ಪಂಚಮುಖನ್ಯಾಸ



ಪಂಚಮುಖನ್ಯಾಸ

ಪ್ರಸ್ತಾವನೆ : ಸಾಮಾನ್ಯವಾಗಿ ಶಿವನನ್ನು ಲಿಂಗರೂಪದಲ್ಲಿ ಪೂಜಿಸುವುದು ವಾಡಿಕೆ. ಕೆಲವು ಪ್ರದೇಶದಲ್ಲಿ ಐದು ಮುಖದ ಶಿವಲಿಂಗವನ್ನು ಪೂಜಿಸುವುದನ್ನುಕಾಣಬಹುದು. ಈ ಐದು ಮುಖಗಳೆಂದರೆ :
ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ ಮತ್ತು ಈಶಾನ.
ಶಿವನ ನಾಲಕ್ಕು ಮುಖಗಳು ನಾಲಕ್ಕುದಿಕ್ಕುಗಳನ್ನು ಪ್ರತಿನಿಧಿಸಿದರೆ, ಐದನೇ ಮುಖವು ಆಕಾಶದೆಡೆಗೆ ಮುಖ ಮಾಡಿರುವುದು ಹಾಗೂ ಇದು ವಿಶ್ವದ ಮುಖ ಮತ್ತು ಶುದ್ಧತೆ ಹಾಗೂ ಆಧ್ಯಾತ್ಮಿಕ ಉನ್ನತಿಯನ್ನು ಪ್ರತಿನಿಧಿಸುತ್ತದೆ. ಪಂಚಮುಖಾನ್ಯಾಸದಲ್ಲಿನ ಐದು ಶ್ಲೋಕಗಳು ಶಿವನ ಐದು ಮುಖಗಳು, ನಾಲಕ್ಕು ವೇದಗಳು ಹಾಗೂ ಓಂ ಕಾರವನ್ನು ಪ್ರತಿನಿಧಿಸುತ್ತವೆ.

ಶ್ಲೋಕ - 1 - ಸಂಸ್ಕೃತದಲ್ಲಿ :

ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ
ತನ್ನೋ ರುದ್ರಃ ಪ್ರಚೋದಯಾತ್ ||

ಸಂವರ್ತಾಗ್ನಿತಟಿತ್ಪ್ರದೀಪ್ತಕನಕಪ್ರಸ್ಪರ್ಧಿ ತೇಜೋಮಯಂ
ಗಂಭೀರಧ್ವನಿಮಿಶ್ರಿತೋಗ್ರದಹನತ್ಪ್ರೋದ್ಭಾಸಿ ತಾಮ್ರಧರಮ್ ||
ಅರ್ಧೇಂದುದ್ಯುತಿಲೋಲಪಿಂಗಳಜಟಾಭಾರಪ್ರಬದ್ಧೋರಗಂ
ವಂದೇ ಸಿದ್ಧಸುರಾಸುರೇಂದ್ರನಮಿತಂ ಪೂರ್ವಂ ಮುಖಂ ಶೂಲಿನಃ ||
ಓಂ ಅಂ ಕಂ ಖಂ ಗಂ ಘಂ ಙಂ ಆಂ ಓಂ ಓಂ ನಮೋ
ಭಗವತೇ ರುದ್ರಾಯ | ಓಂ ನಂ ಪೂರ್ವಮುಖಾಯ ನಮಃ
ಕನ್ನಡದಲ್ಲಿ :

ಆ ಪುರುಷನನ್ನರಿತಿಹೆವು ಮಹಾದೇವನಂ ಧ್ಯಾನಿಪೆವು
ರುದ್ರದೇವಂ ಪ್ರಚೋದಿಸಲದಕೆ ನಮ್ಮ

ಪ್ರಲಯಾಗ್ನಿ, ಮಿಂಚು, ಹೊಳೆವ ಹೊನ್ನಂತೆ ತೇಜ
ಗಂಭೀರ ಧ್ವನಿಯಲುರಿಯುವಗ್ನಿಜ್ವಾಲೆ ತಾಮ್ರತುಟಿ
ಚಂದ್ರಾರ್ಥ ಕಾಂತಿಯಲೋಲಾಡುತಿಹ ಕೆಂಜಡೆ ಬಿಗಿದ ಸರ್ಪ
ಸಿದ್ಧರಕ್ಕಸ ಸುರೇಂದ್ರವಂದಿತ ಶೂಲಿಯ ಮೂಡುಮೊಗಕೆ ನಮಿಪೆ

ಓಂ ಅಂ ಕಂ ಖಂ ಗಂ ಘಂ ಙಂ ಆಂ ಓಂ ಓಂ
ನಮಿಪೆ ಭಗವಂತ ರುದ್ರಂಗೆ | ಓಂ ನಂ ಮೂಡಣಮುಖನೆ ನಮನ

ವಿವರಣೆ :

ತತ್ಪುರುಷನನ್ನು ನಾವು ತಿಳಿದಿದ್ದೇವೆ. ಪೂರ್ವದಿಕ್ಕಿನ ಮುಖವುಳ್ಳ ರುದ್ರದೇವನು ತತ್ಪುರುಷನು. ಆ ಮಹಾದೇವನನ್ನು ತಿಳಿದು ಧ್ಯಾನಿಸುತ್ತೇವೆ. ಆದುದರಿಂದ ರುದ್ರದೇವನು ನಮ್ಮನ್ನು ಧ್ಯಾನಜ್ಞಾನಾದಿಗಳಿಗೆ ಪ್ರಚೋದಿಸಲಿ.

ಶೂಲಿಯ ಪೂರ್ವದಿಕ್ಕಿನ ಮುಖವನ್ನು ವಂದಿಸುತ್ತೇನೆ. ಆ ಮುಖವು ಸಂವರ್ತಾಗ್ನಿ - ಪ್ರಲಯಕಾಲದ ಅಗ್ನಿ, ಮಿಂಚು, ಪ್ರಕಾಶಿಸುವ ಬಂಗಾರ - ಇವುಗಳ ಪ್ರತಿಸ್ಪರ್ಧಿಯಾಗಿದೆ. ಇವುಗಳಂತೆ ಹೊಳೆಯುತ್ತದೆ, ತೇಜೋಮಯವಾಗಿದೆ. ಗಂಭೀರವಾದ ಧ್ವನಿಯಿಂದ ಕೂಡಿರುವ ಪ್ರಚಂಡವಾದ ಅಗ್ನಿಯಂತೆ ಪ್ರಜ್ವಲಿಸುತ್ತಿದೆ. ಕೆಂಪಾದ ತುಟಿಯುಳ್ಳದ್ದಾಗಿದೆ. ಅರ್ಧಚಂದ್ರನ ಕಾಂತಿಯುಳ್ಳದ್ದಾಗಿ ಜೋಲಾಡುತ್ತಿರುವ ಪಿಂಗಳವರ್ಣದ ಜಟಾಭಾರದಲ್ಲಿ ಕಟ್ಟಿರುವ ಸರ್ಪವುಳ್ಳದ್ದಾಗಿದೆ. ಆ ಮುಖವು ಸಿದ್ಧರು, ಸುರೇಂದ್ರರುಗಳಿಂದ ನಮಸ್ಕರಿಸಲ್ಪಟ್ಟಿದೆ. ಅಂಥಹ ಶಿವನ ಪೂರ್ವದಿಕ್ಕಿನ ಮುಖವನ್ನು ನಮಸ್ಕರಿಸುತ್ತೇನೆ. ಶಿವನ ಪೂರ್ವ ದಿಕ್ಕಿನ ಮುಖಕ್ಕೆ ಹೀಗೆವರ್ಣಗಳನ್ನು ಉಚ್ಚರಿಸಬೇಕು : ಓಂ ಅಂ ಕಂ ಖಂ ಗಂ ಘಂ ಙಂ ಆಂ ಓಂ. ಶಿವನ ಪೂರ್ವದಿಕ್ಕಿನ ಮುಖಕ್ಕೆ ನನ್ನ ಭಕ್ತಿಪೂರ್ವಕ ನಮಸ್ಕಾರ.

ಶ್ಲೋಕ - 2 - ಸಂಸ್ಕೃತದಲ್ಲಿ :

ಅಘೋರೇಭ್ಯೋsಥ ಘೋರೇಭ್ಯೋ ಘೋರಘೋರತರೇಭ್ಯಃ
ಸರ್ವೇಭ್ಯಸ್ಸರ್ವಶರ್ವೇಭ್ಯೋ ನಮಸ್ತೇ ಅಸ್ತು ರುದ್ರರೂಪೇಭ್ಯಃ ||
ಕಾಲಾಭ್ರಭ್ರಮರಾಂಜನದ್ಯುತಿನಿಭಂ ವ್ಯಾವೃತ್ತಪಿಂಗೇಕ್ಷಣಂ
ಕರ್ಣೋದ್ಭಾಸಿತಭೋಗಿಮಸ್ತಕಮಣಿಂ ಪ್ರೋದ್ಭಿನ್ನದಂಷ್ಟ್ರಾಂಕುರಮ್
ಸರ್ಪಪ್ರೋತಕಪಾಲಶುಕ್ತಿಶಕಲವ್ಯಾಕೀರ್ಣ ಸಂಚಾರಗಂ
ವಂದೇ ದಕ್ಷಿಣಮೀಶ್ವರಸ್ಯ ಕುಟಿಲಭ್ರೂಭಂಗರೌದ್ರಂ ಮುಖಮ್ ||

ಓಂ ಇಂ ಚಂ ಛಂ ಜಂ ಝಂ ಞಂ ಈಂ ಓಂ ಓಂ ನಮೋ
ಭಗವತೇ ರುದ್ರಾಯ | ಓಂ ಮಂ ದಕ್ಷಿಣಮುಖಾಯ ನಮಃ
ಕನ್ನಡದಲ್ಲಿ :

ಶಾಂತನಿಗೆ ಉಗ್ರಂಗೆ ಘೋರತರ ರೂಪನಿಗೆ
ಸಕಲ ಶಿವ ರೂಪಾದ ಸರ್ವಲಯಕರ
ರುದ್ರರೂಪಂಗಳಿಗೆ ಪೊಡಮಡುವೆ ||
ಕಾರ್ಮೋಡದ ದುಂಬಿ ಕಾಡಿಗೆಯ ಕಾಂತಿ ಹಿನ್ನೋಟ ಬೀರ್ವ ಕೆಂಗಣ್ಣು
ಕರ್ಣ ಬೆಳಗುತಿಹ ನಾಗಮಣಿ, ಚಾಚಿದ ಕೋರೆದಾಡೆ
ಸರ್ಪದಿಂ ಕೋದ ಕಪಾಲ, ಕಪ್ಪೆಯ ಚಿಪ್ಪುಗಳೋಲಾಡಿ ಸುತ್ತುತಿಹ
ಹುಬ್ಬುಗಟ್ಟಿಕ್ಕಿದೊಡೆಯನ ರೌದ್ರ ತೆಂಕಣ ಮೊಗಕೆ ನಮಿಪೆ
ಓಂ ಇಂ ಚಂ ಛಂ ಜಂ ಝಂ ಞಂ ಈಂ ಓಂ ಓಂ
ನಮಿಪೆ ಭಗವಂತ ರುದ್ರಂಗೆ | ಓಂ ಮಂ ತೆಂಕಣಮುಖನೆ ನಮನ

ವಿವರಣೆ :

ದಕ್ಷಿಣಮುಖನಾದ ಅಘೋರನೆಂಬ ರುದ್ರದೇವನ ಅಘೋರವಾದ ಅಂದರೆ ಸಾತ್ವಿಕವಾಗಿ ಶಾಂತವಾಗಿರುವ, ರಾಜಸವಾಗಿ ಉಗ್ರವಾಗಿರುವ ಮತ್ತು ತಾಮಸವಾಗಿ ಘೋರತರವಾಗಿರುವ ವಿಗ್ರಹಗಳಿಗೆ ನಮಸ್ಕಾರ. ಸರ್ವಾತ್ಮಕವಾದ ಶಿವನೇ ! ನಿನ್ನ ಸಮಸ್ತವಾದ ಶರ್ವರೂಪವಾದ, ಪ್ರಳಯ ಕಾಲದಲ್ಲಿ ಎಲ್ಲವನ್ನೂ ಲಯಗೊಳಿಸುವ ರುದ್ರರೂಪಗಳಿಗೆ ನಮಸ್ಕಾರವು.

ಈಶ್ವರನ ಕುಟಿಲವಾದ ಭ್ರೂಭಂಗದಿಂದ ಭಯಂಕರವಾಗಿರುವ ದಕ್ಷಿಣದಿಕ್ಕಿನ ಮುಖಕ್ಕೆ ನನ್ನ ಸಹಸ್ರ ನಮನಗಳು. ಆ ದಕ್ಷಿಣ ಮುಖವು ಕಾರ್ಮೋಡ, ಭ್ರಮರ , ಕಾಡಿಗೆಗಳ ಕಾಂತಿಗೆ ಸಮಾನವಾದ ಕಾಂತಿಯನ್ನು ಉಳ್ಳದ್ದಾಗಿದೆ. ಹಿಂದಕ್ಕೆ ತಿರುಗಿರುವ ಪಿಂಗಳವರ್ಣದ ದೃಷ್ಟಿಯುಳ್ಳದ್ದಾಗಿದೆ. ಕರ್ಣದಲ್ಲಿ ಅಧಿಕವಾಗಿ ಶೋಬಿಸುವ ಸರ್ಪಮಸ್ತಕ ಮಣಿಯುಳ್ಳದ್ದಾಗಿದೆ. ಅಧಿಕವಾಗಿ ಹೊರಬಿದ್ದಿರುವ ಕೋರೆಹಲ್ಲು ಕುರವುಳ್ಳದ್ದಾಗಿದೆ. ಸರ್ಪಕ್ಕೆ ಪೋಣಿಸಿರುವ ಕಪಾಲ, ಕಪ್ಪೆಚಿಪ್ಪು (ಶುಕ್ತಿ ), ಶಕಲ (ಚೂರು)ವುಳ್ಳದ್ದಾಗಿದೆ. ಸುತ್ತುವರಿಯುತ್ತಿರುವ ಸಂಚಾರವುಳ್ಳದ್ದಾಗಿದೆ. ಇಂಥಹ ಶಿವನ ದಕ್ಷಿಣ ಮುಖಕ್ಕೆ ನನ್ನ ಸಾಷ್ಟ್ರಾಂಗ ನಮಸ್ಕಾರಗಳು.
ಶಿವನ ದಕ್ಷಿಣದಿಕ್ಕಿನ ಮುಖಕ್ಕೆ ಹೀಗೆ ವರ್ಣಗಳನ್ನು ಉಚ್ಚರಿಸಬೇಕು :
ಓಂ ಇಂ ಚಂ ಛಂ ಜಂ ಝಂ ಞಂ ಈಂ ಓಂ - ಭಗವಂತನಾದ ಶಿವನಿಗೆ ನಮಸ್ಕಾರ ಹಾಗೂ ದಕ್ಷಿಣ ಮುಖಕ್ಕೆ ನಮಸ್ಕಾರಗಳು.

ಶ್ಲೋಕ - 3 - ಸಂಸ್ಕೃತದಲ್ಲಿ :

ಸದ್ಯೋಜಾತಂ ಪ್ರಪದ್ಯಾಮಿ ಸದ್ಯೋಜಾತಾಯ ವೈ ನಮೋ ನಮಃ
ಭವೇ ಭವೇನಾತಿಭವೇ ಭವಸ್ವ ಮಾಮ್ | ಭವೋದ್ಭವಾಯ ನಮಃ ||

ಪ್ರಾಲೇಯಾಚಲಚಂದ್ರಕುಂದಧವಳಂ ಗೋಕ್ಷೀರಫೇನ ಪ್ರಭಂ
ಭಸ್ಮಾಭ್ಯಕ್ತಮನಂಗದೇಹದಹನಜ್ವಾಲಾವಳೀಲೋಚನಮ್
ಬ್ರಹ್ಮೇಂದ್ರಾದಿಮರುದ್ಗಣೈಸ್ಸ್ತುತಿಪರೈರಭ್ಯರ್ಚಿತಂ ಯೋಗಿಭಿ-
ರ್ವಂದೇsಹಂ ಸಕಲಂ ಕಳಂಕರಹಿತಂ ಸ್ಥಾಣೋರ್ಮುಖಂ ಪಶ್ಚಿಮಮ್ ||

ಓಂ ಉಂ ಟುಂ ಠಂ ಡಂ ಢಂ ಣಂ ಊಂ ಓಂ ಓಂ ನಮೋ
ಭಗವತೇ ರುದ್ರಾಯ | ಓಂ ಶಿಂ ಪಶ್ಚಿಮಮುಖಾಯ ನಮಃ
ಕನ್ನಡದಲ್ಲಿ :

ಪಡೆವೆ ಸದ್ಯೋಜಾತನಂ ಸದ್ಯೋಜಾತ ರೂಪಶಿವಂಗೆರಗುವೆನು | ಭವಭವದ
ದುಃಖಕ್ಕೊಡ್ಡದಿರೆನ್ನ ಹೇ ಅಭವ | ಭವವಮೀರುವಂತೆನ್ನರಿವ ಪ್ರೇರಿಸು
ಭವಸಮುದ್ರದಿಂ ಪೊರೆವ ನಿನಗೆರಗುವೆ ||

ಹಿಮಪರ್ವತ ಚಂದಿರ ಮಲ್ಲಿಗೆ ಬಿಳಿಹಾಲ ನೊರೆಯಲು ಶುಭ್ರ
ಭಸ್ಮವಿಭೂತಿಯ ತನು ಕಾಮನ ಸುಟ್ಟ ಉರಿಯ ಮುಕ್ಕಣ್ಣ
ಬ್ರಹ್ಮೇಂದ್ರಮರುತಗಣ ಯೋಗಿಗಳ ಸ್ತುತಿ ಪೂಜೆಗೊಳುವ
ಚಂದ್ರಕಲೆ ಸಹಿತ ಕಲಂಕರಹಿತ ಸ್ಥಾಣುವ ಪಡುಮೊಗಕೆ ನಮಿಪೆ

ಓಂ ಉಂ ಟುಂ ಠಂ ಡಂ ಢಂ ಣಂ ಊಂ ಓಂ ಓಂ
ನಮೋ ಭಗವಂತ ರುದ್ರಂಗೆ | ಓಂ ಶಿಂ ಪಡುಮೊಗದವಗೆ ನಮನ ||

ವಿವರಣೆ :

ಪಶ್ಚಿಮ ಮುಖರೂಪನಾದ ಸದ್ಯೋಜಾತ ಶಿವನನ್ನು ಹೊಂದುತ್ತೇನೆ. ಸದ್ಯೋಜಾತ ರೂಪನಾದ ಶಿವನಿಗೆ ನಮೋ ನಮಃ. ಹೇ ಸದ್ಯೋಜಾತನೆ ! ಆಯಾಜನ್ಮದ ನಿಮಿತ್ತ ಭೂತವಾದ ಕಷ್ಟಕ್ಕಾಗಿ ನನ್ನನ್ನು ಪ್ರೇರಿಸದಿರು. ಜನ್ಮವನ್ನು ದಾಟಲು ನಿಮಿತ್ತವಾದ ತತ್ತ್ವಜ್ಞಾನಕ್ಕಾಗಿ ನನ್ನನ್ನು ಪ್ರೇರೇಪಿಸು. ಸಂಸಾರದಿಂದ ಪಾರುಮಾಡುವ ಸದ್ಯೋಜಾತನಾದ ನಿನಗೆ ಅನಂತ ನಮಸ್ಕಾರಗಳು. ನಾನು ಚಂದ್ರಕಲಾಸಹಿತವಾಗಿ ಕಳಂಕರಹಿತವಾಗಿರುವ ಸ್ಥಾಣುವಿನ ಪಶ್ಚಿಮ ಮುಖವನ್ನು ವಂದಿಸುತ್ತೇನೆ. ಸ್ಥಾಣುವಿನ ಪಶ್ಚಿಮ ಮುಖವು ಹಿಮವತ್ಪರ್ವತ, ಚಂದ್ರ, ಕುಂದಪುಷ್ಪದಂತೆ ಧವಳ ವರ್ಣದ್ದಾಗಿದೆ. ಹಸುವಿನ ಹಾಲಿನ ನೊರ್ಯಂತೆ ಶುಭ್ರಕಾಂತಿಯುಳ್ಳದ್ದಾಗಿದೆ. ಭಸ್ಮತ್ರಿಪುಂಡ್ರದಿಂದ ಲೇಪಿತವಾಗಿದೆ. ಮನ್ಮಥನ ದೇಹವನ್ನು ಸುಟ್ಟುಹಾಕುವ ಅಗ್ನಿಯ ಜ್ವಾಲೆಗಳ ಪಂಕ್ತಿಯಿಂದ ಕೂಡಿದ ಮೂರನೆಯ ಲೋಚನವುಳ್ಳದ್ದಾಗಿದೆ. ಬ್ರಹ್ಮ, ಇಂದ್ರ ಮೊದಲಾದ ಸ್ತುತಿಪರರಾದ ದೇವತಾಸಮೂಹಗಳಿಂದಲೂ ಯೋಗಿಗಳಿಂದಲೂ ಅಭಿಮುಖವಾಗಿ ಪೂಜಿಸಲ್ಪಟ್ಟಿದೆ. ಇಂಥಹ ಸ್ಥಾಣುವಿನ ಪಶ್ಚಿಮ ಮುಖವನ್ನು ನಮಸ್ಕರಿಸುತ್ತೇನೆ.

ಶಿವನ ಪಶ್ಚಿಮ ದಿಕ್ಕಿನ ಮುಖಕ್ಕೆ ಈ ರೀತಿಯಾಗಿ ವರ್ಣಗಳನ್ನು ಉಚ್ಚರಿಸಬೇಕು :
ಓಂ ಉಂ ಟುಂ ಠಂ ಡಂ ಢಂ ಣಂ ಊಂ ಓಂ
ಭಗವಂತನಾದ ರುದ್ರನಿಗೆ ನಮಸ್ಕಾರ. ಶಿವನ ಪಶ್ಚಿಮ ಮುಖಕ್ಕೆ ನಮಸ್ಕಾರ.

ಶ್ಲೋಕ - 4 - ಸಂಸ್ಕೃತದಲ್ಲಿ :

ವಾಮದೇವಾಯ ನಮೋ ಜ್ಯೇಷ್ಠಾಯ ನಮಃ ಶ್ರೇಷ್ಠಾಯ ನಮೋ
ರುದ್ರಾಯ ನಮಃ ಕಾಲಾಯ ನಮಃ ಕಲವಿಕರಣಾಯ ನಮೋ
ಬಲವಿಕರಣಾಯ ನಮೋ ಬಲಾಯ ನಮೋ ಬಲಪ್ರಮಥನಾಯ
ನಮಸ್ಸರ್ವಭೂತದಮನಾಯ ನಮೋ ಮನೋನ್ಮನಾಯ ನಮಃ ||

ಗೌರಂ ಕುಂಕುಮಪಂಕಿಲಂ ಸುತಿಲಕಂ ವ್ಯಾಪಾಂಡುಗಂಡಸ್ಥಲಂ
ಭ್ರೂವೀಕ್ಷೇಪಕಟಾಕ್ಷವೀಕ್ಷಣಲಸತ್ಸಂಸಕ್ತಕರ್ಣೋತ್ಪಲಮ್
ಸ್ನಿಗ್ಧಂ ಬಿಂಬಫಲಾಧರಪ್ರಹಸಿತಂ ನೀಲಾಲಕಾಲಂಕೃತಂ
ವಂದೇ ಪೂರ್ಣಶಶಾಂಕಮಂಡಲನಿಭಂ ವಕ್ತ್ರಂ ಹರಸ್ಯೋತ್ತರಮ್ ||

ಓಂ ಏಂ ತಂ ಥಂ ದಂ ಧಂ ನಂ ಐಂ ಓಂ ಓಂ ನೋ ಭಗವತೇ
ರುದ್ರಾಯ | ಓಂ ವಾಂ ಉತ್ತರಮುಖಾಯ ನಮಃ
ಕನ್ನಡದಲ್ಲಿ :

ವಾಮದೇವಗೆ ನಮಿಪೆ ಜ್ಯೇಷ್ಠನಿಗೆ ನಮಿಸುವೆನು
ಶ್ರೇಷ್ಠಂಗೆ ನಮಿಪೆ ರುದ್ರನಿಗೆ ನಮಿಪೆ ಕಾಲರೂಪನಿಗೆ ನಮಿಪೆ
ಬಂಧುರ ಜಗವ ಸೃಜಿಸಿದವಂಗೆ ನಮಿಪೆ ರಕ್ಕಸಬಲ ಮುರಿವನಿಗೆ ನಮಿಪೆ
ಸಕಲಬಲರೂಪಂಗೆ ನಮಿಪೆ ಸರ್ವಭೂತದಮನಗೆ ನಮಿಪೆ
ಸರ್ವಜ್ಞಂಗೆ ಸರ್ವಶ್ರೇಷ್ಠಂಗೆ ನಮಿಪೆ ||

ಗೌರವರ್ಣ ಕುಂಕುಮಬಳಿದ ಕಪೋಲ ಶೋಭಿಸುವ ತಿಲಕ
ಭ್ರೂಚಲನೆ ಕಡೆಗಣ್ಣೋಟ ಕರ್ಣರ್ಣೋತ್ಪಲದಿಂದ ಸೆಳೆವ
ತೊಂಡೆಹಣ್ಣಂತಿಹ ಮಧುರ ಅಧರ ಕಡುಗಪ್ಪು ಮುಂಗುರುಳ
ಪೂರ್ಣಚಂದ್ರ ಮಂಡಲದಂತಿಹ ಹರನ ಬಡಗುಮೊಗಕೆ ನಮಿಪೆ

ಓಂ ಏಂ ತಂ ಥಂ ದಂ ಧಂ ನಂ ಐಂ ಓಂ ಓಂ
ನಮಿಪೆ ಭಗವಂತ ರುದ್ರಂಗೆ |
ಓಂ ವಾಂ ಉತ್ತರಮುಖದವನೆ ನಮನ


ವಿವರಣೆ :

ಸುಂದರವೂ ದೇದೀಪ್ಯಮಾನವೂ ಆದ ಶಿವನ ವಾಮದೇವ ಎಂಬ ಉತ್ತರದಿಕ್ಕಿನ ಮುಖಕ್ಕೆ ನಮಸ್ಕಾರ. ಸಮಸ್ತ ಜಗತ್ತಿನ ಸೃಷ್ಟಿಗೆ ಮೊದಲು ಇದ್ದ ಜ್ಯೇಷ್ಟನಾದ ಶಿವನಿಗೆ ನಮಸ್ಕಾರ. ಅತ್ಯಂತ ಶ್ರೇಷ್ಠನಾದವನಿಗೆ ನಮಸ್ಕಾರ. ಪ್ರಳಯಕಾಲದಲ್ಲಿನ ರುದ್ರನಿಗೆ ನಮಸ್ಕಾರ. ಕಾಲರೂಪನಾದವನಿಗೆ ನಮಸ್ಕಾರ. ಸುಖದಾಯಕವಾದ ವಿವಿಧ ಜಗತ್ತನ್ನು ಸೃಷ್ಟಿಸುವವನಾದ ಶಿವನಿಗೆ ನಮಸ್ಕಾರರಾಕ್ಷಸರ ಬಲವನ್ನು ನಾಶಪಡಿಸುವವನಿಗೆ ನಮಸ್ಕಾರ. ಸಕಲಶಕ್ತಿರೂಪನಾದವನಿಗೆ ನಮಸ್ಕಾರ. ಸ್ವೇಚ್ಛೆಯಿಂದಲೇ ಸಕಲಶಕ್ತಿಯನ್ನೂ ಉಪಸಂಹಾರ ಮಾಡುವವನಿಗೆ ನಮಸ್ಕಾರ. ಸಮಸ್ತ ಭೂತಗಳನ್ನೂ (ಪ್ರಾಣಿಗಳನ್ನೂ) ಶಿಕ್ಷಿಸುವವನಿಗೆ ನಮಸ್ಕಾರ.

ಶಿವನ ಉತ್ತರದಿಕ್ಕಿನ ಮುಖವನ್ನು ವಂದಿಸುತ್ತೇನೆ. ಆ ಮುಖವು ಗೌರವವರ್ಣವುಳ್ಳದ್ದಾಗಿದೆ. ಕುಂಕುಮಕೇಸರಿಯ ಲೇಪದಿಂದ ಲೇಪಿತವಾಗಿದೆ. ಉತ್ತಮವಾದ ತಿಲಕವನ್ನು ಹೊಂದಿದೆ. ವಿಶೇಷವಾಗಿ ಶುಭ್ರವಾಗಿರುವ ಕಪೋಲಸ್ಥಲವುಳ್ಳದ್ದಾಗಿದೆ. ಭ್ರೂವಿಕ್ಷೇಪ ಮತ್ತು ಕಟಾಕ್ಷವೀಕ್ಷಣದಿಂದ ಶೋಭಿಸುತ್ತಿದೆ. ಕರ್ಣೋತ್ಪಲಸಂಯುಕ್ತವಾಗಿದೆ. ಮನೋಹರವಾಗಿದೆ. ಬಿಂಬಫಲ (ತೊಂಡೆಹಣ್ಣು) ಸದೃಶವಾದ ಅಧರದಿಂದ ಕೂಡಿ ನಗುಮುಖವುಳ್ಳದ್ದಾಗಿದೆ. ನೀಲವರ್ಣದ ಮುಂಗುರುಳುಗಳಿಂದ ಅಲಂಕೃತವಾಗಿದೆ. ಆ ಮುಖವು ಪೂರ್ಣಚಂದ್ರ ಮಂಡಲಕ್ಕೆ ಸದೃಶವಾಗಿದೆ. ಶಿವನ ಅಂಥಹ ಉತ್ತರ ದಿಕ್ಕಿನ ಮುಖಕ್ಕೆ ನಮಸ್ಕರಿಸುತ್ತೇನೆ.

ಶಿವನ ಉತ್ತರ ದಿಕ್ಕಿನ ಮುಖಕ್ಕೆ ಈ ರೀತಿಯಾಗಿ ವರ್ಣಗಳನ್ನು ಉಚ್ಚರಿಸಬೇಕು :
ಓಂ ಏಂ ತಂ ಥಂ ದಂ ಧಂ ನಂ ಐಂ ಓಂ - ಎಂದು ತ ವರ್ಗದ ಅಕ್ಷರಗಳನ್ನು ಉಚ್ಚರಿಸಬೇಕು. ಭಗವಂತನಾದ ರುದ್ರನಿಗೆ ನಮಸ್ಕಾರ. ಓಂ ವಾಂ ಶಿವನ ಉತ್ತರ ಮುಖಕ್ಕೆ ನಮಸ್ಕಾರ.

ಶ್ಲೋಕ - 5 ಸಂಸ್ಕೃತದಲ್ಲಿ :

ಈಶಾನಸ್ಸರ್ವವಿದ್ಯಾನಾಮೀಶ್ಚರಸ್ಸರ್ವಭೂತಾನಾಂ
ಬ್ರಹ್ಮಾಧಿಪತಿರ್ಬಹ್ಮಣೋsಧಿಪತಿರ್ಬ್ರಹ್ಮಾ ಶಿವೋ ಮೇ ಅಸ್ತು ಸದಾಶಿವೋಮ್ ||

ವ್ಯಕ್ತಾವ್ಯಕ್ತಗುಣೇತರಂ ಸುವಿಮಲಂ ಷಟ್ತ್ರಿಂಶತತ್ತ್ವಾತ್ಮಕಂ
ತಸ್ಮಾದುತ್ತರತತ್ತ್ವಮಕ್ಷರಿತಿ ಧ್ಯೇಯಂ ಸದಾ ಯೋಗಿಭಿಃ

ವಂದೇ ತಾಮಸವರ್ಜಿತಂ ತ್ರಿಣಯನಂ ಸೂಕ್ಷ್ಮಾತಿಸೂಕ್ಷ್ಮಾತ್ಪರಂ
ಶಾಂತಂ ಪಂಚಮಮೀಶ್ವರಸ್ಯ ವದನಂ ಖವ್ಯಾಪಿ ತೇಜೋಮಯಮ್

ಓಂ ಓಂ ಪಂ ಫಂ ಬಂ ಭಂ ಮಂ ಔಂ ಓಂ ಓಂ ನಮೋ ಭಗವತೇ
ರುದ್ರಾಯ | ಓಂ ಯಂ ಊರ್ಧ್ವಮುಖಾಯ ನಮಃ
ಕನ್ನಡದಲ್ಲಿ :

ಸಕಲವಿದ್ಯೆಗಳಧಿಪ ಎಲ್ಲ ಜೀವಿಗಳೊಡೆಯ
ವೇದಗಳ ಪಾಲಕನವನು ಬ್ರಹ್ಮನಧಿಪತಿಯು
ಪರಮಾತ್ಮನಾದೇವ ಶಾಂತನೆನಗಾಗಲಾ ಸದಾಶಿವನೆ ನಾನಾಗುವೆ ||
ತೋರುವ ತೋರದ ಗುಣಗಳಿಂದ ಬೇರಾದ ವಿಮಲ ಮುವ್ವತ್ತಾರು ತತ್ತ್ಚ -
‎ವವಕು ಮಿಗಿಲಹುದನಕ್ಷರವೆನುತ ಧ್ಯಾನಿಪರು ಯೋಗಿಗಳು
‎ತಮವಿರದ ಮುಕ್ಕಣ್ಣ ಸೂಕ್ಷ್ಮಾತಿಸೂಕ್ಷ್ಮಗಳ ಮೀರಿದ
‎ಗಗನವ್ಯಾಪಿ ತೇಜಸ್ವಿ ಶಾಂತ ಶಿವನೈದನೆ ಮೊಗಕೆ ನಮಿಪೆ
ಓಂ ಓಂ ಪಂ ಫಂ ಬಂ ಭಂ ಮಂ ಔಂ ಓಂ ಓಂ
ನಮೋ ಭಗವಂತ ರುದ್ರಂಗೆ
ಓಂ ಯಂ ಊರ್ಧ್ವಮುಖನಿಗೆ ನಮನ ||


ವಿವರಣೆ :

ಊರ್ಧ್ವಮುಖನಾದ ಶಿವನು ಸಮಸ್ತ ವಿದ್ಯೆಗಳಿಗೂ ನಿಯಾಮಕನು. ಸಮಸ್ತ ಪ್ರಾಣಿಗಳಿಗೂ ನಿಯಾಮಕನು. ವೇದದ ಅಧಿಪಾಲಕನು. ಅಂತೆಯೇ ಹಿರಣ್ಯಗರ್ಭ ಬ್ರಹ್ನದೇವನಿಗೂ ಅಧಿಪತಿಯು. ಅತ್ಯಂತ ದೊಡ್ಡದಾಗಿ ಬೆಳೆದಿರುವ ಬ್ರಹ್ಮನು (ಪರಮಾತ್ಮನು). ಆ ದೇವನು ನನ್ನನ್ನು ಅನುಗ್ರಹಿಸುವುದಕ್ಕಾಗಿ ಶಾಂತನಾಗಲಿ. ಆ ಸದಾಶಿವನೇ ನಾನಾಗುವೆನು.

ಆಕಾಶವ್ಯಾಪಿಯಾಗಿ ತೇಜೋಮಯವಾಗಿರುವ ಈಶ್ವರನ  ಐದನೆಯ ಮುಖವನ್ನು ವಂದಿಸುತ್ತೇನೆ. ಆ ಮುಖವು ವ್ಯಕ್ತವೂ ಅವ್ಯಕ್ತವೂ ಆದ ಗುಣಗಳಿಂದ ಬೇರೆಯಾದುದು. ಅತ್ಯಂತ ಶುಭ್ರವಾದುದುಮುವತ್ತಾರು ತತ್ತ್ವಾತ್ಮಕವಾಗಿರುವುದು. ಆ ತತ್ತ್ವಗಳಿಗಿಂತಲೂ (36 ತತ್ತ್ವಾತ್ಮಕವಾಗಿರುವುದಕ್ಕಿಂತಲೂ) ಮೇಲಿನದಾದ ತತ್ತ್ವವನ್ನು ಅಕ್ಷರವೆಂಬುದಾಗಿ 
(ಓಂಕಾರವೆಂಬುದಾಗಿ - ನಾಶರಹಿತವಾದುದು ಎಂಬುದಾಗಿ) ಸದಾ ಯೋಗಿಗಳು ಧ್ಯಾನಿಸುತ್ತಾರೆ. ಆ ಮುಖವು ಸದಾ ಯೋಗಿಗಳಿಂದ ಧ್ಯಾನಿಸಲ್ಪಡುತ್ತದೆ. ಆ ಮುಖವು ತಾಮಸಗುಣ ರಹಿತವಾಗಿದೆ. ಆ ಮುಖದಲ್ಲಿ ಮೂರು ಕಣ್ಣುಗಳಿವೆ. ಅದು ಸೂಕ್ಷ್ಮಕ್ಕಿಂತಲೂ ಅತಿಸೂಕ್ಷ್ಮಕ್ಕಿಂತಲೂ ಪರವಾದುದು. ಆ ಮುಖವು ಅತ್ಯಂತ ಶಾಂತವಾಗಿದೆ. ಈಶ್ವರನ ಅಂಥಹ ಐದನೆಯ ಮುಖವನ್ನು ವಂದಿಸುತ್ತೇನೆ.

ಶಿವನ ಊರ್ಧ್ವದಿಕ್ಕಿನ ಮುಖಕ್ಕೆ ಈ ರೀತಿಯಾಗಿ ವರ್ಣಗಳನ್ನು ಉಚ್ಚರಿಸಬೇಕು :
ಓಂ ಓಂ ಪಂ ಫಂ ಬಂ ಭಂ ಮಂ ಔಂ ಓಂ - ಎಂಬುದಾಗಿ ಪ ವರ್ಗದ ಅಕ್ಷರಗಳನ್ನು ಉಚ್ಚರಿಸಬೇಕುಓಂ ಭಗವಂತನಾದ ರುದ್ರನಿಗೆ ನಮನಗಳು. ಓಂ ಯಂ ಶಿವನ ಊರ್ಧ್ವಮುಖಕ್ಕೆ ನಮಸ್ಕಾರಗಳು.

ಶ್ಲೋಕ - 6 - ಸಂಸ್ಕೃತದಲ್ಲಿ :

ಪೂರ್ವೇ ಪಶುಪತಿಃ ಪಾತು ದಕ್ಷಿಣೇ ಪಾತು ಶಂಕರಃ
ಪಶ್ಚಿಮೇ ಪಾತು ವಿಶ್ವೇಶೋ ನೀಲಕಂಠಸ್ತತೋತ್ತರೇ ||
ಐಶಾನ್ಯಾಂ ಪಾತು ಮಾಂ ಶರ್ವೋ ಹ್ಯಾಗ್ನೇಯ್ಯಾಂ ಪಾರ್ವತೀಪತಿಃ
ನೈರ್ ಋತ್ಯಾಂ ಪಾತು ಮಾಂ ರುದ್ರೋ ವಾಯವ್ಯಾಂ ನೀಲಲೋಹಿತಃ ||
ಊರ್ಧ್ವೇ ತ್ರಿಲೋಚನಃ ಪಾತು ಅಧರಾಯಾಂ ಮಹೇಶ್ವರಃ
ಏತಾಭ್ಯೋ ದಶಧಿಗ್ಭ್ಯಸ್ತು ಸರ್ವತಃ ಪಾತು ಶಂಕರಃ ||
ಕನ್ನಡದಲ್ಲಿ :

ಮೂಡಣದಿ ಪಶುಪತಿ ಪೊರೆಯಲಿ ತೆಂಕಣದಿ ಶಂಕರನು
ಪಡುವಣದಿ ಪೊರೆಯಲಿ ವಿಶ್ವೇಶ ನೀಲಕಂಠನುತ್ತರದಿ
ಈಶಾನ್ಯದಲಿ ಪೊರೆಯಲೆನ್ನನು ಶರ್ವನಾಗ್ನೇಯದಲಿ ಪಾರ್ವತೀಪತಿ
ನೈರುತ್ಯದಲಿ ಪೊರೆಯಲೆನ್ನನು ರುದ್ರ ವಾಯುವ್ಯದಲಿ ನೀಲಲೋಹಿತ
ಮೇಲೆ ಮೂರುಕಣ್ಣವನು ಪೊರೆಯಲಿ ಕೆಳಗೆ ಮಹೇಶ್ವರನು
ಈ ಹತ್ತು ದಿಕ್ಕಿನಿಂದಲೆಲ್ಲೆಡೆಯಿಂದ ಪೊರೆಗೆ ಶಂಕರನು

ವಿವರಣೆ :

ಪೂರ್ವದಲ್ಲಿ ಪಶುಪತಿಯು ರಕ್ಷಿಸಲಿ. ದಕ್ಷಿಣದಲ್ಲಿ ಶಂಕರನು ರಕ್ಷಿಸಲಿ. ಪಶ್ಚಿಮದಲ್ಲಿ ವಿಶ್ವೇಶನು ರಕ್ಷಿಸಲಿ. ಉತ್ತರದಲ್ಲಿ ನೀಲಕಂಠನು ರಕ್ಷಿಸಲಿ.
ಶರ್ವನು ನನ್ನನ್ನು ಈಶಾನ್ಯದಲ್ಲಿ ಕಾಪಾಡಲಿ. ಅಗ್ನೇಯ ದಿಕ್ಕಿನಲ್ಲಿ ನನ್ನನ್ನು ಪಾರ್ವತೀಪತಿಯು ಕಾಪಾಡಲಿ. ನೈಋತ್ಯದಲ್ಲಿ ನನ್ನನ್ನು ರುದ್ರನು ಕಾಪಾಡಲಿ. ವಾಯುವ್ಯದಲ್ಲಿ ನೀಲಲೋಹಿತನು ಕಾಪಾಡಲಿ. ಊರ್ಧ್ವದಲ್ಲಿ ತ್ರಿಲೋಚನನು ಕಾಪಾಡಲಿ. ಕೆಳಗಡೆಯಲ್ಲಿ ನನ್ನನ್ನು ಮಹೇಶ್ವರನು ಕಾಪಾಡಲಿ. ಈ ಎಂಟು ದಿಕ್ಕುಗಳಿಂದಲೂ ನನ್ನನ್ನು ಶಂಕರನು ಕಾಪಾಡಲಿ.

ಲೇಖನದ ಮೂಲ :
ಸಂಸ್ಕೃತ ಹಾಗೂ ಕನ್ನಡ ಶ್ಲೋಕಗಳು : ಸವಿಗನ್ನಡ ಸ್ತೋತ್ರಚಂದ್ರಿಕೆ.
ವಿವರಣೆ : ಸಸ್ವರ ಮಹಾನ್ಯಾಸಾದಿ ಮಂತ್ರಾಃ - ವಿದ್ವಾನ್ ಶೇಷಾಚಲ ಶರ್ಮ.































Comments

Popular posts from this blog

ಶಿವ ಸಂಕಲ್ಪ ಸೂಕ್ತ ( ಶುಕ್ಲಯಜುರ್ವೇದ, ವಾಜಸನೇಯ ಸಂಹಿತಾ)

ಮಂತ್ರಪುಷ್ಪ (ತೈತ್ತರೀಯ ಆರಣ್ಯಕ)

ಪುರುಷ ಸೂಕ್ತ