ನಾರಾಯಣೋಪನಿಷತ್ (ಕೃಷ್ಣಯಜುರ್ವೇದ)




ನಾರಾಯಣೋಪನಿಷತ್ (ಕೃಷ್ಣಯಜುರ್ವೇದ)


ಪ್ರಸ್ತಾವನೆ :

ನಾರಾಯಣೋಪನಿಷತ್ ಕೃಷ್ಣ ಯಜುರ್ವೇದಕ್ಕೆ ಸಂಬಂಧಿಸಿದೆ. ಈ ಉಪನಿಷತ್ತು ಶ್ರೀಮನ್ ನಾರಾಯಣನ ವರ್ಣನೆಗೆ ಸಂಬಂಧಿಸಿದೆ. ನಾರಾಯಣನ ಮತ್ತೊಂದು ಹೆಸರು ವಿಷ್ಣು - ಪರಬ್ರಹ್ಮ ಹಾಗೂ ಸಮಸ್ತ ವಿಶ್ವದ ಸೃಷ್ಟಿಕರ್ತ. ಮೊದಲಿಗೆ ನಾರಾಯಣ ಎಂದು ಬ್ರಹ್ಮನಿಗೆ ಹೇಳಲಾಗುತ್ತಿತ್ತು. ಅನಂತರ ಆ ಹೆಸರನ್ನು ವಿಷ್ಣುವಿಗೆ ಕರೆಯಲಾಯಿತು. ಪುರಾಣದಲ್ಲಿ ನರ-ನಾರಾಯಣ  (ವಿಷ್ಣುವಿನ ಮತ್ತೊಂದು ಅವತಾರ) ಎಂಬ ಹೆಸರೂ ವಿಷ್ಣುವಿಗೆ ಒದಗಿ ಬಂತು. ಒಂದು ಪೌರಾಣಿಕ ಹೇಳಿಕೆಯ ಪ್ರಕಾರ ನಾರಾಯಣನು ಧರ್ಮ ದೇವನ ನಾಲ್ಕು ಮಕ್ಕಳಲ್ಲಿ ಒಬ್ಬನೆಂದೂ ಹಾಗೂ ಉಳಿದ ಮೂವರು ನರ, ಹರಿ,ಮತ್ತು ಕೃಷ್ಣ.
ಮತ್ತೊಂದು ಪೌರಾಣಿಕ ನಿರೂಪಣೆಯ ಪ್ರಕಾರ ಲಕ್ಷ್ಮೀನರಸಿಂಹ ಸ್ವಾಮಿಯು ತನ್ನ ಅವತಾರ ಸಮಾಪ್ತಿಯ ಸಂದರ್ಭದಲ್ಲಿ ತಾನು ಎರಡು ಭಾಗವಾದನು - ತನ್ನ ಸಿಂಹ ಭಾಗವು ನಾರಾಯಣನಾಗಿ ಮತ್ತು ಮಾನವ ಭಾಗವು ನರನಾಗಿ ಪರಿವರ್ತನೆಗೊಂಡನು. ಹಾಗಾಗಿ ನರ ಹಾಗೂ ನಾರಾಯಣರು ಮುನಿಗಳು. ಇವರಿಬ್ಬರೂ ಅನೇಕ ವರ್ಷಗಳು ದೀರ್ಘ ತಪಸ್ಸನ್ನಾಚರಿಸಿ ಇಂದ್ರನ ಗಮನವನ್ನು ತಮ್ಮೆಡೆಗೆ ಆಕರ್ಷಿಸಿದರು. ಈ ಸಂದರ್ಭದಲ್ಲಿ ಇಂದ್ರನು ತನ್ನ ಪದವಿಯನ್ನು ರಕ್ಷಿಸಿಕೊಳ್ಳಲು ಇವರ ತಪಸ್ಸನ್ನು ಭಂಗಗೊಳಿಸಲು ಸುರಲೋಕದ ಅತ್ಯುತ್ತಮ ನಾಟ್ಯಗಾರ್ತಿಯರನ್ನು ಅವರೆಡೆಗೆ ಕಳುಹಿಸಿದನು. ನಾರಾಯಣನು ಈ ಸುಂದರಿಯರ ನಾಟ್ಯವನ್ನು ತಾಳ್ಮೆಯಿಂದ ವೀಕ್ಷಿಸಿದನು. ಅನಂತರ ಇಂದ್ರನಿಗೆ ಬುದ್ಧಿಕಲಿಸಲು ನಾರಾಯಣನು ತನ್ನ ತೊಡೆಯಿಂದ ಅತ್ಯದ್ಭುತವಾದ ಸುಂದರಿಯನ್ನು ಸೃಷ್ಟಿಸಿದನು. ಅವಳೇ ಊರ್ವಶಿ. ಇದಾದನಂತರ ಇಂದ್ರನು ತನ್ನ ತಪ್ಪನ್ನು ಅರಿತು ನಾರಾಯಣನಲ್ಲಿ ಕ್ಷಮೆಯನ್ನು ಬೇಡಿದನು. ನಾರಾಯಣೋಪನಿಷತ್ತು ಶ್ರೀಮನ್ನಾರಾಯಣನನ್ನು ಸೃಷ್ಟಿಕರ್ತನನ್ನಾಗಿ ವರ್ಣಿಸಿ ಮಂತ್ರಗಳ ಆಧ್ಯಾತ್ಮಿಕ ವೈಶಿಷ್ಟ್ಯವನ್ನು ವಿವರಿಸಲಾಗಿದೆ.

ಮಂತ್ರ - 1 - ಸಂಸ್ಕೃತದಲ್ಲಿ
ಓಂ ಸಹನಾವವತು | ಸಹ ನೌ ಭುನಕ್ತು | ಸಹವೀರ್ಯಂ ಕರವಾವ ಹೈ | ತೇಜಸ್ವಿನಾಮಧೀತಮಸ್ತು ಮಾವಿದ್ವಿಷಾವ ಹೈಓಂ ಶಾಂತಿಃ ಶಾಂತಿಃ ಶಾಂತಿಃ |
ಕನ್ನಡದಲ್ಲಿ :
ಓಂ ಎಮ್ಮಿಬ್ಬರನು ಪೊರೆಯಲಿ | ಎಮ್ಮಿಬ್ಬರನು ಪೋಷಿಸಲಿ | ಎಮ್ಮ ಸಹಕಾರ್ಯ ಚುರುಕಾಗಿ ಪರಿಣಾಮಕಾರಿಯಾಗಿರಲಿಯಾರನೂ ದ್ವೇಷಿಸದಂತಾಗಲಿ | ಓಂ ಶಾಂತಿಃ ಶಾಂತಿಃ ಶಾಂತಿಃ |

ವಿವರಣೆ :
ಗುರು ಶಿಷ್ಯರಿಬ್ಬರನ್ನೂ ಜ್ಞಾನಾರ್ಜನೆಯ ಹಾದಿಯಲ್ಲಿ ಭಗವಂತನು ರಕ್ಷಿಸಲಿ. ಎಚ್ಚರದಲ್ಲಿದ್ದಾಗ ಜ್ಞಾನದ ಬುಗ್ಗೆಯು ನಮ್ಮ ಜೀವನವನ್ನು ಪೋಷಿಸಲಿ. ಜ್ಞಾನಾರ್ಜನೆಯು ನಮ್ಮನ್ನು ಶುದ್ಧೀಕರಿಸಿ ನಮ್ಮಿಬ್ಬರನ್ನೂ ಶಕ್ತಿ ಹಾಗೂ ಚೈತನ್ಯದಿಂದ ಒಟ್ಟಾಗಿ ಕೆಲಸಮಾಡಲು ಸಾಧ್ಯವಾಗಲಿ. ನಮ್ಮ ಅಧ್ಯಯನವು ಜ್ಞಾನಾರ್ಜನೆಗೆ ಪೂರಕವಾಗಿ ನಮ್ಮನ್ನು ಸತ್ಯದ ಹಾದಿಯಲ್ಲಿ ಕೊಂಡೊಯ್ಯಲಿ ಮತ್ತು ಸಂಕುಚಿತ ಭಾವನೆಯಿಂದುಂಟಾಗುವ ಹಗೆತನವುಂಟಾಗದಿರಲಿ. ಶಾಂತಿಯು ಆದಿದೈವೀಕ, ಆದಿಭೌತಿಕ ಮತ್ತು ಆಧ್ಯಾತ್ಮಿಕ ನೆಲೆಗಳಲ್ಲಿ ಸದಾ ನೆಲಸಲಿ.

ಮಂತ್ರ - 2 - ಸಂಸ್ಕೃತದಲ್ಲಿ :
ಓಂ ಅಥ ಪುರುಷೋ ಹ ವೈ ನಾರಾಯಣೋಕಾಮಯತ್ | ಪ್ರಜಾಸ್ಸೃಜೇಯೇತಿ |
ನಾರಾಯಣಾತ್ ಪ್ರಾಣೋ ಜಾಯತೇ | ಮನಸ್ಸರ್ವೇಂದ್ರಿಯಾಣಿ ಚ | ಖಂ ವಾಯುರ್ಜ್ಯೋತಿರಾಪಃ ಪೃಥಿವೀ ವಿಶ್ವಸ್ಯ ಧಾರಿಣೀ | ನಾರಾಯಣಾದ್ಬ್ರಹ್ಮಾಜಾಯತೇ | ನಾರಾಯಣಾದ್ರುದ್ರೋ ಜಾಯತೇ | ನಾರಾಯಣಾದಿಂದ್ರೋ ಜಾಯತೇ | ನಾರಾಯಣಾದ್ವಾದಶಾದಿತ್ಯಾ ರುದ್ರಾ ವಸವಸ್ಸರ್ವಾಣಿ ಚ ಛಂದಾಗ್ಂಸಿ | ನಾರಾಯಣಾದೇವ ಸಮುತ್ಪದ್ಯಸ್ತೇ | ನಾರಾಯಣೇ ಪ್ರವರ್ತಂತೇ | ನಾರಾಯಣೇ ಪ್ರಲೀಯಂತೇ|
ಕನ್ನಡದಲ್ಲಿ :
ಓಂ ನಾರಾಯಣನು ಪ್ರಜೆಗಳ ಸೃಷ್ಟಿಸ ಬಯಸಿದನು | ಪ್ರಜೆಗಳು ಜನಿಸಲೆಂದೆನಿಸಲವನಿಂದ ಪ್ರಾಣವುದಿಸಿತು| ಮನಸು ಸರ್ವೇಂದ್ರಿಯಂಗಳು | ಗಗನ , ಗಾಳಿ ಬೆಳಕು ನೀರು , ಇವೆಲ್ಲವುಗಳ ಧರಿಸುವ ಭೂಮಿಯುದಿಸಿದವು| ನಾರಾಯಣನಿಂದ ಬ್ರಹ್ಮನುದಿಸಿದನು| ನಾರಾಯಣನಿಂದ ರುದ್ರನುದಿಸಿದನು |ನಾರಾಯಣನಿಂದ ಇಂದ್ರನುದಿಸಿದನು| ನಾರಾಯಣನಿಂದ ದ್ವಾದಶಾದಿತ್ಯರು ಏಕಾದಶ ರುದ್ರರು ಅಷ್ಟವಸುಗಳೆಲ್ಲರುದಿಸಿದರು, ಎಲ್ಲ ಛಂದಸ್ಸುಗಳುದಿಸಿದವು| ನಾರಾಯಣನಲ್ಲೆ ಇವೆಲ್ಲ ವರ್ತಿಪವು | ನಾರಾಯಣನಲ್ಲೆ ಇವು ಲೀನವಹವು


ವಿವರಣೆ :
ಓಂ ! ನಾರಾಯಣನನ್ನು ಸೃಷ್ಟಿಕರ್ತನೆಂದು ವರ್ಣಿಸಲಾಗಿದೆ. ಈ ಆಲೋಚನೆಯಿಂದಾಗಿ ಅವನಿಂದಲೇ ಪ್ರಾಣವು ಉದಯಿಸಿತು. ಸೃಷ್ಟಿಯಲ್ಲಿನ ಎಲ್ಲವನ್ನೂ ಕೊಂಡೊಯ್ಯುಲು ಮನಸ್ಸು-  ಮತ್ತು ಶರೀರದ ಎಲ್ಲ ಭಾಗಗಳು ಹಾಗೂ ಆಕಾಶ, ಗಾಳಿ, ಬೆಳಕು, ನೀರು ಮತ್ತು ಭೂಮಿಗಳು ಉದಯಿಸಿದವು. ನಾರಾಯಣನಿಂದ, ಬ್ರಹ್ಮನು ಹುಟ್ಟಿದನು. ನಾರಾಯಣನಿಂದ ರುದ್ರನು ಹುಟ್ಟಿದನು. ನಾರಾಯಣನಿಂದ ಇಂದ್ರನು ಹುಟ್ಟಿದನು. ನಾರಾಯಣನಿಂದ ಎಲ್ಲವನ್ನೂ ಆಳುವ ಮನುಷ್ಯರು ಹುಟ್ಟಿದರು. ನಾರಾಯಣನಿಂದ ಹನ್ನೆರಡು ಸೂರ್ಯರು, ಹನ್ನೊಂದು ರುದ್ರರು, ಎಂಟು ವಸುಗಳು ಮತ್ತು ಬರವಣಿಗೆಗೆ ಆಧಾರವಾಗುವ ಎಲ್ಲರೂ ಹುಟ್ಟಿದರು. ಈ ಎಲ್ಲ ಕಾರ್ಯಗಳೂ ಕೇವಲ ನಾರಾಯಣನಿಂದ ಮಾತ್ರ. ಇವೆಲ್ಲವೂ ಅಂತ್ಯವಾಗುವುದು ನಾರಾಯಣನಲ್ಲಿ. ಹೀಗೆ ಋಗ್ವೇದವು ಬಣ್ಣಿಸುತ್ತದೆ.

(ಹನ್ನೆರಡು ಅದಿತಿಯ ಮಕ್ಕಳಾದ ಆದಿತ್ಯರು - ದಾಥ, ಮಿತ್ರ , ಆರ್ಯಮ, ರುದ್ರ, ವರುಣ, ಸೂರ್ಯ, ಭಗ, ವೈವಸ್ವನ್, ಪೂಷ, ಸವಿತ, ತ್ವಷ್ಟ, ಮತ್ತು ವಿಷ್ಣು.
ಹನ್ನೊಂದು ರುದ್ರರೆಂದರೆ - ಮನ್ಯು, ಮನು, ಮಹೀನಸನ್, ಮಹನ್, ಶಿವನ್, ಋತುಧ್ಚಜನ್, ಉಗ್ರ ರೇತಸ್, ಭವನ್, ಕಾಮನ್, ವಾಮದೇವನ್, ಮತ್ತು ಧೃತವೃತನ್.
ದಕ್ಷಪ್ರಜಾಪತಿಯ ಮಗಳಾಸ ವಸುವಿನ ಎಂಟು ವಸುಗಳೆಂದರೆ - ಧರನ್, ದೃವನ್, ಸೋಮನ್, ಅಹಸ್ಸ್, ಅನಿಲನ್, ಅನಲನ್, ಪ್ರತ್ಯೂಷನ್, ಮತ್ತು ಪ್ರಭಾಸನ್).

ಮಂತ್ರ - 3 - ಸಂಸ್ಕೃತದಲ್ಲಿ :
ಅಥ ನಿತ್ಯೋ ನಾರಾಯಣಃ | ಬ್ರಹ್ಮಾ ನಾರಾಯಣಃ | ಶಿವಶ್ಚ ನಾರಾಯಣಃ | ಶಕ್ರಶ್ಚ ನಾರಾಯಣಃ | ದ್ಯಾವಾಪೃಥಿವ್ಯೌ ಚ ನಾರಾಯಣಃ | ಕಾಲಶ್ಚ ನಾರಾಯಣಃ | ದಿಶಶ್ಚ ನಾರಾಯಣಃ | ಊರ್ಧ್ವಶ್ಚ ನಾರಾಯಣಃ | ಅಧಶ್ಚ ನಾರಾಯಣಃಅಂತರ್ಬಹಿಶ್ಚ ನಾರಾಯಣಃ | ನಾರಾಯಣಾ ಏವೇದಗಂ ಸರ್ವಮ್| ಯದ್ಭೂತಂ ಯಶ್ಚಭವ್ಯಮ್ | ನಿಷ್ಕಲೋ ನಿರಂಜನೋ ನಿರ್ವಿಕಲ್ಪೋ ನಿರಾಖ್ಯಾತಶ್ಶುದ್ಧೋ ದೇವ ಏಕ ನಾರಾಯಣಃ | ನ ದ್ವಿತಿಯೋsಸ್ತಿ ಕಶ್ಚಿತ್ | ಯ ಏವಂ ವೇದ ಸವಿಷ್ಣುರೇವ ಭವತಿ | ಸ ವಿಷ್ಣುರೇವ ಭವತಿ |
ಕನ್ನಡದಲ್ಲಿ :
ನಾರಾಯಣನು ನಿತ್ಯನು | ನಾರಾಯಣನು ಬ್ರಹ್ಮ| ಶಿವನು ನಾರಾಯಣನೆ | ಇಂದ್ರನು ನಾರಾಯಣನೆ | ಸಗ್ಗ ಬುವಿಗಳು ನಾರಾಯಣ | ಕಾಲವು ನಾರಾಯಣ | ಎಲ್ಲ ದಿಕ್ಕುಗಳು ನಾರಾಯಣ | ಮೇಲಿಹುದೂ ನಾರಾಯಣ| ಕೆಳಗಿಹುದು ನಾರಾಯಣ | ಒಳಹೊರಗಿನದೆಲ್ಲ ನಾರಾಯಣ | ಇರುವಿದೆಲ್ಲವು ಹಿಂದೆ ಆದವುಗಳೆಲ್ಲ ಮುಂದೆ ಆಗಲಿಹುದೆಲ್ಲ, ನಾರಾಯಣನೆ | ನಿಷ್ಕಳಂಕ ನಿರಂಜನ ನಿರ್ವಿಕಲ್ಪನು ಬಣ್ಣನೆಗೆ ನಿಲುಕದ ಶುದ್ಧನೊಬ್ಬನೆ ನಾರಾಯಣ ಇನ್ನೆರಡನೆಯದಿಲ್ಲ | ಇದನರಿತವನು ವಿಷ್ಣುವೇ ಆಗುವನು | ಅವನು ವಿಷ್ಣುವೇ ಆಗುವನು |

ವಿವರಣೆ :
ನಾರಾಯಣನು ಸನಾತನ. ನಾರಾಯಣನೇ ಬ್ರಹ್ಮ, ಶಿವ, ಇಂದ್ರ, ಕಾಲ (ಯಮಧರ್ಮ). ಎಲ್ಲದಿಕ್ಕುಗಳೂ ನಾರಾಯಣನೇ. ಎಲ್ಲ ಬದಿಗಳೂ ನಾರಾಯಣನೇ. ಒಳಗೂ ಹೊರಗೂ ನಾರಾಯಣನೇ. ಏನಾಗಿದ್ದರೂ, ಏನಾಗುತ್ತಿರುವುದೂ ಹಾಗೂ ಏನಾಗುವುದೋ ಎಲ್ಲವೂ ನಾರಾಯಣನೇ. ಕೇವಲ ಭಗವನ್ ನಾರಾಯಣನು ಮಾತ್ರ ಕಳಂಕರಹಿತ, ಮಾಲಿನ್ಯರಹಿತ, ಕ್ರಮರಹಿತ, ಅಂತ್ಯವಿಲ್ಲದವ, ವರ್ಣನೆಗೆ ನಿಲುಕದವ, ಮತ್ತು ಯಾವಾಗ ನಾರಾಯಣನು ಇರುವನೋ ಅಲ್ಲಿ ಬೇರೊಬ್ಬರಿರಲು ಅಸಾಧ್ಯ. ಅವನನ್ನು ಯಾರು ಅರಿಯುತ್ತಾರೋ ಅವರು ಸ್ವತಃ ವಿಷ್ಣುವೇ ಆಗುತ್ತಾರೆ. ಹೀಗೆ ಯಜುರ್ವೇದದಲ್ಲಿ ವರ್ಣಿಸಲಾಗಿದೆ.

ಮಂತ್ರ - 4 - ಸಂಸ್ಕೃತದಲ್ಲಿ :
ಓಂ ಇತ್ಯಗ್ರೇ ವ್ಯಾಹರೇತ್ | ನಮ ಇತಿ ಪಶ್ಚಾತ್| ನಾರಾಯಣಾಯೇತ್ಯುಪರಿಷ್ಟಾತ್ | ಓಂ ಇತ್ಯೇಕಾಕ್ಷರಮ್| ನಮ ಇತಿದ್ವೇ ಅಕ್ಷರೇ | ನಾರಾಯಣಾಯೇತಿ ಪಂಚಾಕ್ಷರಾಣಿ | ಏತದ್ವೈ ನಾರಾಯಣಸ್ಯಾಷ್ಟಾಕ್ಷರಂ ಪದಮ್ | ಯೋ ಹ ವೈ ನಾರಾಯಣಸ್ಯಾಷ್ಟಾಕ್ಷರಂ ಪದಮಧ್ಯೇತಿ | ಅನಪಬ್ರವಸ್ಸರ್ವಮಾಯುರೇತಿ | ವಿಂದತೇ ಪ್ರಾಜಾಪತ್ಯಗ್ಂ ರಾಯಸ್ಪೋಷಂ ಗೌಪತ್ಯಮ್| ತತೋsಮೃತತ್ವಮಶ್ನುತೇ | ತತೋಮೃತತ್ವಮಶ್ನುತ ಇತಿ | ಯ ಏವಂ ವೇದ|
ಕನ್ನಡದಲ್ಲಿ :
ಓಂ ಎಂದುಚ್ಚರಿಸು ಮೊದಲು | ಬಳಿಕ ನಮವೆನ್ನು | ಆಮೇಲೆ ನಾರಾಯಣವೆನ್ನು | ಓಂ ಎಂಬುದೊಂದಕ್ಷರವು| ನಮವೆರಡಕ್ಷರನಾರಾಯಣಾಯ ಎಂಬುವೈದಕ್ಷರಗಳು| ಓಂ ನಮೋ ನಾರಾಯಣಾಯ ಎಂಬುದೆಂಟಕ್ಷರದ ಪದ| ಈ ಎಂಟಕ್ಷರಗಳ ಪಠಿಸುವನು ದೋಷವಿರದ ಪೂರ್ಣಾಯು ಹೊಂದುವನು | ಪ್ರಜಾಪತಿಯಾಗುವನು, ಐಶ್ವರ್ಯ ಹೊಂದುವನು , ಪಶುಸಂಪದವ ಪಡೆಯುವನು ಬಳಿಕ ಅಮೃತತ್ವವೊಂದುವನು | ಬಳಿಕ ಅಮೃತತ್ವವೊಂದುವನು | ಇದೆ ವೇದವು |

ವಿವರಣೆ :
ಮೊದಲು ಓಂಕಾರವನ್ನು ಉಚ್ಚರಿಸು. ನಂತರ ನಮ ಎನ್ನಿ. ತದನಂತರ ನಾರಾಯಣ ಎನ್ನಿ. ಓಂ ಕಾರದಲ್ಲಿ ಒಂದು ಅಕ್ಷರವಿದ್ದರೆ ನಮ ಪದದಲ್ಲಿ ಎರಡಕ್ಷರವಿದ್ದು ನಾರಾಯಣ ಹೆಸರಲ್ಲಿ ಐದು ಅಕ್ಷರಗಳಿವೆ. ಇವೆಲ್ಲವೂ ಒಟ್ಟಾದಾಗ ಎಂಟಕ್ಷರದಓಂ ನಮೋ ನಾರಾಯಣಆಗುತ್ತದೆ. ಯಾರು ಈ ಎಂಟಕ್ಷರದ ಮಂತ್ರವನ್ನು ಪಠಿಸುವರೋ ಅವರು ಯಾವುದೇ ಕಳಂಕವಿಲ್ಲದೇ ಸಂಪೂರ್ಣ ಜೀವನವನ್ನು ಹೊಂದುತ್ತಾರೆ. ಅವನು ಪ್ರಜೆಗಳ ಪತಿಯಾದನಂತರ ಜೀವನದಲ್ಲಿ ಸಂಪತ್ತು ಗೋವುಗಳು ಮತ್ತು ಎಲ್ಲವಿಧದ ಐಶ್ವರ್ಯವನ್ನು ಪಡೆದು ಕಡೆಗೆ ಮುಕ್ತಿಯನ್ನು ಹೊಂದುತ್ತಾರೆ. ಈ ರೀತಿಯಾಗಿ ಸಾಮವೇದದಲ್ಲಿ ಬಣ್ಣಿಸಲಾಗಿದೆ.

ಮಂತ್ರ - 5 - ಸಂಸ್ಕೃತದಲ್ಲಿ :
ಪ್ರತ್ಯಗಾನಂದಂ ಬ್ರಹ್ಮಪುರುಷಂ ಪ್ರಣವಸ್ವರೂಪಮ್| ಅಕಾರ ಉಕಾರ ಮಕಾರ ಇತಿ | ತಾನೇಕಧಾ ಸಮಭರತ್ತದೋಮಿತಿ | ಯಮುಕ್ತ್ವಾಮುಚ್ಯತೇ ಯೋಗೀ ಜನ್ಮ ಸಂಸಾರ ಬಂಧನಾತ್ | ಓಂ ನಮೋ ನಾರಾಯಣಾಯೇತಿ ಮಂತ್ರೋಪಾಸಕಃ | ವೈಕುಂಠಭುವನ ಲೋಕಂ ಗಮಿಷ್ಯತಿ | ತದಿದಂ ಪರಂ ಪುಂಡರೀಕಂ ವಿಜ್ಞಾನಘನಂತಸ್ಮಾತ್ತದಿದಾವನ್ಮಾತ್ರಂ| ಬ್ರಹ್ಮಣ್ಯೋ ದೇವಕೀ ಪುತ್ರೋ ಬ್ರಹ್ಮಣ್ಯೋ ಮಧುಸೂದನಃ | ಬ್ರಹ್ಮಣ್ಯಃ ಪುಂಡರೀಕಾಕ್ಷೋ ಬ್ರಹ್ಮಣ್ಯೋ ವಿಷ್ಣುರಚ್ಯುತ | ಸರ್ವಭೂತಸ್ಥಮೇಕಂ ವೈ ನಾರಾಯಣಮ್ | ಕಾರಣರೂಪಮಕಾರಣ ಪರಬ್ರಹ್ಮೋಂಏತದಥರ್ವ ಶಿರೋ ಯೋsಧೀತೇ |
ಕನ್ನಡದಲ್ಲಿ :
ಸದಾನಂದರೂಪ ಬ್ರಹ್ಮನು ಪ್ರಣವ ಸ್ವರೂಪಿ | ಅಕಾರ ಉಕಾರ ಮಕಾರವೆಂದು | ಆ ಪ್ರಣವ ಬ್ರಹ್ಮಪುರುಷನು ವಿವಿಧ ಬಗೆಯಲಿ ಬೆಳೆದು ಓಂಕಾರನಾಗುವನು | ಅದನು ಧ್ಯಾನಿಸುವ ಯೋಗಿ ಜನ್ಮ ಸಂಸಾರ ಬಂಧನದಿಂದ ಮುಕ್ತನಾಗುವನು | `ಓಂ ನಮೋ ನಾರಾಯಣಾಯ ´ ಎಂಬ ಮಂತ್ರದುಪಾಸಕನು ವೈಕುಂಠಭುವನಕೆ ಸಾರುವನು | ಮಿಂಚಂಥ ಬೆಳಕ ಕಿರಣ ಬೀರುವ ಜ್ಞಾನ ತುಂಬಿದ ಹೃದಯಕಮಲವದು ವೈಕುಂಠಭುವನ | ದೇವಕೀ ಪುತ್ರ ಬ್ರಹ್ಮನು | ಮಧುಸೂದನನು ಬ್ರಹ್ಮನು | ಕಮಲದಳಗಣ್ಣವನು ಬ್ರಹ್ಮನು | ಚ್ಯುತಿಯಿರದ ವಿಷ್ಣುವೆ ಬ್ರಹ್ಮನು | ಸರ್ವಭೂತಗಳಲಿರುವವನು ನಾರಾಯಣನೊಬ್ಬನೆ ಕಾರಣ ಪುರುಷ ಅಕಾರಣನವನು ಪರಬ್ರಹ್ಮ ಓಂ | ಇದರ್ಥರ್ವವೇದದ ನುಡಿಯು|

ವಿವರಣೆ :
ಪ್ರತಿಯೊಬ್ಬ ಸಂತೃಪ್ತ ಬ್ರಹ್ಮ ಪುರುಷನೂ (ಆತ್ಮನೂ) “    ಅಕ್ಷರಗಳ ಸಂಗಮವಾದ ಓಂ ಕಾರದ ಪ್ರಣವ ಸ್ವರೂಪವೇ. ಆ ಪ್ರಣವವು ಅನೇಕ ರೀತಿಯಲ್ಲಿ ಬೆಳೆದು ಓಂಕಾರನಾಗಿ ಮತ್ತು ಅದರಲ್ಲೇ ಧ್ಯಾನಮಗ್ನನಾಗಿರುವ ಆ ಯೋಗಿಯು ಮುಕ್ತಿಯನ್ನು ಹೊಂದುವನು. ಯಾವ ಯೋಗಿಯುಓಂ ನಮೋ ನಾರಾಯಣಾಯಮಂತ್ರದಲ್ಲಿ ಧ್ಯಾನಮಗ್ನನಾದರೆ ಅವನು ವಿಷ್ಣುವಿನ ವಾಸಸ್ಥಾನವಾದ ವೈಕುಂಠವನ್ನು ತಲುಪುವನು. ಆ ವೈಕುಂಠವು ಶಾಶ್ವತವಾದ ಜ್ಞಾನದಿಂದೊಡಗೂಡಿರುವ ವಿಷ್ಣುವಿನ ಹೃದಯಕಮಲ ಹಾಗೂ ಅದರಿಂದ ಮಿಂಚಿನಂತೆ ಹೊರಸೂಸುವ ಬೆಳಕಿನ ರೇಖೆ. ದೇವಕಿಯ ಮಗನೇ ಬ್ರಹ್ಮಮ್. ಮಧುವೆಂಬ ಅಸುರನನ್ನು ಸಂಹರಿಸಿದ ಮಧುಸೂದನನೇ ಬ್ರಹ್ಮಮ್. ಕಮಲದ ಕಣ್ಣುಳ್ಳವನೇ ಬ್ರಹ್ಮಮ್ ಹಾಗೂ ಅಚ್ಯುತನೆಂದು ಕರೆಯುವ  ಭಗವನ್ ವಿಷ್ಣು. ಸಮಸ್ತ ಜೀವಿಗಳ ಇರುವಿಕೆಗೆ ಕಾರಣನಾದ ಆ ಪುರುಷನೇ ನಾರಾಯಣನು. ಅವನು ಕಾರಣರಹಿತ ಪರಬ್ರಹ್ಮನಾದ ಓಂ. ಹೀಗೆ ಅಥರ್ವ ವೇದದಲ್ಲಿ ಬಣ್ಣಿಸಲಾಗಿದೆ.

ಮಂತ್ರ - 6 - ಸಂಸ್ಕೃತದಲ್ಲಿ :
ಪ್ರಾತರಧೀಯಾನೋ ರಾತ್ರಿಕೃತಂ ಪಾಪಂ ನಾಶಯತಿ| ಸಾಯಮಧೀಯಾನೋ ದಿವಸಕೃತ ಪಾಪಂ ನಾಶಯತಿ| ಮಾಧ್ಯಂದಿನಮಾದಿತ್ಯಾಭಿಮುಖೋsಧೀಯಾನಃ ಪಂಚಪಾತಕೋಪಪಾತಕಾತ್ಪ್ರಮುಚ್ಯತೇ | ಸರ್ವವೇದ ಪಾರಾಯಣ ಪುಣ್ಯಂ ಲಭತೇ | ನಾರಾಯಣ ಸಾಯುಜ್ಯಮವಾಪ್ನೋತಿ | ಶ್ರೀಮನ್ನಾರಾಯಣ ಸಾಯುಜ್ಯಮವಾಪ್ನೋತಿ ಚ ಏವಂ ವೇದ| ಇತ್ಯುಪನಿಷತ್ |
ಕನ್ನಡದಲ್ಲಿ :
ಬೆಳಗಲಿದನು ಪಠಿಸಲು ರಾತ್ರಿ ಮಾಡಿದ ಪಾಪ ಕಳೆಯುವುದು | ಸಂಜೆಯಿದನೋದಿದೊಡೆ ಹಗಲುಗೈದ ಪಾಪ ಕಳೆವುದು | ಮಧ್ಯಾಹ್ನದಲಿ ಸೂರ್ಯಗಭಿಮುಖನಾಗಿ ಪಠಿಸಲು ಐದು ಮಾಪಾತಕಗಳು ಪಪಾತಕಗಳು ತೊಲಗುವುದು | ಎಲ್ಲ ವೇದವನೋದಿದ ಪುಣ್ಯ ಗಳಿಸುವನು | ನಾರಾಯಣ ಸಾಯುಜ್ಯವೊಂದುವನು | ಶ್ರೀಮನ್ನಾರಾಯಣ ಸಾಯುಜ್ಯವೊಂದುವನಿದು ವೇದವು | ಇದುಪನಿಷತ್ತು |

ವಿವರಣೆ :
ಮುಂಜಾನೆಯ ವೇಳೆಯಲ್ಲಿ ಯಾರು ಈ ಸೂಕ್ತವನ್ನು ಪಠಿಸುವರೋ ಅವರು  ರಾತ್ರೆಯಲ್ಲಿ ಮಾಡಿರುವ ಎಲ್ಲ ಪಾಪಗಳೂ ನಾಶವಾಗುವುದು. ಸಂಧ್ಯಾಸಮಯದಲ್ಲಿ ಯಾರು ಈ ಸೂಕ್ತವನ್ನು ಪಠಿಸುವರೋ ಅವರು ಹಗಲಿನಲ್ಲಿ ಮಾಡಿದ ಸರ್ವ ಪಾಪಗಳೂ ನಾಶವಾಗುವವು. ಮಧ್ಯಾನ್ಹ ಕಾಲದಲ್ಲಿ ಸೂರ್ಯನನ್ನು ಕುರಿತು ಯಾರು ಈ ಸೂಕ್ತವನ್ನು ಪಠಿಸುವರೋ ಅವರು ಐದು ವಿಧದ ಪಾಪಗಳು ಹಾಗೂ ಅವುಗಳ ಸಹ ಪಾಪಗಳಿಂದಲೂ ಮುಕ್ತಿಯನ್ನು ಹೊಂದುವರು. ಅಲ್ಲದೇ ಅವರಿಗೆ ಸರ್ವ ವೇದಗಳನ್ನು ಪಾರಾಯಣ ಮಾಡಿದ ಪುಣ್ಯವು ಲಭಿಸುವುದು. ಕಡೆಯಲ್ಲಿ ಅವರು ನಾರಾಯಣನಲ್ಲಿ ಐಕ್ಯವಾಗುವರು. ಇದೇ ವೇದಗಳ ಜ್ಞಾನವು.

ಮಂತ್ರ- 7 - ಸಂಸ್ಕೃತದಲ್ಲಿ
ಓಂ ಸಹನಾವವತು | ಸಹ ನೌ ಭುನಕ್ತು | ಸಹವೀರ್ಯಂ ಕರವಾವ ಹೈ | ತೇಜಸ್ವಿನಾಮಧೀತಮಸ್ತು ಮಾವಿದ್ವಿಷಾವ ಹೈಓಂ ಶಾಂತಿಃ ಶಾಂತಿಃ ಶಾಂತಿಃ |
ಕನ್ನಡದಲ್ಲಿ :
ಓಂ ಎಮ್ಮಿಬ್ಬರನು ಪೊರೆಯಲಿ | ಎಮ್ಮಿಬ್ಬರನು ಪೋಷಿಸಲಿ | ಎಮ್ಮ ಸಹಕಾರ್ಯ ಚುರುಕಾಗಿ ಪರಿಣಾಮಕಾರಿಯಾಗಿರಲಿಯಾರನೂ ದ್ವೇಷಿಸದಂತಾಗಲಿ | ಓಂ ಶಾಂತಿಃ ಶಾಂತಿಃ ಶಾಂತಿಃ |

ವಿವರಣೆ :
ಗುರು ಶಿಷ್ಯರಿಬ್ಬರನ್ನೂ ಜ್ಞಾನಾರ್ಜನೆಯ ಹಾದಿಯಲ್ಲಿ ಭಗವಂತನು ರಕ್ಷಿಸಲಿ. ಎಚ್ಚರದಲ್ಲಿದ್ದಾಗ ಜ್ಞಾನದ ಬುಗ್ಗೆಯು ನಮ್ಮ ಜೀವನವನ್ನು ಪೋಷಿಸಲಿ. ಜ್ಞಾನಾರ್ಜನೆಯು ನಮ್ಮನ್ನು ಶುದ್ಧೀಕರಿಸಿ ನಮ್ಮಿಬ್ಬರನ್ನೂ ಶಕ್ತಿ ಹಾಗೂ ಚೈತನ್ಯದಿಂದ ಒಟ್ಟಾಗಿ ಕೆಲಸಮಾಡಲು ಸಾಧ್ಯವಾಗಲಿ. ನಮ್ಮ ಅಧ್ಯಯನವು ಜ್ಞಾನಾರ್ಜನೆಗೆ ಪೂರಕವಾಗಿ ನಮ್ಮನ್ನು ಸತ್ಯದ ಹಾದಿಯಲ್ಲಿ ಕೊಂಡೊಯ್ಯಲಿ ಮತ್ತು ಸಂಕುಚಿತ ಭಾವನೆಯಿಂದುಂಟಾಗುವ ಹಗೆತನವುಂಟಾಗದಿರಲಿ. ಶಾಂತಿಯು ಆದಿದೈವೀಕ, ಆದಿಭೌತಿಕ ಮತ್ತು ಆಧ್ಯಾತ್ಮಿಕ ನೆಲೆಗಳಲ್ಲಿ ಸದಾ ನೆಲಸಲಿ.
ಇಲ್ಲಿಗೆ ಕೃಷ್ಣ ಯಜುರ್ವೇದದಲ್ಲಿನ ನಾರಾಯಣೋಪನಿಷತ್ ಮುಗಿಯಿತು.

ಮೂಲ:-
ಸಂಸ್ಕೃತ ಹಾಗೂ ಕನ್ನಡದಲ್ಲಿನ ಮಂತ್ರಗಳು - ಶ್ರೀ.ಬಿ.ಎಸ್.ಚಂದ್ರಶೇಖರ ಅವರಸವಿಗನ್ನಡ ಸ್ತೋತ್ರಚಂದ್ರಿಕೆ
ವಿವರಣೆ :- hinduwebsite.com - ಆಂಗ್ಲಭಾಷೆಯ ವಿವರಣೆಗಳ ಭಾವಾರ್ಥವನ್ನು ಕನ್ನಡದಲ್ಲಿ ಪ್ರಸ್ತುತ ಪಡಿಸಿದವರು - ಗುರುಪ್ರಸಾದ್ ಹಾಲ್ಜುರಿಕೆ.







Comments

  1. ತುಂಬಾ ಚೆನ್ನಾಗಿದೆ ಸರ್

    ReplyDelete

Post a Comment

Popular posts from this blog

ಶಿವ ಸಂಕಲ್ಪ ಸೂಕ್ತ ( ಶುಕ್ಲಯಜುರ್ವೇದ, ವಾಜಸನೇಯ ಸಂಹಿತಾ)

ಮಂತ್ರಪುಷ್ಪ (ತೈತ್ತರೀಯ ಆರಣ್ಯಕ)

ಪುರುಷ ಸೂಕ್ತ