ಶ್ರೀ ರುದ್ರಪ್ರಶ್ನೆ - ನಮಕಾಧ್ಯಾಯ



ಶ್ರೀ ರುದ್ರಪ್ರಶ್ನೆ - ನಮಕಾಧ್ಯಾಯ (ಕೃಷ್ಣ ಯಜುರ್ವೇದ, ತೈತ್ತರೀಯ ಸಂಹಿತಾ ಚತುರ್ಥಂ ವೈಶ್ವದೇವಂ ಕಾಂಡಮ್)

ಪ್ರಥಮಾನುವಾಕ - ಸಂಸ್ಕೃತದಲ್ಲಿ :

ಓಂ ನಮೋ ಭಗವತೇ ರುದ್ರಾಯ |

ಓಂ ನಮಸ್ತೇ ರುದ್ರ ಮನ್ಯವ ಉತೋ ತ ಇಷವೇ ನಮಃ
ನಮಸ್ತೇ ಅಸ್ತು ಧನ್ವನೇ ಬಾಹುಭ್ಯಾಮುತ ತೇ ನಮಃ ।। 1 ||
ಯಾ ತ ಇಷುಶ್ಶಿವತಮಾ ಶಿವಂ ಬಭೂವ ತೇ ಧನುಃ
ಶಿವಾ ಶರವ್ಯಾ ಯಾ ತವ ತಯಾ ನೋ ರುದ್ರ ಮೃಡಯ || 2 ||
ಯಾ ತೇ ರುದ್ರ ಶಿವಾ ತನೂರಘೋರಾಪಾಪಕಾಶಿನೀ
ತಯಾ ನಸ್ತನುವಾ ಶಂತಮಯಾ ಗಿರಿಶನ್ತಾಭಿಚಾಕಶೀಹಿ|| 3 ||
ಯಾಮಿಷುಂ ಗಿರಿಶನ್ತ ಹಸ್ತೇ ಬಿಭರ್ಷ್ಯಸ್ತವೇ
ಶಿವಾಂ ಗಿರಿತ್ರ ತಾಂ ಕುರು ಮಾ ಹಿಗ್ಂಸೀಃ ಪುರುಷಂ ಜಗತ್ || 4 ||
ಶಿವೇನ ವಚಸಾ ತ್ವಾ ಗಿರಿಶಾಚ್ಛಾವದಾಮಸಿ
ಯಥಾ ನಸ್ಸರ್ವ ಮಿಜ್ಜಗದಯಕ್ಷ್ಮಗ್ಂ ಸುಮನಾ ಅಸತ್|| 5 ||
ಅಧ್ಯವೋಚದಧಿವಕ್ತಾ ಪ್ರಥಮೋ ದೈವ್ಯೋ ಭಿಷಕ್
ಅಹೀಗ್ಂಶ್ಚ ಸರ್ವಾನ್ಜಮ್ಭಯನ್ತ್ ಸರ್ವಾಶ್ಚ ಯಾತುಧಾನ್ಯಃ || 6 ||
ಅಸೌಯಸ್ತಾಮ್ರೋ ಅರುಣ ಉತ ಬಭ್ರುವಸ್ಸುಮಂಗಲಃ
ಯೇ ಚೇಮಾಗ್ಂ ರುದ್ರಾ ಅಭಿತೋ ದಿಕ್ಷು ಶ್ರಿತಾಸ್ಸಹಸ್ರಶೋವೈಷಾಗ್ಂ ಹೇಡ ಈಮಹೇ || 7 ||
ಅಸೌ ಯೋವಸರ್ಪತಿ ನೀಲಗ್ರೀವೋ ವಿಲೋಹಿತಃ
ಉತೈನಂ ಗೋಪಾ ಅದೃಶನ್ನದೃಶನ್ನುದಹಾರ್ಯಃ
ಉತೈನಂ ವಿಶ್ವಾಭೂತಾನಿ ಸ ದೃಷ್ಟೋ ಮೃಡಯಾತಿ ನಃ || 8 ||
ನಮೋ ಅಸ್ತು ನೀಲಗ್ರೀವಾಯ ಸಹಸ್ರಾಕ್ಷಾಯ ಮೀಢುಷೇ
ಅಥೋ ಯೇ ಅಸ್ಯ ಸತ್ವಾನೋsಹಂ ತೇಭ್ಯೋsಕರಂ ನಮಃ || 9 ||
ಪ್ರಮುಂಚ ಧನ್ವನಸ್ತ್ವ ಮುಭಯೋರಾರ್ತ್ನಿಯೋರ್ಜ್ಯಾಮ್
ಯಾಶ್ಚ ತೇ ಹಸ್ತ ಇಷವಃ ಪರಾ ತಾ ಭಗವೋ ವಪ || 10 ||
ಅವತತ್ಯ ಧನುಸ್ತ್ವಗ್ಂ ಸಹಸ್ರಾಕ್ಷ ಶತೇಷುಧೇ
ನಿಶೀರ್ಯ ಶಲ್ಯಾನಾಂ ಮುಖಾ ಶಿವೋನಸ್ಸುಮನಾ ಭವ || 11 ||
ವಿಜ್ಯಂ ಧನುಃ ಕಪರ್ದಿನೋ ವಿಶಲ್ಯೋ ಬಾಣವಾಗ್ಂ ಉತ
ಅನೇಶನ್ನಸ್ಯೇಷವ ಆಭುರಸ್ಯ ನಿಷಂಗಥಿಃ || 12 ||
ಯಾ ತೇ ಹೇತಿರ್ಮೀಢುಷ್ಟಮ ಹಸ್ತೇ ಬಭೂವ ತೇ ಧನುಃ
ತಯಾಸ್ಮಾನ್, ವಿಶ್ವತಸ್ತ್ವಮಯಕ್ಷ್ಮಯಾ ಪರುಬ್ಭುಜ || 13 ||
ನಮಸ್ತೇ ಅಸ್ತ್ವಾ ಯುಧಾಯಾನಾತತಾಯ ಧೃಷ್ಣವೇ
ಉಭಾಭ್ಯಾಮುತ ತೇ ನಮೋ ಬಾಹುಭ್ಯಾಂ ತವ ಧನ್ವನೇ || 14 ||
ಪರಿ ತೇ ಧನ್ವನೋ ಹೇತಿರಸ್ಮಾನ್ವೃಣಕ್ತು ವಿಶ್ವತಃ |
ಅಥೋ ಯ ಇಷುಧಿಸ್ತವಾರೇ ಅಸ್ಮಿನ್ನಿಧೇಹಿ ತಮ್ || 15 ||
ಶಂಭವೇ ನಮಃ |ನಮಸ್ತೇ ಅಸ್ತು ಭಗವನ್ವಿಶ್ವೇಶ್ವರಾಯ
ಮಹಾದೇವಾಯ ತ್ರ್ಯಯಂಬಕಾಯ ತ್ರಿಪುರಾಂತಕಾಯ
ತ್ರಿಕಾಗ್ನಿಕಾಲಾಯ ಕಾಲಾಗ್ನಿರುದ್ರಾಯ ನೀಲಕಂಠಾಯ
ಮೃತ್ಯುಂಜಯಾಯ ಸರ್ವೇಶ್ವರಾಯ ಸದಾಶಿವಾಯ
ಶ್ರೀಮನ್ಮಹಾದೇವಾಯ ನಮಃ ||

ಮೊದಲನೇ ಅನುವಾಕ - ಕನ್ನಡದಲ್ಲಿ :
ಓಂ ಭಗವಂತ ರುದ್ರದೇವನಿಗೆ ನಮನ |
ಓಂ ನಮಿಪೆ ರುದ್ರನೆ ನಿನ್ನ ಮಾಯೆಗೆ ಮತ್ತೆ ನಮಿಪೆ ನಿನ್ನ ಬಿಲ್ಗೆ
ಬಿಲ್ಲ ಧರಿಸಿದ ನಿನ್ನ ಬಾಹುವೆರಡಕೆ ಮರಳಿ ನಮಿಪೆ ||
ಓ ರುದ್ರನೆ ನಿನ್ನ ಶಿವತಮ ಶರದಿಂದ, ಶಾಂತ ಧನುವಿಂದ
ನಿನ್ನ ಶಿವಮಯ ಬತ್ತಳಿಕೆಯಿಂದೆಮಗೆ ಸುಖವಿರಲಿ ಮೃಡನೆ ||
ರಜತಗಿರಿಯಲ್ಲಿದ್ದು ಜೀವರಿಗೆ ಸುಖನೀಡುವವನೆ, ಆತ್ಮಜ್ಞಾನ
ಪ್ರಕಾಶಿಸುವ ನಿನ್ನ ಅಘೋರ ರೂಪದಿಂದೆಮ್ಮೆದುರು ಬೆಳಗು ಶಿವನೇ ||
ಓ ರುದ್ರನೇ ! ಕೈಲಾಸಗಿರಿಯಲ್ಲಿದ್ದು ಪ್ರಾಣಿಗಳಿಗೆ ಸದಾ ಸುಖವನ್ನುಂಟುಮಾಡುವವನೇ 
ನಿನ್ನ ಹಿಂಸಕವಲ್ಲದ ಹಾಗೂ ಪಾಪವನ್ನು ಪ್ರಕಾಶಪಡಿಸದಿರುವ ಯಾವ ಶರೀರವುಂಟೋ
ಆ ಸುಖಾತಿಶಯವನ್ನುಂಟುಮಾಡುವ ನಿನ್ನ ಶರೀರದಿಂದ ನಮ್ಮ ಮುಂದೆ ಪ್ರಕಾಶಿತನಾಗು ||
ಹೇ ಗಿರಿಶಂತ ! ನೀ ಬಿಡಲು ಹೂಡಿದ ಬಾಣವಾಗಲಿ ಶಾಂತ
ಗಿರಿಯ ಪೊರೆವ ಹರನೆ ಲೋಗರಿಗಭಯವನಿತ್ತು ಸುಖದಲಿರಿಸು ||
ಹೇ ಕೈಲಾಸವಾಸಿಯೆ ! ಮಂಗಳ ಸ್ತುತಿಗಳಲಿ ನಿನ್ನ ಕೋರುವೆವು
ರೋಗಮುಕ್ತವಾಗಲೀ ಜಗದ ಜೀವಿಗಳೆಲ್ಲ ಬಾಳಲಿ ಸಮರಸದಲಿ || 
ಬೆಳಗಲಿ ರುದ್ರನೆನ್ನಾತ್ಮವನು ಸುರರ ಪಾಲಿಪ ರುದ್ರ, ಸುರವರ ಭವರೋಗ ವೈದ್ಯ
ರಕ್ಕಸರನಿಕ್ಕಿ ಕಾಮಾದಿ ಸರ್ಪ, ಸರ್ವ ವಿಷಜಂತುಗಳ ನಿಗ್ರಹಿಸಿ ರಕ್ಷಿಸಲಿ ಎನ್ನ || 7
ಸೂರ್ಯಮಂಡಲದೊಳಾದಿತ್ಯರೂಪದಲ್ಲಿಹ ರುದ್ರ ಉದಯದಲಿ ಕಡುಗೆಂಪು ಬಳಿಕ ಅರುಣರಾಗವು ಮತ್ತೆ ತಿಳಿಗೆಂಪಾಗಿ ಮಂಗಳಕರನು ಸೊಗಸುವನು
ಆವ ರುದ್ರರೀ ಬುವಿಯ ಸುತ್ತಿ ದಿಕ್ಕುಗಳಲಿ ಲಕ್ಷ ರವಿರಶ್ಮಿ ರೂಪದಲುರಿಯುತಿಹರೋ ಆಯೆಲ್ಲ ರುದ್ರರುಗ್ರತೆಯ ನಿವಾರಿಪೆನೆನ್ನ ಭಕ್ತಿ ನಮನಗಳಿಂದ ||
ಕಾಲಕೂಟದಿಂ ಕಪ್ಪಾದ ಕಂಠದ ರುದ್ರ ಉರಿಯುತ ಅರುಣವರ್ಣವ ತಳೆದು
ಉದಯಾಸ್ತಗಳಲಿ ವರ್ತಿಪುದ ಕಾಣುವರು ಗೋಪಾಲಕರು ನೀರಕೊಡ ತರುವ ಗೋಪಿಯರು ಸೂರ್ಯನೆಂದುದಯದಲಿ
ಜಗದೆಲ್ಲ ಪ್ರಾಣಿಗಳು ಕಾಂಬರು ಮೃಡನ ರವಿರೂಪವನು
ಆ ರುದ್ರ ಸಲಹಲೆಮ್ಮನ್ನು ||
ನೀಲಗೊರಳವಗೆ ಸಾವಿರದ ಕಣ್ಣವಗೆ ಕರ್ಮಫಲ ಸಿಂಚಿಸುವ ದೇವಗೆ ನಮನವಿರಲಿ
ಮತ್ತವನ ಭೃತ್ಯರಿಗೆ ಪ್ರಮಥಗಣಗಳಿಗೆ ಅವನಂಶಗಳೆ ಆದ ಈ ಜೀವರೆಲ್ಲರಿಗೆ ನಮನವಿರಲಿ ||
ಹೇ ಭಗವಂತ ! ಪ್ರಣವರೂಪದ ನಿನ್ನ ಧನುವಿನೆರಡು ತುದಿಗಳ ಹಮ್ಮಿನ ಹೆದೆಯ ಕೆಳಗಿಳಿಸು
ನಿನ್ನ ಕರದೊಳಿಹ ಶರವನು ತ್ಯಜಿಸಿ ಉಳಿಸು ಜೀವರನು ||
ಹೇ ಸಾಸಿರಗಣ್ಣವನೆ ! ನಾನೆಂಬ ಹಮ್ಮಿನ ಹೆದೆಯನಿಳಿಸಿದವನಾಗಿ
ಶರದಗ್ರಗಳ ಕೆಳಮುಖಗೈದು ಶಿವಮನವ ತಳೆದಮಗಾನಂದಕರನಾಗು ಭವನೆ ||
ಹೇ ಜಟಾಧರನೆ ! ನಿನ್ನ ಬಿಲ್ಲ ಹೆದೆ ಬಿಚ್ಚಿರಲಿ , ಕಾಮಬಾಣವರ್ಷ ನಿಲ್ಲಲಿ
ಕಾಮದಾಶ್ರಯವಹಂತಃಕರಣ ತೆರವಾಗಲಿ ನಿನ್ನ ಬತ್ತಳಿಕೆ ಬಾಣಕೆ , ಕತ್ತಿಯೊರೆಯು ಖಡ್ಗಕೆ ನೆಪಕೆ ಆಧಾರವಾಗಿರಲಿ ||
ಹೇ ವೀರ್ಯವಂತನೆ ! ದೃಡವಹ ನಿನ್ನಾಯುಧದಿಂದ ಕರದ ಧನುವಿಂದ
ಎಲ್ಲೆಡೆಯಿಂದಲೆಲ್ಲ ಬಗೆಯಿಂದೆಮ್ಮನು ರಕ್ಷಿಸು ||
ಹೇ ರುದ್ರ ! ಹೂಡದಿಹ ನಿನ್ನ ಮಹಾಶರಕೆ ನಮಿಪೆ
ಅಂತೆಯೆ ನಮಿಪೆ ಪ್ರಣವರೂಪದ ಧನುವ ಕಾಲರೂಪದ ಶರವ ತಳೆದ ನಿನ್ನ ತೋಳ್ಗಳಿಗೆ ||
ಹೇ ರುದ್ರನೆ ನಿನ್ನ ಬಿಲ್ಲಿನ ಬಾಣವೆಮ್ಮನೆಲ್ಲೆಡೆಯಿಂದ ವರ್ಜಿಸಲಿ
ಎಮ್ಮಿಂದ ದೂರವಿರಲಾ ನಿನ್ನ ಬತ್ತಳಿಕೆ ||
ಶಂಭುವೆ ನಮಿಪೆ ! ಭಗವಂತ ವಿಶ್ವೇಶ್ವರಗೆ ಮಹಾದೇವಂಗೆ ಮುಕ್ಕಣ್ಣನಿಗೆ , ತ್ರಿಪುರಸಂಹಾರಿಗೆ ಕಾಲಾಗ್ನಿ ಯಮಗೆ ಕಾಲರುದ್ರನಿಗೆ, ನೀಲಕಂಠಗೆ ಮೃತ್ಯುಂಜಯಗೆ ಸರ್ವೇಶ್ವರಗೆ ಸದಾಶಿವಂಗೆ ಶ್ರೀ ಮಹಾದೇವಂಗೆ ನಮಿಪೆ ||

ವಿವರಣೆ :
ಓ ರುದ್ರನೇ ! ನಿನಗೆ ನಮಸ್ಕಾರ, ನಿನ್ನ ಕ್ರೋಧಕ್ಕೆ ನಮಸ್ಕಾರ, ನಿನ್ನ ಬಾಣಕ್ಕೆ ನಮಸ್ಕಾರ, ನಿನ್ನ ಧನುಸ್ಸಿಗೆ ನಮಸ್ಕಾರ, ನಿನ್ನ
ಎರಡು ಬಾಹುಗಳಿಗೂ ನಮಸ್ಕಾರ.
ಓ ರುದ್ರನೇ ! ಯಾವ ನಿನ್ನ ಬಾಣವು ಶಿವತಮ ವಾಯಿತೋ ಯಾವ ನಿನ್ನ ಧನುಸ್ಸು ಶಾಂತವಾಯಿತೋ ಹಾಗೂ ನಿನ್ನ ಬತ್ತಳಿಕೆಯು ಶಾಂತವಾಯಿತೋ ಅಂಥಹ ನಿನ್ನ ಬಿಲ್ಲು ಬಾಣ ಹಾಗೂ ಬತ್ತಳಿಕೆಯಿಂದಲೂ ನನ್ನನ್ನು ಸುಖಪಡಿಸು.
ಓ ಗಿರಿಶಂತನೇ ! ಯಾವ ಬಾಣವನ್ನು ನೀನು ಶತ್ರುಗಳ ಮೇಲೆ ಪ್ರಯೋಗಿಸಲು ಕೈಯಲ್ಲಿ ಧರಿಸಿರುವೆಯೋ ಆ ಬಾಣವನ್ನು ಶಾಂತವನ್ನಾಗಿ ಮಾಡು. ಕೈಲಾಸ ಪರ್ವತವನ್ನು ರಕ್ಷಿಸುವ ಶಿವನೇ ! ನಮ್ಮ ಪುತ್ರಪೌತ್ರಾದಿಗಳನ್ನೂ ಗವಾಶ್ವಾದಿ ಪ್ರಾಣಿಗಳನ್ನೂ ಹಿಂಸೆಮಾಡಬೇಡ.
ಓ ಕೈಲಾಸವಾಸಿ ಶಿವನೇ ! ಮಂಗಳಕರವಾದ ಸ್ತೋತ್ರದಿಂದ ನಿನ್ನನ್ನು ಅಭಿಮುಖವಾಗಿ ಸ್ತುತಿಸುತ್ತೇವೆ. ನಮ್ಮ ಸಮಸ್ತ ಪುತ್ರ ಪಶು ಮೊದಲಾದ ಜಗತ್ತೆಲ್ಲವೂ ರೋಗರಹಿತವಾಗಿ ಸೌಮನಸ್ಯವುಳ್ಳದ್ದಾಗಿರುವಂತೆ ಮಾಡು.
ರುದ್ರನು ಎಲ್ಲರೆದುರಿಗೆ ನನ್ನ ವಿಷಯವಾಗಿ ಇವನು ಅಧಿಕನಾದವನು ಎಂದು ಹೇಳಲಿ. ದೇವತೆಗಳ ಪೈಕಿ ಪ್ರಧಾನನಾದವನೂ ಸಮಸ್ತ ದೇವತೆಗಳಲ್ಲಿ ಇದ್ದು ಅವರನ್ನು ಪಾಲಿಸುವವನೂ, ಧ್ಯಾನಮಾತ್ರದಿಂದ ಸಮಸ್ತ ರೋಗಗಳನ್ನು ಪರಿಹರಿಸುವ ವೈದ್ಯನೂ ಆದ ಶಿವನು ಎಲ್ಲ ಸರ್ಪ ವ್ಯಾಘ್ರ ಮೊದಲಾದ ದುಷ್ಟ ಜಂತುಗಳನ್ನು ಹಾಗೂ ಸಮಸ್ತ ರಾಕ್ಷಸರನ್ನು ನಾಶಪಡಿಸುವವನಾಗಿ, ನನ್ನನ್ನು ರಕ್ಷಿಸಲಿ.
ಯಾವ ರುದ್ರನು ಆ ಸೂರ್ಯಮಂಡಲದಲ್ಲಿರುವ ಆದಿತ್ಯರೂಪನಾಗಿ ಇರುವನೋ ಆ ರುದ್ರನು ಉದಯ ಕಾಲದಲ್ಲಿ ಅತ್ಯಂತ ರಕ್ತವರ್ಣದವನಾಗಿಯೂ ಅನಂತರ ಸ್ವಲ್ಪ ರಕ್ತವರ್ಣದವನಾಗಿಯೂ ಮತ್ತು ಅದರ ನಂತರ ಪಿಂಗಲವರ್ಣದವನಾಗಿಯೂ ಅತ್ಯಂತ ಮಂಗಳಕರನಾಗಿ ಇರುವನು. ಯಾವ ರಶ್ಮಿರೂಪರಾದ ರುದ್ರರು ಈ ಭೂಮಿಯ ಸುತ್ತಲೂ ಪೂರ್ವ ಮೊದಲಾದ ದಿಕ್ಕುಗಳಲ್ಲಿ ಇರುವರೋ ಅವರು ಅನೇಕ ಸಹಸ್ತ ಸಂಖ್ಯಾಕರಾಗಿ ಆದಿತ್ಯನ ರಶ್ಮಿರೂಪರಾಗಿ ಇರುವರು. ಈ ಎಲ್ಲ ರುದ್ರರ ಕ್ರೋಧರೂಪವಾದ ಉಗ್ರತೆಯನ್ನು ಭಕ್ತಿ ನಮಸ್ಕಾರ ಮುಂತಾದುದರಿಂದ ನಿವಾರಿಸುತ್ತೇವೆ 
ಯಾವ ರುದ್ರನು ಕಾಲಕೂಟ ವಿಷದಿಂದ ಕಪ್ಪಾಗಿರುವ ಕಂಠವುಳ್ಳವನಾಗಿ ಸ್ವತಃ ಉರಿಯುತ್ತಿರುವ ಬೆಂಕಿಗೆ ಸಮನಾಗಿ ವಿಶೇಷರೂಪವಾಗಿ ರಕ್ತವರ್ಣವುಳ್ಳವನಾಗಿ ಸೂರ್ಯಮಂಡಲದಲ್ಲಿದ್ದು ಉದಯಾಸ್ತ ಕಾಲಗಳನ್ನು ಉಂಟುಮಾಡಲು ಪ್ರವರ್ತಿಸುತ್ತಾನೆಯೋ ಮತ್ತು ಸೂರ್ಯಮಂಡಲ ರೂಪನಾಗಿರುವ ಈ ರುದ್ರನನ್ನು ಸೂರ್ಯರೂಪದಿಂದ ಕಾಣುತ್ತಾರೆ; ಹಾಗೂ ಹಸು ಎಮ್ಮೆ ಮುಂತಾದ ಸಮಸ್ತ ಪ್ರಾಣಿಗಳೂ ಸೂರ್ಯರೂಪವನ್ನು ಕಾಣುತ್ತಾರೆ; ಅಂತಹ ಈ ರುದ್ರದೇವನು ನಮ್ಮಿಂದ ವೀಕ್ಷಿಸಲ್ಪಟ್ಟವನಾಗಿ ನಮ್ಮನ್ನು ಸುಖಿಗಳನ್ನಾಗಿ ಮಾಡಲಿ.
ನೀಲವರ್ಣದ ಕಂಠವುಳ್ಳವನೂ ಸಹಸ್ರಾಕ್ಷನೂ ವೃಷ್ಟಿಕಾರಕನೂ (ಭಕ್ತರ ಇಷ್ಟಾರ್ಥಗಳನ್ನು ವರ್ಷಿಸುವವನೂ) ಆದ ರುದ್ರನಿಗೆ ನಮಸ್ಕಾರ. ಈ ರುದ್ರನ ಭೃತ್ಯರೂಪರಾದ ಯಾವ ಪ್ರಮಥ ಗಣಗಳಿರುವರೋ ಅವರೆಲ್ಲರಿಗೂ ನಾನು ನಮಸ್ಕರಿಸುತ್ತೇನೆ.
ಓ ಭಗವಂತನೇ ! ನೀನು ನಿನ್ನ ಧನುಸ್ಸಿನ ಎರಡು ತುದಿಗಳಲ್ಲಿರುವ ಮೌರ್ವಿಯನ್ನು (ಹೆದೆಯನ್ನು) ಕೆಳಗಿಳಿಸು (ಶಿಥಿಲಗೊಳಿಸಿ ಕೆಳಗೆ ಬಿಡು). ನಿನ್ನ ಕೈಯಲ್ಲಿ ಯಾವ ಬಾಣಗಳಿವೆಯೋ ಅವುಗಳನ್ನು ಪರಿತ್ಯಾಗಮಾಡು.
ಓ ಸಹಸ್ರಾಕ್ಷನೇ ! ನೂರಾರು ಬತ್ತಳಿಕೆಗಳನ್ನುಳ್ಳವನೇ ! ರುದ್ರನೇ ! ನಿನ್ನ ಧನುಸ್ಸನ್ನು ಕೆಳಗಿಳಿಸಿದ ಮೌರ್ವಿಯುಳ್ಳದ್ದನ್ನಾಗಿ ಮಾಡಿ ನೀನು ಬಾಣಗಳ ತುದಿಗಳನ್ನು ಕೆಳಮುಖವಾಗಿ ಮಾಡಿ ಬತ್ತಳಿಕೆಗಳಲ್ಲಿಟ್ಟು ನಮ್ಮ ವಿಷಯದಲ್ಲಿ ಅನುಗ್ರಹಯುಕ್ತನಾಗಿಯೂ ಮಂಗಳಕರನಾಗಿಯೂ ಆಗು.
ಜಟಾಜೂಟಧಾರಿಯಾದ ರುದ್ರನ ಧನಸ್ಸು ಮೌಲ್ವಿಯಿಲ್ಲದ್ದಾಗಿ ಆಗಲಿ. ಬತ್ತಳಿಕೆಯು ಹೊರಮುಖವಾಗಿಲ್ಲದಿರುವ ಬಾಣಗಳುಳ್ಳದ್ದಾಗಿ ಆಗಲಿ. ಈ ರುದ್ರನ ಬಾಣಗಳು ಪ್ರಯೋಗಿಸಲು ಅಸಮರ್ಥವಾದವುಗಳಾಗಿ ಆಗಲಿ. ಈ ರುದ್ರನ ಬತ್ತಳಿಕೆಯು ನೆಪಮಾತ್ರಕ್ಕೆ ಬಾಣಧಾರವಾಗಿ ಇರಲಿ. ಹಾಗೆಯೇ ಖಡ್ಗಕೋಶವು ನೆಪಮಾತ್ರಕ್ಕೆ ಖಡ್ಗಧಾರವಾಗಿರಲಿ.
ಅತಿಶಯವಾಗಿ ಇಷ್ಟಾರ್ಥಗಳನ್ನು ವರ್ಷಿಸುವವನೇ ! ನಿನ್ನ ಯಾವ ಖಡ್ಗ ಮುಂತಾದ ರೂಪವಾದ ಆಯುಧವುಂಟೋ ಮತ್ತು ನಿನ್ನ ಕೈಯಲ್ಲಿ ಯಾವ ಧನುಸ್ಸು ಇದೆಯೋ ಆ ಉಪದ್ರವಕಾರಿಯಲ್ಲದ ಆಯುಧದಿಂದಲೂ ಅಂತಹ ನಿನ್ನ ಧನುಸ್ಸಿನಿಂದಲೂ ನೀನು ನಮ್ಮನ್ನು ಸರ್ವಪ್ರಕಾರದಿಂದಲೂ ರಕ್ಷಿಸು.
ಓ ರುದ್ರನೇ ! ನಿನ್ನ ಆಯುಧಕ್ಕೆ ನಮಸ್ಕಾರವು ಸಲ್ಲಲಿ. ಧನುಸ್ಸಿನಲ್ಲಿ ಸಂಧಾನ ಮಾಡದಿರುವ (ಸ್ವರೂಪದಿಂದ ಪ್ರಹಾರ ಮಾಡಲು) ಸಮರ್ಥವಾಗಿರುವ ನಿನ್ನ ಬಾಣ ರೂಪವಾದ ಆಯುಧಕ್ಕೆ ನಮಸ್ಕಾರ. ನಿನ್ನ ಎರಡು ಬಾಹುಗಳಿಗೆ ನಮಸ್ಕಾರ, ನಿನ್ನ ಧನುಸ್ಸಿಗೂ ನಮಸ್ಕಾರ.
ಓ ರುದ್ರನೇ ! ನಿನ್ನ ಧನುಸ್ಸಿನ ಬಾಣರೂಪವಾದ ಆಯುಧವು ನಮ್ಮನ್ನು ಸರ್ವಪ್ರಕಾರದಿಂದಲೂ ಪರಿತ್ಯಜಿಸಿ ನಮ್ಮನ್ನು ರಕ್ಷಿಸಲಿ. ನಿನ್ನ ಯಾವ ಬತ್ತಳಿಕೆಯುಂಟೋ ಅದನ್ನು ನಮ್ಮಿಂದ ದೂರದಲ್ಲಿಡು.
ಶಂಭುವಿಗೆ ನಮಸ್ಕಾರ. ಓ ಭಗವಂತನೇ ! ನಿನಗೆ ನಮಸ್ಕಾರ ಸಲ್ಲಲಿ. ವಿಶ್ವೇಶ್ವರನೂ ಮಹಾದೇವನೂ ಮೂರು ಕಣ್ಣುಳ್ಳವನೂ ತ್ರಿಪುರಾಂತಕನೂ ತ್ರೇತಾಗ್ನಿರೂಪನೂ ತ್ರಿಕಾಲರೂಪನೂ ಕಾಲಾಗ್ನಿರುದ್ರನೂ ನೀಲಕಂಠನೂ ಮೃತ್ಯುಂಜಯನೂ ಸರ್ವೇಶ್ವರನೂ ಸದಾಶಿವನೂ ಶ್ರೀಮಂತನಾದ ಮಹಾದೇವನೂ ಆದ ನಿನಗೆ ನಮಸ್ಕಾರ.

ಅಭಿಪ್ರಾಯ :
ಈ ಆಯುಧಗಳನ್ನು ಶತ್ರುಗ್ಳ ಮೇಲೆ ಪ್ರಯೋಗಿಸು. ನನ್ನ ಮೇಲೆ ಪ್ರಯೋಗಿಸಬೇಡವೆಂದು ಪ್ರಾರ್ಥಿಸಿ ಶಿವನನ್ನು ಪ್ರಸನ್ನಗೊಳಿಸಬೇಕು. ಓ ರುದ್ರನೇ ! ನಿನ್ನ ಆಯುಧಗಳನ್ನು ಶಾಂತಗೊಳಿಸಿ ನನ್ನನ್ನು ಸಂತೋಷಪಡಿಸು.
ನಿನ್ನ ಶಾಂತವಾದ ಶರೀರವನ್ನು ನಮ್ಮ ಮುಂದೆ ಪ್ರಕಾಶಪಡಿಸಿ ನಮ್ಮನ್ನು ಸುಖಿತರನ್ನಾಗಿ ಮಾಡು.

ಈ ರೀತಿಯಾಗಿ ರುದ್ರಮಂತ್ರದ ಮೊದಲನೆಯ ಅನುವಾಕದಲ್ಲಿ ರುದ್ರನ ಆಯುಧ ಕ್ರೋಧ ಬಿಲ್ಲು ಬಾಣ ಮುಂತಾದ ಆಯುಧಗಳನ್ನು ಸ್ತುತಿಸಿ ರುದ್ರನನ್ನು ಪ್ರಸನ್ನಗೊಳಿಸಿ ಅವನ ಅನುಗ್ರಹವನ್ನು ಪ್ರಾರ್ಥಿಸಲಾಗಿದೆ.

ದ್ವಿತೀಯಾನುವಾಕಸಂಸ್ಕೃತದಲ್ಲಿ :
ನಮೋ ಹಿರಣ್ಯಬಾಹವೇ ಸೇನಾನ್ಯೇ ದಿಶಾಂ ಚ ಪತಯೇ ನಮಃ ||
ನಮೋ ವೃಕ್ಷೇಭ್ಯೋ ಹರಿಕೇಶೇಭ್ಯಃ ಪಶೂನಾಂ ಪತಯೇ ನಮಃ ||
ನಮಸ್ಸಸ್ಪಿಂಜರಾಯ ತ್ವಿಷೀಮತೇ ಪಥೀನಾಂ ಪತಯೇ ನಮಃ ||
ನಮೋ ಬಭ್ಲುಶಾಯ ವಿವ್ಯಾಧಿನೇsನ್ನಾನಾಂ ಪತಯೇ ನಮಃ ||
ನಮೋ ಹರಿಕೇಶಾಯೋಪವೀತಿನೇ ಪುಷ್ಟಾನಾಂ ಪತಯೇ ನಮಃ ||
ನಮೋ ಭವಸ್ಯ ಹೇತ್ಯೈ ಜಗತಾಂ ಪತಯೇ ನಮಃ ||
ನಮೋ ರುದ್ರಾಯಾತತಾವಿನೇ ಕ್ಷೇತ್ರಾಣಾಂ ಪತಯೇ ನಮಃ ||
ನಮಸ್ಸೂತಾಯಾಹನ್ತ್ಯಾಯ ವನಾನಾಂ ಪತಯೇ ನಮಃ ||
ನಮೋ ರೋಹಿತಾಯ ಸ್ಥಪತಯೇ ವೃಕ್ಷಾಣಾಂ ಪತಯೇ ನಮಃ ||
ನಮೋ ಮಂತ್ರಿಣೇ ವಾಣಿಜಾಯ ಕಕ್ಷಾಣಾಂ ಪತಯೇ ನಮಃ ||
ನಮೋ ಭುವನ್ತಯೇ ವಾರಿವಸ್ಕೃತಾಯೌಷಧೀನಾಂ ಪತಯೇ ನಮಃ ||
ನಮ ಉಚ್ಛೈರ್ಘೋಷಾಯಾಕ್ರಂದಯತೇ ಪತ್ತೀನಾಂ ಪತಯೇ ನಮಃ ||
ನಮಃ ಕೃತ್ಸ್ನವೀತಾಯ ಧಾವತೇ ಸತ್ವನಾಂ ಪತಯೇ ನಮಃ ||

ಎರಡನೇ ಅನುವಾಕ - ಕನ್ನಡದಲ್ಲಿ :
ನಮಿಪೆ ಹೊನ್ನ ತೊಡುಗೆಗಳಿಂದ ಶೋಭಿಸುವ ಬಾಹುಗಳುಳ್ಳವಗೆ ಸೇನೆಯಗ್ರೇಸರಗೆ ದಿಕ್ಕುಗಳೊಡೆಯಂಗೆ ನಮೋ ||
ನಮೋ ಹಸಿರೆಲೆಯ ವೃಕ್ಷಗಳಿಗೆ ವೃಕ್ಷರೂಪಿನ ರುದ್ರರಿಗೆ ಪಶುಗಳಧಿಪತಿಗೆ ನಮೋ ||
ನಮೋ ಎಳೆಹುಲ್ಲ ಬಣ್ಣದಲಿ ಬೆಳಗುವವಗೆ ನಾಡಿಗಳೊಡೆಯಂಗೆ ನಮೋ ||
ನಮೋ ವೃಷಭವನೇರಿ ಅರಿಗಳ ತರಿವವಗೆ ಅನ್ನಾದಿಗಳೊಡೆಯಂಗೆ ನಮೋ ||
ನಮೋ ನೀಲಮೇಘ ಕೇಶದವನಿಗೆ ಹಾವಿನ ಜನಿವಾರ ಧರಿಸಿದವಗೆ ಹೊಗಳೊಡೆಯಂಗೆ ನಮೋ ||
ನಮೋ ಭವಸಂಹಾರಕಗೆ ಜಗತ್ಪತಿಗೆ ನಮೋ ||
ನಮೋ ಹಿರಿಯ ಬಿಲ್ಲನು ಧರಿಸಿ ಪೊರೆಯುವಗೆ ದೇಹರೂಪಿನ ಕ್ಷೆತ್ರಗಳೊಡೆಯಂಗೆ ನಮೋ ||
ನಮೋ ಅಳಿವಿರದ ಸಾರಥಿಗೆ ವನಗಳ ಪತಿಗೆ ನಮೋ ||
ನಮೋ ರಕ್ತವರ್ಣದ ಪ್ರಭುಗೆ ವೃಕ್ಷಗಳೊಡೆಯಂಗೆ ನಮೋ ||
ನಮೋ ಮಂತ್ರಾಲೋಚನ ನಿಪುಣನಿಗೆ ವಣಿಕಜನಪ್ರಭುಗೆ ಪಂಚಕೋಶಗಳೊಡೆಯಂಗೆ ನಮೋ||
ನಮೋ ವಿಶ್ವಸೃಷ್ಟಿಕರ್ತನಿಗೆ ಕರ್ಮರೂಪದ ದ್ರವ್ಯಕರ್ತೃವಿಗೆ ಓಷಧಿಗಳೊಡೆಯಂಗೆ ನಮೋ ||
ನಮೋ ಸಮರದ್ಘೋಷಕಗೆ ಶತ್ರುವಿದ್ರಾವಕಗೆ ಸೇನಾದಳಗಳೊಡೆಯಂಗೆ ನಮೋ ||
ನಮೋ ಭೀತಸೇನೆಯನಟ್ಟಿ ಧಾವಿಸುವವಗೆ ಸಾತ್ವಿಕರೊಡೆಯಂಗೆ ನಮೋ ||

ವಿವರಣೆ :
ಸುವರ್ಣ ನಿರ್ಮಿತವಾದ ಭೂಷಣಗಳಿಂದ ಶೋಭಿಸುವ ಬಾಹುಗಳುಳ್ಳವನೂ ಸೇನಾನಾಯಕನೂ ಆದ ರುದ್ರನಿಗೆ ನಮಸ್ಕಾರ. ಹಾಗೂ ದಿಕ್ಕುಗಳ ಅಧಿಪತಿಯಾದ ರುದ್ರನಿಗೆ ನಮಸ್ಕಾರ.
ಹಸಿರಾದ ಎಲೆಗಳುಳ್ಳ ವೃಕ್ಷಗಳಿಗೆ ನಮಸ್ಕಾರ. ವೃಕ್ಷರೂಪನಾದ ರುದ್ರನಿಗೆ ನಮಸ್ಕಾರ. ಪಶುಗಳ (ಸಮಸ್ತ ಭೂತಗಳ) ಅಧಿಪತಿಯಾದ ರುದ್ರನಿಗೆ ನಮಸ್ಕಾರ.
ಎಳೆಯದಾದ ಹುಲ್ಲಿನಂತೆ ಪಿಂಜರವರ್ಣವುಳ್ಳವನೂ ದೀಪ್ತಿಮಂತನೂ ಆದ ರುದ್ರನಿಗೆ ನಮಸ್ಕಾರ. ಶಾಸ್ತ್ರೋಕ್ತವಾದ ಮಾರ್ಗಗಳ ಅಧಿಪತಿಯಾದ ರುದ್ರನಿಗೆ ನಮಸ್ಕಾರ.
ವೃಷಭದ ಮೇಲೆ ಆರೂಢನಾದವನೂ ಶತ್ರುಗಳನ್ನು ವಿಶೇಷವಾಗಿ ಹಿಂಸಿಸುವವನೂ ಆದ ರುದ್ರನಿಗೆ ನಮಸ್ಕಾರ. ಹಾಗೂ ಅನ್ನಗಳ ಪಾಲಕನಾದ ರುದ್ರನಿಗೆ ನಮಸ್ಕಾರ.
ನೀಲವರ್ಣದ ಕೇಶವುಳ್ಳವನೂ ಯಜ್ಜೋಪವೀತ ಧಾರಿಯೂ ಆದ ರುದ್ರನಿಗೆ ನಮಸ್ಕಾರ ಮತ್ತು ಪರಿಪೂರ್ಣ ಗುಣಸಮೃದ್ಧಿಯುಳ್ಳ ಪುರುಷರ ಸ್ವಾಮಿಯಾದ ರುದ್ರನಿಗೆ ನಮಸ್ಕಾರ.
ಸಂಸಾರದ ಆಯುಧರೂಪನಾದ (ಸಂಸಾರಚ್ಛೇದಕ ನಾದ) ರುದ್ರನಿಗೆ ನಮಸ್ಕಾರ ಮತ್ತು ಜಗತ್ತುಗಳ ಪಾಲಕನಾದ ರುದ್ರನಿಗೆ ನಮಸ್ಕಾರ.
ವಿಸ್ತಾರಗೊಳಿಸಲ್ಪಟ್ಟ ಧನುಸ್ಸು ಮುಂತಾದ ಆಯುಧದಿಂದ ರಕ್ಷಿಸುವವನಾದ ರುದ್ರನಿಗೆ ನಮಸ್ಕಾರ. ಕ್ಷೇತ್ರಗಳ ಪಾಲಕನಾದ ರುದ್ರನಿಗೆ ನಮಸ್ಕಾರ. ಶರೀರರೂಪ ಕ್ಷೇತ್ರಗಳ ಪಾಲಕನಾದ ರುದ್ರನಿಗೆ ನಮಸ್ಕಾರ.
ಶತ್ರುಗಳಿಂದ ಕೊಲ್ಲಲು ಸಾಧ್ಯವಲ್ಲದವನಾದ ಸಾರಥಿಯಾದ ರುದ್ರನಿಗೆ ನಮಸ್ಕಾರ. ವನಗಳ ಪಾಲಕನಾದ ರುದ್ರನಿಗೆ ನಮಸ್ಕಾರ.
ರಕ್ತವರ್ಣವುಳ್ಳ ಪ್ರಭುವಾದ ರುದ್ರನಿಗೆ ನಮಸ್ಕಾರ. ವೃಕ್ಷಗಳ ಪಾಲಕನಾದ ರುದ್ರನಿಗೆ ನಮಸ್ಕಾರ.
ರಾಜಸಭೆಯಲ್ಲಿ ಮಂತ್ರಾಲೋಚನ ನಿಪುಣನೂ ವಣಿಗ್ ಜನರ ಸ್ವಾಮಿಯೂ ಆದ ರುದ್ರನಿಗೆ ನಮಸ್ಕಾರ. ಕಾಡಿನಲ್ಲಿರುವ ಗುಲ್ಮ ಮುಂತಾದ ಕಕ್ಷಗಳ ಪಾಲಕನಾದ ರುದ್ರನಿಗೆ ನಮಸ್ಕಾರ.
ವಿಶ್ವವನ್ನು ಸೃಷ್ಟಿಮಾಡುವ ರುದ್ರನಿಗೆ ನಮಸ್ಕಾರ. ಧನಸಂಪತ್ತಿಯನ್ನು ಉಂಟುಮಾಡುವ ರುದ್ರನಿಗೆ ನಮಸ್ಕಾರ  ಗ್ರಾಮದಲ್ಲೂ ಕಾಡಿನಲ್ಲೂ ಇರುವ ಓಷಧಿಗಳ ಪಾಲಕನಾದ ರುದ್ರನಿಗೆ ನಮಸ್ಕಾರ.
ಯುದ್ಧದ ಸಮಯದಲ್ಲಿ ಉನ್ನತವಾದ ಧ್ವನಿಯನ್ನು ಮಾಡುವವನಾದವನೂ ಶತ್ರುಗಳನ್ನು ಗೋಳಾಡಿಸುವವನೂ ಆದ ರುದ್ರನಿಗೆ ನಮಸ್ಕಾರ. ಪಾದಚಾರಿಗಳಾದ ಯೋಧರ ಪಾಲಕನಾದ ರುದ್ರನಿಗೆ ನಮಸ್ಕಾರ.
ಸಮಸ್ತ ಸೈನ್ಯವನ್ನೂ ಸುತ್ತುವರಿದವನಾದ ರುದ್ರನಿಗೆ ನಮಸ್ಕಾರ. ಹೆದರಿ ಓಡಿಹೋಗುವ ಶತ್ರು ಸೈನಿಕರನ್ನು ಹಿಂಬಾಲಿಸಿ ಓಡುವವನಾದ ರುದ್ರನಿಗೆ ನಮಸ್ಕಾರ ಸಾತ್ಬಿಕರ ಪಾಲಕನಾದ ರುದ್ರನಿಗೆ ನಮಸ್ಕಾರ.

ತೃತೀಯಾನುವಾಕ - ಸಂಸ್ಕೃತದಲ್ಲಿ :
ನಮಸ್ಸಹಮಾನಾಯ ನಿವ್ಯಾಧಿನ ಅವ್ಯಾಧಿನೀನಾಂ ಪತಯೇ ನಮೋ ||
ನಮಃ ಕಕುಭಾಯ ನಿಷಂಗಿಣೇ ಸ್ತೇನಾನಾಂ ಪತಯೇ ನಮೋ ||
ನಮೋ ನಿಷಂಗಿಣ ಇಷುಧಿಮತೇ ತಸ್ಕರಾಣಾಂ ಪತಯೇ ನಮೋ ||
ನಮೋ ವಂಚತೇ ಪರಿವಂಚತೇ ಸ್ತಾಯೂನಾಂ ಪತಯೇ ನಮೋ ||
ನಮೋ ನಿಚೇರವೇ ಪರಿಚರಾಯಾರಣ್ಯಾನಾಂ ಪತಯೇ ನಮಃ ||
ನಮಃ ಸ್ಸೃಕಾವಿಭ್ಯೋ ಜಿಘಾಗ್ಂಸದ್ಭ್ಯೋ ಮುಷ್ಣತಾಂ ಪತಯೇ ನಮಃ ||
ನಮೋsಸಿಮದ್ಭ್ಯೋನಕ್ತಂ ಚರದ್ಭ್ಯಃ ಪ್ರಕೃಂತಾನಾಂ ಪತಯೇ ನಮೋ ||
ನಮೋ ಉಷ್ಣೀಷಿಣೇ ಗಿರಿಚರಾಯ ಕುಲುಂಚಾನಾಂ ಪತಯೇ ನಮೋ ||
ನಮ ಇಷುಮದ್ಭ್ಯೋ ಧನ್ವಾವಿಭ್ಯಶ್ಚ ವೋ ನಮೋ ||
ನಮ ಆತನ್ವಾನೇಭ್ಯಃ ಪ್ರತಿದಧಾನೇಭ್ಯಶ್ಚವೋ ನಮೋ ||
ನಮ ಆಯುಚ್ಛದ್ಭ್ಯೋ ವಿಸೃಜದ್ಭ್ಯಶ್ಚ ವೋ ನಮೋ ||
ನಮೋsಸ್ಯದ್ಭ್ಯೋ ವಿಧ್ಯದ್ಭ್ಯಶ್ಚ ವೋ ನಮೋ ||
ನಮೋ ಆಸೀನೇಭ್ಯಶ್ಶಯಾನೇಭ್ಯಶ್ಚ ವೋ ನಮೋ ||
ನಮಸ್ಸ್ವಪದ್ಭ್ಯೋ ಜಾಗ್ರದ್ಭ್ಯಶ್ಚವೋ ನಮೋ ||
ನಮಸ್ಥಿಷ್ಠದ್ಭ್ಯೋ ದಾವದ್ಭ್ಯಶ್ಚ ವೋ ನಮೋ ||
ನಮಸ್ಸಭಾಭ್ಯಸ್ಸಭಾಪತಿಭ್ಯಶ್ಚ ವೋ ನಮೋ ||
ನಮೋ ಅಶ್ವೇಭ್ಯೋsಶ್ವಪತಿಭ್ಯಶ್ಚ ವೋ ನಮಃ ||

ಮೂರನೇ ಅನುವಾಕ - ಕನ್ನಡದಲ್ಲಿ :
ನಮಿಪೆ ಕರ್ಮಜನಿತ ದುಃಖಾದಿಗಳ ಸಹಿಸುವವಗೆ ಸಂಶಯವ ನಿವಾರಿಪಗೆ ಸಂಶಯಾದಿಗಳೊಡೆಯಂಗೆ ನಮೋ ||
ನಮೋ ದಿಕ್ ಸ್ವರೂಪಗೆ ಕರ್ಮಾದಿಗಳೊಡೆಯಂಗೆ ನಮೋ ||
ನಮೋ ಶರ ಧರಿಸಿದವಗೆ ಮಾಯಕಾರಂಗೆ ಕಾಮಾದಿತಸ್ಕರರೊಡೆಯಂಗೆ ನಮೋ ||
ನಮೋ ಸ್ವಪ್ನದಲಿ ಜಾಗೃತಿಯ ಮರೆಸಿ ವಂಚಿಸುವವಗೆ ನಿದ್ರೆಯಲೆಲ್ಲವನು ಮರೆಸಿ ವಂಚಿಸುವವಗೆ ವಂಚಕರೊಡೆಯಂಗೆ ನಮೋ ||
ನಮೋ ಸತತ ಸಂಚಾರಿಗೆ ಎಲ್ಲೆಲ್ಲು ಸುತ್ತುವವಗೆ ವನವಾಸಿಗಳೊಡೆಯಂಗೆ ನಮೋ ||
ನಮೋ ಹರಿತ ಆಯುಧವುಳ್ಳವಗೆ ವಿವೇಕವಪಹರಿಪವೃತ್ತಿಗಳೊಡೆಯಂಗೆ ನಮೋ ||
ನಮೋ ಖಡ್ಗಧಾರಿಗೆ ವೀರ್ಯವಂತನಿಗೆ ಅಜ್ಞಾನತಿಮಿರದಲಲೆವ ಜೀವರಾಯುಷ್ಯ ಕದ್ದು ಕೊನೆಗೊಳಿಸುವ ಹಂತಕರೊಡೆಯಂಗೆ ನಮೋ ||
ನಮೋ ಶಿರವಸ್ತ್ರಧಾರಿ ಗಿರಿಗಳಲಲೆವ ಚೋರನಿಗೆ ಜೀವರಲಿರುವೆಲ್ಲವಪಹರಿಪ ಚೋರರೊಡೆಯಂಗೆ ನಮೋ ||
ನಮೋ ಕ್ರೋಧಶರಧಾರಿಗೆ ಭಯಗೊಳಿಪ ಧನುಧಾರಿಗೆ ನಮೋ ||
ನಮೋ ವಿವಿಧ ವಿನ್ಯಾಸಗಳನೆಸಗುವವಗೆ ಬಗೆಬಗೆ ಭೋಗಗಳ ನೀಡುವಂಗೆ ನಮೋ ||
ನಮೋ ಧನುವ ಕುಗ್ಗಿಸಿ ಶರಸಂಧಾನಗೈವವಗೆ ಶರಗಳನೆಸವಂಗೆ ನಮೋ ||
ನಮೋ ಲಕ್ಷ್ಯದೆಡೆ ಸತತ ಶರಗಲನೆಸೆವವಗೆ ಲಕ್ಷ್ಯಭೇದಿಸುವಂಗೆ ನಮೋ ||
ನಮೋ ಆಸೀನನಾದವಗೆ ಮಲಗಿಹನಿಗೆ ನಮೋ ||
ನಮೋ ನಿದ್ರಿಸುವವಗೆ ಎಚ್ಚರಿರುವಾತಂಗೆ ನಮೋ ||
ನಮೋ ನಿಂತವನಿಗೆ ನಡೆವವಗೆ ನಮೋ ||
ನಮೋ ದೇಹರೂಪೀ ಸಭೆಗಳಿಗೆ ಸಭಾಪತಿಗಳಿಗೆ ನಮೋ ||
ನಮೋ ಇಂದ್ರಿಯಾಶ್ವಗಳಿಗೆ ಇಂದ್ರಿಯಾಶ್ವಗಳೊಡೆಯರಹ ರುದ್ರರಿಗೆ ನಮಿಪೆ ||

ವಿವರಣೆ :
ವಿರೋಧಿಗಳನ್ನು ಆಕ್ರಮಿಸುವವನೂ ಶತ್ರುಗಳನ್ನು ನಿಶ್ಚಯವಾಗಿ ಹಿಂಸಿಸುವವನೂ ಆದ ರುದ್ರನಿಗೆ ನಮಸ್ಕಾರ. ಅಭಿಮುಖವಾಗಿ ಎಲ್ಲ ಕಡೆಯಿಂದಲೂ ಹೊಡೆಯುವ ಸೇನೆಗಳ ಪಾಲಕನಾದ ರುದ್ರನಿಗೆ ನಮಸ್ಕಾರ.
ಕಕುಭಸದೃಶನಾಗಿ ಪ್ರಧಾನಭೂತನಾದವನೂ ಖಡ್ಗ ಹಾಗೂ ಬತ್ತಳಿಕೆಯುಳ್ಳವನೂ ಆದ ರುದ್ರನಿಗೆ ನಮಸ್ಕಾರ. ಗುಪ್ತಚೋರರಾದವರ ಪಾಲಕನಾದ ರುದ್ರನಿಗೆ ನಮಸ್ಕಾರ. ಅಂದರೆ ಲೀಲೆಯಿಂದ ಗುಪ್ತಚೋರನ ವೇಷವನ್ನು ಧರಿಸಿದವನೂ ಅಥವಾ ಸರ್ವಜಗತ್ಪಾಲಕನಾಗಿರುವುದರಿಂದ ಗುಪ್ತಚೋರ ಪಾಲಕನೂ ಆಗಿದ್ದಾನೆ.
ಧನುಸ್ಸಿನಲ್ಲಿ ಸಂಧಾನಮಾಡಲು ಕೈಯಲ್ಲಿ ಹಿಡಿದಿರುವ ಬಾಣವುಳ್ಳವನೂ ಬೆನ್ನಿನಲ್ಲಿ ಕಟ್ಟಿರುವ ಬತ್ತಳಿಕೆಯುಳ್ಳವನೂ ಆದ ರುದ್ರನಿಗೆ ನಮಸ್ಕಾರ. ಪ್ರಕಟಚೋರರ ಪಾಲಕನಾದ ರುದ್ರನಿಗೆ ನಮಸ್ಕಾರ.
ವಂಚಕನೂ ಸಂಚಾರ ಶೀಲನೂ ಎಲ್ಲೆಡೆಯೂ ಅಪ್ರತಿ ಹತವಾಗಿ ಸಂಚರಿಸುವವನೂ ಆದ ರುದ್ರನಿಗೆ ನಮಸ್ಕಾರ.

ತನ್ನವರೇ ಆಗಿದ್ದು ರಾತ್ರಿಯಲ್ಲಾಗಲಿ ಹಗಲಿನಲ್ಲಾಗಲಿ ಬೇರೆಯವರಿಂದ ತಿಳಿಯಲ್ಪಡದವರಾಗಿ ಅಪಹರಿಸುವ ಸ್ತಾಯುಗಳ ಪಾಲಕನಾದ ರುದ್ರನಿಗೆ ನಮಸ್ಕಾರ.
ಗುಪ್ತವಾಗಿ ಅಪಹರಿಸಲು ಸಂಚರಿಸುವವನಿಗೂ ಎಲ್ಲೆಡೆಯೂ ಸಂಚರಿಸುವವನಿಗೂ (ರುದ್ರರೂಪನಿಗೆ) ನಮಸ್ಕಾರ. ಅರಣ್ಯವಾಸಿಗಳಾದ ದಸ್ಯುಜನರ ಸ್ವಾಮಿಯಾದವನಿಗೆ ನಮಸ್ಕಾರ.
ವಜ್ರದಂತಿರುವ ಆಯುಧಗಳುಳ್ಳವರೂ (ವಜ್ರದಂತಿರುವ ಆಯುಧಗಳಿಂದ ತಮ್ಮ ಶರೀರಗಳನ್ನು ರಕ್ಷಿಸುವವರೂ) ಪ್ರಾಣಿಗಣನ್ನು ಹಿಂಸೆ ಮಾಡಲು ಇಚ್ಚಿಸುವವರೂ ಆದವರಿಗೆ ನಮಸ್ಕಾರ. ಪ್ರಭುವಿನ ಧನಾದಿಗಳನ್ನು ಅಪಹರಿಸುವವರ ಪಾಲಕನಿಗೆ ನಮಸ್ಕಾರ. ಇವರೆಲ್ಲರೂ ರುದ್ರಸ್ವರೂಪರೇ ಆಗಿರುವುದರಿಂದ ಅವರಲ್ಲಿ ಬೆಳಗುತ್ತಿರುವ ರುದ್ರನಿಗೆ ಈ ನಮಸ್ಕಾರವು ಸಲ್ಲುತ್ತದೆಯೆಂದು ಭಾವಿಸಬೇಕು.
ಖಡ್ಗಧಾರಿಗಳಾದ ಚೋರರಿಗೂ ರಾತ್ರಿಯಲ್ಲಿ  ಸಂಚರಿಸುವ ಚೋರರಿಗೂ (ರುದ್ರರೂಪರಾದವರಿಗೆ) ನಮಸ್ಕಾರ. ಕೊಂದುಹಾಕಿ ಅಪಹರಿಸುವ ದರೋಡೆಕಾರರ ಪಾಲಕನಿಗೆ ನಮಸ್ಕಾರ.
ಗ್ರಾಮದ ಜನರಂತೆ ಶಿರೋವೇಷ್ಟನ ಧಾರಿಯಾದ ಚೋರನಿಗೂ ಬೆಟ್ಟಗಳಲ್ಲಿ ಸಂಚರಿಸುವ ಚೋರನಿಗೂ ನಮಸ್ಕಾರ. ಭೂಮಿ ಮುಂತಾದುದನ್ನು ಅಪಹರಿಸುವ ಚೋರರ ಪಾಲಕನಿಗೆ ನಮಸ್ಕಾರ.
ಇತರರನ್ನು ಭಯಗೊಳಿಸಲು ಬಾಣಧಾರಿಗಳೂ ಧನುರ್ಧಾರಿಗಳೂ ಆದ (ರುದ್ರರೂಪರಿಗೆ) ನಿಮಗೆ ನಮಸ್ಕಾರ.
ಧನುಸ್ಸಿನಲ್ಲಿ ಮೌರ್ವಿಯನ್ನು ಜೋಡಿಸುವವರಿಗೂ ಅಂಥಹ ಧನುಸ್ಸಿನಲ್ಲಿ ಬಾಣಗಳನ್ನು ಪ್ರಯೋಗಿಸಲು ಜೋಡಿಸುವವರೂ ಆದ (ರುದ್ರರೂಪರಿಗೆ) ನಿಮಗೆ ನಮಸ್ಕಾರ.
(ಧನುಸ್ಸಿನಲ್ಲಿ ಬಾಣಗಳನ್ನು ಸಂಧಾನ ಮಾಡಿ) ಮೌರ್ವಿಯನ್ನು ಎಳೆಯುವವರೂ ಅಂಥಹ ಬಾಣಗಳನ್ನು ಪ್ರಯೋಗಿಸುವವರೂ ಆದ (ರುದ್ರರೂಪಿ) ನಿಮಗೆ ನಮಸ್ಕಾರ.
ಲಕ್ಷ್ಯವನ್ನು ತಲುಪುವವರೆಗೆ ಬಾಣವನ್ನು ಪ್ರಯೋಗಿಸುವವರೂ ಲಕ್ಷ್ಯವನ್ನು ಬಾಣದಿಂದ ಭೇದಿಸುವವರೂ ಆದ (ರುದ್ರರೂಪ) ನಿಮಗೆ ನಮಸ್ಕಾರ.
ಕುಳಿತಿರುವವರೂ ಮಲಗಿರುವವರೂ ಆದ (ರುದ್ರರೂಪಿ) ನಿಮಗೆ ನಮಸ್ಕಾರ.
ನಿದ್ರಿಸುತ್ತಿರುವವರೂ ಎಚ್ಚರಗೊಂಡಿರುವವರೂ ಆದ (ರುದ್ರರೂಪಿ) ನಿಮಗೆ ನಮಸ್ಕಾರ.
ನಿಂತಿರುವವರೂ ಓಡುತ್ತಿರುವವರೂ ಆದ ರುದ್ರರೂಪಿ ನಿಮಗೆ ನಮಸ್ಕಾರ.
ಸಭೆಗಳೂ ಸಭಾಪತಿಗಳೂ ಆಗಿರುವ ರುದ್ರರೂಪರಿಗೆ ನಮಸ್ಕಾರ.
ಕುದುರೆಗಳೂ ಕುದುರೆಗಳ ಪಾಲಕರೂ ಆಗಿರುವ ರುದ್ರರೂಪರಿಗೆ ನಮಸ್ಕಾರ.

ನಾಲ್ಕನೆಯ ಅನುವಾಕ - ಸಂಸ್ಕೃತದಲ್ಲಿ :
ನಮ ಅವ್ಯಾಧಿನೀಭ್ಯೋ ವಿವಿಧ್ಯಂತೀಭ್ಯಶ್ಚ ವೋ ನಮಃ
ನಮ ಉಗಣಾಭ್ಯಸ್ತೃಗ್ಂಹತೀಭ್ಯಶ್ಚ ವೋ ನಮಃ
ನಮೋ ಗೃತ್ಸೇಭ್ಯೋ ಗೃತ್ಸಪತಿಭ್ಯಶ್ಚ ವೋ ನಮಃ
ನಮೋ ವ್ರಾತೇಭ್ಯೋ ವ್ರಾತಪತಿಭ್ಯಶ್ಚ ವೋ ನಮಃ
ನಮೋ ಗಣೇಭ್ಯೋ ಗಣಪತಿಭ್ಯಶ್ಚ ವೋ ನಮಃ
ನಮೋ ವಿರೂಪೇಭ್ಯೋ ವಿಶ್ವರೂಪೇಭ್ಯಶ್ಚ ವೋ ನಮಃ
ನಮೋ ಮಹದ್ಭ್ಯಃ ಕ್ಷುಲ್ಲಕೇಭ್ಯಶ್ಚ ವೋ ನಮಃ
ನಮೋ ರಥಿಭ್ಯೋsರಥೇಭ್ಯಶ್ಚ ವೋ ನಮಃ
ನಮೋ ರಥೇಭ್ಯೋ ರಥಪತಿಭ್ಯಶ್ಚ ವೋ ನಮಃ
ನಮಸ್ಸೇನಾಭ್ಯಸ್ಸೇನಾನಿಭ್ಯಶ್ಚ ವೋ ನಮಃ
ನಮಃ ಕ್ಷತ್ತೃಭ್ಯಃ ಸಂಗ್ರಹೀತೃಭ್ಯಶ್ಚ ವೋ ನಮಃ
ನಮಸ್ತಕ್ಷಭ್ಯೋ ರಥಕಾರೇಭ್ಯಶ್ಚ ವೋ ನಮಃ
ನಮಃ ಕುಲಾಲೇಭ್ಯಃ ಕರ್ಮಾರೇಭ್ಯಶ್ಚ ವೋ ನಮಃ
ನಮಃ ಪುಂಜಿಷ್ಟೇಭ್ಯೋ ನಿಷಾದೇಭ್ಯಶ್ಚ ವೋ ನಮಃ
ನಮ ಇಷುಕೃದ್ ಭ್ಯೋ ಧನ್ವಕೃದ್ಭ್ಯಶ್ಚ ವೋ ನಮಃ
ನಮೋ ಮೃಗಯುಭ್ಯಶ್ವನಿಭ್ಯಶ್ಚ ವೋ ನಮಃ
ನಮಶ್ಶ್ವಭ್ಯಶ್ಶ್ವಪತಿಭ್ಯಶ್ಚ ವೋ ನಮಃ

ನಾಲ್ಕನೆಯ ಅನುವಾಕ - ಕನ್ನಡದಲ್ಲಿ :
ಎಲ್ಲೆಡೆಯು ತಾಡಿಸುವ ರುದ್ರರಿಗೆ ನಮಿಪೆ ಬಗೆ ಬಗೆಯಲಿ ತಾಡಿಸುವ ರುದ್ರರಿಗೆ ನಮೋ |
ಸೌಮ್ಯಗುಣರೂಪರಿಗೆ ಉಗ್ರರೂಪರಿಗೆ ನಮೋ |
ಕಾಮರೂಪದ ಮನಕೆ ಕಾಮರೂಪದ ಮನದೊಡೆಯರಿಗೆ ನಮೋ |
ಮನೋವೃತ್ತಿಗಣಕೆ ಮನೋವೃತ್ತಿಗಣದೊಡೆಯರಿಗೆ ನಮೋ | ಗಣಗಳಿಗೆ ಗಣಗಳೊಡೆಯರಿಗೆ ನಮೋ|
ವಿಕೃತರೂಪವುಳ್ಳವರಿಗೆ ವಿಶ್ವರೂಪರಿಗೆ ನಮೋ |
ಮಹಾಪುರುಷರಿಗೆ ಕ್ಷುದ್ರಜನರಿಗೆ ನಮೋ |
ದೇಹರೂಪೀ ರಥವುಳ್ಳವರಿಗೆ ರಥರಹಿತರಿಗೆ ನಮೋ |
ರಥಗಳಿಗೆ ರಥಗಳೊಡೆಯರಿಗೆ ನಮೋ |
ಸೇನೆಗಳಿಗೆ ಸೇನಾನಾಯಕರಿಗೆ ನಮೋ |
ದೇಹರೂಪದ ರಥಗಳ ಶಿಕ್ಷಿಸುವವರಿಗೆ ಸಾರಥಿಗಳಿಗೆ ನಮೋ | ಕಾಷ್ಠಶಿಲ್ಪಿಗಳಿಗೆ ರಥಕಾರರಿಗೆ ನಮೋ | ಕುಂಭಕಾರರಿಗೆ ಲೋಹಾರರಿಗೆ ನಮೋ | ಪಕ್ಷಿಗುಂಪುಗಳ ಹಿಡಿವವರಿಗೆ ನಿಷಾದರಿಗೆ ನಮೋ | ಬಾಣಗಳ ಮಾಡುವವರಿಗೆ ಧನುಕರ್ತೃಗಳಿಗೆ ನಮೋ | ಬೇಡರಿಗೆ ಬೇಟೆನಾಯ್ಗಳ ಪೋಷಕರಿಗೆ ನಮೋ | ಶ್ವಾನಗಳಿಗೆ ಶ್ವಾನಗಳೊಡೆಯರಿಗೆ ನಮೋ ||

ವಿವರಣೆ :
ಎಲ್ಲ ಕಡೆಯಿಂದಲೂ ಹೊಡೆಯುವ ರುದ್ರಸೇನಾರೂಪರೂ ಬಹುಪ್ರಕಾರವಾಗಿ ಹೊಡೆಯುವ ರುದ್ರಸೇನಾರೂಪರೂ ಆಗಿರುವ ರುದ್ರರೂಪರಿಗೆ ನಮಸ್ಕಾರ ||
ಸಪ್ತಮಾತೃಕೆಯರೇ ಮೊದಲಾಗಿರುವ ಉತ್ಕೃಷ್ಟಗಣರೂಪರೂ ದುರ್ಗಾ ಮೊದಲಾಗಿ ಉಗ್ರದೇವತಾ ರೂಪರಾಗಿರುವ ಹಿಂಸಾಸಮರ್ಥರೂ ಆಗಿರುವ ರುದ್ರರೂಪರಿಗೆ ನಮಸ್ಕಾರ ||
ವಿಷಯಲಂಪಟರೂ ವಿಷಯಲಂಪಟರ ಪಾಲಕರೂ ಆಗಿರುವ ರುದ್ರರೂಪರಿಗೆ ನಮಸ್ಕಾರ ||
ನಾನಾ ಜಾತಿಗಳ ಸಂಘರೂಪರೂ ಅಂತಹ ಸಂಘಗಳ ಪಾಲಕರೂ ಆಗಿರುವ ರುದ್ರರೂಪರಿಗೆ ನಮಸ್ಕಾರ ||
ರುದ್ರದೇವನ ಅನುಚರರಾದ ಭೂತ ವಿಶೇಷಗಳ ರೂಪವಾಗಿರುವ ಗಣದೇವತೆಗಳೂ ಅಂತಹ ಗಣಗಳ ಪಾಲಕರೂ ಆಗಿರುವ ರುದ್ರರೂಪರಿಗೆ ನಮಸ್ಕಾರ ||
ನಗ್ನರೂ ಮುಂಡರೂ ಇತ್ಯಾದಿಗಳ ರೂಪವಾಗಿರುವ ವಿಕೃತರೂಪವುಳ್ಳವರೂ ಕುದುರೆ ಆನೆ ಮುಂತಾದವುಗಳ ಮುಖವುಳ್ಳವರಾಗಿ ನಾನಾ ರೂಪಧಾರಿಗಳಾದ ಭೃತ್ಯರೂ ಆಗಿರುವ ರುದ್ರರೂಪರಿಗೆ ನಮಸ್ಕಾರ ||
ಅಣಿಮಾದಿ ಐಶ್ವರ್ಯ ಸಂಪನ್ನರಾಗಿ ಮಹಾಪುರುಷರೂ ಕ್ಷುದ್ರಜನರೂ ಆಗಿರುವ ರುದ್ರರೂಪರಿಗೆ ನಮಸ್ಕಾರ ||
ರಥವುಳ್ಳವರೂ ರಥರಹಿತರೂ ಆಗಿರುವ ರುದ್ರರೂಪರಿಗೆ ನಮಸ್ಕಾರ ||
ರಥಗಳೂ ರಥಗಳ ಪತಿಗಳೂ ಆಗಿರುವ ರುದ್ರರೂಪರಿಗೆ ನಮಸ್ಕಾರ || |
ಸೇನೆಗಳೂ ಸೇನಾನಾಯಕರೂ ಆಗಿರುವ ರುದ್ರರೂಪರಿಗೆ ನಮಸ್ಕಾರ ||
ರಥಗಳ ಶಿಕ್ಷಕರೂ ರಥ ಸಂಗ್ರಹಿಗಳಾದ ಸಾರಥಿಗಳೂ ಆಗಿರುವ ರುದ್ರರೂಪರಿಗೆ ನಮಸ್ಕಾರ ||
ಬಡಗಿಗಳೂ ರಥಕಾರರೂ ಆಗಿರುವ ರುದ್ರರೂಪರಿಗೆ ನಮಸ್ಕಾರ ||
ಕುಂಬಾರರೂ ಲೋಹಕಾರರೂ ಆಗಿರುವ ರುದ್ರರೂಪರಿಗೆ ನಮಸ್ಕಾರ ||
ಪಕ್ಷಿಗಳ ಗುಂಪುಗಳನ್ನು ಕಟ್ಟಿಹಾಕುವವರೂ ಮೀನುಗಾರರೂ ಆಗಿರುವ ರುದ್ರರೂಪರಿಗೆ ನಮಸ್ಕಾರ ||
ಬಾಣಗಳನ್ನು ಮಾಡುವವರೂ ಧನಸ್ಸುಗಳನ್ನು ಮಾಡುವವರೂ ಆಗಿರುವ ರುದ್ರರೂಪರಿಗೆ ನಮಸ್ಕಾರ||
ಬೇಟೆಗಾರರೂ ಬೇಟೆನಾಯಿಗಳನ್ನು ಸಾಕುವವರೂ ಆಗಿರುವ ರುದ್ರರೂಪರಿಗೆ ನಮಸ್ಕಾರ ||
ನಾಯಿಗಳೂ ನಾಯಿಗಳ ಪಾಲಕರೂ ಆಗಿರುವ ರುದ್ರರೂಪರಿಗೆ ನಮಸ್ಕಾರ ||

ಐದನೆಯ ಅನುವಾಕ - ಸಂಸ್ಕೃತದಲ್ಲಿ :
ನಮೋ ಭವಾಯ ಚ ರುದ್ರಾಯ ಚ
ನಮಶ್ಶರ್ವಾಯ ಚ ಪಶುಪತಯೇ ಚ
ನಮೋ  ನೀಲಗ್ರೀವಾಯ ಚ  ಶಿತಿಕಂಠಾಯ ಚ
ನಮಃ ಕಪರ್ದಿನೇ ಚ ವ್ಯುಪ್ತಕೇಶಾಯ ಚ
ನಮಸ್ಸಹಸ್ರಾಕ್ಷಾಯ ಚ ಶತಧನ್ವನೇ ಚ
ನಮೋ ಗಿರಿಶಾಯ ಚ ಶಿಪಿವಿಷ್ಟಾಯ ಚ
ನಮೋ ಮೀಢುಷ್ಟಮಾಯ ಚೇಷುಮತೇ ಚ
ನಮೋ ಹ್ರಸ್ವಾಯ ಚ ವಾಮನಾಯ ಚ
ನಮೋ ಬೃಹತೇ ಚ ವರ್ಷೀಯಸೇ ಚ
ನಮೋ ವೃದ್ಧಾಯ ಚ ಸಂವೃದ್ಧ್ವನೇ ಚ
ನಮೋ ಅಗ್ರಿಯಾಯ ಚ ಪ್ರಥಮಾಯ ಚ
ನಮ ಆಶವೇ ಚಾಜಿರಾಯ ಚ
ನಮಶ್ಶೀಘ್ರಿಯಾಯ ಚ ಶೀಭ್ಯಾಯ ಚ
ನಮ ಊರ್ಮ್ಯಾಯ ಚಾವಸ್ವನ್ಯಾಯ ಚ
ನಮಸ್ಸ್ರೋತಸ್ಯಾಯ ಚ ದ್ವೀಪ್ಯಾಯ ಚ

ಐದನೆಯ ಅನುವಾಕ - ಕನ್ನಡದಲ್ಲಿ :
ಸರ್ವವ್ಯಾಪಿಯಾದವಗು ರುದ್ರದೇವನಿಗು ನಮನ | ಪಾಪನಿವಾರಕನಿಗು ಪಶುಪತಿಗು ನಮನ | ನೀಲಿಗೊರಳವಗು ಬಿಳಿಗೊರಳವಗು ನಮನ | ಜಟಾಧಾರಿಗು ವ್ಯೋಮಕೇಶನಿಗು ನಮನ | ಸಾವಿರ ಕಣ್ಣವಗು ನೂರು ಬಿಲ್ಲವಗು ನಮನ | ರಜತಗಿರಿವಾಸಿಗು ಬೋಳುತಲೆಯವಗು ನಮನ | ಮೋಡರೂಪಿಂದ ಮಳೆಸುರಿಸುವವಗು ಬಾಣಧರನಿಗು ನಮನ | ಅಲ್ಪಕಾಯನಿಗು ವಾಮನಾಕಾರನಿಗು ನಮನ | ವೃದ್ದನಿಗು ಶ್ರುತಿಸಂವರ್ಧಿತನಿಗು ನಮನ | ಮುಂದೆ ಇರುವವನಿಗು ಮೊದಲವನಿಗು ನಮನ | ಶೀಘ್ರವ್ಯಾಪಕನಿಗು ಶೀಘ್ರಗಾಮಿಗು ನಮನ | ಶೀಘ್ರನಿಗು ವೃಷಭವಾಹನನಿಗು ನಮನ | ಚಲಿಸುವಲೆಗಳಿಂದ ಕೂಡಿದವಗು ನಿಶ್ಚಲಜಲದಲಿಹನಿಗು ನಮನ | ಸಂಸಾರಪ್ರವಾಹದಲಿರುವವಗು ದ್ವೀಪದಲಿರುವವಗು ನಮನ ||

ವಿವರಣೆ :
ಎಲ್ಲ ಕಡೆಯೂ ಎಲ್ಲೆಡೆಯೂ ಇರುವವನಾದ ಸೃಷ್ಟಿಕರ್ತನಾದ ರುದ್ರದೇವನಿಗೂ ನಮಸ್ಕಾರ.
ಪಾಪವನ್ನು ಹೋಗಲಾಡಿಸುವವನೂ ಪಶುಪತಿಯೂ ಆದ ರುದ್ರದೇವನಿಗೆ ನಮಸ್ಕಾರ.
ನೀಲಕಂಠನೂ ಉಳಿದ ಕಂಠಭಾಗದಲ್ಲಿ ಬಿಳಿವರ್ಣದ ಕಂಠವುಳ್ಳವನೂ ಆದ ರುದ್ರದೇವನಿಗೆ ನಮಸ್ಕಾರ.
ಜಟಾಜೂಟಧಾರಿಯೂ ಮುಂಡಿತಕೇಶನೂ (ಯತಿ ವೇಷದಲ್ಲಿ ಶಿವನು ಮುಂಡಿತಕೇಶನು) ಆದ ರುದ್ರದೇವನಿಗೆ ನಮಸ್ಕಾರ.
ಇಂದ್ರ ರೂಪದಿಂದ ಸಹಸ್ರಾಕ್ಷನೂ ಬಹುಧನುಸ್ಸುಗಳುಳ್ಳವನೂ ಆದ ಆದ ರುದ್ರದೇವನಿಗೆ ನಮಸ್ಕಾರ.
ಕೈಲಾಸ ಪರ್ವತದಲ್ಲಿರುವವನೂ ವಿಷ್ಣುಮೂರ್ತಿಧರನೂ ಆದ ರುದ್ರದೇವನಿಗೆ ನಮಸ್ಕಾರ.
ಮೇಘ ರೂಪದಿಂದ ಬಹಳವಾಗಿ ವೃಷ್ಟಿಯನ್ನುಂಟುಮಾಡುವವನೂ ಬಾಣಧಾರಕನೂ ಮಹಾಶೂರನೂ ಆದ ರುದ್ರದೇವನಿಗೆ ನಮಸ್ಕಾರ.
ಅಲ್ಪಕಾಯನೂ ವಾಮನಮೂರ್ತಿಯೂ ಆದ ರುದ್ರದೇವನಿಗೆ ನಮಸ್ಕಾರ.
ಪ್ರೌಢವಾದ ಆಕಾರವುಳ್ಳವನೂ ಗುಣಸಮೃದ್ಧಿ ಸಂಪನ್ನನಾದ ವೃದ್ಧನೂ ಆದ ರುದ್ರದೇವನಿಗೆ ನಮಸ್ಕಾರ.
ವಯಸ್ಸಿನಿಂದ ಅಧಿಕನಾದ ವೃದ್ಧನೂ ಶ್ರುತಿಗಳಿಂದ ಸಂವರ್ಧಿತನೂ ಆದ ರುದ್ರದೇವನಿಗೆ ನಮಸ್ಕಾರ.
ಸೃಷ್ಟಿಯ ಪೂರ್ವದಲ್ಲಿ ಇರುವವನೂ ಸಭೆಯಲ್ಲಿ ಪ್ರಧಾನನೂ ಆದ ರುದ್ರದೇವನಿಗೆ ನಮಸ್ಕಾರ.
ಶೀಘ್ರವಾಗಿ ವ್ಯಾಪಿಸುವವನೂ ಗಮನ ನಿಪುಣನೂ ಆದ ರುದ್ರದೇವನಿಗೆ ನಮಸ್ಕಾರ.
ಶೀಘ್ರಗಾಮಿಯೂ ಶೀಘ್ರವಾಗಿ ಹರಿಯುವ ನೀರಿನಲ್ಲಿರುವವನೂ ಆದ ರುದ್ರದೇವನಿಗೆ ನಮಸ್ಕಾರ.
ತರಂಗಗಳಿಂದ ಕೂಡಿರುವವನೂ ಧ್ವನಿರಹಿತವಾದ ಸ್ಥಿರಜಲದಲ್ಲಿ ಇರುವವನೂ ಆದ ರುದ್ರದೇವನಿಗೆ ನಮಸ್ಕಾರ.
ಪ್ರವಾಹದಲ್ಲಿರುವವನೂ ದ್ವೀಪದಲ್ಲಿರುವವನೂ ಆದ ರುದ್ರದೇವನಿಗೆ ನಮಸ್ಕಾರ.

ಆರನೆಯ ಅನುವಾಕ - ಸಂಸ್ಕೃತದಲ್ಲಿ :
ನಮೋ ಜ್ಯೇಷ್ಠಾಯ ಚ ಕನಿಷ್ಠಾಯ ಚ
ನಮಃ ಪೂರ್ವಜಾಯ ಚಾಪರಜಾಯ ಚ
ನಮೋ ಮಧ್ಯಮಾಯ ಚಾಪಗಲ್ಭಾಯ ಚ
ನಮೋ ಜಘನ್ಯಾಯ ಚ ಬುಧ್ನಿಯಾಯ ಚ
ನಮಃ ಸೋಭ್ಯಾಯ ಚ ಪ್ರತಿಸರ್ಯಾಯ ಚ
ನಮೋ ಯಾಮ್ಯಾಯ ಚ ಕ್ಷೇಮ್ಯಾಯ ಚ
ನಮ ಊರ್ವರ್ಯಾಯ ಚ ಖಲ್ಯಾಯ ಚ
ನಮಃ ಶ್ಲೋಕ್ಯಾಯ ಚಾವಸ್ವನ್ಯಾಯ ಚ
ನಮೋ ವನ್ಯಾಯ ಚ ಕಕ್ಷ್ಯಾಯ ಚ
ನಮಃ ಶ್ರವಾಯ ಚ ಪ್ರತಿಶ್ರವಾಯ ಚ
ನಮ ಆಶುಷೇಣಾಯ ಚಾತುರಥಾಯ ಚ
ನಮಶ್ಶೂರಾಯ ಚಾವಭಿನ್ದತೇ ಚ
ನಮೋ ವರ್ಮಿಣೇ ಚ ವರೂಥಿನೇ ಚ
ನಮೋ ಬಿಲ್ಮಿನೇ ಚ ಕವಚಿನೇ ಚ
ನಮಃ ಶ್ರುತಾಯ ಚ ಶ್ರುತಸೇನಾಯ ಚ

ಆರನೆಯ ಅನುವಾಕ - ಕನ್ನಡದಲ್ಲಿ :
ಜ್ಯೇಷ್ಠನೂ ಕನಿಷ್ಠನೂ ಆದ ರುದ್ರನಿಗೆ ನಮಿಪೆ | ಬಲುಹಿಂದೆ ಜನಿಸಿದವಗು ಮುಂದೆ ಜನಿಸುವವಗು
ನಮನ | ನಡುವಯಸ್ಕನಿಗು ಬಾಲಕಗು ನಮನ | ನಿಂದ್ಯನಿಗು ವೃಕ್ಷಮೂಲವಾಸಿಗು ನಮನ | ಪಾಪಪುಣ್ಯ ಸಹವಾಸಿಗು ರಕ್ಷಾಬಂಧದಲ್ಲಿರುವವಗು ನಮನ | ಯಮಲೋಕದಲ್ಲಿರುವವಗು ಮೋಕ್ಷಯೋಗ್ಯನಿಗು
ನಮನ | ಬೆಳೆವ ಭೂಮಿಯಲಿರುವವಗು ಬಯಲು ಕಣದಲ್ಲಿಹಗು ನಮನ | ವೇದಮಂತ್ರವೇದ್ಯನಿಗು ವೇದಾಂತ ವೇದ್ಯನಿಗು ನಮನ | ಸಂಸಾರವೃಕ್ಷವನದಲ್ಲಿಕಿರುವವಗು ಪಾಪಪುಣ್ಯಲತೆಗಳಲ್ಲಿಹಗು ನಮನ | ಧ್ವನಿರೂಪದವನಿಗು ಪ್ರತಿಧ್ವನಿಯ ರೂಪದವನಿಗು ನಮನ | ವೇಗಿ ಇಂದ್ರಿಯಗಳ ಸೇನೆಯುಳ್ಳವನಿಗು ದೇಹರೂಪದ ರಥವುಳ್ಳವಗು ನಮನ | ಶೂರನಿಗು ಕಾಮಾದಿಗಳ ಭೇದಿಸುವವಗು ನಮನ | ಕವಚಧಾರಿಗು ರಥಿಕನಿಗು ನಮನ | ನಾಡಿಗಳ ಬೆಳಗುವವಗು ಪಂಚಭೂತದ ಕವಚಧಾರಿಗು ನಮನ | ವೇದ ಪ್ರಖ್ಯಾತನಿಗು ಪ್ರಖ್ಯಾತ ಸೇನೆಯುಳ್ಳವಗು ನಮನ |

ವಿವರಣೆ :
ವಿದ್ಯಾ-ಐಶ್ವರ್ಯ ಮುಂತಾದವುಗಳಿಂದ ಜ್ಯೇಷ್ಠಟನಾದವನೂ ಕನಿಷ್ಠನೂ ಆದ ರುದ್ರದೇವನಿಗೆ ನಮಸ್ಕಾರ.
ಜಗತ್ತಿನ ಆದಿಯಲ್ಲಿ ಹಿರಣ್ಯಗರ್ಭರೂಪದಿಂದ ಉತ್ಪನ್ನನಾದ ಪೂರ್ವಜನೂ ಸೃಷ್ಟಿಯ ಪ್ರಳಯ ಕಾಲದಲ್ಲಿ ಕಾಲಾಗ್ನಿ ಮುಂತಾದ ರೂಪದಿಂದ ಹುಟ್ಟುವ ಅಪರಜನೂ ಆದ ರುದ್ರದೇವನಿಗೆ ನಮಸ್ಕಾರ.
ಮಧ್ಯಕಾಲದಲ್ಲಿರುವವನೂ ಅಪ್ರಗಲ್ಭನಾದ ಬಾಲಕ ರೂಪನೂ ಆದ ರುದ್ರದೇವನಿಗೆ ನಮಸ್ಕಾರ.
ಗೋ ಮುಂತಾದ ಪಶುಗಳ ಹಿಂಭಾಗದಲ್ಲಿ ಕರು ಮುಂತಾದ ರೂಪದಿಂದ ಇರುವ ಜಘನ್ಯನೂ ವೃಕ್ಷಗಳ ಮೂಲದಲ್ಲಿ ಇರುವವನೂ ಆದ ರುದ್ರದೇವನಿಗೆ ನಮಸ್ಕಾರ.
ಪುಣ್ಯ ಪಾಪಗಳೆರಡರಿಂದಲೂ ಕೂಡಿರುವ ಮನುಷ್ಯ ಲೋಕದಲ್ಲಿ ಇರುವವನೂ (ಪ್ರತಿಸರ) ರಕ್ಷಾಬಂಧದಲ್ಲಿರುವವನೂ ಆದ ರುದ್ರದೇವನಿಗೆ ನಮಸ್ಕಾರ.
ಯಮಲೋಕದಲ್ಲಿ ಪಾಪಿಗಳ ಶಿಕ್ಷಕನಾಗಿ ಇರುವವನೂ ಗುಪ್ತಸ್ಥಾನ ಅಥವಾ ಮೋಕ್ಷಾವಸ್ಥೆಯಲ್ಲಿರುವವನೂ ಆದ ರುದ್ರದೇವನಿಗೆ ನಮಸ್ಕಾರ.
ಸಮಸ್ತ ಸಸ್ಯ ಸಂಪನ್ನವಾದ ಭೂಮಿಯಲ್ಲಿರುವವನೂ ಕಣದಲ್ಲಿ (ಸಸ್ಯಶೋಧ ಸ್ಥಾನ) ಇರುವವನೂ ಆದ ರುದ್ರದೇವನಿಗೆ ನಮಸ್ಕಾರ.
ವೈದಿಕ ಮಂತ್ರ ಪ್ರತಿಪಾದ್ಯನೂ ವೇದಾಂತ (ಉಪನಿಷತ್) ಪ್ರತಿಪಾದ್ಯನೂ ಆದ ರುದ್ರದೇವನಿಗೆ ನಮಸ್ಕಾರ.
ವೃಕ್ಷಾದಿರೂಪದಿಂದ ಕಾಡಿನಲ್ಲಿರುವವನೂ ಲತಾದಿ ರೂಪದಿಂದ ಇರುವವನೂ ಆದ ರುದ್ರದೇವನಿಗೆ ನಮಸ್ಕಾರ.
ಶಬ್ದರೂಪನೂ ಪ್ರತಿಧ್ವನಿರೂಪನೂ ಆದ ರುದ್ರದೇವನಿಗೆ ನಮಸ್ಕಾರ.
ಶೀಘ್ರಗಾಮಿಯಾದ ಸೇನಾರೂಪನೂ ಶೀಘ್ರಗಾಮಿಯಾದ ರಥವುಳ್ಳವನೂ ಆದ ರುದ್ರದೇವನಿಗೆ ನಮಸ್ಕಾರ.
ಶೂರನೂ ಧರ್ಮದ್ವೇಷಿಗಳನ್ನು ಭೇದಿಸುವವನೂ ಆದ ರುದ್ರದೇವನಿಗೆ ನಮಸ್ಕಾರ.
ಕಂಚುಕಧಾರಿಯೂ ಗೃಹೋಪೇತನೂ ಆದ ರುದ್ರದೇವನಿಗೆ ನಮಸ್ಕಾರ.
ಯುದ್ಧದಲ್ಲಿ ಶಿರಸ್ತ್ರಾಣಧಾರಿಯೂ ಕವಚಧಾರಿಯೂ ಆದ ರುದ್ರದೇವನಿಗೆ ನಮಸ್ಕಾರ.
ವೇದಗಳಲ್ಲಿ ಪ್ರಸಿದ್ದನೂ ಪ್ರಖ್ಯಾತವಾದ ಸೇನೆಯುಳ್ಳವನೂ ಆದ ರುದ್ರದೇವನಿಗೆ ನಮಸ್ಕಾರ.

ಏಳನೆಯ ಅನುವಾಕ - ಸಂಸ್ಕೃತದಲ್ಲಿ :
ನಮೋ ದುಂದುಭ್ಯಾಯ ಚಾಹನನ್ಯಾಯ ಚ
ನಮೋ ಧೃಷ್ಣವೇ ಚ ಪ್ರಮೃಶಾಯ ಚ
ನಮೋ ದೂತಾಯ ಚ ಪ್ರಹಿತಾಯ ಚ
ನಮೋ ನಿಷಂಗಿಣೇ ಚೇಷುಧಿಮತೇ ಚ
ನಮಸ್ತೀಕ್ಷ್ಣೇಷವೇ ಚಾಯುಧಿನೇ ಚ
ನಮಃ ಸ್ವಾಯುಧಾಯ ಚ ಸುಧನ್ವನೇ ಚ
ನಮಃ ಸ್ರುತ್ಯಾಯ ಚ ಪಥ್ಯಾಯ ಚ
ನಮಃ ಕಾಟ್ಯಾಯ ಚ ನೀಪ್ಯಾಯ ಚ
ನಮಃ ಸೂದ್ಯಾಯ ಚ ಸರಸ್ಯಾಯ ಚ
ನಮೋ ನಾದ್ಯಾಯ ಚ ವೈಶನ್ತಾಯ ಚ
ನಮಃ ಕೂಪ್ಯಾಯ ಚಾವಟ್ಯಾಯ ಚ
ನಮೋವರ್ಷ್ಯಾಯ ಚಾವರ್ಷ್ಯಾಯ ಚ
ನಮೋ ಮೇಘ್ಯಾಯ ಚ ವಿದ್ಯುತ್ಯಾಯ ಚ
ನಮ ಈದ್ಧ್ರಿಯಾಯ ಚಾತಪ್ಯಾಯ ಚ
ನಮೋ ವಾತ್ಯಾಯ ಚ ರೇಷ್ಮಿಯಾಯ ಚ
ನಮೋ ವಾಸ್ತವ್ಯಾಯ ಚ ವಾಸ್ತುಪಾಯ ಚ

ಏಳನೆಯ ಅನುವಾಕ - ಕನ್ನಡದಲ್ಲಿ :
ಭೇರಿಯ ಶಬ್ದರೂಪನಿಗು ಭೇರಿಯ ಬಡಿವ ದಂಡರೂಪಂಗು ನಮನ | ಧೀರನಿಗು ಪರಾಮರ್ಶಶೀಲನಿಗು ನಮನ | ಅಗ್ನಿರೂಪದ ದೂತನಿಗು ಅತಿಹಿತಕರನಿಗು ನಮನ | ಕತ್ತಿಹಿಡಿದವನಿಗೆ ಬತ್ತಳಿಕೆಯುಳ್ಳವಗೆ ನಮನ | ತೀಕ್ಷ್ಣಶರವುಳ್ಳವಗು ಎಲ್ಲೆಡೆ ಯುದ್ಧಗೈವಗು ನಮನ | ಶೂಲಾಯುಧವುಳ್ಳವಗು ಸುಧನುಧಾರಿಗು ನಮನ | ಕಿರುದಾರಿಗಳಲ್ಲಿರುವವಗು ಹೆದ್ದಾರಿಯಲಿಹಗು ನಮನ | ನರಕಕೂಪಕೊಯ್ವನಿಗು ಸನ್ಮಾರ್ಗಪ್ರವರ್ತಕಗು ನಮನ | ಕರ್ಮದ ಕೆಸರಲ್ಲಿರುವನಿಗು ಸರಸಿಯರುವವಗು ನಮನ| ನದಿಜಲದ ವಾಸಿಗು ಕಿರುಗೊಳದಲಿಹನಿಗು ನಮನ | ಕಂಠಕೂಪದಲ್ಲಿರುವವಗು ಕುಂಡಲಿನಿಯಲಿ ವಿರಾಜಿಸುವವಗು ನಮನ | ಮಳೆಧಾರೆಯೆರೆಯುವವನಿಗು ಕಡಲ ಹೀರುವವಗು ನಮನ | ಮೋಡದಲ್ಲಿರುವವಗು ಮಿಂಚಿನಲಿ ಹೊಳೆವಂಗು
ನಮನ | ಶುಭ್ರ ಗಗನದಲ್ಲಿಹನಿಗು ಉರಿವ ಬಿಸಿಲಿರುವವಗು ನಮನ | ಮುಕ್ತ ವಾತಾವರಣದಲ್ಲಿರುವವಗು ದೇಹಕೋಶದಲಿಹಗು ನಮನ | ವಸ್ತುಗಳಲ್ಲಿರುವನಿಗು ವಸ್ತುಗಳ ರಕ್ಷಿಪಗು ನಮನ ||

ವಿವರಣೆ :
ಭೇರೀಶಬ್ದರೂಪನೂ ದುಂದುಭಿಯನ್ನು ಬಡಿಯುವ ದಂಡದಲ್ಲಿ ಇರುವವನೂ ಆದ ರುದ್ರದೇವನಿಗೆ ನಮಸ್ಕಾರ.
ಯುದ್ಧದಲ್ಲಿ ಪಲಾಯನ ಮಾಡದಿರುವವನೂ ಅಥವಾ ಸಮಸ್ತ ಪ್ರಪಂಚವನ್ನು ರಕ್ಷಿಸುವುದರಲ್ಲಿ ನಿಪುಣನೂ ಸಮಸ್ತವನ್ನೂ ಪರಾಮರ್ಶ ಮಾಡುವುದರಲ್ಲಿ ನಿಪುಣನೂ ಆದ ರುದ್ರದೇವನಿಗೆ ನಮಸ್ಕಾರ.
ಅಗ್ನಿರೂಪನಾಗಿ ದೇವತೆಗಳ ದೂತನೂ ಅತ್ಯಂತ ಹಿತಕಾರಿ ಆದ ರುದ್ರದೇವನಿಗೆ ನಮಸ್ಕಾರ.
ಖಡ್ಗಯುಕ್ತನೂ ಬತ್ತಳಿಕೆಯುಳ್ಳವನೂ ಆದ ರುದ್ರದೇವನಿಗೆ ನಮಸ್ಕಾರ.
ತೀಕ್ಷ್ಣವಾದ ಬಾಣವುಳ್ಳವನೂ ಅನೇಕವಾದ ಆಯುಧಗಳುಳ್ಳವನೂ ಆದ ರುದ್ರದೇವನಿಗೆ ನಮಸ್ಕಾರ.
ಉತ್ತಮವಾದ ಆಯುಧ ಶೂಲಾಯುಧವುಳ್ಳವನೂಅ ಉತ್ತಮವಾದ ಧನುಸ್ಸುಳ್ಳವನೂ ಆದ ರುದ್ರದೇವನಿಗೆ ನಮಸ್ಕಾರ.
ಪಾದಸಂಚಾರ ಮಾತ್ರಯೋಗ್ಯವಾದ ಸಣ್ಣ ದಾರಿಯಲ್ಲಿರುವವನೂ ರಥ ಉದುರೆ ಮುಂತಾದವುಗಳ ಸಂಚಾರಕ್ಕೆ ಯೋಗ್ಯವಾದ ಮಾರ್ಗದಲ್ಲಿರುವವನೂ ಆದ ರುದ್ರದೇವನಿಗೆ ನಮಸ್ಕಾರ.
ಕೂಪ ಮುಂತಾದವುಗಳಲ್ಲಿ ಇರುವವನೂ ಪರ್ವತದಿಂದ ಕೆಳಗೆ ಹರಿಯುವ ನೀರಿನ ಪ್ರದೇಶದಲ್ಲಿ ಇರುವವನೂ ಆದ ರುದ್ರದೇವನಿಗೆ ನಮಸ್ಕಾರ.
ಕೆಸರಿನ ಪ್ರದೇಶದಲ್ಲಿರುವವನೂ ಸರೋವರದಲ್ಲಿ ಇರುವವನೂ ಆದ ರುದ್ರದೇವನಿಗೆ ನಮಸ್ಕಾರ.
ನದೀ ಜಲದಲ್ಲಿ ಇರುವವನೂ ಅಲ್ಪವಾದ ಸರಸ್ಸಿನಲ್ಲಿ ಇರುವವನೂ ಆದ ರುದ್ರದೇವನಿಗೆ ನಮಸ್ಕಾರ.
ಬಾವಿಯಲ್ಲಿನ ಜಲದಲ್ಲಿ ಇರುವವನೂ ಹಳ್ಳದಲ್ಲಿ ಇರುವ ಜಲದಲ್ಲಿ ಇರುವವನೂ ಆದ ರುದ್ರದೇವನಿಗೆ ನಮಸ್ಕಾರ.
ವೃಷ್ಟಿಯ ಜಲದಲ್ಲಿ ಇರುವವನೂ ಸಮುದ್ರಾದಿಗಳ ಜಲದಲ್ಲಿ ಇರುವವನೂ ಆದ ರುದ್ರದೇವನಿಗೆ ನಮಸ್ಕಾರ.
ಮೇಘದಲ್ಲಿ ಇರುವವನೂ ಮಿಂಚಿನಲ್ಲಿ ಇರುವವನೂ ಆದ ರುದ್ರದೇವನಿಗೆ ನಮಸ್ಕಾರ.
ಶರತ್ ಕಾಲದಲ್ಲಿ ಶುಭ್ರವಾದ ಆಕಾಶದಲ್ಲಿ ಇರುವ ಮೇಘದಲ್ಲಿ ಇರುವವನೂ ಆದ ರುದ್ರದೇವನಿಗೆ ನಮಸ್ಕಾರ.
ಗಾಳಿಯೊಡನೆ ಉಂಟಾಗುವ ವೃಷ್ಟಿಗಳಲ್ಲಿ ಇರುವವನೂ ಪ್ರಳಯ ಕಾಲದಲ್ಲಿ ಉಂಟಾಗುವ ಸಂವರ್ತರೂಪವಾದ ವಾಯುವಿನಲ್ಲಿ ಇರುವವನೂ ಆದ ರುದ್ರದೇವನಿಗೆ ನಮಸ್ಕಾರ.
ಗೋ ,ಅಶ್ವ, ಧನ , ಸಂಪತ್ತು - ಮುಂತಾದ ವಸ್ತುಗಳಲ್ಲಿ ಇರುವವನೂ ಗೃಹನಿರ್ಮಾಣ ಭೂಮಿಯ ಪಾಲಕನೂ ಆದ ರುದ್ರದೇವನಿಗೆ ನಮಸ್ಕಾರ.

ಎಂಟನೇ ಅನುವಾಕ - ಸಂಸ್ಕೃತದಲ್ಲಿ :
ನಮಸ್ಸೋಮಾಯ ಚ ರುದ್ರಾಯ ಚ
ನಮಸ್ತಾಮ್ರಾಯ ಚಾರುಣಾಯ ಚ
ನಮಃ ಶಂಗಾಯ ಚ ಪಶುಪತಯೇ ಚ
ನಮ ಉಗ್ರಾಯ ಚ ಭೀಮಾಯ ಚ
ನಮೋ ಅಗ್ರೇವಧಾಯ ಚ ದೂರೇವಧಾಯ ಚ
ನಮೋ ಹನ್ತ್ರೇ ಚ ಹನೀಯಸೇ ಚ
ನಮೋ ವೃಕ್ಷೇಭ್ಯೋ ಹರಿಕೇಶೇಭ್ಯಃ
ನಮಸ್ತಾರಾಯ
ನಮಃ ಶಂಭವೇ ಚ ಮಯೋಭವೇ ಚ
ನಮಃ ಶಂಕರಾಯ ಚ ಮಯಸ್ಕರಾಯ ಚ
ನಮಶ್ಶಿವಾಯ ಚ ಶಿವತರಾಯ ಚ
ನಮಸ್ತೀರ್ಥ್ಯಾಯ ಚ ಕೂಲ್ಯಾಯ ಚ
ನಮಃ ಪಾರ್ಯಾಯ ಚಾವಾರ್ಯಾಯ ಚ
ನಮ ಪ್ರತರಣಾಯ ಚೋತ್ತರಣಾಯ ಚ
ನಮ ಆತರ್ಯಾಯ ಚಾಲಾದ್ಯಾಯ ಚ
ನಮಶ್ಶಷ್ಪ್ಯಾಯ ಚ ಫೇನ್ಯಾಯ ಚ
ನಮಸ್ಸಿಕತ್ಯಾಯ ಚ ಪ್ರವಾಹ್ಯಾಯ ಚ

ಎಂಟನೇ ಅನುವಾಕ - ಕನ್ನಡದಲ್ಲಿ :
ಉಮಾಸಹಿತಗು ರುದ್ರನಿಗು ನಮನ | ಅತಿಗೆಂಪುಬಣ್ಣದವಗು ಅರುಣನಿಗು ನಮನ |
ಸುಖವೀವನಿಗು ಭೀಕರನಿಗು ನಮನ | ಎದುರಿದ್ದು ವಧಿಸುವನಿಗು ದೂರದಲ್ಲಿದ್ದು ವಧಿಸುವವಗು ನಮನ|
ಕೊಲುವನಿಗು ಕೊಲ್ಲಿಸುವವಗು ನಮನ | ಸಂಸಾವೃಕ್ಷರೂಪನಿಗು ಹಸಿರೆಲೆಗೂದಲವನಿಗು ನಮನ|
ಸಂಸಾರಸಾಗರ ತಾರಕನಿಗೆ ನಮನ | ಸುಖರೂಪನಿಗು ಸುಖಪ್ರದನಿಗು ನಮನ |
ಮೋಕ್ಷವೀವನಿಗು ಐಹಿಕ ಸುಖವೀವನಿಗು ನಮನ | ಮಂಗಳಾತ್ಮನಿಗು ಮಂಗಳಕರನಿಗು ನಮನ |
ತೀರ್ಥಗಳಲಿರುವವಗು ನದಿತಟಗಳಲಿರುವವಗು ನಮನ | ಆಚೆದಡದಲ್ಲಿರುವನಿಗು ಈಚೆದಡದಲ್ಲಿರುವವಗು ನಮನ
ಪಾಪವ ದಾಟಿಸುವನಿಗು ಉದ್ಧರಿಸುವವಗು ನಮನ | ಅರ್ಪಣೆಯ ಸ್ವೀಕರಿಸುವನಿಗೂ ಅನುಗ್ರಹಿಸುವವಗು ನಮನ |
ಕಿರುಗರಿಕೆ ಹುಲ್ಲಲಿರುವಗು ಶರಧಿಯ ನೊರೆಯಲಿವನಿಗು ನಮನ | ಮರಳುಗಳಲಿರುವವಗು ಹರಿವ ನದಿಗಳಲಿರುವನಿಗು ನಮನ |

ವಿವರಣೆ :
ಉಮಾಸಹಿತನೂ ರುದ್ರನೂ ಆದವನಿಗೆ ನಮಸ್ಕಾರ.
ಉದಯ ಕಾಲದಲ್ಲಿ ಆದಿತ್ಯ ರೂಪನಾಗಿ ಅತ್ಯಂತ ರಕ್ತವರ್ಣದವನಾಗಿಯೂ ಉದಯವಾದ ಮೇಲೆ ಸ್ವಲ್ಪ ರಕ್ತವರ್ಣದವನಾಗಿಯೂ ಆದ ರುದ್ರದೇವನಿಗೆ ನಮಸ್ಕಾರ.
ಸುಖಪ್ರದಾಯಕನೂ ಪಶುಪತಿಯೂ ಆದ ರುದ್ರದೇವನಿಗೆ ನಮಸ್ಕಾರ.|
ವಿರೋಧಿಗಳನ್ನು ನಾಶಮಾಡಲು ಕ್ರೋಧಯುಕ್ತನಾದವನೂ ದರ್ಶನ ಮಾತ್ರದಿಂದಲೇ ವಿರೋಧಿಗಳಿಗೆ ಭಯಂಕರನೂ ಆದ ರುದ್ರದೇವನಿಗೆ ನಮಸ್ಕಾರ.
ಅಭಿಮುಖವಾಗಿದ್ದು ವಧಿಸುವವನೂ ದೂರದಲ್ಲಿದ್ದು ವಧಿಸುವವನೂ ಆದ ರುದ್ರದೇವನಿಗೆ ನಮಸ್ಕಾರ.
ವಿರೋಧಿಗಳನ್ನು ಅನಾಯಾಸದಿಂದ ವಧಿಸುವವನೂ ಸಂಹಾರಕಾಲದಲ್ಲಿ ಅತಿಶಯವಾಗಿ ಎಲ್ಲರನ್ನೂ ವಧಿಸುವವನೂ ಆದ ರುದ್ರದೇವನಿಗೆ ನಮಸ್ಕಾರ.
ಹಸಿರಾದ ವರ್ಣವುಳ್ಳ ಕೇಶ ಸದೃಶವಾದ ಎಲೆಗಳುಳ್ಳ ವೃಕ್ಷಗಳಿಗೆ ವೃಕ್ಷಗಳ ರೂಪನಾದ ರುದ್ರದೇವನಿಗೆ ನಮಸ್ಕಾರ.
ಪ್ರಣವ ರೂಪಿಯೂ ಪ್ರಣವ ಪ್ರತಿಪಾದ್ಯನೂ ಆದ ರುದ್ರದೇವನಿಗೆ ನಮಸ್ಕಾರ.
ಸುಖರೂಪನೂ ಸುಖಪ್ರದನೂ ಐಹಿಕವಾದ ಮತ್ತು ಆಮುಷ್ಮಿಕವಾದ ಸುಖಗಳನ್ನು ನೀಡುವವನಾದ  ರುದ್ರದೇವನಿಗೆ ನಮಸ್ಕಾರ.
ವಿಷಯ ಸುಖಪ್ರದನೂ ಮೋಕ್ಷ ಸುಖಪ್ರದನೂ ಆದ ರುದ್ರದೇವನಿಗೆ ನಮಸ್ಕಾರ.
ಮಂಗಳಾತ್ಮನೂ ಅತಿಶಯವಾಗಿ ಮಂಗಳಪ್ರದನೂ ಆದ ರುದ್ರದೇವನಿಗೆ ನಮಸ್ಕಾರ.
ತೀರ್ಥಗಳಲ್ಲಿ ಇರುವವನೂ ನದೀತೀರಗಳಲ್ಲಿ ಇರುವವನೂ ಆದ ರುದ್ರದೇವನಿಗೆ ನಮಸ್ಕಾರ.
ಸಂಸಾರ ಸಮುದ್ರದ ಆಚೆಯ ದಡದಲ್ಲಿ ಮುಮುಕ್ಷುಗಳಿಂದ ಧ್ಯೇಯನಾಗಿ ಇರುವವನೂ ಸಂಸಾರ ಸಮುದ್ರದ ಈಚೆಯ ದಡದಲ್ಲಿ ಕಾಮ್ಯಫಲಪ್ರದನಾಗಿ ಇರುವವನೂ ಆದ ರುದ್ರದೇವನಿಗೆ ನಮಸ್ಕಾರ.
ಮಂತಜಪಾದಿಗಳ ರೂಪವಾಗಿ ಅತಿಶಯದಿವಾಗಿ ಪಾಪವನ್ನು ದಾಟಿಸುವವನೂ ತತ್ತ್ವಜ್ಞಾನ ರೂಪದಿಂದ ಸಮಸ್ತ ಸಂಸಾರವನ್ನು ಉದ್ಧಾರಮಾಡುವವನೂ ಆದ ರುದ್ರದೇವನಿಗೆ ನಮಸ್ಕಾರ.
ಸಂಸಾರದ ದಡವನ್ನು ಹೊಂದಿಯೂ ಕೂಡ ಕರ್ಮಶೇಷದಿಂದ ಹಿಂದಿರುಗಿ ಬರುವವರನ್ನು ಅನುಗ್ರಹಿಸುವವನೂ ಸೃಷ್ಟಿಯ ಮಧ್ಯದಲ್ಲಿ ಅನುಗ್ರಹ ಮೂರ್ತಿಯಾಗಿ ಇರುವವನೂ ಆದ ರುದ್ರದೇವನಿಗೆ ನಮಸ್ಕಾರ.
ಪವಿತ್ರವಾದ ಕುಶ-ದರ್ಭಾದಿರೂಪವಾದ ಬಾಲತೃಣದಲ್ಲಿರುವವನೂ ಸಮುದ್ರ ಮಧ್ಯದಲ್ಲಿರುವ ನೊರೆಯಲ್ಲಿರುವವನೂ ಆದ ರುದ್ರದೇವನಿಗೆ ನಮಸ್ಕಾರ.
ಮರಳುಗಳಲ್ಲಿ ಇರುವವನೂ ಪ್ರವಾಹದಲ್ಲಿರುವವನೂ ಆದ ರುದ್ರದೇವನಿಗೆ ನಮಸ್ಕಾರ.

ಒಂಬತ್ತನೇ ಅನುವಾಕ - ಸಂಸ್ಕೃತದಲ್ಲಿ :
ನಮ ಇರಿಣ್ಯಾಯ ಚ ಪ್ರಪಥ್ಯಾಯ ಚ
ನಮಃ ಕಿಗ್ಂಶಿಲಾಯ ಚ ಕ್ಷಯಣಾಯ ಚ
ನಮಃ ಕಪರ್ದಿನೇ ಚ ಪುಲಸ್ತಯೇ ಚ
ನಮೋ ಗೋಷ್ಠ್ಯಾಯ ಚ ಗೃಹ್ಯಾಯ ಚ
ನಮಸ್ತಲ್ಪ್ಯಾಯ ಚ ಗೇಹ್ಯಾಯ ಚ
ನಮಃ ಕಾಟ್ಯಾಯ ಚ ಗಹ್ವರೇಷ್ಠಾಯ ಚ
ನಮೋ ಹ್ರದಯ್ಯಾಯ ಚ ನಿವೇಷ್ಪ್ಯಾಯ ಚ
ನಮಃ ಪಾಗ್ಂಸವ್ಯಾಯ ಚ ರಜಸ್ಯಾಯ ಚ
ನಮಶ್ಶುಷ್ಕ್ಯಾಯ ಚ ಹರಿತ್ಯಾಯ ಚ
ನಮೋ ಲೋಪ್ಯಾಯ ಚೋಲಪ್ಯಾಯ ಚ
ನಮ ಊರ್ವ್ಯಾಯ ಚ ಸೂರ್ಮ್ಯಾಯ ಚ
ನಮಃ ಪರ್ಣ್ಯಾಯ ಚ ಪರ್ಣಶದ್ಯಾಯ ಚ
ನಮೋsಪಗುರಮಾಣಾಯ ಚಾಭಿಘ್ನತೇ ಚ
ನಮ ಅಕ್ಖಿದತೇ ಚ ಪ್ರಕ್ಖಿದತೇ ಚ
ನಮೋ ವಃ ಕಿರಿಕೇಭ್ಯೋ ದೇವಾನಾಗ್ಂ ಹೃದಯೇಭ್ಯಃ
ನಮೋ ವಿಕ್ಷೀಣಕೇಭ್ಯಃ
ನಮೋ ವಿಚಿನ್ವತ್ಕೇಭ್ಯಃ
ನಮ ಆನಿರ್ಹತೇಭ್ಯಃ
ನಮ ಆಮೀವತ್ಕೇಭ್ಯಃ

ಒಂಬತ್ತನೇ ಅನುವಾಕ - ಕನ್ನಡದಲ್ಲಿ :
ಬರಡು ನೆಲದಲ್ಲಿರುವನಿಗು ಹಿರಿಯದಾರಿಯಲಿರುವವಗು ನಮನ | ನೊರಜುಗಲ್ಲ ನೆಲದೊಳಿಹಗು ಸುವಾಸ್ತುವಲ್ಲಿರುವವಗು ನಮನ  ಜಟಾಜೂಟಧಾರಿಗು ಕೇಶಧಾರಿಗು ನಮನ | ಕೊಟ್ಟಿಗೆಯಲಿರುವವಗು ಗೃಹದಲಿರುವವಗು ನಮನ |
ಮಂಚದಲಿ ಪವಡಿಸಿಹನಿಗು ಮನೆಯೊಳಗಿರುವಗು ನಮನ | ದರ್ಭಾಸನದಿ ಕುಳಿತವನಿಗು ಗುಹೆಯಲಿಹನಿಗು ನಮನ | ಸಂಸಾರಸಾಗರದಲಿರುವನಿಗು ನಿಷ್ಠ ಬ್ರಹ್ಮಚಾರಿಗು ನಮನ | ಕಿರಿಕಣಗಳಿರುವuವಗು ದೂಳಲಿರುವವಗು ನಮನ | ಒಣಕಾಷ್ಠ್ದಲಿರುವವನಿಗು ಹಸಿಸೌದೆಯಲ್ಲಿರುವವಗು ನಮನ | ಹುಲ್ಲಿರದ ನೆಲದಲ್ಲಿರುವವಗು ಬಳ್ಳಿಹುಲ್ಲುಗಳಲ್ಲಿರುವಗು ನಮನ | ಭೂಮಿಯಲ್ಲಿರುವವಗು ಜಲಚರ ರೂಪನಿಗು ನಮನ | ಎಲೆಗಳಲ್ಲಿರುವನಿಗು ತರಗೆಲೆಯೊಡ್ಡಿನಲಿರುವವಗು ನಮನ | ಹುಲಿಸಿಂಹರೂಪನಿಗು ಮೇಲೆರಗಿ ವಧಿಸುವಗು ನಮನ | ಎಲ್ಲೆಡೆ ಖೇದಗೊಳಿಸುವವಗು ಅತಿಖೇದಗೊಳಿಸುವನಿಗು ನಮನ | ದೇವತೆಗಳ ಹೃದಯರೂಪರಿಗೆ ವರವೀವರಿಗೆ ನಮನ | ಸುಖದುಃಖಗಳ ಕುಗ್ಗಿಸುವರಿಗೆ ನಮನ
ಧರ್ಮ ಅಧರ್ಮಗಳ ಸಂಗ್ರಹಿಸುವವರಿಗೆ ನಮನ | ಸಂಸ್ಕಾರಗಳ ಪೊರೆವವರಿಗೆ ನಮನ |
ಎಲ್ಲೆಡೆ ವಿಜೃಂಭಿಸುವ ರುದ್ರರಿಗೆ ನಮನ ||

ವಿವರಣೆ :
ಊಷರ (ಚೌಳು ಭೂಮಿ) ಪ್ರದೇಶದಲ್ಲಿ ಇರುವವನೂ ಬಹಳ ಜನರಿಂದ ಸೇವಿತವಾದ ಮಾರ್ಗದಲ್ಲಿ ಇರುವವನೂ ಆದ ರುದ್ರದೇವನಿಗೆ ನಮಸ್ಕಾರ.
ಕ್ಷುದ್ರಶಿಲಾಮಯವಾದ ಪ್ರದೇಶದಲ್ಲಿ ಇರುವವನೂ ನಿವಾಸಯೋಗ್ಯವಾದ ಪ್ರದೇಶದಲ್ಲಿ ಇರುವವನೂ ಆದ ರುದ್ರದೇವನಿಗೆ ನಮಸ್ಕಾರ.
ಜಟಾಜೂಟಧಾರಿಯೂ ಕುಂತಲ (ಕೇಶ) ಧಾರಿಯೂ ಆದ ರುದ್ರದೇವನಿಗೆ ನಮಸ್ಕಾರ.
ಕೊಟ್ಟಿಗೆಯಲ್ಲಿರುವವನೂ ಮನೆಯಲ್ಲಿರುವವನೂ ಆದ ರುದ್ರದೇವನಿಗೆ ನಮಸ್ಕಾರ.
ಮಂಚದ ಮೇಲೆ ಮಲಗಿರುವವನೂ ಪ್ರಾಸಾದದಲ್ಲಿರುವವನೂ ಆದ ರುದ್ರದೇವನಿಗೆ ನಮಸ್ಕಾರ.
ಮುಳ್ಳು ಬಳ್ಳಿ ಮುಂತಾದುದು ಇರುವ ದುಷ್ಟ್ರವೇಶವಾದ ಪ್ರದೇಶದಲ್ಲಿರುವವನೂ ಗಿರಿ ಗುಹಾದಿಪ್ರದೇಶದಲ್ಲಿರುವವನೂ ಆದ ರುದ್ರದೇವನಿಗೆ ನಮಸ್ಕಾರ.
ಅಗಾಧ ಜಲವುಳ್ಳ ಮಡುಗಳಲ್ಲಿರುವವನೂ ಮಂಜಿನಜಲದಲ್ಲಿರುವವನೂ ಆದ ರುದ್ರದೇವನಿಗೆ ನಮಸ್ಕಾರ.
ಸಣ್ಣ ಮರಳುಗಳಲ್ಲಿರುವವನೂ ಸ್ಪಷ್ಟವಾದ ಧೂಳುಗಳಲ್ಲಿರುವವನೂ ಆದ ರುದ್ರದೇವನಿಗೆ ನಮಸ್ಕಾರ.
ಒಣಗಿರುವ ಕಟ್ಟಿಗೆಗಳಲ್ಲಿರುವವನೂ ಹಸಿಯಾದ ಕಟ್ಟಿಗೆಗಳಲ್ಲಿರುವವನೂ ಆದ ರುದ್ರದೇವನಿಗೆ ನಮಸ್ಕಾರ.
ತೃಣಾದಿಗಳು ಒಣಗಿಹೋಗುವ ಕಠಿಣ ಪ್ರದೇಶದಲ್ಲಿ ಇರುವವನೂ ಬಲ್ಬಜವಾದ (ಕಂಡಿಹುಲ್ಲು) ತೃಣಾದಿಗಳು ಇರುವ ಪ್ರದೇಶದಲ್ಲಿರುವವನೂ ಆದ ರುದ್ರದೇವನಿಗೆ ನಮಸ್ಕಾರ.
ಭೂಮಿಯಲ್ಲಿರುವವನೂ ಉತ್ತಮವಾದ ಅಲೆಗಳಿರುವ ನದೀ ಮುಂತಾದ ಪ್ರದೇಶದಲ್ಲಿರುವವನೂ ಆದ ರುದ್ರದೇವನಿಗೆ ನಮಸ್ಕಾರ.
ಎಲೆಗಳಲ್ಲಿರುವವನೂ ಒಣಗಿದ ತರಗೆಲೆಗಳ ರಾಶಿಗಳಲ್ಲಿರುವವನೂ ಆದ ರುದ್ರದೇವನಿಗೆ ನಮಸ್ಕಾರ.
ಎತ್ತಿ ಹಿಡಿದ ಆಯುಧವುಳ್ಳವನೂ ಅಭಿಮುಖವಾಗಿ ವಧಿಸುವವನೂ ಆದ ರುದ್ರದೇವನಿಗೆ ನಮಸ್ಕಾರ.
ಸ್ವಲ್ಪ ಖೇದವನ್ನುಂಟುಮಾಡುವವನೂ ಅತ್ಯಂತ ಖೇದವನ್ನುಂಟುಮಾಡುವವನೂ ಆದ ರುದ್ರದೇವನಿಗೆ ನಮಸ್ಕಾರ.
ದೇವತೆಗಳ ಹೃದಯರೂಪರಾಗಿ ಭಕ್ತರಿಗೆ ಧನಸಂಪತ್ತನ್ನು ಉದಾರವಾಗಿ ನೀಡುವ ರುದ್ರಾವತಾರ ಮೂರ್ತಿಗಳಾದ ರುದ್ರದೇವನಿಗೆ ನಮಸ್ಕಾರ.
ಎಂದಿಗೂ ಕ್ಷಯವಿಲ್ಲದ ರುದ್ರದೇವನಿಗೆ ನಮಸ್ಕಾರ.
ಅಭಿಲಷಿತವಾದ ಅರ್ಥವನ್ನು ಉಂಟುಮಾಡಿಕೊಡುವ ರುದ್ರದೇವನಿಗೆ ನಮಸ್ಕಾರ.
ಸಂಪೂರ್ಣವಾಗಿ ಪಾಪವನ್ನು ಹತಗೊಳಿಸಿದ ರುದ್ರದೇವನಿಗೆ ನಮಸ್ಕಾರ.
ಎಲ್ಲ ಕಡೆಯೂ ವಿಜೃಂಭಿಸುವ ರುದ್ರದೇವರಿಗೆ ನಮಸ್ಕಾರ.
ಇವರೆಲ್ಲರೂ ದೇವತೆಗಳ ಹೃದಯರೂಪರಾಗಿ ಇರುವ ರುದ್ರಮೂರ್ತಿಗಳು.

ಹತ್ತನೇ ಅನುವಾಕ - ಸಂಸ್ಕೃತದಲ್ಲಿ :
ದ್ರಾಪೇ ಅಂಧಸಸ್ಪತೇ ದರಿದ್ರನ್ನೀಲಲೋಹಿತ
ಏಷಾಂ ಪುರುಷಾಣಾಮೇಷಾಂ ಪಶೂನಾಂ ಮಾಭೇರ್ಮಾರೋ ಮೋ ಏಷಾಂ ಕಿಂಚನಾಮಮತ್ |
ಯಾ ತೇ ರುದ್ರ ಶಿವಾ ತನೂಶ್ಶಿವಾ ವಿಶ್ವಾಹಭೇಷಜೀ
ಶಿವಾ ರುದ್ರಸ್ಯ ಭೇಷಜೀ ತ ಯೋ ನೋ ಮೃಡ ಜೀವಸೇ |
ಇಮಾಗ್ಂ ರುದ್ರಾಯ ತವಸೇ ಕಪರ್ದಿನೇ ಕ್ಷಯದ್ವೀರಾಯ ಪ್ರಭರಾಮಹೇ ಮತಿಮ್ |
ಯಥಾ ನಶ್ಶಮಸದ್ ದ್ವಿಪದೇ ಚತುಷ್ಪದೇ ವಿಶ್ವಂ ಪುಷ್ಪಂ ಗ್ರಾಮೇ ಆಸ್ಮಿನ್ನನಾತುರಮ್ ||
ಮೃಡಾ ನೋ ರುದ್ರೋತ ನೋ ಮಯಸ್ಕೃಧಿ ಕ್ಷಯದ್ವೀರಾಯ ನಮಸಾ ವಿಧೇಮ ತೇ |
ಯಚ್ಛಂ ಚ ಯೋಶ್ಚ ಮನುರಾಯಜೇ ಪಿತಾ ತದಶ್ಯಾಮ ತವ ರುದ್ರ ಪ್ರಣೀತೌ ||
ಮಾ ನೋ ಮಹಾನ್ತಮುತ ಮಾ ನೋ ಅರ್ಭಕಂ ಮಾ ನ ಉಕ್ಷನ್ತಮುತ ಮಾ ನ ಉಕ್ಷಿತಮ್ |
ಮಾ ನೋವಧೀಃ ಪಿತರಂ ಮೋತಮಾತರಂ ಪ್ರಿಯಾ ಮಾ ನಸ್ತನುವೋ ರುದ್ರರೀರಿಷಃ ||
ಮಾ ನಸ್ತೋಕೇ ತನಯೇ ಮಾ ನ ಆಯುಷಿ ಮಾ ನೋ ಗೋಷು ಮಾ ನೋ ಅಶ್ವೇಷು ರೀರಿಷಃ |
ವೀರಾನ್ಮಾ ನೋ ರುದ್ರಭಾಮಿತೋsವಧೀರ್ಹವಿಷ್ಮನ್ತೋ ನಮಸಾ ವಿಧೇಮ ತೇ ||
ಅರಾತ್ತೇ ಗೋಘ್ನ ಉತ ಪೂರುಷಘ್ನೇ ಕ್ಷಯದ್ವೀರಾಯ ಸುಮ್ನಮಸ್ಮೇ ತೇ ಅಸ್ತು |
ರಕ್ಷಾ ಚ ನೋ ಅಧಿ ಚ ದೇವ ಬ್ರೂಹ್ಯಧಾ ಚ ನಶ್ಶರ್ಮ ಯಚ್ಛ ದ್ವಿಬರ್ಹಾಃ ||
ಸ್ತುಹಿ ಶ್ರುತಂ ಗರ್ತಸದಂ ಯುವಾನಂ ಮೃಗಂ ನ ಭೀಮಮುಪಹತ್ನುಮುಗ್ರಮ್ |
ಮೃಡಾ ಜರಿತ್ರೇ ರುದ್ರಸ್ತವಾನೋsನ್ಯಂತೇ ಅಸ್ಮಿನ್ನಿವಪನ್ತು ಸೇನಾಃ ||
ಪರಿಣೋ ರುದ್ರಸ್ಯ ಹೇತಿರ್ವೃಣಕ್ತು ಪರಿ ತ್ವೇಷಸ್ಯ ದುರ್ಮತಿರಘಾಯೋಃ |
ಅವಸ್ಥಿರಾ ಮಘವದ್ಭ್ಯಸ್ತನುಷ್ವ ಮೀಡ್ಜಸ್ತೋಕಾಯ ತನಯಾಯ ಮೃಡಯ ||
ಮೀಢುಷ್ಟಮ ಶಿವತಮ ಶಿವೋ ನಸ್ಸುಮನಾ ಭವ |
ಪರಮೇ ವೃಕ್ಷ ಆಯುಧಂನಿಧಾಯ ಕೃತ್ತಿಂ ವಸಾನ ಆಚರ ಪಿನಾಕಂ ಬಿಭ್ರದಾಗಹಿ ||
ವಿಕಿರದ ವಿಲೋಹಿತ ನಮಸ್ತೇ ಅಸ್ತು ಭಗವಃ
ಯಾಸ್ತೇ ಸಹಸ್ರಗ್ಂಹೇತಯೋನ್ಯಮಸ್ಮನ್ನಿವಪನ್ತು ತಾಃ ||
ಸಹಸ್ರಾಣಿ ಸಹಸ್ರಧಾ ಬಾಹುವೋಸ್ತವ ಹೇತಯಃ
ತಾಸಾಮೀಶಾನೋ ಭಗವಃ ಪರಾಚೀನಾ ಮುಖಾಕೃಧಿ ||

ಹತ್ತನೇ ಅನುವಾಕ - ಕನ್ನಡದಲ್ಲಿ :
ಪಾಪಿಗಳಿಗೆ ದುರ್ಗತಿಯೀವನೆ ಅನ್ನದೊಡೆಯನೆ ದಾರಿದ್ರ್ಯನಾಶಕನೆ ನೀಲಲೋಹಿತನೆ | ಭಯಗೊಳಿಸದಿರೀ ಜನರನೀಪಶುಗಳನು ಪೀಡೆಗೊಳಗಾಗದಿರಲಿವರು ರೋಗಬಾರದಿರಲಿ |
ಓ ರುದ್ರನೆ ಎಂದೆಂದು ರೋಗಪರಿಹರಿಸಿ ಸುಖವಿತ್ತು ನಿನ್ನೊಳಗೈಕ್ಯವಾಗುವೌಷಧದೊಲರಿವ ನೀಡಿ ಜನನ ಮರಣ ದುಃಖ ನಿವಾರಿಸುವ ನಿನ್ನ ಮಂಗಳ ರೂಪವೆಮ್ಮ ಬದುಕಿಸಲಿ | ಈ ಜನಕು ಪಶುಗಣಕು ಸುಖವೆನಿಸುವಲೀ ಗ್ರಾಮದ ಸಕಲ ಪ್ರಾಣಿಗಣ ಕಳಕಳಿಸುತ ಉಪದ್ರವರಹಿತವಾಗಿರಲೆಂದು ತಪಸಿಗೆ ಜಟಾಧರನಿಗೆ ಕಾಮಾದಿಗಳ ಕ್ಷಯಿಸುವವಗೆ ಸ್ತುತಿರೂಪದೀ ಮಾನಸ ಪೂಜೆಯನರ್ಪಿಸುವೆವು | ಹೇ ರುದ್ರನೆ! ಎಮ್ಮ ಪಿರ ಮನುವು ನಿನ್ನ ಸೇವಿಸಿ ನಿನ್ನನುಗ್ರಹದಿಂದ ಪಡೆದ ಸುಖಸಾಧನಗಳೆಲ್ಲವನು ನಿನ್ನ ಸ್ನೇಹದಿಂದಲೆ ನಾವು ಪಡೆಯುವೆವು ಹೇ ಮೃಡನೆ ! ಓ ರುಸ್ರನೆ ಹಿಂಸಿಸದಿರೆಮ್ಮ ವೃದ್ಧರನೆಮ್ಮ ಬಾಲರನು, ಹಿಂಸಿಸದಿರೆಮ್ಮ ವೀರ್ಯವಂತ ತರುಣರನು, ಗರ್ಭಸ್ಥ ಶಿಶುಗಳನು ಕೊಲ್ಲದಿರೆಮ್ಮ ತಂದೆ ತಾಯಿಯರನ್ನು, ಹಿಂಸೆಗೊಳಿಸದಿರೆಮ್ಮ ಪ್ರಿಯ ದೇಹಗಳನು | ಹಿಂಸಿಸದಿರೆಮ್ಮ ಸಂತಾನವನೆಮ್ಮ ತನಯರನು, ಎಮ್ಮ ಆಯುಷ್ಯಗಳ ಭಂಗಗೊಳಿಸದಿರು, ಹಿಂಸಿಸದಿರೆಮ್ಮ ಗೋವ್ಗಳನು, ಅಶ್ವಾದಿಗಳನು ಕೊಲ್ಲದಿರೆಮ್ಮ ವೀರ ಭೃತ್ಯಜನರನು ಹವಿಯಿತ್ತು ನಮಿಸಿ ಸೇವಿಪೆವು ನಿನ್ನ | ಗೋವ್ಗಳನು, ಪುರುಷರನು ವೀರಭೃತ್ಯರನು ಕೊಲುವ ನಿನ್ನ ರುದ್ರರೂಪ ದೂರವಿರಲಿ, ನಿನ್ನ ಸುಖಕರರೂಪ ಸನಿಹದಲ್ಲಿರಲಿ | ನಿರತಿಶಯ ಪರಮಾನಂದವ ನೀಡು ದೇವ ನಿನ್ನನುಗ್ರಹದಿಂದೊದಗುವರಿವಿನಿಂದ ಕೃತಕೃತ್ಯರಾಗುವೆವು ಮಂಗಳವ ಹರಸು | ಓ ನನ್ನ ವಾಣಿ! ಹೃದಯಗುಹೆಯಲಿಹ ಪ್ರಸಿದ್ದ ಶಿವನನು ಸ್ತುತಿಸು ನಿತ್ಯ ಯೌವನಿಯನು ಎಲ್ಲವನು ಸಂಹರಿಪ ಸಿಂಹದೊಲು ಭೀಕರ ರುದ್ರನನು | ಓ ರುದ್ರನೆ! ಎಮ್ಮ ಸ್ತೋತ್ರವ ಕೇಳಿ ದಿನದಿನವು ಕುಗ್ಗುತಿಹ ನಮ್ಮ ದೇಹಕೆ ಸೌಖ್ಯತರಿಸು, ಎಮ್ಮ ವೈರಿಗಳ ನಾಶಪಡಿಸಲಿ ನಿನ್ನ ಸೇನೆಗಳು | ರುದ್ರನಾಯುಧ ಅವಿದ್ಯೆಯೆಮ್ಮನೆಲ್ಲೆಡೆಯಿಂದ ವರ್ಜಿಸಲಿ, ಅಜ್ಞಾನದಿಂದೊದಗುವ ದುರ್ಮತಿ, ಪಾಪ ತೊಲಗಲಿ | ಅರಿವಿನಾಶಕೆ ಸ್ಥಿರಬುದ್ದಿಯನು ನೀಡೆಮಗೆ, ಇಷ್ಟಾರ್ಥ ಸಿದ್ಧಿದಾಯಕನೆ ! ಸುಖವ ನೀಡೆಮ್ಮ ಪುತ್ರ ಪೌತ್ರರಿಗೆ | ಸಕಲಾಭೀಷ್ಟದಾಯಕನೆ ಅತಿಶುಭಕರನೆ ಶಾಂತಸ್ವರೂಪನೆ ಸುಮನಸನಾಗು ಎಮ್ಮೆಡೆಗೆ | ಎತ್ತರದ ವೃಕ್ಷದಲಿ ನಿನ್ನಾಯುಧಗಳನಿರಿಸಿ ಹುಲಿದೊಗಲುಟ್ಟು ಪಿನಾಕವ ಪುಡಿದು ಮೈದೋರು | ಧನಸಂಪದದ ಮಳೆಗರೆವಾದಿತ್ಯರೂಪನೆ ನಮಿಪೆ ನಿನಗೆ ಭಗವಂತನೆ | ನಿನ್ನ ಸಹಸ್ರಸಂಖ್ಯೆಯ ಶಸ್ತ್ರಗಳೆಮ್ಮರಿಗಳನು ಕೊಲಲಿ | ನಿನ್ನ ಬಾಹುಗಳಲ್ಲಿ ಸಾವಿರ ಸಾವಿರ ಆಯುಧಗಳು | ಅದರೊಡೆಯ ನೀನವುಗಳ ತುದಿಗಳನೆಮ್ಮಿಂದ ಬೇರೆಡೆಗೆ ತಿರುಗಿಸು ||

ವಿವರಣೆ :
ಪಾಪಿಗಳಿಗೆ ನರಕರೂಪವಾದ ನಿಂದನೀಯ ಗತಿಯನ್ನು ಉಂಟುಮಾಡುವವನೇ ! ಅನ್ನಪಾಲಕನೇ ! ಅತ್ಯಂತ ವಿರಕ್ತನಾದವನೇ ! ಕಂಠದಲ್ಲಿ ನೀಲವರ್ಣದವನೂ ಇತರ ಭಾಗದಲ್ಲಿ ರಕ್ತವರ್ಣದವನೂ ಆದವನೇ ! ನಮ್ಮವರಾದ ಪುರುಷರನ್ನೂ ನಮ್ಮವವಾಗಿರುವ ಪಶುಗಳನ್ನೂ ಭಯಗೊಳಿಸಬೇಡ. ಇವರಿಗೆ ಪೀಡೆಯುಂಟಾಗುವುದು ಬೇಡ. ಇವರಿಗೆ ಯಾವ ರೋಗವೂ ಉಂಟಾಗದಿರಲಿ. (ರುದ್ರದೇವನನ್ನು ಈ ರೀತಿಯಾಗಿ ಪ್ರಾರ್ಥಿಸಲಾಗಿದೆ).
ಓ ರುದ್ರನೇ ! ಸಕಲ ದಿನಗಳಲ್ಲೂ ರೋಗನಿವಾರಕನಾಗಿ ಸುಖಪ್ರದವಾದ, ರುದ್ರನಾದ ನಿನ್ನ ತಾದಾತ್ಮ್ಯವನ್ನು ಹೊಂದಲು ಔಷಧರೂಪವಾಗಿದ್ದು ಜ್ಞಾನವನ್ನು ನೀಡಿ ಜನನ ಮರಣಗಳ ದುಃಖವನ್ನು ನಿವಾರಿಸುವ ಮಂಗಳಕರವಾದ ಯಾವ ನಿನ್ನ ಶರೀರವುಂಟೋ (ಸ್ವರೂಪವುಂಟೋ) ಅದರಿಂದ ನಮ್ಮನ್ನು ಉಜ್ಜೀವಿತರನ್ನಾಗಿ ಮಾಡಲು ಸುಖಪಡಿಸು.
ನಮ್ಮ ಪುತ್ರ ಪೌತ್ರಾದಿರೂಪರಾದ (ಎರಡು ಕಾಲಿನ) ಮನುಷ್ಯರಿಂದಲೂ ಹಸು, ಎಮ್ಮೆಮುಂತಾದ (ನಾಲ್ಕು ಕಾಲಿನ ) ಪಶು ಸಮೂಹಕ್ಕೂ ಸುಖವುಂಟಾಗುವಂತೆಯೂ ಈ ಗ್ರಾಮದಲ್ಲಿ ಸಮಸ್ತ ಪ್ರಾಣಿ ಸಮೂಹವು ಪುಷ್ಟವಾಗಿಯೂ ಉಪದ್ರವರಹಿತವಾಗಿಯೂ ಆಗುವಂತೆಯೂ ನಾವು ತಪಸ್ವಿಯೂ (ಬಲಶಾಲಿಯೂ) ಜಟಾಜೂಟಧಾರಿಯೂ ಕ್ಷೀಣಿಸುವ ಪ್ರತಿಪಕ್ಷ ಪುರುಷ -ರುಳ್ಳವನೂ ಆದ ರುದ್ರದೇವನಿಗೆ ಈ ಪೂಜಾಧ್ಯಾನಾದಿ ರೂಪವಾದ ಮಾನಸಿಕ ಪೂಜೆಯನ್ನು ಅರ್ಪಿಸುತ್ತೇವೆ. (ಹೀಗೆ ನಿರಂತರವಾಗಿ ರುದ್ರದೇವನನ್ನು ಪ್ರಾರ್ಥಿಸಬೇಕು).
ಓ ರುದ್ರನೇ ! ನಮ್ಮನ್ನು (ಈ ಲೋಕದಲ್ಲಿ) ಸುಖಪಡಿಸು. ಮತ್ತು ನಮಗೆ (ಪರಲೋಕದಲ್ಲಿಯೂ ಕೂಡ) ಸುಖವನ್ನುಂಟುಮಾಡು. ನಮ್ಮ ಪಾಪವನ್ನು ನಾಶಮಾಡಿದವನಾದ ನಿನಗೆ ನಮಸ್ಕಾರದಿಂದ ಪರಿಚರ್ಯೆಯನ್ನು ಮಾಡುತ್ತೇವೆ. ಓ ರುದ್ರನೇ ! (ಪ್ರಜೆಗಳ) ಪಾಲಕನಾದ ಮನು ಪ್ರಜಾಪತಿಯು ಯಾವ ಬಂದೊದಗಿದ ದುಃಖಹೇತುಗಳ ಉಪಶಮನವನ್ನೂ ಇನ್ನೂ ಉಂಟಾಗದಿರುವ ದುಃಖಹೇತುಗಳ ವಿಯೋಗವನ್ನೂ ನಿನ್ನ ಅನುಗ್ರಹದಿಂದ ಸಂಪಾದಿಸಿದೆನೋ ಅದೆಲ್ಲವನ್ನೂ ನಾನು ನಿನ್ನ ಸ್ನೇಹಾತಿಶಯವು ಇರಲಾಗಿ ಪಡೆಯುವಂತಾಗಬೇಕು.
ಓ ರುದ್ರನೇ ! ನಮ್ಮವರಾದ ವೃದ್ಧಜನರನ್ನು ಹಿಂಸಿಸಬೇಡ. ಮತ್ತು ನಮ್ಮವರೇ ಆದ ಬಾಲಕ ವರ್ಗವನ್ನು ಹಿಂಸಿಸಬೇಡ. ಹಾಗೂ ಸೇಚನಸಮರ್ಥವಾದ ನಮ್ಮ ಪುರುಷವರ್ಗವನ್ನು (ತರುಣರನ್ನು) ಹಿಂಸಿಸಬೇಡ. ಗರ್ಭಸ್ಥವಾದ ನಮ್ಮ ಶಿಶು ಜನವನ್ನು ಹಿಂಸಿಸಬೇಡ. ನಮ್ಮ ತಂದೆ ತಾಯಿಯರನ್ನು ವಧಿಸಬೇಡ. ನಮ್ಮ ಪ್ರಿಯವಾದ ಶರೀರಗಳನ್ನು ಹಿಂಸಿಸಬೇಡ.
ಓ ರುದ್ರನೇ ! ನಮ್ಮ ಅಪತ್ಯ ರೂಪವಾದ ಸಂತಾನದ ವಿಷಯದಲ್ಲಿ (ರೋಗಾದಿಗಳಿಂದ)
ಓ ರುದ್ರನೇ ! ನಮ್ಮ ಅಪತ್ಯ ರೂಪವಾದ ಸಂತಾನದ ವಿಷಯದಲ್ಲಿ (ರೋಗಾದಿಗಳಿಂದ) ಮಾಡಬೇಡ. ನಮ್ಮ ಪುತ್ರ ಸಂತಾನದ ವಿಷಯದಲ್ಲಿ ಹಿಂಸೆಯನ್ನು ಮಾಡಬೇಡ. ನಮ್ಮ ಆಯುಸ್ಸಿನ ವಿಷಯದಲ್ಲಿ ಹಿಂಸೆಯನ್ನು ಮಾಡಬೇಡ. ನಮ್ಮ ಗೋ ಪಶುಗಳ ವಿಷಯದಲ್ಲಿ ಹಿಂಸೆಮಾಡಬೇಡ. ನಮ್ಮ ಕುದುರೆ ಮುಂತಾದ ಪಶುಗಳ ವಿಷಯದಲ್ಲಿ ಹಿಂಸೆಮಾಡಬೇಡ. ಕ್ರುದ್ಧನಾಗಿ ನೀನು ನಮ್ಮ ವೀರರಾದ ಭೃತ್ಯಜನರನ್ನು ಕೊಲ್ಲಬೇಡ. ಹವಿಸ್ಸನ್ನುಳ್ಳವರಾಗಿ ನಾವು ನಿನಗೆ ನಮಸ್ಕಾರದಿಂದ ಪರಿಚರ್ಯೆಯನ್ನು ಮಾಡುತ್ತೇವೆ.
ಗೋವುಗಳನ್ನು ಕೊಲ್ಲುವ, ಪುತ್ರಪೌತ್ರಾದಿ ಪುರುಷರನ್ನು ಕೊಲ್ಲುವ ವೀರರಾದ ಭೃತ್ಯರನ್ನು ನಾಶಮಾಡುವ ನಿನ್ನ ಉಗ್ರ ರೂಪವು ದೂರದಲ್ಲಿರಲಿ. ನಿನ್ನ ಸುಖಕರವಾದ ರೂಪವು ನಮ್ಮ ವಿಷಯದಲ್ಲಿರಲಿ. ನಮ್ಮನ್ನು ಸರ್ವಪ್ರಕಾರದಿಂದಲೂ ರಕ್ಷಿಸು. ಓ ದೇವನೇ ! ಇತರರಿಗಿಂತಲೂ ನಮ್ಮನ್ನು ಅಧಿಕರೆಂದು ದೇವತೆಗಳಲ್ಲಿ ಹೇಳಿ ತಿಳಿಸು. ಐಹಿಕ ಹಾಗೂ ಆಮುಷ್ಮಿಕವಾದ ಸುಖವನ್ನು ನಮಗೆ ನೀಡು.
ಓ ನನ್ನ ವಾಣಿಯೇ ! ಪ್ರಸಿದ್ಧನೂ ಗರ್ತಸದೃಶವಾದ ಹೃದಯ ಪುಂಡರೀಕದಲ್ಲಿ ಸದಾ ಇರುವವನೂ ನಿತ್ಯ ತರುಣನೂ ಪ್ರಳಯಕಾಲದಲ್ಲಿ ಎಲ್ಲವನ್ನೂ ಉಪಸಂಹಾರಮಾಡಲು ಭಯಂಕರವಾದ ಸಿಂಹದಂತೆ ಉಗ್ರನಾದವನೂ ಆದ ರುದ್ರನನ್ನು ಸ್ತೋತ್ರಮಾಡು. ಓ ರುದ್ರನೇ ! ನಮ್ಮ ವಾಣಿಯಿಂದ ಸ್ತುತಿಸಲ್ಪಟ್ಟವನಾಗಿ ನೀನು ದಿನೇ ದಿನೇ ಕ್ಷೀಣವಾಗುವ ನಮ್ಮ ಶರೀರದಲ್ಲಿ ಸುಖವನ್ನುಂಟುಮಾಡು. ನಿನ್ನವರಾದ ಸೇನೆಗಳು ನಮಗಿಂತ ಭಿನ್ನನಾದ ನಮ್ಮ ವೈರಿಯನ್ನು ನಾಶಪಡಿಸಲಿ.
ರುದ್ರನ ಆಯುಧವು ನಮ್ಮನ್ನು ಎಲ್ಲ ಪ್ರಕಾರಗಳಿಂದಲೂ ಬಿಟ್ಟುಬಿಡಲಿ. ಎಂದಿಗೂ ನಮ್ಮನ್ನು ವಧಿಸುವುದು ಬೇಡ. ಕ್ರೋಧದಿಂದ ಉಜ್ವಲನಾದ ಮತ್ತು ನಮ್ಮ ಮೇಲೆ ಪ್ರಹಾರರೂಪವಾದ ಅನಿಷ್ಟಕಾರ್ಯವನ್ನು ಎಸಗಲು ಇಚ್ಛಿಸುವವನಾದ ರುದ್ರನ ಉಗ್ರವಾದ ಬುದ್ಧಿಯು ನಮ್ಮನ್ನು ಬಿಟ್ಟು ಬಿಡಲಿ. ವಿರೋಧಿಗಳ ನಾಶಕ್ಕಾಗಿ ರುದ್ರನ ಯಾವ ಸ್ಥಿರವಾದ ಉಗ್ರಬುದ್ಧಿಯುಂಟೋ ಅದನ್ನು ಹವಿಸ್ಸಿನ ರೂಪವಾದ ಅನ್ನವನ್ನು ಹೊಂದಿರುವ ಯಜಮಾನರ ದೆಸೆಯಿಂದ ಕೆಳಗಿಳಿಸು. ನಿನ್ನ ಸ್ಥಿರವಾದ ಧನಸ್ಸುಗಳನ್ನು ಪೂಜಕರ ದೆಸೆಯಿಂದ ಕೆಳಗಿಳಿಸು. ಇಷ್ಟಾರ್ಥಗಳನ್ನು ವರ್ಷಿಸುವ ರುದ್ರನೇ ! ನಮ್ಮ ಮಕ್ಕಳಿಗೂ ಅವರ ಸಂತಾನಕ್ಕೂ ಸುಖವನ್ನುಂಟುಮಾಡು.
ಅತಿಶಯವಾಗಿ ಇಷ್ಟಾರ್ಥಗಳನ್ನು ವರ್ಷಿಸುವವನೇ ! ಅತ್ಯಂತ ಶಾಂತ ಸ್ವರೂಪನೇ ! ನಮ್ಮ ವಿಷಯದಲ್ಲಿ ಶಾಂತನೂ ಸೌಮನಸ್ಯವುಳ್ಳವನೂ ಆಗಿರು. ನಿನ್ನ ತ್ರಿಶೂಲ ಮುಂತಾದ ಆಯುಧವನ್ನು ನಮ್ಮ ದೃಷ್ಟಿಗೆ ಬೀಳದ ಅತ್ಯಂತ ಉನ್ನತವಾದ ವೃಕ್ಷದ ಮೇಲೆ ಇಟ್ಟು, ವ್ಯಾಘ್ರಚರ್ಮವನ್ನು ಮಾತ್ರ ಧರಿಸಿ ನಮಗೆ ಅಭಿಮುಖವಾಗಿ ಬಾ. ಅಲಂಕಾರಕ್ಕಾಗಿ ಪಿನಾಕವೆಂಬ ಧನುಸ್ಸನ್ನು ಕೈಯಲ್ಲಿ ಧರಿಸಿ ಬಾ.
ಭಕ್ತರಿಗೆ ಬಹಳವಾಗಿ ಧನಸಂಪತ್ತನ್ನು ಕೊಡುವವನೇ ! ಲೌಹಿತ್ಯರಹಿತನಾಗಿ ಶುಭ್ರವರ್ಣದವನೇ ! ರುದ್ರನೇ ! ನಿನಗೆ ನಮಸ್ಕಾರ. ನಿನ್ನ ಸಾವಿರ ಸಂಖ್ಯೆಯ ಯಾವ ಆಯುಧಗಳುಂಟೋ ಅವುಗಳೆಲ್ಲವೂ ನಮ್ಮ ವಿರೋಧಿಯಾದ ಶತ್ರುವನ್ನು ಕುರಿತು ಹೋಗಿ ಬೀಳಲಿ. ಆ ಆಯುಧಗಳು ನಮ್ಮ ಶತ್ರುವನ್ನು ಕೊಲ್ಲಲಿ.
ನಿನ್ನ ಬಾಹುಗಳಲ್ಲಿ ಕೊಲ್ಲುವ ಆಯುಧಗಳು ಸಾವಿರ ಪ್ರಕಾರಗಳಾಗಿ ಸಾವಿರ ಸಂಖ್ಯೆಯುಳ್ಳವುಗಳಾಗಿ ಇವೆ  ಓ ಭಗವಂತನೇ ! ನೀನು ಸಮರ್ಥನಾದವನಾಗಿ ಆ ಆಯುಧಗಳ ಅಗ್ರರೂಪವಾದ ಶಲ್ಯಗಳನ್ನು ನಮ್ಮುಂದ ವಿಮುಖಗೊಳಿಸು.

ಏಕದಶಾನುವಾಕ - ಸಂಸ್ಕೃತದಲ್ಲಿ :
ಸಹಸ್ರಾಣಿ ಸಹಸ್ರಶೋ ಯೇ ರುದ್ರಾ ಅಧಿ ಭೂಮ್ಯಾಮ್|
ತೇಷಾಗ್ಂ ಸಹಸ್ರಯೋಜನೇsವ ಧನ್ವಾನಿ ತನ್ಮಸಿ.
ಅಸ್ಮಿನ್ಮಹತ್ಯರ್ಣವೇsನ್ತರಿಕ್ಷೇ ಭವಾ ಅಧಿ
ನೀಲಗ್ರೀವಾಃ ಶಿತಿಕಂಠಾಃ ಶರ್ವಾ ಅಧಃ, ಕ್ಷಮಾಚರಾಃ
ನೀಲಗ್ರೀವಾಃ ಶಿತಿಕಂಠಾ ದಿವಗ್ಂ ರುದ್ರಾ ಉಪಶ್ರಿತಾಃ
ಯೇ ವೃಕ್ಷೇಷು ಸಸ್ಪಿಂಜರಾ ನೀಲಗ್ರೀವಾ ವಿಲೋಹಿತಾಃ
ಯೇ ಭೂತಾನಾಮಧಿಪತಯೋ ವಿಶಿಖಾಸಃ ಕಪರ್ದಿನಃ
ಯೇ ಅನ್ನೇಷು ವಿವಿಧ್ಯಂತಿ ಪಾತ್ರೇಷು ಪಿಬತೋ ಜನಾನ್
ಯೇ ಪಥಾಂ ಪಥಿರಕ್ಷಯ ಐಲಬೃದಾಯವ್ಯುಧಃ
ಯೇ ತೀರ್ಥಾನಿ ಪ್ರಚರಂತಿ ಸೃಕಾವಂತೋ ನಿಷಂಗಿಣಃ
ಯ ಏತಾವಂತಶ್ಚ ಭೂಯಾಗ್ಂಸಶ್ಚ ದಿಶೋ ರುದ್ರಾ ವಿತಸ್ಥಿರೇ |
ತೇಷಾಗ್ಂ ಸಹಸ್ರಯೋಜನೇsವಧನ್ವಾನಿ ತನ್ಮಸಿ ||
ನಮೋ ರುದ್ರೇಭ್ಯೋ ಯೇ ಪೃಥಿವ್ಯಾಂ ಯೇsನ್ತರಿಕ್ಷೇ ಯೇ ದಿವಿ ಯೇಷಾಮನ್ನಂ ವಾತೋ ವರ್ಷಮಿಷವಸ್ತೇಭ್ಯೋ ದಶ ಪ್ರಾಚೀರ್ದಶ ದಕ್ಷಿಣಾ ದಶ ಪ್ರತೀಚೀರ್ದಶೋದೀಚೀರ್ದಶೋರ್ಧ್ವಾಸ್ತೇಭ್ಯೋ ನಮಸ್ತೇ ನೋ ಮೃಡಯಂತು ತೇ ಯಂ ದ್ವಿಷ್ಮೋ ಯಶ್ಚ ನೋ ದ್ವೇಷ್ಟಿ ತಂ ವೋ ಜಂಭೇ ದಧಾಮಿ.
ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಮ್ |
ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮಿಕ್ಷೀಯ ಮಾsಮೃತಾತ್ ||  (ತೈತ್ತರೀಯ ಸಂಹಿತ 1-8-6-10)
ಯೋ ರುದ್ರೋ ಅಗ್ನೌಯೋ ಅಪ್ಸುಯ ಓಷಧೀಷು ಯೋ ರುದ್ರೋ ವಿಶ್ವಾ ಭುವನಾ ವಿವೇಶ ತಸ್ಮೈ ರುದ್ರಾಯ ನಮೋ ಅಸ್ತು | (ತೈತ್ತರೀಯ ಸಂಹಿತ 5-5-9-9).
ತಮುಷ್ಟುಹಿ ಯಸ್ವಿಷುಸ್ಸುಧನ್ವಾ ಯೋ ವಿಶ್ವಸ್ಯ ಕ್ಷಯತಿ ಭೇಷಜಸ್ಯ |
ಯಕ್ಷ್ವಾಮಹೇ ಸೌಮನಸಾಯ ರುದ್ರಂ ನಮೋಭಿರ್ದೇವ ಮಸುರಂ ದುವಸ್ಯ | ( ಋಗ್ವೇದ ಸಂಹಿತ 5-42-11).
ಅಯಂ ಮೇ ಹಸ್ತೋ ಭಗವಾನಯಂ ಮೇ ಭಗಚತ್ತರಃ |
ಅಯಂ ಮೇ ವಿಶ್ವಭೇಷಜೋಯಂ ಶಿವಾಭಿಮರ್ಶನಃ | (ಋಗ್ವೇದ ಸಂಹಿತ 10-60-12).
ಯೇ ತೇ ಸಹಸ್ರಮಯತಂ ಪಾಶಾ ಮೃತ್ಯೋ ಮರ್ತ್ಯಾಯ ಹಂತವೇ |
ತಾನ್, ಯಜ್ಞಸ್ಯ ಮಾಯಯಾ ಸರ್ವಾನವ ಯಜಾಮಹೇ |
ಮೃತ್ಯುವೇ ಸ್ವಾಹಾ ಮೃತ್ಯುವೇ ಸ್ವಾಹಾ |(ತೈತ್ತರೀಯ ಆರಣ್ಯಕ ಪರಿಶಿಷ್ಟ - 10-57,58).
ಓಂ ನಮೋ ಭಗವತೇ ರುದ್ರಾಯ ವಿಷ್ಣವೇ ಮೃತ್ಯುರ್ಮೇಪಾಹಿ | (ತೈತ್ತಿರೀಯ ಆರಣ್ಯಕ 10-75).
ಪ್ರಾಣಾನಾಂ ಗ್ರಂಥಿರಸಿ ರುದ್ರೋ ಮಾ ವಿಶಾಂತಕಃ |
ತೇನಾನ್ನೇನಾಪ್ಯಾಸ್ವ (ತೈತ್ತಿರೀಯ ಆರಣ್ಯಕ - 10-74)
ಸದಾಶಿವೋಮ್ || ಓಂ ಶಾಂತಿಃ ಶಾಂತಿಃ ಶಾಂತಿಃ ||

ಏಕದಶಾನುವಾಕ - ಕನ್ನಡದಲ್ಲಿ :
ಸಹಸ್ರ ಸಹಸ್ರ ಸಂಖ್ಯೆಯಲಿ ಯಾವ ರುದ್ರರು ಬುವಿಯಲಿಹರೊ |
ಅವರ ಬಿಲ್ಗಳ ಹೆದೆಯಿಳಿಸಿ ಸಹಸ್ರ ಯೋಜನ ದೂರದಲ್ಲಿರಿಸುವೆವು ||
ಈ ಮಹಾ ಶರಧಿಯಲಿ ಅಂತರಿಕ್ಷದಲಿ ಭವಸಾಗರದಲಿಹರು |
ಯಾರು ನೀಲಕಂಠರೊ ಶ್ವೇತಕಂಠರೊ ಪಾತಾಳದಲಿ ಸಂಚರಿಪ ಶಿವರೂಪಿಗಳೊ |
ಯಾರು ನೀಲಕಂಠರೊ ಪ್ರಸಿದ್ಧ ಶಿವ ರೂಪಿನವರೊ ಸಗ್ಗವನಾಶ್ರಯಿಸಿದವರೋ |
ಯಾರು ವೃಕ್ಷಗಳಲಿಹರೊ ಎಳೆಹುಲ್ಲ ಬಣ್ಣದವರೊ ನೀಲಕಂಠರೊ ಕಡುಗೆಂಪಿನವರೊ |
ಯಾರೀ ಭೂತಗಳಿಗೊಡೆಯರೊ ಶಿಖೆಯಿರದವರೊ ಜಟೆಯನುಳ್ಳವರೊ |
ಯಾರು ಉಣವನ್ನದಲಿ ಕುಡಿವ ಪಾನೀಯದಲಿದ್ದು ಕೊಲ್ಲುವರೋ |
ಯಾರು ಲೌಕಿಕ ವೈದಿಕ ಮಾರ್ಗಗಳ ರಕ್ಷಿಪರೊ ಅನ್ನವನಿತ್ತು ಪೋಷಣೆಗೈವರೊ ಅನಿಷ್ಟ ನಿವಾರಿಪರೋ |
ಯಾರು ಸಂಸಾರಛೇದಕ ಚೂರಿಗಳ ಪಿಡಿದು ಖಡ್ಗಗಳ ಧರಿಸಿ ತೀರ್ಥಕ್ಷೇತ್ರಗಳಲಿ ಸಂಚರಿಸುವರೋ |
ಇವರೆಲ್ಲರ, ಇವರಿಗಿಂ ಮಿಗಿಲಾದ ಯಾವ ರುದ್ರರೆಲ್ಲ ದಿಕ್ಕುಗಳಲು ನೆಲೆಸಿಹರೋ ಅವರ ಬಿಲ್ಗಳ ಹೆದೆಯಿಳಿಸಿ ಸಹಸ್ರಯೋಜನ ದೂರದಲಿರಿಸುವೆವು |
ನಮೋರುದ್ರರಿಗೆ ಬುವಿಯಲಿಹರಿಗೆ ಅಂತರಿಕ್ಷ ಸಗ್ಗದಲಿರುವವರಿಗೆ |
ಅನ್ನವೆ ಬಾಣವಾಗಿಹ ಮಳೆಯು ಬಾಣವಾಗಿಹ ಈ ಎಲ್ಲ ರುದ್ರರಿಗೆ, ಮೂಡು ತೆಂಕು ಪಡು ಬಡಗು ಮೇಗಡೆಗೆ ನಮಿಸುವೆವು, ರುದ್ರರೆಮಗೆ ಸುಖವೀಯಲಿ |
ನಾವು ದ್ವೇಷಿಸುವವರನು ನಮ್ಮನ್ನು ದ್ವೇಷಿಪರನು ನಿನ್ನ ತೆರೆದ ಬಾಯ್ಗೊಪ್ಪಿಸುವೆವು ||
ಫಾಲನೇತ್ರನೆ ಪರಿಮಳವ ಪಸರಿಪನೆ ಪುಷ್ಟಿಯೀವನೆ ನಿನ್ನ ಪೂಜಿಪೆವು |
ಫಲಿತ ಸೌತೆಯು ತೊಟ್ಟಿಂದ ಕಳಚುವೊಲು ಮೃತ್ಯುವಿಂದೆಮ್ಮ ಮುಕ್ತಗೊಳಿಸು|| (ತೈತ್ತರೀಯ ಸಂಹಿತೆ)
ಯಾವ ರುದ್ರರಗ್ನಿಯಲಿ ಯಾರು ಜಲದಲ್ಲಾರು ವನಸ್ಪತಿಗಳಲಿಹರೋ, ಯಾವ ರುದ್ರರು ಭುವನ ವಿಶ್ವಗಳನೆಲ್ಲ ವ್ಯಾಪಿಸಿಹರೋ, ಆ ರುದ್ರರಿಗೆ ನಮನವಿರಲಿ || (ತೈತ್ತರೀಯ ಸಂಹಿತೆ)
ಸುಧನುಶರವುಳ್ಳವನ ಸಕಲೌಷಧಗಳೊಡೆಯನ ದುಃಖ ತೊಡೆವ ರುದ್ರನನು ಪೂಜಿಸು |
ಚಿತ್ತಶಾಂತಿಗೆ ಬಲಶಾಲಿ ಜ್ಯೋತಿರೂಪಿ ರುದ್ರನನು ಸೇವಿಸು || (ಋಗ್ವೇದ ಸಂಹಿತೆ)
ಈ ನನ್ನ ಹಸ್ತ ಭಗವಂತ ರುದ್ರನದು ಇದತಿಶಯ ರುದ್ರ ರೂಪಿನದು |
ಈ ನನ್ನ ಹಸ್ತ ಸಮಸ್ತ ಔಷಧ ರೂಪದ್ದು ಇದು ಶಿವಸ್ಪರ್ಶವುಳ್ಳದ್ದು || (ಋಗ್ವೇದ ಸಂಹಿತೆ)
ಓ ಮೃತ್ಯುವೇ! ಮರ್ತ್ಯಜೀವಿಗಳನು ಕೊಲುವ ನಿನ್ನ ಸಹಸ್ರ ಪಾಶಗಳಾವುವಿಹವೋ ಅವೆಲ್ಲವನು ಶಿವಪೂಜೆಯಿಂದ ಕಡಿದೆಸೆವೆವು |
ಈ ಹವಿಯು ಮೃತ್ಯುವಿಗೆ | ಈ ಹವಿಯು ಮೃತ್ಯುವಿಗೆ ||
(ತೈತ್ತಿರೀಯ ಅರಣ್ಯಕ)
ವಿಶ್ವವನು ವ್ಯಾಪಿಸುಹ ಭಗವಂತ ರುದ್ರದೇವಗೆ ನಮನ, ಓ ರುದ್ರದೇವನೆ ಮೃತ್ಯುವಿಂದೆನ್ನ ರಕ್ಷಿಸು || (ತೈತ್ತಿರೀಯ ಅರಣ್ಯಕ)
ಪ್ರಾಣಶಕ್ತಿಯ ಗ್ರಂಥಿ ನೀನು, ರುದ್ರನೆ! ದುಃಖನಾಶಕನಾಗಿ ನನ್ನೊಳಗೆ ಬಾ | ನಾನುಣುವನ್ನದಿಂದೆನ್ನ ಪೋಷಿಸು ನೀ ||
(ತೈತ್ತರೀಯ ಅರಣ್ಯಕ)
ಆ ಸದಾಶಿವನೆ ನಾನು | ಓಂ ಶಾಂತಿ ಶಾಂತಿ ಶಾಂತಿ
ಶ್ರೀ ರುದ್ರದ ನಮಕಾಧ್ಯಾಯ ಸಂಪೂರ್ಣವಾಯಿತು

ವಿವರಣೆ :
ಭೂಮಿಯ ಮೇಲೆ ಯಾವ ರುದ್ರರು ಸಾವಿರ ಪ್ರಕಾರಗಳಾಗಿ ಸಾವಿರ ಸಂಖ್ಯೆಯುಳ್ಳವುಗಳಾಗಿ ಇರುವರೋ ಅವರೆಲ್ಲರ ಧನುಸ್ಸುಗಳನ್ನು ನಮ್ಮಿಂದ ಸಾವಿರ ಯೋಜನ ದೂರದಲ್ಲಿ ಮೌರ್ವಿಯನ್ನು ಕೆಳಗಿಳಿಸಿದವುಗಳನ್ನಾಗಿ ಮಾಡುತ್ತೇವೆ. (ವಿನಾಯಕ, ಪ್ರಮಥ, ಶೈಲ - ಮುಂತಾದವರೆಲ್ಲರೂ ರುದ್ರ ವಿಶೇಷರೇ ಆಗಿದ್ದಾರೆ.)
(ಅವರ ಧನುಸ್ಸುಗಳನ್ನು ನಮ್ಮಿಂದ ಸಾವಿರ ಯೋಜನ ದೂರದಲ್ಲಿ ಮೌರ್ವಿಯನ್ನು ಕೆಳಗಿಳಿಸಿದವುಗಳನ್ನಾಗಿ ಮಾಡುತ್ತೇವೆ - ಎಂಬುದನ್ನು ಮುಂದಿನ ಒಂಬತ್ತು ಋಕ್ ಗಳ ಅರ್ಥಗಳ ಜೊತೆಗೆ ಸೇರಿಸಿಕೊಳ್ಳಬೇಕು.)
ಗೋಚರವಾಗಿ ಕಾಣುತ್ತಿರುವ, ಮಹಾಸಮುದ್ರ ಸದೃಶವಾದ ಈ ಅಂತರಿಕ್ಷದಲ್ಲಿ ರುದ್ರಮೂರ್ತಿ ವಿಶೇಷಗಳು ಇವೆ. ಅವರ ಧನಸ್ಸುಗಳನ್ನು .......ಮಾಡುತ್ತೇವೆ.
ನೀಲವರ್ಣವುಳ್ಳ ಕಂಠಯುಕ್ತರೂ ( ಉಳಿದ ಭಾಗದಲ್ಲಿ ಶುಭ್ರ ಶ್ವೇತವರ್ಣದವರೂ ಭೂಮಿಯ ಕೆಳಭಾಗವಾದ ಪಾತಾಳದಲ್ಲಿ ಸಂಚರಿಸುವವರೂ ಆದ ರುದ್ರಮೂರ್ತಿ ವಿಶೇಷಗಳು ಇವೆ - ಅವರ ಧನುಸ್ಸುಗಳನ್ನು .... ಮಾಡುತ್ತೇವೆ.
ನೀಲಗ್ರೀವರೂ ಶಿತಿಕಂಠರೂ ಆದ ರುದ್ರರು ಸ್ವರ್ಗವನ್ನು ಆಶ್ರಯಿಸಿ ಇದ್ದಾರೆ. ಅವರ ಧನಸ್ಸುಗಳನ್ನು .... ಮಾಡುತ್ತೇವೆ.
ವೃಕ್ಷಗಳಲ್ಲಿ ಯಾವ ರುದ್ರರು ಇರುವರೋ ಅವರ ಪೈಕಿ ಕೆಲವರು ಎಳೆಯ ಹುಲ್ಲಿನಂತೆ ಪಿಂಜರವರ್ಣದವರೂ ನೀಲಕಂಠರೂ ಮತ್ತೆ ಕೆಲವರು ರಕ್ತವರ್ಣದವರೂ ಆಗಿದ್ದಾರೆ. ಅವರ ಧನುಸ್ಸುಗಳನ್ನು .... ಮಾಡುತ್ತೇವೆ.
ಮನುಷ್ಯರಿಗೆ ಹಿಂಸೆಯನ್ನುಂಟುಮಾಡುವ ಭೂತಗಳ ಅಧಿಪತಿಗಳಾದ ಯಾವ ರುದ್ರರು ಇರುವರೋ ಅವರ ಪೈಕಿ ಕೆಲವರು ಮುಂಡಿತ ತಿರಸ್ಕರಾಗಿಯೂ ಮತ್ತೆ ಇತರರು ಜಟಾಬಂಧಧಾರಿಗಳೂ ಆಗಿದ್ದಾರೆ. ಅವರ ಧನುಸ್ಸುಗಳನ್ನು .... ಮಾಡುತ್ತೇವೆ.
ಯಾರು ಭಕ್ಷಿಸುವ ಅನ್ನಗಳಲ್ಲಿ ಗುಪ್ತರಾಗಿದ್ದು ಜನರನ್ನು ವಿಶೇಷವಾಗಿ ಧಾತು ವೈಷಮ್ಯ ಮುಂತಾದವನ್ನುಂಟು ಮಾಡಿ ಬಾಧಿಸುತ್ತಾರೆಯೋ ಹಾಲು, ನೀರು ಮುಂತಾದ ಪಾನೀಯ ಪದಾರ್ಥಗಳಲ್ಲಿ ಗುಪ್ತರಾಗಿದ್ದು ಪಾನಮಾಡುವ ಜನರನ್ನು ಬಾಧಿಸುತ್ತಾರೋ ಅಂತಹ ರುದ್ರಮೂರ್ತಿಗಳ ಅವರ ಧನುಸ್ಸುಗಳನ್ನು .... ಮಾಡುತ್ತೇವೆ.
ಯಾರು ಲೌಕಿಕ ಮತ್ತು ವೈದಿಕ ಮಾರ್ಗಗಳಿಗೆ ಸಂಬಂಧಪಟ್ಟವರಾಗಿ ಮಾರ್ಗರಕ್ಷಕರಾಗಿದ್ದಾರೆಯೋ ಯಾರು ಅನ್ನವನ್ನು ನೀಡಿ ಪೋಷಣೆ ಮಾಡುವರೋ ಯಾರು ನಮ್ಮ ಅನಿಷ್ಟಗಳನ್ನು ನಿವಾರಿಸುತ್ತಾರೆಯೋ ಅಂತಹ ರುದ್ರರ ಧನುಸ್ಸುಗಳನ್ನು .... ಮಾಡುತ್ತೇವೆ.
ಕೆಲವರು ಚೂರಿಗಳನ್ನು ಕೈಯಲ್ಲಿ ಹಿಡಿದಿರುವವರಾಗಿಯೂ ಮತ್ತೆ ಕೆಲವರು ಖಡ್ಗವುಳ್ಳವರಾಗಿಯೂ ಇರುವ ಯಾವ ರುದ್ರರು ತೀರ್ಥ ಸ್ಥಾನಗಳನ್ನು ರಕ್ಷಿಸಲು ಸಂಚರಿಸುತ್ತಾರೆಯೋ ಅವರ ಧನುಸ್ಸುಗಳನ್ನು .... ಮಾಡುತ್ತೇವೆ.
ಇಷ್ಟು ಮಂದಿಯೂ (ಇದುವರೆಗೆ ವರ್ಣಿಸಿರುವ ರುದ್ರರು) ಇದಕ್ಕಿಂತಲೂ ಅಧಿಕರೂ ಆದ ಯಾವ ರುದ್ರರು ಎಲ್ಲ ದಿಕ್ಕುಗಳನ್ನು ಪ್ರವೇಶಿಸಿ ನೆಲಸಿರುವರೋ ಅವರುಗಳ ಧನುಸ್ಸುಗಳನ್ನು .... ಮಾಡುತ್ತೇವೆ.
ಪೃಥಿವಿಯಲ್ಲಿ ಯಾರು ಇರುವರೋ ಅಂತರಿಕ್ಷದಲ್ಲಿ ಯಾರು ಇರುವರೋ ದಿವಿಯಲ್ಲಿ ಯಾರು ಇರುವರೋ ಅಂತಹ ರುದ್ರರಿಗೆ ನಮಸ್ಕಾರ. ಭೂಮಿಯಲ್ಲಿ ಇರುವ ಯಾವ ರುದ್ರರಿಗೆ ಅನ್ನವು ಬಾಣಗಳಾಗಿವೆಯೋ (ಬಾಣಗಳಂತೆ ಧಾತು ವೈಷಮ್ಯದಿಂದ ಹಿಂಸಕಗಳಾಗಿ ಇವೆಯೋ), ಅಂತರಿಕ್ಷದಲ್ಲಿ ಇರುವ ಯಾವ ರುದ್ರರಿಗೆ ವಾತವು (ತೀವ್ರವಾದ ವಾಯುವುನಿಂದ ರೋಗವನ್ನುಂಟು ಮಾಡಿ ಹಿಂಸಿಸುವ) ಬಾಣಗಳಾಗಿವೆಯೋ, ದಿವಿಯಲ್ಲಿ ಇರುವ ಯಾವ ರುದ್ರರಿಗೆ ವೃಷ್ಟಿಯು ಅತಿವೃಷ್ಟಿ - ಅನಾವೃಷ್ಟಿಗಳಿಂದ ಪ್ರಾಣಿಗಣನ್ನು ಹಿಂಸಿಸುವ ಬಾಣಗಳಾಗಿವೆಯೋ ಆ ಎಲ್ಲ ರುದ್ರರಿಗೂ ಪೂರ್ವ ದಿಕ್ಕಿನ ಕಡೆಗೆ ನೀಡಿದ ಬೆರಳುಗಳುಳ್ಳ ಅಂಜಲಿ ರೂಪವಾಗಿಯೂ ದಕ್ಷಿಣ ದಿಕ್ಕಿನ ಕಡೆಗೆ ನೀಡಿದ ಬೆರಳುಗಳುಳ್ಳ ಅಂಜಲಿ ರೂಪವಾಗಿಯೂ  ಪಶ್ಚಿಮ ದಿಕ್ಕಿನ ಕಡೆಗೆ ನೀಡಿದ ಬೆರಳುಗಳುಳ್ಳ ಅಂಜಲಿ ರೂಪವಾಗಿಯೂ ಉತ್ತರ ದಿಕ್ಕಿನ ಕಡೆಗೆ ನೀಡಿದ ಬೆರಳುಗಳುಳ್ಳ ಅಂಜಲಿ ರೂಪವಾಗಿಯೂ ಊರ್ಧ್ವದ ಕಡೆಗೆ ನೀಡಿದ ಬೆರಳುಗಳುಳ್ಳ ಅಂಜಲಿ ರೂಪವಾಗಿಯೂ ನಮಸ್ಕಾರವು ಅರ್ಪಿತವಾಗಲಿ. ಆ ರುದ್ರರು ನಮ್ಮನ್ನು ಸುಖಿಗಳನ್ನಾಗಿ ಮಾಡಲಿ. ನಾವು ಯಾರನ್ನು ದ್ವೇಷಿಸುತ್ತೇವೆಯೋ ಯಾರು ನಮ್ಮನ್ನು ದ್ವೇಷಿಸುತ್ತಾರೆಯೋ ಅಂತಹ ಶತ್ರುವನ್ನು ರುದ್ರರಿಗೆ ನಮಸ್ಕಾರ ಮಾಡಿದ ನಾವು ರುದ್ರರಾದ ನಿಮ್ಮ ತೆರೆದ ಬಾಯಿಯಲ್ಲಿ ಹಾಕುತ್ತೇವೆ. ಅಂದರೆ ಅಂತಹ ಶತ್ರುಗಳನ್ನು ನಿಮಗೆ ಒಪ್ಪಿಸುತ್ತೇವೆ. ತ್ರಿವಿಧ ಶಾಂತಿಯು ಉಂಟಾಗಲಿ.
ಓ ಭಗವಂತ ರುದ್ರನೇ ! ಮೂರು ಕಣ್ಣುಗಳುಳ್ಳವನೂ ಉತ್ತಮ ಪರಿಮಳವುಳ್ಳವನೂ ಪುಷ್ಟಿಯನ್ನು ಹೆಚ್ಚಿಸುವವನೂ ಆದ ನಿನ್ನನ್ನು ಕುರಿತು ಯಜಿಸುತ್ತೇವೆ (ಪೂಜಿಸುತ್ತೇವೆ). ಪಕ್ವವಾದ ಬಣ್ಣದ ಸೌತೆಕಾಯಿಯು ತೊಟ್ಟಿನಿಂದ ಮುಕ್ತವಾಗುವಂತೆ ನಾವು ಮೃತ್ಯುವಿನ ದೆಸೆಯಿಂದ ಮುಕ್ತರಾಗಬೇಕು. ಮೋಕ್ಷದ ದೆಸೆಯಿಂದ ನಾವು ವಿಯುಕ್ತರಾಗಬಾರದು.
ಯಾವ ರುದ್ರದೇವನು ಅಗ್ನಿಯಲ್ಲಿದ್ದಾನೆಯೋ ಯಾವ ರುದ್ರದೇವನು ಉದಕದಲ್ಲಿದ್ದಾನೆಯೋ ಯಾವ ರುದ್ರದೇವನು ಓಷದಿಗಳಲ್ಲಿ (ವನಸ್ಪತಿಗಳಲ್ಲಿ) ಇದ್ದಾನೆಯೋ ಯಾವ ರುದ್ರದೇವನು ಸಮಸ್ತ ಲೋಕಗಳನ್ನೂ ಆತ್ಮರೂಪದಿಂದ ಪ್ರವೇಶಿಸಿದ್ದಾನೆ ಅಂತಹ ರುದ್ರದೇವನಿಗೆ ನಮಸ್ಕಾರವು ಅರ್ಪಿತವಾಗಲಿ.
ಓ ಜೀವಾತ್ಮನೇ ! ಯಾವ ರುದ್ರದೇವನು ಉತ್ತಮವಾದ ಬಾಣಗಳುಳ್ಳವನೂ ಧನುಸ್ಸುಳ್ಳವನೂ ಆಗಿದ್ದಾನೆಯೋ ಯಾವ ರುದ್ರದೇವನು ಸಮಸ್ತವಾದ ಔಷಧಗಳ ಸ್ವಾಮಿಯಾಗಿದ್ದನೆಯೋ ಆ ರುದ್ರದೇವನನ್ನೇ ಸ್ತುತಿಸು. ದುಃಖದ ದೆಸೆಯಿಂದ ಮುಕ್ತನನ್ನಾಗಿ ಮಾಡುವ ಆ ರುದ್ರದೇವನನ್ನೇ ಉತ್ತಮವಾದ ಮನಸ್ಸಿಗಾಗಿ ಚಿತ್ತಶಾಂತಿಗಾಗಿ ಯಜಿಸು (ಪೂಜಿಸು), ಮತ್ತು ಜ್ಯೋತಿರೂಪನೂ ಬಲಶಾಲಿಯೂ ಪ್ರಾಣಪದನೂ ಆದ ಆ ರುದ್ರದೇವನನ್ನು ಪರಿಚಾರ ಮಾಡು.
ನನ್ನ ಈ ಹಸ್ತವು ಭಗವಂತನಾದ ರುದ್ರನರೂಪ ವಾದುದು. ನನ್ನ ಈ ಹಸ್ತವು ಅತಿಶಯವಾಗಿ ರುದ್ರದೇವನ ಸ್ವರೂಪವಾದುದು. ನನ್ನ ಈ ಹಸ್ತವು ಸಮಸ್ತ ಔಷಧರೂಪವಾದುದು. ನನ್ನ ಈ ಹಸ್ತವು ಮಂಗಳಕರವಾದ ಸ್ಪರ್ಶವುಳ್ಳದ್ದು. ಹೀಗೆ ತಾದಾತ್ಮ್ಯವನ್ನು ಹೊಂದಿ ಬಂಧು ಮುಂತಾದವರನ್ನು ಸ್ಪರ್ಶಿಸಿದರೆ ಅವರು ಸಜೀವರಾಗುತ್ತಾರೆಂದು ಅಭಿಪ್ರಾಯ.
ಓ ಮೃತ್ಯುವೇ ! ಮರಣಶೀಲವಾದ ಪ್ರಾಣಿಯನ್ನು ಕೊಲ್ಲಲು ಸಾವಿರ-ಹತ್ತು ಸಾವಿರ - ಸಂಖ್ಯೆಗಳುಳ್ಳ ಯಾವ ನಿನ್ನ ಪಾಶಗಳಿರುವುವೋ ಆ ಪಾಶಗಳೆಲ್ಲವನ್ನೂ ಶಿವಪೂಜಾರೂಪವಾದ ಸತ್ಕರ್ಮಾನುಷ್ಠಾನದ ಶಕ್ತಿಯಿಂದ ನಾವು ನಿವಾರಣೆ ಮಾಡುತ್ತೇವೆ. ಅಂದರೆ ಶಿವಪೂಜಾ ಮಹಿಮೆಯಿಂದ ಮೃತ್ಯುವನ್ನು ಗೆಲ್ಲುತ್ತಾರೆ ಎಂದು ಅಭಿಪ್ರಾಯ.
ಮೃತ್ಯು ದೇವತೆಗೆ ಆಜ್ಯ ರೂಪವಾದ ಈ ಹವಿಸ್ಸು ಸುಹುತವಾಗಲಿ. ಮೃತ್ಯು ದೇವತೆಗೆ ಆಜ್ಯ ರೂಪವಾದ ಈ ಹವಿಸ್ಸು ಸುಹುತವಾಗಲಿ. ಹೀಗೆ ಮೃತ್ಯು ದೇವತೆಗೆ ಎರಡು ಸಾರಿ ಹವಿಸ್ಸನ್ನು ಅರ್ಪಿಸಬೇಕು. ಅಥವಾ ಮೃತ್ಯು ದೇವತಾರೂಪಿಯಾದ ರುದ್ರದೇವನಿಗೆ ಎರಡು ಬಾರಿ ನಮಸ್ಕಾರವನ್ನು ಸಲ್ಲಿಸಬೇಕು.
ವಿಶ್ವವ್ಯಾಪಕನಾದ ರುದ್ರದೇವನಿಗೆ ನಮಸ್ಕಾರ. ಓ ರುದ್ರದೇವನೇ ! ನನ್ನನ್ನು ಮೃತ್ಯುವಿನ ದೆಸೆಯಿಂದ ರಕ್ಷಿಸು. ಹೃದಯದಲ್ಲಿರುವ ಓ ಅಹಂಕಾರ ತತ್ತ್ವವೇ ! ನೀನು ಪ್ರಾಣ ಶಕ್ತಿಗಳ ಗ್ರಂಥಿಯಾಗಿದ್ದೀಯೆ. ಪ್ರಾಣಗಳು ವಿಯುಕ್ತವಾಗದಿರುವಂತೆ ಕಟ್ಟಾಗಿದ್ದೀಯೆ. ರುದ್ರದೇವನ ವಿಭೂತಿರೂಪವಾದ ರುದ್ರನನ್ನು ಅಭಿಮಾನಿ ದೇವತೆಯಾಗಿ ಉಳ್ಳವನಾಗಿ ನೀನು ದುಃಖನಾಶಕನಾಗಿ ನನ್ನೊಳಗೆ ಪ್ರವೇಶಿಸು. ನಾನು ಭುಜಿಸುವ ಅನ್ನದಿಂದ ನನ್ನನ್ನು ನೀನು ಪೋಷಿಸು. ಆ ಸದಾಶಿವನೇ ನಾನಾಗಿದ್ದೇನೆ. ತ್ರಿವಿಧ ಶಾಂತಿಯುಂಟಾಗಲಿ.

ಆ ಸದಾಶಿವನೇ ನಾನಾಗಿದ್ದೇನೆ.  ಓಂ ಶಾಂತಿಃ ಶಾಂತಿಃ ಶಾಂತಿಃ |
ಇಲ್ಲಿಗೆ ನಮಕಾಧ್ಯಾಯವು ಮುಕ್ತಾಯವಾಯಿತು.

ಮೂಲಗಳು : ಸಂಸ್ಕೃತ ಮಂತ್ರಗಳು ಹಾಗೂ ಅದರ ಕನ್ನಡದ ಅವತರಿಣಿಕೆ - ಶ್ರೀ.ಬಿ.ಎಸ್.ಚಂದ್ರಶೇಖರ ಅವರ ಕೃತಿ "ಸವಿಗನ್ನಡ ಸ್ತೋತ್ರಚಂದ್ರಿಕೆ"
ವಿವರಣೆಗಳು :- "ಸಸ್ವರ ಮಹಾನ್ಯಾಸಾದಿ ಮಂತ್ರಾಃ " - ವಿದ್ವಾನ್ ಶೇಷಾಚಲ ಶರ್ಮಾ.









Comments

Popular posts from this blog

ಶಿವ ಸಂಕಲ್ಪ ಸೂಕ್ತ ( ಶುಕ್ಲಯಜುರ್ವೇದ, ವಾಜಸನೇಯ ಸಂಹಿತಾ)

ಮಂತ್ರಪುಷ್ಪ (ತೈತ್ತರೀಯ ಆರಣ್ಯಕ)

ಪುರುಷ ಸೂಕ್ತ