ಉತ್ತರನಾರಾಯಣಂ ಶಿಖಾ (ತೈತ್ತಿರೀಯ ಆರಣ್ಯಕ)




ಉತ್ತರನಾರಾಯಣಂ ಶಿಖಾ (ತೈತ್ತಿರೀಯ ಆರಣ್ಯಕ)

(ಉತ್ತರ ನಾರಾಯಣ ಸೂಕ್ತವನ್ನು ಶಿಖೆಯಲ್ಲಿ ಭಾವಿಸಬೇಕು)
 
ಶ್ಲೋಕ - 1 - ಸಂಸ್ಕೃತದಲ್ಲಿ :
ಅದ್ಭ್ಯಃ ಸಂಭೂತಃ ಪೃಥಿವೈ ರಸಾಶ್ಚ
ವಿಶ್ವಕರ್ಮಣಃ ಸಮವರ್ತತಾಧಿ
ತಸ್ಯ ತ್ವಷ್ಟಾ ವಿದಧದ್ರೂಪಮೇತಿ
ತತ್ಪುರುಷಸ್ಯ ವಿಶ್ವಮಾಜಾನಾಗ್ರೇ

ತಾತ್ಪರ್ಯ :

ವಿರಾಡ್ರೂಪನಾದ ನಾರಾಯಣನೆಂಬ ಪುರುಷನು (ಸರ್ವತ್ರವ್ಯಾಪ್ತವಾದ) ಜಲರಾಶಿಯ ದೆಸೆಯಿಂದ (ಬ್ರಹ್ಮಾಂಡಗೋಲಕ ರೂಪವಾಗಿ) ಆವಿರ್ಭವಿಸಿದನು. ಪೃಥ್ವಿಯ ಸಾರಭೂತವಾದ ಅಂಶದಿಂದಲೂ ಆವಿರ್ಭವಿಸಿದನು. ವಿಶ್ವಕರ್ಮನಾದ ಜಗತ್ಕರ್ತೃವಿನ ಅಧಿಕಭಾವದಿಂದ ಉತ್ಪನ್ನನಾದ ಬ್ರಹ್ಮಾಂಡಾಭಿಮಾನಿಯಾದ ಪುರುಷನು ಈಶ್ವರಾಂಶನು. ಆ ವಿರಾಟ್ಪುರುಷನ ಚತುರ್ದಶ ಲೋಕರೂಪವಾದ ಸ್ವರೂಪವನ್ನು ಕಲ್ಪಿಸಿ ತ್ವಷ್ಟಾ (ವಿಶ್ವಕರ್ಮನಾದ) ರೂಪನಾದ ಜಗದೀಶ್ವರನು ಪ್ರವರ್ತಿಸುತ್ತಾನೆ. ವಿರಾಡ್ರೂಪ ಪುರುಷನ ಸಂಬಂಧಿಯಾದ ದೇವ-ಮನುಷ್ಯಾದಿ ರೂಪ ವಿಶ್ವವನ್ನು ಮೊದಲಿಗೆ ಸೃಷ್ಟಿಸಿ ಈ ಜಗತ್ತು ಸರ್ವತ್ರ ಉತ್ಪನ್ನವಾಯಿತು.

ಶ್ಲೋಕ - 2 - ಸಂಸ್ಕೃತದಲ್ಲಿ :

ವೇದಾಹಮೇತಂ ಪುರುಷಂ ಮಹಾಂತಮ್
ಆದಿತ್ಯವರ್ಣಂ ತಮಸಃ ಪರಸ್ತಾತ್
ತಮೇವಂ ವಿದ್ವಾನಮೃತ ಇಹ ಭವತಿ
ನಾನ್ಯಃ ಪಂಥಾ ವಿದ್ಯತೇsಯನಾಯ

ತಾತ್ಪರ್ಯ :

ಮಹಾತ್ಮನಾದ ಈ ಪುರುಷನನ್ನು ನಾನು ಧ್ಯಾನದಿಂದ ಸದಾ ಅನುಭವ ರೂಪವಾಗಿ ತಿಳಿಯುತ್ತೇನೆ. ತಮಸ್ಸಿನ ರೂಪವಾದ ಅಜ್ಞಾನಕ್ಕಿಂತಲೂ ಆಚೆ ಆದಿತ್ಯನಂತೆ ಸ್ವಪ್ರಕಾಶರೂಪನಾದ ಆ ಪುರುಷನನ್ನು (ನಾನು ಧ್ಯಾನದಿಂದ ತಿಳಿಯುತ್ತೇನೆ). ಈ ರೀತಿಯಾಗಿ ಆ ಪುರುಷನನ್ನು ಧ್ಯಾನದಿಂದ ತಿಳಿಯುವ ಜ್ಞಾನಿಯು ಈ ಜನ್ಮದಲ್ಲಿಯೇ ಅಮೃತನಾಗುತ್ತಾನೆ. ಆ ಪುರುಷನ ಸಾಕ್ಷಾತ್ಕಾರ ರೂಪ ಪ್ರಾಪ್ತಿಗಾಗಿ ಬೇರೆ ಮಾರ್ಗವಿಲ್ಲ.

ಶ್ಲೋಕ - 3 - ಸಂಸ್ಕೃತದಲ್ಲಿ :

ಪ್ರಜಾಪತಿಶ್ಚರತಿ ಗರ್ಭೇ ಅಂತಃ
ಅಜಾಯಮಾನೋ ಬಹುಧಾ ವಿಜಾಯತೇ
ತಸ್ಯ ಧೀರಾ ಪರಿಜಾನಂತಿ ಯೋನಿಮ್
ಮರೀಚೀನಾಂ ಪದಮಿಚ್ಛಂತಿ  ವೇಧಸಃ

ತಾತ್ಪರ್ಯ :

ಬ್ರಹ್ಮಾಂಡರೂಪವಾದ ಗರ್ಭದಲ್ಲಿ ಒಳಗೆ ಪ್ರಜಾಪತಿಯು ಶರೀರಧಾರಿಯಾಗಿ ಸಂಚರಿಸುತ್ತಾನೆ. ವಸ್ತುತಃ ಹುಟ್ಟದಿರುವವನಾಗಿಯೇ ಇರುವ ಆ ಪುರುಷನು (ಮಾಯಿಕವಾದ ರೂಪದಿಂದ) ಬಹುಪ್ರಕಾರವಾಗಿ ಹುಟ್ಟುತ್ತಾನೆ (ಆವಿರ್ಭವಿಸುತ್ತಾನೆ). ಪ್ರಜಾಪತಿಯಾದ ಅವನ ಜಗತ್ಕಾರಣ ರೂಪವನ್ನು ಅಂದರೆ ವಾಸ್ತವಿಕ ರೂಪವನ್ನು ಯೋಗವಿಧಾನದಿಂದ ಇಂದ್ರಿಯಗಳನ್ನು ತಡೆಹಿಡಿದವರಾದ ಜ್ಞಾನಿಗಳು ಚೆನ್ನಾಗಿ ತಿಳಿಯುತ್ತಾರೆ. ಸೃಷ್ಟಿಕರ್ತೃಗಳಾದವರು ಆ ದೇವನನ್ನೇ ಉಪಾಸನೆಮಾಡಿ ಮರೀಚಿ ಮೊದಲಾದ ಮಹರ್ಷಿಗಳ ಜಗತ್ ಸೃಷ್ಟಿರೂಪವಾದ ಪದವಿಯನ್ನು ಅಪೇಕ್ಷಿಸುತ್ತಾರೆ.

ಶ್ಲೋಕ - 4 - ಸಂಸ್ಕೃತದಲ್ಲಿ :

ಯೋ ದೇವೇಭ್ಯ ಆತಪತಿ
ಯೋ ದೇವಾನಾಂ ಪುರೋಹಿತಃ
ಪೂರ್ವೋ ಯೋ ದೇವೇಭ್ಯೋ ಜಾತಃ
ನಮೋ ರುಚಾಯ ಬ್ರಾಹ್ಮಯೇ

ತಾತ್ಪರ್ಯ :

ಯಾವ ಪರಮೇಶ್ವರನು ದೇವತೆಗಳಿಗಾಗಿ ಎಲ್ಲೆಡೆಯೂ ಪ್ರಕಾಶಿಸುತ್ತಾನೆಯೋ ಅಂದರೆ ದೇವತೆಗಳ ದೇವತ್ವ ಸಿದ್ಧಿಗಾಗಿ ಅವರವರ ಹೃದಯಗಳಲ್ಲಿ ಚೈತನ್ಯರೂಪದಿಂದ ಪ್ರವೇಶಿಸಿ ಆವಿರ್ಭವಿಸುತ್ತಾನೆ. ಯಾವ ಪರಮೇಶ್ವರನು ದೇವತೆಗಳ ಪುರೋಹಿತನಾದ ಬೃಹಸ್ಪತಿರೂಪನಾಗಿ ಇರುವನೋ ಯಾವ ಪರಮೇಶ್ವರನು ದೇವತೆಗಳಿಗಿಂತಲೂ ಮೊದಲು ಹಿರಣ್ಯಗರ್ಭದಿಂದ ಆವಿರ್ಭವಿಸಿದನೋ ಅಂತಹ ಸ್ವಯಂಪ್ರಕಾಶನೂ ಪರಬ್ರಹ್ಮಸ್ವರೂಪನೂ ವೇದಪ್ರತಿಪಾದ್ಯನೂ ಆದ ಪರಮಾತ್ಮನಿಗೆ ನಮಸ್ಕಾರವು ಸಲ್ಲಲಿ.

ಶ್ಲೋಕ - 5 - ಸಂಸ್ಕೃತದಲ್ಲಿ :
  
ರುಚಂ ಬ್ರಾಹ್ಮಂ ಜನಯಂತಃ
ದೇವಾ ಅಗ್ರೇ ತದಬ್ರುವನ್
ಯಸ್ತ್ವೈವಂ ಬ್ರಾಹ್ಮಣೋ ವಿದ್ಯಾತ್
ತಸ್ಯ ದೇವಾ ಅಸನ್ವಶೇ

ತಾತ್ಪರ್ಯ :

ದೇವತೆಗಳು ಸೃಷ್ಟಿಯ ಆದಿಯಲ್ಲಿ - ಬ್ರಹ್ಮವಿದ್ಯೆಯನ್ನು ಪ್ರವರ್ತನ ಮಾಡುವ ಕಾಲದಲ್ಲಿ ಪರಬ್ರಹ್ಮಸಂಬಂಧಿಯಾದ ಚೈತನ್ಯವನ್ನು ವಿದ್ಯೆಯಿಂದ ಪ್ರಾದುರ್ಭಾವಗೊಳಿಸುವವರಾಗಿ ಆ ಬ್ರಹ್ಮ ತತ್ತ್ವವನ್ನು ಸಂಬೋಧಿಸಿ ಹೇಳಿದರು :- ಓ ಪರಮಾತ್ಮನೇ ! ಯಾವ ಬ್ರಾಹ್ಮಣನು ಅಂದರೆ ಬ್ರಹ್ಮಜ್ಞಾನಿಯು ನಿನ್ನನ್ನು ಈ ರೀತಿಯಾಗಿ ತಿಳಿಯುವನೋ ಅಂತಹ ಬ್ರಹ್ಮಜ್ಞಾನಿಯ ಅಧೀನದಲ್ಲಿ ಸಮಸ್ತ ದೇವತೆಗಳೂ ಇರುತ್ತಾರೆ. ಆ ದೇವತೆಗಳಿಗೆ ಅಂತರ್ಯಾಮಿಯಾಗಿ ಪರಮಾತ್ಮನು ನಿಯಾಮಕನಾಗಿರುತ್ತಾನೆ.

ಶ್ಲೋಕ - 6 - ಸಂಸ್ಕೃತದಲ್ಲಿ :

ಹ್ರೀಶ್ಚ ತೇ ಲಕ್ಷ್ಮೀಶ್ಚಪತ್ನೌ
ಅಹೋರಾತ್ರೇ ಪಾರ್ಶ್ವೇ ನಕ್ಷತ್ರಾಣಿ ರೂಪಮ್
ಅಶ್ವಿನೌ ವ್ಯಾತ್ತಮ್ ಇಷ್ಟಂ ಮನಿಷಾಣ
ಅಮುಂ ಮನಿಷಾಣ ಸರ್ವಂ ಮನಿಷಾಣ 

ತಾತ್ಪರ್ಯ :

ಓ ಪರಮಾತ್ಮನೇ ! ಲಜ್ಜಾಭಿಮಾನಿ ದೇವತೆಯಾದ ಹ್ರೀದೇವಿಯು ಮತ್ತು ಐಶ್ವರ್ಯಾಭಿಮಾನಿ ದೇವತೆಯಾದ ಲಕ್ಷ್ಮೀದೇವಿಯು ನಿನ್ನ ಪತ್ನಿಯರು. ಹಗಲು-ರಾತ್ರಿಗಳು ನಿನ್ನ ಎರಡು ಪಾರ್ಶ್ವಗಳು. ನಕ್ಷತ್ರಗಳು ನಿನ್ನ ರೂಪವು. ಅಶ್ವಿನೀದೇವತೆಗಳು ನಿನ್ನ ತೆರೆದಬಾಯಿ. ಓ ವಿರಾಟ್ ಪುರುಷನೇ ! ನಮ್ಮ ಅಪೇಕ್ಷಿತವಾದ ಆತ್ಮ ಜ್ಞಾನವನ್ನು ನೀಡು. ಲೋಕದಲ್ಲಿ ದೃಶ್ಯವಾಗಿರುವ ಗೋವು-ಅಶ್ವ ಮುಂತಾದುವನ್ನು ನೀಡು. ಐಹಿಕವೂ ಆಮುಷ್ಮಿಕವೂ ಆದ ಸಮಸ್ತ ಇಷ್ಟಾರ್ಥವನ್ನೂ ನೀಡು.

ಶ್ಲೋಕ - 7 - ಸಂಸ್ಕೃತದಲ್ಲಿ :

ಓಂ ತಚ್ಚಂ ಯೋರಾವೃಣೀಮಹೇ | ಗಾತುಂ ಯಙ್ಞಾಯ|
ಗಾತುಂ ಯಙ್ಞಪತಯೇ | ದೈವೀ ಸ್ವಸ್ತಿರಸ್ತು ನಃ |
ಸ್ವಸ್ತಿರ್ಮಾನುಷೇಭ್ಯಃ | ಊರ್ಧ್ವಂ ಜಿಗಾತು ಭೇಷಜಮ್|
ಶಂ ನೋ ಅಸ್ತು ದ್ವಿಪದೇ  | ಶಂ ಚತುಷ್ಪದೇ |
ಓಂ ಶಾಂತಿಃ ಶಾಂತಿಃ ಶಾಂತಿಃ  ||

ಅನುವಾದ :

ನಮ್ಮ ದುಃಖವನ್ನು ಹೋಗಲಾಡಿಸುವ ಮತ್ತು ನಮ್ಮ ಧಾರ್ಮಿಕ ಕ್ರಿಯೆಗಳಿಗೆ ಫಲವನ್ನು ನೀಡುವ ಭಗವಂತನನ್ನು ಪ್ರಾರ್ಥಿಸುತ್ತೇವೆ. ದೇವತೆಗಳು ಯಾವ ಬಗೆಯ ಒಳಿತನ್ನು ಹೊಂದುವರೊ, ನಾವೂ ಅದನ್ನೆ ಪಡೆಯುವಂತಾಗಲಿ ! ಎಲ್ಲ ಮಾನವರೂ ಮಂಗಳವನ್ನು ಹೊಂದಲಿ ! ಮುಂದೆಯೂ ಅಷ್ಟೆ. ಜೀವನದ ಸಕಲ ದುರಿತಗಳೂ ದೂರವಾಗಲಿ ! ಮಾನವರೂ ಹಾಗೂ ಸಾಕಿರುವಂತಹ ಪ್ರಾಣಿಗಳೂ ಸುಖವನ್ನು ಹೊಂದಲಿ.

ವಿವರಣೆ :

ಪ್ರಾಪ್ತವಾದ ರೋಗಾದಿಗಳ ಉಪಶಮನ ಕಾರಣವನ್ನೂ ಮುಂದೆ ಬರಬಹುದಾದ ರೋಗಾದಿಗಳ ವಿಯೋಗ ಕಾರಣವನ್ನೂ ಪರಮಾತ್ಮನನ್ನು ಕುರಿತು ಅಭಿಮುಖವಾಗಿ ಪ್ರಾರ್ಥಿಸುತ್ತೇವೆ. ಯಜ್ಞಕ್ಕೋಸ್ಕರವಾಗಿ ಗಾನಮಾಡಲು ಪ್ರಾರ್ಥಿಸುತ್ತೇವೆ. ಉತ್ತಮಗತಿಯನ್ನು ಪ್ರಾರ್ಥಿಸುತ್ತೇವೆ. ಯಜ್ಞಪತಿಯಾದ ಯಜಮಾನನಿಗೆ ಫಲಪ್ರಾಪ್ತಿರೂಪವಾದ ಉತ್ತಮಗತಿಯನ್ನು ಪ್ರಾರ್ಥಿಸುತ್ತೇವೆ. ನಮಗೆ ದೇವತೆಗಳಿಂದ ಸಂಪಾದಿತವಾದ ಸ್ವಸ್ತಿಯು ಉಂಟಾಗಲಿ. ಪುತ್ರರೇ ಮೊದಲಾದ ಮಾನುಷರಿಗೆ ಸ್ವಸ್ತಿಯು ಉಂಟಾಗಲಿ. ಇಲ್ಲಿಂದ ಮೇಲೆ ಸದಾ ಸರ್ವಾನಿಷ್ಟನಿವಾರಕವಾದ ಭೇಷಜವು (ಔಷಧಿ) ಪ್ರಾಪ್ತವಾಗಲಿ. ನಮ್ಮ ದ್ವಿಪಾದರಾದ ಮನುಷ್ಯರಿಗೆ ಸುಖವುಂಟಾಗಲಿ. ನಮ್ಮ ಪಶುಗಳಿಗೂ ಸುಖವುಂಟಾಗಲಿ. ಓಂ ಶಾಂತಿಃ ಶಾಂತಿಃ ಶಾಂತಿಃ || ಓಂ ಭಗವಂತನಾದ ರುದ್ರನಿಗೆ ನಮಸ್ಕಾರ. ಉತ್ತರನಾರಾಯಣ ಸೂಕ್ತವು ಶಿಖೆಗೆ ಸಮರ್ಪಿತ.
(ಹೀಗೆ ಉತ್ತರನಾರಾಯಣ ಸೂಕ್ತವನ್ನು ಶಿಖೆಯಲ್ಲಿ ಭಾವಿಸಿ ಶಿವಭಾವವನ್ನು ಹೊಂದಬೇಕು).

ಮೂಲ :- ಸಸ್ವರ ಮಹಾನ್ಯಾಸಾದಿ ಮಂತ್ರಾಃ - ವಿದ್ವಾನ್ ಶೇಷಾಚಲ ಶರ್ಮ.

Comments

Popular posts from this blog

ಶಿವ ಸಂಕಲ್ಪ ಸೂಕ್ತ ( ಶುಕ್ಲಯಜುರ್ವೇದ, ವಾಜಸನೇಯ ಸಂಹಿತಾ)

ಮಂತ್ರಪುಷ್ಪ (ತೈತ್ತರೀಯ ಆರಣ್ಯಕ)

ಪುರುಷ ಸೂಕ್ತ