ಶ್ರೀ ರುದ್ರಪ್ರಶ್ನಃ - ಚಮಕಾಧ್ಯಾಯ



ಶ್ರೀ ರುದ್ರಪ್ರಶ್ನಃ - ಚಮಕಾಧ್ಯಾಯ
ಕೃಷ್ಣಯಜುರ್ವೇದ ತೈತ್ತರೀಯ ಸಂಹಿತಾ
ಚತುರ್ಥಂ ವೈಶ್ವದೇವಂ ಕಾಂಡಮ್

ಪ್ರಥಮಾನುವಾಕ - ಸಂಸ್ಕೃತದಲ್ಲಿ :
ಓಂ ಅಗ್ನಾವಿಷ್ಣೂ ಸಜೋಷಸೇಮಾ ವರ್ಧಂತು ವಾಂ ಗಿರಃ | ದ್ಯುಮ್ನೈರ್ವಾಜೇಭಿರಾಗತಮ್ |
ವಾಜಶ್ಚ ಮೇ ಪ್ರಸವಶ್ಚ ಮೇ ಪ್ರಯತಿಶ್ಚ ಮೇ ಪ್ರಸಿತಿಶ್ಚ ಮೇ ಧೀತಿಶ್ಚ ಮೇ ಕ್ರತುಶ್ಚ ಮೇ ಸ್ವರಶ್ಚ ಮೇ ಶ್ಲೋಕಶ್ಚ ಮೇ ಶ್ರಾವಶ್ಚ ಮೇ ಶ್ರುತಿಶ್ಚ ಮೇ ಜ್ಯೋತಿಶ್ಚಮೇ ಸುವಶ್ಚ ಮೇ ಪ್ರಾಣಶ್ಚ ಮೇsಪಾನಶ್ಚ ಮೇ ವ್ಯಾನಶ್ಚ ಮೇsಸುಶ್ಚ ಮೇ ಚಿತ್ತಂ ಚ ಮ ಆಧೀತಂ ಚ ಮೇ ವಾಕ್ಚಮೇ ಮನಶ್ಚ ಮೇ ಚಕ್ಷುಶ್ಚ ಮೇ ಶ್ರೋತ್ರಂ ಚ ಮೇ ದಕ್ಷಶ್ಚ ಮೇ ಬಲಂ ಚ ಮ ಓಜಶ್ಚ ಮೇ ಸಹಶ್ಚ ಮ ಆಯುಶ್ಚ ಮೇ ಜರಾ ಚ ಮ ಆತ್ಮಾ ಚ ಮೇ ತನೂಶ್ಚ ಮೇ ಶರ್ಮ ಚ ಮೇ ವರ್ಮ ಚ ಮೇsಂಗಾನಿ ಚ ಮೇsಸ್ಥಾನಿಚ ಮೇ ಪರೂಗ್ಂಷಿ ಚ ಮೇ ಶರೀರಾಣಿ ಚ ಮೇ ||

ಮೊದಲನೇ ಅನುವಾಕ - ಕನ್ನಡದಲ್ಲಿ :
ಓಂ ಅಗ್ನಿವಿಷ್ಣುಗಳು ಸಮಾನ ಪ್ರೀತಿಯುಳ್ಳವರಾಗಿ ನಿಮ್ಮ ಸ್ತುತಿರೂಪದೆಮ್ಮ ನುಡಿಗಳನು ಪೋಷಿಸಿರಿ | ದ್ರವ್ಯಗಳ ಅನ್ನಗಳ ಸಹಿತ ಇತ್ತ ಬನ್ನಿ |
ಅನ್ನ ಸಮೃದ್ಧಿಯಿರಲೆನಗೆ ಶಮದಮಗಳಿರಲೆನಗೆ ಶುದ್ಧಿಯಿರಲೆನಗೆ ಉತ್ಸಾಹವಿರಲೆನಗೆ ಅನ್ನಧಾರಣೆಯ ಶಕ್ತಿಯಿರಲೆನಗೆ ಯಜ್ಞವಿರಲೆನಗೆ ಉದಾತ್ತಾದಿ ಸ್ವರಸಿದ್ಧಿಸಲೆನಗೆ ಸ್ತುತಿಗಳಿರಲೆನಗೆ ನುಡಿಗಳಿರಲೆನಗೆ ಶ್ರುತಿಯಿರಲೆನಗೆ ಜ್ಞಾನಪ್ರಕಾಶವಿರಲೆನಗೆ ಸಗ್ಗವಿರಲೆನಗೆ ಪ್ರಾಣರೂಪದ ಅಪಾನರೂಪದ ವ್ಯಾನರೂಪದ ವಾಯುಗಳಿರಲೆನಗೆ ವೃತ್ತಿಗಳಿರಲೆನಗೆ ಮನಶ್ಶಕ್ತಿಯಿರಲೆನಗೆ ಅದರಿಂದೊದಗುವ ದ್ರವ್ಯಾದಿಗಳಿರಲೆನಗೆ ಮಾತಿರಲೆನಗೆ ಸುಮನವಿರಲೆನಗೆ ಕಣ್ಣುಕಿವಿಗಳು ಜ್ಞಾನೇಂದ್ರಿಯ ಪಟುತ್ವವಿರಲೆನಗೆ ಕರ್ಮೇಂದ್ರಿಯಬಲವಿರಲೆನಗೆ ಓಜಸ್ಸಿರಲೆನಗೆ ಸಹನೆಯಿರಲೆನಗೆ ಆಯುಷ್ಯವಿರಲೆನಗೆ ವೃಧ್ಯಾಪ್ಯಸುಖವಿರಲೆನಗೆ ಆತ್ಮದರಿವಿರಲೆನಗೆ ಧೃಢಕಾಯವಿರಲೆನಗೆ ಸುಖಗಳಿರಲೆನಗೆ ಕವಚಗಳಿರಲೆನಗೆ ಅವಯವಗಳಿರಲೆನಗೆ ಸುಸ್ಥಿರ ಅಸ್ಥಿರಗಳಿರಲೆನಗೆ ಹಸ್ತ ಪಾದಗಳ ಬೆರಳು ಪರ್ವಗಳಿರಲೆನಗೆ ದೇಹದೆಲ್ಲ ಭಾಗಗಳು ಸಂಪನ್ನವಾಗಿರಲಿ ಎನಗೆ ||

ವಿವರಣೆ :
ಓ ಅಗ್ನಿ ಮತ್ತು ವಿಷ್ಣುಗಳೇ ! ನೀವಿಬ್ಬರೂ ಸಮಾನ ಪ್ರೀತಿಯುಳ್ಳವರಾಗಿ ಇರಿ. ನಿಮ್ಮ ವಿಷಯಕವಾದ ಈ ಸ್ತುತಿವಚನಗಳು ವೃದ್ಧಿಹೊಂದಲಿ. ಧನಸಂಪತ್ತುಗಳಿಂದಲೂ ಅನ್ನಗಳಿಂದಲೂ ಸಹಿತರಾಗಿ ಈ ಸ್ಥಾನಕ್ಕೆ ಬನ್ನಿ (ಈ ಪೂಜಕನ ಸನ್ನಿಧಿಗೆ ಬನ್ನಿ).
ನನಗೆ ಅನ್ನ ಸಮೃದ್ಧಿಯು ಸಂಪನ್ನವಾಗಲಿ. ಅನ್ನವನ್ನು ಭಕ್ಷಿಸಲೆಂಬ ಅನುಜ್ಞೆಯು ನನಗುಂಟಾಗಲಿ. ಶುದ್ಧಿಯು ನನಗುಂಟಾಗಲಿ. ಅನ್ನದ ವಿಷಯದಲ್ಲಿ ನನಗೆ ಕತ್ಸುಕ್ಯವು ಉಂಟಾಗಲಿ. ಅನ್ನಧಾರಣವು ನನಗುಂಟಾಗಲಿ. ಅನ್ನಹೇತುವಾದ ಯಜ್ಞವು ನನಗುಂಟಾಗಲಿ. ಮಂತ್ರಗತವಾದ ಉದಾತ್ತಾದಿ ಸ್ವರವು ನನಗೆ ಸಿದ್ಧಿಸಲಿ. ಸ್ತುತಿಯು ನನಗೆ ಸಿದ್ಧಿಸಲಿ. ಶ್ರವಣ ಮಾಡಿಸುವ ಸಾಮರ್ಥ್ಯವು ನನಗೆ ಸಿದ್ಧಿಸಲಿ. ಶ್ರವಣ ಸಾಮರ್ಥ್ಯವು ನನಗೆ ಸಿದ್ಧಿಸಲಿ. ಪ್ರಕಾಶವು (ವಿಷಯದ ಪ್ರತಿಭಾಸವು) ನನಗುಂಟಾಗಲಿ. ಸ್ವರ್ಗವು ನನಗೆ ಸಿದ್ಧಿಸಲಿ. ಪ್ರಾಣರೂಪ ವಾಯುವು ನನಗೆ ಸಂಪನ್ನವಾಗಲಿ. ಅಪಾನ ವಾಯುವು ನನಗೆ ಸಂಪನ್ನವಾಗಲಿ. ವ್ಯಾನರೂಪ ವಾಯುವು ನನಗೆ ಸಂಪನ್ನವಾಗಲಿ. ವೃತ್ತಿ ರೂಪವಾದ ವಾಯುವು ನನಗೆ ಸಿದ್ಧಿಸಲಿ. ಮನೋಜನ್ಯವಾದ ಜ್ಞಾನವು ನನಗೆ ಸಿದ್ಧಿಸಲಿ. ಅಂತಹ ಜ್ಞಾನದಿಂದ ವಿಷಯೀಕೃತವಾದ ದ್ರವ್ಯವು ನನಗೆ ಸಂಪನ್ನವಾಗಲಿ. ವಾಕ್ ನನಗೆ ಸಿದ್ಧಿಸಲಿ. ಉತ್ತಮವಾದ ಮನಸ್ಸು ನನಗುಂಟಾಗಲಿ. ಚಕ್ಷುರಿಂದ್ರಿಯವು ನನಗೆ ಸಂಪನ್ನವಾಗಲಿ. ಶ್ರೋತ್ರೇಂದ್ರಿಯವು ನನಗೆ ಸಂಪನ್ನವಾಗಲಿ. ಜ್ಞಾನೇಂದ್ರಿಯ-ಗತವಾದ ಕೌಶಲವು ನನಗುಂಟಾಗಲಿ. ಕರ್ಮೇಂದ್ರಿಯಗತವಾದ ಸಾಮರ್ಥ್ಯವು ನನಗುಂಟಾಗಲಿ. ಬಲಹೇತುವಾದ ಓಜಸ್ಸೆಂಬ ಎಂಟನೆಯ ಧಾತುವು ನನಗುಂಟಾಗಲಿ. ಶತ್ರುಗಳನ್ನು ಆಕ್ರಮಿಸುವ ಶಕ್ತಿಯು ನನಗುಂಟಾಗಲಿ. ದೀರ್ಘಾಯಸ್ಸು ನನಗುಂಟಾಗಲಿ. ಆಯುಸ್ಸಿನ ಕೊನೆಯಲ್ಲಿ ಉಂಟಾಗುವ ಯೋಗ್ಯವಾದ ಮುದಿತನವು ನನಗೆ ಉಂಟಾಗಲಿ. ಶಾಸ್ತ್ರಪ್ರಸಿದ್ಧನಾದ ಪರಮಾತ್ಮನು ನನಗೆ ಸಾಕ್ಷಾತ್ಕಾರವಾಗಲಿ. ಉತ್ತಮವಾದ ಸನ್ನಿವೇಶವುಳ್ಳ ಶರೀರವು ನನಗೆ ಸಂಪನ್ನವಾಗಲಿ. ಸುಖವು ನನಗೆ ಸಿದ್ಧಿಸಲಿ. ಶರೀರರಕ್ಷಕವಾದ ಕವಚ ಮುಂತಾದುದು ನನಗೆ ಸಿದ್ಧಿಸಲಿ. ಸಂಪೂರ್ಣವಾದ ಶರೀರದ ಅವಯವಗಳು ನನಗೆ ಸಂಪನ್ನವಾಗಲಿ. ಆಯಾಸ್ಥಾನದಲ್ಲಿರುವ ಅಸ್ಥಿಗಳು ನನಗೆ ಉಂಟಾಗಲಿ. ಬೆರಳುಗಳ ಪರ್ವಗಳು ನನಗೆ ಚೆನ್ನಾಗಿ ಉಂಟಾಗಲಿ. ಇತರ ಶರೀರದ ಭಾಗಗಳು ನನಗೆ ಸಂಪನ್ನವಾಗಲಿ. ಆತ್ಮಚೈತನ್ಯದಿಂದ ಕೂಡಿರುವ ಈ ಸಮಸ್ತ ದೇಹವೂ ಯಜ್ಞಕ್ಕಾಗಿ ರುದ್ರದೇವನ ಅಭಿಷೇಕ - ಪೂಜೆಗಾಗಿ ಸಂಪನ್ನವಾಗಲಿ ಎಂದು ಈ ಮೂಲಕ ಪೂಜಕನು ಪ್ರಾರ್ಥಿಸುತ್ತಾನೆ.

ದ್ವಿತೀಯಾನುವಾಕ - ಸಂಸ್ಕೃತದಲ್ಲಿ :
ಜ್ಯೇಷ್ಠ್ಯಂ ಚ ಮ ಅಧಿಪತ್ಯಂ ಚ ಮೇ ಮನ್ಯುಶ್ಚ ಮೇ ಭಾಮಶ್ಚ ಮೇsಮಶ್ಚ ಮೇsಂಭಶ್ಚ ಮೇ ಜೇಮಾ ಚ ಮೇ ಮಹಿಮಾ ಚ ಮೇ ವರಿಮಾ ಚ ಮೇ ಪ್ರಥಿಮಾ ಚ ಮೇ ವರ್ಷ್ಮಾ ಚ ಮೇ ದ್ರಾಘುಯಾ ಚ ಮೇ ವೃದ್ಧಂ ಚ ಮೇ ವೃದ್ಧಿಶ್ಚ ಮೇ ಸತ್ಯಂ ಚ ಮೇ ಶ್ರದ್ಧಾ ಚ ಮೇ ಜಗಶ್ಚ ಮೇ ಧನಂ ಚ ಮೇ ವಶಶ್ಚ ಮೇ ತ್ವಿಷಿಶ್ಚ ಮೇ ಕ್ರೀಡಾ ಚ ಮೇ ಸೂಕ್ತಂ ಚ ಮೇ ಸುಕೃತಂ ಚ ಮೇ ವಿತ್ತಂ ಚ ಮೇ ವೇದ್ಯಂ ಚ ಮೇ ಭೂತಂ ಚ ಮೇ ಭವಿಷ್ಯಶ್ಚ ಮೇ ಸುಗಂ ಮೇ ಸುಪಥಂ ಚ ಮ ಋದ್ಧಂ ಚ ಮ ಋದ್ಧಿಶ್ಚ ಮೇಕ್ಲ್ ಪ್ತಂ ಚ ಮೇ ಕ್ಲ್ ಪ್ತಿಶ್ಚ ಮೇ ಮತಿಶ್ಚ ಮೇ ಸುಮತಿಶ್ಚ ಮೇ ||

ಎರಡನೇ ಅನುವಾಕ : - ಕನ್ನಡದಲ್ಲಿ :
ಹಿರಿತನವಿರಲೆನಗೆ ಸ್ವಾಮಿತ್ವವಿರಲೆನಗೆ ಕೆಡುಕ ಸಹಿಸದ ಗುಣವಿರಲೆನಗೆ ಕಷ್ಟಲೆಕ್ಕಿಸದ ಮನವಿರಲೆನಗೆ ಅಪ್ರಮೇಯತ್ವವಿರಲೆನಗೆ ಜಲವಿರಲೆನಗೆ ಜಯವಿರಲೆನಗೆ ಮಹತ್ವವಿರಲೆನಗೆ ಪೂಜ್ಯತೆಯಿರಲೆನಗೆ ವಿಸ್ತಾರವಿರಲೆನಗೆ ಪುತ್ರ ಪೌತ್ರಾದಿಗಳಿರಲೆನಗೆ ದೀರ್ಘಸಂತತಿಯಿರಲೆನಗೆ ಸಂಪದವಿರಲೆನಗೆ ಏಳ್ಗೆಯಿರಲೆನಗೆ ದಿಟವಿರಲೆನಗೆ ಶ್ರದ್ಧೆಯಿರಲೆನಗೆ ದೇಹಕಾಂತಿಯಿರಲೆನಗೆ ಕ್ರೀಡೆಯಿರಲೆನಗೆ ಮೋದವಿರಲೆನಗೆ ಜನಿಸಿರುವ ಸಂತಾನವಿರಲೆನಗೆ ಜನಿಸುವ ಸಂತಾನವಿರಲೆನಗೆ ಸೂಕ್ತ ಸಿದ್ಧಿಸಲೆನಗೆ ಪುಣ್ಯ ಸಿದ್ಧಿಸಲೆನಗೆ ಬಂದ ಧನವಿರಲೆನಗೆ ಬರುವ ಧನವಿರಲೆನಗೆ ಬಂದ ದ್ರವ್ಯಗಳಿರಲೆನಗೆ ಬರುವ ದ್ರವ್ಯಗಳಿರಲೆನಗೆ ಸುಲಭ ಹಾದಿಗಳಿರಲೆನಗೆ ಸುಮಾರ್ಗಗಳಿರಲೆನಗೆ ಗೈದ ಸುಕರ್ಮಫಲವಿರಲೆನಗೆ ಮುಂದೆ ಗೈವ ಸುಕರ್ಮಫಲಗಳಿರಲೆನಗೆ ನಿಶ್ಚಲಮತಿಯಿರಲೆನಗೆ ಸುಮತಿಯಿರಲೆನಗೆ.

ವಿವರಣೆ :
ಹಿರಿತನವು ನನಗೆ ಸಂಪನ್ನವಾಗಲಿ. ಸ್ವಾಮಿತ್ವವು ನನಗುಂಟಾಗಲಿ. ಮಾನಸಿಕವಾದ ಕ್ರೋಧವಿಶೇಷವು ನನಗುಂಟಾಗಲಿ. ಶತ್ರುಗಳು ನನ್ನನ್ನು ತಿಳಿಯಲು ಸಾಧ್ಯವಾಗದಂತಹ ಅಪ್ರಮೇಯತ್ವವು ನನಗುಂಟಾಗಲಿ.
ಶೈತ್ಯ ಮತ್ತು ಮಾಧುರ್ಯದಿಂದ ಕೂಡಿದ ಉದಕವು ನನಗೆ ಸಿದ್ಧಿಸಲಿ. ಜಯ ಸಾಮರ್ಥ್ಯವು ನನಗುಂಟಾಗಲಿ. ಜಯ ಸಂಪಾದನೆಯಿಂದುಂಟಾದ ಧನಾದಿ ಸಂಪತ್ತಿ ಪ್ರಯುಕ್ತವಾದ ಮಹತ್ವವು ನನಗುಂಟಾಗಲಿ. ಪೂಜ್ಯತ್ವವು ನನಗೆ ಸಂಪನ್ನವಾಗಲಿ. ಗೃಹ-ಕ್ಷೇತ್ರಾದಿ ಸಂಪತ್ತಿನ ವಿಸ್ತಾರವು ನನಗುಂಟಾಗಲಿ. ಪುತ್ರ-ಪೌತ್ರಾದಿಗಳ ಉತ್ತಮ ಶರೀರಗಳು ನನಗೆ ಸಿದ್ಧಿಸಲಿ. ದೀರ್ಘವಾದ ಅವಿಚ್ಛಿನ್ನವಾದ ಸಂತತಿಯು ನನಗುಂಟಾಗಲಿ. ಪ್ರಭೂತವಾದ ಅನ್ನವೂ ಧನವೂ ನನಗುಂಟಾಗಲಿ. ವಿದ್ಯಾದಿ ಗುಣಗಳ ಉತ್ಕರ್ಷವು ನನಗುಂಟಾಗಲಿ. ಸತ್ಯವಚನವು ನನಗೆ ಸಿದ್ಧಿಸಲಿ. ಆಸ್ತಿಕ್ಯ ಬುದ್ಧಿಯು ನನಗುಂಟಾಗಲಿ. ಉತ್ತಮವಾದ ಈ ಜಗತ್ತು ನನಗೆ ಸಿದ್ಧಿಸಲಿ. ಸುವರ್ಣ ಮುಂತಾದ ಧನವು ನನಗುಂಟಾಗಲಿ. ಸರ್ವವಿಷಯಗಳ ಸ್ವಾಧೀನತೆಯು ನನಗುಂಟಾಗಲಿ. ಶರೀರ ಕಾಂತಿಯು ನನಗುಂಟಾಗಲಿ. ಅಕ್ಷದ್ಯೂತ ಮೊದಲಾದ ಕ್ರೀಡೆಯು ನನಗೆ ಸಿದ್ಧಿಸಲಿ. ಅದರಿಂದ ಉಂಟಾದ ಹರ್ಷವು ನನಗೆ ಸಿದ್ಧಿಸಲಿ. ಮೊದಲೇ ಹುಟ್ಟಿರುವ ಸಂತಾನವು ನನಗೆ ಸಂಪನ್ನವಾಗಿರಲಿ. ಮುಂದೆ ಹುಟ್ಟಲಿರುವ ಸಂತಾನವು ನನಗೆ ಸಂಪನ್ನವಾಗಲಿ. ಋಕ್ ಗಳ ಸಮೂಹವು ನನಗೆ ಸಿದ್ಧಿಸಲಿ. ಅವುಗಳಿಂದ ಉಂಟಾಗುವ ಸುಕೃತವು ನನಗೆ ಸಿದ್ಧಿಸಲಿ. ಪೂರ್ವಪ್ರಾಪ್ತವಾದ ಧನವು ನನಗೆ ಸಂಪನ್ನವಾಗಲಿ. ಇನ್ನು ಮುಂದೆ ಪ್ರಾಪ್ತವಾಗಲಿರುವ ಧನವು ನನಗುಂಟಾಗಲಿ. ಪೂರ್ವಸಿದ್ಧವಾದ ಕ್ಷೇತ್ರ ಮುಂತಾದುದು ನನಗೆ ಸಂಪನ್ನವಾಗಲಿ. ಮುಂದೆ ಉಂಟಾಗಲಿರುವ ಕ್ಷೇತ್ರ ಮುಂತಾದುದು ನನಗೆ ಸಂಪನ್ನವಾಗಲಿ. ಬಂಧು ಜನರಿಂದ ಕೂಡಿರುವ ಗ್ರಾಮಾಂತರ ಮುಂತಾದುದು ನನಗೆ ಸುಲಭವಾಗಿ ಹೋಗಿ ಸೇರುವಂತೆ ಸಿದ್ಧಿಸಲಿ. ಚೋರಾದಿಗಳಿಂದ ರಹಿತವಾದ ಉತ್ತಮ ಮಾರ್ಗವು ನನಗೆ ಸಿದ್ಧಿಸಲಿ. ಧನಾದಿ ಸಂಪತ್ತು ಮತ್ತು ಅನುಷ್ಠಿತವಾದ ಕರ್ಮಗಳ ಫಲವು ನನಗೆ ಸಮೃದ್ಶವಾಗಿ ಸಿಗಲಿ. ಮುಂದೆ ಅನುಷ್ಠಾನ ಮಾಡಲಿರುವ ಸತ್ರಯಾಗ ಮುಂತಾದ ಕರ್ಮಗಳ ಫಲವು ನನಗೆ ಸಂಪನ್ನವಾಗಲಿ. ತನ್ನ ಕಾರ್ಯಗಳಿಗೆ ಸಮರ್ಥವಾದ ದ್ರವ್ಯವು ನನಗುಂಟಾಗಲಿ. ಸ್ವಕೀಯವಾದ ಸಾಮರ್ಥ್ಯವು ನನಗುಂಟಾಗಲಿ. ನಿಶ್ಚಯಾತ್ಮಕ ಬುದ್ಧಿಯು ನನಗುಂಟಾಗಲಿ. ದುಸ್ಸಾಧ್ಯವಾದ ರಾಜಕಾರ್ಯಾದಿ ನಿಶ್ಚಯ ಬುದ್ಧಿಯು ನನಗೆ ಸಿದ್ಶಿಸಲಿ. ಭಗವಂತನಾದ ರುದ್ರನ ಅನುಗ್ರಹದಿಂದ ಅವನ ಆರಾಧನೆಗೆ ಉಪಯೋಗವಾಗುವಂತೆ ಇವುಗಳೆಲ್ಲವೂ ನನಗೆ ಸಿದ್ಧಿಸಲಿ ಎಂದು ಪೂಜಕನು ಪ್ರಾರ್ಥಿಸುತ್ತಾನೆ.

ತೃತೀಯಾನುವಾಕ - ಸಂಸ್ಕೃತದಲ್ಲಿ :

ಶಂ ಚ ಮೇ ಮಯಶ್ಚ ಮೇ ಪ್ರಿಯಂ ಚ ಮೇsನುಕಾಮಶ್ಚ ಮೇ ಕಾಮಶ್ಚ ಮೇ ಸೌಮನಸಶ್ಚ ಮೇ ಭದ್ರಂ ಚ ಮೇ ಶ್ರೇಯಶ್ಚ ಮೇ ವಸ್ಯಶ್ಚ ಮೇ ಯಶಶ್ಚ ಮೇ ಭಗಶ್ಚ ಮೇ ದ್ರವಿಣಂ ಚ ಮೇ ಯಂತಾ ಚ ಮೇ ಧರ್ತಾ ಚ ಮೇ ಕ್ಷೇಮಶ್ಚ ಮೇ ಧೃತಿಶ್ಚ ಮೇ ವಿಶ್ವಂ ಚ ಮೇ ಮಹಶ್ಚ ಮೇ ಸಂವಿಚ್ಚ ಮೇ ಜ್ಞಾತ್ರಂ ಚ ಮೇ ಸೂಶ್ಚ ಮೇ ಪ್ರಸೂಶ್ಚ ಮೇ ಸೀರಂ ಚ ಮೇ ಲಯಶ್ಚ ಮ ಋತಂ ಚ ಮೇsಮೃತಂ ಚ ಮೇsಯಕ್ಷ್ಮಂ ಚ ಮೇsನಮಿತ್ರಂ ಚ ಮೇsಭಯಂ ಚ ಮೇ ಸುಗಂ ಚ ಮೇ ಶಯನಂ ಚ ಮೇ ಸೂಷಾ ಚ ಮೇ ಸುದಿನಂ ಚ ಮೇ ||

ಮೂರನೇ ಅನುವಾಕ - ಕನ್ನಡದಲ್ಲಿ :
ಇಹದ ಸುಖವಿರಲೆನಗೆ ಪರಸುಖವಿರಲೆನಗೆ ಪ್ರಿಯವಸ್ತು ದೊರೆಯಲೆನಗೆ ಇಷ್ಟಾರ್ಥಸಿದ್ಧಿಸಲೆನಗೆ ಕಾಮನೆಗಳೀಡೇರಲೆನಗೆ ಶಮದಮಗಳಿಂದಾದ ಸುಮನಸಿರಲೆನಗೆ ಮಂಗಳವಿರಲೆನಗೆ ಶ್ರೇಯವಿರಲೆನಗೆ ಮನೆಮಠಗಳಿರಲೆನಗೆ ಕೀರ್ತಿಯಿರಲೆನಗೆ ಸೌಭಾಗ್ಯವಿರಲೆನಗೆ ಧನಸಂಪದವಿರಲೆನಗೆ ಮಾರ್ಗದರ್ಶಕರಿರಲೆನಗೆ ಪೋಷಕರಿರಲೆನಗೆ ಕ್ಷೇಮವಿರಲೆನಗೆ ಧೈರ್ಯವಿರಲೆನಗೆ ಜನರೆಲ್ಲ ಅನುಕೂಲವಂತರಾಗಿರಲೆನಗೆ ಗೌರವವಿರಲೆನಗೆ ಆದೇಶವೀವ ಶಕುತಿಯಿರಲೆನಗೆ ಸುತರ ಸನ್ಮಾರ್ಗದಲಿ ನಡೆಸುವಂತಾಗಲೆನಗೆ ಸೇವಕರ ಪ್ರೇರಿಸುವ ಸಾಮರ್ಥ್ಯವಿರಲೆನಗೆ ಕೃಷಿಸಾಧನಗಳಿರಲೆನಗೆ ಅಡೆತಡೆ ನಿವಾರಿಸುವ ಬಲವಿರಲೆನಗೆ ಸತ್ಕರ್ಮಸಿದ್ಧಿಸಲೆನಗೆ ಪುಣ್ಯಸುಧೆಯಿರಲೆನಗೆ ಕ್ಷಯವಿರದಿರಲೆನಗೆ ಜಾಡ್ಯವಿರದಿರಲೆನಗೆ ಒಳ್ಳೆಯ ಬದುಕಿರಲೆನಗೆ ದೀರ್ಘಾಯುವಿರಲೆನಗೆ ಅರಿಗಳಿರದಿರಲೆನಗೆ ಅಭಯವಿರಲೆನಗೆ ಸುಲಭನಡೆಯಿರಲೆನಗೆ ಸುಶಯನವಿರಲೆನಗೆ ಸುಪ್ರಭಾತವಿರಲೆನಗೆ ಸುದಿನವಿರಲೆನಗೆ ||

ವಿವರಣೆ :
ಐಹಿಕ ಸುಖವು ನನಗೆ ಸಿದ್ಧಿಸಲಿ. ಆಮುಷ್ಮಿಕ ಸುಖವು ನನಗೆ ಸಿದ್ಧಿಸಲಿ. ಪ್ರೀತಿಕಾರಕವಾದ ವಸ್ತುವು ನನಗೆ ಸಿದ್ಧಿಸಲಿ. ಅನುಕೂಲವಾದ ಇಷ್ಟಾರ್ಥವು ನನಗುಂಟಾಗಲಿ. ಆಮುಷ್ಮಿಕವಾದ ಸ್ವರ್ಗಾದಿ ಫಲಕಾಮನೆಯು ನನಗುಂಟಾಗಲಿ. ನನ್ನ ಮನಸ್ಸಿಗೆ ಸ್ವಾಸ್ಥ್ಯವನ್ನುಂಟುಮಾಡುವ ಬಂಧುವರ್ಗವು ನನಗುಂಟಾಗಲಿ. ಈ ಲೋಕದಲ್ಲಿ ರಮಣೀಯವಾದ ಮಂಗಳವು ನನಗುಂಟಾಗಲಿ. ಪರಲೋಕಹಿತವು ನನಗೆ ಸಿದ್ಧಿಸಲಿ. ನಿವಾಸಕ್ಕೆ ಕಾರಣವಾದ ಗೃಹ ಮುಂತಾದುದು ನನಗುಂಟಾಗಲಿ. ಕೀರ್ತಿಯು ನನಗುಂಟಾಗಲಿ. ಸೌಭಾಗ್ಯವು ನನಗುಂಟಾಗಲಿ. ಧನಸಂಪತ್ತು ನನಗುಂಟಾಗಲಿ. ನಿಯಾಮಕನಾದ ಆಚಾರ್ಯನೇ ಮೊದಲಾದ ಜನವು ನನಗುಂಟಾಗಲಿ. ಪೋಷಕನಾದ ಜನವು ನನಗುಂಟಾಗಲಿ. ಇರುವ ಧನಸಂಪತ್ತನ್ನು ರಕ್ಷಿಸುವ ಶಕ್ತಿಯು ನನಗುಂಟಾಗಲಿ. ಆಪತ್ತಿನಲ್ಲೂ ನಿಶ್ಚಲವಾಗಿರುವಿಕೆಯ ರೂಪವಾದ ಧೈರ್ಯವು ನನಗುಂಟಾಗಲಿ. ಸಮಸ್ತ ಜನರ ಅನುಕೂಲ್ಯವು ನನಗುಂಟಾಗಲಿ. ಪೂಜೆಯು ನನಗುಂಟಾಗಲಿ. ವೇದಶಾಸ್ತ್ರಾದಿ ವಿಜ್ಞಾನವು ನನಗೆ ಸಿದ್ಧಿಸಲಿ. ಜ್ಞಾಪನ ಮಾಡುವ ಸಾಮರ್ಥ್ಯವು ನನಗುಂಟಾಗಲಿ. ಪುತ್ರ ಮೊದಲಾದವರನ್ನು ಸನ್ಮಾರ್ಗದಲ್ಲಿ ಪ್ರೇರಿಸುವ ಸಾಮರ್ಥ್ಯವು ನನಗುಂಟಾಗಲಿ. ಭೃತ್ಯಾದಿಗಳನ್ನು ಸರಿಯಾಗಿ ಪ್ರೇರಿಸುವ ಸಾಮರ್ಥ್ಯವು ನನಗುಂಟಾಗಲಿ. ಗೋವು-ನೇಗಿಲು ಮುಂತಾದ ಕೃಷಿಕರ್ಮದ ಸಾಧನ ಸಂಪತ್ತಿಯು ನನಗುಂಟಾಗಲಿ. ಅವುಗಳಿಗೆ ಉಂಟಾಗುವ ಪ್ರತಿಬಂಧಕವನ್ನು ನಿವಾರಿಸುವ ಶಕ್ತಿಯು ನನಗುಂಟಾಗಲಿ. ಯಜ್ಞಾದಿಕರ್ಮವು ನನಗೆ ಸಿದ್ಧಿಸಲಿ. ಯಜ್ಞದ ಫಲವಾದ ಅಮೃತವು ನನಗುಂಟಾಗಲಿ. ರಾಜಯಕ್ಷ್ಮ ಮುಂತಾದ ಪ್ರಬಲ ವ್ಯಾಧಿರಾಹಿತ್ಯವು ನನಗುಂಟಾಗಲಿ. ಜ್ವರ ಮುಂತಾದ ಸಾಧಾರಣ ವ್ಯಾಧಿಯು ಇಲ್ಲದಿರುವಿಕೆಯು ನನಗುಂಟಾಗಲಿ. ಜೀವನಕ್ಕೆ ಹೇತುವಾದ ವ್ಯಾಧಿನಿವಾರಕ ಔಷಧವು ನನಗುಂಟಾಗಲಿ. ಅಪಮೃತ್ಯುರಹಿತವಾದ ದೀರ್ಘಾಯಸ್ಸು ನನಗುಂಟಾಗಲಿ. ಶತ್ರುಗಳ ಇಲ್ಲದಿರುವಿಕೆಯು ನನಗುಂಟಾಗಲಿ. ಭಯರಾಹಿತ್ಯ ನನಗುಂಟಾಗಲಿ. ಉತ್ತಮವಾದ ಗಮನಶಕ್ತಿಯು ನನಗುಂಟಾಗಲಿ. ಶಯನ ಮುಂತಾದ ಸಂಪತ್ತಿಯು ನನಗುಂಟಾಗಲಿ. ಸ್ನಾನ ಸಂಧ್ಯಾವಂದನಾದಿಗಳಿಂದ ಕೂಡಿದ ಉತ್ತಮವಾದ ಪ್ರಾತಃಕಾಲವು ನನಗುಂಟಾಗಲಿ. ಯಜ್ಞ, ದಾನ, ಅಧ್ಯಯನ ಮುಂತಾದವುಗಳಿಂದ ಕೂಡಿದ ಸಂಪೂರ್ಣ ದಿನವು ನನಗುಂಟಾಗಲಿ. ಭಗವಂತನಾದ ರುದ್ರನ ಅನುಗ್ರಹದಿಂದ ಅವನ ಆರಾಧನೆಗಾಗಿ ಈ ಸರ್ವವಿಧವಾದ ಸಂಪತ್ತು ನನಗುಂಟಾಗಲಿ ಎಂದು ಪೂಜಕನು ರುದ್ರದೇವನನ್ನು ಪ್ರಾರ್ಥಿಸುತ್ತಾನೆ.

ಚತುರ್ಥಾನುವಾಕ - ಸಂಸ್ಕೃತದಲ್ಲಿ :
ಊರ್ಕ್ಚ ಮೇ ಸೂನೃತಾ ಚ ಮೇ ಪಯಶ್ಚ ಮೇ ರಸಶ್ಚ ಮೇ ಘೃತಂ ಚ ಮೇ ಮಧು ಚ ಮೇ ಸಗ್ಧಿಶ್ಚ ಮೇ ಸಪೀತಿಶ್ಚ ಮೇ ಕೃಷಿಶ್ಚ ಮೇ ವೃಷ್ಟಿಶ್ಚ ಮೇ ಚೈತ್ರಂ ಚ ಮ ಔದ್ಭಿದ್ಯಂ ಚ ಮೇ ರಯಿಶ್ಚ ಮೇ ರಾಯಶ್ಚ ಮೇ ಪುಷ್ಪಂ ಚ ಮೇ ಪುಷ್ಟಿಶ್ಚ ಮೇ ವಿಭು ಚ ಮೇ ಪ್ರಭು ಚ ಮೇ ಭಹು ಚ ಮೇ ಭೂಯಶ್ಚ ಮೇ ಪೂರ್ಣಂ ಚ ಮೇ ಪೂರ್ಣತರಂ ಚ ಮೇsಕ್ಷಿತಿಶ್ಚ ಮೇ ಕೂಯವಾಶ್ಚ ಮೇsನ್ನಂ ಚ ಮೇsಕ್ಷುಶ್ಚ ಮೇ ವ್ರೀಹಯಶ್ಚ ಮೇ ಯವಾಶ್ಚ ಮೇ ಮಾಷಾಶ್ಚ ಮೇ ತಿಲಾಶ್ಚ ಮೇ ಮುದ್ಗಾಶ್ಚ ಮೇ ಖಲ್ವಾಶ್ಚ ಮೇ ಗೋಧೂಮಾಶ್ಚ ಮೇ ಮಸುರಾಶ್ಚ ಮೇ ಪ್ರಿಯಂಗವಶ್ಚ ಮೇsಣವಶ್ಚ ಮೇ ಶ್ಯಾಮಾಕಾಶ್ಚ ಮೇ ನೀವಾರಾಶ್ಚ ಮೇ||

ನಾಲ್ಕನೇ ಅನುವಾಕ - ಕನ್ನಡದಲ್ಲಿ :
ಅನ್ನಬಲವಿರಲೆನಗೆ ದಿಟವಚನವಿರಲೆನಗೆ ಹಾಲಿರಲೆನಗೆ ರಸವಿರಲೆನಗೆ ತುಪ್ಪವಿರಲೆನಗೆ ಜೇನಿರಲೆನಗೆ ಸಹಭೋಜನವಿರಲೆನಗೆ ಸಹಪಾನವಿರಲೆನಗೆ ಕೃಷಿಯು ಸಿದ್ಧಿಸಲೆನಗೆ ಸುವೃಷ್ಟಿಯಿರಲೆನಗೆ ಜಯವಿರಲೆನಗೆ ಸಸ್ಯಸಂಪದವಿರಲೆನಗೆ ಧನಸಂಪದವಿರಲೆನಗೆ ಸಮೃದ್ಧಿಯಿರಲೆನಗೆ ದೇಹಪುಷ್ಟಿಯಿರಲೆನಗೆ ವಿಭು-ಪ್ರಭು-ಬಹು ಮೊದಲಾದ ಸಕಲ ಸಂಪದವಿರಲೆನಗೆ ಸಿರಿಧಾನ್ಯಗಳಿರಲೆನಗೆ ಅನ್ನವಿರಲೆನಗೆ ಹಸಿವಿರದಿರಲೆನಗೆ ಬತ್ತವಿರಲೆನಗೆ ಉದ್ದಿರಲೆನಗೆ ಎಳ್ಳಿರಲೆನಗೆ ಹೆಸರುಕಾಳಿರಲೆನಗೆ ಕಡಲೆಗಳಿರಲೆನಗೆ ಗೋಧಿಯಿರಲೆನಗೆ ತೊಗರಿಕಾಳುಗಳಿರಲೆನಗೆ ಪ್ರಿಯಧಾನ್ಯಗಳಿರಲೆನಗೆ ಸಣ್ಣಕ್ಕಿಯಿರಲೆನಗೆ ಸಬ್ಬಕ್ಕಿಯಿರಲೆನಗೆ ವನಧಾನ್ಯಗಳಿರಲೆನಗೆ ||

ವಿವರಣೆ :
ಅನ್ನವೂ ಅನ್ನಪ್ರಯುಕ್ತವಾದ ಬಲವೂ ನನಗುಂಟಾಗಲಿ. ಪ್ರಿಯವಚನವು ನನಗೆ ಸಿದ್ಧಿಸಲಿ. ಹಾಲು ಮೊದಲಾದ ಅನ್ನ ವಿಶೇಷವು ನನಗುಂಟಾಗಲಿ. ಅವುಗಳಲ್ಲಿನ ರಸವು ನನಗೆ ಸಿದ್ಧಿಸಲಿ. ಘೃತವು ನನಗುಂಟಾಗಲಿ. ಮಧುವು ನನಗುಂಟಾಗಲಿ. ಬಂಧುಗಳ ಜೊತೆಗೂಡಿದ ಭೋಜನವು ನನಗೆ ಸಿದ್ಧಿಸಲಿ. ಸಹಪಾನವು ನನಗೆ ಸಿದ್ಧಿಸಲಿ. ಅನ್ನಹೇತುವಾದ ಕೃಷಿಯು ನನಗೆ ಸಿದ್ಧಿಸಲಿ. ಅನ್ನಹೇತುವಾದ ವೃಷ್ಟಿಯು ನನಗೆ ಸಿದ್ಧಿಸಲಿ. ಜಯಶೀಲತೆಯು ನನಗುಂಟಾಗಲಿ. ತರಗುಲ್ಮಾದಿಗಳ ಸಮೃದ್ಧಿಯು ನನಗುಂಟಾಗಲಿ. ಸುವರ್ಣ ಸಂಪತ್ತು ನನಗುಂಟಾಗಲಿ. ಮಣಿಮುಕ್ತಾದಿ ಸಂಪತ್ತು ನನಗುಂಟಾಗಲಿ. ಸಂಪತ್ತಿನ ಸಮೃದ್ಧಿಯು ನನಗುಂಟಾಗಲಿ. ಶರೀರ ಪುಷ್ಟಿಯು ನನಗುಂಟಾಗಲಿ. ವಿಭು, ಪ್ರಭು, ಬಹು, ಭೂಯಃ, ಪೂರ್ಣಂ, ಪೂರ್ಣತರಂ, ಅಕ್ಷಿತಿಃ - ಎಂಬ ಏಳು ಪ್ರಕಾರಗಳನ್ನು ತನಗುಂಟಾಗುವಂತೆ ಪ್ರಾರ್ಥಿಸಲಾಗಿದೆ. ತಾರತಮ್ಯ ಭಾವದಿಂದ ಈ ಏಳು ಪ್ರಕಾರಗಳೂ ಧಾನ್ಯ ಸಂಪತ್ತಿನ ಉತ್ತರೋತ್ತರ ಅಭಿವೃದ್ಧಿಯಾಗಿದೆ. ಅಧಿಕವಾದ ಧಾನ್ಯ ಸಂಪತ್ತನ್ನಷ್ಟೇ ಅಲ್ಲದೆ ಅಲ್ಪವಾದ ಧಾನ್ಯ ಸಂಪತ್ತೂ ಹೆಚ್ಚು ಹೆಚ್ಚಾಗಿ ವೃದ್ಧಿಹೊಂದುವಂತೆಯೂ ಪ್ರಾರ್ಥಿಸಲಾಗಿದೆ. (ಅಮಾತ್ಯ ಸಂಪತ್ತು, ಆತ್ಮಶಕ್ತಿ, ಸ್ನೇಹಿತರ ಸಮೃದ್ಧಿ, ಕೋಶಸಮೃದ್ಧಿ, ರಾಷ್ಟ್ರಸಮೃದ್ಧಿ, ದುರ್ಗ ಮೊದಲಾದ ರಕ್ಷಣ ಸಂಪತ್ತು , ಸೈನ್ಯ ಸಂಪತ್ತು - ಎಂಬ ಏಳು ವಿಧವಾದ ರಾಜ್ಯಾಂಗಗಳೂ ರಾಷ್ಟ್ರದಲ್ಲಿ ಸಮೃದ್ಧವಾಗಿರಬೇಕು ಹಾಗಿದ್ದರೆ ಮಾತ್ರ ಯಜ್ಞ , ಯಾಗ, ಪೂಜೆ - ಇತ್ಯಾದಿಗಳು ಸುಗಮವಾಗಿರುತ್ತವೆ ಎಂದು ಅವುಗಳನ್ನೂ ಈ ಮೂಲಕ ಪ್ರಾರ್ಥಿಸಲಾಗಿದೆ ಎಂದು ಕೆಲವು ವ್ಯಾಖ್ಯಾನಕಾರರು ಅಭಿಪ್ರಾಯ ಪಡುತ್ತಾರೆ.)
ಕುತ್ಸಿತವಾದ ಯವಗಳು ನನಗುಂಟಾಗಲಿ. ಅನ್ನವು ನನಗುಂಟಾಗಲಿ. ಅನ್ನದಿಂದ ಆಗಬೇಕಾದ ಹಸಿವಿನ ಪರಿಹಾರವು ನನಗುಂಟಾಗಲಿ. ಬತ್ತಗಳು ನನಗುಂಟಾಗಲಿ. ಯವಗಳು (ಜವೆಗೋಧಿ) ನನಗುಂಟಾಗಲಿ. ಮಾಷಗಳು (ಉದ್ದು) ನನಗುಂಟಾಗಲಿ. ತಿಲಗಳು (ಎಳ್ಳು) ನನಗುಂಟಾಗಲಿ. ಮುದ್ಗಗಳು (ಹೆಸರುಕಾಳು) ನನಗುಂಟಾಗಲಿ. ಮುದ್ಗಗಳಿಗಿಂತ ಬೇರೆಯಾದ ಸಣ್ಣ ಕಾಳುಗಳು ನನಗುಂಟಾಗಲಿ. ಕಡಲೆಕಾಳುಗಳು ನನಗುಂಟಾಗಲಿ. ಗೋಧಿಗಳು ನನಗುಂಟಾಗಲಿ. ತೊವ್ವೆಯನ್ನು ಮಾಡುವ ತೊಗರಿಕಾಳುಗಳು ನನಗುಂಟಾಗಲಿ. ಪ್ರಿಯಂಗು ಧಾನ್ಯಗಳು ನನಗುಂಟಾಗಲಿ. ಸಣ್ಣ ಭತ್ತಗಳು ನನಗುಂಟಾಗಲಿ. ಗ್ರಾಮ್ಯವಾದ ಧಾನ್ಯ ವಿಶೇಷಗಳು ನನಗುಂಟಾಗಲಿ. ಅರಣ್ಯವಾದ ನೀವಾರಧಾನ್ಯಗಳು ನನಗುಂಟಾಗಲಿ. ದೇವತೆಗಳ ಹವಿಸ್ಸಿಗೂ ತನ್ನ ಆಹಾರಕ್ಕೂ ಬೇಕಾದ ಧಾನ್ಯಗಳ ಸಮೃದ್ಧಿಯನ್ನು ಪೂಜಕನು ಇಲ್ಲಿ ಪ್ರಾರ್ಥಿಸುತ್ತಾನೆ.

ಪಂಚಮಾನುವಾಕ - ಸಂಸ್ಕೃತದಲ್ಲಿ :
ಅಶ್ಮಾ ಚ ಮೇ ಮೃತ್ತಿಕಾ ಚ ಮೇ ಗಿರಯಶ್ಚ ಮೇ ಪರ್ವತಾಶ್ಚ ಮೇ ಸಿಕತಾಶ್ಚ ಮೇ ವನಸ್ಪತಯಶ್ಚ ಮೇ ಹಿರಣ್ಯಂ ಚ ಮೇsಯಶ್ಚ ಮೇ ಸೀಸಂ ಚ ಮೇ ತ್ರಪುಶ್ಚ ಮೇ ಶ್ಯಾಮಂ ಚ ಮೇ ಲೋಹಂ ಚ ಮೇsಗ್ನಿಶ್ಚ ಮ ಆಪಶ್ಚ ಮೇ ವೀರುಧಶ್ಚ ಮ ಓಷಧಯಶ್ಚ ಮೇ ಕೃಷ್ಟಪಚ್ಯಂ ಚ ಮೇsಕೃಷ್ಟಪದ್ಯಂ ಚ ಮೇ ಗ್ರಾಮ್ಯಾಶ್ಚ ಮೇ ಪಶವ ಆರಣ್ಯಾಶ್ಚ ಯಜ್ಞೇನ ಕಲ್ಪಂತಾಂ ವಿತ್ತಂ ಚ ಮೇ ವಿತ್ತಿಶ್ಚ ಮೇ ಭೂತಂ ಚ ಮೇ ಭೂತಿಶ್ಚ ಮೇ ವಸು ಚ ಮೇ ವಸತಿಶ್ಚ ಮೇ ಕರ್ಮ ಚ ಮೇ ಶಕ್ತಿಶ್ಚ ಮೇsರ್ಥಶ್ಚ ಮ ಏಮಶ್ಚ ಮ ಇತಿಶ್ಚ ಮೇ ಗತಿಶ್ಚ ಮೇ ||

ಐದನೇ ಅನುವಾಕ - ಕನ್ನಡದಲ್ಲಿ :
ಉತ್ತಮ ಶಿಲೆಗಳಿರಲೆನಗೆ ಮಣ್ಣಿರಲೆನಗೆ ನದಿಗಳುದಿಸುವ ಗಿರಿಗಳಿರಲೆನಗೆ ಪರ್ವತಗಳಿರಲೆನಗೆ ಮರಳುಗಳಿರಲೆನಗೆ ವನಸ್ಪತಿಗಳಿರಲೆನಗೆ ಹೊನ್ನಿರಲೆನಗೆ ಹೊನ್ನುಳ್ಳ ಬೆಳ್ಳಿಯಿರಲೆನಗೆ ಸೀಸವಿರಲೆನಗೆ ತವರವಿರಲೆನಗೆ ಕರಿಯ ಕಬ್ಬಿಣವಿರಲೆನಗೆ ಕಂಚು-ತಾಮ್ರಾದಿ ಲೋಹಗಳಿರಲೆನಗೆ ಬೆಂಕಿಯಿರಲೆನಗೆ ಜಲವಿರಲೆನಗೆ ಲತೆಗಳಿರಲೆನಗೆ ಮೂಲಿಕೆಗಳಿರಲೆನಗೆ ಉತ್ತಭೂಮಿಯ ಬತ್ತ ಗೋಧಿಗಳಿರಲೆನಗೆ ಉಳದ ಭೂಮಿಯ ಧಾನ್ಯಗಳಿರಲೆನಗೆ ಯಜ್ಞಯೋಗ್ಯ ಗ್ರಾಮ್ಯಪಶು ವನಪಶುಗಳಿರಲೆನಗೆ ಪಿತ್ರಾರ್ಜಿತ ಧನಸಂಪದವಿರಲೆನಗೆ ಸ್ವಯಾರ್ಜಿತ ಧನಸಂಪದವಿರಲೆನಗೆ ಗುಪ್ತ ಸಂಪದವಿರಲೆನಗೆ ಮುಂದೆ ಬಹ ಸಂಪದವಿರಲೆನಗೆ ಹೊಲಗದ್ದೆಗಳಿರಲೆನಗೆ ಮನೆಗಳಿರಲೆನಗೆ ಉದ್ಯೋಗಪ್ರಾಪ್ರಿಯಾಗಲೆನಗೆ ವೃತ್ತಿಕೌಶಲ್ಯವಿರಲೆನಗೆ ಎಲ್ಲ ಅನುಕೂಲಗಳಿರಲೆನಗೆ ಯೋಗ್ಯಸುಖ ದೊರೆಯಲೆನಗೆ ಸಂಕಲ್ಪಸಿದ್ಧಿಯಿರಲೆನಗೆ ಸದ್ಗತಿ ದೊರೆಯಲೆನಗೆ ||

ವಿವರಣೆ :
ಉತ್ತಮವಾದ ಕಲ್ಲು ನನಗೆ ಪ್ರಾಪ್ತವಾಗಲಿ. ಉತ್ತಮವಾದ ಮಣ್ಣು ನನಗೆ ದೊರಕಲಿ. ನದಿಗಳು ಹುಟ್ಟುವ ಉತ್ತಮ ಗಿರಿಗಳು ನನಗುಂಟಾಗಲಿ. ಉತ್ತಮವಾದ ಕಲ್ಲಿನ ರಾಶಿಗಳಿಂದ ಕೂಡಿದ ಪರ್ವತಗಳು ನನಗೆ ದೊರಕಲಿ. ಉತ್ತಮವಾದ ಮರಳುಗಳು ನನಗೆ ದೊರಕಲಿ. ಅಶ್ವತ್ಥ ವೃಕ್ಷ ಮುಂತಾದ ಉತ್ತಮ ವನಸ್ಪತಿಗಳು ನನಗೆ ದೊರಕಲಿ. ಸುವರ್ಣವು ನನಗೆ ದೊರಕಲಿ. ಚಿನ್ನದಿಂದ ಕೂಡಿದ ಬೆಳ್ಳಿಯು ನನಗೆ ಪ್ರಾಪ್ತವಾಗಲಿ. ಉತ್ತಮವಾದ ಸೀಸವು ನನಗೆ ದೊರಕಲಿ. ಉತ್ತಮವಾದ ತವರವು ನನಗೆ ದೊರಕಲಿ. ಕಪ್ಪಾದ ಕಬ್ಬಿಣವು ನನಗೆ ದೊರಕಲಿ. ಕಂಚು ತಾಮ್ರ ಮೊದಲಾದ ಲೋಹವು ನನಗೆ ದೊರಕಲಿ. ಯಜ್ಞ ಯೋಗ್ಯವಾದ ಅಗ್ನಿಯು ನನಗೆ ದೊರಕಲಿ. ಉತ್ತಮವಾದ ಜಲವು ನನಗೆ ದೊರಕಲಿ. ಉತ್ತಮವಾದ ಲತೆಗಳು ನನಗೆ ದೊರಕಲಿ. ಉತ್ತಮವಾದ ಓಷಧಿಗಳು ನನಗೆ ದೊರಕಲಿ. ಉಳುಮೆಮಾಡಿದ ಭೂಮಿಯಲ್ಲಿ ಪಾಕವಾಗುವ ಭತ್ತ ಗೋಧಿ ಮುಂತಾದ ಧಾನ್ಯಗಳು ನನಗೆ ಪ್ರಾಪ್ರವಾಗಲಿ. ಉಳುಮೆ ಮಾಡದ ಭೂಮಿಯಲ್ಲಿ ತಾವೇ ಬೆಳೆಯುವ ಕಾಡಿನ ಸಸ್ಯಗಳು ನನಗುಂಟಾಗಲಿ. ಯಜ್ಞಕ್ಕೆ ಯೋಗ್ಯವಾದ ಗ್ರಾಮ್ಯ ಪಶುಗಳು ಮತ್ತು ಅರಣ್ಯಸ್ಥ ಪಶುಗಳು ನನಗೆ ದೊರಕಲಿ. ಪಿತ್ರಾರ್ಜಿತವಾದ ಧನಸಂಪತ್ತು ನನಗೆ ದೊರಕಲಿ. ತಾನು ಮುಂದೆ ಧರ್ಮದಿಂದ ಸಂಪಾದಿಸುವ ಧನಸಂಪತ್ತು ನನಗೆ ದೊರಕಲಿ. ಐಶ್ವರ್ಯಯುಕ್ತವಾದ ಸಂತಾನ ಸಂಪತ್ತು ನನಗುಂಟಾಗಲಿ. ಗುಪ್ತವಾದ ಧನಸಂಪತ್ತು ನನಗುಂಟಾಗಲಿ. ನಾನು ಸಂಪಾದಿಸಿದ ಐಶ್ವರ್ಯವು ನನಗುಂಟಾಗಲಿ. ಪ್ರಕಟವಾದ ಧನಸಂಪತ್ತು ನನಗುಂಟಾಗಲಿ. ನಿವಾಸಕ್ಕೆ ಯೋಗ್ಯವಾದ ಐಶ್ಚರ್ಯ ಸಾಮಗ್ರಿಯು ನನಗುಂಟಾಗಲಿ. ನಿವಾಸಮಾಡಲು ಯೋಗ್ಯವಾದ ಗೃಹಾದಿ ಸಂಪತ್ತು ನನಗುಂಟಾಗಲಿ. ಅಗ್ನಿಹೋತ್ರಾದಿ ಕರ್ಮವು ನನಗೆ ಪ್ರಾಪ್ತವಾಗಲಿ. ಅಗ್ನಿಹೋತ್ರಾದಿ ಕರ್ಮಗಳ ಅನುಷ್ಠಾನ ಸಾಮರ್ಥ್ಯವು ನನಗುಂಟಾಗಲಿ. ಉತ್ತಮವಾದ ಸಕಲ ಪ್ರಯೋಜನವೂ ನನಗುಂಟಾಗಲಿ. ಪಡೆಯಬೇಕಾದ ಸುಖವು ನನಗೆ ಪ್ರಾಪ್ತವಾಗಲಿ. ಇಷ್ಟಾರ್ಥ ಪ್ರಾಪ್ತಿಯ ಉಪಾಯವು ನನಗೆ ಸಿದ್ಧಿಸಲಿ. ಉತ್ತಮವಾದ ಗತಿಯು ನನಗೆ ದೊರಕಲಿ.
ಈ ಎಲ್ಲ ವಿಷಯಗಳೂ ನಮಗೆ ಇಹ-ಪರಲೋಕ ಸಾಧನಗಳಾಗಿ ಮತ್ತು ರುದ್ರನ ಯಜ್ಞರೂಪವಾದ ಅಭಿಷೇಕಾದಿ ಪೂಜಾ ರೂಪವಾದ ಕಾರ್ಯಕ್ಕೆ ಸಾಧನಗಳಾಗಿ ಒದಗಿಬರಲಿ ಎಂದು ಪೂಜಕನು ಪ್ರಾರ್ಥಿಸುತ್ತಾನೆ.

ಷಷ್ಟಾನುವಾಕ - ಸಂಸ್ಕೃತದಲ್ಲಿ :
ಅಗ್ನಿಶ್ಚ ಮ ಇಂದ್ರಶ್ಚ ಮೇ ಸೋಮಶ್ಚ ಮ ಇಂದ್ರಶ್ಚ ಮೇ ಸವಿತಾ ಚ ಮ ಇಂದ್ರಶ್ಚ ಮೇ ಸರಸ್ವತೀ ಚ ಮ ಇಂದ್ರಶ್ಚ ಮೇ ಪೂಷಾ ಚ ಮ ಇಂದ್ರಶ್ಚ ಮೇ ಬೃಹಸ್ಪತಿಶ್ಚ ಮ ಇಂದ್ರಶ್ಚ ಮೇ ಮಿತ್ರಶ್ಚ ಮ ಇಂದ್ರಶ್ಚ ಮೇ ವರುಣಶ್ಚ ಮ ಇಂದ್ರಶ್ಚ ಮೇ ತ್ವಷ್ಟಾ ಚ ಮ ಇಂದ್ರಶ್ಚ ಮೇ ಧಾತಾ ಚ ಮ ಇಂದ್ರಶ್ಚ ಮೇ ವಿಷ್ಣುಶ್ಚ ಮ ಇಂದ್ರಶ್ಚ ಮೇsಶ್ವಿನೌ ಚ ಮ ಇಂದ್ರಶ್ಚ ಮೇ ಮರುತಶ್ಚ ಮ ಇಂದ್ರಶ್ಚ ಮೇ ವಿಶ್ವೇ ಚ ಮೇ ದೇವಾ ಇಂದ್ರಶ್ಚ ಮೇ ಪೃಥಿವೀ ಚ ಮ ಇಂದ್ರಶ್ಚ ಮೇsಂತರಿಕ್ಷಂ ಚ ಮ ಇಂದ್ರಶ್ಚ ಮೇ ದ್ಯೌಶ್ಚ ಮ ಇಂದ್ರಶ್ಚ ಮೇ ದಿಶಶ್ಚ ಮ ಇಂದ್ರಶ್ಚ ಮೇ ಮೂರ್ಧಾ ಚ ನ ಇಂದ್ರಶ್ಚ ಮೇ ಪ್ರಜಾಪತಿಶ್ಚ ಮ ಇಂದ್ರಶ್ಚ ಮೇ ||

ಆರನೇ ಅನುವಾಕ : ಕನ್ನಡದಲ್ಲಿ :
ಅಗ್ನಿಯು ಇಂದ್ರನಾಗಿರಲೆನಗೆ ಸೋಮನಿಂದ್ರನೇ ಆಗಿರಲೆನಗೆ ಸವಿತೃವೂ ಇಂದ್ರನೇ ಆಗಿರಲಿ ಎನಗೆ ಸರಸ್ವತಿ ಇಂದ್ರನಾಗಿರಲೆನಗೆ ಪೂಷನ್ನನಿಂದ್ರನೇ ಆಗಿರಲೆನಗೆ ಬೃಹಸ್ಪತಿಯೂ ಇಂದ್ರನೇ ಆಗಿರಲಿ ಎನಗೆ ಮಿತ್ರನು ಇಂದ್ರನಾಗಿರಲೆನಗೆ ವರುಣನಿಂದ್ರನಾಗಿರಲೆನಗೆ ತ್ವಷ್ಟನೂ ಇಂದ್ರನೇ ಆಗಿರಲಿ ಎನಗೆ ಧಾತೃದೇವನು ಇಂದ್ರನಾಗಿರಲೆನಗೆ ವಿಷ್ಣುವಿಂದ್ರನೇ ಆಗಿರಲೆನಗೆ ಅಶ್ವಿನಿಗಳೂ ಇಂದ್ರನೇ ಆಗಿರಲಿ ಎನಗೆ ಮರುತ್ತುಗಳು ಇಂದ್ರನಾಗಿರಲೆನಗೆ ವೈಶ್ವದೇವತೆಗಳಿಂದ್ರನೇ ಆಗಿರಲೆನಗೆ ಪೃಥ್ವಿಯೂ ಇಂದ್ರನೇ ಆಗಿರಲಿ ಎನಗೆ ಅಂತರಿಕ್ಷವು ಇಂದ್ರನಾಗಿರಲೆನಗೆ ಸಗ್ಗವಿಂದ್ರನೇ ಆಗಿರಲೆನಗೆ ದಿಕ್ಕುಗಳೂ ಇಂದ್ರನೇ ಆಗಿರಲಿ ಎನಗೆ ಮೇಲಿನ ಬ್ರಹ್ಮಲೋಕವು ಇಂದ್ರನಾಗಿರಲೆನಗೆ ಪ್ರಜಾಪತಿಯೂ ಇಂದ್ರನೇ ಆಗಿರಲಿ ಎನಗೆ ||

ವಿವರಣೆ :
ಅಗ್ನಿಯು ನನಗೆ ಐಶ್ವರ್ಯೋಪೇತನಾದ ಪರಮಾತ್ಮನೇ ಆಗಿರಲಿ. ಇಂದ್ರನೆಂದರೆ ಐಶ್ವರ್ಯ ಸಂಪನ್ನನಾದ ರುದ್ರನೇ ಆಗಿದ್ದಾನೆ. ಸೋಮನೂ ನನಗೆ ಐಶ್ವರ್ಯ ಸಂಪನ್ನನಾದ ಪರಮಾತ್ಮನೇ ಆಗಿರಲಿ. ಸವಿತೃದೇವನು ನನಗೆ ಐಶ್ವರ್ಯ ಸಂಪನ್ನನಾದ ಪರಮಾತ್ಮನೇ ಆಗಿರಲಿ. ಸರಸ್ವತೀ ದೇವಿಯು ನನಗೆ ಐಶ್ವರ್ಯ ಸಂಪನ್ನನಾದ ಪರಮಾತ್ಮನೇ ಆಗಿರಲಿ. ಪೂಷದೇವನು ನನಗೆ ಐಶ್ವರ್ಯ ಸಂಪನ್ನನಾದ ಪರಮಾತ್ಮನೇ ಆಗಿರಲಿ. ಬೃಹಸ್ಪತಿಯೂ ನನಗೆ ಐಶ್ವರ್ಯ ಸಂಪನ್ನನಾದ ಪರಮಾತ್ಮನೇ ಆಗಿರಲಿ. ತ್ವಷ್ಟಾ ಎಂಬ ದೇವನೂ ನನಗೆ ಐಶ್ವರ್ಯ ಸಂಪನ್ನನಾದ ಪರಮಾತ್ಮನೇ ಆಗಿರಲಿ. ಧಾತೃದೇವನೂ ನನಗೆ ಐಶ್ವರ್ಯ ಸಂಪನ್ನನಾದ ಪರಮಾತ್ಮನೇ ಆಗಿರಲಿ. ವಿಷ್ಣುವೂ ನನಗೆ ಐಶ್ವರ್ಯ ಸಂಪನ್ನನಾದ ಪರಮಾತ್ಮನೇ ಆಗಿರಲಿ. ಅಶ್ವಿನೀ ದೇವತೆಗಳೂ ನನಗೆ ಐಶ್ವರ್ಯ ಸಂಪನ್ನನಾದ ಪರಮಾತ್ಮನೇ ಆಗಿರಲಿ. ಮರುತ್ತುಗಳೂ ನನಗೆ ಐಶ್ವರ್ಯ ಸಂಪನ್ನನಾದ ಪರಮಾತ್ಮನೇ ಆಗಿರಲಿ. ವಿಶ್ವೇ ದೇವತೆಗಳು ನನಗೆ ಐಶ್ವರ್ಯ ಸಂಪನ್ನನಾದ ಪರಮಾತ್ಮನೇ ಆಗಿರಲಿ. ಪೃಥಿವಿಯೂ ನನಗೆ ಐಶ್ವರ್ಯ ಸಂಪನ್ನನಾದ ಪರಮಾತ್ಮನೇ ಆಗಿರಲಿ. ಅಂತರಿಕ್ಷವೂ ನನಗೆ ಐಶ್ವರ್ಯ ಸಂಪನ್ನನಾದ ಪರಮಾತ್ಮನೇ ಆಗಿರಲಿ. ದಿವಿಯೂ ನನಗೆ ಐಶ್ವರ್ಯ ಸಂಪನ್ನನಾದ ಪರಮಾತ್ಮನೇ ಆಗಿರಲಿ. ದಿಕ್ಕುಗಳೂ ನನಗೆ ಐಶ್ವರ್ಯ ಸಂಪನ್ನನಾದ ಪರಮಾತ್ಮನೇ ಆಗಿರಲಿ. ಮೇಲಿನ ಬ್ರಹ್ಮಲೋಕವೂ ನನಗೆ ಐಶ್ವರ್ಯ ಸಂಪನ್ನನಾದ ಪರಮಾತ್ಮನೇ ಆಗಿರಲಿ. ಪ್ರಜಾಪತಿಯೂ ನನಗೆ ಐಶ್ವರ್ಯ ಸಂಪನ್ನನಾದ ಪರಮಾತ್ಮನೇ ಆಗಿರಲಿ.
ಅಗ್ನಿ, ಸೋಮ ಮುಂತಾದವರು ಯಜ್ಞದ ದೇವತೆಗಳು. ಇವರೆಲ್ಲರಿಗೂ ಇಂದ್ರನು ಅಧಿಪತಿಯು. ಆದುದರಿಂದ ಇವರೆಲ್ಲರೂ ಇಂದ್ರರೂಪರೆಂದು ಪೂಜಕನು ಭಾವಿಸುತ್ತಾನೆ ಇಂದ್ರನು ವಸ್ತುತಃ ಪರಮಾತ್ಮನಾದ ರುದ್ರನೇ ಆಗಿದ್ದಾನೆ. ಐಶ್ವರ್ಯ ಸಂಪನ್ನನಾದ ಪರಮಾತ್ಮನೇ ಇಂದ್ರನು. ಅಗ್ನಿ ಮೊದಲಾದ ದೇವತೆಗಳು, ಪೃಥ್ವೀ ಮುಂತಾದ ಲೋಕಗಳು, ದಿಕ್ಕುಗಳು, ಬ್ರಹ್ಮಲೋಕ, ಪ್ರಜಾಪತಿ - ಹೀಗೆ ಎಲ್ಲರಿಗೂ ಪರಮಾತ್ಮನಾದ ರುದ್ರನ ಸ್ವರೂಪವೇ ಆಗಿದ್ದಾರೆಂದು ಪೂಜಕರು ಭಾವಿಸಬೇಕು. 

ಸಪ್ತಮಾನುವಾಕ - ಸಂಸ್ಕೃತದಲ್ಲಿ :
ಅಗ್ಂಶುಶ್ಚ ಮೇ ರಶ್ಮಿಶ್ಚ ಮೇsದಾಭ್ಯಶ್ಚ ಮೇsಧಿಪತಿಶ್ಚ ಮ ಉಪಾಗ್ಂಶುಶ್ಚ ಮೇsಂತರ್ಯಾಮಶ್ಚ ಮ ಐಂದ್ರವಾಯಶ್ಚ ಮೇ ಮೈತ್ರಾ ವರುಣಶ್ಚ ಮ ಅಶ್ವಿನಶ್ಚ ಮೇ ಪ್ರತಿಪ್ರಸ್ಥಾನಶ್ಚ ಮೇ ಶುಕ್ರಶ್ಚ ಮೇ ಮಂಥೀ ಚ ಮ ಅಗ್ರಯಣಶ್ಚ ಮೇ ವೈಶ್ವದೇವಶ್ಚ ಮೇ ಧ್ರುವಶ್ಚ ಮೇ ವೈಶ್ವಾನರಶ್ಚ ಮ ಋತುಗ್ರಾಹಶ್ಚ ಮೇsತಿಗ್ರಾಹ್ಯಶ್ಚ ಮ ಐಂದ್ರಾಗ್ನಶ್ಚ ಮೇ ವೈಶ್ವದೇವಶ್ಚ ಮೇ ಮರುತ್ವಿತೀಯಾಶ್ಚ ಮೇ ಮಾಹೇಂದ್ರಶ್ಚ ಮ ಆದಿತ್ಯಶ್ಚ ಮೇ ಸಾವಿತ್ರಶ್ಚ ಮೇ ಸಾರಸ್ವತಶ್ಚ ಮೇ ಪೌಷ್ಣಶ್ಚ ಮೇ ಪಾತ್ನೀವತಶ್ಚ ಮೇ ಹಾರಿಯೋಜನಶ್ಚ ಮೇ ||

ಏಳನೇ ಅನುವಾಕ - ಕನ್ನಡದಲ್ಲಿ :
ಸುಷುಮ್ನಾ ನಾಡಿಯೆನಗೆ ಸಿದ್ಧಿಸಲಿ ಆ ನಾಡಿಯ ರಶ್ಮಿಗಳೆನಗೆ ಸಿದ್ಧಿಸಲಿ ವಿದ್ಯೆಯಿಂದಲುಗದ ಮಾರ್ಗವೆನಗೆ ಸಿದ್ಧಿಸಲಿ ಸಿದ್ಧಿಗಳೊಡೆತನವುಂಟಾಗಲೆನಗೆ ಇಡಾ ಪಿಂಗಳಾ ನಾಡಿಗಳು ಸಿದ್ಧಿಸಲೆನಗೆ ಅವುಗಳಲಿಹ ಅಂತರ್ಯಾಮಿ ಪರಮಾತ್ಮನೆನ್ನವನಾಗಿರಲಿ | ಪ್ರಾಜ್ಞರೂಪದ ಐಂದ್ರವಾಯವನೆನ್ನೊಡನಿರಲಿ ತೈಜಸರೂಪಿ ಮೈತ್ರಾವರುಣನಿರಲಿ ವಿಶ್ವರೂಪದ ಅಶ್ವಿನಿಯರಿರಲಿ ಎನ್ನೊಡನೆ | ಬ್ರಹ್ಮಲೋಕವ ಕುರಿತ ಗತಿಯೆನಗೆ ಸಿದ್ಧಿಸಲಿ ಅಲ್ಲೆನಗೆ ಶುಭ್ರ ವಿರಜಾನದಿಯು ದೊರೆಯಲಿ ಸರಸಿಗಳೆನಗೆ ಸಿಗಲಿ | ಸರ್ವದೇವತಾನಿವಾಸವಾಗಿಹ ಅಶ್ವತ್ಥವೃಕ್ಷವೆನಗೆ ದೊರೆಯಲಿ ಧ್ರುವವಹ ಬ್ರಹ್ಮವೆನಗೆ ಪ್ರಾಪ್ತವಾಗಲಿ ವೈಶ್ವಾನರನೆನಗೆ ಪ್ರಾಪ್ತನಾಗಲಿ ಅಲ್ಲಿ ಋತುದೇವತೆಗಳು ಗ್ರಹದೇವತೆಗಳು ದೊರೆಯಲಿ | ಯಮನಿಯಮಾದಿಗಳಿಂದ ದೊರೆಯುವ ವೇದಶಾಸ್ತ್ರಗಳೆನಗೆ ಸಿದ್ಧಿಸಲಿ ಇಂದ್ರಾದಿತ್ಯರುಪಾಸನೆಯ ಮಾರ್ಗವೆನಗೆ ಸಿದ್ಧಿಸಲಿ ವೈಶ್ವದೇವಾದಿಯಜ್ಞಗಳೆನಗೆ ಸಿದ್ಧಿಸಲಿ | ಮಾತ್ಸರ್ಯಜಯದಿಂದೊದಗುವ ಮರುತ್ವತೀ ವಿದ್ಯೆ ಸಿದ್ಧಿಸಲೆನಗೆ ಮೋಹಜಯದಿಂದೊದಗುವ ಮಾಹೇಂದ್ರವಿದ್ಯೆ ಸಿದ್ಧಿಸಲಿ ಲೋಭಜಯದಿಂದ ಜ್ಯೋತಿರ್ವಿದ್ಯೆಯೆನಗೆ ಲಭಿಸಲಿ ಕ್ರೋಧಜಯದಿಂದ ಸಾವಿತ್ರಿಯೆನುವ ಆಯುರ್ವಿದ್ಯೆ ದೊರೆಯಲೆನಗೆ ಕಾಮಜಯದಿಂದ ದೊರವ ಸಾರಸ್ವತಿಯೆಂಬ ಬ್ರಹ್ನವಿದ್ಯೆ ಸಿದ್ಧಿಸಲೆನಗೆ ಬ್ರಹ್ಮಚರ್ಯಾಶ್ರಮವು ಸಿದ್ಧಿಸಲಿ ಕರ್ಮಾನುಷ್ಠಾನ ಯಶಕೆ ಗೃಹಸ್ಥಾಶ್ರಮವು ಸಿದ್ಧಿಸಲಿ ಪರಿಯಲೊಂದಾಗಿಸುವ ಸನ್ಯಾಸ ಜೀವನವೆನಗೆ ಸಿದ್ಧಿಸಲಿ ||

ವಿವರಣೆ :
(ಅಗ್ಂಶುಶ್ಚಮೇ ...- ಇತ್ಯಾದಿ ಮಂತ್ರಗಳು ಸೋಮಯಾಗದಲ್ಲಿ ಪ್ರಸಿದ್ಧವಾದ ಸೋಮರಸವನ್ನು ಹಾಕಿರುವ ಗ್ರಹಗಳೆಂಬ ಪಾತ್ರವಿಶೇಷಗಳು. ಈ ಮಂತ್ರದಲ್ಲಿನ ಶಬ್ದಗಳಿಗೆ ಸಾಯಣರ ಭಾಷ್ಯದಲ್ಲಿ ಯಜ್ಞಪ್ರಕ್ರಿಯೆಗೆ ಸಂಬಂಧಿಸಿದ ಅರ್ಥಗಳನ್ನು ವಿವರಿಸಲಾಗಿದೆ. ರುದ್ರಾಧ್ಯಾಯಕ್ಕೆ ವಿಷ್ಣು ಸೂರಿಗಳು ಆಧ್ಯಾತ್ಮ ದೃಷ್ಟಿಯಿಂದ ವ್ಯಾಖ್ಯಾನವನ್ನು ಮಾಡಿರುವರು. ಜ್ಞಾನ ಪ್ರಾಪ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಷ್ಣು ಸೂರಿಯವರ ವ್ಯಾಖ್ಯಾನುಸಾರದ ಅರ್ಥವನ್ನು ಇಲ್ಲಿ ಪ್ರಸ್ತುತ ಪಡಿಸಲಾಗಿದೆ.)
ಸುಷುಮ್ನಾ ನಾಡಿಯು ನನಗೆ ಜ್ಞಾನಯಜ್ಞದಲ್ಲಿ ಸಿದ್ಧಿಸಲಿ. ಆ ನಾಡಿಯ ರಶ್ಮಿಯು ನನಗೆ ಸಿದ್ಧಿಸಲಿ. ವಿದ್ಯಾಬಲದಿಂದ ವಿಚಲಿತವಾಗದ ಮಾರ್ಗವು ನನಗೆ ಸಿದ್ಧಿಸಲಿ. ನಾನು ವಿಚಲಿತನಾಗದವನಾಗಿ ಆಗಬೇಕು. ಅಣಿಮಾದಿ ಸಿದ್ಧಿಗಳ ಅಧಿಪತಿತ್ವವು ನನಗುಂಟಾಗಲಿ. (ಅಧಿಪತಿ ಶಬ್ದವನ್ನು ಅಧಿಪತಿತ್ವ ಎಂಬ ಅರ್ಥದಲ್ಲೂ ಗ್ರಹಿಸಬಹುದು). ಉಪಾಂಶುವೆಂಬ ಇಡಾ-ಪಿಂಗಳ ನಾಡೀದ್ವಯವು ನನಗೆ ಸಿದ್ಧಿಸಲಿ. ಉಪಾಸನೆಯನ್ನು ಮಾಡಿ ಬ್ರಹ್ಮಲೋಕಕ್ಕೆ ಹೋದವನು ಇಡಾನಾಡಿಯ ಮೂಲಕ ಭೂಲೋಕಕ್ಕೂ ಪಿಂಗಳಾ ನಾಡಿಯ ಮೂಲಕ ಸ್ವರ್ಗಲೋಕಕ್ಕೂ ಹೋಗವಹುದು. ಆ ಸ್ಥಾನಗಳಲ್ಲಿ ಅಂತರ್ಯಾಮಿಯಾದ ಪರಮಾತ್ಮನು ನನ್ನವನಾಗಿ ಇರಲಿ. ಪ್ರಾಜ್ಞ, ತೇಜಸ,
ವಿಶ್ವ - ರೂಪರಾದ ಐಂದ್ರವಾಯವ, ಮೈತ್ರಾವರುಣ, ಅಶ್ವಿನ - ಇವರುಗಳು ನನ್ನ ಗತಿಸಾಧನರಾಗಿ ಸಿದ್ಧಿಸಲಿ. ಅಲ್ಲಿ ನನಗೆ ವಿರಜಾನದಿಯು - ರಜೋಗುಣರಹಿತವಾದ - ಶುಕ್ರವಾದನದಿಯು ಪ್ರಾಪ್ತವಾಗಲಿ. ಮಂಥೀ-ಅಗ್ರಯಣ ರೂಪವಾಗಿರುವ ಅರ ಮತ್ತು ಣ್ಯ ಎಂಬ ಎರಡು ಸರೋವರಗಳು ನನಗೆ ಪ್ರಾಪ್ತವಾಗಲಿ. ಎಲ್ಲ ದೇವತೆಗಳಿಗೂ ವಾಸಸ್ಥಾನವಾಗಿರುವ ಅಶ್ವತ್ಥ ವೃಕ್ಷವು ನನಗೆ ಪ್ರಾಪ್ತವಾಗಲಿ. ಹಿರಣ್ಯಗರ್ಭಲೋಕದ ಅಧಿಪತಿಯಾದ ಧೃವನು (ಬ್ರಹ್ಮದೇವನು) ನನಗೆ ಪ್ರಾಪ್ತವಾಗಲಿ. ಬ್ರಹ್ಮದೇವನ ಮಂತ್ರಿಯಾದ ವೈಶ್ವಾನರನು ನನಗೆ ಪ್ರಾಪ್ತವಾಗಲಿ. ಅಲ್ಲಿ ಋತುದೇವತೆಗಳೂ ಗ್ರಹದೇವತೆಗಳೂ ನನಗೆ ಪ್ರಾಪ್ತವಾಗಲಿ. ಅತಿಶಯವಾದ ಯಮನಿಯಮಾದಿ ಗಳಿಂದ ಗ್ರಹಿಸಬೇಕಾದ ವೇದಶಾಸ್ತ್ರಾದಿಗಳು ನನಗೆ ಸಿದ್ಧಿಸಲಿ. ಇಂದ್ರ ಮತ್ತು ಅಗ್ನಿ ಸಂಬಂಧವಾದ ಉಪಾಸನಾಮಾರ್ಗವು ನನಗೆ ಸಂಪನ್ನವಾಗಲಿ. ಬ್ರಹ್ಮಯಜ್ಞನಿಗೆ ಈ ಅಪೇಕ್ಷೆಯಿಲ್ಲದಿದ್ದರೂ ಆ ಮಾರ್ಗದ ಸ್ವರೂಪಪರಿಚಯಕ್ಕಾಗಿ ಹೀಗೆ ಹೇಳಿದೆ). ವೈಶ್ವದೇವ ಮುಂತಾದ ಪಂಚಮಹಾಯಜ್ಞವು ನನಗೆ ಪ್ರಾಪ್ತವಾಗಲಿ. ಮತ್ಸರ ಜಯದಿಂದುಂಟಾಗುವ ಮರುತ್ವತಿ ನನಗೆ ಸಿದ್ಧಿಸಲಿ. ಮೋಹಜಯದಿಂದ ಉಂಟಾಗುವ ಮಾಹೇಂದ್ರೀ ಎಂಬ ಪರ್ಜನ್ಯ ವಿದ್ಯೆಯು ನನಗೆ ಸಿದ್ಧಿಸಲಿ. ಲೋಭ ಜಯದಿಂದ ಪ್ರಾಪ್ತವಾಗುವ ಜ್ಯೋತಿರ್ವಿದ್ಯೆಯು ನನಗೆ ಸಿದ್ಧಿಸಲಿ. ಕ್ರೋಧ ಜಯದಿಂದ ಪ್ರಾಪ್ತವಾಗುವ ಸಾವಿತ್ರೀ ಎಂಬ ಆಯುರ್ವಿದ್ಯೆಯು ನನಗೆ ಸಿದ್ಧಿಸಲಿ. ಕಾಮಜಯದಿಂದ ಪ್ರಾಪ್ತವಾಗುವ ಸಾರಸ್ವತೀ ಎಂಬ ಬ್ರಹ್ಮವಿದ್ಯೆಯು ನನಗೆ ಸಿದ್ಧಿಸಲಿ. ಪೌಷ್ಣವೆಂಬ ಬ್ರಹ್ಮಚರ್ಯಾಶ್ರಮವು ತಪಸ್ಸು-ವಿದ್ಯೆಗಳ ಪ್ರಾಪ್ತಿಗಾಗಿ ನನಗೆ ಸಿದ್ಧಿಸಲಿ. ಪಾತ್ನೀವತವೆಂಬ ಗೃಹಸ್ಥಾಶ್ರಮವು ಕರ್ಮಾನುಷ್ಠಾನದ ಸಿದ್ಧಿಗಾಗಿ ನನಗುಂಟಾಗಲಿ. ಹಾರೀಯೋಜನವೆಂಬ ಸಂನ್ಯಾಸಾಶ್ರಮವು ಮೋಕ್ಷರೂಪವಾದ ಶ್ರೀಹರಿ-ಪರಮಾತ್ಮನೊಡನೆ ಒಂದುಗೂಡಿಸುವ ಸ್ಥಿತಿಗಾಗಿ ನನಗೆ ಸಿದ್ಧಿಸಲಿ.
(ವೇದೋಕ್ತವಾದ ಉಪಾಸನಾ ಮಾರ್ಗದ ರಹಸ್ಯಗಳು ಇಲ್ಲಿ ವರ್ಣಿತವಾಗಿದೆ. ಯೋಗಸಿದ್ಧಿಗಳೂ ವರ್ಣಿತವಾಗಿವೆ. ಇವುಗಳ ವಿವರಣೆಯಿಂದ ಮಾನವನು ಪರಮ ಪುರುಷಾರ್ಥ ಪ್ರಾಪ್ತಿಯ ಕಡೆಗೆ ತನ್ನ ಮನಸ್ಸನ್ನು ಹರಿಸಬೇಕು ಎಂಬುದೇ ಇವುಗಳ ತಾತ್ಪರ್ಯ).

ಅಷ್ಟಮಾನುವಾಕ - ಸಂಸ್ಕೃತದಲ್ಲಿ :
ಇಧ್ಮಶ್ಚ ಮೇ ಬರ್ಹಿಶ್ಚ ಮೇ ವೇದಿಶ್ಚ ಮೇ ಧಿಷ್ಣಿಯಾಶ್ಚ ಮೇ ಸ್ರುಚಶ್ಚ ಮೇ ಚಮಸಾಶ್ಚ ಮೇ ಗ್ರಾವಾಣಾಶ್ಚ ಮೇ ಸ್ಚರವಶ್ಚ ಮ ಉಪರವಾಶ್ಚ ಮೇsಧಿಷವಣೇ ಚ ಮೇ ದ್ರೋಣಕಲಶಶ್ಚ ಮೇ ವಾಯವ್ಯಾನಿ ಚ ಮೇ ಪೂತಭೃಶ್ಚ ಮೇ ಆಧವನೀಯಶ್ಚ ಮ ಅಗ್ನೀಧ್ರಂ ಚ ಮೇ ಹವಿರ್ಧಾನಂ ಚ ಮೇ ಗೃಹಾಶ್ಚ ಮೇ ಸದಶ್ಚ ಮೇ ಪುರೋಡಾಶಾಶ್ಚ ಮೇ ಪಚತಾಶ್ಚ ಮೇsವಭೃಥಶ್ಚ ಮೇ ಸ್ಚಗಾಕಾರಶ್ಚ ಮೇ ||

ಎಂಟನೇ ಅನುವಾಕ - ಕನ್ನಡದಲ್ಲಿ :
ಸುಮಿಧೆಯಿರಲೆನಗೆ ದರ್ಭೆಯ ಹಾಸಿರಲೆನಗೆ ಯಜ್ಞವೇದಿಕೆಯಿರಲೆನಗೆ ಅಗ್ನಿಸ್ಥಾನಗಳಿರಲೆನಗೆ ಸೌಟುಗಳಿರಲೆನಗೆ ಚಮಸಗಳಿರಲೆನಗೆ ಶಿಲೆಗಳಿರಲೆನಗೆ. ಬಲಿಸ್ತಂಭದ ಖಂಡಗಳಿರಲೆನಗೆ ಬಲಿಸ್ತಂಭಗಳಿರಲೆನಗೆ ಸೋಮರಸ ಮೊಗೆವ ಅವಧಿಗಳಿರಲೆನಗೆ ಮರದಕಲಶವಿರಲೆನಗೆ ಗಾಳಿಯನುಕೂಲವಿರಲೆನಗೆ ಹಿರಿಬಾಯ ಪವಿತ್ರ ಯಜ್ಞಘಟವಿರಲೆನಗೆ ಓಜವೆಂಬ ಮನೋಧಾತುವೆ ಯಜ್ಞಸ್ಥಳವಾಗಿರಲೆನಗೆ ಸಾಹಸವೆ ಹವಿಯಪಾತ್ರೆಯಾಗಿರಲೆನಗೆ ಶಬ್ದಾದಿ ವಿಷಯಗಳೆ ಗೃಹಗಳಾಗಿ ಸಂಪನ್ನವಾಗಿರಲೆನಗೆ ಸರಸ್ಸಿರಲೆನಗೆ ಕಾಮಾದಿಗಳೆ ಪುರೋಡಾಶಗಳಾಗಿರಲೆನಗೆ ಅವಿದ್ಯಾವೃತ್ತಿಗಳೆ ಪಕ್ವಾನ್ನವಾಗಿರಲೆನಗೆ ಇಡಾ-ಪಿಂಗಳ-ಸುಷುಮ್ನೆಗಳ ಸಂಗಮ ಅವಭೃತಸ್ನಾನವಾಗಿರಲೆನಗೆ ಪರಮಾತ್ಮನಲೆನ್ನ ವಿಲೀನಗೊಳಿಸುವುದೆ ಸರ್ವಸಮರ್ಪಣೆಯ ಪೂರ್ಣಾಹುತಿಯಾಗಿರಲಿ ||

ವಿವರಣೆ :
(ಇಧ್ಮಶ್ಚಮೇ - ಇತ್ಯಾದಿ ಮಂತ್ರಗಳು ಯಜ್ಞಪ್ರಕ್ರಿಯೆಯಲ್ಲಿ ಪ್ರಸಿದ್ಧವಾದ ಅರ್ಥಗಳನ್ನು ತಿಳಿಸುವಂತೆ ಸಾಯಣ ಭಾಷ್ಯದಲ್ಲಿ ವಿವರಿಸಲಾಗಿದೆ. ಅಧ್ಯಾತ್ಮಜ್ಞಾನ ದೃಷ್ಟಿಯಿಂದ ವಿಷ್ಣುಸೂರಿಗಳ ಭಾಷ್ಯವನ್ನು ಇಲ್ಲಿ ಅನುಸರಿಸಿ ಅರ್ಥವಿವರಣೆಯನ್ನು ಮಾಡಲಾಗಿದೆ. ಸದ್ಯೋಮುಕ್ತಿಯನ್ನು ಅಪೇಕ್ಷಿಸುವವನ ದೇಹವೇ ಯಜ್ಞಸಾಧನವಾಗಿರುತ್ತದೆ. ಇದು ಆತ್ಮಯಜ್ಞದ ರಹಸ್ಯವಾಗಿದೆ. ಇಲ್ಲಿ ಶರೀರದ ಭಾಗಗಳೇ ಯಜ್ಞದ ಸಂಭಾರಗಳಾಗಿ ಭಾವಿಸಲ್ಪಡುತ್ತವೆ. ಜ್ಞಾನಯಜ್ಞವೇ ಸರ್ವಶ್ರೇಷ್ಟವಾದುದೆಂದು ವೇದಶಾಸ್ತ್ರಗಳು ಸಾರುತ್ತವೆ).
ಪ್ರತ್ಯಗ್ ಜೀವನಿಂದ ಅಭಿನ್ನವಾಗಿರುವ ಪರಮಾತ್ಮನನ್ನು ಐಕ್ಯಭಾವದಿಂದ ಹೊಂದಲು ಅಭಿಲಾಷಿಸುವ ನನಗೆ ಈ ಶರೀರವೇ ಇಧ್ಮವಾಗಿ (ಇಧ್ಮವೆಂಬ ಸಮಿತ್ತಾಗಿ) ಸಿದ್ಧಿಸಲಿ. ನನ್ನ ಶರೀರದ ರೋಮಗಳು ನನಗೆ ಬರ್ಹಿಗಳಾಗಿ ಯಜ್ಞಪಾತ್ರಗಳನ್ನು ಹಾಗೂ ಹವಿಸ್ಸಿನ ಪಾತ್ರಗಳನ್ನು ಇಡಲು ಹರಡುವ ದರ್ಭವಿಶೇಷಗಳು ಸಿದ್ಧಿಸಲಿ. ನನ್ನ ವಕ್ಷಸ್ಥಲವೇ ನನಗೆ ವೇದಿಯಾಗಿ ಕಲ್ಪಿತವಾಗಲಿ. ಪ್ರಾಣಗಳೇ ನನಗೆ ಧಿಷ್ಣಿಯಗಳಾಗಿ (ಅಗ್ನಿಸ್ಥಾನಗಳಾಗಿ) ಸಂಪನ್ನವಾಗಲಿ. ಜ್ಞಾನೇಂದ್ರಿಯಗಳು ನನಗೆ ಸ್ರುಕ್ ಗಳಾಗಿ ಕಲ್ಪಿತವಾಗಲಿ. ಕರ್ಮೇಂದ್ರಿಯಗಳು ನನಗೆ ಚಮಸಗಳಾಗಿ ಸಂಪನ್ನವಾಗಲಿ. ಅಸ್ಥಿಗಳು ನನಗೆ ಗ್ರಾವಗಳಾಗಿ (ಶಿಲೆಗಳಾಗಿ) ಆಗಲಿ. ದೇಹಚ್ಛಿದ್ರಗಳು ನನಗೆ ಯೂಪಖಂಡಗಳಾಗಿ ಸಂಪನ್ನವಾಗಲಿ. ಶಿರಃಕಪಾಲಗಳು ನನಗೆ ಉಪರವಗಳಾಗಿ (ಯೂಪದ ಮೂಲಭಾಗಗಳಾಗಿ) ಸಂಪನ್ನವಾಗಲಿ. ಚಂದ್ರ-ಸೂರ್ಯ ಸ್ವರಗಳೇ ನನಗೆ ಅಧಿಷವಣಗಳಾಗಿ (ಸೋಮರಸವನ್ನು ತೆಗೆಯುವ ಕಾಲಗಳು) ಸಂಪನ್ನವಾಗಲಿ. ಕಂಠಕೂಪವೇ ನನಗೆ ದ್ರೋಣಕಲಶವಾಗಿ ಕಲ್ಪಿತವಾಗಲಿ. ವಾಯುಪರಿಣಾಮ ವಿಶೇಷಗಳೇ ನನಗೆ ಯೋಗಶಾಸ್ತ್ರ ಪ್ರಸಿದ್ಧವಾದ ಹತ್ತು ಸ್ವರಗಳಾಗಲಿ. ಋತಂಭರಾ ಪ್ರಜ್ಞೆಯೇ ನನಗೆ ಪೂತಭೃತ್ (ದೊಡ್ಡ ಮುಖವುಳ್ಳ ಪವಿತ್ರವಾದ ಮಣ್ಣಿನ ಗಡಿಗೆಯೆಂಬ ಯಜ್ಞಸಾಧನ) ಆಗಲಿ. ಓಜಸ್ಸೆಂಬ ಮನೋಧಾತುವೇ ನನಗೆ ಅಹವನೀಯವಾಗಿ ಸಂಪನ್ನವಾಗಲಿ. ಶುಕ್ರವೆಂಬ ಬುದ್ಧಿಧಾತುವು ನನಗೆ ಅಗ್ನೀಧ್ರವಾಗಿ ಸಂಪನ್ನವಾಗಲಿ. ಸಹಸ್ಸೆಂಬ ಚಿತ್ತಧಾತುವು ನನಗೆ ಹವಿರ್ಧಾನವಾಗಿ ಸಂಪನ್ನವಾಗಲಿ. ಶಬ್ದ ಮೊದಲಾದ ವಿಷಯಗಳೇ ನನಗೆ ಗೃಹಗಳಾಗಿ ಸಂಪನ್ನವಾಗಲಿ. ಹೃದಯ ಸ್ಥಾನವೇ ನನಗೆ ಸರಸ್ಸಾಗಿ ಸಂಪನ್ನವಾಗಲಿ. ಕಾಮಾದಿಗಳೇ ನನಗೆ ಪುರೋಡಾಶಗಳಾಗಿ ಕಲ್ಪಿತವಾಗಲಿ. ಅವಿದ್ಯಾವೃತ್ತಿಗಳೇ ನನಗೆ ಪಚತಗಳೆಂಬ ಪಕ್ವಾನ್ನಗಳಾಗಿ ಆಗಲಿ. ಇಡಾ-ಪಿಂಗಳಾ-ಸುಷುಮ್ನಾ ನಾಡಿಗಲ ಸಂಗಮ ಸ್ಥಾನವೇ ನನಗೆ ಅವಭೃತವಾಗಿ ಸಂಪನ್ನವಾಗಲಿ. ಪರಮಾತ್ಮನಲ್ಲಿ ಸಮರ್ಪಣ ಮಾಡುವಿಕೆಯೇ ನನಗೆ ಸ್ವಗಾಕಾರವಾಗಿ (ದೇಹಾದಿ ಸಮಸ್ತವಸ್ತುವನ್ನೂ ಪರಮಾತ್ಮನಿಗೆ ಸಮರ್ಪಿಸಿ ವಿಲೀನಗೊಳಿಸುವಿಕೆ) ಕಲ್ಪಿತವಾಗಲಿ.
(ಇದು ಆತ್ಮಯಜ್ಞದ ರಹಸ್ಯವಾಗಿದೆ. ದೇಹ ಮೊದಲಾಗಿ ಸಮಸ್ತ ಪದಾರ್ಥ ಸಮೂಹವೂ ಪ್ರತ್ಯಗಾತ್ಮ-ಪರಮಾತ್ಮರ ಏಕೀಭಾವ ರೂಪವಾದ ಪರಮಾನಂದದಲ್ಲಿ ವಿಲೀನವಾಗುವ ಆತ್ಮಯಜ್ಞ ವಿಧಾನವು ಇಲ್ಲಿ ಪ್ರತಿಪಾದಿತವಾಗಿದೆ. ರುದ್ರನಲ್ಲದವನು ರುದ್ರನನ್ನು ವಸ್ತುತಃ ಅರ್ಚನೆ ಮಾಡಲಾಗುವುದಿಲ್ಲವೆಂದು ಹೇಳಿರುವುದರಿಂದ ಪರಮಾತ್ಮನಾದ ರುದ್ರನ ತಾದಾತ್ಮ್ಯವನ್ನು ಹೊಂದುವ ರಹಸ್ಯಮಯವಾದ ಯಜ್ಞವಿಧಾನವು ಇಲ್ಲಿ ಅಡಗಿದೆ).

ನವಮಾನುವಾಕ - ಸಂಸ್ಕೃತದಲ್ಲಿ :
ಅಗ್ನಿಶ್ಚ ಮೇ ಘರ್ಮಶ್ಚ ಮೇsರ್ಕಶ್ಚ ಮೇ ಸೂರ್ಯಶ್ಚ ಮೇ ಪ್ರಾಣಶ್ಚ ಮೇsಶ್ವಮೇಧಶ್ಚ ಮೇ ಪೃಥಿವೀ ಚ ಮೇsದಿತಿಶ್ಚ ಮೇ ದಿತಿಶ್ಚ ಮೇ ದೌಶ್ಚ ಮೇ ಶಕ್ವರೀ ರಂಗುಲಯೋ ದಿಶಶ್ಚ ಮೇ ಯಜ್ಞೇನ ಕಲ್ಪಂತಾಮೃಕ್ಚ ಮೇ ಸಾಮ ಚ ಮೇ ಸ್ತೋಮಶ್ಚ ಮೇ ಯಜುಶ್ಚ ಮೇ ದೀಕ್ಷಾ ಚ ಮೇ ತಪಶ್ಚ ಮ ಋತಶ್ಚ ಮೇ ವ್ರತಂ ಚ ಮೇsಹೋರಾತ್ರಯೋರ್ವೃಷ್ಟ್ಯಾ ಬೃಹದ್ರಥಂತರೇ ಚ ಮೇ ಯಜ್ಞೇನ ಕಲ್ಪೇತಾಮ್ ||

ಒಂಬತ್ತನೇ ಅನುವಾಕ - ಕನ್ನಡದಲ್ಲಿ :
ಸಗ್ಗಸಾಧನವಹ ಅಗ್ನಿಯಿರಲೆನಗೆ ಸೋಮಯಾಗ ದುಷ್ಣತೆಯಿರಲೆನಗೆ ಅರ್ಕಯಾಗವಿರಲೆನಗೆ ಸೂರ್ಯಯಜ್ಞವಿರಲೆನಗೆ ಪ್ರಾಣಾಹುತಿ ಸಿದ್ಧಿಸಲೆನಗೆ ಅಶ್ವಮೇಧವಿರಲೆನಗೆ ಪೃಥ್ವಿಯಿರಲೆನಗೆ ಅದಿತಿಲೋಕವಿರಲೆನಗೆ ದಿತಿಲೋಕವಿರಲೆನಗೆ ದ್ಯುಲೋಕವಿರಲೆನಗೆ ಶಕ್ತಿಯುತ ಬೆರಳುಗಳಿರಲೆನಗೆ ದಿಶೆಗಳಿರಲೆನಗೆ ಯಜ್ಞದಿಂದಲಿವು ಸಮರ್ಥವಾಗಲಿ | ಸಾಮವಿರಲೆನಗೆ ಮಂತ್ರಸ್ತೋಮವಿರಲೆನಗೆ ಯಜುವಿರಲೆನಗೆ ಯಜ್ಞದೀಕ್ಷೆಯಿರಲೆನಗೆ ತಪವಿರಲೆನಗೆ ಯಜ್ಞಾಂಗರೂಪದ ಋತುವಿರಲೆನಗೆ ಯಜ್ಞವ್ರತವಿರಲೆನಗೆ ಹಗಲಿರುಳ ಮಳೆಯಿಂದ ಬೆಳೆವ ಸಸ್ಯರಾಜಿಗಳಿರಲೆನಗೆ ಬೃಹದಥಂತರವೆಂಬ ಸಾಮಗಳಿರಲೆನಗೆ ಯಜ್ಞರೂಪದಲಿವು ಸಿದ್ಧಿಸಲೆನಗೆ ||

ವಿವರಣೆ :
(ಅಗ್ನಿಶ್ಚ ಮೇ - ಇತ್ಯಾದಿ ಮಂತ್ರಗಳನ್ನು ಸಾಯಣ ಭಾಷ್ಯದಲ್ಲಿ ಕೇವಲ ಯಜ್ಞ - ಪ್ರಕ್ರಿಯೆಗೆ ಸಂಬಂಧಪಟ್ಟಂತೆ ವಿವರಿಸಲಾಗಿದೆ. ವಿಷ್ಣುಸೂರಿಗಳು ಆಧ್ಯಾತ್ಮಿಕವಾದ ಉಪಾಸನಾ ಪ್ರಕರಣಕ್ಕೆ ಹೊಂದಿಸಿ ವಿವರಣೆಯನ್ನು ನೀಡಿದ್ದಾರೆ. ರುದ್ರದೇವನ ಉಪಾಸನಾರೂಪ ಪೂಜೆಗೆ ಪೋಷಕವಾಗುವಂತೆ ವಿಷ್ಣುಸೂರಿಗಳ ಭಾಷ್ಯವನ್ನು ಅನುಸರಿಸಲಾಗಿದೆ).
ಚಯನಮಾಡಲ್ಪಡುವ ಸ್ವರ್ಗ ಸಾಧನವಾದ ಅಗ್ನಿಯು (ರುದ್ರದೇವನ ) ವಿಭೂತಿಯಾದ ಅಗ್ನಿಯು ಉಪಾಸನೆಗಾಗಿ ನನಗೆ ಸಿದ್ಧಿಸಲಿ. (ಅಥವಾ ಅಗ್ನಿ ಅಂದರೆ ನಾನಾ ವಿಷಯಗಳ ಭೋಗಸ್ಥಾನವಾದ ಸ್ವರ್ಗ. ಸ್ವರ್ಗ ಮುಂತಾದ ವಿರಾಟ್ ಪುರುಷನ ದೇಹವನ್ನು ಪರಮಾತ್ಮನಲ್ಲಿ ಲಯಗೊಳಿಸುವ ದೃಷ್ಟಿಯಿಂದ ಲಯೋಪಾಸನಾ ವಿಚಾರವು ಇಲ್ಲಿ ಪ್ರಸ್ತುತವಾಗಿದೆಯೆಂದು ಭಾವಿಸಬಹುದು. ಈ ರೀತಿಯ ಉಪಾಸನೆಯೂ ರುದ್ರದೇವನ ಪೂಜೆಯ ಉದ್ದೇಶವಾಗಿರುತ್ತದೆ). ಘರ್ಮ ಎಂದರೆ ಸೋಮಯಾಗದ ಅಂಗವಾದ ಪ್ರವರ್ಗ್ಯವೆಂಬ (ಅಂಗಭೂತವಾದ ಒಂದು ಯಾಗ) ಕರ್ಮ. ಇದೂ ರುದ್ರದೇವನ ಉಪಾಸನೆಗಾಗಿ ನನಗೆ ಸಿದ್ಧಿಸಲಿ. ಅಥವಾ ಘರ್ಮವೆಂದರೆ ವಿರಾಟ್ ಪುರುಷನ ದೇಹವೇ ಆಗಿರುವ ನರಕ. ವಿರಾಟ್ ದೇಹವನ್ನು ಪರಮಾತ್ಮನಲ್ಲಿ ಲಯಗೊಳಿಸುವ ಉಪಾಸನೆಯಲ್ಲಿ ನನಗೆ ಈ ನರಕವೂ ಸಿದ್ಧಿಸಲಿ. ಅರ್ಕವೆಂಬ ಯಾಗ ವಿಶೇಷವೂ ರುದ್ರನ ಉಪಾಸನೆಗಾಗಿ ನನಗೆ ಸಿದ್ಧಿಸಲಿ. ಬ್ರಹ್ಮಲೋಕವೂ ನನಗೆ ಲಯೋಪಾಸನೆಗಾಗಿ ಸಿದ್ಧಿಸಲಿ. ಆದಿತ್ಯರೂಪವಾದ ವಿರಾಟ್ ದೇಹವೂ ನನಗೆ ಲಯೋಪಾಸನೆಗಾಗಿ ಸಿದ್ಧಿಸಲಿ. "ಪ್ರಾಣಾಯ ಸ್ವಾಹಾ " ಎಂದು ಮುಂತಾಗಿ ವಿಹಿತವಾದ ಪ್ರಾಣಾಹುತಿಯೂ ರುದ್ರನ ಉಪಾಸನೆಗಾಗಿ ನನಗೆ ಸಿದ್ಧಿಸಲಿ. ವಿರಾಟ್ ದೇಹವೇ ಆಗಿರುವ ಜಗತ್ತಿನ ಪ್ರಾಣರೂಪವಾದ ಬಾಹ್ಯವಾಯುವು ಲಯೋಪಾಸನೆಗಾಗಿ ನನಗೆ ಸಿದ್ಧಿಸಲಿ.
ಪ್ರಸಿದ್ಧವಾದ ಅಶ್ವಮೇಧಯಾಗವು ರುದ್ರದೇವನ ಉಪಾಸನೆಗಾಗಿ ನನಗೆ ಸಿದ್ಧಿಸಲಿ. ಅಶ್ವಮೇಧವೆಂಬ ಕಾಮಜಯವು ಲಯೋಪಾಸನೆಗಾಗಿ ನನಗೆ ಸಿದ್ಧಿಸಲಿ. ಪೃಥ್ವೀಲೋಕ, ಅದಿತಿಲೋಕ, ದಿತಿಲೋಕ, ದ್ಯುಲೋಕ - ಈ ಲೋಕಗಳು ರುದ್ರೋಪಾಸನೆಗಾಗಿ ನನಗೆ ಸಿದ್ಧಿಸಲಿ. ಅದಿತಿ, ದಿತಿಲೋಕ ಸಹಿತವಾದ ವಿರಾಟ್ ಪುರುಷನ ದೇಹವೆಂಬ ಪೃಥ್ವೀಲೋಕವು ಲಯೋಪಾಸನೆಗಾಗಿ ನನಗೆ ಸಿದ್ಧಿಸಲಿ. ಈ ಲೋಕಾಭಿಮಾನಿ ದೇವತೆಗಳು ರುದ್ರೋಪಾಸನೆಗಾಗಿ ನನಗೆ ಸಿದ್ಧಿಸಲಿ. ಶಕ್ತವಾದ ವಿರಾಟ್ ಪುರುಷನ ಅಂಗುಲಿಗಳು, ದಿಕ್ಕುಗಳು ರುದ್ರೋಪಾಸನೆಗಾಗಿ ನನಗೆ ಸಿದ್ಧಿಸಲಿ. ಅಜವೀಥೀ, ನಾಗವೀಥೀ, ಗಜವೀಥೀ - ಎಂಬ ನಕ್ಷತ್ರ ಪಥಗಳಾದ ಶಕ್ವರೀಗಳು ಹಾಗೂ ಅಂಗುಳಿಗಳು (ಇವೆಲ್ಲಾ ವಿರಾಟ್ ಪುರುಷನ ದೇಹಭಾಗಗಳು) ಲಯೋಪಾಸನೆಗಾಗಿ ನನಗೆ ಸಿದ್ಧಿಸಲಿ. (ಇವೆಲ್ಲವೂ ನಾನು ಮಾಡುವ ರುದ್ರಪೂಜಾ ರೂಪವಾದ ಯಜ್ಞದಿಂದ ತಮ್ಮ ತಮ್ಮ ವ್ಯವಹಾರವನ್ನು ನೆರವೇರಿಸುವುದರಲ್ಲಿ ಸಮರ್ಥವಾಗಲಿ. ಅಥವಾ ಇವೆಲ್ಲವೂ ಜ್ಞಾನಯಜ್ಞ ವಿಧಾನದಿಂದ ಪರಮಾತ್ಮ ಸ್ವರೂಪನಾದ ನನ್ನಲ್ಲಿ ಲಯವಾಗಲಿ).
ಋಕ್, ಸಾಮ, ಸಾಮಾವೃತ್ತಿ ರೂಪವಾದ ಸ್ತೋಮ ಅಥವಾ ಅಥರ್ವ ವೇದದ ಪ್ರಸಿದ್ಧವಾದ ಮಂತ್ರಸ್ತೋಮ, ಯಜುರ್ವೇದ, ದೀಕ್ಷಾರೂಪವಾದ ಯಜಮಾನ ಸಂಸ್ಕಾರ ಅಥವಾ ವೇದಾಧ್ಯಯನಕ್ಕೆ ಬೇಕಾದ ಬ್ರಹ್ಮಚರ್ಯಾದಿ ನಿಯಮ, ಪಾಪಕ್ಷಯಕ್ಕಾಗಿ ಮಾಡುವ ವ್ರತರೂಪವಾದ ತಪಸ್ಸು ಅಥವಾ ತತ್ತ್ವಜ್ಞಾನಕ್ಕೆ ಅವಶ್ಯಕವಾದ ಏಕಾಗ್ರತೆ, ಯಜ್ಞಾಂಗ ರೂಪವಾಗಿರುವ ಋತುವೆಂಬ ಕಾಲ ಅಥವಾ ಉಪಾಸನೆಗೆ ಬೇಕಾದ ಶ್ರವಣಾದಿ ಕ್ರಿಯೆಯು, ವ್ರತ ಅಥವಾ ಮೇಖಲಾ ಮುಂತಾದುದು, ಹಗಲು-ರಾತ್ರಿಗಳಲ್ಲಿ ಉಂಟಾಗುವ ವೃಷ್ಟಿಯಿಂದ ಬೆಳೆಯುವ ಸಸ್ಯ ಮುಂತಾದುದು, ಬೃಹದ್ರಥಂತರವೆಂಬ ಸಾಮಗಳು - ಹೀಗೆ ಇವೆಲ್ಲವೂ ರುದ್ರಪೂಜಾಕಾರ್ಯರೂಪ ಯಜ್ಞರೂಪವಾಗಿ ನನಗೆ ಸಿದ್ಧಿಸಲಿ. ಅಥವಾ ಜ್ಞಾನ-ಯಜ್ಞ ವಿಧಾನದಿಂದ ಪರಮಾತ್ಮ ಸ್ವರೂಪನಾದ ನನ್ನಲ್ಲಿ ಲಯವಾಗಲಿ.
(ರುದ್ರಪೂಜೆಗೆ ಎಲ್ಲವೂ ನನಗೆ ಸಿದ್ಧಿಸಲಿ. ಅಥವಾ ಜ್ಞಾನಯಜ್ಞ ರೂಪವಾಗಿ ಎಲ್ಲವೂ ಪರಮಾತ್ಮನ ಸ್ವರೂಪನಾದ ನನ್ನಲ್ಲಿ ಲಯವಾಗಲಿ ಎಂದು ಅಭಿಪ್ರಾಯ).

ದಶಮಾನುವಾಕ - ಸಂಸ್ಕೃತದಲ್ಲಿ :
ಗರ್ಭಾಶ್ಚ ಮೇ ವತ್ಸಾಶ್ಚ ಮೇ ತ್ರ್ಯವಿಶ್ಚ ಮೇ ತ್ರ್ಯವೀ ಚ ಮೇ ದಿತ್ಯವಾಟ್ಚ ಮೇ ದಿತ್ಯೌಹೀ ಚ ಮೇ ಪಂಚಾವಿಶ್ಚ ಮೇ ಪಂಚಾವೀ ಚ ಮೇ ತ್ರಿವತ್ಸಶ್ಚ ಮೇ ತ್ರಿವತ್ಸಾ ಚ ಮೇ ತುರ್ಯವಾಟ್ಚ ಮೇ ತುರ್ಯೌಹೀ ಚ ಮೇ ಷಷ್ಠವಾಟ್ಚ ಮೇ ಷಷ್ಟೌಹೀ ಚ ಮ ಉಕ್ಷಾ ಚ ಮೇ ವಶಾ ಚ ಮ ಋಷಭಶ್ಚ ಮೇ ವೇಹಶ್ಚ ಮೇsನಡ್ವಾಂ ಚ ಮೇ ಧೇನುಶ್ಚ ಮ ಆಯುರ್ಯಜ್ಞೇನ ಕಲ್ಪತಾಂ ಪ್ರಾಣೋ ಯಜ್ಞೇನ ಕಲ್ಪತಾಮಪಾನೋ ಯಜ್ಞೇನ ಕಲ್ಪತಾಂ ವ್ಯಾನೋ ಯಜ್ಞೇನ ಕಲ್ಪತಾಂ ಚಕ್ಷುರ್ಯಜ್ಞೇನ ಕಲ್ಪತಾಂ ಶ್ರೋತ್ರಂ ಯಜ್ಞೇನ ಕಲ್ಪತಾಂ ಮನೋ ಯಜ್ಞೇನ ಕಲ್ಪತಾಂ ವಾಗ್ಯಜ್ಞೇನ ಕಲ್ಪತಾಮಾತ್ಮಾ ಯಜ್ಞೇನ ಕಲ್ಪತಾಂ ಯಜ್ಞೋ ಯಜ್ಞೇನ ಕಲ್ಪತಾಮ್ ||

ಹತ್ತನೇ ಅನುವಾಕ - ಕನ್ನಡದಲ್ಲಿ :
ಗರ್ಭಸ್ಥ ಕರುಗಳಿರಲೆನಗೆ ಹುಟ್ಟಿದ ಕರುಗಳಿರಲೆನಗೆ ಎಳೆಯ ಹೋರಿಗಳಿರಲೆನಗೆ ಎಳೆಗರುವಿರಲೆನಗೆ ದುಡಿವ ಎತ್ತಿರಲೆನಗೆ ಕರೆವ ಹಸುವಿರಲೆನಗೆ ವಿವಿಧ ವಯಸಿನ ಎತ್ತುಹಸುಗಳಿರಲೆನಗೆ ಬೀಜದೆತ್ತಿರಲೆನಗೆ ಬಂಜೆಹಸುವೂ ಇರಲೆನಗೆ ಮುದಿಯೆತ್ತಿರಲೆನಗೆ ಗಬ್ಬವಳಿದ ಹಸುವೂ ಇರಲೆನಗೆ ಗಾಡಿಯೆಳೆವೆತ್ತಿರಲೆನಗೆ ಈದ ಹಸುವಿರಲೆನಗೆ ಆಯು ಪರಮಾತ್ಮನಲಿ ಲಯವಾಗಲೀ ಯಜ್ಞದಲಿ ಪ್ರಾಣ ಲಯವಾಗಲೀ ಯಜ್ಞದಲಿ ಅಪಾನ ಲಯವಾಗಲಿ ವ್ಯಾನ ಲಯವಾಗಲಿ ಕಣ್ಕಿವಿಗಳು ಲಯವಾಗಲಿ ಮನಸುಮಾತುಗಳು ಲಯವಾಗಲಿ ದೇಹ ಲಯವಾಗಲಿ ಪರಮಾತ್ಮನಲೀಯಜ್ಞದಿಂದ, ಯಜ್ಞರೂಪದೀ ಉಪಾಸನೆಯೂ ಪರಮಾತ್ಮನಲಿ ಲಯವಾಗಲಿ ||

ವಿವರಣೆ :
ಗರ್ಭಸ್ಥವಾದ ಕರುಗಳು ಶಿವಪೂಜಾರೂಪವಾದ ಯಜ್ಞದ ದೃಷ್ಟಿಯಿಂದ ನನಗೆ ಸಿದ್ಧಿಸಲಿ. ಒಂದೂವರೆ ವರ್ಷದ ಹೋರಿಕರುವು ನನಗೆ ಸಿದ್ಧಿಸಲಿ. ಒಂದೂವರೆ ವರ್ಷದ ಹೆಣ್ಣು ಕರುವು ನನಗೆ ಸಿದ್ಧಿಸಲಿ. ಎರಡು ವರ್ಷ ವಯಸ್ಸಿನ ವೃಷಭವು ನನಗೆ ಸಿದ್ಧಿಸಲಿ. ಎರಡು ವರ್ಷ ವಯಸ್ಸಿನ ಹಸುವು ನನಗೆ ಸಿದ್ಧಿಸಲಿ. ಎರಡೂವರೆ ವರ್ಷದ ವೃಷಭವು ನನಗೆ ಸಿದ್ಧಿಸಲಿ. ಎರಡೂವರೆ ವರ್ಷದ ಹಸುವು ನನಗೆ ಸಿದ್ಧಿಸಲಿ. ಮೂರು ವರ್ಷದ ವೃಷಭವು ನನಗೆ ಸಿದ್ಧಿಸಲಿ. ಮೂರು ವರ್ಷದ ಹಸುವುಾ ನನಗೆ ಸಿದ್ಧಿಸಲಿ. ಮೂರೂವರೆ ವರ್ಷದ ವೃಷಭವು ನನಗೆ ಸಿದ್ಧಿಸಲಿ. ಮೂರೂವರೆ ವರ್ಷದ ಹಸುವು ನನಗೆ ಸಿದ್ಧಿಸಲಿ. ನಾಲ್ಕು ವರ್ಷದ ವೃಷಭವು ನನಗೆ ಸಿದ್ಧಿಸಲಿ. ನಾಲ್ಕು ವರ್ಷದ ಹಸುವು ನನಗೆ ಸಿದ್ಧಿಸಲಿ. ಸೇಚನಸಮರ್ಥವಾದ ವೃಷಭವು ನನಗೆ ಸಿದ್ಧವಾಗಲಿ. ಬಂಜೆಯಾದ ಹಸುವು ನನಗುಂಟಾಗಲಿ. (ಇದರಿಂದಲೂ ಉಪಯೋಗವಿರುತ್ತದೆ). ಸೇಚನ ಸಮರ್ಥವಾದ ವೃಷಭಕ್ಕಿಂತಲೂ ಅಧಿಕ ವಯಸ್ಸಿನ ವೃಷಭವು ನನಗಿರಲಿ. ಗರ್ಭಘಾತಿಯಾದ ಹಸುವಾದರೂ ನನಗಿರಲಿ. ಗಾಡಿಯನ್ನು ಹೊರುವ ಎತ್ತು ನನಗುಂಟಾಗಲಿ. ಹೊಸದಾಗಿ ಪ್ರಸವಿಸಿದ ಹಸುವು ನನಗುಂಟಾಗಲಿ. ಆಯುಸ್ಸು, ಪ್ರಾಣ, ಅಪಾನ, ವ್ಯಾನ, ಚಕ್ಷುಸ್, ಶ್ರೋತ್ರ , ಮನಸ್ಸು, ವಾಕ್, ಶರೀರ , ಮುಂದೆ ಮಾಡಲಿರುವ ಯಜ್ಞ - ಇವೆಲ್ಲವೂ ನನ್ನ ರುದ್ರಪೂಜಾರೂಪವಾದ ಯಜ್ಞದಿಂದ ತಮ್ಮ ತಮ್ಮ ಕಾರ್ಯಗಳ ನಿರ್ವಹಣೆಯಲ್ಲಿ ಸಮರ್ಥವಾಗಲಿ.
ಜ್ಞಾನಯಜ್ಞದ ದೃಷ್ಟಿಯಿಂದ ಈ ಅನುವಾಕದ ಅರ್ಥವು ಹೀಗಿದೆ : -
ಪ್ರಸುಪ್ತರೋಗಗಳು, ಪ್ರಬುದ್ಧವಾದ ರೋಗಗಳು, (ಇವೆರಡು ವಿಧದ ರೋಗಗಳು ಸ್ಥೂಲ ಶರೀರಕ್ಕೆ ಸೇರಿದವುಗಳು), ಪುರುಷರೂಪದ ರೋಗದೇವತೆ, ಸ್ತ್ರೀರೂಪದ ರೋಗದೇವತೆ, ದಿತ್ಯವಾಟ್, ದಿತ್ಯೌಹೀಗಳೆಂಬ ಜಲಾಭಿಮಾನಿ ದೇವತೆಗಳು, ಪ್ರಾಣಾಪಾನಾದಿ ರೂಪದಿಂದ ಶರೀರವನ್ನು ಆಶ್ರಯಿಸಿರುವ ಪಂಚಾವಿ ಎಂಬ ಆಧ್ಯಾತ್ಮಿಕ ವಾಯುವು, ಪಂಚಾವೀ ಎಂಬುದಾಗಿ ಬಾಹ್ಯವಾಗಿ ಅನರ್ಥಗಳನ್ನು ಮಾಡುವ ಬಾಹ್ಯವಾಯುವು, ಸೂರ್ಯರೂಪನಾದ ತ್ರಿವತ್ಸನು, ತ್ರಿವತ್ಸಾ ಎಂಬ ಚಂದ್ರನು, ತುರ್ಯವಾಟ್ ಎಂಬ ಹಾರ್ದಾಕಾಶವು, ತುರ್ಯೌಹೀ ಎಂಬ ಭೂತಾಕಾಶವು, ಷಷ್ಠವಾಟ್ ಎಂಬ ಅಶುಭವಾದ ಮನಸ್ಸು, ಷಷ್ಠೌಹೀ ಎಂಬ ಶುಭವಾದ ಮನಸ್ಸು, ಎತ್ತಿನಂತೆ ಅಜ್ಞವಾದ ಬುದ್ಧಿಯಲ್ಲಿ ಚಿದಾಭಾಸವು, ಬ್ರಹ್ಮವಿದ್ಯೆಯನ್ನು ಉಂಟುಮಾಡದಿರುವ ಬಂಜೆಗೆ ಸಮಾನವಾದ ಲೌಕಿಕ ಬುದ್ಶಿಯು , ವೃಷಭವೆಂಬ ಅಹಂಕಾರವು, ಎಳೆಯದಾಗಿರುವ ಹೆಣ್ಣು ಕರುವಿಗೆ ಸಮಾನವಾದ ಬಾಲಬುದ್ಧಿಯು, ಬ್ರಹ್ಮಾಂಡಧಾರಣ ಸಮರ್ಥನಾದ ಪ್ರತ್ಯಗಾತ್ಮನು, ಬ್ರಹ್ಮವಿದ್ಯೆಯೆಂಬ ಧೇನುವು - ಇವೆಲ್ಲವೂ ನನ್ನ ಉಪಾಸನಾ ರೂಪ ಯಜ್ಞದಿಂದ ಪರಮಾತ್ಮನಲ್ಲಿ ಲಯಹೊಂದಲಿ. ನನ್ನ ಉಳಿದ ಆಯುಸ್ಸು ಪರಮಾತ್ಮನಲ್ಲಿ ಲಯವಾಗಲಿ.
ಪ್ರಾಣ, ಅಪಾನ, ವ್ಯಾನ, ಚಕ್ಷುಸ್, ಶ್ರೋತ್ರ , ಮನಸ್ಸು, ವಾಕ್ - ಇವುಗಳೂ ಇವುಗಳ ಅಭಿಮಾನಿ ದೇವತೆಗಳೂ ಪರಮಾತ್ಮನಲ್ಲಿ ಲಯವಾಗಲಿ. ಪ್ರಾಣಾದಿಗಳಿಗೆ ಆಧಾರವಾದ ದೇಹವೂ ಪರಮಾತ್ಮನಲ್ಲಿ ಲಯವಾಗಲಿ. ಯಜ್ಞರೂಪವಾದ ಉಪಾಸನಾಕ್ರಿಯೆಯೂ ಪರಮಾತ್ಮನಲ್ಲಿ ಲಯವಾಗಲಿ. (ಸಮಸ್ತವಾದ ಸೃಷ್ಟಿ - ಸೃಷ್ಟಿಯಲ್ಲಿ ತನಗೆ ಸಂಬಂಧಿಸಿದ ಎಲ್ಲ ಪದಾರ್ಥಗಳನ್ನೂ ಪ್ರತ್ಯಗಭಿನ್ನ ಪರಮಾತ್ಮನಲ್ಲಿ ಲಯಗೊಳಿಸಿ ಪರಮಾನಂದ ರೂಪವಾಗಿ ನೆಲೆಗೊಳ್ಳಬೇಕು ಎಂಬುದೇ ಇಲ್ಲಿನ ಮುಖ್ಯ ತಾತ್ಪರ್ಯವಾಗಿದೆ.

ಏಕದಶಾನುವಾಕ - ಸಂಸ್ಕೃತದಲ್ಲಿ :
ಏಕಾ ಚ ಮೇ ತ್ರಿಸಶ್ಚ ಮೇ ಪಂಚ ಚ ಮೇ ಸಪ್ತ ಚ ಮೇ ನವ ಚ ಮ ಏಕಾದಶ ಚ ಮೇ ತ್ರಯೋದಶ ಚ ಮೇ ಪಂಚದಶ ಚ ಮೇ ಸಪ್ತಸಶ ಚ ಮೇ ನವದಶ ಚ ಮ ಏಕವಿಗ್ಂಶತಿಶ್ಚ ಮೇ ತ್ರಯೋವಿಗ್ಂಶತಿಶ್ಚ ಮೇ ಪಂಚವಿಗ್ಂಶತಿಶ್ಚ ಮೇ ಸಪ್ತವಿಗ್ಂಶತಿಶ್ಚ ಮೇ ನವವಿಗ್ಂಶತಿಶ್ಚ ಮ ಏಕತ್ರಿಗ್ಂಶಶ್ಚ ಮೇ ತ್ರಯಿಸ್ತ್ರಿಗ್ಂಶಶ್ಚ ಮೇ ಚತಸ್ರಶ್ಚ ಮೇsಷ್ಟೌ ಚ ಮೇ ದ್ವಾದಶ ಚ ಮೇ ಷೋಡಶ ಚ ಮೇ ವಿಗ್ಂಶತಿಶ್ಚ ಮೇ ಚತುರ್ವಿಗ್ಂಶತಿಶ್ಚ ಮೇsಷ್ಟಾವಿಗ್ಂಶತಿಶ್ಚ ಮೇ ದ್ವಾತ್ರಿಗ್ಂಶಶ್ಚ ಮೇ ಷಟ್ತ್ರಿಗ್ಂಶಶ್ಚ ಮೇ ಚತ್ವಾರಿಗ್ಂಶಶ್ಚ ಮೇsಷ್ಟಾಚತ್ವಾರಿಗ್ಂಶಶ್ಚ ಮೇ ವಾಜಶ್ಚ ಪ್ರಸವಶ್ಚಾಪಿಜಶ್ಚ ಕ್ರತುಶ್ಚ ಸುವಶ್ಚ ಮೂರ್ಧಾ ಚ ವಶ್ನಿಯಾಶ್ಚಾಂತ್ಯಾಯನಶ್ಚಾಂತ್ಯಶ್ಚ ಭೌವನಶ್ಚ ಭುವನಶ್ಚಾಧಿಪತಿಶ್ಚ ||

ಹನ್ನೊಂದನೇ ಅನುವಾಕ - ಕನ್ನಡದಲ್ಲಿ :
ಮೂಲಪ್ರಕೃತಿಯೊಂದಿರಲೆನಗೆ ಸತ್ವ-ರಜ-ತಮವೀ ಮೂರುಗುಣವಿರಲೆನಗೆ ಪಂಚಭೂತಗಳಿರಲೆನಗೆ ಮನಬುದ್ಧಿ ಮೊದಲಾದ ಸಪ್ತ ತತ್ತ್ವಗಳಿಗಿರಲೆನಗೆ ನವರಂಧ್ರಗಳ ದೇಹವಿರಲೆನಗೆ, ಪ್ರಾಣ-ಉಪಪ್ರಾಣ- ಸುಷುಮ್ನಾ ನಾಡಿ ಸಹಿತ ಹನ್ನೊಂದು ತತ್ತ್ವಗಳಿಗಿರಲೆನಗೆ ಹದಿಮೂರು ತತ್ತ್ವಾಭಿಮಾನಿ ದೇವತೆಗಳಿರಲೆನಗೆ ಶ್ರೂತ್ರಾದಿ ಸುಷುಮ್ನಾಸಹಿತ ಹದಿನೈದು ನಾಡಿಗಳಿರಲೆನಗೆ ಲಿಂಗದೇಹದ ಹದಿನೇಳು ಭಾಗಗಳಿರಲೆನಗೆ ಸಂಜೀವಿನೀ ಮೊದಲಾದ ಹತ್ತೊಂಬತ್ತು ಮಹೌಷಧಗಳಿರಲೆನಗೆ, ವೈದ್ಯಶಾಸ್ತ್ರಪ್ರಸಿದ್ಧವಹ ಇಪ್ಪತ್ತೊಂದು ಮರ್ಮಗಳಿರಲೆನಗೆ, ಸಗ್ಗದಂತೆಯೇ ದೇಹದಲ್ಲಿಹ ಪೂರ್ವಚಿತ್ತಿ ತಿಲೋತ್ತಮೆ ಮೇನಕಾದಿಗಳೀ ಇಪ್ಪತ್ತೈದು ಅಪ್ಸರೆಯರಿರಲೆನಗೆ, ಚಿತ್ರಸೇನ ವಿಶ್ವಾವಸು ನಾರದಾದಿ ಇಪ್ಪತ್ತೇಳು ಗಂಧರ್ವರಿರಲೆನಗೆ, ಶ್ರುತಿಸಿದ್ಧ ಜ್ಯೋತಿಷ್ಮತಿ ಮೊದಲಹ ಇಪ್ಪತ್ತೊಂಬತ್ತು ವಿದ್ಯುದ್ದೇವತೆಗಳಿರಲೆನಗೆ ಬುವಿ ಮೊದಲಾದ ಮುವ್ವತ್ತೊಂದು ಲೋಕಗಳಿರಲೆನಗೆ ವಸುರಾದಿತ್ಯ ಅಶ್ವಿನಿಗಳೊಡಗೂಡಿ ಮುವತ್ಮೂರು ದೇವತೆಗಳಿರಲೆನಗೆ ದೇವತೆಗಳೊಪ್ಪುವ ಎಲ್ಲ ಛಂದಗಳಿರಲಿ ಎನಗೆ | ನಾಲ್ಜು ಪುರುಷಾರ್ಥಗಳಿರಲಿ ವೇದೋಪವೇದಗಳೆಂಟಿರಲೆನಗೆ ಶಾಸ್ತ್ರವೇದಾಂಗಗಳು ಹನ್ನೆರಡಿರಲೆನಗೆ ಹದಿನಾರು ಮಹಾಸಿದ್ಧಿಗಳಿರಲೆನಗೆ ಭೂತವಿಷಯಾದಿಗಳೊಡಗೂಡಿದಿಪ್ಪತ್ತು ತತ್ತ್ವಗಳಿರಲೆನಗೆ ಇಪ್ಪತ್ನಾಲ್ಕು ಅಕ್ಷರದ ಗಾಯತ್ರಿ ಸಿದ್ಧಿಸಲೆನಗೆ ಉಷ್ಣಿಕ ಬೃಹತಿ ಪಂಕ್ತಿ ಛಂದಗಳಿರಲೆನಗೆ ನಲವತ್ನಾಲ್ಕಕ್ಷರದ ತ್ರಿಷ್ಟುಪವು ನಲವತ್ತೆಂಟರ ಬೃಹತಿಯು ಸಿದ್ಧಿಸಲೆನಗೆ ಮನುಜರಿಗೊಪ್ಪುವ ಎಲ್ಲ ಛಂದಗಳಿರಲೆನಗೆ | ಅನ್ನ ಸಿದ್ಧಿಸಲೆನಗೆ ಶಮದಮಸಿದ್ದಿಸಲೆನಗೆ ಯಜ್ಞಸಿದ್ದಿಸಲೆನಗೆ ಯಜ್ಞಕಾರಣನಾದ ಆದಿತ್ಯ ಸಿದ್ಧಿಸಲೆನಗೆ ಬೆಳಕಿನ ಲೋಕ ಸಿದ್ಧಿಸಲೆನಗೆ ಆಕಾಶ ಸಿದ್ಧಿಸಲೆನಗೆ ಪರಮಗುರಿ ಸಿದ್ಧಿಸಲೆನಗೆ ಬುವಿಯು ಸಿದ್ಧಿಸಲೆನಗೆ ಬುವಿಯಲ್ಲಿಹುದು ಸಿದ್ಧಿಸಲೆನಗೆ ಬುವಿಯೊಡೆಯ ಸಿದ್ಧಿಸಲಿ ಎನಗೆ ||

ವಿವರಣೆ :
ಒಂದು, ಮೂರು, ಐದು, ಏಳು, ಒಂಬತ್ತು - ಎಂಬ ವಿಷಮ ಸಂಖ್ಯಾಕವಾದ ದೇವತೆಗಳಿಗೆ ಪ್ರಿಯವಾದ ಛಂದಸ್ಸುಗಳು (ವಿಷಮ ಸಂಖ್ಯಾಕ ಸ್ತೋಮಗಳು) ನನಗೆ ಯಜ್ಞರೂಪವಾಗಿ (ರುದ್ರಪೂಜಾ ರೂಪವಾಗಿ) ಸಿದ್ಧಿಸಲಿ.
ಎರಡು, ನಾಲ್ಕು - ಇತ್ಯಾದಿ ಸಮ ಸಂಖ್ಯಾಕವಾದ ಮನುಷ್ಯರಿಗೆ ಪ್ರಿಯವಾದ ಛಂದಸ್ಸುಗಳು (ಸಮಸಂಖ್ಯಾಕ ಸ್ತೋಮಗಳು) ನನಗೆ ಯಜ್ಞರೂಪವಾಗಿ (ರುದ್ರಪೂಜಾ ರೂಪವಾಗಿ) ಸಿದ್ಧಿಸಲಿ.
ಅನ್ನವು ನನಗೆ ಸಿದ್ಧಿಸಲಿ. ಅನ್ನದ ಉತ್ಪತ್ತಿಯು ನನಗೆ ಸಿದ್ಧಿಸಲಿ. ಮತ್ತೆ ಮತ್ತೆ ಅನ್ನದ ಉತ್ಪತ್ತಿಯು ನನಗೆ ಸಿದ್ಧಿಸಲಿ. ಸಂಕಲ್ಪವು ಅಥವಾ ಯಾಗವು ನನಗೆ ಸಿದ್ಧಿಸಲಿ. ಯಜ್ಞದ ಉತ್ಪತ್ತಿಗೆ ಕಾರಣನಾದ ಆದಿತ್ಯನು ನನಗೆ ಸಿದ್ಧಿಸಲಿ. ದ್ಯುಲೋಕವು ನನಗೆ ಸಿದ್ಧಿಸಲಿ. ಆಕಾಶ ಮುಂತಾದೆಡೆ ಇರುವ ಪದಾರ್ಥವು ನನಗೆ ಸಿದ್ಧಿಸಲಿ. ಕೊನೆಯಲ್ಲಿ ಉಂಟಾದುದೂ ನನಗೆ ಸಿದ್ಧವಾಗಲಿ. ಕೊನೆಯಲ್ಲಿರುವುದೂ ನನಗೆ ಸಿದ್ಧಿಸಲಿ. ಭುವನದಲ್ಲಿ ಇರುವುದೂ ನನಗೆ ಸಿದ್ಧವಾಗಲಿ. ಈ ಜಗತ್ತೂ ನನಗೆ ಸಿದ್ಧಿಸಲಿ. ಅಧಿಪತಿಯಾದ ರಾಜನೂ ನನಗೆ ಸಿದ್ಧಿಸಲಿ. (ವಾಜ, ಪ್ರಸವ, ಅಪಿಜ, ಕ್ರತು, ಸುವ, ಮೂರ್ಧಾ, ವ್ಯಶ್ನಿಯ, ಅಂತ್ಯಾಯನ, ಅಂತ್ಯ, ಭೌವನ, ಭುವನ, ಅಧಿಪತಿ - ಎಂಬಿವು ಚೈತ್ರಾದಿ ಮಾಸಗಳ ನಾಮ ವಿಶೇಷಗಳು. ಅವೆಲ್ಲವೂ ನನಗೆ ಪ್ರೀತಿಕಾರಕವಾಗಿರಲಿ. ಚಕಾರ ಎಂಬ ಸಮುಚ್ಛಯಾರ್ಥಕದಿಂದ ಇಲ್ಲಿ ಉಕ್ತವಾಗದಿರುವ ಕಾಲ - ಮೊದಲಾದ ದೇವತೆಗಳೂ ನನಗೆ ಪ್ರೀತಿದಾಯಕರಾಗಿ ಆಗಲಿ ಎಂದು ತಾತ್ಪರ್ಯ).
ಲಯೋಪಾಸನಾ ರೂಪವಾದ ಆಧ್ಯಾತ್ಮವಿದ್ಯಾ ದೃಷ್ಟಿಯಿಂದ ವಿಷ್ಣು ಸೂರಿಗಳ ಭಾಷ್ಯವನ್ನನುಸರಿಸಿ ಈ ಅನುವಾಕದ ಅರ್ಥವನ್ನು ವಿವರಿಸಲಾಗಿದೆ : -
ಸಕಲ ಜಗತ್ತಿನ ಮೂಲಕಾರಣವಾದ ಮೂಲ ಪ್ರಕೃತಿ ಎಂಬ ಒಂದೇ ತತ್ತ್ವವು ಇತ್ತು. ನಂತರ ಸತ್ತ್ವ, ರಜಸ್, ತಮಸ್ - ಎಂಬ ಮೂರು ಗುಣಗಳು u ಆ ಐದು ಭೂತಗಳಿಂದ ಒಂಬತ್ತು ದ್ವಾರಗಳಿಂದ ಕೂಡಿದ ಈ ಸ್ಥೂಲದೇಹವು ಉಂಟಾಯಿತು. ಈ ದೇಹದಲ್ಲಿ ಹತ್ತು ಪ್ರಾಣಗಳು ಹಾಗೂ ಸುಷುಮ್ನಾ ಎಂಬ ಒಂದು ನಾಡಿಯೂ ಸೇರಿ ಹನ್ನೊಂದು ತತ್ತ್ವಗಳು ಉಂಟಾದವು. ಈ ಹನ್ನೊಂದು ಭೂತ ಸತ್ತ್ವಾಂಶಗಳಿಂದ ಹದಿಮೂರು ದೇವತೆಗಳು ಉಂಟಾದರು. ಕರಣಾಭಿಮಾನಿಗಳಾದ ಪುಷ್ಯಾ, ಯುಗಂಧರಾ, ಶಂಖಿನೀ - ಇತ್ಯಾದಿಗಳು ಈ ದೇವತೆಗಳು. ಶ್ರೋತ್ರಾದಿಗಳ ನಾಡಿಗಳು ಹಾಗೂ ಸುಷುಮ್ನೆಯೂ ಸೇರಿ ಹದಿನೈದು ನಾಡಿಗಳು ಉಂಟಾದವು. ಹದಿನೇಳು ಲಿಂಗ ಶರೀರದ ಭಾಗಗಳು ಉಂಟಾದವು. ನಂತರ ಹತ್ತೊಂಬತ್ತು ಸಂಜೀವಿನೀ ಮುಂತಾದ ಮಹೌಷಧಗಳು ಉಂಟಾದವು. ವೈದ್ಯಶಾಸ್ತ್ರ ಪ್ರಸಿದ್ಧವಾಗಿರುವ ಇಪ್ಪತ್ತೊಂದು ಮರ್ಮಸ್ಥಾನಗಳು ಉಂಟಾದವು. ಜ್ವರ, ಅತಿಸಾರ - ಮುಂತಾದ ಇಪ್ಪತ್ತ ಮೂರು ಮಹಾರೋಗಗಳು ಉಂಟಾದವು. ಇಪ್ಪತ್ತೈದು ಮಂದಿ ಊರ್ವಶೀ ಮುಂತಾದ ಅಪ್ಸರೆಯರು ಉಂಟಾದರು. ಇಪ್ಪತ್ತೇಳು ಮಂದಿ ಚಿತ್ರಸೇನ ಮುಂತಾದ ಗಂಧರ್ವರು ಉಂಟಾದರು. ಜ್ಯೋತಿಷ್ಮತೀ ಮುಂತಾದ ಇಪ್ಪತ್ತೊಂಬತ್ತು ವಿದ್ಯುದ್ದೇವತೆಗಳು ಉಂಟಾದರು. ಮೂವತ್ತೊಂದು ಭೂರಾದಿ ಲೋಕಗಳು ಉಂಟಾದವು. ಮೂವತ್ತಮೂರು ದೇವತೆಗಳು - ಎಂಟು ವಸುಗಳು, ಹನ್ನೊಂದು ರುದ್ರರು, ಹನ್ನೆರಡು ಆದಿತ್ಯರು, ಇಬ್ಬರು ಅಶ್ವಿನೀ ದೇವತೆಗಳು - ಹೀಗೆ ಮೂವತ್ತಮೂರು ದೇವತೆಗಳಾದರು. (ಇವರು ವಿಷಮ ಸಂಖ್ಯೆ ಗಳುಳ್ಳವರು).
ಧರ್ಮ ಮೊದಲಾದ ನಾಲ್ಕು ಪುರುಷಾರ್ಥಗಳು ಉಂಟಾದವು. ನಾಲ್ಕು ವೇದಗಳು ಮತ್ತು ನಾಲ್ಕು ಉಪವೇದಗಳು ಸೇರಿ ಎಂಟು ಉಪವೇದಗಳು ಉಂಟಾದವು. ಆರು ವೇದಾಂಗಗಳು ಮತ್ತು ಆರು ಶಾಸ್ತ್ರಗಳು ಸೇರಿ ಹನ್ನೆರಡು ಉಂಟಾದವು. ಹದಿನಾರು ಮಹಾಸಿದ್ಧಿಗಳು ಉಂಟಾದವು. ಸೂಕ್ಷ್ಮವಾದ ಐದು ಮಹಾಭೂತಗಳು, ಸೂಕ್ಷ್ಮವಾದ ಐದು ವಿಷಯಗಳು, ಸ್ಥೂಲವಾದ ಐದು ವಿಷಯಗಳು - ಹೀಗೆ ಒಟ್ಟು ಇಪ್ಪತ್ತು ತತ್ತ್ವಗಳು ಉಂಟಾದವು. ಸಾಂಖ್ಯಶಾಸ್ತ್ರ ಪ್ರಸಿದ್ಧವಾದ ಇಪ್ಪತ್ತನಾಲ್ಕು ತತ್ತ್ವಗಳು ಉಂಟಾದವು. ಇಪ್ಪತ್ತೆಂಟು ತಿರ್ಯಗ್ ಜಂತುಗಳ ಭೇದಗಳು ಉಂಟಾದವು. ಮುವ್ವತ್ತೆರಡು ಸೃಷ್ಟಿಭೇದಗಳು ಉಂಟಾದವು. ಅಥವಾ ಇಪ್ಪತ್ನಾಲ್ಕು ಅಕ್ಷರಗಳ ಗಾಯತ್ರೀ ಛಂದಸ್ಸು, ಇಪ್ಪತ್ತೆಂಟು ಅಕ್ಷರಗಳ ಉಷ್ಣಿಕ್ ಛಂದಸ್ಸು, ಮುವ್ವತ್ತಾರು ಅಕ್ಷರಗಳ ಬೃಹತೀ ಛಂದಸ್ಸು, ನಲವತ್ತು ಅಕ್ಷರಗಳ ಪಂಕ್ತಿ ಛಂದಸ್ಸು, ನಲವತ್ತನಾಲ್ಜು ಅಕ್ಷರಗಳ ತ್ರಿಷ್ಟುಪ್ ಛಂದಸ್ಸು, ನಲವತ್ತೆಂಟು ಅಕ್ಷರಗಳ ಜಗತೀ ಛಂದಸ್ಸುಗಳು ಉಂಟಾದವು. ಇತರ ಛಂದಸ್ಸುಗಳು ಇವುಗಳಲ್ಲೇ ಅಂತರ್ಗತವಾಗಿದೆಯೆಂದು ಭಾವಿಸಬೇಕು. ಇವೆಲ್ಲವೂ ಮನೋಮಯವಾಗಿರುವುದರಿಂದ ಇವುಗಳು ಲಯವಾದರೆ ಮನಸ್ಸೂ ಪರಮಾತ್ಮನಲ್ಲಿ ಲಯವಾಗುತ್ತದೆ. ವಾಜ ಮೊದಲಾದ ಹನ್ನೆರಡು ಮಂದಿ ಆದಿತ್ಯರು ಪಿಂಡಾಂಡ ಮತ್ತು ಬ್ರಹ್ಮಾಂಡಗಳಲ್ಲಿ ಸಮಾನವಾಗಿ ಬೆಳಗುತ್ತಾರೆ. ಪಿಂಡಾಂಡದಲ್ಲಿ ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಮನಸ್ಸು, ಬುದ್ಧಿ - ಇವು ಸೇರಿ ಹನ್ನೆರಡು ವಿಷಯ ಪ್ರಕಾಶಕರಾದ ಆದಿತ್ಯರಾಗುತ್ತಾರೆ. ಬ್ರಹ್ಮಾಂಡದಲ್ಲಿ ಮಿತ್ರ ಮೊದಲಾದ ಹನ್ನೆರಡು ಮಂದಿ ಆದಿತ್ಯರು ಪ್ರಸಿದ್ಧರಾಗಿದ್ದಾರೆ. ಇವರೆಲ್ಲರೂ ಲಯೋಪಾಸನಾ ರೂಪವಾದ ಯಜ್ಞ ರೂಪದಿಂದ ಪರಮಾತ್ಮನಲ್ಲಿ ಲಯ ಹೊಂದುತ್ತಾರೆ.

ಶಾಂತಿ ಮಂತ್ರ - ಸಂಸ್ಕೃತದಲ್ಲಿ :
ಓಂ ಇಡಾ ದೇವಹೂರ್ಮನುರ್ಯಜ್ಞನೀಬೃಹಸ್ಪತಿರುಕ್ಥಾಮದಾನಿಶಗ್ಂಸಿಷದ್ವಿಶ್ವೇದೇವಾಸೂಕ್ತವಾಚಃ ಪೃಥಿವೀಮಾತರ್ಮಾ ಮಾ ಹಿಗ್ಂಸೀರ್ಮಧು ಮನಿಷ್ಯೇ ಮಧು ಜನಿಷ್ಯೇ ಮಧು ವಕ್ಷ್ಯಾಮಿ ಮಧು ವದಿಷ್ಯಾಮಿ ಮಧುಮತೀಂ ದೇವೇಭ್ಯೋ ವಾಚಮುದ್ಯಾಸಗ್ಂ ಶುಶ್ರೂಷೇಣ್ಯಾಂ ಮನುಷ್ಯೇಭ್ಯಸ್ತಂ ಮಾ ದೇವಾ ಅವಂತು ಶೋಭಾಯೈ ಪಿತರೋsನುಮದಂತು || (ತೈ.ಸಂ. 3-3-2-3) || ಓಂ ಶಾಂತಿಃ ಶಾಂತಿಃ ಶಾಂತಿಃ ||

ಶಾಂತಿ ಮಂತ್ರ - ಕನ್ನಡದಲ್ಲಿ :
ಸುರರ ಕರೆಯುವ ಇಡಾ ಎನುವ ದೇವವಾಣಿರೂಪ ಧೇನು ಹೋತಾರ, ಪ್ರಜಾಪತಿ ಮನುವೆ ಯಜ್ಞನೇತಾರ, ಬೃಹಸ್ಪತಿಯು ಹೊಗಳುವನು, ವಿಶ್ಚದೇವರು ಸೂಕ್ತವಾಚಕರು - ಇಂತಿರಲು ಬುವಿಯೆ, ತಾಯೆ ! ಎನಗೆ ಸುಖವೀಯೆ | ಮಧುರ ಚಿಂತನೆಯಲ್ಲೆ ಮನವ ತೊಡಗಿಸುವೆ, ಮಧುರವಾದುದ ಗೈವೆ, ಮಧುರ ನುಡಿಗಳನೆ ದೇವತೆಗಳಿಗೆ ನಿವೇದಿಸುವೆ | ಶ್ರುತಿಸುಖವೆನಿಪ ದಿಟವಚನಗಳನೆ ನುಡಿವೆನು ಮನುಜರಲಿ ಸೆಟೆಯನಲ್ಲ | ಇಂತು ಸದಾಚರಣೆಯುಳ್ಳೆನ್ನನು ದೇವತೆಗಳು ಪೊರೆಯಲಿ, ಎನ್ನ ಕಾಯಕ ಯಶವಡೆದು ಶೋಭಿಸುವಂತೆ ದೇವತೆಗಳನುಗ್ರಹಿಸಲಿ, ಪಿತೃಗಳದನನುಮೋದಿಸಲಿ || || ಓಂ ಶಾಂತಿ ಶಾಂತಿ ಶಾಂತಿ ||

ವಿವರಣೆ :
ಇಡಾ ಎಂಬ ದೇವವಾಣೀ ರೂಪವಾದ ಧೇನುವು ದೇವತೆಗಳನ್ನು ಆಹ್ವಾನಮಾಡುವ ಹೋತಾ ಆಗಿದೆ. ಆ ವೇದವಾಣಿಯೇ ಯಜ್ಞದ ನೇತೃವಾದ ಮನು ಪ್ರಜಾಪತಿ. ಬೃಹಸ್ಪತಿಯು ಶಸ್ತ್ರ- ಪ್ರತಿಗರ ಮುಂತಾದವುಗಳನ್ನು ಶಂಸಿಸುತ್ತಾನೆ. ವಿಶ್ವದೇವರು ಸೂಕ್ತವಾಚಕರಾಗಿರುತ್ತಾರೆ. ಇಡಾ ಮುಂತಾದವರು ಹೀಗೆ ಮಾಡುವುದರಿಂದ ನಾನು ಪ್ರಮಾದಗೊಂಡರೂ ನನ್ನ ಅಪರಾಧವಿರುವುದಿಲ್ಲ. ಆದುದರಿಂದ ಓ ಪೃಥಿವಿಯೇ ! ತಾಯಿಯೇ ! ನನ್ನನ್ನು ಹಿಂಸಿಸಬೇಡ. ಮನಸ್ಸಿನಿಂದ ಮಧುರವಾದುದನ್ನೇ ಚಿಂತಿಸುತ್ತೇನೆ. ಮಧುರವಾದದ್ದನ್ನೇ ಉಂಟುಮಾಡುತ್ತೇನೆ. ಮಧುರವಾದುದನ್ನೇ ದೇವತೆಗಳಿಗೆ ಹೊಂದಿಸುತ್ತೇನೆ. ಮಧುರವಾದುದನ್ನೇ ವಾಣಿಯಿಂದ ನುಡಿಯುತ್ತೇನೆ. ಮಧುರವಾದ ಮಾತನ್ನೇ ದೇವತೆಗಳಿಗೆ ಹೇಳಲು ಸಮರ್ಥನಾಗುತ್ತೇನೆ. ಮನುಷ್ಯರಿಗೆ ಶ್ರವಣೀಯವಾದ (ಶ್ರುತಿ ಸುಖವಾದ) ಮಾತನ್ನು ಹೇಳಲು ಸಮರ್ಥನಾಗುತ್ತೇನೆ. ಇಂತಹ ಗುಣವಿಶಿಷ್ಟನಾದ ನನ್ನನ್ನು ದೇವತೆಗಳು ರಕ್ಷಿಸಲಿ. ನಾನು ಅನುಷ್ಠಾನ ಮಾಡಿದುದು ಶೋಭದಾಯಕವಾಗುವಂತೆ ದೇವತೆಗಳು ಅನುಮೋದಿಸಲಿ. ಪಿತೃದೇವತೆಗಳೂ ಕೂಡಾ ಇವನು ಉತ್ಕೃಷ್ಟವಾದುದನ್ನು ಅನುಷ್ಠಾನ ಮಾಡುತ್ತಾನೆಂದು ನನ್ನನ್ನು ಅನುಮೋದಿಸಲಿ.
(ಬ್ರಹ್ಮ ವಿದ್ಯೋಪಾಸನಾ ದೃಷ್ಟಿಯಿಂದ ಈ ಮಂತ್ರದ ಅರ್ಥ ) : -
ಧೇನುರೂಪವಾದ ಇಡಾ ದೇವಿಯು ಅಂದರೆ ಬ್ರಹ್ಮವಿದ್ತೆಯು ದೇವತೆಗಳನ್ನು ಆಹ್ವಾನಿಸುವ ವಿದ್ಯೆಯು. ಮಂತ್ರರೂಪವಾದ ಈ ವಾಗ್ದೇವಿಯು ಯಜ್ಞವನ್ನು ನಯನಮಾಡುವವಳು. ಬೃಹಸ್ಪತಿಯು ಕರ್ಮಸಾಕ್ಷಿಯಾದ ಈಶ್ವರನು. ಕರ್ಮಜನ್ಯವಾದ ಸುಖಗಳನ್ನು ಪ್ರತಿಪಾದಿಸುತ್ತಾನೆ. ಶೋಭನವಾದ ವಾಣಿಯುಳ್ಳ ಹಿಂದೆ ತಿಳಿಸಿದ ದೇವತೆಗಳೊಡಗೂಡಿದ ವಿಶ್ವದೇವತೆಗಳು ನನಗೆ ಶ್ರೇಯಸ್ಸನ್ನು ಉಂಟುಮಾಡಲಿ. ತಾಯಿಯೇ ! ಪೃಥ್ವೀದೇವಿಯೇ ! ನನ್ನನ್ನು ಹಿಂಸಿಸಬೇಡ. ನಾನು ನಿಮ್ಮ ಮಧುರವಾದ ಸ್ವರೂಪವನ್ನೇ ಚಿಂತಿಸುತ್ತೇನೆ. ಮಧುರವಾದ ನಿಮ್ಮ ಸ್ತೋತ್ರವನ್ನೇ ಮಾಡುತ್ತೇನೆ. ನಾನು ಮಧುರವಾದದ್ದನ್ನೇ ಧರಿಸುತ್ತೇನೆ. ಮಧುರವಾದ ವಾಣಿಯನ್ನೇ ನುಡಿಯುತ್ತೇನೆ. ನನ್ನ ಆತ್ಮೀಯರಾದ ಜನರನ್ನು ಕುರಿತು ಮಧುರವಾದ ಮಾತನ್ನೇ ಆಡುತ್ತೇನೆ. ಕರ್ಮಾಭಿಮಾನಿಗಳಾದ ದೇವತೆಗಳಿಗೆ ಹವಿಸ್ಸಿನ ಸಹಿತವಾದ ಮಧುರವಾಣಿಯನ್ನೇ ಅರ್ಪಿಸುತ್ತೇನೆ. ಮನುಷ್ಯರಿಗೆ ಶ್ರವಣರಮಣೀಯವಾದ ಯಥಾರ್ಥವಚನವನ್ನೇ ಆಡುತ್ತೇನೆ. ಈ ರೀತಿ ಆಚರಿಸುವ ನನ್ನನ್ನು ದೇವತೆಗಳು ರಕ್ಷಿಸಲಿ. ಜಗತ್ತಿನಲ್ಲಿ ನನಗೆ ಶೋಭಾತಿಶಯವು ಉಂಟಾಗಲು ಪಿತೃಗಳು ಅನುಮತಿಯನ್ನು ನೀಡಲಿ. ತ್ರಿವಿಧಶಾಂತಿಯು ಉಂಟಾಗಲಿ.

ಇಲ್ಲಿಗೆ ಚಮಕಾಧ್ಯಾಯವು ಮುಗಿಯಿತು.

ಮೂಲಗಳು : ಸಂಸ್ಕೃತ ಮಂತ್ರಗಳು ಹಾಗೂ ಅದರ ಕನ್ನಡದ ಅವತರಿಣಿಕೆ - ಶ್ರೀ.ಬಿ.ಎಸ್.ಚಂದ್ರಶೇಖರ ಅವರ ಕೃತಿ "ಸವಿಗನ್ನಡ ಸ್ತೋತ್ರಚಂದ್ರಿಕೆ"
ವಿವರಣೆಗಳು :- "ಸಸ್ವರ ಮಹಾನ್ಯಾಸಾದಿ ಮಂತ್ರಾಃ " - ವಿದ್ವಾನ್ ಶೇಷಾಚಲ ಶರ್ಮಾ.

Comments

  1. ಅಪಾರ ಶ್ರಮವಹಿಸಿ ಶ್ರದ್ಧೆಯಿಂದ ವಿವರಣೆ ನೀಡಿದ್ದೀರಿ. ನಿಮ್ಮ ಶ್ರಮ ಸಾರ್ಥಕ ವಾಗಲಿ. ಜನರ ಮನೆ ಮನಗಳನ್ನು ತಲುಪಲಿ,💐

    ReplyDelete
  2. Amazing... Awesome... Classic...

    Thanks a lot for your tremendous efforts and making it with the grace of God....

    Now it becomes easy to understand the scope and further also to remember the ruchas...

    ReplyDelete

Post a Comment

Popular posts from this blog

ಶಿವ ಸಂಕಲ್ಪ ಸೂಕ್ತ ( ಶುಕ್ಲಯಜುರ್ವೇದ, ವಾಜಸನೇಯ ಸಂಹಿತಾ)

ಮಂತ್ರಪುಷ್ಪ (ತೈತ್ತರೀಯ ಆರಣ್ಯಕ)

ಪುರುಷ ಸೂಕ್ತ