ರಕಾಶಮಾನಳೂ ಪೂರ್ಣಕಾಮಳೂ ಭಕ್ತರ ಮನೋಭಿಲಾಷೆಯನ್ನು ಈಡೇರಿಸಿ ತೃಪ್ತಿಪಡಿಸುವವಳೂ ಕಮಲದಲ್ಲಿ ಆಸೀನಳಾದವಳೂ ಕಮಲದ ಕಾಂತಿಯನ್ನುಳ್ಳವಳೂ ಆದ ಆ ಶ್ರೀದೇವಿಯನ್ನು ಈ ನನ್ನ ಮನೆಯೊಳಗೆ ಆಹ್ವಾನಿಸುತ್ತೇನೆ. ಈ ಮಂತ್ರಸಿದ್ಧಿಯಿಂದ ಸಾರಸ್ವತ ಸಂಪತ್ತು ಸಿದ್ಧಿಸುತ್ತದೆ.

ವ್ಯಾಖ್ಯಾನ :
" ಕಾಂ " ಎಂಬುದು ಪರಬ್ರಹ್ಮನ ನಾಮಧೇಯ ( ಕ ಇತಿ ಬ್ರಹ್ಮಣೋ ನಾಮ ). ಶ್ರೀದೇವಿಯ ಪರಬ್ರಹ್ಮನೊಂದಿಗಿನ ಅಭಿನ್ನತೆಯ ಬಗೆಗೆ ಹಿಂದಿನ ಮಂತ್ರಗಳಲ್ಲಿ ಸುಳಿವು ನೀಡಿ ಅದರ ಖಚಿತತೆಯನ್ನು ಈ ಮಂತ್ರದಲ್ಲಿ ಸ್ಪಷ್ಟೀಕರಿಸಲಾಗಿದೆ. ದೇವಿಯನ್ನು ಪರಬ್ರಹ್ಮನೆಂದು ಕರೆದು ಅವಳು ವಾಕ್ ಮನಸ್ಸುಗಳಿಗೆ ಅತೀತಳೆಂಬುದಾಗಿ ವಿವರಿಸಲಾಗಿದೆ (ವಾಂಗ್ಮನಸೋ ರಾಗೋಚರಾ). ಅವಳನ್ನು "ದುರ್ನಿರೂಪ ಸ್ವರೂಪ"ವುಳ್ಳವಳೆಂಬುದಾಗಿ ವಿವರಿಸಲಾಗಿದೆ. ಅಂದರೆ ಅವಳನ್ನು ಸಂಪೂರ್ಣವಾಗಿ ಅರಿಯುವುದು ಅಸಾಧ್ಯ ಅಥವಾ ಅವಳ ನೈಜರೂಪವನ್ನು ಮಾತುಗಳಿಂದ ಅಥವಾ ಪದಗಳಿಂದ ಬಣ್ಣಿಸಲಸಾಧ್ಯ. ಇಲ್ಲಿ ಪವಿತ್ರವಾದ ಶ್ರೀವಿದ್ಯಾ ಮಹಾಮಂತ್ರದ ಉಚ್ಚಾರಾಂಶವನ್ನು ಬಿಡಿಸಲಾಗಿದೆ.
"ಹಿರಣ್ಯ ಪ್ರಾಕಾರಾಮ್ " - ಪ್ರಾಕಾರಾ ಪದವು ಪ್ರಕಾರ ಪದದ ಚಾಂದಸ ಪ್ರಯೋಗ, ಅಂದರೆ ವಿಧ ಅಥವಾ ವೈವಿಧ್ಯ ಎಂಬುದಾಗಿ. ಹಾಗಾಗಿ ಇದು ವಿಧ, ಬಣ್ಣ, ರೂಪ ಅಥವಾ ಆಕಾರವನ್ನು ಸೂಚಿಸುತ್ತದೆ. ಈ ರೀತಿಯಾಗಿ ಶ್ರೀದೇವಿಯು ಸುಂದರ ರೂಪ ಅಥವಾ ಹಿರಣ್ಯ ಅಥವಾ ಬಂಗಾರದ ಬಣ್ಣವನ್ನು ಹೋಲುವ ಮೈಬಣ್ಣವುಳ್ಳವಳು. ಪ್ರಾಕಾರ ಅಂದರೆ ಗೋಡೆ, ಕೋಟೆ ಅಥವಾ ಆವರಣವೆಂದೂ ಅರ್ಥೈಸಲಾಗುವುದು. ಇದು ಅನರ್ಘ್ಯ ವಸ್ತುವನ್ನು ಕಾಪಾಡುವ ಸಲುವಾಗಿ ಅದರ ಸುತ್ತ ನಿರ್ಮಿಸಿರುವ ರಕ್ಷಣಾ ಹೊದಿಕೆ. ಅಂದರೆ ಶ್ರೀದೇವಿಯು ಬಂಗಾರದ ಕೋಟೆಯೊಳಗೆ ಇರುವಳು. ದೇವಿಯ ಭಕ್ತನು ಬಂಗಾರದ ಕೋಟೆಯನ್ನು ಪ್ರತಿನಿಧಿಸುವ ಇಂದ್ರಿಯ ತೃಷ್ಣೆ, ದುರಾಸೆ ಮತ್ತು ಪ್ರಲೋಭನೆಗಳ ಮೂಲವನ್ನು ನಿವಾರಿಸುವ ಮೂಲಕ ಅವುಗಳ ಸೀಮೆಯನ್ನು ದಾಟುವವರೆಗೂ ಶ್ರೀದೇವಿಯನ್ನು ಸಾಕ್ಷಾತ್ಕರಿಸಿಕೊಳ್ಳಲಾಗುವುದಿಲ್ಲ. ಈಶಾವಾಸ್ಯೋಪನಿಷತ್ತಿನ ಪ್ರಕಾರ ಪರಬ್ರಹ್ಮನು ಬಂಗಾರದ ಕೋಟೆಯಿಂದಾವೃತವಾಗಿರುವನು (ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಮ್ ಮುಖಮ್ - ಈಶಾವಾಸ್ಯೋಪನಿಷತ್ತು).
" ಆರ್ದ್ರಾ " ಅಂದರೆ ಒದ್ದೆಯಾದ; ಇದು ಮತ್ತಷ್ಟು ವಿವರಿಸುವುದೇನೆಂದರೆ ನೀರಿನೊಂದಿಗಿನ ಸಂಪರ್ಕದಿಂದುಂಟಾಗುವ ಗುಣಗಳು ಮತ್ತು ತಂಪಾದ 
ಎಂಬುದಾಗಿ. ಇಷ್ಟಲ್ಲದೇ ಈ ಪದವನ್ನು ಅನುಕಂಪ ಎಂಬ ಅರ್ಥದಲ್ಲೂ ಉಪಯೋಗಿಸಲಾಗುವುದು. ಹೀಗೆ ದೇವಿಯನ್ನು ಆರ್ದ್ರಾ ಎಂದು ಕರೆದು ಆಕೆಯು ಅಪಾರ ಕರುಣೆಯುಳ್ಳವಳು ಅಥವಾ ಕರುಣಾಮಯಿ ಎಂದು ವರ್ಣಿಸಬಹುದು. ಆಚಾರ್ಯರು ತಮ್ಮ ಅನೇಕೆ ಸ್ತೋತ್ರಗಳಲ್ಲಿ ಶ್ರೀದೇವಿಯನ್ನು ಕರುಣೆಯೇ ಮೂರ್ತೀಕೃತಳಾದವಳು ಎಂದು ವರ್ಣಿಸಿರುವರು. ಮತ್ತೊಂದು ವಿವರಣೆಯೆಂದರೆ ಕ್ಷೀರಸಾಗರದಿಂದ ಜನ್ಮಿಸಿದವಳು ಎಂದು. ಆರ್ದ್ರಾ ಅಥವಾ ಆರಿದ್ರಾ ಎಂಬುದು ನಕ್ಷತ್ರವನ್ನೂ ಸೂಚಿಸುತ್ತದೆ ಹಾಗೂ ಇದು ಶ್ರೀಲಕ್ಷ್ಮಿಯ ಜನ್ಮನಕ್ಷತ್ರ ಮತ್ತು ಶಿವನಿಗೂ ಮೆಚ್ಚಿನ ನಕ್ಷತ್ರ. ಒದ್ದೆಯಾದ ಎಂಬ ಸಂದರ್ಭವು ರುದ್ರಯಮಳದಲ್ಲಿ ವಿವರಿಸಿರುವಂತೆ ಕುಂಡಲಿನೀ ಶಕ್ತಿಯು ಕುಲಾಮೃತದಲ್ಲಿ (ಅಮೃತದಲ್ಲಿ) ನೆನೆದ ಸ್ಥಿತಿಯನ್ನು ಸೂಚಿಸುತ್ತದೆ ( ಅಮೃತಾರ್ದ್ರಾಮ್ ಕುಲೀನಾಮ್ ತಾಮ್ ಕುಂಡಲೀಮ್ ಸಮುಪಾಸ್ಮಹೇ). 
" ಜ್ವಲಂತೀಂ" ಪದವನ್ನು ಶ್ರೀದೇವಿಯು ಬೆಂಕಿಯಂತೆ ಪ್ರಜ್ವಲಿಸುತ್ತಿರುವಳು ಎಂಬುದನ್ನು ವಿವರಿಸುತ್ತದೆ. ದೇವಿಯು ಎಲ್ಲ ಜೀವಿಗಳಲ್ಲೂ ಮೂಲಪ್ರಕೃತಿಯಾಗಿ ಬೆಳಗುತ್ತಿರುವಳು. ಹೇಗೆ ಹೊರಗಡೆ ಸೂರ್ಯನ ಪ್ರಖರವಾದ ಬೆಳಕನ್ನು ನೋಡಬಹುದೋ ಅದೇ ರೀತಿ ಪ್ರಾಮಾಣಿಕ ಸಾಧಕನು ದೇವಿಯನ್ನು ತನ್ನ ಅಂತರಂಗದಲ್ಲಿ ವೀಕ್ಷಿಸುವನು. ದೇವಿಯ ಪ್ರಕಾಶವು ಬೇರೆಲ್ಲ ವಸ್ತುಗಳ ವಸ್ತುಗಳ ಇರುವಿಕೆ ಹಾಗೂ ನೋಡಲು ಸಾಧ್ಯಮಾಡುತ್ತದೆ ( ತಸ್ಯ ಭಾಸಾ ಸರ್ವಮಿದಂ ವಿಭಾತಿ - ಕಠೋಪನಿಷತ್).
ಅಲ್ಲದೇ ಶ್ರೀದೇವಿಯು ತೃಪ್ತಳು ಹಾಗಾಗಿ ಅವಳು ಬೇರೆಲ್ಲರನ್ನೂ ತೃಪ್ತಿಪಡಿಸುವಳು (ತರ್ಪಯಂತೀಂ). ಹೀಗೆ ಶ್ರೀದೇವಿಯು ಪರಬ್ರಹ್ಮ ಮತ್ತು ಅವಳನ್ನು ನಿತ್ಯತೃಪ್ತೆ ಎಂಬುದಾಗಿ ವರ್ಣಿಸಲಾಗಿದೆ. ಶ್ರೀದೇವಿಯು ಎಲ್ಲರಿಗೂ ಅವರಿಚ್ಛಿಸುವ ಎಲ್ಲವನ್ನೂ ಕರುಣಿಸಿ ಕೊನೆಗೆ ಅವರಿಗೆ ಮಹೋನ್ನತ ನಿಧಿಯಾದ ಆತ್ಮಜ್ಞಾನವನ್ನು ನೀಡಿ ಮುಕ್ತಿಯನ್ನು ಕರುಣಿಸುವಳು. ಅನೇಕ ಚಿತ್ರಗಳಲ್ಲಿ ಶ್ರೀದೇವಿಯನ್ನು ಪದ್ಮಪುಷ್ಪದ ಮೇಲೆ ಆಸೀನಳಾಗಿರುವಂತೆ ತೋರಿಸುವರು. ಅವಳ ಶುದ್ಧ ಸ್ಫಟಿಕ ರೂಪವೂ ಪ್ರತಿಫಲನದಿಂದ ಕಮಲ ಪುಷ್ಪದ ಬಣ್ಣದಂತಿರುವುದು. ಅವಳು ಎಲ್ಲ ಗುಣರಹಿತ ಸನಾತನ ಪರಬ್ರಹ್ಮ. ಆದರೆ ನಿರ್ಗುಣ ಬ್ರಹ್ಮತತ್ತ್ವವನ್ನು ಅರಿಯಲಸಾಧ್ಯವಾದ ಸಾಮಾನ್ಯ ಭಕ್ತರಿಗಾಗಿ ದೇವಿಯು ಸಗುಣ ರೂಪದ ಮುಖಾಂತರ ಅನೇಕ ರೂಪವನ್ನು ತಾಳುವಳು. ಕಮಲ ಪುಷ್ಪವು ಪರಿಶುದ್ಧತೆ, ಸಮೃದ್ಧಿ ಹಾಗೂ ಸೌಂದರ್ಯವನ್ನು ಪ್ರತಿನಿಧಿಸುವುದರಿಂದಾಗಿ ದೇವಿಯನ್ನು ಕಮಲ ಪುಷ್ಪದ ಮೇಲೆ ಆಸೀನಳಾಗಿರುವ ಚಿತ್ರದಲ್ಲಿ ಪೂಜಿಸುವಂತೆ ಧರ್ಮಗ್ರಂಥಗಳು ಸೂಚಿಸುತ್ತವೆ. ಇವೆಲ್ಲವೂ ಶ್ರೀದೇವಿಯ ಗುಣಗಳು. ಹಾಗಾಗಿ ಲಕ್ಷ್ಮಿಯು ಕಮಲ ಪುಷ್ಪದ ಅವಿಭಾಜ್ಯಳು. ಯಾವಾಗಲೂ ಅವಳ ವಾಸಸ್ಥಳವು ಪ್ರಾಮಾಣಿಕ ಭಕ್ತರ ಹೃದಯ ಪದ್ಮದಲ್ಲಿ. 
ಈ ಮಂತ್ರದ ಮುಖ್ಯ ಉದ್ದೇಶವೆಂದರೆ ಶ್ರೀದೇವಿಯನ್ನು ಪರಬ್ರಹ್ಮನಲ್ಲದೇ ಬೇರಲ್ಲವಂಬುದನ್ನು ಖಚಿತಪಡಿಸುವುದು. ಯಾವಾಗ ಸಾಧಕನು ಸಂಪೂರ್ಣ ತೃಪ್ತಿಯ ಹಂತವನ್ನು ತಲುಪಿದಾಗ ಅವನ ಅಂತರ್ಯದಲ್ಲಿ ಬ್ರಹ್ಮನ ಬೆಳಕು ತೋರುತ್ತದೆ. ಈ ರೀತಿಯ ಸಂಪೂರ್ಣ ತೃಪ್ತಿಯ ಹಂತವನ್ನು ಶ್ರೀದೇವಿಯ ಅನುಗ್ರಹದಿಂದ ಮಾತ್ರ ತಲುಪಲು ಸಾಧ್ಯ. ಪ್ರಕೃತಿ ನಿಯಮದ ಪ್ರಕಾರ ಆರ್ದ್ರಾ ಮತ್ತು ಜ್ವಲಂತಿ ಪದಗಳು ತದ್ವಿರುದ್ಧವಾದವು. ಒದ್ದೆಯಾದದ್ದು ಉರಿಯುವುದಿಲ್ಲ. ಹೀಗಿದ್ದರೂ ಶ್ರೀದೇವಿಯು ಸಾಂಖ್ಯ ಸಿದ್ಧಾಂತವು ಹೇಳುವ ಪ್ರಕೃತಿ ನಿಯಮವನ್ನು ಮೀರಿದವಳು ಹಾಗೂ ಅವಳಿಗೆ ಪ್ರಕೃತಿಯು ಕೇವಲ ಒಂದು ಅಂಶ ಮಾತ್ರ ಅಥವಾ ಅದು ಅವಳ ಒಂದು ಭಾಗ. ಶ್ರೀದೇವಿಯು ಪ್ರಕೃತಿ-ಪುರುಷ ತತ್ವವನ್ನು ಮೀರಿದವಳು. ಅವಳು ಇಚ್ಛಾಶಕ್ತಿಯೇ ಪ್ರಧಾನವಾಗಿರುವ ಅತೀಂದ್ರಿಯ ಸಾದಾಖ್ಯ ತತ್ವ. ( ಸಾದಾಖ್ಯ ತತ್ತ್ವದಲ್ಲಿ ನಾನು ಹಾಗೂ ಗುರಿ ಅಥವಾ ವಸ್ತು ಮುಖ್ಯವಾದದ್ದು). ತನ್ನ ಮಕ್ಕಳ ಮೇಲಿನ ದಯೆಯಿಂದಾಗಿ ಅವಳ ಕರುಣೆಯು ಸಾಧಕನ ಹೃದಯದೊಳಗೆ ಸಹಜವಾಗಿ ಹರಿಯುವುದು. ಇದು ಸಾಧಕನ ಶರೀರದಾದ್ಯಂತ ಪರಬ್ರಹ್ಮನ ಉಜ್ವಲತೆಯು ಹರಡುವುದು. 
ನಾಲ್ಕನೇ ಮಂತ್ರದ ಧ್ಯಾನ ಶ್ಲೋಕ :
"ವರದಾಭಯ ಶುಕ ಪುಸ್ತಕಕರ ಕಲಿತಾಂ ಕಮಲ ಮಧ್ಯಗಾಂ ಕಲಯೆ|
ಕಮಲಂ ಸಸ್ಮಿತವದನಂ ಕನಕಾವರಣಸ್ಥಿತಾಂ ಕಂಚಿತ್||"

ಈ ಮಂತ್ರದ ಧ್ಯಾನಶ್ಲೋಕವು ಶ್ರೀದೇವಿಯನ್ನು ಪ್ರಕಾಶಮಾನವಾದ ಮತ್ತು ಅಪ್ರತಿಮ ಸೌಂದರ್ಯದಿಂದ ಕೂಡಿದ ಹಾಗೂ ಬಂಗಾರದ ಮೈಬಣ್ಣವುಳ್ಳವಳು; ನಗುಮೊಗದವಳು; ಕಮಲದ ಮೇಲೆ ಆಸೀನಳಾಗಿರುವ; ಮತ್ತು ಹಸ್ತಗಳಲ್ಲಿ ಪುಸ್ತಕ ಮತ್ತು ಮಾತನಾಡುವ ಗಿಣಿಯನ್ನು ಹಿಡಿದಿರುವವಳೆಂದು ವರ್ಣಿಸಲಾಗಿದೆ. ಈ ಶ್ಲೋಕವನ್ನು ವಾಗ್ದೇವತೆ ಮತ್ತು ವಿದ್ಯಾದೇವತೆಯಾದ ಸರಸ್ವತಿಯ ಆವಾಹನೆಯಾಗಿ ಪರಿಗಣಿಸಲಾಗಿದೆ. ಆದ್ದರಿಂದ, ಸಾರಸ್ವತ-ಸಿದ್ಧಿಯು ( ನಿಜವಾದ ಜ್ಞಾನವನ್ನು ಸಾಧಿಸಲು ) ಶ್ರೀಸೂಕ್ತದ ನಾಲ್ಕನೇ ವಿನಿಯೋಗ. 
ನಾಲ್ಕನೇ ಮಂತ್ರದ :-
ಋಷಿ - ಆನಂದ ; ಛಂದಸ್ಸು - ಬೃಹತಿ ; ದೇವತೆ - ಶ್ರೀಲಕ್ಷ್ಮಿ; ಬೀಜ - ಕಂ ; ಶಕ್ತಿ - ಹ್ರೀಂ ; ಕೀಲಕ- ಶ್ರೀಂ ; ಇದರ ವಿನಿಯೋಗವು ಸಂಪತ್-ಸಿದ್ಧಿ ಮತ್ತು ಸಾರಸ್ವತ-ಸಿದ್ಧಿ.
**********

ಶ್ಲೋಕ - 5 - ಸಂಸ್ಕೃತದಲ್ಲಿ : ಚಂದ್ರಾಂ ಪ್ರಭಾಸಾಂ ಯಶಸಾ ಜ್ವಲಂತೀಂ ಶ್ರಿಯಂ ಲೋಕೇ ದೇವಜುಷ್ಟಾಮುದಾರಾಮ್ |
ತಾಂ ಪದ್ಮಿನೇ ಮೀಂ ಶರಣಮಹಂ ಪ್ರಪದ್ಯೇ‌sಲಕ್ಷ್ಮೀರ್ಮೇ ನಶ್ಯತಾಂ ತ್ವಾಂ ವೃಣೇ ||

ಕನ್ನಡದಲ್ಲಿ : ಹೊಳೆವ ಕಾಂತಿ ಹಿಮಕರನ ತಂಪು ಜಸದಿಂದ ಬೆಳಗುವಾಕೆ
ವರದ ಮಾತೆ ಸಿರಿಯೀವೆ ಜಗಕೆ ಸುರರು ಮಣಿಯುವಾಕೆ
ಶರಣೆನುವೆ ಹರಿಣಿಯೇ ತಾವರೆಯ ಕರದವಳೆ
ತೊರೆದೋಡಲೆನ್ನ ಬಡತನವು - ಪೊಡಮಡುವೆನು ನಾ ನಿನಗೆ

ತಾತ್ಪರ್ಯ : ಚಂದ್ರನಂತೆ ಪ್ರಕಾಶಮಾನಳೂ ಪ್ರಕೃಷ್ಟವಾದ ಕಾಂತಿಯುಳ್ಳವಳೂ ಕೀರ್ತಿಯಿಂದ ಪ್ರಕಾಶಿಸುವವಳೂ ಇಂದ್ರಾದಿ ದೇವತೆಗಳಿಂದ ಸೇವಿತಳೂ ಉದಾರಳೂ ಈಕಾರವಾಚ್ಯಳೂ ಆಸನರೂಪವಾಗಿ ಪದ್ಮವುಳ್ಳವಳೂ ಆದ ಆ ಶ್ರೀದೇವಿಯನ್ನು ಈ ಲೋಕದಲ್ಲಿ ನಾನು ರಕ್ಷಕಳನ್ನಾಗಿ ಆಶ್ರಯಿಸುತ್ತೇನೆ. ನನ್ನ ಅಲಕ್ಷ್ಮಿಯು ನಾಶವಾಗಲಿ. ಓ ದೇವಿಯೇ ! ನಾನು ನಿನ್ನಲ್ಲಿ ಸಂಪೂರ್ಣ ಶರಣಾಗತಿಯನ್ನು ಬಯಸುತ್ತೇನೆ.

ವ್ಯಾಖ್ಯಾನ :
ಚಂದ್ರನು ಶ್ರೀದೇವಿಯ ಒಂದು ಭಾಗ. ಮಹಾಲಕ್ಷ್ಮಿಯು ಸಮುದ್ರಮಥನದ ಸಮಯದಲ್ಲಿ ಸಮುದ್ರದಿಂದ ಹೊರಬಂದಾಗ ಅವಳ ಸೌಂದರ್ಯದ ಒಂದೇ ಒಂದು ಕಿರಣದಿಂದ ಚಂದ್ರನು ಬಂದನು. ಚಂದ್ರನೂ ಹಾಲ್ಗಡಲಿನಿಂದ ಹುಟ್ಟಿಬಂದದ್ದರಿಂದ ಅವನು ಶ್ರೀದೇವಿಯ ಸಹೋದರನಾಗಿ ಶ್ರೀದೇವಿಗೆ "ಚಂದ್ರಸಹೋದರಿ" ಎಂಬ ಹೆಸರು ಬಂದಿತು. 
" ಪ್ರಭಾಸ " ಎಂದರೆ ಉತ್ತಮವಾಗಿ ಪ್ರಕಾಶಿಸುವುದು ಮತ್ತು ಹೆಚ್ಚಿನ ಪ್ರಭೆಯಿಂದ. ಶ್ರೀದೇವಿಯು ಕೋಟಿಚಂದ್ರರ ಪ್ರಕಾಶವನ್ನುಳ್ಳವಳಾದ್ದರಿಂದ (ಕೋಟಿಚಂದ್ರಪ್ರಕಾಶೇ), ಅವಳಿಗೆ ಪ್ರಭಾಸ ಎಂಬ ವಿಶೇಷಣವು ಅನ್ವರ್ಥ.
"ಯಶಸಾ ಜ್ವಲಂತೀಂ" - ಶ್ರೀದೇವಿಯ ಪ್ರಖ್ಯಾತಿಯಿಂದಾಗಿ ಅವಳು ಎಲ್ಲರಿಗೂ ತಿಳಿದವಳು. ಅಜ್ಞಾನಿಗೂ ಸಹ ಅವಳು "ನಾನು" ಅಥವಾ "ನನ್ನಿಂದ" ಎಂದು ಗೊತ್ತಿರುವುದು. ಇದೇ ಅರ್ಥವನ್ನು ಲಲಿತಾಸಹಸ್ರ ನಾಮದಲ್ಲಿ "ಆಬಾಲಗೋಪವಿದಿತಾ" ಎಂಬ ಹೆಸರಿನಲ್ಲಿ ವರ್ಣಿಸಲಾಗಿದೆ. ದೇವಿಯ ಖ್ಯಾತಿಯು ಅವಳ ವಿಶೇಷ ಗುಣಗಳಾದ ಐಶ್ವರ್ಯ ( ಸಮಸ್ತ ವಿಶ್ವದ ಮೇಲಿನ ಅಧಿಕಾರ), ಸಂಪತ್ತು (ಸಮಸ್ತ ಆಸೆಗಳಾದ ಸಂಪತ್ತು, ಆರೋಗ್ಯ ಮತ್ತು ಮುಕ್ತಿಗಳನ್ನು ಕರುಣಿಸುವ ಶಕ್ತಿ) ಮತ್ತು ಔದಾರ್ಯ (ಭಕ್ತರಿಗೆ ಸುಲಭವಾಗಿ ಸಿಗುವ) ಗಳಿಂದಾಗಿ ಜನಜನಿತವಾಗಿದೆ. ಈ ಗುಣಗಳು ಭಕ್ತರನ್ನು ಅವಳೆಡೆಗೆ ಆಕರ್ಷಿಸುವುದು. 
"ಲೋಕೇ ಶ್ರಿಯಮ್ " - ಹದಿನಾಲ್ಕು ಲೋಕಗಳಲ್ಲಿನ ಸಮಸ್ತ ಜೀವಿಗಳಿಗೆ ಆಶ್ರಯದಾತಳು ಹಾಗಾಗಿ ದೇವಿಯು ಮಹಾನ್. ಪ್ರಪಂಚದ ಭರವಸೆ, ಸಂತೋಷವೇ ಶ್ರೀದೇವಿಯು. ಅವಳೇ ಪ್ರಾಪ್ಯ (ಗುರಿ), ಪ್ರಾಪಕ ( ಗುರಿಯನ್ನು ತಲುಪುವ ಮಹತ್ವಾಕಾಂಕ್ಷಿ) ಮತ್ತು ಬಯಸಿದ ಗುರಿಯನ್ನು ತಲುಪಲು ಮಾರ್ಗ. ಶ್ರೀದೇವಿಯು ಸಿದ್ಧಿ ಮತ್ತು ಸಾಧನವೆರಡೂ. ಈ ಮಂತ್ರದಲ್ಲಿನ ಲೋಕ ಪದದ ಅರ್ಥವೆಂದರೆ ಪ್ರಕೃತಿ ಮಂಡಲ. ಇದು ತ್ರಿಗುಣಗಳು ಮತ್ತು ಇಪ್ಪತ್ತ್ನಾಲ್ಕು ತತ್ತ್ವಗಳನ್ನೊಳಗೊಂಡಿದೆ ಹಾಗೂ ಇವುಗಳು ಮೂಲ ಪ್ರಕೃತಿ ಅಥವಾ ಶ್ರೀ ಇಂದ ಹೊರಹೊಮ್ಮಿದೆ. ಇವುಗಳು ಪ್ರಜ್ಞಾರಹಿತವಾದ್ದರಿಂದ ಅವುಗಳು ಸ್ವಯಂಚಾಲಿತ ವಾಗಿರುವುದಿಲ್ಲ ಹಾಗೂ ಶ್ರೀದೇವಿಯ ಮೇಲೆ ಸಂಪೂರ್ಣವಾಗಿ ಅವಲಂಬಿಸಿದೆ. ಅವುಗಳ ಇರುವಿಕೆ ಮತ್ತು ಚಟುವಟಿಕೆಗಳು ಸಂಪೂರ್ಣವಾಗಿ ಶ್ರೀದೇವಿಯ ಇಚ್ಛಾಶಕ್ತಿಗೆ ಒಳಪಟ್ಟಿರುತ್ತದೆ. ಈ ಮಹಾನ್ ಮೂಲಪ್ರಕೃತಿಯು ದೃಶ್ಯ ಲೋಕವನ್ನು ಒಳಗೊಂಡಿರುವ ಸಮಸ್ತ ಪ್ರಕೃತಿ ಮಂಡಲಕ್ಕೆ ಉತ್ತರದಾಯಿ ಹಾಗೂ ಇದನ್ನು ಶ್ರೀದೇವಿಯೆಂದೇ ಗುರುತಿಸಲಾಗಿದೆ.
"ದೇವಜುಷ್ಟಾಮ್" - ಇಲ್ಲಿ ಶ್ರೀದೇವಿಯು ಇಂದ್ರ ವಿಷ್ಣು ರುದ್ರ ಹಾಗೂ ಸಮಸ್ತ ದೇವಾನುದೇವತೆಗಳನ್ನು ಸಂತೋಷಪಡಿಸುವಳೆಂದು ವರ್ಣಿಸಲಾಗಿದೆ. ದೇವಿಯು ಯಾರು ಪ್ರಧಾನವಾಗಿ ಸತ್ವಗುಣದಿಂದ ಜೀವಿಸುವರೋ ಅವರಲ್ಲಿ ಸಂತೋಷವುಳ್ಳವಳಾಗಿರು ತ್ತಾಳೆ. ಶ್ರೀದೇವಿಯು ಸಮುದ್ರ ಮಥನದಲ್ಲಿ ಹೊರಬಂದಾಗ ಸಮಸ್ತ ದೇವಾನುದೇವತೆಗಳು ಅವಳನ್ನು ಸ್ತುತಿಸಿ ಅವಳಿಗೆ ಸೇವೆಯನ್ನು ಮಾಡಲು ಮುಂದಾದರು. ಅವರ ಭಕ್ತಿಗೆ ಮೆಚ್ಚಿ ದೇವಿಯು ಅವರ ಎಲ್ಲ ಇಷ್ಟಾರ್ಥಗಳನ್ನು ಕರುಣಿಸಿದಳು. "ಜುಷ್ಟಾ" ಎಂದರೆ ಜೊತೆಗೆ ಅಥವಾ ಬೇರೊಂದಿಗೆ ಎಂದೂ ಅರ್ಥೈಸಬಹುದು. ಶ್ರೀದೇವಿಯು ಸಮುದ್ರದಿಂದ ಹೊರಬರುತ್ತಿದ್ದಂತೆ ಅವಳು ಮಹಾವಿಷ್ಣುವಿನ ಹೃದಯವನ್ನು ಪ್ರವೇಶಿಸಿದಳು. ಇದರಿಂದ ಅವಳಿಗೆ ದೇವಜುಷ್ಟಾ (ದೇವೇನ ಹರಿಣಾ ಜುಷ್ಟಾ - ಶ್ರೀ ಗುಣ ರತ್ನ ಕೋಶ) ಎಂಬ ಶಿರೋನಾಮ ದೊರಕುತ್ತದೆ. ಕ್ಷೀರಸಾಗರದಲ್ಲಿ ಮಹಾನ್ ಕುಂಡಲಿನಿ ಶಕ್ತಿಯು ನಿಷ್ಕ್ರಿಯವಾದ ಸ್ಥಿತಿಯಲ್ಲಿತ್ತು. ಉಭಯತ್ವವೆಂಬ ಹಾಲಾಹಲದ ವಿಷವು ನಿವಾರಣೆಯಾದಮೇಲೆ, ವಿಶ್ವಚೇತನದಲ್ಲಿ ಪ್ರತ್ಯೇಕತೆಯು ಸಂಪೂರ್ಣವಾಗಿ ಕಳೆದುಹೋಯಿತು. ಸಮುದ್ರಮಥನದ ಘರ್ಷಣೆಯಿಂದ ಒಮ್ಮೆ ಎಚ್ಚೆತ್ತ ಅವಳು ಒಂದು ಕ್ಷಣವನ್ನೂ ವ್ಯರ್ಥಮಾಡದೇ ಪರಮಶಿವನೊಂದಿಗೆ ಸೇರಿಹೋದಳು. ಶಿವ-ಶಕ್ತಿಯರ ಶಾಶ್ವತವಾದ ಮಿಲನದಿಂದ ಬಹು ನಿರೀಕ್ಷಿತ ಅಮೃತವು ವರವಾಗಿ ಹೊರಬಂದಿತು. ಅವಳು ಸದಾ ಪರಬ್ರಹ್ಮನೊಂದಿಗೆ (ಜುಷ್ಟಾ), ಅವನ ಅವಿಭಾಜ್ಯ ಚಿತ್ ಶಕ್ತಿಯಾಗಿರುವಳು. 
ಈ ಸಂದರ್ಭದಲ್ಲಿ ಉಪಯೋಗಿಸಿರುವ ಮತ್ತೊಂದು ಗುಣವಾಚಕ - " ಉದಾರಾ ", ಶ್ರೀದೇವಿಯ ಎಣೆಯಿಲ್ಲದ ಔದಾರ್ಯ. ಈ ಪದಕ್ಕೆ ಮತ್ತಷ್ಟು ಅರ್ಥಗಳಿವೆ - ಪ್ರಗಲ್ಭ (ಅನಂತ ಶ್ರೇಷ್ಠತೆ) ಮತ್ತು ವಿಸ್ತಾರ (ಎಲ್ಲೆಡೆ ಹರಡಿ ರುವುದು). ಈ ಗುಣಗಳು ಶ್ರೀದೇವಿಯ ಅಪಾರವಾದ ಗೌರವಕ್ಕೆ ಸಂಬಂಧಿಸಿದ್ದು. ಯಾರೇ ದೇವಾನು ದೇವತೆಗಳಿಗೆ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿದಲ್ಲಿ ಅದು ಕಡೆಗೆ ತಲುಪುವುದು ಪರಬ್ರಹ್ಮನಿಗೆ ಅಥವಾ ಶ್ರೀದೇವಿಗೆ. ಬೇರೆ ದೇವತೆಗಳನ್ನು ಪೂಜಿಸಿದಾಕ್ಷಣ ಅವರ ಬಗ್ಗೆ ಶ್ರೀದೇವಿಯು ಸ್ವಲ್ಪವೂ ಅನಾದರವನ್ನು ತೋರುವುದಿಲ್ಲ. ಹೇಗೆ ಚಂದ್ರನು ಸೂರ್ಯನ ಬೆಳಕನ್ನು ಪ್ರತಿಫಲಿಸುವನೋ ಅದೇ ರೀತಿ ಬೇರೆ ದೇವತೆಗಳು ಶ್ರೀದೇವಿಯ ಶಕ್ತಿಯಿಂದ ತಮ್ಮ ಭಕ್ತರಿಗೆ ವರವನ್ನು ದಯಪಾಲಿಸುವರು. ಶ್ರೀದೇವಿಯಿಂದಾಗಿಯೇ ಉಳಿದ ದೇವತೆಗಳಾದ ಚಂದ್ರ ಇತ್ಯಾದಿಗಳು ಸ್ವಪ್ರಕಾಶಿತರಂತೆ ಕಾಣುವರು. "ತಾಂ ಪದ್ಮನೀ ಮೀಂ" - ಪದ್ಮ ಪದವು ಕಮಲ ಪುಷ್ಪವೆಂದಾದರೂ ಈ ಪದದ ಮತ್ತೊಂದು ಅರ್ಥವು "ಪ್ರಪಂಚ" ಅಥವಾ ವಿಶ್ವ ಎಂಬುದಾಗಿ. ಶ್ರೀದೇವಿಯು ವಿಶ್ವದ ಸಮಸ್ತ ಚಟುವಟಿಕೆಗಳನ್ನು ನಿಯಂತ್ರಿಸುವವಳಾದ್ದರಿಂದ ಅವಳನ್ನು ಪದ್ಮಿನೀಮೀಂ ಎಂದೂ ಕರೆಯಲಾಗುವುದು. " ನೀಮೀಂ " ಎಂದರೆ "ಸುತ್ತುವರೆಯಲ್ಪಟ್ಟ ". 
ಶ್ರೀದೇವಿಯನ್ನು ಪದ್ಮ ಪುಷ್ಪಗಳಿಂದ ಸುತ್ತುವರೆದಿರು ವಂತೆ ಚಿತ್ರೀಕರಿಸಲಾಗಿದೆ. ಲಕ್ಷ್ಮೀ ರಹಸ್ಯ ತಂತ್ರದ ಪ್ರಕಾರ ಪದ್ಮಪುಷ್ಪವು ಸೌಂದರ್ಯ, ಅಭ್ಯುದಯ, ಪರಿಶುದ್ಧತೆ, ಮತ್ತು ಸಮೃದ್ಧಿಗಳನ್ನು ಸೂಚಿಸುತ್ತದೆ. ಶ್ರೀದೇವಿಯು ಉಗಮದ ಕೇಂದ್ರದಲ್ಲಿದ್ದು ಎಲ್ಲ ಗುಣಗಳಾದ - ಬೆಳಕಿನ ಕಿರಣ , ಎಲ್ಲೆಡೆ ಹರಡುವುದು , ಸಂತೋಷದ ಬೆಳಕು ಮತ್ತು ಜ್ಞಾನವನ್ನು ಕಪ್ಪಾದ ಮತ್ತು ಮಬ್ಬು ಮುಸುಕಿದ ಪ್ರಪಂಚಕ್ಕೆ ತರುವುದು. ಶ್ರೀದೇವಿಯನ್ನು ಪದ್ಮನಾಭನೊಂದಿಗೆ ಒಂದಾಗಿರುವ "ಪದ್ಮನಾಭಿ" ಎಂದು ಪೂಜಿಸಲಾಗುವುದು. ಯೋಗಶಾಸ್ತ್ರದ ಪ್ರಕಾರ ಸಮಸ್ತ ಹಾಗೂ ಬಹುಮುಖ್ಯವಾದ ನಾಡಿಗಳು ನಾಭಿಯಿಂದಲೇ ಹೊರಹೊಮ್ಮುವುದು. ಈ ನಾಡಿಗಳು ಪ್ರಾಣಶಕ್ತಿಯನ್ನು ಸುತ್ತುವರೆದಿರುವವು. ಎಲ್ಲ ಬಹುಮುಖ್ಯವಾದ ಬದಲಾವಣೆಗಳು ಆಗುವುದು ಶಕ್ತಿ ಕೇಂದ್ರಸ್ಥಳವಾದ ನಾಭಿಚಕ್ರದಲ್ಲಿ. ಗುರುವು ತನ್ನ ಶಿಷ್ಯನಲ್ಲಿ ಶಾಂಭವ ಅಥವಾ ಪ್ರಗಲ್ಭ ಮಹಾವೇಧವನ್ನು ಪ್ರದರ್ಶಿಸಿದಾಗ ಶಿಷ್ಯನ ಮಣಿಪೂರಕದಲ್ಲಿ ಕುಂಡಲಿನೀ ಶಕ್ತಿಯು ಶ್ರೀದೇವಿಯಾಗಿ ಒಮ್ಮೆಲೇ ಕಂಡುಬರುತ್ತದೆ. ಸಾಧಕನು ಈ ಸಮಯಕ್ಕೆ ಮೊದಲೇ ಶುಷ್ಕ ಜಪ ( ಮತ್ತಷ್ಟು ಶುದ್ಧೀಕರಣಗೊಳ್ಳಲು ಮಾಡಲಾಗುವ ಭಾವನಾರಹಿತ ಜಪ) ಹಾಗೂ ಕೆಲವು ಕ್ರಿಯೆಗಳನ್ನು ಮಾಡಿ ಈ ಸ್ಥಿತಿಗೆ ತಯಾರಾಗಿರುತ್ತಾನೆ. ಅವನು ಕೌಲಾಸ್ ಪ್ರಕಾರದಂತೆ ( ಅಷ್ಟಮಿ ಹಾಗೂ ನವಮಿಯು ವಿಲೀನವಾಗುವುದು ಮಧ್ಯರಾತ್ರಿಯಲ್ಲಿ ಹಾಗೂ ಈ ಮುಹೂರ್ತದಲ್ಲಿ ಕುಂಡಲಿನೀ ಶಕ್ತಿಯು ಸುಷುಮ್ನಾ ಸ್ಥಿತಿಗೆ ಪ್ರವೇಶಿಸಿ ಸಂಪೂರ್ಣ ಊರ್ಧ್ವರೇತಾ ಸ್ಥಿತಿಯಲ್ಲಿ ನವರಂಧ್ರಗಳೂ ಸಂಪೂರ್ಣವಾಗಿ ಮುಚ್ಚಿಕೊಳ್ಳುತ್ತವೆ. ಈ ವಿಧದ ಕ್ರಿಯೆಯನ್ನು ಕೌಲಾಚಾರ ಅಥವಾ ಕೌಲಾಸ್ ಎನ್ನಲಾಗುವುದು. ಈ ಸ್ಥಿತಿಯಲ್ಲಿ ಸಾಧಕನು ತನ್ನ ಸದ್ಗುರುವಿನ ಪಾದಕ್ಕೆ ನಮಿಸುವನು), ಮೂಲಾಧಾರದಿಂದ ಕುಂಡಲಿನಿಯನ್ನು ಜಾಗೃತಿಗೊಳಿಸುವ ಬಗೆಗೆ ಯೋಚಿಸಬೇಕಿಲ್ಲ. ಸತ್ವಗುಣದ ಶುದ್ಧತೆ ಮತ್ತು ಪ್ರಾಬಲ್ಯವು ಸಮಯಾಚಾರದ ಹಾದಿಯಲ್ಲಿ ಸಾಧಕನನ್ನು ಸಂಪೂರ್ಣವಾಗಿ ತಾಮಸಗುಣದ ಕೆಳಗಿನ ಎರಡು ಚಕ್ರಗಳನ್ನು ಸಂಪೂರ್ಣವಾಗಿ ದಾಟಲು ಸಹಕರಿಸುತ್ತದೆ. ಆದರೆ ಸಂಪೂರ್ಣ ಸತ್ವಗುಣದ ಸ್ಥಿತಿಯನ್ನು ತಲುಪುವುದು ಕಷ್ಟಕರವಾದ್ದರಿಂದ ಸಾಧಕನು ಮಣಿಪೂರಕದ ರಾಜಸಿಕ ಚಕ್ರದಲ್ಲಿ ಕುಂಡಲಿನಿಯಿಂದ ವ್ಯಕ್ತೀಕರಿಸಿದ, ತನ್ನ ಅರಿವನ್ನು ಕಂಡುಕೊಳ್ಳುವನು. ಈ ಮಾರ್ಗದ ಅನುಕೂಲವೆಂದರೆ ಸಾಧಕನು ಸಂಪೂರ್ಣವಾದ ಸಮತೋಲನವು ಬೇಕಿರುವ ಮಹತ್ವದ ಸ್ವಾಧಿಷ್ಠಾನ ಚಕ್ರವನ್ನು ದಾಟುವಾಗ ಎದುರಾಗುವ ಅಪಾಯಗಳ ಬಗ್ಗೆ ಚಿಂತಿಸಬೇಕಿಲ್ಲ. ವಾಮಾಚಾರ ಪದ್ಧತಿಯನ್ನು ಅನುಸರಿಸುವ ಅನೇಕ ಕೌಲಿಕರು ಈ ಚಕ್ರದಲ್ಲಿ ಸಿಲುಕಿ ಶಾಶ್ವತವಾಗಿ ಜನನ-ಮರಣದ ಚಕ್ರದಲ್ಲಿ ದೂಡಲ್ಪಡುತ್ತಾರೆ. 
ತಮೋಗುಣದ ಸಾಧಕರಿಗೆ ಗುಣಗಳ ಮೆಟ್ಟಿಲನ್ನೇರು ವುದು ಕ್ರಮೇಣ ಹಾಗೂ ಅತಿ ಕಷ್ಟಕರವಾದದ್ದು. ಅತಿಯಾದ ತಮೊಗುಣ ಅಥವಾ ರಜೋಗುಣದಿಂದ ಗುಣಗಳ ಮೆಟ್ಟಿಲನ್ನೇರಿ ಸತ್ವಗುಣವನ್ನು ತಲುಪಬಹುದೆಂಬ ಭಾವನೆಯು ಸಂಪೂರ್ಣವಾಗಿ ತಪ್ಪು ಕಲ್ಪನೆ. ಇದು ಎಂದಿಗೂ ಸಾಧ್ಯವಾಗದು. ಯಾರೊಬ್ಬನು ತಾಮಸ ಗುಣದಿಂದ ರಾಜಸ ಗುಣವನ್ನು ತಲುಪಿದರೂ ಅವನಲ್ಲಿ ತಾಮಸ ಗುಣದ ಲಕ್ಷಣಗಳು ಇನ್ನೂ ಇದ್ದೇ ಇರುತ್ತದೆ. ಇದು ಸಂಪೂರ್ಣವಾಗಿ ಹೋಗುವುದು ಯಾವಾಗ ಸಾಧಕನು ರಾಜಸ ಗುಣದಿಂದ ಸತ್ವಗುಣವನ್ನು ತಲುಪುತ್ತಾನೋ ಆಗೆಲೇ. ಆದರೆ ಈ ಹಂತದಲ್ಲೂ ಅವನಲ್ಲಿ ರಾಜಸ ಗುಣದ ಲಕ್ಷಣಗಳು ಇದ್ದೇ ಇರುತ್ತದೆ. ಸತ್ತ್ವಗುಣದ ಹಂತವು ನಿರಾಕಾರಸ್ಥಿತಿಯನ್ನು (ನಿರ್ಗುಣ ಮಹತ್) ತಲುಪಲು ಕೊನೆಯ ಹಂತ. ತಾಮಸಗುಣದ ಹಂತದಿಂದ ಒಮ್ಮೆಲೇ ಸತ್ತ್ವಗುಣದ ಹಂತವನ್ನು ತಲುಪುವುದು ಅಸಾಧ್ಯ. ಇದು ಸಾಧ್ಯವಾಗುವುದು ಕ್ರಮೇಣವಾಗಿ ಮಾತ್ರ. ಅನೇಕ ವಾಮಾಚಾರಿಗಳು ಇದು ಸಾಧ್ಯವೆಂದು ಶ್ರೀ ರಾಮಕೃಷ್ಣ ಪರಮಹಂಸರ ಉದಾಹರಣೆಯನ್ನು ನೀಡಿದರೂ ಆ ರೀತಿಯ ಹೇಳಿಕೆಗಳು ಅವರ ವಿರುದ್ಧವಾಗಿ ಕೆಲಸಮಾಡುವುದು. ಶ್ರೀ ರಾಮಕೃಷ್ಣ ಪರಮಹಂಸರು ಅದಾಗಲೇ ಬ್ರಹ್ಮನ ಲೋಕದಲ್ಲಿ ಭದ್ರವಾಗಿ ನೆಲೆಸಿದ್ದರು ಹಾಗೂ ಬಾಹ್ಯದಲ್ಲಿ ಅವರು ಯಾವ ಕ್ರಿಯೆಯನ್ನು ಮಾಡಿದರೂ ಅದು ಮಕ್ಕಳಾಟಿಕೆ ಮಾತ್ರ. ಅವರು ಅದಾಗಲೇ ಸಮಯಾಚಾರ ಹಾಗೂ ವಾಮಾಚಾರಗಳ ನಡುವಿನ ಭೇದವು ಅವರನ್ನು ಏನೂ ಮಾಡುವ ಸ್ಥಿತಿಯನ್ನು ತಲುಪಿದ್ದರು. 
ಕೆಲವು ವ್ಯಾಖ್ಯಾನಕಾರರು " ಪದ್ಮನೇಮೀಮ್" ಪದವನ್ನು " ಪದ್ಮಿನೀಮೀಮ್" ಎಂಬುದಾಗಿಯೂ ವಿವರಿಸಿದ್ದಾರೆ. ಪದ್ಮಿನಿ ಎಂದರೆ ಪದ್ಮಸರೋವರ. ಇದು ನೇರವಾಗಿ ಪದ್ಮವನ್ನೂ ಸೂಚಿಸುತ್ತದೆ. ಶ್ರೀದೇವಿ ಹಾಗೂ ಪದ್ಮಗಳ ಮಧ್ಯೆ ಯಾವುದೆ ಭೇದವಿಲ್ಲದೇ ಇರುವುದರಿಂದ ಶ್ರೀದೇವಿಯನ್ನು ಪದ್ಮಿನಿ ಎಂದೂ ಕರೆಯಲಾಗುವುದು. ಪದ್ಮ ಎಂದರೆ ಪ್ರಪಂಚ ಮತ್ತು ಪದ್ಮಿನಿಯು ಅದರ ಕಾಂಡ ( ಪದ್ಮಿನೀ ಪದ್ಮಲತೇವ). ಮೂಲಪ್ರಕೃತಿಯಾದ ಶ್ರೀದೇವಿಯು ಪದ್ಮದ ಅಂದರೆ ಪ್ರಪಂಚದ ಕಾಂಡ ಅಥವಾ ವಿಶ್ವದ ಆಧಾರ. "ಈಮ್"ಎಂಬುದು ಶ್ರೀದೇವಿಯ ಮಹಾ ಬೀಜ ಮಂತ್ರ. ಶ್ರೀಸೂಕ್ತದ ಪ್ರತಿಯೊಂದು ಮಂತ್ರವೂ ಶ್ರೀವಿದ್ಯಾ ಪದಾಂಶವನ್ನು ಬಿಡಿಸಿ ಹೇಳುತ್ತದೆ. (ಇದರ ಬಗೆಗೆ ಹೆಚ್ಚಿನ ವಿವರಣೆಯನ್ನು ಶ್ರೀಗುಣ ರತ್ನಕೋಶ ಮತ್ತು ಸೌಭಾಗ್ಯಲಕ್ಷ್ಮೀ ಕಲ್ಪವನ್ನು ಓದಬಹುದು).
"ತಾಮ್" ಪದದ ಅರ್ಥವೆಂದರೆ "ಆ" ಪದ್ಮನೇಮಿ. ಹಾಗೇ ಇದನ್ನು ಬೇರೆಯದೇ ಆದ ಗುಣವಾಚಕ ವನ್ನಾಗಿಯೂ ವಿಶ್ಲೇಶಿಸಬಹುದು. ಕಾಮಧೇನು ತಂತ್ರದಲ್ಲಿ "ತ" ಪದವನ್ನು ಪರಾಶಕ್ತಿ ಅಥವಾ ಕುಂಡಲಿಯನ್ನಾಗಿಯೂ ಅರ್ಥೈಸಲಾಗಿದೆ. ವರ್ಣೋದ್ಧಾರ ತಂತ್ರದ ಪ್ರಕಾರ ಇದು ತ್ರಿಮೂರ್ತಿಗಳ ಒಟ್ಟಾರೆ ಶಕ್ತಿಯನ್ನಾಗಿಯೂ ಅರ್ಥೈಸಲಾಗಿದೆ. ಇದನ್ನು ಪ್ರತ್ಯಕ್ಷ ವಿಶ್ವದ ಸೃಷ್ಟಿಗೆ ಕಾರಣವಾದ ಶ್ರೀದೇವಿಯ ಇಚ್ಛೆಯನ್ನಾಗಿಯೂ ಸೂಚಿಸುವುದು. 
" ಶರಣಮಹಂ ಪ್ರಪದ್ಯೇ " - ಅವಿದ್ಯೆಯಿಂದಾಗಿ ಎದುರಿಸುತ್ತಿರುವ ದೌರ್ಭಾಗ್ಯದಿಂದ ಬಿಡುಗಡೆ ಪಡೆಯಲು ಶ್ರೀದೇವಿಯ ಆಶ್ರಯವನ್ನು ಬೇಡುವ ಪ್ರಾರ್ಥನೆ. ಈ ಸಂದರ್ಭದಲ್ಲಿ "ಅಹಂ" ಪದದ ಉಪಯೋಗವನ್ನು ಶತಮಾನಗಳ ಹಿಂದಿನಿಂದಲೂ ಸಾಂಪ್ರದಾಯಿಕವಾಗಿ ಉಪಯೋಗಿಸುತ್ತಿದ್ದರೂ, ಸಾಯಣಾಚಾರ್ಯರು ಹಾಗೂ ಪೃಥ್ವೀಧರಾಚಾರ್ಯರು ಆಕ್ಷೇಪಿಸಿರುವರು. 
" ಅಲಕ್ಷ್ಮೀರ್ಮೇ ನಶ್ಯತಾಮ್ ತ್ವಾಮ್ ವೃಣೇ " - ಯಾವುದು ಲಕ್ಷ್ಮಿ ಅಲ್ಲವೋ ಅದು ಅಲಕ್ಷ್ಮೀ . ಶ್ರೀದೇವಿಯು ಸೌಂದರ್ಯ , ಉದಾರತೆ , ಅಭ್ಯುದಯಗಳನ್ನು ಸೂಚಿಸಿದರೆ ಅಲಕ್ಷ್ಮಿಯು ಕೊಳಕು, ದುರಾಸೆ, ಕೊರತೆಗಳನ್ನು ಸೂಚಿಸುವಳು. ಪುರಾಣಗಳಲ್ಲಿ ಅಲಕ್ಷ್ಮಿಯನ್ನು ಜ್ಯೇಷ್ಠಾದೇವಿಯನ್ನಾಗಿ ವ್ಯಕ್ತೀಕರಿಸಲಾಗಿದೆ. ಜ್ಯೇಷ್ಠಾದೇವಿಯು ಸಮುದ್ರಮಥನದಲ್ಲಿ ಶ್ರೀಲಕ್ಷ್ಮಿಗೆ ಮೊದಲೇ ಸಮುದ್ರದಿಂದ ಹೊರಬಂದಿದ್ದರಿಂದ ಅವಳನ್ನು ಲಕ್ಷ್ಮಿಯ ಸಹೋದರಿಯೆಂದು ಪರಿಗಣಿಸಲಾಗಿದೆ. ಹಾಗೇ ಸಮುದ್ರಮಥನದಲ್ಲಿ ಜ್ಯೇಷ್ಠಾದೇವಿಯ ನಂತರ ಹಾಲಾಹಲ ಉತ್ಪತ್ತಿಯಾಯಿತೆಂದು ವಿವರಿಸಲಾಗಿದೆ. ಅಲ್ಲದೇ ಇದೇ ಜ್ಯೇಷ್ಠಾದೇವಿಯು ಸಮುದ್ರದಿಂದ ಹೊರಬರುತ್ತಿದ್ದಂತೆ ಕಲಿಯುಗದ ಮೂರ್ತೀಕೃತನಾದ ಹಾಗೂ ಎಲ್ಲ ಕೆಟ್ಟದ್ದನ್ನೂ ಹಾಗೂ ಅಸಹ್ಯವಾದದ್ದನ್ನು ಸೂಚಿಸುವ ಕಲಿಯನ್ನು ವಿವಾಹವಾದಳು. ಪದ್ಮಪುರಾಣದಲ್ಲಿ ಜ್ಯೇಷ್ಠಾದೇವಿಯನ್ನು ಕಲಿವಲ್ಲಭೆ ಎಂದು ಕರೆಯಲಾಗಿದೆ. ಕೆಲವರು ಇವಳನ್ನು ಮಹಾವಿದ್ಯಾ ದೇವಿಯಾದ ಧೂಮವತಿಯೆಂದು ಗುರುತಿಸುತ್ತಾರೆ. ಆದರೆ ಧೂಮವತಿಯು ವಿಧವೆ, ಜ್ಯೇಷ್ಠಾದೇವಿಯು ಕಲಿಪುರುಷನ ಪತ್ನಿ. ಶ್ರೀದೇವಿಯು ಇರುವ ಕಡೆಗಳಲ್ಲಿ ಅಲಕ್ಷ್ಮಿಯು ವಾಸಿಸಲು ಅಸಾಧ್ಯ. ಹಾಗಾಗಿ ಸಾಧಕನು ಅಲಕ್ಷ್ಮಿಯಿಂದ ದೂರಾಗಲು ಶ್ರೀಲಕ್ಷ್ಮಿಯ ಪದ್ಮಚರಣದಲ್ಲಿ ಆಶ್ರಯವನ್ನು ಬೇಡುತ್ತಾನೆ. ವೃಣೇ ಪದವು ಈ ಆಯ್ಕೆಯನ್ನು ಸೂಚಿಸುತ್ತದೆ. ಅಲಕ್ಷ್ಮಿಯು ಮನುಷ್ಯನ ಕತ್ತಲಿನ ಮನಸಿನ ಭಾಗದಲ್ಲಿ ಅಚ್ಚೊತ್ತಿರುವ ಕಲಿಯ ಗುಣಗಳು ಮಾತ್ರ. ಸೋಮಾರಿತನ , ದುರಾಸೆ , ವಿಷಯಾಸಕ್ತಿ , ಜಗಳವಾಡುವ ಸ್ವಭಾವ , ಕ್ರೌರ್ಯ , ದ್ಯೂತ , ಮಧ್ಯಪಾನ, ಮಾಂಸಭಕ್ಷಣ ಇವೆಲ್ಲ ಗುಣಗಳಲ್ಲಿರುವವನೆಡೆಗೆ ಜ್ಯೇಷ್ಠಾಲಕ್ಷ್ಮಿಯು ಹೋಗುವಳು. " ವೃಣೇ " ಪದದ ಉಪಯೋಗವು ಸಾಧಕನಿಗೆ ಈ ಗುಣಗಳನ್ನು ತೊರೆದು ಶ್ರೀಲಕ್ಷ್ಮಿಯೆಡೆಗೆ ಪಯಣಿಸು ಎಂದುದನ್ನು ಸೂಚಿಸುತ್ತದೆ. 
ಐದನೇ ಮಂತ್ರದ ಧ್ಯಾನ ಶ್ಲೋಕವನ್ನು ಶ್ರೀ ಲಕ್ಷ್ಮಿಗೆ ಅರ್ಪಿಸಲಾಗಿದೆ. ಶ್ರೀ ಲಕ್ಷ್ಮಿಯು ವೈಭವೋಪೇತ ಸೂರ್ಯ ಮಂಡಲದಲ್ಲಿ ಆಸೀನಳಾಗಿ, ಹಸ್ತದಲ್ಲಿ ಪದ್ಮ ಪುಷ್ಪವನ್ನು ಹಿಡಿದು ಮತ್ತೊಂದು ಹಸ್ತದಿಂದ ಅಭಯವನ್ನು ತೋರುತ್ತಿರುವಳು. ಅವಳು ವೈಭವವಾದ ವಸ್ತ್ರವನ್ನು , ಹೊಳೆಯುವ ಆಭರಣಗಳನ್ನು ಧರಿಸಿ ಮತ್ತು ಅತ್ಯಮೂಲ್ಯ ಆಭರಣವಾದ ಚಿಂತಾಮಣಿಯನ್ನು ಹಸ್ತದಲ್ಲಿ ಹಿಡಿದುಕೊಂಡಿರುವಳು. ಅವಳು ಎಲ್ಲ ಆಸೆಗಳನ್ನೂ ಪೂರೈಸುವಳು ಮತ್ತು ದೌರ್ಭಾಗ್ಯವನ್ನು ನಾಶಮಾಡುವಳು. ಆ ಪರಮೋಚ್ಚ ದೇವತೆಯನ್ನು ಪ್ರಾರ್ಥಿಸುವೆ.
" ತೇಜಮಂಡಲ-ಮಧಗಂ ದ್ವಿನಯನಂ ದಿವ್ಯಾಂಬರಾಲಂಕೃತಾಂ
ದೇವೀಂ ಪದ್ಮವರಾಭಯಂ ಕರತಲೈ ಚಿಂತಾಮಣಿಂ ಬಿಭ್ರತೀಮ್ |
ನಾನಾ ದಿವ್ಯ ವಿಭೂಷಣಂ ಚ ಭಜತಂ ದೌರ್ಭಾಗ್ಯ ಸಂಹಾರಿಣಿಂ
ನಾನಾ ಅಭೀಷ್ಟ ವರಪ್ರದಾನ ನಿರತಂ ವಂದೇ ಪರಾಂ ದೇವತಾಮ್ ||
ಈ ಮಂತ್ರದ :- ಋಷಿಯು - ಆನಂದ, ಛಂದಸ್ಸು - ತ್ರಿಷ್ಟುಪ್ ; ದೇವತೆ - ಸರ್ವೈಶ್ವರ್ಯಪ್ರದ ಲಕ್ಷ್ಮಿ, ಸಮಸ್ತ ಐಶ್ವರ್ಯವನ್ನೂ ಕರುಣಿಸುವ ಲಕ್ಷ್ಮಿ ; ಬೀಜ - ಚಂ ; ಶಕ್ತಿ - ನಂ ; ಕೀಲಕ - ಶ್ರೀಂ . ಇದರ ವಿನಿಯೋಗವು ನಿಧಿ ಪ್ರಾಪ್ತಿ, ಶತ್ರು ಜಯಂ.
" ********
ಶ್ಲೋಕ - 6 - ಸಂಸ್ಕೃತದಲ್ಲಿ : ಆದಿತ್ಯವರ್ಣೇ ತಪಸೋ‌sಧಿಜಾತೋ ವನಸ್ಪತಿಸ್ತವ ವೃಕ್ಷೋ‌ಥ ಬಿಲ್ವಃ |
ತಸ್ಯ ಫಲಾನಿ ತಪಸಾನುದಂತು ಮಾಯಾಂತರಾಯಾಶ್ಚ ಬಾಹ್ಯಾ ಅಲಕ್ಷ್ಮೀಃ ||

ಕನ್ನಡದಲ್ಲಿ : ಬಾಲರವಿಯೊಲು ಹೊಳೆವವಳೆ ನಿನ್ನೊಂದು ತಪದಿಂದ ಹುಟ್ಟಿತ್ತು ಪ್ರಿಯವಹ ಬಿಲ್ವಮರ
ಅದರ ಹಣ್ಣುಗಳು ನೀಗಲೆನ್ನೊಳ ಹೊರಗಿನ ಬಡತನವ

ತಾತ್ಪರ್ಯ :
ಸೂರ್ಯನಕಾಂತಿಯಂತೆ ಕಾಂತಿಯುಳ್ಳವಳೇ ! ನಿನ್ನ ನಿಯಮದ ಕಾರಣದಿಂದ ಬಿಲ್ವವೃಕ್ಷವೆಂಬ ವನಸ್ಪತಿಯು ಪ್ರಾದುರ್ಭೂತವಾಯಿತು. ನಿನ್ನ ಹಸ್ತದಿಂದಲೇ ಬಿಲ್ವ ವೃಕ್ಷವು ಉಂಟಾಯಿತು ಎಂದು ವಾಮನ ಪುರಾಣದಲ್ಲಿ ಉಕ್ತವಾಗಿದೆ. ನಂತರ ಆ ಬಿಲ್ವವೃಕ್ಷದ ಫಲಗಳು ನಿನ್ನ ಅನುಗ್ರಹದಿಂದ ಅಂತರಿಂದ್ರಿಯ ಸಂಬಂಧವಾದ ಅಜ್ಞಾನವನ್ನು ಮತ್ತು ಬಹಿರಿಂದ್ರಿಯ ಸಂಬಂಧವಾದ ದಾರಿದ್ರ್ಯ ಮೊದಲಾದ ದುರ್ಗತಿಗಳನ್ನು ನಿವಾರಿಸಲಿ. ಈ ಮಂತ್ರಸಿದ್ಧಿಯಿಂದ ದಾರಿದ್ರ್ಯ ಪರಿಹಾರವಾಗಿ ಲಕ್ಷ್ಮೀ ಸಂಪತ್ತು ಸಿದ್ಧಿಸುತ್ತದೆ.

ವ್ಯಾಖ್ಯಾನ :
"ಆದಿತ್ಯ ವರ್ಣೇ" - ಅದಿತಿಯ ಮಗ ಆದಿತ್ಯ - ಸೂರ್ಯ. ಅವನ ವರ್ಣ ಅಥವಾ ಬಣ್ಣವು ಪರಿಶುದ್ಧವಾದ ಹೊಳಪು. ಶ್ರೀದೇವಿಯನ್ನು ಸೂರ್ಯನಂತೆ ಹೊಳಪುಳ್ಳವಳು ಎಂದು ವರ್ಣಿಸಲಾಗಿದೆ. ಶ್ರೀದೇವಿಯನ್ನು ಉದಯಿಸುವ ಸೂರ್ಯನ ಮೈಬಣ್ಣವುಳ್ಳವಳು ( ತರುಣಾರುಣವದರುವರ್ಣೆ - 22/3 - ಸೌಭಾಗ್ಯ ಸಂಜೀವನಮ್) ಎಂದು ವರ್ಣಿಸಲಾಗಿದೆ. ಇಲ್ಲಿ ವ್ಯಾಖ್ಯಾನಕಾರರು ಶ್ರೀದೇವಿಯನ್ನು ಸಾಂಕೇತಿಕವಾಗಿ ಬಾಲಮಹಾತ್ರಿಪುರಸುಂದರಿ ರೂಪವೆಂದು ಸೂಚಿಸಿದ್ದಾರೆ ( ತನುಮಧ್ಯಾಮ್ ಮಹಾಲಕ್ಷ್ಮೀಮ್ ಬಾಲಾಮ್ ತ್ರಿಪುರಸುಂದರೀಮ್ ). ಈ ಗುಣವಾಚಕದಿಂದ ಶ್ರೀವಿದ್ಯೆಯ ಬೀಜ ಮತ್ತು ಶ್ರೀವಿದ್ಯೆಯ ಪಂಚ ಪ್ರಣವವನ್ನು ಪಡೆದುಕೊಳ್ಳಲಾಗಿದೆ. ಇವುಗಳನ್ನು ಪಡೆದುಕೊಳ್ಳಲು ಕೆಲವು ಸುಲಭ ಸೂತ್ರಗಳನ್ನು ಅನುಸರಿಸಬೇಕು. ಇವುಗಳನ್ನು ಗುರುಮುಖೇನ ಮಾತ್ರ ಅರಿಯಬಹುದು. 
" ತವ ತಪಸೋಧಿಜಾತಾಃ ವನಸ್ಪತಿಃ ಬಿಲ್ವಃ " - ಇಲ್ಲಿ ಶ್ರೀದೇವಿಯು ತಪಸ್ಸು ಮಾಡಿದುದರ ಬಗೆಗೆ ಉಲ್ಲೇಖವಿದೆ. " ತಪಸ್ " ಪದವು " ತಪ್ " ಎಂಬ ಮೂಲದಿಂದ ಉಂಟಾಗಿದೆ, ಅಂದರೆ ದಹಿಸು ಎಂದು ಅರ್ಥ. ಹಾಗಾಗಿ ತಪಸ್ಸು ದೈಹಿಕ ತೊಂದರೆಯನ್ನುಂಟು ಮಾಡುತ್ತದೆ ( ವಿವಿಧ ಕ್ಲೇಶ ಜನಕಂ ಕರ್ಮ ). ರತ್ನಕೋಶದ ಪ್ರಕಾರ "ತಪಸ್" ಎಂಬ ಪದಕ್ಕೆ ಬ್ರಹ್ಮ ಸಂಕಲ್ಪವೆಂದು ಅರ್ಥೈಸಲಾಗಿದೆ. ಯೋಗಿನಿ ತಂತ್ರದ 
(1, 5 ) ಪ್ರಕಾರ ವಿಷ್ಣುವಿಗೆ ಇಬ್ಬರು ಪತ್ನಿಯರು - ಸರಸ್ವತಿ ಮತ್ತು ಲಕ್ಷ್ಮಿ. ವಿಷ್ಣುವು ಸರಸ್ವತಿಯೆಡೆಗೆ ಹೆಚ್ಚಿನ ಗಮನವನ್ನು ನೀಡುತ್ತಿದ್ದ ಹಾಗೂ ಇದು ಲಕ್ಷ್ಮಿಯನ್ನು ಹೆಚ್ಚಾಗಿ ಬಾಧಿಸುತ್ತಿತ್ತು. ಅವಳು ಶ್ರೀಶೈಲಕ್ಕೆ ಬಂದು ಮಹಾದೇವನನ್ನು ಕುರಿತು ಉಗ್ರ ತಪಸ್ಸನ್ನಾಚರಿಸಿದಳು. ಇದರಿಂದ ಸುಪ್ರೀತನಾದ ಮಹಾದೇವನು ಮಹಾಲಕ್ಷ್ಮಿಗೆ ವಿಷ್ಣುವಿನ ಹೃದಯದಲ್ಲಿ ಶಾಶ್ವತ ಸ್ಥಾನವನ್ನು ಕರುಣಿಸಿದ. ಶ್ರೀದೇವಿಯು ತಪಸ್ಸನ್ನಾಚರಿಸಿದ ಸ್ಥಳದಲ್ಲಿ ಬಿಲ್ವ ವೃಕ್ಷವೊಂದು ಬೆಳೆಯಿತು. ಈ ವೃಕ್ಷವು ಮಹಾಲಕ್ಷ್ಮಿ ಹಾಗೂ ಮಹಾದೇವನಿಗೆ ಅತ್ಯಂತ ಪ್ರೀತಿಪಾತ್ರದ್ದಾಯಿತು. ವಾಮನ ಪುರಾಣದ ಪ್ರಕಾರ ಶ್ರೀದೇವಿಯು ತಪಸ್ಸನ್ನಾಚರಿಸಿದ್ದು ಕಾಂಚೀಪುರದ ನೀಲಾ ನದಿಯ ದಡದಲ್ಲಿ ಸಮಸ್ತ ವಿಶ್ವದ ಒಳಿತಿಗಾಗಿ ಎಂದು. ಆ ಸ್ಥಳದಲ್ಲಿ ಅವಳ ಬಲ ಹಸ್ತದಿಂದ ಬಿಲ್ವವೃಕ್ಷವು ಮೊಳೆತಿತು. 
ಬೃಹದ್ಧರ್ಮ ಪುರಾಣದ ಪ್ರಕಾರ ಲಕ್ಷ್ಮಿಯು ಕಪಾಲಮೋಚನ ಕ್ಷೇತ್ರದಲ್ಲಿ ಶಿವನನ್ನು ಸಂತೋಷಪಡಿಸಲು ತಪಸ್ಸನ್ನಾಚರಿಸಿದಳು. ಇದರಿಂದ ಸುಪ್ರೀತನಾದ ಶಿವನು ಅವಳಿಗೆ ಅವಳ ಪ್ರೀತಿಪಾತ್ರ ಬಿಲ್ವ ವೃಕ್ಷವನ್ನು ಕರುಣಿಸಿದ ಎಂದು ವಿವರಿಸಲಾಗಿದೆ. 
ಅಗ್ನಿ ಪುರಾಣದ ಪ್ರಕಾರ, ಶ್ರೀದೇವಿಯು ಕಾಮಧೇನುವಿನ ರೂಪದಲ್ಲಿ ಕೊಲ್ಹಾಪುರದಲ್ಲಿ ಓಡಾಡುತ್ತಿದ್ದಾಗ ಕಾಮಧೇನುವಿನ ಸಗಣಿಯ ಮೇಲೆ ಬಿಲ್ವ ವೃಕ್ಷವು ಬೆಳೆಯಿತು. ಇದಲ್ಲದೇ ಸ್ಕಂದ ಪುರಾಣ , ಕಾಳಿಕಾ ಪುರಾಣ ಮತ್ತು ಬ್ರಹ್ಮಾಂಡ ಪುರಾಣಗಳಲ್ಲೂ ಲಕ್ಷ್ಮೀ ದೇವಿಯು ಬಿಲ್ವ ವನದಲ್ಲಿ ತಪಸ್ಸನ್ನಾಚರಿಸಿರುವುದನ್ನು ವಿವರಿಸಲಾಗಿದೆ. ಹೀಗೆ ಲಕ್ಷ್ಮಿಯು ಬಿಲ್ವ ವೃಕ್ಷದಲ್ಲಿ ವಾಸವಾಗಿರುವುದರಿಂದ ಅದರ ಫಲವು " ಶ್ರೀಫಲ / ಲಕ್ಷ್ಮೀ ಫಲ " ಎಂದು ಕರೆಯಲ್ಪಡುತ್ತದೆ. ಹೇಗೆ ಪಾರ್ವತೀ ದೇವಿಯು ತುಳಸಿ ಗಿಡದಲ್ಲಿ ಹಾಗೂ ಸರಸ್ವತಿಯು ನೆಲ್ಲಿಕಾಯಿ ಮರದಲ್ಲಿರುವರೋ ಅದೇ ರೀತಿ ಶ್ರೀದೇವಿಯೂ ಬಿಲ್ವ ವೃಕ್ಷದಲ್ಲಿ ನೆಲೆಸಿರುವಳು. ಬಿಲ್ವ ಪತ್ರೆಯು ಮೂರು ಎಲೆಗಳು ಅಥವಾ ದಳಗಳೊಂದಿಗೆ ತ್ರಿಮೂರ್ತಿಗಳನ್ನು ಹಾಗೂ ವೃಕ್ಷದ ಕಾಂಡದಲ್ಲಿ ಆದಿಶಕ್ತಿ ( ಜ್ಞಾನಭೈರವ ತಂತ್ರದ ಆರನೇ ಪಟಲದಲ್ಲಿ) ಗಳು ನೆಲೆಸಿರುವರು. ವೈಶಾಖ ಮಾಸದ ಶುಕ್ಲಪಕ್ಷದ ತೃತೀಯಾ ತಿಥಿಯಂದು ಬಿಲ್ವವೃಕ್ಷವು ಜನಿಸಿತೆಂದು ನಂಬಲಾಗಿದೆ. ಈ ದಿನವನ್ನು ಬಿಲ್ವ ಜಯಂತಿಯನ್ನಾಗಿ ಆಚರಿಸಲಾಗುವುದು. 
ಈ ಮಂತ್ರದಲ್ಲಿ ಬಿಲ್ವವನ್ನು " ವನಸ್ಪತಿ " ಎಂದು ಉಲ್ಲೇಖಿಸಲಾಗಿದೆ. ವನಸ್ಪತಿ ಎಂದರೆ ಪುಷ್ಪರಹಿತ ವೃಕ್ಷ ಆದರೆ ಫಲಗಳುಳ್ಳದ್ದು ಎಂದು ಅರ್ಥೈಸಲಾಗಿದೆ ( ಅಪುಷ್ಪಾಃ ಫಲವಂತಾಃ ). ಬಿಲ್ವ ವೃಕ್ಷವನ್ನು ಅದು ಔಷಧಿಯುಕ್ತ ಗುಣಗಳನ್ನು ಹೊಂದಿರುವುದರಿಂದ ವನಸ್ಪತಿ ಎಂದು ಕರೆಯಲಾಗಿದೆ. ಅನೇಕ ರೋಗಗಳನ್ನು ವಾಸಿಮಾಡುವ ಈ ವೃಕ್ಷದ ಶಕ್ತಿಯು ಮಹಾಲಕ್ಷ್ಮಿಯ ತಪಸ್ಸಿನಿಂದಾಗಿ ಎಂದು ವಿವರಿಸಬಹುದು. ಇದನ್ನು ತಾಂತ್ರಿಕ ರಸವಿದ್ಯೆಯಲ್ಲೂ ಮತ್ತು ಕಾಯಕಲ್ಪದಲ್ಲೂ ಉಪಯೋಗಿಸಲಾಗುತ್ತದೆ. 
"ತಪಸಾ ತಸ್ಯ ಫಲಾನಿ ಮಾ ಯಾ ಅಂತರಾ ಯಾಃ ಬಾಹ್ಯಾಃ ಚ ಅಲಕ್ಷ್ಮೀಃ ನುದಂತು " - " ತಪಸಾ " ಪದವನ್ನು ಸೂಕ್ತದಲ್ಲಿ ಎರಡನೇ ಬಾರಿ ಉಪಯೋಗಿಸಿರುವುದು ತಪಸ್ಸಿನ ಅರ್ಥದಲ್ಲಲ್ಲದೇ ಅನುಗ್ರಹ ಎಂಬ ಅರ್ಥದಲ್ಲಿ. ಅಥವಾ ಇದು ಉಪಾಸನೆ ಅಥವಾ ಪೂಜೆಯ ಮಾರ್ಗವೆಂದೂ ಅರ್ಥೈಸಬಹುದು. ಬಿಲ್ವ ಫಲವು ಮಹಾಲಕ್ಷ್ಮಿಯ ಪೂಜೆಯಲ್ಲಿ ನೈವೇದ್ಯವನ್ನಾಗಿ ಅರ್ಪಿತವಾಗಿ, ಆ ಫಲವು ಪೂಜಿಸುವವನ ದೌರ್ಭಾಗ್ಯವನ್ನು ಹೋಗಲಾಡಿಸುವ ಪಾವಿತ್ರ್ಯತೆಯನ್ನು ಪಡೆದಿದೆ ( ಶ್ರೀ ಸೂಕ್ತ ಭಾಷ್ಯ ). ಅಲಕ್ಷ್ಮಿ ಪದದ ಬಗ್ಗೆ ನಾವೀಗಾಗಲೇ ವಿವರಿಸಿದ್ದೇವೆ. ಈ ಮಂತ್ರದಲ್ಲಿ ಎರಡು ರೀತಿಯ ಅಲಕ್ಷ್ಮಿಯರು ಬರುವರು. ಅವರೇ ಅಂತರಂಗದ ಅಲಕ್ಷ್ಮಿ ಹಾಗೂ ಬಹಿರಂಗದ ಅಲಕ್ಷ್ಮಿಯರು. ಅಂತರಂಗದ ಅಲಕ್ಷ್ಮಿಯು ಅಹಂಕಾರ , ವಿಷಯಾಸಕ್ತಿ , ಅಜ್ಞಾನ , ದುರಾಸೆ ಹಾಗೂ ಇತರ ದುಶ್ಚಟಗಳು. ಬಾಹ್ಯ ಅಲಕ್ಷ್ಮಿಯೆಂದರೆ ಪಾಪ ಕಾರ್ಯಗಳು , ಕೊಳಕು , ಸೋಮಾರಿತನ , ರೋಗರುಜಿನಗಳು , ಬಡತನ ಹಾಗೂ ವೇದಬಾಹಿರ ಕೃತ್ಯಗಳನ್ನು ಮಾಡುವುದು. ಹೀಗೆ ಭಕ್ತನು ಶ್ರೀದೇವಿಯಲ್ಲಿ ಆಕೆಯ ಅಪಾರ ಕರುಣೆಯನ್ನು ಹರಿಸಿ ತನ್ನನ್ನು ಅಲಕ್ಷ್ಮಿಯಿಂದ ಸಂಪೂರ್ಣವಾಗಿ ದೂರಮಾಡುವಂತೆ ಪ್ರಾರ್ಥಿಸುವನು. ಇಲ್ಲಿ " ಮಾ " ಪದವನ್ನು "ಮಾಮ್" ( ನನಗೆ ) ಅಥವಾ ಮಯಿ ( ನನ್ನಲ್ಲಿ ) ಎಂಬ ಅರ್ಥದಲ್ಲಿ ಉಪಯೋಗಿಸಲಾಗಿದೆ. ಸಾಧಕನು ತನ್ನಲ್ಲಿರುವ ಅಶ್ರೀ ಯನ್ನು ನಿವಾರಿಸುವಂತೆ ಬೇಡಿಕೊಳ್ಳುವನು. 
ಮತ್ತೊಂದು ರೀತಿಯಲ್ಲಿ ಮೇಲೆ ತಿಳಿಸಿರುವ ಮಂತ್ರವನ್ನು ಈ ರೀತಿಯಾಗಿ ವಿಭಾಗ ಮಾಡುವುದು :- " ಮಾಯಾ ಅಂತರಾಯಾಃ ಚ ಬಾಹ್ಯಾಃ ಅಲಕ್ಷ್ಮೀಃ ". ಇಲ್ಲಿ ಮಾಯ ಪದವು ಅಜ್ಞಾನವನ್ನು ಅಥವಾ ದ್ವೈತವನ್ನು ಸೂಚಿಸು ತ್ತದೆ. ಅಂತರಾಯಾಃ ಪದವು ಅಜ್ಞಾನ ಮತ್ತು ದ್ವೈತದಿಂದುಂಟಾಗುವ ನೋವುಗಳ ಬಗ್ಗೆ ವಿವರಿಸುತ್ತದೆ. ಹೀಗಾಗಿ ಭಕ್ತನು ಶ್ರೀದೇವಿಯನ್ನು ಈ ವಿಧದ ಅಲಕ್ಷ್ಮಿಯನ್ನು ಹೊರದೂಡುವಂತೆ ಬೇಡಿಕೊಳ್ಳುವನು. 
ಆರನೇ ಮಂತ್ರದ ಧ್ಯಾನ ಶ್ಲೋಕವನ್ನು ಉದಯಿಸುವ ಸೂರ್ಯನಂತೆ ಕಾಂತಿಬೀರುವ, ಬಿಲ್ವ ವನದ ಮಧ್ಯದಲ್ಲಿ ವಾಸಿಸುವ, ಭಕ್ತರನ್ನು ಅಜ್ಞಾನ, ರೋಗರುಜಿನ ಮತ್ತು ದೌರ್ಭಾಗ್ಯಗಳಿಂದ ಪಾರುಮಾಡುವ ದೇವಿಗೆ ಅರ್ಪಿಸಲಾಗಿದೆ. 
" ಉದಯಾದಿತ್ಯ ಸಂಕಾಶಂ ಬಿಲ್ವ ಕಾನನ ಮಧ್ಯಗಾಂ |
ತನು ಮಧ್ಯಾ ಶ್ರಿಯಂ ಧ್ಯಾಯೇದ್ ಲಕ್ಷ್ಮೀ ಪರಿಹಾರಿಣಿಮ್ "||
ಈ ಮಂತ್ರದ ಋಷಿ - ಆನಂದ; ಛಂದಸ್ಸು - ತ್ರಿಷ್ಟುಪ್ ; ದೈವ - ಶ್ರೀ ಮಹಾಲಕ್ಷ್ಮಿ ; ಬೀಜ - ಆಮ್ ; ಶಕ್ತಿ - ಶ್ರೀಮ್ ; ಕೀಲಕ - ಹ್ರೀಮ್. ವಿನಿಯೋಗವು ಆರೋಗ್ಯ ಐಶ್ವರ್ಯ ಅಭಿವೃದ್ಧಿ.
************
ಶ್ಲೋಕ - 7 - ಸಂಸ್ಕೃತದಲ್ಲಿ : ಉಪೈತು ಮಾಂ ದೇವಸಖಃ ಕೀರ್ತಿಶ್ಚ ಮಣಿನಾ ಸಹ |
ಪ್ರಾದುರ್ಭೂತೋ‌sಸ್ಮಿ ರಾಷ್ಟ್ರೇ‌sಸ್ಮಿನ್ ಕೀರ್ತಿಮೃದ್ಧಿಂ ದದಾತು ಮೇ ||

ಕನ್ನಡದಲ್ಲಿ : ದೇವಸಖನೆನ್ನೆಡೆಗೆ ಬರಲಿ ಕೀರ್ತಿ ಚಿಂತಾಮಣಿಯ ಕೂಡಿ
ಈ ದೇಶದಲಿ ಜನಿಸಿ ಬಂದಿಹೆನು ಕೀರ್ತಿ ಏಳಿಗೆಯ ಕೊಡಲಿ

ತಾತ್ಪರ್ಯ :
ಓ ಲಕ್ಷ್ಮಿಯೇ ! ಮಹಾದೇವನ ಮಿತ್ರನಾದ ಕುಬೇರನು ಕೀರ್ತಿಯ ಅಭಿಮಾನಿನಿಯಾದ ದೇವತೆಯೊಡನೆಯೂ ಕೋಶಾಧ್ಯಕ್ಷನಾದ ಮಣಿಭದ್ರನೊಡನೆಯೂ ಚಿಂತಾಮಣಿಯೊಡನೆಯೂ ನನ್ನನ್ನು ಬಂದು ಸೇರಲಿ. ನಾನು ಮರ್ತ್ಯ ಲೋಕವಾದ ಈ ರಾಷ್ಟ್ರದಲ್ಲಿ ಹುಟ್ಟಿದವನಾಗಿದ್ದೇನೆ. ಆ ಕುಬೇರನು ನನಗೆ ಕೀರ್ತಿಯನ್ನೂ ಧನಸಮೃದ್ಧಿಯನ್ನೂ ನೀಡಲಿ. ಈ ಮಂತ್ರಸಿದ್ಧಿಯಿಂದ ಕೀರ್ತಿ ಮತ್ತು ಧನಸಂಪತ್ತು ಸಿದ್ಧಿಸುತ್ತದೆ.

ವ್ಯಾಖ್ಯಾನ : "ದೇವಸಖಃ" - ಅಂದರೆ ಭಗವಂತನ ಮಿತ್ರ. ಇದು ಸಂಪತ್ತಿನ ಒಡೆಯ ಹಾಗೂ ಮಹಾದೇವನ ಮಿತ್ರ ಕುಬೇರನನ್ನು ಸೂಚಿಸುತ್ತದೆ (ದೇವಶಬ್ದೋ ಮಹಾದೇವೇ ರೂಢಾಃ ಕುಬೇರಃ ತ್ರ್ಯಂಬಕಸಖಾಃ - ಆನಂದವಲ್ಲಿ ವ್ಯಾಖ್ಯಾನ ). ಕುಬೇರನು ವಿಶ್ರವಸ್ ಮತ್ತು ಇಲವಿದಾ ದಂಪತಿಗಳಿಗೆ ಪುತ್ರನಾಗಿ ಜನಿಸಿದ್ದನು. ಅವನು ತೀಕ್ಷ್ಣ ತಪಸ್ಸಿನಿಂದ ಶಿವನನ್ನು ಸಂತೃಪ್ತಿಪಡಿಸಿ ಅವನ ದಯೆಯಿಂದ ವಿಶ್ವದ ಸಕಲ ಸಂಪತ್ತಿಗೂ ಒಡೆಯನಾದನು. ಮಹಾದೇವನು ಕುಬೇರನ ಸಾತ್ವಿಕ ಸ್ವಭಾವವನ್ನು ಮೆಚ್ಚಿ ಅವನನ್ನು ಉತ್ತರ ದಿಕ್ಕಿಗೆ ಅಧಿಪತಿಯನ್ನಾಗಿ ನೇಮಿಸಿ ಅವನನ್ನು ತನ್ನ ಮಿತ್ರನೆಂದು ಕರೆದು ಅವನ ಗೌರವವನ್ನು ಹೆಚ್ಚುಮಾಡಿದನು (ಈಶಾನ ಸಂಹಿತ). ರುದ್ರನ ಆಣತಿಯಂತೆ ಲಕ್ಷ್ಮಿಯು ಕುಬೇರನೊಡನೆ ಶಾಶ್ವತವಾಗಿ ನೆಲೆಸಲು ಸಮ್ಮತಿಸಿದಳು.
ಕುಬೇರನನ್ನು ಆಹ್ವಾನಿಸಿ, ಅವನಲ್ಲಿರುವ ಸಂಪತ್ತು, ಸಾತ್ವಿಕ ಗುಣಗಳು ಹಾಗೂ ಅವನಲ್ಲಿರುವ ನವನಿಧಿಗಳನ್ನು ವೀಕ್ಷಿಸಬಹುದು. ಶ್ರೀದೇವಿಯ ಅನುಗ್ರಹವಿಲ್ಲದೇ ಯಾರೂ ಈ ವಿಧದ ಸಂಪತ್ತನ್ನು ಹೊಂದಲಾಗುವುದಿಲ್ಲ. ನಾವು ಈಗಾಗಲೇ ಶ್ರೀದೇವಿಯನ್ನು ಈ ಸೂಕ್ತದ ಮೂಲಕ ಆಹ್ವಾನಿಸಿ ಅವಳ ಅನುಗ್ರಹವನ್ನು ಪಡೆದಿರುವುದರಿಂದ, ಅವಳೊಡನಿರುವ ಸಂಪತ್ತನ್ನೂ ಆಹ್ವಾನಿಸಲು ಸಿದ್ಧವಾಗಿರುವೆವು. ಈಶಾನಸಂಹಿತದಲ್ಲಿ ವಿವರಿಸಿರುವಂತೆ ಕುಬೇರನು ಸಂಪತ್ತನ್ನು ಯೋಗ್ಯ ಭಕ್ತನಿಗೆ ನೀಡಲು ಅಧಿಕಾರವುಳ್ಳವನು. ಹೀಗಾಗಿ ಕುಬೇರನನ್ನು ಪ್ರಾರ್ಥಿಸುವುದು.
"ಕೀರ್ತಿ " - ಖ್ಯಾತಿ ಮತ್ತು ಜನಪ್ರಿಯತೆಯ ದೇವತೆ. ಈ ದೇವತೆಯ ಅನುಗ್ರಹದಿಂದಲೇ ಯಾರಾದರೂ ಒಳ್ಳೆಯ ಕೆಲಸಗಳನ್ನು ಮಾಡಿ ಹೆಸರು ಮತ್ತು ಖ್ಯಾತಿಯನ್ನು ಗಳಿಸುವರು ( ಕೀರ್ತ್ಯಾಭಿಮಾನಿನೀ ತದಾಖ್ಯಾ ಯಶೋಭಿಮಾನಿ ದೇವತಾ ). ಈಕೆಯು ದಕ್ಷಪ್ರಜಾಪತಿಯ ಮಗಳು ಹಾಗೂ ಯಮನ ಪತ್ನಿ. ಈಕೆಯು ಶ್ರೀದೇವಿಯ ಪರಿವಾರ ದೇವತೆಗಳಲ್ಲೊಬ್ಬಳು. ಆಕೆಯ ಸಂಗಾತಿಗಳೆಂದರೆ - ಮತಿ (ಬುದ್ಧಿಶಕ್ತಿ), ದ್ಯುತಿ (ಹೊಳಪು) , ಪುಷ್ಟಿ ( ಪೋಷಣೆ ), ಸಮೃದ್ಧಿ (ಉತ್ಕರ್ಷ), ತುಷ್ಟಿ ( ತೃಪ್ತಿಯಿಂದುಂಟಾಗುವ ಆನಂದ ) , ಆರೋಗ್ಯ , ಜಯ , ಶ್ರದ್ಧ.
" ಮಣಿನಾ ಸಹ " - ಮಣಿ ಎಂಬುದು ಒಂದು ಒಡವೆ, ಇದನ್ನು ಧರಿಸಿದವನ ದುರ್ದೈವ ಮತ್ತು ಪಾಪಗಳು ನಿವಾರಣೆಯಾಗುವುದು ( ಧಾರಣಾತ್ ಪಾಪಾಲ್ಲಾಕ್ಸ್ಮೀ ವಿನಾಶಕಮ್ - ರಾಜವಲ್ಲಭ ). ಇಲ್ಲಿ ವಿವರಿಸಿರುವ ಮಣಿಯು ಚಿಂತಾಮಣಿ - ಇಚ್ಛೆಗಳನ್ನು ಈಡೇರಿಸುವ ಮಣಿ. ಇದೂ ಕೂಡಾ ಸಮುದ್ರಮಥನದ ಸಮಯದಲ್ಲಿ ಮಹಾಲಕ್ಷ್ಮಿಯೊಡನೆ ಹೊರಬಂದಿತು ಹಾಗಾಗಿ ಇದನ್ನು ಲಕ್ಷ್ಮಿಯ ಅಂಶವೆಂದೇ ಪರಿಗಣಿಸಲಾಗಿದೆ. ಅಲ್ಲದೇ ಕಾಮಧೇನು , ಕಲ್ಪವೃಕ್ಷ , ಸುಧಾ , ಐರಾವತ, ಉಚ್ಚೈಶ್ರವಸ್ , ಅಪ್ಸರ , ಕೌಸ್ಥುಭ ಮತ್ತು ಚಂದ್ರ ಇವೆಲ್ಲವನ್ನೂ ಶ್ರೀದೇವಿಯ ಅಂಶಗಳೇ (ಸೌರಸಂಹಿತ ) . ದೇವಸಖ ಪದದೊಂದಿಗೆ ಮಣಿ ಪದವನ್ನು ಜೋಡಣೆ ಮಾಡಿದಾಗ ಹೆಚ್ಚಿನ ಮಹತ್ವವುಂಟಾಗುವುದು. ಅರ್ಧ ದೇವತೆಗಳಾದ ಯಕ್ಷರ ಪ್ರಭುವೇ ಕುಬೇರ. ಮಣಿಭದ್ರನು ಒಬ್ಬ ಯಕ್ಷ ಹಾಗೂ ಕುಬೇರನ ಆಸ್ಥಾನದಲ್ಲಿನ ಒಬ್ಬ ಮಂತ್ರಿ ಹಾಗೂ ಈ ಯಕ್ಷನು ಕುಬೇರನ ನವನಿಧಿಗಳನ್ನು ರಕ್ಷಿಸುವವನು. ಈತನು ಯಾತ್ರಿಗಳನ್ನೂ ರಕ್ಷಿಸುವವನು. ಮಹಾಭಾರತದಲ್ಲಿ ಈ ಯಕ್ಷನನ್ನು ಜಲಪಾತಗಳು ಹಾಗೂ ವನಗಳ ದೇವತೆ ಎಂಬುದಾಗಿ ಗುರುತಿಸಲಾಗಿದೆ. ಪೂರ್ವಕಾಲದಲ್ಲಿ ಜನಗಳು ಈ ಯಕ್ಷನ ಅನುಗ್ರಹಕ್ಕಾಗಿ ಕ್ರಮವಾಗಿ ಪೂಜಿಸುತ್ತಿದ್ದರು ( ತಥಾ ನೋ ಯಕ್ಷರಾದ್ ಅದ್ಯ ಮಣಿಭದ್ರಾಃ ಪ್ರಸೀದತು - ಮಹಾಭಾರತ 3, 64 , 127 ).
" ಉಪೈತು " - ಉಪ + ಐತು - ಅಂದರೆ " ನನ್ನ ಬಳಿ ಬಾ" ಅಥವಾ " ನನ್ನನ್ನು ಸೇರು " ಎಂದು. ಕುಬೇರ ಮಣಿಭದ್ರ ಮತ್ತು ಕೀರ್ತಿ ಗಳು ಶ್ರೀದೇವಿಯ ಪರಿವಾರ ದೇವತೆಗಳಾದ್ದರಿಂದ ಅವರು ಜನಗಳಿಂದ ಗೌರವಿಸಲ್ಪಡುವರು. ಹಾಗಾಗಿ ಅವರುಗಳಿಗೆ ಉಪೈತು ಎಂಬುದಾಗಿ ವಿಶೇಷ ಆಹ್ವಾನ. ಪ್ರಾದುರ್ಭೂತಃ ಅಸ್ಮಿ ಆಸ್ಮಿನ್ ರಾಷ್ಟ್ರೆ - " ನಾನು ಮೊದಲು ಮಾಡಿದ್ದು , ಈ ರಾಷ್ಟ್ರದಲ್ಲಿ ಹುಟ್ಟಿದ್ದು ". ರಾಷ್ಟ್ರ ಎಂದರೆ ಇಲ್ಲಿ ಭೂಮಿಯೆಂದು. ಆದಾಗ್ಯೂ ಇದು ಹಿರಣ್ಯಲೋಕವನ್ನು ಸೂಚಿಸುತ್ತದೆ ಹಾಗೂ ಮಹೋನ್ನತ ಅರಿವಿನ ಅಂತಸ್ತು, ಕೇವಲ ಶ್ರೀದೇವಿಯ ಅನುಗ್ರಹದಿಂದ ಪಡೆದದ್ದು. ಶ್ರೀದೇವಿಯ ಅನುಗ್ರಹವನ್ನು ಪಡೆದ ಸಾಧಕನು ಎಲ್ಲ ವಿಧದ ಅಜ್ಞಾನ ಮತ್ತು ಉಭಯತ್ವಗಳಿಂದ ಪಾರಾಗಿ ಅವನು ಈಗ ಹೆಚ್ಚಿನ ಅರಿವಿನ ಸ್ತರವನ್ನು ತಲುಪಿರುವನು. ಅವನಿಗೆ ಇದು ಹೊಸಜನ್ಮದಂತೆ ಭಾಸವಾಗಿರುವುದು. ಸಾಧಕನು ಈಗ ಶ್ರೀದೇವಿಯ ರಾಜ್ಯದಲ್ಲಿರುವನು.
ಕೆಲವು ವ್ಯಾಖ್ಯಾನಕಾರರು ಇದನ್ನು ಶ್ರೀ ಮಹಾತ್ರಿಪುರಸುಂದರಿಯ ಶ್ರಿಂಗಾರ ಲೋಕವನ್ನಾಗಿ ಗುರುತಿಸಿದ್ದಾರೆ. ಭೈರವಯಮಳದಲ್ಲಿ ವಿವರಿಸಿರುವಂತೆ ಸಾಧಕನು ತೇವ ಅಥವಾ ಒದ್ದೆಯಾದ ಮೇಲೆ ಹಿರಣ್ಯ ಲೋಕವನ್ನು ತಲುಪುವನು. ಈ ವಿಧದ ತೇವ ಸ್ಥಿತಿಯು ಕುಂಡಲಿನಿಯು ಪರಶಿವನೊಂದಿಗೆ ಒಂದಾದಾಗ ಹರಿಯುವುದು ಹಾಗೂ ಕುಲಾಮೃತನಿಂದಾಗಿ ಉಂಟಾಗುವುದು.
" ಕೀರ್ತಿಂ ರಿದ್ಧಿಂ ದದಾತು ಮೇ " - ಇಲ್ಲಿ ಕೀರ್ತಿ ಎಂದರೆ ಪ್ರಖ್ಯಾತಿ ಎಂಬುದಾಗಿ. ರಿದ್ಧಿ ಎಂದರೆ ಸಮೃದ್ಧಿ ಅಥವಾ ಅಭಿವೃದ್ಧಿ. ಈ ಹಂತದಲ್ಲಿ ಎಲ್ಲವಿಧವಾದ ವೈಭೋಗಗಳನ್ನೂ ಅನುಭವಿಸುವ ಸ್ಥಿತಿ. ರಿದ್ಧಿ ಎಂಬುದು ಅಣಿಮಾ ಮತ್ತು ಇತರೆ ಸಿದ್ಧಿಗಳನ್ನೂ ಸೂಚಿಸುವುದು ( ರಿದ್ಧಿಃ ಅಷ್ಟೈಶ್ವರ್ಯಸಮೃದ್ಧಿಃ ). ಕೀರ್ತಿಯಂತೆ ರಿದ್ಧಿಯೂ ಶ್ರೀದೇವಿಯ ಪರಿವಾರ ಹಾಗೂ ಕುಬೇರನ ಪತ್ನಿಯೆಂದು ಗುರುತಿಸಲಾಗಿದೆ ( ಮಹಾಭಾರತ ಮತ್ತು ಹರಿವಂಶ ). ಹೀಗೆ ಶ್ರೀದೇವಿಯನ್ನು ಭೂಮಿಯಲ್ಲಿ ಜನ್ಮಿಸಿದವರೆಲ್ಲರಿಗೂ ಸಿದ್ಧಿ , ಸಮೃದ್ಧಿ , ರಿದ್ಧಿ ಮತ್ತು ಕೀರ್ತಿಗಳನ್ನು ನೀಡುವಂತೆ ಪ್ರಾರ್ಥಿಸುವುದು.

ಏಳನೇ ಮಂತ್ರದ ಧ್ಯಾನ ಶ್ಲೋಕ : ಈ ಮಂತ್ರದ ಧ್ಯಾನ ಶ್ಲೋಕವನ್ನು ಮಣಿಮಾಲಿನಿಗೆ ಅರ್ಪಿಸಲಾಗಿದೆ. ಮಣಿಮಾಲಿನಿಯು ಸಮಸ್ತ ದೇವತೆಗಳಿಗೆ ಪ್ರಿಯಳು ಹಾಗೂ ಇವಳು ರಾಜರಾಜೆಶ್ವರಿ ಮತ್ತು ಲಕ್ಷ್ಮಿಯೂ ಹೌದು ಮತ್ತು ಇವಳು ಖ್ಯಾತಿ, ಸಂಪತ್ತು ಮತ್ತು ಆಸೆಗಳನ್ನು ಕರುಣಿಸುವಳು. ಮಣಿಮಾಲಿನಿಯು ದೇವಿಯ ಅನೇಕ ನಾಮಗಳಲ್ಲೊಂದು.
" ರಾಜರಾಜೇಶ್ವರೀಂ ಲಕ್ಷ್ಮೀಮ್ ವರದಾಂ ಮಣಿಮಾಲಿನೀಂ|
ದೇವೀಂ ದೇವಪ್ರಿಯಾಂ ಕೀರ್ತಿಂ ವಂದೇ ಕಾಮ್ಯಾರ್ಥ ಸಿದ್ಧಯೇ " ||
ಈ ಮಂತ್ರದ - ಋಷಿ - ಕುಬೇರ ; ಛಂದಸ್ಸು - ಅನುಷ್ಟುಪ್ ; ದೇವತೆ - ಮಣಿಮಾಲಿನಿ ಮಹಾಲಕ್ಷ್ಮಿ ; ಬೀಜ - ಓಂ, ಶ್ರೀಂ ; ಶಕ್ತಿ - ಮಂ ಮತ್ತು ಬ್ಲಂ ;
ಕೀಲಕ - ಶ್ರೀಂ. ಮಂತ್ರದ ವಿನಿಯೋಗವು ರತ್ನ ಸಿದ್ಧಿ ಭೂತ ಭಯ ನಿವಾರಣ.
********
ಶ್ಲೋಕ - 8 - ಸಂಸ್ಕೃತದಲ್ಲಿ : ಕ್ಷುತ್ಪಿಪಾಸಾಮಲಾಂ ಜ್ಯೇಷ್ಠಾಮಲಕ್ಷೀಂ ನಾಶಯಾಮ್ಯಹಮ್ |
ಅಭೂತಿಮಸಮೃದ್ಧಿಂ ಚ ಸರ್ವಾಂ ನಿರ್ಣುದ ಮೇ ಗೃಹಾತ್ ||
ಕನ್ನಡದಲ್ಲಿ : ಹಸಿವು ಕೊಳಕು ಹಿರಿಯಕ್ಕ ಜ್ಯೇಷ್ಠೆಯನು ಬಡತನವನೋಡಿಸುವೆ ನಾನು
ಪತನಗೊಳಿಪ ಹೊರೆ ಕೊರತೆಗಳೆಲ್ಲ ತೊಲಗಿಸೆನ್ನ ಮನೆಯಿಂದ ನೀನು

ತಾತ್ಪರ್ಯ : ಓ ಲಕ್ಷ್ಮೀ ದೇವಿಯೇ ! ಹಸಿವು ಮತ್ತು ಬಾಯಾರಿಕೆಗಳಿಂದ ಮಲಿನಳಾದ ಜ್ಯೇಷ್ಠಾಲಕ್ಷ್ಮಿಯನ್ನೂ ಅಲಕ್ಷ್ಮಿಯನ್ನೂ ನಾನು ನಾಶಮಾಡುತ್ತೇನೆ. ಓ ಲಕ್ಷ್ಮೀ ದೇವಿಯೇ ! ನೀನು ಸರ್ವವಿಧವಾದ ಅಸಂಪತ್ತಿಯನ್ನೂ ಅಸಮೃದ್ಧಿಯನ್ನೂ ನನ್ನ ಮನೆಯಿಂದ ಹೊರದೂಡು. ಈ ಮಂತ್ರಸಿದ್ಧಿಯಿಂದ ಹಸಿವು ಮತ್ತು ಬಾಯಾರಿಕೆಗಳು ದೂರವಾಗಿ ಸರ್ವವಿಧವಾದ ಅಸಂಪತ್ತಿ ಮತ್ತು ಅಸಮೃದ್ಧಿಗಳು ಇಲ್ಲವಾಗುತ್ತವೆ.

ವ್ಯಾಖ್ಯಾನ : ಜ್ಯೇಷ್ಠಾದೇವಿಯು ತನ್ನೊಡನೆ ಹಸಿವು ಬಾಯಾರಿಕೆ ಬಡತನ ಅನಾರೋಗ್ಯ ಮತ್ತು ದುಷ್ಟ ಆಲೋಚನೆಗಳನ್ನು ತರುತ್ತಾಳೆ. ಪದ್ಮಪುರಾಣದಲ್ಲಿ ಅವಳನ್ನು ಕುರೂಪಿ ಅಸಹ್ಯಕರವಾದ ರೂಪವನ್ನುಳ್ಳವಳೆಂದು ವರ್ಣಿಸಲಾಗಿದೆ. ಸಮುದ್ರಮಥನದಲ್ಲಿ ಅವಳು ಹೊರಬರುವಾಗ ಕೆಂಪು ಸೀರೆಯುಟ್ಟು ಕೆಂಪು ಹೂವನ್ನು ಮುಡಿದಿದ್ದಳು. ಹೊರಬಂದವಳು ದೇವತೆಗಳ ಬಳಿ ಬಂದಾಗ ಅವರು ಅವಳನ್ನು ಕೊಳಕು ಪ್ರದೇಶದಲ್ಲಿ ಹಾಗೂ ದುಷ್ಟರು ಇರುವ ಪ್ರದೇಶದಲ್ಲಿ ವಾಸಿಸುವಂತೆ ತಿಳಿಸಿದರು. ಶ್ರೀಲಕ್ಷ್ಮಿಯು ರೋಹಿಣಿ ನಕ್ಷತ್ರವನ್ನು ಮೆಚ್ಚಿದರೆ ಜೇಷ್ಟಾ ದೇವಿಯು ಜ್ಯೇಷ್ಟಾ ನಕ್ಷತ್ರವನ್ನು ನಿಯಂತ್ರಣದಲ್ಲಿಟ್ಟು ಕೊಂಡಿರುವಳು. ಈ ನಕ್ಷತ್ರದಲ್ಲಿ ಯಾವ ಶುಭ ಕಾರ್ಯಗಳನ್ನೂ ಪ್ರಾರಂಭಿಸುವುದಿಲ್ಲ.
" ಅಭೂತಿ " ಎಂದರೆ ಅನೈಶ್ವರ್ಯ (ಬಡತನ). ಇದನ್ನು ಅಸಂಭೂತಿ ಅಥವಾ ಸೋಲು ಎಂದೂ ವಿವರಿಸಲ್ಪಡುವುದು. ಅಸಮೃದ್ಧಿ ಎಂದರೆ ಅಭ್ಯುದಯವಾಗದ ಅಥವಾ ಬೆಳವಣಿಗೆ ಇಲ್ಲದ ( ವೃದ್ಧಿರಾಹಿತ್ಯ - ಪೃಥ್ವೀಧರ ಭಾಷ್ಯ ). ಸಾಧಕನು ಶ್ರೀದೇವಿಯಲ್ಲಿ ಇವುಗಳನ್ನು ತನ್ನ ಮನೆಯಿಂದ ಹೊರದೂಡುವಂತೆ ಪ್ರಾರ್ಥಿಸುತ್ತಾನೆ.

ಧ್ಯಾನ ಶ್ಲೋಕ : ಎಂಟನೇ ಮಂತ್ರದ ಧ್ಯಾನ ಶ್ಲೋಕವನ್ನು ಗರುಡ, ಹಾಗೂ ಅಜ್ಞಾನ ಮತ್ತು ದುಃಖವನ್ನು ನಾಶಮಾಡುವ "ಸೂರ್ಯ ಪಕ್ಷಿಗಳ" ರಾಜನಾದ ಸುಪರ್ಣರಿಗೆ ಅರ್ಪಿಸಲಾಗಿದೆ.
" ಅಜ್ಞಾನ ಪಥಕ ತಮಃ ಸ್ಥಿತಿ ಸೂರ್ಯ ರಶ್ಮಿಂ
ದೌರ್ಭಾಗ್ಯ ಭುಧರ ವಿದರಣ ವಜ್ರಮೀಡೇ |
ರಾಗಾರ್ತಿ ಘೋರ ಫಣಿ ಮರ್ದನ ಪಕ್ಷಿ ರಾಜಂ
ಲಕ್ಷ್ಮೀ ಪದದ್ವಯ ಅನರ್ಥಹರಂ ಸುಖಾರ್ಥಿ " ||
ಈ ಮಂತ್ರದ :- ಋಷಿ - ಶ್ರೀ ಮಹಾವಿಷ್ಣು; ಛಂದಸ್ಸು - ಅನುಷ್ಟುಪ್ ; ದೇವತೆ - ಸರ್ವೈಶ್ವರ್ಯಕಾರಿಣಿ ಮಹಾಲಕ್ಷ್ಮಿ;
ಬೀಜ - ಕ್ಷುಂ ; ಶಕ್ತಿ - ಹಾಂ ; ಕೀಲಕ - ಶ್ರೀಂ. ಕೆಲವರು ಈ ಮಂತ್ರದ ಬೀಜವನ್ನು - "ರಂ -ಹ್ರೀಂ - ಶ್ರೀಂ- ಹ್ರೀಂ -ರಂ" ಎಂದು ಜಪ ಮತ್ತು ನ್ಯಾಸದ ಸಂದರ್ಭದಲ್ಲಿ ಸ್ತುತಿಸುತ್ತಾರೆ. ಈ ಮಂತ್ರದ ವಿನಿಯೋಗವು ಅಲಕ್ಷ್ಮಿ ನಾಶಂ.
***********
ಶ್ಲೋಕ - 9 - ಸಂಸ್ಕೃತದಲ್ಲಿ : ಗಂಧದ್ವಾರಾಂ ದುರಾಧರ್ಷಾಂ ನಿತ್ಯಪುಷ್ಟಾಂ ಕರೀಷಿಣೀಮ್ |
ಈಶ್ವರೀಗ್‍ಮ್ ಸರ್ವಭೂತಾನಾಂ ತಾಮಿಹೋಪಹ್ವಯೇ ಶ್ರಿಯಮ್ ||

ಕನ್ನಡದಲ್ಲಿ : ಮಣ್ಣ ಕಂಪಲಿ ನೆಲೆಸಿ ಅಂಕೆಗಳ ಧಿಕ್ಕರಿಸಿ ಜೀವ ಪೋಷಿಸುವ ಸೃಷ್ಟಿಕರ್ತೆ
ಎಲ್ಲ ಜೀವಕುಲಗಳೊಡತಿ ಸಿರಿದೇವಿಯನು ಕರೆವೆನಿತ್ತೆ

ತಾತ್ಪರ್ಯ : ಗಂಧಗುಣವೇ ಲಕ್ಷಣವಾಗಿ ಉಳ್ಳವಳೂ ಪೃಥ್ವೀರೂಪಳೂ ಯಾರಿಂದಲೂ ದರ್ಶಿಸಲು ಸಾಧ್ಯವಾಗದವಳೂ ನಿತ್ಯಸಮೃದ್ಧಿಸಂಪನ್ನಳೂ ಒಣಗಿರುವ ಗೋಮಯಪಿಂಡವುಳ್ಳವಳೂ (ಕರೀಷ = ಒಣಗಿದ ಸಗಣಿ ಅಥವಾ ಬೆರಣಿ) ಅಂದರೆ ಗವಾಶ್ಚಾದಿ ಸಮೃದ್ಧಿ ಸಂಪನ್ನಳೂ ಸಮಸ್ತ ಪ್ರಾಣಿಗಳ ಅಧಿಷ್ಠಾತ್ರಿಯಾದ ನಿಯಾಮಕಳೂ ಆದ ಆ ಲಕ್ಷ್ಮೀದೇವಿಯನ್ನು ಇಲ್ಲಿಗೆ ಆಹ್ವಾನಿಸುತ್ತೇನೆ. ಈ ಮಂತ್ರಸಿದ್ಧಿಯಿಂದ ಧನಧಾನ್ಯಪಶ್ವಾದಿ ಸಮೃದ್ಧಿಯು ಉಂಟಾಗುತ್ತದೆ.

ವ್ಯಾಖ್ಯಾನ : " ಗಂಧದ್ವಾರಾಂ ದುರಾಧರ್ಷಾಂ " - ವಾಸನೆಯ ಗ್ರಹಿಕೆಯು ( ಗಂಧ ) ಪೃಥ್ವಿ ತತ್ತ್ವ ಅಥವಾ ಭೂಮಿಯ ಅಂಶ ( ಘ್ರಾಣಗ್ರಾಹ್ಯೋ ಗುಣಃ ಗಂಧಃ ). ಶ್ರೀಲಕ್ಷ್ಮಿಯು ಘ್ರಾಣೇಂದ್ರಿಯಕ್ಕೆ ದ್ವಾರದಂತೆ ಹೀಗಾಗಿ ಅವಳನ್ನು ಪೃಥ್ವೀ ಅಥವಾ ಭೂಮಾತೆಯೆಂದು ಗುರುತಿಸಲಾಗಿದೆ. ಭೂ ಎಂಬುದು ಲಕ್ಷ್ಮಿಯ ಒಂದು ರೂಪ. ಅವಳನ್ನು ವಸುಧಾಲಕ್ಷ್ಮಿ ಅಥವಾ ವಸುಂಧರಾ ಎಂದೂ ಪೂಜಿಸುವರು. ಭೂಮಿಯ ವಿಶೇಷ ಗುಣಗಳೆಂದರೆ ಕ್ಷಮಾಗುಣ (ಕ್ಷಮಯಾ ಧರಿತ್ರಿ ), ತಾಳ್ಮೆ ಮತ್ತು ಎಲ್ಲ ಜೀವಿಗಳಲ್ಲೂ ಸಮಾನ ಪ್ರೀತಿ. ಯಾರಿಂದಲೂ ಭೂಮಿಯ ತಾಳ್ಮೆಯನ್ನು ನಾಶಮಾಡಲು ಅಸಾಧ್ಯವೆಂಬುದನ್ನು ತೋರಿಸಲು ಈ ಮಂತ್ರದಲ್ಲಿ
" ದುರಾಧರ್ಷಾ " ಪದವನ್ನು ಉಪಯೋಗಿಸಲಾಗಿದೆ ( ಕೇನಾಪಿ ಧರ್ಷಿತುಂ ಅಶಕ್ಯಂ ). ಯಾವುದೇ ಜೀವಿಯು ಭೂಮಿಯನ್ನು ಬಿಟ್ಟು ಜೀವಿಸಲಾಗುವುದಿಲ್ಲ ಅಥವಾ ಭೂಮಿಯ ವಿರುದ್ಧ ಕ್ರಮಿಸುವುದಿಲ್ಲ ಎಂಬುದು ( ದುರಾಧರ್ಷ - ದುಃಸಾಹಸ ).
ಮತ್ತೊಂದು ಅರ್ಥವೆಂದರೆ ನಾಸ್ತಿಕನು ಎಂದಿಗೂ ಶ್ರೀದೇವಿಯ ಕೃಪೆಗೆ ಪಾತ್ರನಾಗಲಾರ. ಅವಳನ್ನು ನೈಜ ಭಕ್ತಿಯಿಂದ ಮಾತ್ರ ಸಂತೋಷಪಡಿಸಬಹುದೇ ಹೊರತು ಬೇರೆ ವಿಧಗಳಿಂದ ಅಥವಾ ಶಕ್ತಿಯ ಉಪಯೋಗ ದಿಂದಲ್ಲ. ಇದನ್ನು ರಹಸ್ಯ ನಾಮ ಸಾಹಸ್ರದಲ್ಲಿ ಭಕ್ತಿವಶ್ಯಾದಲ್ಲಿ ಸೂಚಿಸಲಾಗಿದೆ.
" ನಿತ್ಯಪುಷ್ಟಾಂ ಕರೀಷಿಣೀಮ್ " - ಪುಷ್ಟಿ ಎಂದರೆ ಪೌಷ್ಟಿಕತೆಯನ್ನು ಪಡೆಯುವುದು ಅಥವಾ ಶಕ್ತಿಯುತವಾಗಿ ಮತ್ತು ಆರೋಗ್ಯಯುತವಾಗಿ ಬೆಳೆಯುವುದು. ಎಲ್ಲರಿಗೂ ಅನಾದಿಕಾಲದಿಂದಲೂ ಭೂಮಿಯು ಪುಷ್ಟಿಗೆ ಬಹುಮುಖ್ಯವಾದ ಮೂಲ. ತನ್ನ ಎಲ್ಲ ಮಕ್ಕಳಿಗೂ ಪುಷ್ಟಿಯನ್ನು ನೀಡುವ ಕಾರ್ಯದಲ್ಲಿ ಅವಳು ಎಂದಿಗೂ ತನ್ನ ಶಕ್ತಿಯನ್ನು ಬರಿದು ಮಾಡಿಕೊಳ್ಳುವುದಿಲ್ಲ.

ಒಂಬತ್ತನೇ ಮಂತ್ರದ ಧ್ಯಾನ ಶ್ಲೋಕ : ಈ ಮಂತ್ರದ ಧ್ಯಾನ ಶ್ಲೋಕವು ಅವಿನಾಶಿ ( ದುರ್ಧಷಂ) ಶ್ರೀದೇವಿಯನ್ನು ಕುರಿತು ಪ್ರಾರ್ಥನೆ. ಶ್ರೀದೇವಿಯು ಸಮೃದ್ಧವಾದ (ಪೃಥುಳಂ) ಪ್ರಕೃತಿಯಿಂದ ( ಸಸ್ಯ ಮಾಲಿನೀಂ ) ಅಲಂಕೃತಳಾಗಿ, ಹಸುಗಳಿಂದ (ಗೋವೃಂದ) ಸುತ್ತುವರೆಯಲ್ಪಟ್ಟ ಮತ್ತು ಹಸುಗಳನ್ನು ಅನುಗ್ರಹಿಸುವವಳು. ಸಮಸ್ತ ಜೀವಿಗಳ ಪ್ರಭು (ಪ್ರಾಣಿನಾಂ ಈಶಂ).
"ಗೋವೃಂದ ಅನುಗತಂ ಧ್ಯಾತ್ವಾ ಸುರಭಿಂ ಸಸ್ಯ ಮಾಲಿನೀಮ್
ಪಿೃಥುಲಾಂ ಪ್ರಾಣಿನಾಂ ಈಶಂ ದುರ್ಧರ್ಷಂ ಶ್ರಿಯಂ ಅರ್ಚಯೇತ್"
ಈ ಮಂತ್ರದ :- ಋಷಿ - ಮಹಾವಿಷ್ಣು ; ಛಂದಸ್ಸು - ಅನುಷ್ಟುಪ್ ; ದೇವತೆ - ಶ್ರೀಮಹಾಲಕ್ಷ್ಮಿ ; ಬೀಜ - ಗಮ್ ;
ಶಕ್ತಿ - ಹ್ರೀಂ ; ಕೀಲಕ - ಶ್ರೀಂ . ಇದರ ವಿನಿಯೋಗವು ಕೃಷ್ಣಫಲ (ಆರೋಗ್ಯ ವೃದ್ಧಿಗೆ ಅತ್ಯಂತ ಮಹತ್ವದ ಪೌಷ್ಠಿಕ ಹಣ್ಣು) , ಧನ-ಧಾನ್ಯ-ಸಂಪತ್ತು ಮತ್ತು ಪ್ರಭುತ್ವ-ಪ್ರಾಪ್ತಿ.
**********
ಶ್ಲೋಕ - 10 - ಸಂಸ್ಕೃತದಲ್ಲಿ : ಮನಸಃ ಕಾಮಮಾಕೂತಿಂ ವಾಚಃ ಸತ್ಯಮಶೀಮಹಿ |
ಪಶೂನಾಂ ರೂಪಮನ್ನಸ್ಯ ಮಯಿ ಶ್ರೀಃ ಶ್ರಯತಾಂ ಯಶಃ ||

ಕನ್ನಡದಲ್ಲಿ : ಮನದಾಶೆಗಳನು ಆತ್ಮದ ಮೊರೆಯ ನುಡಿಯ ದಿಟವನ್ನೆ
ಅಶನ ಪಶುಸಂಪದವ ಕರುಣಿಸಲಿ ಸಿರಿಯು ಜಸದೊಡನೆ

ತಾತ್ಪರ್ಯ: ಓ ಲಕ್ಷ್ಮೀ ದೇವಿಯೇ ! ಮನಸ್ಸಿನ ಅಭಿಲಾಷೆಯು ಸಂಕಲ್ಪವು ವಾಗಿಂದ್ರಿಯದ ಸತ್ಯಸ್ವರೂಪವು ಗೋಮಹಿಷ್ಯಾದಿ ಪಶುಗಳ ಸ್ವರೂಪವು ಅಂದರೆ ಕ್ಷೀರಾದಿ ಸಮೃದ್ಧಿಯು ಜವೆಗೋಧಿ ಅನ್ನ ಮುಂತಾದುದರ ಸಮೃದ್ಧಿಯು ಇವೆಲ್ಲವನ್ನೂ ನಾನು ಪಡೆಯಬೇಕು. ನನ್ನಲ್ಲಿ ಸಂಪತ್ತು ಮತ್ತು ಕೀರ್ತಿ ನೆಲಸಲಿ. ಈ ಮಂತ್ರ ಸಿದ್ಧಿಯಿಂದ ಮನಸ್ಸಿನ ಅಭಿಲಾಷೆ ಮುಂತಾದುದು ಸಿದ್ಧಿಸುತ್ತದೆ.

ವ್ಯಾಖ್ಯಾನ :

ದೇವಿಯನ್ನು ಪೂಜಿಸುವ ಭಕ್ತನು ತನ್ನ ಮನೆಯಲ್ಲಿ ಕೃಷಿ ಸಂಪತ್ತು ಮತ್ತು ಇತರ ಸಂಪತ್ತುಗಳು ಹೇರಳವಾಗಿದ್ದು ತನಗೆ ಸಮೃದ್ಧಿಯ ಜೀವನವು ಲಭಿಸಲೆಂದು ಪ್ರಾರ್ಥಿಸುತ್ತಾನೆ. ಮುಂದುವರೆದು ಭಕ್ತನು ತನಗೆ ಸಾಕಷ್ಟು ಹಸುಗಳು ಆಹಾರ ಸಂಪತ್ತು ಹಾಗೂ ಅಭ್ಯುದಯವನ್ನು ದಯಪಾಲಿಸೆಂದು ಬೇಡುವನು ಹಾಗೂ ತನ್ನ ಮಾತಿನಲ್ಲಿ ಸತ್ಯತೆ ಸದಾ ಇರಲೆಂದು ಮತ್ತು ತಾನು ಪ್ರೀತಿಸುವ ಎಲ್ಲಾ ಆಸೆಗಳನ್ನೂ ಹಾಗೂ ಮಹತ್ವಾಕಾಂಕ್ಷೆಗಳನ್ನೂ ಈಡೇರಿಸೆಂದು ಬೇಡುವನು.

" ಆಕೂತಿ " ಪದವು ತನ್ನ ಹೃದಯದ ಮೇಲೆ ಧೃಢ ಸಂಕಲ್ಪದಂದ ಹಿಡಿತವನ್ನು ತೆಗೆದುಕೊಳ್ಳುವ ಮತ್ತು ಇದು ಬರೀ ಹರಿದುಹೋಗುವ ಸುಖಕರ ಆಸೆಗಳಲ್ಲ. ಆಕೂತಿಯು ತೀವ್ರವಾದ ಹಂಬಲ ಅಥವಾ ಧೃಢನಿರ್ಧಾರ. ಆ ರೀತಿಯ ಹೃದಯದಾಳದಲ್ಲಿ ಹುದುಗಿರುವ ತೀವ್ರವಾದ ಹಂಬಲವನ್ನು ಸಾಧಿಸುವುದು ಶ್ರೀದೇವಿಯ ಕರುಣೆಯಿಂದ ಮಾತ್ರ ಸಾಧ್ಯ. 

ಅದೇರೀತಿ, ವಚಸ್ ಸತ್ಯಮ್ ಅಥವಾ ಸತ್ಯತೆಯು ಬರೀ ಸುಳ್ಳು ಹೇಳದಿರುವುದು ಅಥವಾ ವಿಷಯವನ್ನು ಸ್ಪಷ್ಟೀಕರಿಸುವುದಲ್ಲ. ಇಲ್ಲಿ ಈ ಪದವು ಸ್ಪಷ್ಟಪಡಿಸುವುದೆಂದರೆ ಜೀವನದ ಸಮಗ್ರತೆ ಮತ್ತು ಮಾತಿನಲ್ಲಿ, ಯೋಚನೆಯಲ್ಲಿ ಹಾಗೂ ಕ್ರಿಯೆಯಲ್ಲಿ ಪರಿಶುದ್ಧತೆ. ಜೀವನದ ಸಮಗ್ರತೆಯ ತತ್ತ್ವವು ಸತ್ಯ. ಜೀವನದ ಸತ್ಯತೆಯೇ ಇದು. 

ಒಂದು ಸತ್ಯತೆಯೆಂದರೆ ಯಾರು ಹೃದಯದಲ್ಲಿ ಮತ್ತು ಮನಸ್ಸಿನಲ್ಲಿ ಪರಿಶುದ್ಧತೆಯನ್ನು ಹೊಂದಿ ಮಾತನಾಡುತ್ತಾರೋ ಅವರ ಮಾತುಗಳು ವ್ಯರ್ಥವಾಗುವುದಿಲ್ಲವೆಂಬುದು ಹಾಗೂ ಅವರ ಮಾತುಗಳು ನಿಜವಾಗುತ್ತದೆ ಅಂಬುದು ( ವಾಕ್ - ಸಿದ್ಧಿ ).

ಈ ಮಂತ್ರದ ಆರಾಧಕರು ಮಾತು ಮನಸಿನಲ್ಲಿ ಪರಿಶುದ್ಧರು ಹಾಗೂ ಅವರು ಶ್ರೀ ಯನ್ನು ತಲುಪುವರು.
ಹತ್ತನೇ ಮಂತ್ರದ ಧ್ಯಾನ ಶ್ಲೋಕ :
ಈ ಮಂತ್ರದ ಧ್ಯಾನಶ್ಲೋಕವನ್ನು ಎಲ್ಲ ಜೀವಿಗಳಲ್ಲೂ ಅವರ ಜೀವನದಲ್ಲಿ ವಿವೇಕವನ್ನು ಪ್ರೇರೇಪಿಸುವ ಲಕ್ಷ್ಮಿಗೆ ಸಮರ್ಪಿಸಲಾಗಿದೆ.
"ತಾಂ ಧ್ಯಾಯೇತ್ ಸತ್ಯ-ಸಂಕಲ್ಪಾಂ ಲಕ್ಷ್ಮೀಮ್  ಕ್ಷೀರೋದನ ಪ್ರಿಯಾಮ್ |
ಖ್ಯಾತಾಮ್ ಸರ್ವೇಷು ಭೂತೇಷು ತತ್ತ್ವ-ಜ್ಞಾನ-ಬಲ-ಕ್ರಿಯಾಮ್
ಕಾಂತ್ಯಾ ಕಾಂಚನಸನ್ನಿಭಾಮ್ ದ್ವಿನಯನಾಮ್ ಕಲ್ಹಾರಮಾಲಾವತೀಂ
ಕಸ್ತೂರೀತಿಲಕಾಂ ಕರೈಶ್ಚ ಕಮಲೆ ಕಾಂತೇ ಚ ಮುಕ್ತಾವಲೀಂ
ಶೇಷಾಶೇಷವಿಶೇಷಭೂಷಣಾರ್ತಾಮ್ ಸಂಬಿಭ್ರತೀಮ್ ಕುಂಡಲಾಂ
ಪದ್ಮಾಕ್ಷೀಮ್ ಭಜ ಸರ್ವದಾಭಿಲಾಷಿತ ಪ್ರಾಪ್ತೈ ಸಂಮೃದ್ಧಾಶ್ರಿಯೈ ||"
ಈ ಮಂತ್ರದ :- ಋಷಿ - ಕಾಮ ; ಛಂದಸ್ಸು - ಅನುಷ್ಟುಪ್; ದೈವ - ಶ್ರೀ ಮಹಾಲಕ್ಷ್ಮಿ ; ಬೀಜ – ಮಂ: ಶಕ್ತಿ - ಶಂ ;
ಕೀಲಕ - ಶ್ರೀಂ. ಈ ಮಂತ್ರದ ವಿನಿಯೋಗವು - ವಾಕ್ ಸಿದ್ಧಿ ಮತ್ತು ಭೋಗ-ಭಾಗ್ಯ-ಸಿದ್ಧಿ.
**********
ಶ್ಲೋಕ - 11 - ಸಂಸ್ಕೃತದಲ್ಲಿ : ಕರ್ದಮೇನ ಪ್ರಜಾಭೂತಾ ಮಯಿ ಸಂಭವ ಕರ್ದಮ |
ಶ್ರಿಯಂ ವಾಸಯ ಮೇ ಕುಲೇ ಮಾತರಂ ಪದ್ಮಮಾಲಿನೀಮ್ ||

ಕನ್ನಡದಲ್ಲಿ : ಕರ್ದಮನವಳ ಸುತ , ಓ ಕರ್ದಮನೆ! ನೀ ಬಾರೆನ್ನ ಬಳಿಗೆ
ಸಿರಿಯನೆಲೆಗೊಳಿಸೆನ್ನ ಸಂತತಿಯಲ್ಲಿ ಮಾತೆ ಕಮಲಮಾಲಿನಿಯ

ತಾತ್ಪರ್ಯ : ಲಕ್ಷ್ಮೀದೇವಿಯು ಕರ್ದಮನೆಂಬ ಪುತ್ರರೂಪದ ಉತ್ತಮ ಸಂತಾನವನ್ನು ಹೊಂದಿದವಳಾಗಿದ್ದಾಳೆ. ಆದುದರಿಂದ ಓ ಕರ್ದಮನೇ ! ನನ್ನ ಮನೆಯಲ್ಲಿ ನೀನು ಜನ್ಮತಾಳು. ಕಮಲಮಾಲಾಧಾರಿಣಿಯೂ ನಿನ್ನ ತಾಯಿಯೂ ಆದ ಲಕ್ಷ್ಮೀದೇವಿಯನ್ನು ನನ್ನ ವಂಶದಲ್ಲಿ ನೆಲೆಗೊಳ್ಳುವಂತೆ ಮಾಡು. ಈ ಮಂತ್ರ ಸಿದ್ಧಿಯಿಂದ ಸ್ಥಿರವಾದ ಲಕ್ಷ್ಮೀ ಸಂಪತ್ತಿಯು ನೆಲೆಸುತ್ತದೆ.

ವ್ಯಾಖ್ಯಾನ : ಶ್ರೀಸೂಕ್ತದ ಹಿಂದಿನ ಮಂತ್ರಗಳಲ್ಲಿ ಪದಗಳಾದ ಕರ್ದಮ ಮತ್ತು ಚಿಕ್ಲೀತಗಳನ್ನು ವ್ಯವಸಾಯಕ್ಕೆ ಅನುಕೂಲವಾಗುವ ತೇವ ಅಥವಾ ಫಲವತ್ತಾದ ಮಣ್ಣೆಂದು ಅರ್ಥೈಸಲಾಗಿದೆ ಹಾಗೂ ದೇವಿಯ ಕರ್ದಮ ಹಾಗೂ ಚಿಕ್ಲೀತರೊಂದಿಗಿನ ಒಡನಾಟವನ್ನೂ ಕೂಡ ವಿವರಿಸಲಾಗಿದೆ. ಆದರೆ ಈ ಮಂತ್ರ ಹಾಗೂ ಹನ್ನೆರಡನೇ ಮಂತ್ರಗಳಲ್ಲಿ ಬರುವ ಕರ್ದಮ ಹಾಗೂ ಚಿಕ್ಲೀತ ಪದವು ಇಬ್ಬರು ಋಷಿಗಳ ನಾಮಧೇಯ.
ಈ ಮಂತ್ರವನ್ನು ಕರ್ದಮ ಮುನಿಗೇ ಉದ್ದೇಶಿಸಲಾಗಿದೆ. ಕರ್ದಮ ಮುನಿ ಹಾಗೂ ಶ್ರೀದೇವಿಯರ ಮಧ್ಯೆ ಇರುವ ಸಂಬಂಧದ ಬಗೆಗೆ ವಿವಿಧ ವಿವರಣೆಗಳಿವೆ. ವಿಷ್ಣುಪುರಾಣದ ಪ್ರಕಾರ ಶ್ರೀದೇವಿಯು ಸಮುದ್ರ ಮಥನದ ಸಮಯದಲ್ಲಿ ಹಾಲ್ಗಡಲಿನಿಂದ ಹೊರಬಂದಾಗ ಕರ್ದಮ ಮುನಿಯು ದೇವಿಯನ್ನು ಪ್ರಾರ್ಥಿಸಿ ಅವಳನ್ನು ತನ್ನ ಪುತ್ರಿಯನ್ನಾಗಿ ಸ್ವೀಕರಿಸಿದನು (ಪ್ರಥಿಥ ತಸ್ಮೈ ತನಯಾ ಅಭುತ್). ಹೀಗಾಗಿ
" ಕರ್ದಮೇನ ಪ್ರಜಾ-ಭೂತಾ " ಎಂದರೆ - " ಯಾರು ತನ್ನನ್ನು ಕರ್ದಮನ ಪುತ್ರಿಯೆಂದು ಕರೆಯಲು ಸಮ್ಮತಿಸಿದಳೋ" .
ಈ ಮಂತ್ರವು ಕರ್ದಮನಿಗೆ ಉದ್ದೆಶಿಸಿರುವುದರಿಂದ ಮತ್ತು ಶ್ರೀ ಯನ್ನು "ಮಾತರಂ ಶ್ರಿಯಮ್ " ಎಂಬುದಾಗಿ ವಿವರಿಸಿರುವುದರಿಂದ ಶ್ರೀ ಯನ್ನು ಕರ್ದಮನ ಮಾತೆಯೆಂದು ಸಾಮಾನ್ಯವಾಗಿ ಅರ್ಥೈಸಲಾಗುವುದು. ಕೆಲವು ಆವೃತ್ತಿಗಳಲ್ಲಿ " ತವ ಮಾತರಮ್ " ಅಂದರೆ ಕರ್ದಮನನ್ನು ಸೂಚಿಸುತ್ತಾ " ನಿನ್ನ ಮಾತೆ " ಎಂಬರ್ಥವನ್ನು ನೀಡುತ್ತದೆ.
ವ್ಯಾಖ್ಯಾನಕಾರರ ವಿವರಣೆಯ ಪ್ರಕಾರ " ತವ ಮಾತರಮ್ " ಎಂಬುದು ಕರ್ದಮನಿಗೆ ಮಾತ್ರ ಅನ್ವಯಿಸದೇ ಅದು ವಿಶ್ವದಲ್ಲಿರುವ ಸಮಸ್ತ ಜೀವಿಗೂ ಅನ್ವಯಿಸುವುದು - ಚೇತನಾನಾಂ ಶ್ರೀಃ. ಲಲಿತಾಸಹಸ್ರನಾಮದ ಪ್ರಾರಂಭದಲ್ಲೇ ಶ್ರೀದೇವಿಯನ್ನು ಮಾತೆಯೆಂದು ಪೂಜಿಸಲಾಗುತ್ತದೆ - " ಶ್ರೀಮಾತಾ ".
ಶ್ರೀದೇವಿಯನ್ನು ಪದ್ಮಮಾಲಿನೀಮ್ ಎಂದು ವಿವರಿಸಿದಾಗ ಸಾಮಾನ್ಯವಾಗಿ ದೇವಿಯು ಪದ್ಮ ಪುಷ್ಪಗಳ ಮಾಲೆಯಿಂದ ಅಲಂಕೃತಳಾಗಿರುವಳು ಎಂದು ಅರ್ಥೈಸಲಾಗುವುದು. ಆದರೆ ತಂತ್ರ ವಿದ್ಯೆಯಲ್ಲಿ ಶ್ರೀದೇವಿಯನ್ನು ಮೂಲ ಪ್ರಕೃತಿ ಎಂದು ಹಾಗೂ ಸಮಸ್ತ ಜೀವಿಗಳ ಇರುವಿಕೆಗೆ ಕಾರಣೀಭೂತಳೆಂದು; ಮತ್ತು ಪದ್ಮವನ್ನು ಸೃಷ್ಟಿಸಿದ ಪ್ರಪಂಚದಂತೆ ಗುರುತಿಸಲಾಗಿದೆ. ಸಾಂಖ್ಯ ಶಾಸ್ತ್ರದ ಪ್ರಕಾರ ವಿಶ್ವವು ಅನೇಕ ತತ್ತ್ವಗಳಿಂದ ಕೂಡಿದೆ ( ಅವ್ಯಕ್ತ , ಮಹತ್ , ಅಹಂಕಾರ , ಇಂದ್ರಿಯಗಳು , ಭೌತಿಕ ಅಂಶಗಳು., ಇತ್ಯಾದಿ). ಈ ಎಲ್ಲ ತತ್ತ್ವಗಳೂ ಶ್ರೀದೇವಿಯ ಅಂಶಗಳು ಏಕೆಂದರೆ ದೇವಿಯು ಅವ್ಯಕ್ತದಿಂದ ವ್ಯಕ್ತದೆಡೆಗೆ , ಅನಂತ ಸೂಕ್ಷ್ಮದಿಂದ ಒಟ್ಟಾರೆ ಭೌತಿಕ ಪ್ರಪಂಚಕ್ಕೆ ವಿಕಸನಗೊಳ್ಳುವಳು. ದೇವಿಯು ಧರಿಸಿರುವ ಮಾಲೆಯಲ್ಲಿನ ಪದ್ಮ ಪುಷ್ಪಗಳು ಅವಳ ತತ್ತ್ವಗಳನ್ನು ಸಂಕೇತಿಸುತ್ತವೆ.
ಈ ಮಂತ್ರದ ಭಾವಾರ್ಥವೆಂದರೆ - ಕರ್ದಮನು ಶ್ರೀದೇವಿಯನ್ನು ಆಹ್ವಾನಿಸಿದಾಗ , ಅಪಾರ ಕರುಣಾಮಯಿಯಾದ ಶ್ರೀದೇವಿಯು ( ಕಲ್ಯಾಣಿ ) ತನ್ನ ಪುತ್ರನ ಮೇಲಿನ ಪ್ರೀತಿಯಿಂದಾಗಿ ( ಸ ವತ್ಸ ಗೌರಿವ ಪ್ರೀತ ) ಅವನನ್ನು ಅನುಸರಿಸುವಳು ( ಸ ವತ್ಸ ಗೌರಿವ ಪ್ರೀತ ಕರ್ದಮೇನ ಯಥಾ ಇಂದಿರಾ ; ಕಲ್ಯಾಣೀ ಮತ್ ಗೃಹೇ ನಿತ್ಯಂ ನಿವಸೇತ್ ಪದ್ಮಮಾಲಿನೀಮ್ ).
ಸಾಧಕನು ಕರ್ದಮನನ್ನು, ಅವನ ಮಾತೆಯನ್ನು ತನ್ನ ಗೃಹದಲ್ಲೇ ಸದಾ ನೆಲಸುವಂತೆ ಮಾಡು ( ಗೃಹೇ ನಿತ್ಯಂ ನಿವಸೇತ್ ) ಎಂದು ಬೇಡಿಕೊಂಡಾಗ ಅದರ ನಿಜವಾದ ಅರ್ಥವೆಂದರೆ ಶ್ರೀದೇವಿಯ ಅನುಗ್ರಹವನ್ನು ತನ್ನ ಹೃದಯದೊಳಗೆ ಆಹ್ವಾನಿಸಿದಂತೆ.

ಹನ್ನೊಂದನೇ ಮಂತ್ರದ ಧ್ಯಾನ ಶ್ಲೋಕ : ಈ ಮಂತ್ರದ ಧ್ಯಾನಶ್ಲೋಕವನ್ನು ಸಮಸ್ತ ಭಕ್ತರ ಬೇಡಿಕೆಗಳನ್ನು ಈಡೇರಿಸುವ ( ಸರ್ವಾ- ಅಭೀಷ್ಟ -ಫಲ -ಪ್ರದಮ್) ಮತ್ತು ಹೇರಳವಾದ ಸಂಪತ್ತನ್ನು ( ಸಂಪತ್ -ಸಂಮೃದ್ಧಿ ) ನೀಡುವ ದೇವಿಗೆ ಅರ್ಪಿಸಲಾಗಿದೆ. ಅವಳನ್ನು ಶುದ್ಧ ಸ್ಫಟಿಕ ಪ್ರಕಾಶದಂತೆ ಬೆಳಗುವ ( ಸ್ಫಟಿಕ ಸನ್ನಿಭಮ್ ), ಹಾಗೂ ಉಜ್ವಲವಾದ ವಸ್ತ್ರಗಳಿಂದ ಅಲಂಕೃತಳಾದ ( ದಿವ್ಯ - ಅಂಬರ - ಕೃತಮ್ ), ವಜ್ರ ವೈಡೂರ್ಯಗಳಿಂದ ಕೂಡಿದ ಕಿರೀಟದಲ್ಲಿ ಜ್ವಾಜಲ್ಯಮಾನವಾಗಿ ಬೆಳಗುತ್ತಿರುವ ( ನಾನಾ - ರತ್ನ - ಕೃತ ) ಮತ್ತು ಕರ್ಣ ಕುಂಡಲಗಳಿಂದ ಕೂಡಿದ ( ಕುಂಡಲಮ್). ಮತ್ತು ಅತ್ಯಂತ ಹಾಗೂ ಮನಮೋಹಕ ಸೌಮ್ಯ ಮುಗುಳು ನಗೆಯು ಅವಳ ಪ್ರಕಾಶಮಾನವಾದ ವದನವನ್ನು ಮತ್ತಷ್ಟು ಬೆಳಗಿಸುತ್ತದೆ.

ಧ್ಯಾನ ಶ್ಲೋಕ : "ಧ್ಯಾಯೇತ್ ಸ್ಫಟಿಕ-ಸನ್ನಿಭಮ್ ದ್ವಿನಯನಂ ದಿವ್ಯ-ಅಂಬರ-ಅಲಂಕೃತಾಮ್
ಸತ್ಪುಲ್ಲೋದರ ಪದ್ಮ-ಕಮಲ-ಯುಗ-ಶ್ರೀಮತ್-ಕರಂಬೋರುಹಮ್ |
ನಾನಾ-ರತ್ನ-ಕಿರೀಟ-ಲಸದ್-ವಕ್ತ್ರ-ಅಂಬುಜಂ ಪದ್ಮಿನೀಮ್
ಸರ್ವ-ಅಭೀಷ್ಟ-ಫಲ-ಪ್ರದಾನ-ನಿರತಂ ಸಂಪ-ಸಮೃದ್ಧ್ಯೈ ಸದಾ " ||
ಹನ್ನೊಂದನೇ ಮಂತ್ರದ :- ಋಷಿ - ಕರ್ದಮ ; ಛಂದಸ್ಸು - ಅನುಷ್ಟುಪ್ ; ದೇವತೆ - ಮಹಾಲಕ್ಷ್ಮಿ ; ಬೀಜ - ಕಂ ; ಶಕ್ತಿ - ವಂ ; ಕೀಲಕ - ಶ್ರೀಂ ; ವಿನಿಯೋಗ - ವಂಶಾಭಿವೃದ್ಧಿ , ಐಶ್ವರ್ಯಾಭಿವೃದ್ಧಿ .
**********
ಶ್ಲೋಕ - 12 - ಸಂಸ್ಕೃತದಲ್ಲಿ : ಆಪಃ ಸೃಜಂತು ಸ್ನಿಗ್ಧಾನಿ ಚಿಕ್ಲೀತ ವಸ ಮೇ ಗೃಹೇ |
ನಿ ಚ ದೇವೀಂ ಮಾತರಂ ಶ್ರಿಯಂ ವಾಸಯ ಮೇ ಕುಲೇ ||

ಕನ್ನಡದಲ್ಲಿ : ರಸಪೂರ್ಣ ದ್ರವ್ಯ ಸೃಜಿಸಲಿ ಜಲದೇವಿ ಚಿತ್ತಜನೆ ನೀನಿರೆನ್ನ ಮನೆಯಲ್ಲಿ
ಸಿರಿದೇವಿ ನಿನ್ನಮ್ಮನನು ನೆಲೆಗೊಳಿಸೆಮ್ಮ ಮನೆಮನೆಗಳಲಿ

ತಾತ್ಪರ್ಯ : ಜಲಾಭಿಮಾನಿನಿಯರಾದ ದೇವತೆಗಳು ಸ್ನೇಹಯುಕ್ತವಾದ ಕಾರ್ಯಗಳನ್ನು ಉಂಟುಮಾಡಲಿ. ಓ ಚಿಕ್ಲೀತನೇ ! (ಚಿಕ್ಲೀತನು ಲಕ್ಷ್ಮಿಯ ಮತ್ತೊಬ್ಬ ಪುತ್ರನು) ನೀನು ನನ್ನ ಮನೆಯಲ್ಲಿ ವಾಸಮಾಡು. ಮತ್ತು ನಿನ್ನ ತಾಯಿಯಾದ ಲಕ್ಷ್ಮೀದೇವಿಯನ್ನು ನನ್ನ ವಂಶದಲ್ಲಿ ನೆಲೆಸುವಂತೆ ಮಾಡು.

ವ್ಯಾಖ್ಯಾನ :
ಈ ಮಂತ್ರವು ಹನ್ನೊಂದನೇ ಮಂತ್ರದ ಮುಂದುವರೆದ ಭಾಗ. ಈ ಮಂತ್ರದಲ್ಲಿ ಹಿಂದಿನ ಮಂತ್ರದಲ್ಲಿನಂತೆ ಬೇಡಿಕೆಯನ್ನು ಕರ್ದಮನಿಗೆ ಬದಲಾಗಿ ಶ್ರೀದೇವಿಯ ಮತ್ತೊಬ್ಬ ಪುತ್ರನಾದ ಚಿಕ್ಲೀತನಲ್ಲಿ ಸಲ್ಲಿಸಲಾಗಿದೆ. ಅವನನ್ನು ಸಾಧಕನು ತನ್ನ ಮನೆಯಲ್ಲೇ ಶಾಶ್ವತವಾಗಿ ನೆಲೆಸುವಂತೆ ಹಾಗೂ ಅವನ ಮಾತೆಯಾದ ಶ್ರೀದೇವಿಯನ್ನು ತನ್ನ ಮನೆಗೆ ಕರೆತರುವಂತೆ ಪ್ರಾರ್ಥಿಸಲಾಗಿದೆ.
ಚಿಕ್ಲೀತನು ಶ್ರೀದೇವಿಯ ಅತ್ಯಂತ ಪ್ರೀಯಿಪಾತ್ರ ಪುತ್ರನಾದ್ದರಿಂದ ಅವನ ಇಚ್ಚೆಯಂತೆ ನಡೆಯುವಳು. ಅಂದರೆ ಚಿಕ್ಲೀತನು ಮನೆಯನ್ನು ಪ್ರವೇಶಿಸುತ್ತಿದ್ದಂತೆ ಶ್ರೀದೇವಿಯೂ ಸಹಾ ತಂತಾನೇ ಅವನ ಹಿಂದೆ ಬರುವಳು. 
ಶ್ರೀದೇವಿಯನ್ನು ಈ ಮಂತ್ರದಲ್ಲಿ " ದೇವೀಮ್ ಮಾತರಂ ಶ್ರಿಯಮ್ " ಎನ್ನಲಾಗಿದೆ, ಶ್ರೀದೇವಿಯು ಕೇವಲ ಚಿಕ್ಲೀತನಿಗೆ ಮಾತ್ರ ಮಾತೆಯಾಗದೇ ಇಡೀ ವಿಶ್ವಕ್ಕೇ ಮಾತೆ.
ಮತ್ತೊಂದು ವಿವರಣೆಯೆಂದರೆ - ಶ್ರೀದೇವಿಯು ಕೃಷಿ ವ್ಯವಸಾಯಕ್ಕೆ ರಕ್ಷಕಳು; ಹಾಗಾಗಿ ಕೃಷಿ ಅಭಿವೃದ್ಧಿಯಲ್ಲಿ ತನ್ನನ್ನೂ ತೊಡಗಿಸಿಕೊಂಡಿರುವಳು. ಹಿಂದಿನ ಶ್ಲೋಕಗಳಲ್ಲಿ ವಿವರಿಸಿರುವಂತೆ ಕೃಷಿಗೆ ಸಂಬಂಧಿಸಿದ ಕೆಲವು ಪದಗಳು - ಆರ್ದ್ರ ( ತೇವ ) , ಕರ್ದಮ ( ಮಣ್ಣು ) ಮತ್ತು ಚಿಕ್ಲೀತ ( ಫಲವತ್ತಾದ ಮಣ್ಣು ) - ಇವೆಲ್ಲವುಗಳೂ ಫಲವತ್ತತೆ , ಅಭ್ಯುದಯ ಮತ್ತು ಬೆಳವಣಿಗೆಗಳಿಗೆ ಸಂಬಂಧಿಸಿದುದು. ಇವೆಲ್ಲ ಪದಗಳೂ ಆಹಾರ ಮತ್ತು ನೀರಿನೊಂದಿಗಿನ ಅವಳ ಸಹಯೋಗವನ್ನು ಬಲಪಡಿಸುತ್ತದೆ ( ಆಪಃ ಸೃಜಂತಿ ಸ್ನಿಗ್ಧಾನಿ ಚಿಕ್ಲೀತ ).
ಆದರೆ ಈ ಮಂತ್ರದಲ್ಲಿ ಚಿಕ್ಲೀತ ಮುನಿಯನ್ನು ಶ್ರೀದೇವಿಯ ಪುತ್ರರಲ್ಲೊಬ್ಬನನ್ನಾಗಿ ಗುರುತಿಸಲಾಗಿದೆ. ಕೆಲವರು ಚಿಕ್ಲೀತನನ್ನು ಕಾಮ ( ಆಸೆಗಳ ದೈವ ) ದೊಂದಿಗೆ ಗುರುತಿಸುತ್ತಾರೆ, ಏಕೆಂದರೆ ಹನ್ನೊಂದು ಮತ್ತು ಹನ್ನೆರಡನೇ ಮಂತ್ರಗಳು ಆಸೆಗಳ ಸಂತೃಪ್ತಿಯ ಬಗೆಗೆ ವಿವರಿಸಲಾಗಿದೆ. ಧ್ಯಾನ ಶ್ಲೋಕವೊಂದರಲ್ಲಿ ಚಿಕ್ಲೀತ ಮತ್ತು ಶ್ರೀದೇವಿಯರಿಬ್ಬರನ್ನೂ ಒಟ್ಟಾಗಿ ಗೌರವಿಸಲಾಗಿದೆ : ನಮೋಸ್ತು ತುಭ್ಯಂ ಚಿಕ್ಲೀತ-ಶ್ರೀದೇವ್ಯಾಯೈ ನಮೋ ನಮಃ. 
ಆಪಃ ಪದವು ಸಾಮಾನ್ಯವಾಗಿ ನೀರನ್ನು ಸೂಚಿಸುತ್ತದೆ. ಆದರೆ ಪುರಾತನ ಗ್ರಂಥಗಳಲ್ಲಿ ಆಪಃ ಪದಕ್ಕೆ ಅನೇಕ ವಿಧವಾದ ನಿಗೂಢ ಅರ್ಥ ಮತ್ತು ವಿವರಣೆಗಳನ್ನು ನೀಡಲಾಗಿದೆ. ಸೃಷ್ಟಿಗೆ ಸಂಬಂಧಿಸಿದ ಸೂಕ್ತಗಳಾದ - ಋಗ್ವೇದದ ಹತ್ತನೇ ಮಂಡಲದಲ್ಲಿ ಬರುವ "ನಾಸದೀಯ ಸೂಕ್ತ ", ಹಾಗೂ ಅದೇ ಮಂಡಲದ 10.125.1-8 ರಲ್ಲಿ
ಬರುವ ವಾಕ್ ಸೂಕ್ತ ಮತ್ತು ಅದೇ ಮಂಡಲದ 10.121.1-10 ರಲ್ಲಿನ ಹಿರಣ್ಯಗರ್ಭ ಸೂಕ್ತಗಳಲ್ಲಿ ಆಪಃ ಪದವನ್ನು ಮಹಾನ್ ಜಲ ಅಥವಾ ಸೃಷ್ಟಿಯ ಅವಿಭಾಜ್ಯ ವಸ್ತು. ಇದು ವ್ಯಕ್ತ ಹಾಗೂ ಅವ್ಯಕ್ತ ಅವಿಭಾಜ್ಯ ವಸ್ತು. ಅಂದರೆ ಈ ಮಹಾನ್ ಜಲವು ಪ್ರಕೃತಿಯ ಅವ್ಯಕ್ತ ಸ್ಥಿತಿಯಲ್ಲಿನ ಮಹಾ ಶಕ್ತಿಯಾಗಿರುವುದು. ಇದರ ಶಕ್ತಿ ಎಷ್ಟೆಂದರೆ ಇದು ವ್ಯಕ್ತ ಸ್ಥಿತಿಯಲ್ಲಿ ಅನಂತ ರೂಪಗಳನ್ನು ಹೊಂದುವ ಸಾಧ್ಯತೆಗಳಿವೆ.
ಹೀಗೆ ಆಪಃ ಅಥವಾ ಸಲಿಲಂ ಅನ್ನು ಒಂದು ವಿಧದ ಹೊಸ್ತಿಲನ್ನಾಗಿ ಗ್ರಹಿಸಿ, ಅದಕ್ಕಿಂತ ಮುಂಚೆ ಆಸ್ತಿತ್ವ ಹಾಗೂ ಅಸ್ತಿತ್ವವಿಲ್ಲದ ಸ್ಥಿತಿಗಳ ನಡುವೆ ಯಾವುದೇ ವ್ಯತ್ಯಾಸವಿರಲಿಲ್ಲ. ಇದಕ್ಕೆ ಮುಂಚೆ ಇದ್ದ ಯಾವುದಾದರೂ ಅದು ಸತ್ವ ಅಥವ ಅಸತ್ವವಲ್ಲ; ಜೀವವಿರುವುದೂ ಅಲ್ಲ ಅಥವಾ ಜೀವವಿಲ್ಲದ್ದೂ ಅಲ್ಲ. ಈ ಸ್ಥಿತಿಯು ಸೃಷ್ಟಿಯ ಮೊದಲ ಹಂತ. ಅಂದರೆ ಆಪಃ ವು ಪ್ರಕೃತಿಯನ್ನು ಸೂಚಿಸುತ್ತದೆ; ಮತ್ತು ಇದು ಪ್ರಪಂಚದ ಎಲ್ಲವಿಧವಾದ ಅಭಿವ್ಯಕ್ತಿಯಲ್ಲಿ ಪ್ರಧಾನ ಮೂಲ. 
ಋಗ್ವೇದದಲ್ಲಿನ ಹತ್ತನೇ ಮಂಡಲದ ವಾಕ್ ಸೂಕ್ತ ಅಥವಾ ದೇವೀ ಸೂಕ್ತದ ಉತ್ತೇಜನಕಾರಿ ಅದ್ಭುತ ಶ್ಲೋಕದಲ್ಲಿ ದೇವಿಯು " ನಾನು ಜಲದಿಂದ ಉದ್ಭವಿಸಿ ಅನಂತ ಆಕಾಶದಲ್ಲಿ ವ್ಯಾಪಿಸಿದೆ. ನಾನೇ ವಾಯುವನ್ನು ಹೊರದೂಡಿ ಸಮಸ್ತ ವಿಶ್ವವನ್ನು ಸೃಷ್ಟಿಸಿದೆ" ಎಂಬುದಾಗಿ ಘೋಷಿಸಿರುವಳು. 
"ಅಹಂ ಸುವೆ ಪಿತರಮಸ್ಯ ಮೂರ್ಧನ್ಮಮ ಯೋನಿರಪ್ಸ್ವಂತಃ ಸಮುದ್ರೇ |
ತತೋ ವಿ ತಿಷ್ಠೇ ಭುವನಾನು ವಿಶ್ವೋತಾಮೂಂ ದ್ಯಾಂ ವರ್ಷನೋಪ ಸ್ಪೃಶಾಮಿ || 7 ||
ಅಹಮೇವ ವಾತ ಇವ ಪ್ರ ವಾಮ್ಯಾರಭಮಾಣ ಭುವನಾನಿ ವಿಶ್ವ |
ಪರೋ ದಿವಾಪರ ಏನಾ ಪೃಥಿವ್ಯೈತಾವತೀ ಮಹಿನಾ ಸಂಬಭೂವ ||8|| "
ಜಲವೇ ಸತ್ಯ ... ಎಲ್ಲಿ ಜಲವು ಹರಿಯುವುದೋ ಅಲ್ಲಿ ಸತ್ಯವು ಇರುವುದು ... ವಿಶ್ವದ ಮೊಟ್ಟ ಮೊದಲ ವಸ್ತುವೇ ಜಲ. ಆದ್ದರಿಂದ ಯಾವಾಗ ಜಲವು ಹರಿಯುವುದೋ ಅಲ್ಲಿ ವಿಶ್ವದಲ್ಲಿ ಏನೇನು ವಸ್ತುಗಳುಂಟೋ ಅವೆಲ್ಲವೂ ಹೊರಬರುವುದು ( ಶತಪಥ ಬ್ರಾಹ್ಮಣ ).
ಮತ್ತೊಂದು ರೀತಿಯ ವಿವರಣೆಯೆಂದರೆ :- ಈ ಕಪ್ಪಗಿನ ಆಳವಾದ ಅಗಾಧವಾದ ಜಲವು (ಗಹನಂ ಗಭೀರಂ - ಋಗ್ವೇದ - 10.129.1) ತನ್ನ ಗರ್ಭದಲ್ಲಿ ಅವ್ಯಕ್ತ ವಿಶ್ವವನ್ನು ಹುದುಗಿಸಿಕೊಂಡಿರುವುದು. ಈ ಜಲದಿಂದಲೇ ವ್ಯಕ್ತ ವಿಶ್ವವು ಹೊರಬಂದಿತು.
ಹೀಗಾಗಿ ಜಲವು ವಿಶ್ವದ ಮಾತೃತ್ತ್ವ. ಇದರಿಂದಾಗಿಯೇ ಋಗ್ವೇದದಲ್ಲಿ " ಜಲವೇ ನಮ್ಮ ಮಾತೆ (ಆಪಃ ಅಸ್ಮಿನ್ ಮಾತರಃ ), ವಿಶ್ವದ ಗರ್ಭ (ಅಂಬಯಃ ) ( ಋಗ್ವೇದ 1.023.10). ಹಾಗೇ ಇದು ಅತ್ಯುತ್ತಮ ಔಷಧಿಯೂ ಸಹ ( ಆಪಃ ಪ್ರಣೀತ ಭೇಷಜಂ - ಋಗ್ವೇದ 1.023.21).

ಶ್ರೀದೇವಿಯನ್ನು ಆಪಃ ಎಂದು ವಿವರಿಸಿದಾಗ ಅದು ಜೀವನದಲ್ಲಿ ಒಳಿತು ಹಾಗೂ ಸಾಮರಸ್ಯವನ್ನು ತರುತ್ತದೆ. ಶ್ರೀಸೂಕ್ತದ ಮಂತ್ರಗಳೂ ಸಹ ಜಲವು ಸೃಷ್ಟಿಯ ತತ್ತ್ವ, ಅಮೃತ ( ಮಧು ) ಮತ್ತು ಜೀವನದ ಆನಂದವೆಂಬ ಪುರಾತನ ತತ್ತ್ವಗಳನ್ನು ಪ್ರತಿಧ್ವನಿಸುತ್ತವೆ. ದೇವಿಯು ಬಂಧನಗಳಿಂದ ಮುಕ್ತಿಯನ್ನು ಪ್ರತಿನಿಧಿಸುವಳು.
ತಂತ್ರ ಶಾಖೆಯಲ್ಲಿ ಶ್ರೀದೇವಿಯನ್ನು ವ್ಯಕ್ತ ಸ್ವಸ್ವರೂಪ ( ಬ್ರಹ್ಮ ರೂಪಿಣಿ ) ದಿಂದ ಹೊರತಾದ ತತ್ತ್ವವೆಂದು ಗುರುತಿಸುತ್ತಾರೆ. ಆಕೆಯು ಪುರುಷ ಮತ್ತು ಪ್ರಕೃತಿಯೆರಡೂ ಹೌದು ( ಪ್ರಕೃತಿ-ಪುರುಷಾತ್ಮಕಂ - ಜಗತ್ ). ಅವಳು ವಿಶ್ವ ಮಾತೃಕೆ ಅಂದರೆ ಸಮಸ್ತ ಜೀವಿಗಳ ಮೂಲ ( ಯೊಶಿತ್ ಪುರುಷ ರೂಪೇಣ ಸ್ಫುರಂತೀ ವಿಶ್ವ-ಮಾತೃಕ).
ಪದ್ಮ ಪುಷ್ಪವು ಜಲವನ್ನೂ ಹಾಗೇ ಜೀವನವನ್ನೂ ಸಂಕೇತಿಸುತ್ತದೆ. ಪದ್ಮ ಪುಷ್ಪ ಹಾಗೂ ಜಲ ಇವೆರಡರೊಡನೆಯೂ ಶ್ರೀದೇವಿಯು ಒಡಗೂಡಿ, ಎರಡೂ ಜೀವನ, ಪರಿಶುದ್ಧತೆ ಮತ್ತು ಪ್ರಕಾಶಮಾನವಾದ ಸೌಂದರ್ಯಗಳನ್ನು ಸಂಕೇತಿಸುತ್ತವೆ.
ಹನ್ನೆರಡನೇ ಮಂತ್ರದ ಧ್ಯಾನ ಶ್ಲೋಕ : ಈ ಮಂತ್ರದ ಧ್ಯಾನ ಶ್ಲೋಕವನ್ನು ದೇವಿ ಅಮೃತೇಶ್ವರಿಗೆ ಅರ್ಪಿಸಲಾಗಿದೆ. ಅವಳನ್ನು ಕಲ್ಪತರು ವೃಕ್ಷದಡಿಯಲ್ಲಿ ಒಂದು ವಜ್ರಾಭರಣಗಳಿಂದ ಕೂಡಿದ ಕಲ್ಲಿನ ಮೇಲೆ ಬಂಗಾರ, ವಜ್ರ ವೈಡೂರ್ಯದಿಂದ ಕೂಡಿದ ಆಭರಣಗಳನ್ನೂ ಧರಿಸಿ ಹಾಗೂ ಅನೇಕ ಬಣ್ಣಗಳಿಂದ ಕೂಡಿದ ರತ್ನಖಚಿತಮೇಲ್ವಸ್ತ್ರವನ್ನು ಧರಿಸಿ ತನ್ನ ಪಾದದಡಿಯಲ್ಲಿ ರಕ್ತವರ್ಣದ ಪದ್ಮವನ್ನೇ ಕಾಲುಮಣೆಯನ್ನಾಗಿಸಿಕೊಂಡು, ಹಸ್ತದಲ್ಲಿ ಬಂಗಾರದ ರಾಜದಂಡವನ್ನು ಹಿಡಿದು ಹಾಗೂ ಮತ್ತೊಂದು ಹಸ್ತದಲ್ಲಿ ಒಂದು ಜೊತೆ ಪದ್ಮ ಪುಷ್ಪವನ್ನು ಹಿಡಿದು ಸಮಸ್ತ ವಿಶ್ವವನ್ನೂ ಆಶೀರ್ವದಿಸುತ್ತಿರುವಂತೆ ಆಸೀನಳಾಗಿರುವಳೆಂದು ವರ್ಣಿಸಲಾಗಿದೆ.
" ಧ್ಯಾಯೇತ್ ಕಲ್ಪತರೋರ್ಮೂಲೇ ರತ್ನ-ಸಿಂಹಾಸನೇ ಸ್ಥಿತಾಂ
ಪದ್ಮ-ದ್ವಯ-ಧರಾಂ ಪದ್ಮಾಂ ವರದಾಭಯ-ಧಾರಿಣೀಮ್ |
ಸರ್ವರತ್ನ ವಿಚಿತ್ರಾಂಗೀಂ ರಕ್ತ-ಶ್ರೀಪಾದ-ಪೀಠಿಕಂ
ಹೇಮ-ದಂಡ-ಸಿತ-ಛತ್ರ-ಚಾಮರ-ದ್ವಯ
ವೀಜಿತಾಮ್ "||
ಈ ಮಂತ್ರದ :- ಋಷಿ - ಚಿಕ್ಲೀತ (ಚಂದ್ರನನ್ನೂ ಋಷಿಯನ್ನಾಗಿ ಗುರುತಿಸಲಾಗಿದೆ); ಛಂದಸ್ಸು - ಅನುಷ್ಟುಪ್ ; ದೇವತೆ - ಅಮೃತೇಶ್ವರಿ ಮಹಾಲಕ್ಷ್ಮಿ, ಚಿಕ್ಲೀತನ ಮಾತೆ ; ಬೀಜ - ಅಂ ; ಶಕ್ತಿ - ಲಂ ; ಕೀಲಕ - ಶ್ರೀಂ ; ವಿನಿಯೋಗ - ಸ್ಥಿರ - ಲಕ್ಷ್ಮಿ , ಜ್ಞಾನ-ಸಿದ್ಧಿ ಮತ್ತು ಅನ್ನ-ಸಿದ್ಧಿ.
***********
ಶ್ಲೋಕ - 13 - ಸಂಸ್ಕೃತದಲ್ಲಿ : ಆರ್ದ್ರಾಂ ಪುಷ್ಕರಿಣೀಂ ಪುಷ್ಟಿಂ ಸುವರ್ಣಾಮ್ ಪದ್ಮಮಾಲಿನೀಮ್ |
ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ ||

ಕನ್ನಡದಲ್ಲಿ : ಆನೆಯಭಿಷೇಕ ಪಡೆದವಳು ದಯಾಳು ನಸುಗೆಂಪು ಸೊಂಪು ಕಮಲಮಾಲಿನಿಯು
ಚಂದ ಚಂದ್ರನೊಲು ಲಕ್ಷ್ಮಿಯೆನಗವಳ ಹರಕೆ ತಾ ಜಾತವೇದ

ತಾತ್ಪರ್ಯ :
ಆರ್ದ್ರಾನಕ್ಷತ್ರದಲ್ಲಿ ಹುಟ್ಟಿದವಳೂ ರುದ್ರರೂಪಳೂ ಕಮಲಧಾರಿಣಿಯೂ ಅಭಿಷೇಕ ಮಾಡುತ್ತಿರುವ ಗಜದ ಸೊಂಡಿಲಿನಿಂದ ಕೂಡಿದವಳೂ ಪುಷ್ಟಿಯನ್ನುಂಟುಮಾಡುವ ದೇವತೆಯೂ ಪಿಂಗಳವರ್ಣವುಳ್ಳವಳೂ ಕಮಲ ಮಾಲೆಯುಳ್ಳವಳೂ ಚಂದ್ರನಂತೆ ಪ್ರಕಾಶಮಾನಳೂ ಹಿರಣ್ಯಾಭರಣಯುಕ್ತಳೂ ಆದ ಲಕ್ಷ್ಮೀದೇವಿಯನ್ನು - ಓ ಜಾತವೇದಾಗ್ನಿಯೇ ! ನನಗಾಗಿ ಆಹ್ವಾನಿಸು. ದೇವತೆಗಳನ್ನು ಆಹ್ವಾನಿಸುವ ದೇವನು ಅಗ್ನಿಯು. ಆದ್ದರಿಂದ ಲಕ್ಷ್ಮೀದೇವಿಯನ್ನು ಬರಮಾಡುವಂತೆ ರುದ್ರರೂಪನಾದ ಅಗ್ನಿಯನ್ನು ಪ್ರಾರ್ಥಿಸಲಾಗಿದೆ.

ವ್ಯಾಖ್ಯಾನ :
ಈ ಮಂತ್ರವು ಮೊದಲನೇ ಮಂತ್ರದಂತೇ ಇದೆ. ಮಂತ್ರದ ಎರಡನೇ ಸಾಲು ಮೊದಲನೇ ಮಂತ್ರದಲ್ಲಿನ ಎರಡನೇ ಸಾಲಿನಲ್ಲಿರುವಂತೆ ಯಥಾವತ್ತಾಗಿದೆ. ಸಾಧಕನು ತನ್ನ ಬೇಡಿಕೆಯನ್ನು ಕುಬೇರ, ಮಣಿಭದ್ರ, ಕೀರ್ತಿ, ಕರ್ದಮ ಹಾಗೂ ಚಿಕ್ಲೀತರಿಗೆ ಸಲ್ಲಿಸಿದ ನಂತರ ಮತ್ತೆ ಜಾತವೇದ - ಅಗ್ನಿಯ ಬಳಿಗೇ ಮರಳಿ ಬಂದು ತನ್ನ ಮೂಲ ಕೋರಿಕೆಯನ್ನು ಜಾತವೇದನ ಬಳಿ ಮತ್ತೊಮ್ಮೆ ಸಲ್ಲಿಸುವನು.
ಶ್ರೀದೇವಿಯನ್ನು ಮತ್ತೆ ಆರ್ದ್ರಾ ಎಂಬುದಾಗಿ ವರ್ಣಿಸಲಾಗಿದೆ. ಇಲ್ಲಿ ಆರ್ದ್ರಾ ಎಂದರೆ ಹರಿಯುವ ದಯೆ ಎಂಬುದಾಗಿ; ಸುಲಭವಾಗಿ ಚಲಿಸುವ, ದಯೆ ಮತ್ತು ವಿವೇಚನೆಯ ಸ್ವಭಾವದ ಶ್ರೀದೇವಿಯು ದಯಾಮಯಿ.
ಶ್ರೀದೇವಿಯ ಜಲ, ಪದ್ಮ ಪುಷ್ಪ, ಮತ್ತು ಆನೆಗಳೊಂದಿಗಿನ ಒಡನಾಟವನ್ನು ಮತ್ತೊಮ್ಮೆ ಆರ್ದ್ರಾ, ಪುಷ್ಕರಿಣೀಂ, ಹಾಗೂ ಪಾದ್ಮಮಾಲಿನೀಮ್ ಪದಗಳ ಉಪಯೋಗದಿಂದ ವಿವರಿಸಲಾಗಿದೆ. ಆರ್ದ್ರಾಂ ಎಂಬುದು ಶ್ರೀದೇವಿಯ ಮೃದು ಹೃದಯವನ್ನು ಮತ್ತು ಅವಳನ್ನು ಎರಡು ಆನೆಗಳು ತಮ್ಮ ಸೊಂಡಿಲಿನಿಂದ ನೀರು ತುಂಬಿದ ಕೊಡಗಳನ್ನು ಅವಳ ಮೇಲೆ ಸುರಿಯುತ್ತಾ ಸೇವೆಗೈಯುತ್ತಿರುವುದನ್ನು ಹಾಗೂ ದೇವಿಯು ನೀರಿನಿಂದ ಒದ್ದೆಯಾಗುತ್ತಿರುವುದನ್ನು ಸೂಚಿಸುತ್ತದೆ. "ಆರ್ದ್ರಾಂ-ಪುಷ್ಕರಿಣೀಂ-ಪುಷ್ಟಿ" ಎಂಬುದು ಕಮಲ ಪುಷ್ಪದ ಮೂಲಕ ನೀರನ್ನು ಎರಚುತ್ತಿರುವುದನ್ನು ಸೂಚಿಸುವುದು. ಪುಷ್ಕರಿಣೀಂ ಪದವು ಮತ್ತೊಮ್ಮೆ ಪದ್ಮಕೊಳವನ್ನು ಹಾಗೂ ಹೆಣ್ಣು ಆನೆಯನ್ನು ಸೂಚಿಸುವುದು. ಅವಳನ್ನು ಪದ್ಮ-ಮಾಲಿನೀಂ ಎಂದು ವರ್ಣಿಸಿರುವುದು ಅವಳು ಪದ್ಮ ಪುಷ್ಪದ ಮಾಲೆಯನ್ನು ಧರಿಸಿರುವುದನ್ನು ಸೂಚಿಸುತ್ತದೆ. 
ಪುಷ್ಟಿ ಪದವು ಹೇರಳವಾದ ಪೌಷ್ಟಿಕತೆಯನ್ನು ಮತ್ತು ಇದು ಶ್ರೀದೇವಿಯ ಪೋಷಿಸುವ ಮಾತೃತ್ವವನ್ನು ಸೂಚಿಸುವುದು. ದೇವೀ ಮಾಹಾತ್ಮ್ಯದಲ್ಲಿ ದೇವಿಯನ್ನು 
" ಯಾ ದೇವೀ ಸರ್ವಭೂತೇಷು ಪುಷ್ಟಿ ರೂಪೇಣ ಸಂಸ್ಥಿತಾ " ಎಂದು ವಿವರಿಸಲಾಗಿದೆ. 
ಪಿಂಗಳಾ ಎಂದರೆ ಜ್ಯೋತಿಯ ಜ್ವಾಲೆಯ ತುದಿಯ ಕೆಂಪು-ಹಳದಿ-ಬಂಗಾರ ಬಣ್ಣವನ್ನು ಸೂಚಿಸುತ್ತದೆ. ಶ್ರೀದೇವಿಯು ಪಿಂಗಳ ಮೈಬಣ್ಣದಿಂದ ಪ್ರಕಾಶಿಸುತ್ತಿರುವಳು. ಇದು ಸತ್ತ್ವ ಮತ್ತು ರಜೋಗುಣಗಳ ಮಿಶ್ರಣ. ಪಿಂಗಳಾ ಎಂಬುದು ದುರ್ಗಾ ಮಾತೆಯ ಅನೇಕ ನಾಮಗಳಲ್ಲಿ ಒಂದು.
ಹದಿಮೂರನೇ ಮಂತ್ರದ ಧ್ಯಾನ ಶ್ಲೋಕ : ಈ ಮಂತ್ರದ ಧ್ಯಾನ ಶ್ಲೋಕವು ದೇವಿಯನ್ನು ಹೊಳೆಯುವ ಮತ್ತು ಮಧುರವಾಗಿ ಪ್ರಕಾಶಿಸುವ ಚಂದ್ರನ ಸೌಂದರ್ಯವನ್ನುಳ್ಳವಳೆಂದು, ಮಂದಹಾಸದಿಂದ ಕೂಡಿದ, ಪದ್ಮ ಪುಷ್ಪದ ಮೇಲೆ ಆಸೀನಳಾಗಿರುವಂತೆ ವರ್ಣಿಸುವುದು. ಅಲಕ್ಷ್ಮಿಯನ್ನು ಹಾಗೂ ಅವಳಿಂದುಂಟಾಗುವ ವಿಪತ್ತುಗಳನ್ನು, ಕೊಳಕು ಮತ್ತು ಅಜ್ಞಾನವನ್ನು ಹೋಗಲಾಡಿಸುವಂತೆ ದೇವಿಯನ್ನು ಪ್ರಾರ್ಥಿಸಲಾಗಿದೆ.

ಧ್ಯಾನ ಶ್ಲೋಕ : "ಆಕಾಶ-ಪದ್ಮಾಕರ-ಚಂದ್ರಬಿಂಬ ಪ್ಲವೋಲ್ಲಸಂತೀಂ ಪರಿಪೂರ್ಣಕಾಂತಿಂ |
ಪದ್ಮ-ಸ್ಥಿತಾಂ ಪದ್ಮಾಕರಾಂ ಪ್ರಪದ್ಯೇ ಲಕ್ಷ್ಮೀಂ ಅಲಕ್ಷ್ಮೀ ವಿನಿವೃತ್ತಯೇನ್ವಹಮ್"|| .
ಈ ಮಂತ್ರದ :-
ಋಷಿ - ಜಾತವೇದ; ಛಂದಸ್ಸು - ಅನುಷ್ಟುಪ್ ; ದೇವತೆ - ಶ್ರೀ ಮಹಾಲಕ್ಷ್ಮಿ ; ಬೀಜ - ಆಂ ; ಶಕ್ತಿ - ಸ್ವಾಹ ; ಕೀಲಕ - ಶ್ರೀಂ ; ವಿನಿಯೋಗ - ಅಮೃತತ್ತ್ವ ಸಿದ್ಧಿ.
**********
ಶ್ಲೋಕ - 14 - ಸಂಸ್ಕೃತದಲ್ಲಿ : ಆರ್ದ್ರಾಂ ಯಃ ಕರಿಣೀಂ ಯಷ್ಟಿಂ ಸುವರ್ಣಾಮ್ ಹೇಮಮಾಲಿನೀಮ್ |
ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ ||

ಕನ್ನಡದಲ್ಲಿ : ನ್ಯಾಯದಂಡವು ಕರದಿ ಕರುಣೆಯ ಕಡಲು ಮಿಸುನಿ ಮೈಬಣ್ಣ ಹೊನ್ನ ಹಾರ
ಸೂರ್ಯಕಾಂತೆಯವಳು ಲಕ್ಷ್ಮಿಯೆನಗವಳ ಹರಕೆ ತಾ ಜಾತವೇದ

ತಾತ್ಪರ್ಯ : ಓ ಜಾತವೇದಾಗ್ನಿಯೇ ! ಆರ್ದ್ರಾನಕ್ಷತ್ರದಲ್ಲಿ ಹುಟ್ಟಿದವಳೂ ರುದ್ರರೂಪಳೂ ಕಮಲಧಾರಿಣಿಯೂ ಪುಷ್ಟಿಕಾರಕ ದೇವತೆಯೂ ಉತ್ತಮವಾದ ದೇಹ ಕಾಂತಿಯುಳ್ಳವಳೂ ಸುವರ್ಣ ಮಾಲಾಧಾರಿಣಿಯೂ ಸೂರ್ಯನಂತೆ ಪ್ರಕಾಶಮಾನಳೂ ಹಿರಣ್ಯಾಭರಣಯುಕ್ತಳೂ ಆದ ಲಕ್ಷ್ಮೀದೇವಿಯನ್ನು ನನಗಾಗಿ ಆಹ್ವಾನಿಸು.

ವ್ಯಾಖ್ಯಾನ :
ಈ ಮಂತ್ರವು ಹದಿಮೂರನೇ ಮಂತ್ರದ ರಚನೆಯಂತೇ ಇದೆ. ಇದು ಹಿಂದಿನ ಮಂತ್ರದಲ್ಲಿನ ಚಂದ್ರನ ಬದಲಾಗಿ ಸೂರ್ಯನಲ್ಲಿರುವ ಗುಣಗಳನ್ನು ಸೂಚಿಸುತ್ತದೆ. ಇದರೊಂದಿಗೆ ಕೆಲವು ಹೊಸ ಪದವಿನ್ಯಾಸಗಳಿವೆ.
[ ಅನೇಕ ಗ್ರಂಥಗಳಲ್ಲಿ ದೇವಿಯನ್ನು ಸಮಸ್ತ ಜೀವಿಗಳ ಪರಮೋಚ್ಚ ಆಡಳಿತಗಾರ್ತಿಯೆಂದು ವಿವರಿಸಲ್ಪಟ್ಟಿದೆ. ಈ ಮಂತ್ರದಲ್ಲಿ ದೇವಿಯು ಪರಮೋಚ್ಚ ಆಡಳಿತಗಾರ್ತಿಯ ರಾಜದಂಡವನ್ನು ನಿಯಂತ್ರಿಸುವ; ಮತ್ತು ಮನುಷ್ಯರನ್ನು ಅವರಿಗೆ ನಿಗದಿಸಿದ ಕರ್ತವ್ಯಗಳನ್ನು ನಿಭಾಯಿಸುವಂತೆ ಹುರಿದುಂಬಿಸುವ ರೀತಿಯು ವಾಕ್-ಸೂಕ್ತದ ಮೂರನೇ ಶ್ಲೋಕದಲ್ಲಿ ದೇವಿಯು ಹೇಳುವಂತೆ - " ನಾನೇ ರಾಣೀ, ಸಮಸ್ತ ಒಳ್ಳೆಯ ವಿಚಾರಗಳ ಭಂಡಾರ, ಜ್ಞಾನಿ, ಹಾಗಾಗಿ ನಾನು ಅನೇಕ ರೂಪಗಳಲ್ಲಿ ವ್ಯಾಪಿಸಿರುವೆ " ಎಂದು ಹೋಲುತ್ತದೆ. 
" ಅಹಂ ರಾಸ್ತ್ರಿ ಸಂಗಮಣಿ ವಸುನಾಮ್ ಚಿಕಿತುಸಿ ಪ್ರಥಮ ಯಜ್ಞಿಯಾನಾಂ ತಾಂ ಮಾ ದೇವಾ ವ್ಯದದೂಃ ಪುರುತ್ರ ಭೂರಿಷ್ಟಾತ್ರಾಂ ಭೂರ್ಯಾವೇಷಯಂತೀಮ್ "]
" ಯಃ ಕರಿಣೀಂ ಯಷ್ಟಿಂ " ಪದಸಮುಚ್ಚಯವು ಸಾಕಷ್ಟು ಚರ್ಚೆಗೊಳಪಟ್ಟಿದೆ. ಇದು ಇಲ್ಲವೇ ರಾಜಯೋಗ್ಯ ರಾಜದಂಡ ಅಥವಾ ನ್ಯಾಯವನ್ನು ನೀಡುವ ಧರ್ಮದೇವತೆಯ ದಂಡ ಇಲ್ಲವೇ ಎರಡೂ ಆಗಿರಬಹುದು.
ಮತ್ತೊಂದು ವ್ಯಾಖ್ಯಾನವು ಹಿಂದಿನ ಮಂತ್ರದಲ್ಲಿರುವ ಪುಷ್ಕರಿಣಿಯನ್ನು ಸೂಚಿಸುತ್ತದೆ. ಅಲ್ಲಿ ಇದರ ಅರ್ಥವೆಂದರೆ ಹೆಣ್ಣು ಆನೆ. ಈ ಮಂತ್ರದಲ್ಲಿನ " ಯಃ ಕರಿಣೀಂ " ಪದಸಮುಚ್ಚಯವು ಪುಷ್ಕರಿಣಿಗಿಂತ ಭಿನ್ನವಾಗಿರುವುದು. ಈ ಮಂತ್ರದಲ್ಲಿ ಇದು - ಹೆಣ್ಣು ಆನೆಯು ಸೊಕ್ಕಿನಿಂದ, ಗರ್ವದಿಂದ ಮತ್ತು ಒಂದು ವಿಧದ ನಿರ್ಲಕ್ಷ್ಯದಿಂದ ಎಂಬ ಅರ್ಥವನ್ನು ಸೂಚಿಸುತ್ತದೆ. ದೇವಿಯ ನಡಿಗೆಯು ಹೆಣ್ಣು ಆನೆಯ ನಡಿಗೆಯನ್ನು ಹೋಲುವುದು. 
ಈ ಮಂತ್ರದಲ್ಲಿ ಶ್ರೀದೇವಿಯ ವೈಭವ ಮತ್ತು ಹೊಳಪನ್ನು ಸೂರ್ಯನ ವೈಭವ ಹಾಗೂ ಹೊಳಪಿಗೆ ಹೋಲಿಸಲಾಗಿದೆ ( ಸೂರ್ಯವತ್ ಪ್ರಕಾಶಮಾನಂ ತದ್ ರೂಪಂ ವಾ ). ವ್ಯಾಖ್ಯಾನಕಾರರು ಶ್ರೀದೇವಿಯನ್ನು ಸೌರದೇವತೆಗಳಾದ ಸಾವಿತ್ರಿ ಹಾಗೂ ಗಾಯತ್ರಿಯರೆಂದು ವಿವರಿಸಿರುವರು. ಇಬ್ಬರೂ ಸಂಕೇತ-ವಿದ್ಯಾ ಅಥವಾ ಆತ್ಮ-ವಿದ್ಯೆಯ ರೂಪ. 
ಮತ್ತೊಂದು ವಿವರಣೆಯಲ್ಲಿ ತಿಳಿಸುವುದೇನೆಂದರೆ ಶ್ರೀಸೂಕ್ತವನ್ನು ಹೇಗೆ ಕಮಲ ಪುಷ್ಪವು ಅರಳುವ ಮೊದಲು ಸೂರ್ಯನ ಪ್ರಥಮ ಕಿರಣವನ್ನು ನಿರೀಕ್ಷಿಸುವುದೋ ಅದೇರೀತಿ ಸೂರ್ಯನ ದಿಕ್ಕಿಗೆ ಮುಖ ಮಾಡಿ ಪಠಿಸಬೇಕು ಎಂದು. ಸೂರ್ಯ ಹಾಗೂ ಶ್ರೀದೇವಿಯರಿಗೆ ಸಾಮಾನ್ಯವಾದ ಗುಣವಾಚಕವು ಪದ್ಮ-ಪ್ರಿಯ. ಶ್ರೀದೇವಿಯನ್ನು ಕುರಿತು ಧ್ಯಾನಿಸುವಾಗ ಅವಳನ್ನು ಸೂರ್ಯ ಮಂಡಲದಲ್ಲಿ ಸ್ಥಾಪಿತಳಾಗಿ ಹಾಗೂ ಹೃದಯ ಪದ್ಮಗಳಿಂದ ಸುತ್ತುವರೆದಿರುವಂತೆ ಕಲ್ಪಿಸಿಕೊಳ್ಳ ಬೇಕು ( ಹೃತ್ ಪದ್ಮ ವಾಸಿನಿ ದೇವಿ, ಚಿದ್-ರೂಪಿಣಿ ಅಭಿಚ್ಯತೇ). ಹೃದಯ ಪ್ರದೇಶದಲ್ಲಿ ಸೂರ್ಯ ಮಂಡಲವಿರುವಂತೆ ಯೋಗವು ಗುರುತಿಸುತ್ತದೆ ( ಅನಾಹತ-ಪದ್ಮ). ಭಕ್ತನ ಅಂತರ್ಯದ ಚೇತನವೇ ಪದ್ಮ ( ಹೃದಯ-ಅರವಿಂದ) ಹಾಗೂ ಇದು ಬೆಳಕನ್ನು ಚೆಲ್ಲುತ್ತದೆ ಹಾಗೂ ಶ್ರೀದೇವಿಯ ಅನುಗ್ರಹದಿಂದ . ಶ್ರೀದೇವಿಯು ನಿಜವಾಗಿಯೂ ಸೂರ್ಯ-ಸ್ವರೂಪಿಣಿ. 
ಹದಿನಾಲ್ಕನೇ ಮಂತ್ರದ ಧ್ಯಾನ ಶ್ಲೋಕ :
ಈ ಮಂತ್ರದ ಧ್ಯಾನ ಶ್ಲೋಕವನ್ನು ಪವಿತ್ರ ವಜ್ರದಂತೆ ಹೊಳೆಯುತ್ತಿರುವ, ಬಾಣಗಳನ್ನು ಹಿಡಿದಿರುವ, ಹಾಗೂ ಅಮೃತದಿಂದ ತುಂಬಿದ ಬಿಂದಿಗೆಯನ್ನು ಹಿಡಿದಿರುವ ಮಹಾಲಕ್ಷ್ಮಿಗೆ ಅರ್ಪಿಸಲಾಗಿದೆ. ಮಹಾಲಕ್ಷ್ಮಿಯು ರಾಜ್ಯ ಹಾಗೂ ರಾಜ್ಯಭೋಗಗಳನ್ನು ಕರುಣಿಸುವಳು.
" ಪದ್ಮಂ ಮಣಿಮಯಂ ಕುಂಭಂ ಇಕ್ಷುಚಾಪಂ ಚ ಬಿಭ್ರತಿಂ |
ಪುಷ್ಪ-ಬಾಣಾಂ ಮಹಾಲಕ್ಶ್ಮೀಮ್ ಧ್ಯಾಯೇದ್ ರಾಜ್ಯ-ಪ್ರದಾಯಿನೀಮ್" ||
ಈ ಮಂತ್ರದ :-
ಋಷಿ - ಜಾತವೇದ; ಛಂದಸ್ಸು - ಅನುಷ್ಟುಪ್ ; ದೇವತೆ- ಶ್ರೀ ರಾಜ್ಯಲಕ್ಷ್ಮಿ ; ಬೀಜ - ಶ್ರೀಂ ; ಶಕ್ತಿ - ಹಂ ; ಕೀಲಕ - ಹ್ರೀಂ ; ವಿನಿಯೋಗ - ರಾಜ್ಯ ಪ್ರಾಪ್ತಿ
**********
ಶ್ಲೋಕ - 15 - ಸಂಸ್ಕೃತದಲ್ಲಿ : ತಾಂ ಮ ಆವಹ ಜಾತವೇದೋ ಲಕ್ಷೀಮನಪಗಾಮಿನೀಮ್ |
ಯಸ್ಯಾಂ ಹಿರಣ್ಯಂ ಪ್ರಭೂತಂ ಗಾವೋ ದಾಸ್ಯೋ‌sಶ್ವಾನ್,
ವಿಂದೇಯಂ ಪುರುಷಾನಹಮ್ ||

ಕನ್ನಡದಲ್ಲಿ : ತಾ ಜಾತವೇದ ಎನಗವಳ ಹರಕೆ ಕರಗಿ ಹೋಗದಾ ಸಿರಿಯ
ಪಡೆವೆ ಪರಿವಾರವಾಳು ಪಶುಕುದುರೆಗಳ ಪಡೆವೆನವಳಿಂದಲಮಿತ ಹೊನ್ನ

ತಾತ್ಪರ್ಯ : ಓ ಜಾತವೇದಾಗ್ನಿಯೇ ! ಯಾವ ಲಕ್ಷ್ಮೀದೇವಿಯು ಬರಲಾಗಿ ನಾನು ಅಧಿಕವಾದ ಸುವರ್ಣ ಸಂಪತ್ತನ್ನೂ ಗೋ ಮುಂತಾದ ಪಶುಗಳನ್ನೂ ದಾಸೀಜನರನ್ನೂ ಅಶ್ವ ಮುಂತಾದವುಗಳನ್ನೂ ಪುತ್ರಮಿತ್ರ ಕಳತ್ರಾದಿ ಜನರನ್ನೂ ಪಡೆಯುವೆನೋ ಅಂತಹ ನಿವೃತ್ತಿರಹಿತಳಾದ ಲಕ್ಷ್ಮೀದೇವಿಯನ್ನು ನನಗಾಗಿ ಆಹ್ವಾನಿಸು.

ವ್ಯಾಖ್ಯಾನ :
ಮುಕ್ತಾಯದ ಮಂತ್ರವು ಎರಡನೇ ಮಂತ್ರವನ್ನು ಹೋಲುತ್ತದೆ. ಎರಡೂ ಮಂತ್ರಗಳು ಅಭ್ಯುದಯ, ಸಂತೋಷ , ಸೌಖ್ಯ ಭಾವನೆ , ಸಂಪತ್ತು ಮತ್ತು ಹೇರಳವಾದ ಶ್ರೀಮಂತಿಕೆ, ಅಪಾರವಾದ ಬಂಗಾರ, ದನಕರುಗಳು, ಕುದುರೆಗಳು , ಮಕ್ಕಳು ಹಾಗೂ ಮೊಮ್ಮಕ್ಕಳು, ಆಳು-ಕಾಳುಗಳು ಮತ್ತು ಸೇವಕರು ದೊರಕಲೆಂದು ಆಶಿಸುತ್ತವೆ. ಲಕ್ಷ್ಮಿಯನ್ನು ಕುರಿತಾದ ಪ್ರಾರ್ಥನೆಯೇನೆಂದರೆ ಅವಳು ಸದಾ ಸಾಧಕನ ಮನೆಯಲ್ಲೇ ನೆಲಸಿ ಅಷ್ಟೂ ಅಲ್ಲದೆ ತಲೆ ತಲೆಮಾರುಗಳವರೆಗೂ ನೆಲಸಿಯೇ ಇರಬೇಕೆಂದು. 
ಈ ಕಡೇ ಮಂತ್ರವನ್ನು ಫಲಶ್ರುತಿಯನ್ನಾಗಿ ಪರಿಗಣಿಸಲಾಗಿದೆ. ಇದು ಶ್ರೀಸೂಕ್ತವನ್ನು ಪಠಿಸುವ, ಕೇಳುವ ಮತ್ತು ಧ್ಯಾನಿಸುವುದರಿಂದ ದೊರಕುವ ಫಲವನ್ನು ವಿವರಿಸುತ್ತದೆ. 
ಹದಿನೈದನೇ ಮಂತ್ರದ ಧ್ಯಾನ ಶ್ಲೋಕ :
ಈ ಮಂತ್ರದ ಧ್ಯಾನ ಶ್ಲೋಕವನ್ನು ಭೃಗು ಮುನಿಯ ಪುತ್ರಿಯಾದ ಲಕ್ಷ್ಮಿಗೆ ಅರ್ಪಿಸಲಾಗಿದೆ. ಲಕ್ಷ್ಮಿಯು ಸಮಸ್ತ ಜೀವಿಗಳಿಗೆ ಮಾತೆ; ತನ್ನ ಸಂತಸ ವದನದಲ್ಲಿ ಮುಗುಳು ನಗೆಯನ್ನು ಸೂಸುತ್ತಾ ಪ್ರಕಾಶಿಸುತ್ತಿರುವ , ಬಂಗಾರದಂತೆ ಹೊಳೆಯುತ್ತಿರುವ, ಬಗೆ ಬಗೆಯ ಅಭರಣಗಳಿಂದ ಶೋಭಿಸುತ್ತಿರುವ , ರಾಜ ಸಿಂಹಾಸನದಲ್ಲಿ ಆಸೀನಳಾಗಿರುವ, ರಾಜ ದಂಡವನ್ನು ಹಿಡಿದಿರುವ , ಸಮಸ್ತರಿಂದಲೂ ಸೇವಿಸಲ್ಪಡುತ್ತಿರುವ , ಅಗ್ನಿಯಿಂದ ಪೂಜಿಸಿಕೊಳ್ಳುತ್ತಿರುವ , ಸಮಸ್ತ ವಿಶ್ವವನ್ನೂ ಆಶೀರ್ವದಿಸುತ್ತಿರುವ ಮತ್ತು ಪ್ರಕೃತಿ ಹಾಗೂ ಸಮಸ್ತ ಜೀವಿಗಳಿಗೂ ಸಂತೋಷ ಮತ್ತು ಅಭ್ಯುದಯವನ್ನು ಕರುಣಿಸುತ್ತಿರುವಳು.
" ಧ್ಯಾಯೇಲ್ಲಕ್ಷ್ಮೀಂ ಪ್ರಹಸಿತಮುಖೀಂ ರಾಜ್ಯ-ಸಿಂಹಾಸನ-ಸ್ಥಾಂ 
ಮುದ್ರಾ-ಶಕ್ತಿಂ ಸಕಲ-ವಿನುತಾಂ-ಸರ್ವ-ಸಂಸೇವ್ಯಮಾನಾಮ್ |
ಅಗ್ನೌ-ಪೂಜ್ಯಾಂ ಅಖಿಲ-ಜನನೀಂ ಹೇಮ-ವರ್ಣಾಂ ಹಿರರ್ಣಾಂ
ಭಾಗ್ಯೋಪೇತಾಂ ಭುವನ-ಸುಖದಾಂ ಭಾರ್ಗವೀಂ ಭೂತ-ಧಾತ್ರೀಮ್ ||
**********
ಶ್ಲೋಕ - 16 - ಸಂಸ್ಕೃತದಲ್ಲಿ : ಓಂ ಮಹಾಲಕ್ಷ್ಮ್ಯೈ ಚ ವಿದ್ಮಹೇ ವಿಷ್ಣುಪತ್ನೀ ಚ ಧೀಮಹಿ|
ತನ್ನೋ ಲಕ್ಷ್ಮಿ ಪ್ರಚೋದಯಾತ್ ||

ವಿವರಣೆ :
ಯಾರು ಶ್ರೀಕಾಮನಾಗಿರುತ್ತಾನೆಯೋ ಅವನು ಶುಚಿರ್ಭೂತನಾಗಿ ಮತ್ತು ನಿಯಮವುಳ್ಳವನಾಗಿ ಪ್ರತಿದಿನವೂ ಸಂಕಲ್ಪ ದಿನ ಮೊದಲುಗೊಂಡು ಹದಿನೈದು ವರ್ಷಗಳ ಪರ್ಯಂತ ತನ್ನ ಶಾಖೆಯಿಂದ ಉಕ್ತವಾದ ವಿಧಾನದಿಂದ ಅಗ್ನಿಯನ್ನು ಸಂಸ್ಕಾರಮಾಡಿ ಶ್ರೀಸೂಕ್ತದ ಹದಿನೈದು ಋಕ್ ಗಳಿಂದ ಆಜ್ಯವನ್ನು ಹೋಮಮಾಡಬೇಕು. ನಂತರ ಶ್ರೀದೇವಿಗೆ ಸಂಬಂಧಪಟ್ಟ ಶ್ರೀಸೂಕ್ತದ ಹದಿನೈದು ಋಕ್ ಗಳನ್ನು ಒಟ್ಟಿಗೆ ಒಂದು ಸಾರಿಯಂತೆ ಶ್ರೀಕಾಮನಾದವನು ಜಪಿಸಬೇಕು.

ಫಲಶ್ರುತಿ
ಮಂತ್ರ - 16 (ಅ) - ಸಂಸ್ಕೃತದಲ್ಲಿ :
ಯಃ ಶುಚಿಃ ಪ್ರಯತೋ ಭೂತ್ವಾ ಜುಹುಯಾದಾಜ್ಯ ಮನ್ವಹಮ್ |
ಶ್ರಿಯಃ ಪಂಚದಶರ್ಚಂ ಚ ಶ್ರೀಕಾಮಃ ಸತತಂ ಜಪೇತ್ ||

ತಾತ್ಪರ್ಯ :-
ಸಂಪತ್ತನ್ನು ಬಯಸುವವನು ನಿತ್ಯಕರ್ಮಗಳನ್ನು ಮುಗಿಸಿ ಒಳಗೂ ಹೊರಗೂ ಶುಚಿಯಾಗಿದ್ದುಕೊಂಡು, ಹದಿನೈದು ದಿನಗಳ ಕಾಲ ಪ್ರತಿದಿನವೂ ಶ್ರೀಸೂಕ್ತವನ್ನು ಶ್ರದ್ಧೆಯಿಂದ ಹದಿನೈದುಬಾರಿ ಪಠಿಸುತ್ತ ಅಗ್ನಿಯಲ್ಲಿ ಪ್ರತಿ ಮಂತ್ರದಲ್ಲೂ ಹದಿನೈದು ಬಾರಿ ತುಪ್ಪದಿಂದ ಹೋಮ ಮಾಡಬೇಕು. ಹೀಗೆ ಶ್ರದ್ಧೆಯಿಂದ ಹೋಮ ಮಾಡಿದಲ್ಲಿ ಶ್ರೀದೇವಿಯ ಅನುಗ್ರಹವು ಲಭಿಸುವುದು.

ಪರಿಶಿಷ್ಟ ಭಾಗ :-
ಮಂತ್ರ - 1 - ಸಂಸ್ಕೃತದಲ್ಲಿ :
ಪದ್ಮಾನನೇ (ಪದ್ಮಾಸನೇ) ಪದ್ಮ ಊರು ಪದ್ಮಾಕ್ಷೀ ಪದ್ಮಸಂಭವೇ |
ತ್ವಂ ಮಾಂ ಭಜಸ್ವ ಪದ್ಮಾಕ್ಷೀಯೇನ ಸೌಖ್ಯಂ ಲಭಾಮ್ಯಹಮ್ ||

ತಾತ್ಪರ್ಯ :-
ತಾವರೇ ಹೂವಿನಂತೆ ಮನೋಹರವಾದ ಮುಖ ಉಳ್ಳವಳೇ, ಕಮಲದಂತೆ ಸುಂದರವಾದ ತೊಡೆಗಳುಳ್ಳವಳೇ, ಪದ್ಮದ ಎಸಳಿನಂತೆ ವಿಶಾಲವಾದ ಕಣ್ಣುಗಳುಳ್ಳವಳೇ, ಕಮಲ ಪುಷ್ಪದಲ್ಲೇ ಜನಿಸಿದವಳೇ; ಹೇ ಲಕ್ಷ್ಮೀ! ನನಗೆ ಸೌಖ್ಯವನ್ನು ಕರುಣಿಸಲು ಆ ರೂಪದಿಂದ ಬಂದು ನನ್ನ ಮನೆಯನ್ನು ಸೇರುವವಳಾಗು. 

ಮಂತ್ರ - 2 - ಸಂಸ್ಕೃತದಲ್ಲಿ : ಅಶ್ವದಾಯೀ ಚ ಗೋದಾಯಿ ಧನದಾಯೀ ಮಹಾಧನೇ
ಧನಂ ಮೇ ಜುಷತಾಂ ದೇವಿ ಸರ್ವಾನ್ ಕಾಮಾಂಶ್ಚ ದೇಹಿ ಮೇ ||

ತಾತ್ಪರ್ಯ :- ಕುದುರೆ, ಗೋವು, ಧನಸಂಪತ್ತುಗಳನ್ನು ದಯಪಾಲಿಸುವ ಮಹಾಐಶ್ವರ್ಯಶಾಲಿನಿಯಾದ ಶ್ರೀದೇವಿಯೇ ! ನಿನ್ನ ಅನುಗ್ರಹದಿಂದ ನನಗೆ ಧನಲಾಭವಾಗಲಿ. ನನ್ನ ಎಲ್ಲ ಇಷ್ಟಾರ್ಥಗಳನ್ನೂ ಪೂರೈಸುವವಳಾಗು.

ಮಂತ್ರ - 3 - ಸಂಸ್ಕೃತದಲ್ಲಿ : ಪದ್ಮಾಸನೇ ಪದ್ಮಿನೀ ಪದ್ಮಹಸ್ತೇ (ಪದ್ಮವಿಪದ್ಮಪತ್ರೇ) ಪದ್ಮಪ್ರಿಯೆ ಪದ್ಮದಲಾಯತಾಕ್ಷಿ
ವಿಶ್ವಪ್ರಿಯೇ ವಿಷ್ಣುಮನೋsನುಕೂಲೇ ತ್ವತ್ಪಾದಪದ್ಮಂ ಮಯಿಸಂನಿಧತ್ಸ್ವ ||

ತಾತ್ಪರ್ಯ :- ತಾವರೆಹೂವನ್ನೇ ಆಸನವಾಗಿ ಉಳ್ಳವಳೇ ! ಪದ್ಮವನ್ನೇ ನಿನ್ನ ಸ್ವತ್ತಾಗಿ ಹೊಂದಿರುವವಳೇ ! ಕೈಗಳಲ್ಲಿ ತಾವರೆಹೂಗಳನ್ನು ಹಿಡಿದಿರುವವಳೇ ! ಪದ್ಮದಳದೋಪಾದಿಯಲ್ಲಿ ವಿಶಾಲವಾದ ಹಾಗೂ ಮನೋಹರವಾದ ಕಣ್ಣುಗಳುಳ್ಳವಳೇ ! ತಾವರೆ ಹೂವಿನಲ್ಲಿ ಅಪಾರ ಪ್ರೀತಿಯುಳ್ಳವಳೇ ! ಜಗತ್ತಿಗೆ ಪ್ರಿಯಳಾದವಳೇ ! ವಿಷ್ಣುವಿನ ಮನೋವೃತ್ತಿಯನ್ನ ನುಸರಿಸಿ ನಡೆಯುವವಳೇ ! ನಿನ್ನ ಪಾದಕಮಲವನ್ನು ನನ್ನಲ್ಲಿ ಯಾವಾಗಲೂ ಇಟ್ಟು ಕಾಪಾಡು.

ಮಂತ್ರ - 4 - ಸಂಸ್ಕೃತದಲ್ಲಿ : ಪುತ್ರ ಪೌತ್ರ ಧನಂ ಧಾನ್ಯಂ ಹಸ್ತ್ಯಾಶ್ವಾದಿಗವೇರಥಂ
ಪ್ರಜಾನಾಂ ಭವಸೀ ಮಾತಾ ಆಯುಷ್ಮಂತಂ ಕರೋತು ಮಾಂ ||

ತಾತ್ಪರ್ಯ :- ಲೋಕಮಾತೆ ಲಕ್ಷ್ಮೀದೇವಿಯೇ ! ನೀನು ನನಗೆ ಮಕ್ಕಳು, ಮೊಮ್ಮಕ್ಕಳು ಆದಿ ಸಂತತಿಯನ್ನೂ, ಧನ, ಧಾನ್ಯ ,ಆನೆ, ಕುದುರೆ ,ಆಡು, ಕುರಿ, ರಥ, ಆಕಳು, ಮುಂತಾದುವು ಗಳನ್ನೂ ಕೊಟ್ಟು ಅವುಗಳನ್ನು ಅನುಭವಿಸಲು ನಾನು ಬಹುಕಾಲ ಬಾಳುವಂತೆ ಆಯುಷ್ಮಂತನನ್ನಾಗಿ ಮಾಡು.

ಮಂತ್ರ - 5 - ಸಂಸ್ಕೃತದಲ್ಲಿ : ಧನಮಗ್ನಿರ್ಧನಂ ವಾಯುರ್ಧನಂ ಸೂರ್ಯೋಧನಂ ವಸುಃ
ಧನಮಿಂದ್ರೋ ಬೃಹಸ್ಪತಿರ್ವರುಣಂ ಧನಮಶ್ನುತೇ ||

ತಾತ್ಪರ್ಯ :- ಅಗ್ನಿ ವಾಯು ಸೂರ್ಯ ಅಷ್ಟವಸುಗಳು ಇಂದ್ರ ದೇವಗುರು ಬೃಹಸ್ಪತಿ ವರುಣ ಮುಂತಾದ ದೇವತೆ ಗಳೆಲ್ಲರೂ ನನಗೆ ಧನಸ್ವರೂಪರಾಗಿ ಅನುಗ್ರಹಿಸಲಿ. ಆ ಮೂಲಕ ಲಕ್ಷ್ಮಿಯು ನನಗೆ ಒಲಿಯಲಿ.

ಮಂತ್ರ - 6 - ಸಂಸ್ಕೃತದಲ್ಲಿ : ವೈನತೇಯ ಸೋಮಂ ಪಿಬ ಸೋಮಂ ಪಿಬತು ವೃತ್ರಹಾ
ಸೋಮಂ ಧನಸ್ಯ ಸೋಮಿನೋ ಮಹ್ಯಂ ದದಾತು ಸೋಮಿನಃ ||

ತಾತ್ಪರ್ಯ : ವಿನುತಾಸುತನಾದ ಗರುಡದೇವನು ಸೋಮಪಾನ ಮಾಡಲಿ. ವೃತ್ರನಾಶಕನಾದ ಇಂದ್ರನೂ ಸೋಮಪಾನ ಮಾಡಲಿ. ಸೋಮಪಾನಾರ್ಹರಾದ ದೇವತೆಗಳೆಲ್ಲ ದೇವಿಯ ಅನುಗ್ರಹದಿಂದ ಸೋಮಪಾನ ಮಾಡಿ ತೃಪ್ತರಾಗಿ ಅವರು ನನಗೂ ಸೋಮವನ್ನು ಕೊಡಲಿ.

ಮಂತ್ರ - 7 - ಸಂಸ್ಕೃತದಲ್ಲಿ : ನ ಕ್ರೋಧೋ ನ ಚ ಮಾತ್ಸರ್ಯಂ ನ ಲೋಭೋ ನಾಶುಭಾಮತಿಃ
ಭವಂತಿ ಕೃತಪುಣ್ಯಾನಾಂ ಭಕ್ತಾನಾಂ ಶ್ರೀಸೂಕ್ತಂ ಜಪೇತ್ಸದಾ ||

ತಾತ್ಪರ್ಯ :- ಶ್ರೀಸೂಕ್ತವನ್ನು ಜಪಿಸುವ ಭಕ್ತರ ಹೃದಯದಲ್ಲಿ ಕೋಪ, ಅಸೂಯೆ, ದುಷ್ಟ ಆಲೋಚನೆ, ಜಿಪುಣತನ, ಮತ್ಸರ ಮುಂತಾದವು ತಲೆದೋರುವುದಿಲ್ಲ.

ಮಂತ್ರ - 8 - ಸಂಸ್ಕೃತದಲ್ಲಿ : ಸರಸಿಜನಿಲಯೇ ಸರೋಜಹಸ್ತೇ ಧವಲತರಾಂ ಶುಕಗಂಧಮಾಲ್ಯ ಶೋಭೆ
ಭಗವತಿ ಹರಿವಲ್ಲಭೇ ಮನೋಜ್ಞೇ ತ್ರಿಭುವನಭೂತಿಕರಿ ಪ್ರಸೀದ ಮಹ್ಯಮ್ ||

ತಾತ್ಪರ್ಯ :- ಎಲೈ ಕಮಲದಲ್ಲಿ ವಾಸಿಸುವವಳೇ, ಹಸ್ತಗಳಲ್ಲಿ ಕಮಲ ಪುಷ್ಪವನ್ನು ಹಿಡಿದಿರುವವಳೇ, ಅತ್ಯಂತ ಶುಭ್ರವಾದ ಬಟ್ಟೆ, ಗಂಧ, ಹೂಗಳಿಂದ ಅಲಂಕೃತಳಾದವಳೇ, ಪೂಜ್ಯಳೇ, ವಿಷ್ಣುಪತ್ನಿಯೇ, ಮನೋಜ್ಞೆಯೇ, ಮೂರುಲೋಕಗಳಿಗೂ ಐಶ್ವರ್ಯಪ್ರದಳೇ, ನನಗೆ ಪ್ರಸನ್ನಳಾಗು.

ಮಂತ್ರ - 9 - ಸಂಸ್ಕೃತದಲ್ಲಿ : ವಿಷ್ಣುಪತ್ನೀಂ ಕ್ಷಮಾಂ ದೇವೀಂ ಮಾಧವೀಂ ಮಾಧವಪ್ರಿಯಾಮ್
ಲಕ್ಷ್ಮೀಂ ಪ್ರಿಯಸಖೀಂ ದೇವೀಂ ನಮಾಮ್ಯಚ್ಯುತವಲ್ಲಭಾಮ್ ||

ತಾತ್ಪರ್ಯ :- ವಿಷ್ಣುವಿನ ಪತ್ನಿಯೂ, ಕ್ಷಮಾಗುಣಸಂಪನ್ನಳೂ, ಮಾಧವಿಯೂ, ಮಾಧವ ಪ್ರಿಯಳೂ, ಪ್ರಿಯಸಖಿಯೂ, ಅಚ್ಯುತನಿಗೆ ಅಚ್ಚು ಮೆಚ್ಚಾದವಳೂ ಆದ ಶ್ರೀದೇವಿ ಲಕ್ಷ್ಮಿಯನ್ನು ನಾನು ನಮ್ರನಾಗಿ ನಮಸ್ಕರಿಸುತ್ತೇನೆ.

ಮಂತ್ರ - 10 - ಸಂಸ್ಕೃತದಲ್ಲಿ : ಶ್ರೀರ್ವರ್ಚಸ್ಯಮಾಯುಷ್ಯಮಾರೋಗ್ಯಮಾವಿಧಾತ್ಪವಮಾನಂ ಮಹೀಯತೇ
ಧನಂ ಧಾನ್ಯಂ ಪಶುಂ ಬಹುಪುತ್ರಲಾಭಂ ಶತಸಂವತ್ಸರಂ ದೀರ್ಘಮಾಯುಃ ||

ತಾತ್ಪರ್ಯ :- ಸಂಪತ್ತು ವರ್ಚಸ್ಸು ಆಯಸ್ಸು ಆರೋಗ್ಯ ಶೋಭಾಯಮಾನವಾದ ಮಹಿಮೆ ಧನ ಧಾನ್ಯ ಪಶು ಬಹು ಮಕ್ಕಳ ಪ್ರಾಪ್ತಿ ನೂರುವರ್ಷದ ದೀರ್ಘವಾದ ಬದುಕು ಇವುಗಳು ಲಕ್ಷ್ಮೀಕಟಾಕ್ಷದಿಂದುಂಟಾಗಲಿ.

ಮಂತ್ರ - 11 - ಸಂಸ್ಕೃತದಲ್ಲಿ : ವರ್ಷಂತು ತೇ ವಿಭಾವರಿದಿವೋ ಅಭ್ರಸ್ಯ ವಿದ್ಯುತಃ
ರೋಹಂತು ಸರ್ವಬೀಜಾನ್ಯವ ಬ್ರಹ್ಮದ್ವಿಷೋ ಜಹಿ ||

ತಾತ್ಪರ್ಯ :- ಹೇ ದೇವೀ ! ದ್ಯುಲೋಕಾಶ್ರಿತವಾದ ಗುಡುಗು ಮಿಂಚುಗಳಿಂದ ಕೂಡಿದ ಮೋಡಗಳು ಯಥೇಚ್ಛವಾಗಿ ಮಳೆಗರೆಯಲಿ. ಅದರ ಮೂಲಕ ಎಲ್ಲಾ ಬೀಜಗಳು ಬೆಳೆದು ಫಲಿಸಲಿ. ವೇದವಿಹಿತ ಕರ್ಮಗಳನ್ನು ಅನುಷ್ಠಾನ ಮಾಡುವ ಬ್ರಾಹ್ಮಣರನ್ನು ಕಾಪಾಡು. ಅವರ ಶತ್ರುಗಳನ್ನು ನಾಶಮಾಡು.

ಮಂತ್ರ - 12 - ಸಂಸ್ಕೃತದಲ್ಲಿ : ಋಣರಾಗಾದಿ ದಾರಿದ್ರ್ಯ ಪಾಪ ಕ್ಷುದಪಮೃತ್ಯವಃ
ಭಯ ಶೋಕ ಮಾನಸ್ತಾಪಾ ನಷ್ಯಂತು ಮಮ ಸರ್ವದಾ||

ತಾತ್ಪರ್ಯ :- ಋಣಬಾಧೆ ರೋಗಬಾಧೆ ದರಿದ್ರ ಪಾಪ ಹಸಿವು ಅಪಮೃತ್ಯು ಭಯ ದುಃಖ ಮನಸ್ತಾಪ ಮೊದಲಾದವುಗಳೆಲ್ಲಾ ಲಕ್ಷ್ಮೀ ಉಪಾಸನೆಯಿಂದ ನಿರಂತರ ನಾಶವಾಗುವುವು.
ಅನೇನ ಯಥಾ ಶಕ್ತ್ಯಾ ಯಥಾ ಜ್ಞಾನೇನ ಅಮುಖ ಸಂಖ್ಯಾಕೇನ ಕೃತೇನ ಶ್ರೀಸೂಕ್ತ ಜಪಾಖ್ಯೇನ ಕರ್ಮಣಾ ತೇನ ಶ್ರೀ ಭಗವತೀ ಲಕ್ಷ್ಮೀ ದೇವತಾ ಪ್ರೀಯತಾಮ್ ||
ಓಂ ವಿಷ್ಣವೇನಮೋ, ವಿಷ್ಣವೇನಮೋ, ವಿಷ್ಣವೇನಮಃ||

|| ಓಂ ತತ್ಸತ್ ||


ಲೇಖನದ ಮೂಲಗಳು : ಸಂಸ್ಕೃತ ಹಾಗೂ ಕನ್ನಡದಲ್ಲಿನ ಮಂತ್ರಗಳು - ಶ್ರೀ.ಬಿ.ಎಸ್.ಚಂದ್ರಶೇಖರ್ ಅವರ - ಸವಿಗನ್ನಡ ಸ್ತೋತ್ರಚಂದ್ರಿಕೆ
ಪ್ರಸ್ತಾವನೆ ಮತ್ತು ಮಂತ್ರ 1 ರಿಂದ 9 ರ ವರೆಗಿನ ವ್ಯಾಖ್ಯಾನ : Blog of Sri.S.Seshadri - posted under Shri Suktam and its Philosophical Significance by Sri.K.N.Ramesh - groups.google.com/forum/#!msg/samskrita
ಎಲ್ಲ ಮಂತ್ರಗಳಿಗೆ ವಿವರಣೆಗಳು :- ಸಸ್ವರ ಮಹನ್ಯಾಸಾದಿ ಮಂತ್ರಾಃ - ವಿದ್ವಾನ್ ಶೇಷಾಚಲ ಶರ್ಮ.
ಮಂತ್ರ 10 ರಿಂದ 15 ರ ವರೆಗಿನ ವ್ಯಾಖ್ಯಾನ : sreenivasaraos.com/category/srisukta.
ಆಂಗ್ಲ ಭಾಷೆಯಲ್ಲಿದ್ದ ಸಮಸ್ತ ವ್ಯಾಖ್ಯಾನಗಳ ಭಾವಾರ್ಥವನ್ನು ಕನ್ನಡಕ್ಕೆ ಪ್ರಸ್ತುತಿ : ಗುರುಪ್ರಸಾದ್ ಹಾಲ್ಕುರಿಕೆ.

Comments

  1. Amazing... Awesome... Classic...

    Thanks a lot for your tremendous efforts and making it with the grace of God....

    Now it becomes easy to understand the scope and further also to remember the ruchas...

    ReplyDelete

Post a Comment

Popular posts from this blog

ಶಿವ ಸಂಕಲ್ಪ ಸೂಕ್ತ ( ಶುಕ್ಲಯಜುರ್ವೇದ, ವಾಜಸನೇಯ ಸಂಹಿತಾ)

ಮಂತ್ರಪುಷ್ಪ (ತೈತ್ತರೀಯ ಆರಣ್ಯಕ)

ಪುರುಷ ಸೂಕ್ತ