ಪುರುಶಸೂಕ್ತ - ವಿಸ್ತೃತ ಲೇಖನ


ಪುರುಷ ಸೂಕ್ತ (ವಿವರಣಾತ್ಮಕ ಲೇಖನ)

ಭೂಮಿಕ :

ಪುರುಷ ಸೂಕ್ತ (ಅಥವಾ ಪೌರುಷ) ಎಂದು ಪ್ರಚಲಿತವಾದ ಸೂಕ್ತವು ಮೂಲದಲ್ಲಿ ಋಗ್ವೇದದಲ್ಲಿ ಕಂಡುಬರುವುದು. ಅದು ಶುಕ್ಲ ಯಜುರ್ವೇದ ವಾಜಸನೇಯ ಸಂಹಿತೆ, ಶತಪಥ ಬ್ರಾಹ್ಮಣ, ತೈತ್ತಿರೀಯ ಆರಣ್ಯಕ, ಆಪಸ್ತಂಭ ಶ್ರೌತ ಸೂತ್ರಗಳಲ್ಲೂ ಕಾಣುವುದು.
ಈ ಸೂಕ್ತವು ವೃದ್ಧಹಾರೀತ ಸಂಹಿತೆಯಲ್ಲಿ 'ಸಹಸ್ರಶೀರ್ಷ ಸೂಕ್ತ" ವೆಂದೂ ಉಲ್ಲೆಖಿಸಲಾಗಿದೆ. ಇದಲ್ಲದೇ ತೈತ್ತಿರೀಯ ಆರಣ್ಯಕದಲ್ಲಿ 13 ಮಂತ್ರಗಳ ಮಹಾನಾರಾಯಣೋಪನಿಷದ್ ಮತ್ತೊಂದು ಪುರುಷ ಸೂಕ್ತ. ಇದು " ಸಹಸ್ರಶೀರ್ಷಂ ದೇವಮ್" ಎಂಬ ಪದಗಳಿಂದ ಪ್ರಾರಂಭವಾಗುತ್ತದೆ. ಈ ಸೂಕ್ತದಲ್ಲೂ ಪುರುಷನ ಕಲ್ಯಾಣ ಗುಣಗಳನ್ನು ಸ್ತುತಿಸಲಾಗಿದೆ. ಇದನ್ನು "ಮಹಾ ನಾರಾಯಣೀಯಮ್" ಎಂದು ಕರೆಯಲಾಗಿದೆ. ಪುರುಷ ಸೂಕ್ತದ ಋಷಿಯಾದ ನಾರಾಯಣನಿಗೆ ಇದು ಸಂಬಂಧಪಟ್ಟಿದೆ.
ಋಗ್ವೇದ ಸಂಹಿತೆಯ ಪುರುಷ ಸೂಕ್ತದಲ್ಲಿ 16 ಮಂತ್ರಗಳಿವೆ ಹಾಗೂ ಈ ಎಲ್ಲಾ 16 ಮಂತ್ರಗಳೂ ಯಜುರ್ವೇದದಲ್ಲೂ ಕೆಲವು ವ್ಯತ್ಯಾಸಗಳೊಂದಿಗೆ ಕಾಣುವುದು. ಯಜುರ್ವೇದದಲ್ಲಿ ಕೃಷ್ಣ ಹಾಗೂ ಶುಕ್ಲ ಯಜುರ್ವೇದ ಶಾಖೆಗಳಿವೆ. ಕೃಷ್ಣ ಯಜುರ್ವೇದದ ತೈತ್ತಿರೀಯ ಶಾಖೆಯಲ್ಲಿ ಪುರುಷನನ್ನು ಕುರಿತು 18 ಮಂತ್ರಗಳಿವೆ. ಅದರಲ್ಲಿ ಋಗ್ವೇದದ ಎಲ್ಲಾ 16 ಮಂತ್ರಗಳೂ ಇರುವುದು. ತೈತ್ತಿರೀಯ ಆರಣ್ಯಕದಲ್ಲಿ ಮಂತ್ರದ ನಿರೂಪಣಾ ಕ್ರಮವು ಋಗ್ವೇದದಲ್ಲಿನ ಕ್ರಮಕ್ಕಿಂತಲೂ ಬೇರೆಯಾಗಿದೆ. ತೈತ್ತರೀಯ ಆರಣ್ಯಕದ 16 ಮತ್ತು 17 ನೇ ಮಂತ್ರಗಳು ಋಗ್ವೇದದಲ್ಲಿ ಇರುವುದಿಲ್ಲ. ಆದರೆ ಶ್ವೇತಾಶ್ವತರ ಉಪನಿಷತ್ತಿನಲ್ಲಿ 16ನೇ ಮಂತ್ರವು ಇರುವುದು.

ಯಜುರ್ವೇದಿಗಳು ಪುರುಷ ಸೂಕ್ತದ ಮುಂದುವರೆದ ಭಾಗವೆಂದು ತೈತ್ತಿರೀಯ ಆರಣ್ಯಕದಲ್ಲಿನ ಹೆಚ್ಚಿನ ಆರು ಮಂತ್ರಗಳನ್ನು ಪಠಿಸುವರು. ಇದರಲ್ಲಿ ಮೊದಲನೇ ಮಂತ್ರವು "ಅದ್ಭ್ಯಃ ಸಂಭೂತಃ" ಎಂಬ ಪದದಿಂದ ಪ್ರಾರಂಭವಾಗುತ್ತದೆ.

ಇದಲ್ಲದೇ ವಿಶ್ವ ಪುರುಷ ನಾರಾಯಣ ಸೂಕ್ತದಲ್ಲಿನ 12 ಮಂತ್ರಗಳ ಸೂಕ್ತವೂ ಸಹ ಪುರುಷನೊಂದಿಗೆ ಸಂಬಂಧಿಸಲ್ಪಟ್ಟಿದೆ. ಈ ಸೂಕ್ತವೂ ತೈತ್ತಿರೀಯ ಆರಣ್ಯಕದಲ್ಲಿ ಮತ್ತು ಮಹಾನಾರಾಯಣೋಪನಿಷತ್ತಿ ನಲ್ಲಿ ಕಂಡುಬರುವುದು.

ಸಾಮಾನ್ಯವಾಗಿ ಎಲ್ಲಾ ಪ್ರಮುಖ ಉಪನಿಷತ್ತುಗಳಲ್ಲಿ ಪುರುಷ ಕಲ್ಪನೆಯು ಸವಿಸ್ತಾರವಾಗಿ ಚರ್ಚಿಸಲ್ಪಟ್ಟಿದ್ದರೂ ಸಹ, ಈ ಅಂಶವು ವ್ಯಾಪಕವಾಗಿ ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ.

ಋಗ್ವೇದದಲ್ಲಿ ಕಂಡುಬರುವ ಗಾಯತ್ರೀ ಮಂತ್ರದ ದೇವತೆಯಾದ ಸವಿತೃವು ಋಗ್ವೇದದ ಪುರುಷ ಸೂಕ್ತದ ಪುರುಷನ ತದ್ರೂಪವಾಗಿದೆ ಹಾಗೂ ಇಡೀ ವೈದಿಕ ಸಂಪ್ರದಾಯವು ಪುರುಷ ಸೂಕ್ತದ ಮೇಲ್ಪಂಕ್ತಿಯನ್ನು ಅನುಸರಿಸುತ್ತದೆ. ಛಾಂದೋಗ್ಯ ಉಪನಿಷತ್ತಿನಲ್ಲಿ ಗಾಯತ್ರಿ ಮಂತ್ರದ ನಾಲ್ಕು ಸಾಲುಗಳ ಮತ್ತು ಪುರುಷನ ನಾಲ್ಜು ಹೆಜ್ಜೆಗಳ ನಡುವಿನ ಸಾಮ್ಯತೆಯನ್ನು ನಿರೂಪಿಸುತ್ತದೆ.

ಪುರುಷ ಶಬ್ದವು ಮಾನವನೆಂದು ಅರ್ಥೈಸುವುದು ಯುಕ್ತವಲ್ಲವಾದಾಗ್ಯೂ ಸಹ, ಕಾಲಾನಂತರ ಈ ಅರ್ಥವು ಬಳಕೆಯಲ್ಲಿ ಪ್ರಚಲಿತವಾಯಿತು. ಆದರೆ ಅದು ವೇದ ಸೂಕ್ತಗಳಲ್ಲಿ ಈ ಅರ್ಥದಲ್ಲಿ ಎಂದಿಗೂ ಉಪಯೋಗಿಸಲ್ಪಟ್ಟಿಲ್ಲ.

ಪುರುಷ ಪದವು "ಯಾವುದು ಮುಂದೆ ಸಾಗುತ್ತದೆಯೋ ಅದು". "ಯಾವುದು ಸಮಸ್ತವನ್ನು ಬಲದಿಂದ ತುಂಬಿಸುತ್ತದೆಯೋ", "ಯಾವುದು ಪುರದಲ್ಲಿ(ಶರೀರದಲ್ಲಿ) ನೆಲಸಿದೆಯೋ" ಎಂಬೆಲ್ಲಾ ಅರ್ಥಗಳನ್ನು ನೀಡುತ್ತವೆ. ಅದು "ಪೃ" ಧಾತುವಿನಿಂದ ಉತ್ಪತ್ತಿಯಾಗಿ
"ರಕ್ಷಿಸು, ವ್ಯಾಪಿಸುತುಂಬಿಸು" ಎಂಬರ್ಥಗಳನ್ನು ಸೂಚಿಸುತ್ತದೆ. "ಆತ್ಮ" ಎಂಬ ಅರ್ಥವನ್ನು ಸೂಚಿಸುವ ಪುರುಷ ಪದವು ಪ್ರಕೃತಿಯ (ಜಡ) ತದ್ವಿರುದ್ದವಾಗಿದೆ. ಸಾಂಖ್ಯ ಚಿಂತನೆಯಲ್ಲಿ ಪುರುಷನು ಪ್ರಕೃತಿಯಿಂದ ವಿಭಿನ್ನನಾಗಿದ್ದಾನೆ. ಪ್ರಕೃತಿಯು ವಿಕಸಿಸುತ್ತದೆ, ಪರಿವರ್ತನೆ ಹೊಂದುತ್ತದೆ ಹಾಗೂ ಬಂಧಿಸುತ್ತದೆ; ಆದರೆ ಅದು ಜಡತ್ವದಿಂದ ಕೂಡಿರುತ್ತದೆ. ಆದ್ದರಿಂದ ಅದು ಚೈತನ್ಯ, ಪ್ರಚೋದನೆ ಹಾಗೂ ಶಾಂತಿಯನ್ನು ಪಡೆಯಲು ಪುರುಷನ ಸಾನ್ನಿಧ್ಯವನ್ನು ಅವಲಂಬಿಸಬೇಕಾಗುತ್ತದೆ.

ಪುರುಷನನ್ನು ಹಾಗೆಂದು ಕರೆಯಲು ಕಾರಣವೆಂದರೆ ಅವನು ಸಮಸ್ತ ಜೀವಿಗಳು (ಪುರಗಳು), ಮಾನವರು, ಮೃಗಗಳು, ಋಷಿಗಳು ಮತ್ತು ದೇವತೆಗಳನ್ನು ಸೃಷ್ಟಿಸುತ್ತಾನೆ ಹಾಗೂ ಆತ್ಮನ ಸ್ವರೂಪದಲ್ಲಿ ಸಮಸ್ತ ಜೀವಿಗಳಲ್ಲಿ ನೆಲಸಿರುತ್ತಾನೆಇನ್ನೊಂದು ರೀತಿಯಲ್ಲಿ ಪುರುಷನು ವಿಷ್ಣುವೆಂದು ಗುರುತಿಸಲ್ಪಟ್ಟಿದ್ದಾನೆ, ಏಕೆಂದರೆ  ಅವನು ಪುರ ಎಂದು ಕರೆಯಲ್ಪಡುವ ಶರೀರದೊಳಗೆ ಸ್ಥಿರವಾಗಿ ನೆಲೆಗೊಂಡಿದ್ದಾನೆ. ಋಗ್ವೇದದ ಸೂಕ್ತಗಳಲ್ಲಿ ಹಾಗೂ ಉಪನಿಷತ್ತಿನಲ್ಲಿ ಪುರುಷನು ಅಂತಿಮ ಹಾಗೂ ಎಕೈಕ ವೈಶ್ವಿಕ ತತ್ವ ಹಾಗೂ ಸೂಕ್ಷ್ಮಾತಿ ಸೂಕ್ಷ್ಮ ರೂಪವುಳ್ಳದ್ದಾಗಿ ಕಂಡುಬರುತ್ತದೆ.

ಮೈತ್ರಾಯಣಿಯ ಉಪನಿಷತ್ತಿನ ಪ್ರಕಾರ ಸೂರ್ಯನು ಅಂತರ್ ದೃಷ್ಟಿಯ ಸಾಧನ. ವ್ಯಕ್ತಿಯ ವಿಶಿಷ್ಟ ಪ್ರಕ್ರಿಯೆಗಳು ಇದನ್ನು ಅವಲಂಬಿಸಿದೆಯಾದ್ದರಿಂದ ಅದು ಸತ್ಯವಾಗಿದೆ ಹಾಗೂ ಪುರುಷನು ಕಣ್ಣುಗಳಲ್ಲಿ ಸ್ಥಿರವಾಗಿದ್ದಾನೆ.

ವಿಶ್ವದಲ್ಲಿ ಸೌರವ್ಯೂಹ ಮತ್ತು ವ್ಯಕ್ತಿಯಲ್ಲಿ ದೃಷ್ಟಿಯ ಸಾಧನಗಳ ನಡುವಿನ ಹೋಲಿಕೆಯು ಉಪನಿಷತ್ತಿನ ಬೋಧನೆಗಳಲ್ಲಿ ಪ್ರಚಲಿತ ಅಂಶವಾಗಿದೆ. ಕಣ್ಣನ್ನು ವ್ತಕ್ತಿಯ ಅಂತರ್ಯದ ಸೂರ್ಯನೆಂದು ಪರಿಗಣಿಸಲಾಗಿದೆ. ಹೇಗೆ ಸೂರ್ಯನು ಹಗಲು ಮತ್ತು ರಾತ್ರೆಗಳನ್ನು, ಜೀವಿಗಳ ಆಯುಷ್ಯಾವಧಿ, ವಸ್ತುಗಳ ವಿಕಾಸ ಮತ್ತು ಅವನತಿ, ದಿಕ್ಕುಗಳು ಮತ್ತು ಅವಧಿಗಳನ್ನು ನಿಗದಿಪಡಿಸುತ್ತಾನೋ, ಹಾಗೆಯೇ ಕಣ್ಣುಗಳೂ ಸಹ ಗ್ರಹಿಸುತ್ತವೆ, ನಿಶ್ಚಯಿಸುತ್ತದೆ, ಸಂಕಲ್ಪಿಸುತ್ತದೆ, ಯೋಚಿಸುತ್ತದೆ ಮತ್ತು ಸಾಮಾನ್ಯ ನಡವಳಿಕೆಯನ್ನು ಅನುವಾಗಿಸುತ್ತದೆ. ಸೂರ್ಯ ಹಾಗೂ ಕಣ್ಣುಗಳ ಹಿಂದಿರುವ ತತ್ವವು ಪುರುಷನಾಗಿದ್ದಾನೆ.
ಬೃಹದಾರಣ್ಯಕ ಉಪನಿಷತ್ತಿನಲ್ಲಿ ಪ್ರತ್ಯೇಕ ವ್ಯಾಖ್ಯಾನ ಮಾಡಲಾಗಿದೆ. ಅಂದರೆ ಸೌರವ್ಯೂಹದಲ್ಲಿ ಅಂತರಾತ್ಮನಾಗಿ ನೆಲೆಸಿರುವ ಪುರುಷನು ಹಾಗೂ ಜೀವಿಯ ಬಲಗಣ್ಣಿನಲ್ಲಿ ಸ್ಥಿರವಾಗಿರುವ ಪುರುಷನು (ಎಡಗಣ್ಣು ಚಂದ್ರನಿಂದ ಪ್ರತಿನಿಧಿಸಲ್ಪಟ್ಟಿದೆ) ಒಬ್ಬರಲ್ಲಿ ಮತ್ತೊಬ್ಬರು ಸ್ಥಾಪಿಸಲ್ಪಟ್ಟಿದ್ದಾರೆ. ಇಬ್ಬರೂ ಸಂಪೂರ್ಣ ಬೆಳಕು ಮತ್ತು ಶಕ್ತಿಯನ್ನುಳ್ಳವರು. ಒಬ್ಬನು ಪ್ರಕಾಶದ ಕಿರಣಗಳಿಂದ ಸ್ಥಾಪಿಸಲ್ಪಟ್ಟಿದ್ದರೆ, ಮತ್ತೊಬ್ಬನು ಪ್ರಾಣಶಕ್ತಿಗಳಿಂದ ಸ್ಥಾಪಿಸಲ್ಪಟ್ಟಿದ್ದಾನೆ.

ಶತಪಥ ಬ್ರಾಹ್ಮಣವು ಹದಿನೇಳು ಅಂಗಗಳುಳ್ಳ, ಸೌರ ರೂಪಕ್ಕಿಂತ ಹೆಚ್ಚು ಮಾನವ ಚಹರೆಯನ್ನು ಹೋಲುವ ಪುರುಷನ ಬಗ್ಗೆ ಹೇಳುತ್ತದೆ. ಆ ಅಂಗಗಳು ಯಾವುವೆಂದರೆ - ಹತ್ತು ಪ್ರಾಣಗಳು (ಐದು ಪ್ರಧಾನ ಮತ್ತು ಐದು ಅಪ್ರಧಾನ), ನಾಲ್ಕು ಅಂಗಗಳು (ಎರಡು ತೋಳುಗಳು ಮತ್ತು ಎರಡು ಕಾಲುಗಳು), ಹದಿನೈದನೆಯದು ಪೂರ್ಣ ಶರೀರ (ಇಲ್ಲಿ ಆತ್ಮನೆಂದು ಕರೆಯಲಾಗಿದೆ), ಹದಿನಾರನೆಯದು ಕತ್ತು ಮತ್ತು ಕೊನೆಯದು ಶಿರಸ್ಸು, ಅಗ್ನಿಗೆ ಸರಿಸಮಾನವಾದ ವ್ಯಾಪ್ತಿಯುಳ್ಳ ಈ ಪುರುಷನು ಪ್ರಜಾಪತಿಯೆಂದು ಕರೆಯಲ್ಪಟ್ಟಿದ್ದಾನೆ. ಇಲ್ಲಿ ಪುರುಷನು ಭೂಮಿಯಲ್ಲಿ ಸೂರ್ಯನ ಪ್ರತಿನಿಧಿಯಾಗಿರುವ ಅಗ್ನಿಯೊಂದಿಗೆ ಗುರುತಿಸಲ್ಪಟ್ಟಿದ್ದಾನೆ.

ಪರಮೋಚ್ಚದ ರೂಪ ಪರಿವರ್ತನೆ :

ಉಪನಿಷತ್ತಿನ ದೃಷ್ಟಿಯ ಪ್ರಕಾರ - ಸೃಷ್ಟಿಯು ಸೂಕ್ಷ್ಮ, ಅತೀಂದ್ರಿಯ ಅವ್ಯಕ್ತ ಜಡತ್ವ ಸ್ಥಿತಿಯಿಂದ ಸ್ಥೂಲವಾದ ಭೌತಿಕ ಪ್ರಪಂಚದೆಡೆಗೆ ಹೊರಹೊಮ್ಮುವ ಕ್ರಿಯೆ.
ಈ ಕ್ರಿಯೆಯಲ್ಲಿ ಪರಮೋಚ್ಚ ಶಕ್ತಿ ಹಾಗೂ ಎಲ್ಲ ಅಸ್ತಿತ್ವದ ಆಧಾರವಾಗಿರುವ ಹಾಗೂ ಏಕೈಕ ಶಕ್ತಿಯು ಮೂರು ರೂಪಗಳನ್ನು ಪಡೆಯುತ್ತಾನೆ. ಅತೀಂದ್ರಿಯ ಪರಮೋಚ್ಚ ದೈವ, ಪುರುಷನು ಪರಮಾತ್ಮ ಅಥವಾ ಈಶ್ವರನೆಂದು ಪ್ರಕಟಗೊಳ್ಳುವನು. ಬ್ರಹ್ಮನ ಮೂಲಕ ಪುರುಷನು ವಿಶ್ವದ ಸೃಷ್ಟಿಕ್ರಿಯೆಯನ್ಜು ಪ್ರಾರಂಭಿಸಿದಾಗ ಅವನು ವಿಶ್ವದ ಸೂಕ್ಷ್ಮ ಶರೀರಿಯಾಗಿ ಗುರುತಿಸಿಕೊಳ್ಳುತ್ತಾನೆ. ಆಗ ಅವನನ್ನು ಹಿರಣ್ಯ-ಗರ್ಭ ಎಂದಾಗುವನು. ಪುರುಷನು ಭೌತಿಕ ವಿಶ್ವವಾದಾಗ ಅವನ ಸಮಸ್ತ ದೈಹಿಕ ಶರೀರವು ವಿರಾಟ್ ಎಂದಾಗುತ್ತದೆ.

ಆಧ್ಯಾತ್ಮಿಕ ತತ್ತ್ವಗಳನ್ನು ಮನದಲ್ಲಿರಿಸಿಕೊಂಡು- "ಯಥಾ ಬ್ರಹ್ಮ-ಅಂಡ ತಥಾ ಪಿಂಡ-ಅಂಡ" - "ಮೇಲೆ ಹೇಗೋ ಕೆಳಗೂ ಹಾಗೇ" - ಅಣುರೂಪವು ಬ್ರಹ್ಮಾಂಡ ರೂಪದ ಪ್ರತಿರೂಪ. ಬಾಹ್ಯ ವಿಶ್ವದ ಹೊರಹೊಮ್ಮುವಿಕೆ ಹಾಗೂ ವಿಕಾಸವು ವ್ಯಕ್ತಿಗತ ವಿಕಸನಕ್ಕೆ ಸಮಾನಾಂತರ ವಾಗಿರುವುದು.

ಮಾಂಡೂಕ್ಯೋಪನಿಷತ್ತಿನ ಪ್ರಕಾರ ಬ್ರಹ್ಮನ್ ಒಂದು ಚತುಷ್ಪಥಿ ಬೆಕ್ಕಿನರೀತಿ, ಹಾಗೂ ಅದರ ನಾಲ್ಕು ತತ್ತ್ವಗಳು - ಬ್ರಹ್ಮನ್, ಈಶ್ವರ, ಹಿರಣ್ಯಗರ್ಭ ಮತ್ತು ವಿರಾಟ್.

ಪುರುಷ ಸೂಕ್ತವು ಪುರುಷನಿಂದ ಸೃಷ್ಟಿಸಲ್ಪಟ್ಟ ವಿಶ್ವವನ್ನು ಕುರಿತು ಅಪರೋಕ್ಷವಾಗಿ ಹೇಳುತ್ತದೆ. ಅದೇ ರೀತಿಯಲ್ಲಿ ನಾಸದೀಯ ಸೂಕ್ರವು ಸೃಷ್ಟಿಯ ಬಗ್ಗೆ ಪ್ರಸ್ತಾಪಿಸುತ್ತದೆ. ತೈತ್ತಿರೀಯ ಆರಣ್ಯಕವು ಪುರುಷನನ್ನು ಪ್ರಜಾಪತಿ ಎಂಬುದಾಗಿ ಕರೆಯುತ್ತದೆ ಹಾಗೂ ಪುರುಷನು ಹೇಗೆ ಸೃಷ್ಟಿಗೆ ಹೊಣೆಗಾರನಾದನೆಂದು ವರ್ಣಿಸುತ್ತದೆ. ಆದಿಯಲ್ಲಿ ಅಲ್ಲಿ ಎಲ್ಲವೂ ಜಲಾವೃತವಾಗಿತ್ತು ಮತ್ತು ಪ್ರಜಾಪತಿಯು ಆಕಾರವನ್ನು ತಾಳಿದನು ಹಾಗೂ ತಾವರೆ ಎಲೆಯ ಮೇಲೆ ತೇಲಿದನು. ಆಗ ಅವನ ಮನಸ್ಸಿನಲ್ಲಿ, ಅಂತರಾಳದಲ್ಲಿ ಈ ಸಮಸ್ತವನ್ನೂ ಸೃಷ್ಟಿಸುವ ಬಯಕೆಯುಂಟಾಯಿತು. ಜೀವಿಯಲ್ಲಿ ಯಾವುದೇ ಬಯಕೆ ಉಂಟಾದರೆ, ಅವನು ಅದನ್ನು ಕೃತಿ ಮತ್ತು ಮಾತುಗಳ ಮೂಲಕ ವ್ಯಕ್ತಪಡಿಸುತ್ತಾನೆ. ಇದುವೆ ಅಸ್ತಿತ್ವ ಪಡೆಯದ ಮತ್ತು ಅಸ್ತಿತ್ವ ಪಡೆದ ವಸ್ತುಗಳ ನಡುವೆ ಇರುವ ಸೇತುವೆಯಾಗಿದೆ. ಈ ಅಂತರವು ತಪಸ್ಸು ಎಂಬ ಸಾಧನೆಯಿಂದ ಪೂರೈಸಲ್ಪಡುವುದು, ಈ ಪದವು ತಪಶ್ಚರ್ಯ , ಪ್ರಾಯಶ್ಚಿತ್ತ, ಧ್ಯಾನ , ಅತಿಯಾದ ಉಷ್ಣವನ್ನು ಸೂಚಿಸುತ್ತದೆ. ಸೃಷ್ಟಿಯು ಕೇವಲ ತಪಸ್ಸಿನ ಮೂಲಕ ಸಿದ್ಧಿಸುವುದು.

ತಪಸ್ಸಿನಿಂದ ಆಹ್ಲಾದಗೊಂಡ ಪ್ರಜಾಪತಿಯು ತನ್ನ ರೂಪವನ್ನು ಬಲವಾಗಿ ಕುಲುಕಿದನು. ಆವನ ಆಕಾರದಿಂದ ಮಾಂಸವನ್ನು ಹೋಲುವ ಅವಯವಗಳಿಂದ ಅರುಣರು, ಕೇತುಗಳು ಮತ್ತು ವಾತರಶನರು ಎಂಬ ಹೆಸರಿನಿಂದ ಕರೆಯಲ್ಪಡುವ ಋಷಿಗಳು ಉತ್ಪನ್ನರಾದರು, ಉಗುರಿನಂಥ ಭಾಗಗಳಿಂದ ವೈಖಾನಸರು ಹಾಗೂ ರೋಮದಂಥ ಭಾಗಗಳಿಂದ ವಾಲಖಿಲ್ಯರು ಎಂಬ ಋಷಿಗಳು ಹೊರಹೊಮ್ಮಿದರು. ಘನೋದಕದ ಮುಖ್ಯ ಅಂಶವು ಆಮೆಯ ಆಕಾರದಲ್ಲಿ ಘನೀಕೃತವಾಗಿ ಹೊರಬಂದಿತು. ಅದನ್ನು ಪ್ರಜಾಪತಿಯು "ಸ್ವಯಂ ತನ್ನ ಚರ್ಮ ಮತ್ತು ಮಾಂಸಗಳಿಂದ ಜನ್ಮವೆತ್ತಿದ ಸಂತತಿಯೋ ನೀನು" ಎಂದು ಪ್ರಶ್ನಿಸಿದನು. ಆಮೆಯು, "ಇಲ್ಲ, ನಾನು ಎಲ್ಲಾತ್ಮ ಕಾಲದಿಂದಲೂ ಅಲ್ಲಿ ಇದ್ದವನು, ಈಗ ಹೊರಬಂದಿರುವ ಈ ಎಲ್ಲಾ ಜೀವಿಗಳು ಬರುವ ಮುಂಚಿನಿಂದಲೂ ಇದ್ದೇನೆ" ಆಮೆಯ ಆಕಾರವು ಈಗಷ್ಟೇ ಗೋಚರವಾಗಿದೆ. ಆದರೆ ಅದರ ಆತ್ಮವು ಅಲ್ಲಿ ಎಂದೆಂದಿಗೂ ಇತ್ತು. ಹಾಗೂ ಈ ಅತ್ಮನೇ ಪುರುಷನು. ಪುರುಷನು ತನ್ನ ಮಹಿಮೆಯನ್ನು ಪ್ರಮಾಣೀಕರಿಸಲು ಸಾವಿರಾರು ಶಿರಸ್ಸುಗಳು , ಕಣ್ಣುಗಳುಪಾದಗಳಿಂದ ಪ್ರಕಟನಾದನು. ಸಾವಿರಾರು ಸಂಖ್ಯೆಯು ವೈಶಾಲ್ಯತೆ
ಯನ್ನು ಹಾಗೂ ಅಪರಿಮಿತ ಸೃಷ್ಟಿಕಾರ್ಯವನ್ನು ಸೂಚಿಸುತ್ತದೆ.

ಪುರುಷನ ಪುರುಷ ಸ್ವರೂಪವನ್ನು ಸೂಚಿಸುವ ಸಂದರ್ಭಕ್ಕನುಗುಣವಾಗಿ ಸೂಕ್ತದ ಮಂತ್ರದ ಮೊದಲ ಪದಗಳು ಪುನರಾವೃತ್ತಿಯಾಗಿವೆ. ಸೃಷ್ಟಿಯ ಅಸಂಖ್ಯಾತ ಆಕಾರಗಳೆಲ್ಲಾ ಒಂದೇ ಬುನಾದಿಯಿಂದ ಹೊರಹೊಮ್ಮಲ್ಪಟ್ಟಿವೆ: ಪ್ರಜಾಪತಿಯ ಬಯಕೆ. ಇದು ಪುರುಷಸೂಕ್ತದ ಪೂರ್ವ ಕಲ್ಪನೆಯಾಗಿದೆ. ಯಾವ ಜಲರಾಶಿಯ ಮೇಲೆ ಪ್ರಜಾಪತಿಯು ತೇಲಿದನೋ ಅದು ಸೃಷ್ಟ್ಯಾದಿಯ ಆಮೆಯ ಸತ್ವವಷ್ಟೇ ಸರಿ, ಅದು ಪ್ರಕೃತಿಯನ್ನು ಪ್ರತಿನಿಧಿಸುತ್ತದೆ; ಪ್ರಕೃತಿಯು ಪುರುಷನ ಸಾನ್ನಿಧ್ಯದಲ್ಲಿ, ತನ್ನ ಪರಿಪರಿಯ ಸ್ವರೂಪವನ್ನು ಪ್ರಕಟಿಸಿ, ಇದನ್ನು ವಿರಾಟ್ ಎಂದು ಕರೆಯುವರು. ಪ್ರಕೃತಿಯ ಒಂದು ಅಂಶವಾಗಿರುವ ಇದನ್ನೂ ಸಹ ಸೂಕ್ತದಲ್ಲಿ ಪ್ರಸ್ತಾಪಿಸಲಾಗಿದೆ.

ಪುರುಷನನ್ನು ವಿಶ್ವ ಕ್ರಮ ಸರಣಿಯಲ್ಲಿ ಆದ್ಯ ಜಾತನೆಂದು ಸೂಕ್ತವು ಗುರುತಿಸುತ್ತದೆ (ಪ್ರಥಮಜಾ ಋತಸ್ಯ).  ಇಲ್ಲಿನ ಋತ ಪದದ ಮೂಲ ಅರ್ಥವಾದ ಬಯಕೆಯು (ಕಾಮ) ಪ್ರಜಾಪತಿಯನ್ನು ವಿಶಿಷ್ಟನನ್ನಾಗಿಸಿತು. ಸೃಷ್ಟ್ಯಾದಿಯ ಜಲರಾಶಿಯ ಸತ್ವವಾದ ಆಮೆಯೇ "ಬಯಕೆಯ" ಅಭಿವ್ಯಕ್ತವಾಗಿದ್ದಿತು. ಬ್ರಹ್ಮಾಂಡದ ಆದ್ಯ ಶಿಶು ಪ್ರಜಾಪತಿಯು ಸೃಷ್ಟ್ಯಾದಿಯ ಜಲರಾಶಿಯು ಒದಗಿಸಿದಂಥ ಸಾಮಗ್ರಿಗಳಿಂದ ಅಥವಾ ಕೂರ್ಮಾಕಾರ ಸ್ವರೂಪದಲ್ಲಿ ಅಡಗಿದ್ದ ಅವುಗಳ ಸತ್ವಗಳಿಂದ ಸಮಸ್ತ ಲೋಕಗಳು, ಸಮಸ್ತ ಜೀವುಗಳು ಮತ್ತು ಸಮಸ್ತ ಪ್ರದೇಶಗಳನ್ನು ಸೃಷ್ಟಿಸಿದನು. ಸಮಸ್ರ ವಸ್ತುಗಳನ್ನು ತನ್ನಿಂದಲೇ ಸೃಷ್ಟಿಸಿದ ನಂತರ, ಅವನು ಸ್ವತಃ ಸಮಸ್ತ ವಸ್ತುಗಳಲ್ಲಿ ಪ್ರವೇಶಿಸುತ್ತಾನೆ. ವಿಶ್ವವು ಪ್ರಜಾಪತಿಯ ಸ್ವರೂಪದಲ್ಲಿ ಹೊರಹೊಮ್ಮಿರುವ ಅಥವಾ ಪ್ರಕಟವಾಗಿರುವ ಅಂಶವಷ್ಟೇ. ಅವನು ಸಮಸ್ತ ವಸ್ತುಗಳನ್ನು ವ್ಯಾಪಿಸಿಕೊಂಡಿರುತ್ತಾನೆ, ಅಂದರೆ ಅವನು ಈ ಸಮಸ್ತ ವಸ್ತುಗಳನ್ನು ತನ್ನಲ್ಲೇ ಹೊಂದಿರುತ್ತಾನೆ; ಮತ್ತು ಈ ಸಮಸ್ತ ವಸ್ತುಗಳೂ ತನ್ನ ನಿಯಂತ್ರಣದಲ್ಲಿ ಇರುವುದಕ್ಕಾಗಿ ಹಾಗೂ ಯಾವುದೂ ಅವನನ್ನು ಮೀರಿ ಹೋಗದಂತೆ ಅವನು ಸ್ವತಃ ತನ್ನಲ್ಲಿ ಇವುಗಳಿಗೆ ಎಡೆಮಾಡಿಕೊಡುತ್ತಾನೆ. ಸೃಷ್ಟಿಸಲ್ಪಟ್ಟಿರುವ ಬ್ರಹ್ಮಾಂಡವು ಅವನನ್ನು ಅತಿಕ್ರಮಿಸುವುದಿಲ್ಲ; ವಾಸ್ತವವಾಗಿ, ಅವನು ಅದನ್ನು ಅತಿಶಯಿಸಿದ್ದಾನೆ ಹಾಗೂ ಸ್ವಯಂ ಸ್ವರೂಪದಲ್ಲಿ ನೆಲಸಿರುತ್ತಾನೆ. ಪ್ರಜಾಪತಿಯ ಈ ಸ್ವರೂಪಕ್ಕೆ ಪುರುಷನೆಂದು ಹೆಸರಿಸಲಾಗಿದೆ.

ಶತಪಥ ಬ್ರಾಹ್ಮಣದಲ್ಲಿ ಪುರುಷನು ನಾರಾಯಣ ನೊಂದಿಗೆ ಗುರುತಿಸಲ್ಪಟ್ಟಿದ್ದಾನೆ. ಈ ಪುರುಷ ನಾರಾಯಣನೇ ಸೃಷ್ಟಿಸಲ್ಪಟ್ಟ ವಿಶ್ವವನ್ನು ಅತಿಶಯಿಸಲು, ಸಮಸ್ತ ವಸ್ತುಗಳನ್ನು ವ್ಯಾಪಿಸಲು ಮತ್ತು ಸಮಸ್ತವೂ ತಾನೇ ಆಗಬೇಕೆಂದು ಬಯಸುತ್ತಾನೆ.

ಪುರುಷಸೂಕ್ತದ ಋಷಿ ನಾರಾಯಣ ಹಾಗೂ ಸೂಕ್ತದ ದೇವತೆ ಪುರುಷ ಎಂದು ತಿಳಿಸುವ ಉಲ್ಲೇಖ ಸ್ವಾರಸ್ಯವಾಗಿದೆ. ಈ ಇಬ್ಬರೂ ವಾಸ್ತವವಾಗಿ ಒಂದೇ ಸ್ವರೂಪವಾಗಿದ್ದು, ಪ್ರಸಕ್ತ ಸೂಕ್ತವು ಯಾಸ್ಕರ ವರ್ಣನೆಯ ಆತ್ಮಸ್ತುತಿಯ ಅಥವಾ ಆಧ್ಯಾತ್ಮಿಕ ಸೂಕ್ತಗಳಿಗೆ ಉತ್ತರ ನೀಡಬಲ್ಲದ್ದಾಗಿದೆ. ಮನು ಋಷಿಯ ವಿವರಣೆಯನುಸಾರ, "ನಾರಾಯಣ" ಪದವು ಆದಿ-ಸೃಷ್ಟಿಯ ಹಂತದಲ್ಲಿ ಸೃಷ್ಟ್ಯಾದಿಯ ಜಲರಾಶಿಯ (ನಾರಾ, ಆಪಃ) ಆತ್ಮನ ವಿಶ್ರಾಂತಿ-ಧಾಮ (ಅಯನ) ಎಂದಾಗುತ್ತದೆ.

ಜಲರಾಶಿಗಳು ತಮ್ಮನ್ನು ಸೃಷ್ಟಿಸಿದ ಆತ್ಮನ ಸಂತತಿಯೇ ಆಗಿವೆ. ಅವುಗಳು ಆತ್ಮನ ಸಹಜ ಆವಾಸಸ್ಥಾನ. ಸ್ವಯಂ ತನ್ನ ಸ್ವಾಭಾವಿಕ ಸ್ಥಿತಿಯಲ್ಲಿ ನೆಲೆಸಿರುವ ಆತ್ಮನೇ ಪುರುಷನಾಗಿದ್ದಾನೆ. ಸೃಷ್ಟಿ ಸಂಕಲ್ಪದ ಬಯಕೆ ಹೊಂದಿರುವ ಇದೇ ಆತ್ಮನು ಸಮಸ್ತ ಜೀವಿಗಳ ರಕ್ಷಕ ಅಥವಾ ಸೃಷ್ಟಿಕರ್ತನಾದ ಪ್ರಜಾಪತಿಯ ಸ್ವರೂಪವಾಗಿದ್ದಾನೆ. ಪುರುಷನಾಗಬೇಕಾದರೆ ಅವಸ್ಥೆಯನ್ನು ತ್ಯಜಿಸಬೇಕಾಗುತ್ತದೆ.

ಶಾಂತಿ ಮಂತ್ರ : ಸಂಸ್ಕೃತದಲ್ಲಿ :
ಓಂ ತಚ್ಚಂ ಯೋರಾವೃಣೀಮಹೇ | ಗಾತುಂ ಯಙ್ಞಾಯ|
ಗಾತುಂ ಯಙ್ಞಪತಯೇ | ದೈವೀ ಸ್ವಸ್ತಿರಸ್ತು ನಃ |
ಸ್ವಸ್ತಿರ್ಮಾನುಷೇಭ್ಯಃ | ಊರ್ಧ್ವಂ ಜಿಗಾತು ಭೇಷಜಮ್|
ಶಂ ನೋ ಅಸ್ತು ದ್ವಿಪದೇ  | ಶಂ ಚತುಷ್ಪದೇ |
ಓಂ ಶಾಂತಿಃ ಶಾಂತಿಃ ಶಾಂತಿಃ  ||

ಅನುವಾದ :

ನಮ್ಮ ದುಃಖವನ್ನು ಹೋಗಲಾಡಿಸುವ ಮತ್ತು ನಮ್ಮ ಧಾರ್ಮಿಕ ಕ್ರಿಯೆಗಳಿಗೆ ಫಲವನ್ನು ನೀಡುವ ಭಗವಂತನನ್ನು ಪ್ರಾರ್ಥಿಸುತ್ತೇವೆ. ದೇವತೆಗಳು ಯಾವ ಬಗೆಯ ಒಳಿತನ್ನು ಹೊಂದುವರೊ, ನಾವೂ ಅದನ್ನೆ ಪಡೆಯುವಂತಾಗಲಿ! ಎಲ್ಲ ಮಾನವರೂ ಮಂಗಳವನ್ನು ಹೊಂದಲಿ! ಮುಂದೆಯೂ ಅಷ್ಟೆ. ಜೀವನದ ಸಕಲ ದುರಿತಗಳೂ ದೂರವಾಗಲಿ! ಮಾನವರೂ ಹಾಗೂ ಸಾಕಿರುವಂತಹ ಪ್ರಾಣಿಗಳೂ ಸುಖವನ್ನು ಹೊಂದಲಿ.

ವಿವರಣೆ :

ಇದು ಪುರುಷಸೂಕ್ತದ ಮೊದಲು ಹಾಗೂ ಕೊನೆಯಲ್ಲಿ ಪಠಿಸುವ ಶಾಂತಿಮಂತ್ರ. ಅಮಂಗಲವನ್ನು ದೂರಮಾಡಲು ಮಾಡುವ ಶಾಂತಿಕರ್ಮಗಳಲ್ಲಿ ಹಾಗೂ ಅಭಿಷೇಕ ಕರ್ಮಗಳಲ್ಲಿ ಬಳಸುವ ದಶಶಾಂತಿ ಮಂತ್ರಗಳಲ್ಲಿ ಪ್ರಸ್ತುತ ಶಾಂತಿಮಂತ್ರವೂ ಒಂದಾಗಿ ಪರಿಗಣಿಸಲ್ಪಟ್ಟಿದೆ. ಇದನ್ನು ಸಂಧ್ಯಾವಂದನೆಯಲ್ಲಿ ಉಪಸ್ಥಾನಮಂತ್ರವನ್ನಾಗಿಯೂ ಬಳಸಬಹುದು.
ಮೊದಲ ಪದವಾದ "ಶಂಯೋಃ" ಎಂಬುದನ್ನು, "ನಮ್ಮ ಪೂರ್ವ ಕುಕರ್ಮಗಳ ಫಲವಾಗಿ ಈಗಾಗಲೇ ಪ್ರಾಪ್ತವಾಗಿರುವ ಹಾಗೂ ಮುಂದೆ ಬರಬಹುದಾದಂತಹ ರೋಗರುಜಿನಗಳು ಮತ್ತು ಕಷ್ಟಗಳು" ಎಂಬುದಾಗಿಯೂ ಅರ್ಥೈಸಲಾಗುವುದು.
ಯಜ್ಞಗಳನ್ನು ಮಾಡುವುದು ನಮ್ಮ ಕೈಯಲ್ಲಿದ್ದರೂ, ಅವುಗಳ ಫಲದಾತನು ಭಗವಂತನೆ. ಆದ್ದರಿಂದ ಫಲಪ್ರಾಪ್ತಿಗಾಗಿ ಹಾಗೂ ಯಜ್ಞವನ್ನು ನೆರವೇರಿಸಿದ ಯಜಮಾನನ ಇಷ್ಟಸಿದ್ಧಿಗಾಗಿ ಭಗವಂತನಿಗೆ ಪ್ರಾರ್ಥಿಸಲಾಗಿದೆ.

ಮಂತ್ರವು, ಎಲ್ಲ ಮಾನವರ ಹಾಗೂ ಸಾಕುಪ್ರಾಣಿಗಳ ಮಂಗಳಕ್ಕಾಗಿ ಪ್ರಾರ್ಥನೆಯನ್ನು ಒಳಗೊಂಡಿರುವುದನ್ನು ಗಮನಿಸಲು ಸ್ವಾರಸ್ಯಕರವಾಗಿದೆ ಹಾಗೂ ಬೋಧಪ್ರದವಾಗಿದೆ.

ಮೂರು ಬಗೆಯ ತೊಂದರೆಗಳನ್ನು ನಿವಾರಿಸಲು, ಮೂರು ಬಾರಿ "ಶಾಂತಿಃ" ಎಂದು ಉಚ್ಚರಿಸಲಾಗುತ್ತದೆ - ಆಧ್ಯಾತ್ಮಿಕ (ರೋಗವೇ ಮೊದಲಾದ ದೇಹಕ್ಕೆ ಸಂಬಂಧಿಸಿದ), ಆಧಿಭೌತಿಕ (ವನ್ಯಪ್ರಾಣಿ ಅಥವಾ ಸರೀಸೃಪಗಳಂತಹ ಇತರ ಜೀವಿಗಳಿಂದ ಉಂಟಾದ ತೊಂದರೆಗಳು) ಹಾಗೂ ಆಧಿದೈವಿಕಗಳೇ (ಭೂಕಂಪ, ಕ್ಷಾಮ, ನೆರೆ ಮೊದಲಾದ ಪ್ರಾಕೃತಿಕ ವಿಕೋಪಗಳಿಂದ ಉಂಟಾದ ಆಪತ್ತುಗಳು) ಆ ಮೂರು ತೊಂದರೆಗಳು.        

ಮಂತ್ರ - 1 -ಸಂಸ್ಕೃತದಲ್ಲಿ :

ಸಹಸ್ರ ಶೀರ್ಷಾ ಪುರುಷಃ ಸಹಸ್ರಾಕ್ಷಃ ಸಹಸ್ರಪಾತ್
ಸ ಭೂಮಿಮ್ ವಿಶ್ವತೋ  ವೃತ್ವಾ ಅತ್ಯತಿಷ್ಠತ್ ದಶಾಂಗುಲಮ್

ಕನ್ನಡದಲ್ಲಿ :

ಸಾವಿರ ಶಿರಗಳ ಪುರುಷನು ಸಾವಿರ ಕಣ್ ಸಾವಿರ ಪಾದಆವರಿಸಿ ಬುವಿಯೆಲ್ಲವನಿನ್ನೂ ಹತ್ತಂಗುಲ ಎತ್ತರವೀತ  

ವಿವರಣೆ :

ಪುರುಷನು ಸಾವಿರಾರು ತಲೆಯುಳ್ಳವನು, ಸಾವಿರಾರು ಕಣ್ಣುಗಳುಳ್ಳವನು ಮತ್ತು ಸಾವಿರಾರು ಕಾಲುಗಳುಳ್ಳ ವನು. ಅವನು ವಿಶ್ವವನ್ನೆಲ್ಲಾ ಆವರಿಸಿಕೊಂಡಿದ್ದಾನೆ ಮತ್ತು ಅದನ್ನು ಹತ್ತು ಅಂಗುಲಗಳಿಂದ ಮೀರಿದ್ದಾನೆ.

ವ್ಯಾಖ್ಯಾನ :

"ಸಹಸ್ರ" ಪದವನ್ನು ಸಾಮಾನ್ಯ ಅರ್ಥದಲ್ಲಿ ತೆಗೆದುಕೊಳ್ಳುವುದು ಯುಕ್ತವಲ್ಲ. ಅದು "ಹಲವಾರು", "ಅಸಂಖ್ಯಾತ" ಎಂಬ ಅರ್ಥಗಳನ್ನು ಹೊಂದಿದೆ. ಶತಪಥ ಬ್ರಾಹ್ಮಣವು ಈ ಪದವನ್ನು "ಸರ್ವ", "ಸಂಪೂರ್ಣವಾಗಿ" ಎಂದು ಅರ್ಥೈಸುತ್ತದೆ (ಸಹಸ್ರಾಯತ್ವೇತಿ ಸರ್ವಂ ವೈ ಸಹಸ್ರಂ ಸರ್ವಂ ಅಸಿ). ಸಾಯಣರು, ಈ ಪದವು ರೂಪಾಲಂಕಾರವಾಗಿದೆ ಎಂದು ಸೂಚಿಸುತ್ತಾರೆ; ಗೂಢಾರ್ಥದಲ್ಲಿ ಅದು "ಅನಂತತ್ವ" ಎಂದಾಗುತ್ತದೆ (ಸಹಸ್ರ-ಶಬ್ದಸ್ಯ ಉಪಲಕ್ಷಣತ್ವಾತ್ ಅನಂತೈಃ). ಇಲ್ಲಿ ಪುರುಷನು ಪೂರ್ಣನೂ, ಬ್ರಹ್ಮಾಂಡ-ದೇಹಿಯೂ, ಸರ್ವ-ಪ್ರಾಣಿ-ಸಮಷ್ಟಿರೂಪನೂ ಆಗಿದ್ದಾನೆ. ಅವನಿಗೆ ಅಸಂಖ್ಯಾತ ತಲೆಗಳು, ಕಣ್ಣುಗಳು ಮತ್ತು ಕಾಲುಗಳು ಇವೆ ಎಂಬರ್ಥ, ಸಮಸ್ತ ಜೀವಿಗಳ ತಲೆಗಳು, ಕಣ್ಣುಗಳು ಮತ್ತು ಕಾಲುಗಳು ವಾಸ್ತವವಾಗಿ ಕೇವಲ ಪುರುಷನ ತಲೆಗಳು, ಕಣ್ಣುಗಳು ಮತ್ತು ಕಾಲುಗಳು ಮಾತೆಅ ಆಗಿವೆ. ಇಲ್ಲಿ ವಿವರಿಸಿರುವ ದೇಹದ ಭಾಗಗಳು ಪುನಃ ರೂಪಾಲಂಕಾರಗಳಾಗಿವೆ. ಒಳಾರ್ಥದಲ್ಲಿ ಮಾನವ ಜೀವಿಗಳ ದೇಹದ ಎಲ್ಲಾ ಭಾಗಗಳು ಎಂದಾಗುತ್ತದೆ. ಅವುಗಳೆಲ್ಲವೂ ಪುರುಷನ ಶರೀರದಲ್ಲಿ ಒಳಗೊಂಡಿವೆ. ಯಜುರ್ವೇದ ವಾಜಸನೇಯ ಸಂಹಿತದಲ್ಲಿ, ಅಗ್ನಿಯು ಸಾವಿರಾರು ಕಣ್ಣುಗಳುಳ್ಳ, ನೂರಾರು ಪ್ರಾಣ ಶಕ್ತಿಗಳುಳ್ಳ ಮತ್ತು ಸಾವಿರಾರು ಉಸಿರುಳ್ಳ ಹಾಗೂ ವಿಶ್ವದ ಸಾವಿರಾರು ಜೀವಿಗಳ ಆಧಾರವೆಂದು ಬಣ್ಣಿಸಲಾಗಿದೆ.

ಶತಪಥ ಬ್ರಾಹ್ಮಣವು ಸಹಸ್ರ (ಸರ್ವ, ಪೂರ್ಣ) ಪದದ ಅರ್ಥವನ್ನು ಆತ್ಮನ ಅಂಕಿತ, ಪ್ರತಿಬಿಂಬ ಮತ್ತು ಪರಿಮಾಣವೆಂದು ಕೊಡುತ್ತದೆ.

ಈ ಸಂದರ್ಭದಲ್ಲಿ ಪ್ರಸ್ತಾಪಿಸಲಾಗಿರುವ ಮೂರು ಅವಯವಗಳೆಂದರೆ ಶಿರಸ್ಸು, ಕಣ್ಣುಗಳು ಮತ್ತು ಕಾಲುಗಳು. ತಲೆಯ ಸಂಕಲ್ಪಶಕ್ತಿಯನ್ನು, ಕಣ್ಣುಗಳ ದೃಷ್ಟಿ ಮತ್ತು ಅರಿವನ್ನು (ದರ್ಶನ) ಮತ್ತು ಕಾಲುಗಳು, ಚಲನೆ, ಕ್ರಿಯೆ ಮತ್ತು ವ್ಯವಹಾರಗಳನ್ನು ಸಾಂಕೇತಿಕವಾಗಿ ಪ್ರತಿನಿಧಿಸುತ್ತವೆ. ಇದರರ್ಥವೆಂದರೆ ವಿಶ್ವದಲ್ಲಿ ಸಕಲ ಸಂಕಲ್ಪಗಳು, ತಿಳುವಳಿಕೆ ಮತ್ತು ಕಾರ್ಯಾಚರಣೆಗಳು ಪುರುಷನ ಸಮ್ಮುಖದಲ್ಲೇ ವಾಸ್ತವಿಕವಾಗಿ ಮಾಡಲ್ಪಡುತ್ತವೆ.

ಪುರುಷನ ಮೂರು ವರ್ಣನಾತ್ಮಕ ಗುಣವಾಚಕಗಳಲ್ಲಿ, ಮೊದಲನೆಯದು - "ಸಹಸ್ರ-ಶೀರ್ಷ" ಪದವು ಋಗ್ವೇದದ ಗ್ರಂಥ ಸಂಗ್ರಹಗಳಲ್ಲಿ ಮತ್ತೆಲ್ಲಿಯೂ ಕಾಣಸಿಗುವುದಿಲ್ಲ. ಮೂರನೆಯದು "ಸಹಸ್ರ-ಪಾತ್" ಪದವು ಋಗ್ವೇದದ ಕೇವಲ ಒಂದೇ ಉದ್ಧೃತ ಭಾಗದಲ್ಲಿ ಸೂರ್ಯನ ಸ್ತುತಿಗೆ ಸಂಬಂಧಿಸಿದಂತೆ ಕಂಡು ಬರುತ್ತದೆ. ಪಾದ ಪದವನ್ನು ಬೆಳಕಿನ ಕಿರಣವೆಂಬ ಅರ್ಥದಲ್ಲಿ ಉಪಯೋಗಿಸಲಾಗಿದೆ ಎಂಬುದು ಗಮನಾರ್ಗ; ಮತ್ತು ಸಹಸ್ರಪಾತ್ ಪದವು ಸ್ವಾಭಾವಿಕವಾಗಿ ಸೂರ್ಯನಿಗೆ ಅನ್ವಯವಾಗುತ್ತದೆ. ಆದರೆ, ಎರಡನೇ ಗುಣವಾಚಕ, ಅಂದರೆ ಸಹಸ್ರಾಕ್ಷ ಪದವು ಇನ್ನೂ ನಾಲ್ಕು ಉಲ್ಲೇಖಿತ ಭಾಗಗಳಲ್ಲಿ ಪುನರಾಚರ್ತಿತವಾಗಿದೆ; ಸಹಸ್ರಾಕ್ಷಾ ಧಿತಾಸ್ಪತಿ, ವಾಯು ಮತ್ತು ಇಂದ್ರರನ್ನು ಒಟ್ಟಿಗೆ ಉದ್ದೇಶಿಸುತ್ತದೆ; ಸಹಸ್ರಾಕ್ಷೋ ವಿಚರ್ಷಣಿಃ - ಅಗ್ನಿಗೆ ಸಂಬಂಧಿಸಿದಂತೆಮತ್ತು ತಸ್ಮೈ ಸಹಸ್ರಮ್ ಅಕ್ಷಿಭಿರ್ ವಿ ಚಕ್ಷೆ - ಅಗ್ನಿಗೆ ಸಂಬಂಧಿಸಿದಂತೆ, ಸಹಸ್ರಾಕ್ಷೇಣ ಶತಶಾರದೇನ - ಇಂದ್ರ, ಅಥವಾ ಹವಿಸ್ಸಿಗೆ, ಅಥವಾ ರಾಜ-ಯಕ್ಷ್ಮ ಎಂದು ಕರೆಯಲ್ಪಡುವ ಖಾಯಿಲೆಗಳನ್ನು ನಾಶಗೊಳಿಸುವ ದೇವತೆಗೆ ಸಂಬಂಧಿಸಿದ್ದಾಗಿದೆ.

ಈ ಉಲ್ಲೇಖಗಳಿಂದ ಪುರುಷನ ತತ್ವವು ಅಗ್ನಿ, ಇಂದ್ರ, ವಾಯು ಮತ್ತು ಸೂರ್ಯರ ಪರಿಕಲ್ಪನೆಗಳನ್ನು ಒಳಗೊಂಡಿರುವುದನ್ನು ಸುಲಭವಾಗಿ ಅವಲೋಕಿಸ ಬಹುದು. ಅಗ್ನಿಯು ಭೂಮಿಯ ದೇವತೆ, ಇಂದ್ರ ವಾಯು ಇವರು ಮಧ್ಯವಲಯದ ಹಾಗೂ ಸೂರ್ಯನು ಸ್ವರ್ಗಲೋಕದ ದೇವತೆಗಳು. ವಿಷ್ಣುವಿನಂತೆಯೇ (ತ್ರಿಪಾತ್), ಅಗ್ನಿಯೂ ಸೂರ್ಯನ ಸ್ವರೂಪನು; ವಾಸ್ತವವಾಗಿ, ಪುರುಷಸೂಕ್ತವನ್ನು ಸಾಂಪ್ರದಾಯಿಕವಾಗಿ ಯಜ್ಞ, ಅಗ್ನಿ ಮತ್ತು ಸೂರ್ಯರ ಸಮಗ್ರ ಸ್ವರೂಪವಾದ (ಯಜ್ಞೋ ವೈ ವಿಷ್ಣುಃ) ವಿಷ್ಣುವಿನ ಸ್ತುತಿಯೆಂದು ಭಾವಿಸಲಾಗಿದೆ. ಸೂರ್ಯನು ಸರ್ವ-ಸೃಷ್ಟಿಕರ್ತನಾದ ವಿಶ್ವಕರ್ಮನೊಂದಿಗೂ ಗುರುತಿಸಲಟ್ಟಿ ದ್ದಾನೆ. ಅವನು ಬೃಹತ್ತಾದ ಮೂರು ಹೆಜ್ಜೆಗಳನ್ನು (ಪ್ರಾತಃಕಾಲ, ಮಧ್ಯಾನ್ಹ ಮತ್ತು ಸಂಧ್ಯಾಕಾಲ) ಊರುತ್ತಾನೆ. ಆದ್ದರಿಂದ ತ್ರಿಪಾತ್ ಅಥವಾ ವಿಷ್ಣುವೆಂದು (ಭೂಮಿ, ಆಕಾಶ ಮತ್ತು ವಾಯುಗಳನ್ನು ಪಸರಿಸುವವನು) ಕರೆಯಲ್ಪಡುತ್ತಾನೆ. ಈ ಅರ್ಥದಲ್ಲಿ, ಅವನು ಸಮಗ್ರ ಅಸ್ಥಿತ್ವದ ಸತ್ವ (ರಸ)ದ ಸಂಕೇತವಾಗಿದ್ದಾನೆ, ಅಗ್ನಿ, ಸೂರ್ಯ ಮತ್ತು ಇಂದ್ರರು (ವಾಯು) ಈ ಅಸ್ತಿತ್ತ್ವದ ಮೂಲತತ್ವದ ಅಂಶಗಳು ಅಷ್ಟೇ.

ಭೂಮಿಮ್ ವಿಶ್ವತೋ ವೃತ್ವಾ ಅತ್ಯತಿಷ್ಠತ್ :

ಇಲ್ಲಿ ಭೂಮಿ ಪದವು ಸಮಸ್ತ ಬ್ರಹ್ಮಾಂಡವನ್ನು ಸೂಚಿಸುತ್ತದೆ (ಬ್ರಹ್ಮಾಂಡ-ಗೋಲಕ-ರೂಪಮ್, ಸಾಯಣರು) ಮತ್ತು ಅದರ ಗೂಡಾರ್ಥದಂತೆ ಎಲ್ಲಾ ಮೂರೂ ಲೋಕಗಳನ್ನು (ಭೂಃ, ಭುವಃ ಮತ್ತು ಸ್ವಃ) ಒಳಗೊಂಡಿದೆ. ಪುರುಷನು ಇದನ್ನು ಸುತ್ತುವರೆಯುತ್ತಾನೆ, ಸಮಸ್ತ ದಿಕ್ಕುಗಳಿಂದಲೂ ಆವರಿಸುತ್ತಾನೆ. ಅವನು ಅಸ್ಥಿತ್ವದಲ್ಲಿ (ಸರ್ವತೋ ಪರಿವೇಷ್ ಟ್ಯ) ಇರುವ ಎಲ್ಲದರಲ್ಲೂ ಸ್ವಲ್ಪವೂ ಅಂತರವನ್ನು ಬಿಡದೇ ಪ್ರವೇಶಿಸುತ್ತಾನೆ. ಸಾಯಣರು ಹೇಳುವಂತೆ, ಅವನು ಅದನ್ನು ತನ್ನ ನೆಲೆಯಾಗಿ (ಅಧಿಷ್ ಠ್ಯಾಯ) ಮಾಡಿಕೊಳ್ಳುತ್ತಾನೆ. ಅವನು ಸಮಗ್ರ ಅಸ್ಥಿತ್ವದಲ್ಲಿ ತುಂಬಿಕೊಳ್ಳುತ್ತಾನೆ. ಆದ್ದರಿಂದ ಅವನು ಪುರುಷನೆಂದು ಕರೆಯಲ್ಪಡುತ್ತಾನೆ (ಪೂರಯಿತಿ, ಪೃಣತಿ, ವ್ಯಾಪ್ನೋತಿ). ತನ್ನ ಶಕ್ತಿ ಹಾಗೂ ಮಹಿಮೆಯಿಂದ ಆವರಿಸುತ್ತಾನೆ (ಸ್ವ ಮಹಿಮ್ನಾ).

ದಶಾಂಗುಲಮ್ :

ಪುರುಷನ ಪರಿಮಾಣವು ಅವನು ಆವರಿಸಿರುವ ವಿಶ್ವದ ಮೇರೆಯನ್ನು ಮೀರಿದೆ. ಪುರುಷನ ಪರಿಮಾಣದ ಹೆಚ್ಚುವರಿಯನ್ನು "ಹತ್ತು ಅಂಗುಲ"ವೆಂದು ಕೊಡಲಾಗಿದೆ. ಭಾರತೀಯ ಕೋಷ್ಟಕದ ಪ್ರಕಾರ ಅಂಗುಲವು ಇಂಚು ಎಂದಾಗುತ್ತದೆ, ಅಕ್ಕಪಕ್ಕದಲ್ಲಿ ಜೋಡಿಸಲಾದ 8 ಜವೆ ಧಾನ್ಯದಳತೆಗೆ ಸಮ. ಇವುಗಳಲ್ಲಿ "ಹತ್ತು", ವ್ಯಕ್ತಿಯ ಎತ್ತರದ ಪರಿಮಾಣವೆಂದೂ, ಅಥವಾ ಯಜ್ಞದ ವೇದಿಕೆಗೆ (ಯಜ್ಞವೇದಿ) ಸಂಬಂಧಿಸಿದ ಪರಿಮಾಣವು ಸಹ ಯಾವುದಿದೆ ಅದು "ಪ್ರದೇಶ-ಮಾತ್ರ"ವೆಂದೂ ಹೇಳಲಾಗಿದೆ. ಈ ವಿವರಣೆಯನ್ನು ಶತಪಥ ಬ್ರಾಹ್ಮಣದಲ್ಲಿ ವೀಕ್ಷಿಸಬಹುದು.

ಶತಪಥ ಬ್ರಾಹ್ಮಣದಲ್ಲಿ, ಪರಿಮಾಣವು ಮಾನವನ ಶರೀರವನ್ನು ತುಂಬಿಸುವ ಹಾಗೂ ಚೈತನ್ಯಗೊಳಿಸುವ ಜೀವಿಯಾದ ಅಗ್ನಿ-ವೈಶ್ವಾನರನ್ನು ಪ್ರತಿನಿಧಿಸುತ್ತದೆ ಎಂದು ಸೂಚಿಸುತ್ತದೆ. ಅದು ಮಾನವನ ಭೌತಿಕ ಅಂಗ ರಚನೆಯೊಳಗೆ ಸ್ಥಾಪಿಸಲ್ಪಟ್ಟಿದೆ. ಆದ್ದರಿಂದ ಅದು ಪುರುಷ-ಬಿಂಬ (ಪುರುಷ-ವಿಧ) ಎಂದು ಕರೆಯಲ್ಪಟ್ಟಿದೆ.,

ಪುರುಷ-ಬಿಂಬ ಕಲ್ಪನೆಯು ಹಣೆಯ (ಮೂರ್ಧಾ) ಮೇಲ್ಭಾಗದ ಮತ್ತು ಗಲ್ಲದ ಕೆಳಅಂಚಿನ ನಡುವಿನ ಜಾಗದ ಪರಿಮಾಣವನ್ನು ಒಳಗೊಂಡಿದೆ. ಛಾಂದೋಗ್ಯೋಪನಿಷತ್ತಿನ (15.18.1) ಮತ್ತು ವೇದಾಂತ ಸೂತ್ರ (1.2.3.1) ಗಳನ್ನು ವ್ಯಾಖ್ಯಾನಿಸುತ್ತಾ ಶಂಕರಾಚಾರ್ಯರು " ಪ್ರಾದೇಶ-ಮಾತ್ರ" ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವೈಶ್ವಾನರ ಶರೀರವು ಮೂರು ಲೋಕಗಳನ್ನು ವ್ಯಾಪಿಸಿ, ಸ್ವರ್ಗಲೋಕಗಳಿಂದ ಭೂಮಿಯವರೆಗೂ ವಿಸ್ತೃತವಾಗಿದೆ. ಜೀವಿಯ ಮಟ್ಟದಲ್ಲಿ ವಿಸ್ತರಣೆಯು ಹಣೆಯ ಮೇಲ್ಭಾಗದಿಂದ ಗಲ್ಲದ ಕೆಳಗಿನ ಅಂಚಿನವರೆಗೂ ಇರುತ್ತದೆ. ಈ ಕ್ಷೇತ್ರದಲ್ಲೂ ಸಹ ಮೂರು ಲೋಕಗಳು ಪ್ರತಿನಿಧಿಸಲ್ಪಟ್ಟಿರುವುದು ಕಾಣುತ್ತದೆ. ಈ ಎರಡು ಎಲ್ಲೆಗಳ ನಿಶ್ಚಯಿಸುವಿಕೆ ( ಹಣೆಯಿಂದ ಒಂದು ಕಡೆ, ಗಲ್ಲದಿಂದ ಒಂದು ಕಡೆ) ಮತ್ತು ಈ ಎಲ್ಲೆಗಳ ನಡುವಿನ ಜಾಗದ ವ್ಯಾಪ್ತಿಯನ್ನು ಖಚಿತಪಡಿಸುವಿಕೆಯೇ ಪ್ರಾದೇಶ-ಮಾತ್ರ ಎಂದಾಗುತ್ತದೆ (ಭೃವೋ ಘ್ರಾಣಸ್ಯ ಚ ಸಂಧಿಃ ಯಸ್ ಸ ಏಷ ದ್ಯೌ ಲೋಕಸ್ಯ ಪರಸ್ಯ ಚ ಸಂಧಿರ್ ಭವತೀತಿ). ಇದು "ಹತ್ತು ಅಂಗುಲ"ದೊಂದಿಗೆ ಸದೃಶವಾಗಿದೆ ಎಂದು ಹೇಳಲಾಗಿದೆ. ಪುರುಷನು ಇಲ್ಲಿ ಸುಲಭವಾಗಿ ಗೋಚರವಾಗಬಲ್ಲನು.

ಮತ್ತೊಂದೆಡೆ, ಮಹೀಧರನು ದಶಾಂಗುಲ ಪರಿಮಾಣವು ಹೊಕ್ಕಳಿನಿಂದ (ನಾಭಿ) ಮೇಲೆ ಹತ್ತು ಇಂಚುಗಳ ಅಂತರದಲ್ಲಿರುವ ಹೃದಯ (ಎಲ್ಲಿ, ಪುರುಷನು ನೆಲೆಸಿರುತ್ತಾನೊ)ವನ್ನು ಉದ್ದೇಶಿಸುತ್ತದೆ ಎಂದು ಅರ್ಥೈಸುತ್ತಾನೆಸ್ವಾಮಿ ಕೃಷ್ಣಾನಂದರ ವಿವರಣೆಯ ಪ್ರಕಾರ - ಹೃದಯವು ಆತ್ಮನಿರುವ ಸ್ಥಳ ಹಾಗೂ ನಾಭಿಯು ಸೃಷ್ಟಿಕ್ರಿಯೆಯ ಮೂಲ / ಬೇರು. ಹತ್ತು ಎಂಬ ಪದವೂ ಸಹ ಅನಂತ (infinity)ವನ್ನು ಅರ್ಥೈಸುತ್ತದೆ ಏಕೆಂದರೆ ಸಂಖ್ಯೆಗಳು ಕೇವಲ ಒಂಬತ್ತರವರೆಗೆ ಮಾತ್ರ. ಇದರ ನಂತರದ್ದನ್ನು ಸಂಖ್ಯಾರಹಿತವೆಂದು ಪರಿಗಣಿಸ ಲಾಗಿದೆ.

ಸೃಷ್ಟಿಕ್ರಿಯೆಯಲ್ಲಿ ( ಭೂಮಿಯ ಮೇಲೆ ಜೀವದ ಹುಟ್ಟಿನ ಸಹಜಕ್ರಿಯೆ), ಬ್ರಹ್ಮನು ಪುರುಷ (ಮಹಾವಿಷ್ಣುವಿನ)ನ ನಾಭಿಯಿಂದಲೇ ಜನಿಸಿದ.

ವಾಸ್ತುವಿಜ್ಞಾನದಲ್ಲಿ ಈ ಪ್ರದೇಶವನ್ನು (ನಾಭಿಸ್ಥಾನ) "ಬ್ರಹ್ಮನಾತ್ಮಸಂಭವ" ಎನ್ನಲಾಗಿದೆ. ಇದರ ಬಗ್ಗೆ ಮಹಾನಿರ್ವಾಣತಂತ್ರದ ಅಧ್ಯಾಯ 13, ಶ್ಲೋಕ 54 ರಲ್ಲಿ ಹಾಗೂ ತಂತ್ರ-ಸಮುಚ್ಚಯದ ಮೊದಲನೇ ಅಧ್ಯಾಯ, ಶ್ಲೋಕ 1.62 ರಲ್ಲಿ ವಿವರಿಸಲಾಗಿದೆ.

ವಾಸ್ತುಶಾಸ್ತ್ರದ ಬ್ರಹ್ಮಸ್ಥಾನವು (ಪರಿಕಲ್ಪನೆ ಮಾತ್ರ) ವಾಸ್ತುಪುರುಷನ ಹೃದಯ ಮತ್ತು ಹೊಕ್ಕಳಿನ ನಡುವೆ ಇರುವುದು. ಈ ಪ್ರದೇಶವನ್ನೂ ಸಹ ದಶಾಂಗುಲ ಎಂದು ಕರೆಯಲಾಗುವುದು. ಶಂಕರಾಚಾರ್ಯರ ಶ್ವೇತಾಶ್ವತರೋಪನಿಷತ್ತಿನ ಮೂರನೇ ಅಧ್ಯಾಯದ ಭಾಷ್ಯದಲ್ಲಿ ಇದನ್ನು ವಿವರಿಸಲಾಗಿದೆ. ಹೀಗಾಗಿ ದಶಾಂಗುಲಮ್ ಅಹಂನ ಸ್ಥಾನ; ನಾಭಿಯಿಂದ ಹೃದಯ (ಆತ್ಮ)ದ ವರೆಗಿನ ಪ್ರದೇಶ. ಮಾನವನ ಶರೀರದಲ್ಲಿ ಮಣಿಪೂರಚಕ್ರ ಹಾಗೂ ಅನಾಹತಚಕ್ರದ ನಡುವಿನ ಪ್ರದೇಶವನ್ನು ಮಹಾಶೂನ್ಯವೆಂದು ಕರೆಯಲಾಗುವುದು ಹಾಗೂ ಈ ಪ್ರದೇಶವೇ ದಶಾಂಗುಲ.

ಗರ್ಭಧರಿಸಿರುವ ಸ್ತ್ರೀಯಲ್ಲಿ ಶಿಶುವು ಗರ್ಭದಲ್ಲಿದ್ದರೂ ಗರ್ಭಿಣಿಯ ಹೃದಯವೇ ಆಕೆಯನ್ನೂ ಹಾಗೂ ಶಿಶುವನ್ನೂ ಜೀವಂತವಾಗಿರುವಂತೆ ನೋಡಿಕೊಳ್ಳುತ್ತದೆ.

ಪುರುಷ ಸೃಷ್ಟಿಯು ವಿಶ್ವ, ಮತ್ತು ಪುರುಷನು ಸೃಷ್ಟಿಯ ಹೃದಯದ  (ಆತ್ಮ) ಹಾಗೂ ಅವನು ಇದನ್ನು ತನ್ನ ಹತ್ತು ಬೆರಳಿನ ಅಂತರದಿಂದ ಅದನ್ನು ಗಮನಿಸುತ್ತಿರುವನುಈ ಮಂತ್ರದ ನಿಜವಾದ ಅರ್ಥವೇ ಇದು.

ಆದರೆ, ಸಾಯಣರು ಹೇಳುವಂತೆ ಈ ದಶಾಂಗುಲ ಪದವು ಕೇವಲ ಸಾಂಕೇತಿಕ ಅರ್ಥವುಳ್ಳ ಪದವಾಗಿದೆ. ಅಂದರೆ, ಅದನ್ನು ಅಳೆಯಲಾಗುವುದಿಲ್ಲ, ಅಥವಾ ನಿರ್ದಿಷ್ಟವಾಗಿ ನಿಶ್ಚಯಿಸಲು ಅಸಾಧ್ಯ. ಇದರ ಅಂತರಾರ್ಥದಂತೆ, ಪುರುಷನು ಸಮಸ್ತ ವಸ್ತುಗಳಿಂದ ಆಚೆಗಿದ್ದಾನೆ ಮತ್ತು ಸಮಸ್ತ ವಸ್ತುಗಳಿಗಿಂತಲೂ ಶ್ರೇಷ್ಟನು; ಅವನು ಅಸ್ತಿತ್ವದಲ್ಲಿರುವ ಹಾಗೂ ಅಸ್ತಿತ್ವದಲ್ಲಿರದ ಸಮಸ್ತವನ್ನೂ ಆವರಿಸಿದ್ದಾನೆ. ಅತ್ಯತಿಷ್ಠತ್ ಪದವು "ಅದನ್ನು ಅತಿಶಯಿಸಿ ನಿಂತಿರುವ" ಎಂದು ಅರ್ಥವಾಗುತ್ತದೆ "ಅತಿಕ್ರಮ್ಯ ಸ್ಥಿತವಾನ್".

ಮಂತ್ರ - 2 -ಸಂಸ್ಕೃತದಲ್ಲಿ :

ಪುರುಷ ಏವೇದಂ ಸರ್ವಂ ಯತ್ ಭೂತಂ ಯತ್ ಚ ಭವ್ಯಮ್ |
ಉತ ಅಮೃತತ್ವಸ್ಯ ಈಶಾನೋ ಯತ್ ಅನ್ನೇನ ಅತಿರೋಹತಿ ||

ಕನ್ನಡದಲ್ಲಿ :

ಪುರುಷನೆ ಈಗಿಹುದೆಲ್ಲವು ಹಿಂದಿದ್ದುದು ಮುಂದಿನದೂ
ಅಮೃತತ್ವಕೆ ಒಡೆಯನವ ಆಳುವ ಮರ್ತ್ಯರನೂ   

ವಿವರಣೆ :

ಹಿಂದೆ ಆಗಿಹೋಗಿರುವ ಮತ್ತು ಮುಂದೆ ಭವಿಷ್ಯತ್ತಿನಲ್ಲಿ ಆಗಲಿರುವ (ಮತ್ತು ಈಗ ವರ್ತಮಾನದಲ್ಲಿರುವ ಈ ಎಲ್ಲ ಜಗತ್ತೂ ಪುರುಷನೇ ಹಾಗೂ ದೇವತ್ವಕ್ಕೂ ಈ ಪುರುಷನು ಅಧಿಪತಿಯುಏಕೆಂದರೆ ಪ್ರಾಣಿಗಳ (ಭೋಗ್ಯವಾದ) ಅನ್ನದಿಂದ ತನ್ನ ಕಾರಣಾವಸ್ಥೆಯನ್ನೂ ಮೀರಿ ದೃಶ್ಯವಾದ ಜಗದ್ರೂಪವನ್ನು ತಾಳುತ್ತಾನೆ. (ಆದುದರಿಂದಲೇ ಪ್ರಾಣಿಗಳ ಕರ್ಮಫಲ ಭೋಗಕ್ಕಾಗಿ ಜಗದ್ರೂಪವನ್ನು ತಾಳುವುದರಿಂದ ಈ ಜಗದ್ರೂಪವು ಆ ಪುರುಷನ ವಸ್ತುತತ್ತ್ವವಲ್ಲ).

ವ್ಯಾಖ್ಯಾನ :

ಪುರುಷ ಏವೇದಂ ಸರ್ವಂ ಯತ್ ಭೂತಂ ಯತ್ ಚ ಭವ್ಯಮ್:

ನಮಗೆ ಗೋಚರವಾಗುತ್ತಿರುವ ಹಾಗೂ ಈಗ ಅಸ್ತಿತ್ವದಲ್ಲಿರುವ ಸಮಸ್ರವೆಲ್ಲವೂ ಪುರುಷನೇ ಆಗಿದ್ದಾನೆ ಎಂಬ ಪ್ರಸಕ್ತ ಹೇಳಿಕೆಯು ಹಿಂದಿನ ಮಂತ್ರದ ಕೊನೆಯ ಪದಗಳಿಂದ ಸೂಚಿಸಲ್ಪಟ್ಟ ಜಾಡನ್ನು ಮುಂದುವರಿಸುತ್ತದೆ. ಭೂಮಿಯು ಅಲ್ಲಿ ಅಸ್ತಿತ್ವದ ಪ್ರಾದೇಶಿಕ ಹರವನ್ನು ಉದ್ದೇಶಿಸುತ್ತದೆ ಎಂದು ಭಾವಿಸಿದರೆ ಸಮಾನಾರ್ಥದಲ್ಲಿ ಬಳಸಲ್ಪಟ್ಟ ಇದಂ ಪದವು ಕಾಲದ ಮೂರು ಭಾಗಗಳನ್ನು ಒಳಗೊಂಡಿದೆ ಎಂದು ಅರ್ಥೈಸಬಹುದು  ಭೂಮಿಮ್ ಪದದ ಅರ್ಥದ ಸಂಬಂಧದಲ್ಲಿ, ಗೂಢಾರ್ಥದನುಸಾರ ಅವನು ಇದಂ ಅನ್ನೂ ಸಹ ಅತಿಶಯಿಸಿದ್ದಾನೆ. ಅವನು ದೇಶ, ಕಾಲವನ್ನು ಮೀರಿದ್ದಾನೆ. ಹಾಗೂ ಅವನು ನಿರ್ವಿಕಾರನು ಮತ್ತು ಅನಂತನು, ನಿರ್ವಿಕಲ್ಪತ್ವವು ಭೂಮಿಯಿಂದಾಚೆ ಇದೆ ಮತ್ತು ಅನಂತತ್ವವು (ಇದಂ) ಇದನ್ನು ಮೀರಿದೆ. ಕಠೋಪನಿಷತ್ತಿನಲ್ಲಿ "ಭೂತ, ವರ್ತಮಾನ ಹಾಗೂ ಭವಿಷ್ಯ"ಗಳೆರಡರ ಒಡೆಯನಾಗಿ ಮಾನವನ ಅಂತರಾತ್ಮದಲ್ಲಿ ನೆಲೆಸಿರುವ ಪುರುಷನ ವರ್ಣನೆಯನ್ನು ನಾವು ನೋಡುತ್ತೇವೆ.

ಶ್ವೇತಾಶ್ವತರೋಪನಿಷತ್ತಿನಲ್ಲಿ - ಅವನು ತ್ರಿಕಾಲಗಳನ್ನು ಮೀರಿರುವನು ಎನ್ನುವ ಹೇಳಿಕೆಯಿದು (ಪರಸ್-ತ್ರಿಕಾಲಾತ್). ನಿಸ್ಸಂಶಯವಾಗಿ, ಪುರುಷನು ಕಾಲ ದೇಶಾದಿಗಳಲ್ಲಿ ಇರುವ ಸಮಸ್ತವೂ ಆಗಿದ್ದಾನೆ, ಅಲ್ಲದೇ ಅವನು ಚರಾಚರಾತ್ಮಕ ಅಸ್ತಿತ್ತ್ವದ ಕಾಲ-ದೇಶ ಇವುಗಳ ಎಲ್ಲೆಯನ್ನೂ ಮೀರಿ ವ್ಯಾಪಿಸಿದ್ದಾನೆ. ಹೇಗೆ ಚಕ್ರದ ಅರೆಗಾಲುಗಳು ಗಾಲಿಯ ನಡುಭಾಗದಲ್ಲಿ ನೆಲೆಸಿರುತ್ತವೆಯೋ, ಹಾಗೆಯೇ ಸಮಸ್ತ ಜೀವಿಗಳು, ದಿವ್ಯದೇವತೆಗಳು, ಲೋಕಗಳು ಮತ್ತು ಶಕ್ತಿಗಳು ಈ ಆತ್ಮನಲ್ಲಿ ನೆಲೆಸಿವೆ.

ಮತ್ತೊಂದು ಕಡೆ (..4.4.22) ರಲ್ಲಿ, ಅವನು ಎಲ್ಲದರ ಅಧಿನಾಯಕ (ಈಶಾನಃ) ಮತ್ತು ಎಲ್ಲದರ ಅಧಿಪತಿ ಎಂದು ಘೋಷಿಸಲಾಗಿದೆ.

ಉತ ಅಮೃತತ್ ವಸ್ಯ ಈಶಾನಃ :

ಪುರುಷನು ಅಮರತ್ವದ ಅಧಿಪತಿ (ಈಶಾನ). ವಾಯುವಿನ ಸಹಚರರಾದ ಮರುತ್ ಸೇವತೆಗಳು ಅಮರತ್ವದ ಮೇಲೆ ಪ್ರಭುತ್ವವನ್ನು ಹೊಂದಿರುವರು (ಈಶಿರೇ ಅಮೃತಸ್ಯ) ಎಂದು ಹೇಳಲಾಗಿದೆ. ಪುರುಷನು ಚರಾಚರಾತ್ಮಕ ವಸ್ತುಗಳ ಹಾಗೂ ಜೀವಿಗಳ ಅಥವಾ ಇವುಗಳನ್ನು ನಿತಮಿಸುವ ದಿವ್ಯತೆಗಳ ಸಂಬಂಧಗಳನ್ನು ತ್ಯಜಿಸಿದಾಗ ಆಗುವ ಪರಿಣಾಮವೇ ಮರ್ತ್ಯತೆ  ಎಂದು ವೆಂಕಟ ಮಾಧವರು ವಿವರಿಸುತ್ತಾರೆ.

ಆದ್ದರಿಂದಲೇ, ಶತಪಥ ಬ್ರಾಹ್ಮಣದ ಪ್ರಕಾರ ಮೃತ್ಯುವು ಏಕರೂಪವೇ ಅಥವಾ ಅನೇಕರೂಪವೇ ಎಂದು ಕೇಳಿದರೆ ಅದು ಅಸಂಬದ್ಧವಾಗುತ್ತದೆ. ಅದು ಏಕ ಅಥವಾ ಅನೇಕವಾಗಿರಬಹುದು. ಸಮಸ್ತ ಲೋಕಕ್ಕೂ ಸೂರ್ಯನು ಒಬ್ಬನೇ, ಅವನಿಗೆ ಬದಲಿ ವ್ಯವಸ್ಥೆ ಇಲ್ಲ. ಸೂರ್ಯನು ತನ್ನ ಸಾನ್ನಿಧ್ಯವನ್ನು ಹಿಂತೆಗೆದುಕೊಂಡರೆ, ಆಗ ಸಮಸ್ತ ಪ್ರಪಂಚವು ಏಕರೂಪದ ಸಾವಿಗೆ ತುತ್ತಾಗುತ್ತದೆ. ಆದರೆ ಸೂರ್ಯನು ಪ್ರತ್ಯೇಕವಾಗಿ ಪ್ರತಿಯೊಂದು ಜೀವಿಯಲ್ಲೂ ಉಪಸ್ಥಿತನಿರುತ್ತಾನೆ. ಅವನು ಈ ಯಾವುದೇ ಜೀವಿಯಿಂದ ತನ್ನ ಅಸ್ತಿತ್ವವನ್ನು ಹಿಂತೆಗೆದಾಗ, ಆ ಸಂಬಂಧಪಟ್ಟ ಜೀವಿಗೆ ಮರಣವುಂಟಾಗುತ್ತದೆ. ಇಲ್ಲಿ ಸಾವು ಅನೇಕ ರೂಪದ್ದಾಗಿದೆ.

ಪ್ರಸ್ತುತ ಸಂದರ್ಭದಲ್ಲಿ ಸೂರ್ಯನು ಪುರುಷನೆಂದೆನಿಸಿ ಕೊಳ್ಳುತ್ತಾನೆ. ಮರ್ತ್ಯತೆಯನ್ನು ಅವನ ಸಾನ್ನಿಧ್ಯದಿಂದ ದೂರವಾಗುವಿಕೆಯೊಂದಿಗೆ ಜೋಡಿಸಲಾಗಿದೆ.

ಹೀಗೆ ಅವಲೋಕಿಸಿದಾಗ, ಮರಣದ ಅನುಪಸ್ಥಿತಿಯು ಸಮಸ್ತ ಜೀವಿಗಳ ಮತ್ತು ವಸ್ತುಗಳ ಅಂತರ್ಯಾಮಿ ಯಾದ ಪುರುಷನ ಉಪಸ್ಥಿತಿಯನ್ನು ಸೂಚಿಸುತ್ತದೆ.

ಆತ್ಮನು ಸಮಸ್ತ ಜೀವಿಗಳಲ್ಲಿ, ಅವುಗಳೆಲ್ಲವುಗಳಿಂದ ಭಿನ್ನವಾಗಿ, ನೆಲೆಸಿರುತ್ತಾನೆ. ಜೀವಿಗಳು ಅವನನ್ನು ಸಂಪೂರ್ಣವಾಗಿ ಅರಿಯಲಾರರು; ಸಮಸ್ತ ಜೀವಿಗಳು ಅವನಿಗೆ ಒಂದು ಭೌತಿಕ ಚೌಕಟ್ಟು ಅಥವಾ ಶರೀರದಂತಿರುತ್ತವೆ. ಅವನು ಅಂತರ್ಗತವಾಗಿ ಸಮಸ್ತ ಜೀವಿಗಳನ್ನು ನಿಯಂತೆಇಸುತ್ತಾನೆ. ಆದ್ದರಿಂದ ಅದೇ ಅಂತರ್ನಿಯಾಮಕವೂ ಅನಂತವೂ ಆದ ನಿನ್ನಾತ್ಮ - ಹೀಗೆ ಉದ್ದಾಲಕ - ಆರುಣಿಗೆ ಯಾಜ್ಞ್ಯವಲ್ಕ್ಯರು ಹೇಳುತ್ತಾರೆ.

ಸಾಯಣರು ಅಮರತ್ವ್ಯನ್ನು ದೇವತ್ವವೆಂದು ಅರ್ಥೈಸುತ್ತಾರೆ. ದೇವತೆಗಳು ಅಮರರು; ಅವರು ಬದಲಾವಣೆ, ಅವನತಿ ಅಥವಾ ಮರಣವನ್ನು ಅನುಭವಿಸುವವರಲ್ಲ. ಈ ಅರ್ಥದಲ್ಲಿ, ಅಮರತ್ವದ
ಒಡೆಯ ಎಂದರೆ ದೇವತೆಗಳ ಒಡೆಯ ಎಂದಾಯಿತು. ಭೂತ, ವರ್ತಮಾನ ಹಾಗೂ ಭವಿಷ್ಯತ್ಕಾಲಗಳು ಭೂಮಿ ಹಾಗೂ ಅಂತರಿಕ್ಷದಲ್ಲಿರುವ ಜೀವಿ ಮತ್ತು ವಸ್ತುಗಳಿಗೆ ಅನ್ವಯಿಸುತ್ತದೆ. ದೇವತೆಗಳು ಉನ್ನತಲೋಕದ ನಿವಾಸಿಗಳು, ಕಾಲ ದೇಶಾದಿ ಇತಿಮಿತಿಗಳಿಂದ ಬಂಧನಾತೀತರು. ಪುರುಷನ ಪ್ರಭುತ್ವವು ಭೂಮ್ಯಾಕಾಶ ಹಾಗೂ ಅಂತರಿಕ್ಷದಿಂದ ಸ್ವರ್ಗಕ್ಕೂ ಸಹ, ಅದರಿಂದಾಚೆಗೂ ವಿಸ್ತೃತಗೊಂಡಿದೆ.

ಈ ರೀತಿಯ ವ್ಯಾಖ್ಯಾನದ ಸಾಧ್ಯತೆಯಿದ್ದರೂ ಸಹ, ಇದು ಅಷ್ಟು ಸಮಂಜಸವಲ್ಲ. ಏಕೆಂದರೆ ಪ್ರಸ್ತುತ ಪಾದದ ಈ ಅರ್ಧಭಾಗವನ್ನು - ಅಮೃತತ್ವಸ್ಯೇಶಾನಃ - ಉಳಿದ ಅರ್ಧದೊಂದಿಗೆ - ಯದ್ ಅನ್ನೇನಾತಿರೋಹತಿ - ಜೋಡಿಸಲಾಗಿದೆ ಹಾಗೂ ಅವು ಪರಸ್ಪರ ಒಂದನ್ನೊಂದು ಒಳಗೊಂಡಂತೆ ತೆಗೆದುಕೊಳ್ಳಲಾಗದು. ಹೀಗಿದ್ದೂ, ಪಾದದ ಎರಡನೇ ಭಾಗದ ಮಹತ್ವವನ್ನು ಗ್ರಹಿಸುವುದು ಸುಲಭವಲ್ಲ. ಅಲ್ಲದೇ, ಸೂಕ್ಷ್ಮಾತಿಸೂಕ್ಷ್ಮ ಗೂಢಾರ್ಥವನ್ನು ಹೊಂದಿರುವ ಅಮರ್ತ್ಯತೆ ಪದವು ಸಾವಿಲ್ಲದಿರುವಿಕೆಗಿಂತ ಇನ್ನೂ ಹೆಚ್ಚಿನ ಅರ್ಥವನ್ನು ಸೂಚಿಸುತ್ತದೆ.

ಪ್ರಶ್ನೋಪನಿಷತ್ತಿನಲ್ಲಿ ಅಮೃತ ಪದವನ್ನು ಸತ್ (ಯಾವುದು ಸತ್ಯವೋ ಅದು; ಇರುವಂಥದ್ದು) ಮತ್ತು ಅಸತ್ (ಹಿಂದೆ ಇದ್ದದ್ದು ಅಥವಾ ಮುಂದೆಯೂ ಇರುವ, ಆದರೆ ಪ್ರಸ್ತುತದಲ್ಲಿ ಅಸ್ತಿತ್ವದಲ್ಲಿರದ) ಪದಗಳೊಂದಿಗೆ ಬಳಸಲಾಗಿದೆ. ಪರಿಶೀಲನೆಯಲ್ಲಿರುವ ಪ್ರಸ್ತುತ ಮಂತ್ರವು , ಪುರುಷನು ಇದೆಲ್ಲವೂ ಆಗಿದ್ದಾನೆ; (ಇದಂ), (ಸತ್ ಅಥವಾ ಇರುವುದು), ಮತ್ತು ಹಿಂದೆ ಇದ್ದದ್ದೂ ಸಹ (ಭೂತಮ್) ಹಾಗೂ ಮುಂದೆ ಇರುವಂಥದ್ದು (ಭವ್ಯಮ್) (ಅಸತ್ ಅಥವಾ ಉಂಟಾಗುವುದು) ಎಂದು ಹೇಳುತ್ತದೆ; ಹಾಗೂ ಮುಂದುವರೆದು, ಅವನನ್ನು ಅಮರತ್ವದ ಪ್ರಭುವೆಂದು ವರ್ಣಿಸಲಾಗುತ್ತದೆ. ವಾಸ್ತವತೆ ಹಾಗೂ ತೋರಿಕೆಯ ಸಾಧ್ಯತೆಗಳು ಇವೆರಡಕ್ಕೂ ಸಾಮಾನ್ಯ ಆಧಾರವಾಗಿರುವ, ಅಂದರೆ ಪುರುಷನಿಂದಲೇ ಸಾಧ್ಯವಾಗಿಸಲ್ಪಟ್ಟಿವೆ. ಇರುವುದು ಮತ್ತು ಉಂಟಾಗುವುದು ಇವೆರಡೂ  ಯಾವ ಪುರುಷನಿಂದ ವ್ಯವಸ್ಥೆ ಮಾಡಲ್ಪಟ್ಟಿವೆ, ಅವೂ ಸಹ ಅನ್ನದಿಂದಲೇ (ಅನ್ನೇನಾತಿರೋಹತಿ) ಪೋಷಿಸಲ್ಪಟ್ಟಿವೆ. ಪುರುಷನ ಇರುವಿಕೆ ಇವೆಲ್ಲವನ್ನೂ ಸಾಧ್ಯವಾಗಿಸುತ್ತದೆ. ಹೇಗೆ ಚಿನ್ನವು ಅದರಿಂದ ಯಾವುದೇ ವಸ್ತುವು ಮಾಡಲ್ಪಟ್ಟಿದ್ದರೂ ಚಿನ್ನವಾಗೇ ಉಳಿದಿರುತ್ತದೆಯೋ, ಹಾಗೆಯೇ ಪುರುಷನು ವಾಸ್ತವತೆಯಲ್ಲೂ ಹಾಗೂ ತೋರಿಕೆಗಳಲ್ಲಿ ಸಹ ಉಪಸ್ಥಿತನಿರುತ್ತಾನೆ. ಆಂತರಿಕ ನಿಯಾಮಕನಾದ (ಅಂತರ್ಯಾಮಿ) ಆತ್ಮನು ಸತ್ಯಸ್ವರೂಪನು ಹಾಗೂ ಸಮಸ್ತ ಮಾರ್ಪಾಟುಗಳ ನಡುವೆ ಸ್ಥಿರವಾಗಿರುವವನು ಮತ್ತು ಈ ಅರ್ಥದಲ್ಲಿ ಅನಂತನು.

ಮಹೀಧರನ ವ್ಯಾಖ್ಯಾನದಂತೆ - ಅಮೃತತ್ವ ಪದವು ಚಿರಂತನವಾಗಿರುವ ಮುಕ್ತಿ ಮತ್ತು ಪುರುಷನು ಅದರ ಪ್ರಭು. ಪುರುಷನು ಅನ್ನದಿಂದ ಉತ್ಪಾದಿಸಲ್ಪಟ್ಟ ಹಾಗೂ ಪುಷ್ಟೀಕರಿಸಲ್ಪಟ್ಟ ಚರಾಚರಾತ್ಮಕ ಅಸ್ತಿತ್ವದ ಹಾಗೂ ಮುಕ್ತಿಯ ಒಡೆಯನಾಗಿದ್ದಾನೆ. ಇದು ವಿಶ್ವವ್ಯಾಪಿಯಾದ ಸತ್ಯ, ಆಂತರಿಕ ನಿಯಾಮಕ ಮತ್ತು ಇದನ್ನು ಅರಿಯುವುದು ಮುಕ್ತಿಗೆ ಸೋಪಾನ.

ಯತ್ ಅನ್ನೇನ ಅತಿರೋಹತಿ :-

ಯಾವ ಪುರುಷನು ಅನ್ನದಿಂದ ಬೆಳೆಯುತ್ತಾನೋ ಮತ್ತು ಆರೋಹಣ ಮಾಡುತ್ತಾನೆಯೋ ಅವನು ಅಮೃತತ್ವದ ಅಧಿಪತಿಯೂ ಆಗಿರುವನು. ಅಥವಾ ಪುರುಷನು, ಅಮೃತತ್ವದ ಅಧೀಶ್ವರನಾಗಿದ್ದೂ ಅನ್ನದಿಂದಲೇ ವರ್ಧಿಸುತ್ತಾನೆ ಮತ್ತು ಅನ್ನದಿಂದ ಆರೋಹಣಗೈಯುತ್ತಾನೆ.

ಯತ್ ಪದವನ್ನು ಮತ್ತೊಂದು ಅರ್ಥದಲ್ಲಿ ಬಳಸಬಹುದು. ಯಾವ ತನ್ನ ಪ್ರಭಾವದಿಂದ ಪುರುಷನು ಸಮಸ್ತ ಜೀವಿಗಳ ಅಧಿಪತಿಯಾಗಿದ್ದಾನೋ, ಅವನು ಅವರ ಪೋಷಣೆಗೆ ಆಹಾರವನ್ನು (ಅನ್ನ) ಉಂಟುಮಾಡಿ ಪೂರೈಸುತ್ತಾನೆ. ಅವನು ಭೋಗಿಸುವ ಜೀವಿಗಳಿಂದ ಕೂಡಿದ ಹಾಗೂ ಭೋಗವನ್ನುಂಟುಮಾಡುವ ವಸ್ತುಗಳಿಂದ ಕೂಡಿರುವ ಇಡೀ ವಿಶ್ವದ ಸ್ವರೂಪವನ್ನು ಧರಿಸುತ್ತಾನೆ. ಹೀಗೆ ಮಾಡಿದಾಗ, ಅವನು ಕಾರಣದ ಸ್ಥಿತಿಯನ್ನು ಮೀರಿ ಹೋಗುತ್ತಾನೆ ಮತ್ತು ಪರಿಣಾಮದ ಸ್ಥಿತಿಯಲ್ಲಿ ಬೆಳೆಯುತ್ತಾನೆ.

ಸಾಮಾನ್ಯವಾಗಿ ಅನ್ನ ಪದವು ಅದ್ ಧಾತುವಿನಿಂದ ಉತ್ಪನ್ನವಾಗಿ (ಭಕ್ಷಣೇ, ಕರ್ಮಣಿ, ಕ್ತಃ) ತಿನ್ನುವುದು ಎಂಬ ಅರ್ಥವನ್ನು ಹೊಂದಿದೆ. ಯಾವುದು ಜೀವವುಳ್ಳ ಜೀವಿಗಳಿಂದ ತಿನ್ನಲ್ಪಡುವುದೋ ಅದು ಅನ್ನವಾಗಿದೆ. ಅತ್ತಿ, ಅಂದರ್ವ, ಆಹಾರ; ಮತ್ತು ಯಾವುದು ಅವುಗಳನ್ನು ತಿನ್ನುತ್ತದೆಯೋ ಅದೂ ಸಹ ಅನ್ನವೇ ಆಗಿದೆ. ಅದ್ಯತೇ ಅಂದರೆ ಕರ್ಮಫಲ. ಆದ್ದರಿಂದ ಅನ್ನವೆಂದರೆ ಜೀವವುಳ್ಳ ಜೀವಿಗಳಿಂದ ಬದುಕಲು ಉಪಯೋಗಿಸಲ್ಪಡುವ ಭೋಗ ಸಾಮಗ್ರಿಗಳು ಎಂದಾಗುತ್ತದೆ ಮತ್ತು ಸಂಗ್ರಹಿಸಲಾದ ಆಹಾರವನ್ನು ಭೋಗಿಸುವಾಗ ಮಾನವ ಜೀವಿಗಳಿಂದ ಗಳಿಸಲ್ಪಡುವ ಕರ್ಮಪ್ರವೃತ್ತಿಗಳು ಎಂದೂ ಸಹ ಆಗುತ್ತದೆ. ಸಮಸ್ತ ಜೀವಿಗಳು ಅಂತಹ ಆಹಾರದಿಂದ ಉತ್ಪನ್ನವಾಗಿವೆ ಮತ್ತು ಅನ್ನದಿಂದಲೇ ಜೀವಿಸಿರುತ್ತವೆ. ಸೃಷ್ಟಿಯಲ್ಲಿ ಅನ್ನವು ಉತ್ಕೃಷ್ಟವಾದದ್ದು, ಸಮಸ್ತ ಜೀವಿಗಳು ಅದನ್ನು ಗಳಿಸಲು ಶ್ರಮಿಸುತ್ತಿರುತ್ತವೆ.

ಅತ್ಯಂತ ಶ್ರೇಷ್ಠವಾದ ಬ್ರಹ್ಮನಿಂದ ಹಿಡಿದು ಕನಿಷ್ಠ ಮೊತ್ತದ ಕೀಟದವರೆಗೂ, ಸಮಸ್ತ ಜೀವಿಗಳ ಇರುವಿಕೆ ಮತ್ತು ಉಂಟಾಗುವುದರ ಹೊಣೆಗಾರಿಕೆಯನ್ನು ಯಾವುದು ಹೊಂದಿದೆ, ಅದನ್ನು ಬರೀ ಆಹಾರವೆಂದು ಅನ್ನ ಪದವನ್ನು ಮಹೀಧರನು ಅರ್ಥೈಸುತ್ತಾನೆ.

ಮುಂಡಕೋಪನಿಷತ್ತಿನಲ್ಲಿ - ತಪಸ್ - ತಪಶ್ಚರ್ಯೆಯಿಂದ ಬ್ರಹ್ಮನು (ಆತ್ಮನು) ಆವಿರ್ಭವಿಸಿದನು; ಮತ್ತು ಬ್ರಹ್ಮನಿಂದ ಅನ್ನವು ಉಂಟಾಯಿತು, ಅನ್ನದಿಂದ ಪ್ರಾಣ ಮತ್ತು ಮನಸ್ಸು ಸಹ, ಸತ್ಯ, ಲೋಕಗಳು (ನಮ್ಮ ಅನುಭವದ ಲೋಕಗಳು) ಮತ್ತು ಅಮೃತ ಕ್ರಿಯೆಗಳಲ್ಲಿ.

ಅಮೃತತ್ವ ಪದವು ಹಲವಾರು ಮಂತ್ರಗಳಲ್ಲಿ ಅಗ್ನಿಗೆ ಸಂಬಂಧಿಸಿದಂತೆ ಉಪಯೋಗಿಸಲ್ಪಟ್ಟಿದೆ. ಅಗ್ನಿಯು ಈ ಶಾಶ್ವತತೆಯ ಶ್ರೇಷ್ಠ ಸ್ಥಿತಿಯಲ್ಲಿ ಪ್ರತಿನಿತ್ಯವೂ ಮರ್ತ್ಯನನ್ನು ಸ್ಥಾಪಿಸುತ್ತಾನೆ ಎಂದು ಹೇಳಲಾಗಿದೆ. ಅಗ್ನಿಯ ಕೃಪೆಯಿಂದ, ಸ್ವರ್ಗಲೋಕಗಳನ್ನು ಮತ್ತು ಅನಂತತೆಯ ದರ್ಶನವನ್ನು ಗಳಿಸಬಹುದು. ಜಲರಾಶಿಯು (ಯಾವುದರಿಂದ ಅಗ್ನಿಯು ಆವಿರ್ಭವಿಸಿದನೋ) ಈ ಅಮರ್ತ್ಯತೆಯ ನಾಭಿಯ ಭಾಗಾಂಶವಾಗಿದೆ. ಅಗ್ನಿಯು ಅಮರತ್ವವನ್ನು ರಕ್ಷಿಸಲು ಕಾತುರರಾಗಿರುವ ದೇವತೆಗಳಿಂದ ಆಶ್ರಯಿಸಲ್ಪಟ್ಟಿದ್ದಾನೆ. ವೈಶ್ವಾನರ-ಅಗ್ನಿಯ ಆರಾಧನೆಯಿಂದ ಈ ಅಮರ್ತ್ಯತೆ ಪ್ರಾಪ್ತವಾಗುತ್ತದೆ. ಅಗ್ನಿಯು ಈ ಅನಂತತೆಯ ಸಲುವಾಗಿ ಅವಾಹಿಸಲ್ಪಟ್ಟಿದ್ದಾನೆ.

ಅಗ್ನಿ ಪದವು ಋಗ್ವೇದದ ಮಂತ್ರಗಳಲ್ಲಿ ಅನ್ನದೊಂದಿಗೆ ಸಂಬಂಧಿಸಿದಂತೆ ಹದಿನೆಂಟು ಬಾರಿ ಪ್ರಸ್ತಾಪಿಸಲ್ಪಟ್ಟಿದೆ. ಹಾಗೆಯೇ ಇಂದ್ರನು ಅನ್ನದೊಂದಿಗೆ ಹದಿನಾಲ್ಕು ಬಾರಿ ಜೋಡಿಸಲ್ಪಟ್ಟಿದ್ದಾನೆ. ಈ ರೀತಿಯಲ್ಲಿ ಅಗ್ನಿ ಮತ್ತು ಇಂದ್ರರ ಸಹಯೋಗದಿಂದ ಭೂಲೋಕ ಮತ್ತು ಅಂತರಿಕ್ಷದಿಂದ ದೇವಲೋಕಕ್ಕೆ ಆರೋಹಿಸುವ ಸೂರ್ಯನ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಅವಲೋಕಿಸಿದಾಗ ಅನ್ನೇನಾತಿರೋಹತಿ ಪದವು ಅರ್ಥಗರ್ಭಿತವಾಗುತ್ತದೆ. ಅಲ್ಲದೇ, ಪುರುಷ ಸೂಕ್ತವು ಇತರ ತತ್ಸಂಬಂಧಿ ಪದಗಳನ್ನು ಸಮಾನಾರ್ಥದಲ್ಲಿ ಅತಿರೋಹತಿ ಊರ್ಧ್ವ ಉದೈತ್, ವ್ಯಕ್ರಾಮತ್ವ ಮತ್ತು ಅಜಾಯತ ಪದಗಳೊಂದಿಗೆ ಬಳಸುತ್ತದೆ. ಈ ಎಲ್ಲಾ ಸಂದರ್ಭಗಳಲ್ಲಿ, ಸೂರ್ಯ (ಸ್ವರ್ಗಲೋಕ), ಇಂದ್ರ (ಅಂತರಿಕ್ಷ), ಅಗ್ನಿ (ಭೂಲೋಕ) ಇವರ ಸಮಷ್ಟೀಕರಣ ಪಾತ್ರವು ಸರ್ವವ್ಯಾಪಕ ವಿಷ್ಣುವಿನಲ್ಲಿ ಏಕೀಕರಿಸಲ್ಪಟ್ಟಿದೆ. ವಾಸ್ತವವಾಗಿ ಪುರುಷ ಪದದ ಮೊದಲ ಅರ್ಥವೇ ವಿಷ್ಣು.

ಅಮೃತತ್ತ್ವವು (ಅನಂತತೆ) ಮರಣದ ನಿಷೇದಾರ್ಥವನ್ನು ಸೂಚಿಸುತ್ತದೆ (ಸಾವು, ಅವನತಿ, ನಾಶ), ದುರ್ಗಾಚಾರ್ಯರು ವಿವರಿಸುವಂತೆ, ಮರಣವು ಮಧ್ಯಮ-ಪ್ರಾಣದ ಪರ್ಯಾಯ ಪದವಾಗಿದೆ. ಅದು ಮಾನವ ಜೀವಿಯನ್ನು ಅಂತ್ಯಗೊಳಿಸುತ್ರದೆ. ಏಕೆಂದರೆ ಅದು (ಮಧ್ಯಮ-ಪ್ರಾಣ) ಶರೀರವನ್ನು ಸಜೀವವಾಗಿ ಇಡಲು ಬೇಕಾದಂತ ಇತರ ಪ್ರಾಣಶಕ್ತಿಗಳನ್ನು ತನ್ನೊಂದಿಗೆ ತೆಗೆದುಕೊಂಡು ಉನ್ನತ ಪ್ರದೇಶಗಳಿಗೆ ಆರೋಹಿಸುತ್ತದೆ.

ಹೀಗೆ ಉತ್ಕ್ರಾಮತಿ (ಆರೋಹಣಗೊಳ್ಳುವ) ಪದವು ಅತಿ-ರೋಹತಿ (ಆರೋಹಿಸು, ಮಿತಿಮೀರು)ಯ ಸಮಾನಾರ್ಥ ಪದವಾಗಿದೆ. ಎಲ್ಲಿ ಮಧ್ಯಮ ಪ್ರಾಣವು ಗಮಿಸುತ್ತದೋ, ಅಥವಾ ಯಾವ ಪ್ರದೇಶದಲ್ಲಿ ಆರೋಹಣವು ನೆರವೇರುತ್ತದೋ, ಅದು ಅಮರತ್ವ (ಮರಣದ ಅಧೀನದಿಂದಾಚೆ); ಎಲ್ಲಿ ಸೂರ್ಯನು ದೇವತೆಯಾಗಿರುವನೋ ನಿಸ್ಸಂದೇಹವಾಗಿ ಅದು ದೇವಲೋಕವು.

ಸೂರ್ಯನು ಲೋಕಾತೀತತೆಯ ಅಂಶವನ್ನು ಹೊಂದಿದ್ದಾನೆ, ಏಕೆಂದರೆ ಅವನು ಆರೋಹಣ ಗೈಯುತ್ತಾನೆ (ಅತಿರೋಹತಿ). ಸೌರವ್ಯೂಹದಲ್ಲಿ, ಈ ರೂಪದಲ್ಲಿ, ಅವನು ಆತ್ಮನು, ಮೂರ್ಲೋಕಗಳನ್ನು ಬೆಳಗಿಸುವ ಆತ್ಮನು, ಸ್ವಯಂ ತಾನೇ ಅತ್ಯುನ್ನತ ಲೋಕದಲ್ಲಿ ಇರಲಾಗಿದ್ದು, ಹೊರಗಿನಿಂದ ನಿಯಾಮಕನು (ಈಶಾನಃ, ಒಡೆಯ). ಅಲ್ಲದೇ ಬಲಗಣ್ಣಿನಲ್ಲಿ ನೆಲಸಿರುವ ಅಂತರ್ಯಾಮಿಯೆಂಬ, ಅಮರವಾದ ಮತ್ತು ಸಾರಭೂತ ಆತ್ನನ ವಿಶ್ವರೂಪಸ್ವರೂಪ ಎಂಬ ವಿಶ್ವವ್ಯಾಪಕ ಅಂಶವೂ ಸಹ ಇದೆ. ಪುರುಷನ ಕಲ್ಪನೆಯು ಎರಡೂ ಅಂಶಗಳನ್ನೊಳಗೊಂಡಿದೆ.

ಮಂತ್ರ - 3 -ಸಂಸ್ಕೃತದಲ್ಲಿ :

ಏತಾವಾನ್ ಅಸ್ಯ ಮಹಿಮಾ ಅತೋ ಜ್ಯಾಯಾನ್ ಚ  ಪೂರುಷಃ
ಪಾದೋ ಅಸ್ಯ ವಿಶ್ವಾ ಭೂತಾನಿ ತ್ರಿಪಾದ್ ಅಸ್ಯ ಅಮೃತಂ ದಿವಿ ||

ಕನ್ನಡದಲ್ಲಿ :

ಇವನ ಮಹಿಮೆಯಿದು ಇದಕೂ ಉನ್ನತನೀ ಪುರುಷ
ಜೀವಿಗಳೆಲ್ಲವು ಅವನೊಂದಂಶ ಸಾವಿಲ್ಲದ ಮೂರಿವೆ ಮೇಲೆ  

ವಿವರಣೆ :

ಇಷ್ಟೆಲ್ಲವೂ ಆ ಪುರುಷನ ಮಹಿಮೆಯೇ ಆಗಿದೆ. ಆದರೆ ಆ ಪುರುಷನು ಈ ಜಗದ್ರೂಪವಾದ ಮಹಿಮೆಗಿಂತಲೂ ಅಧಿಕನಾದವನು. ಅತೀತ, ಅನಾಹತ ಮತ್ತು ವರ್ತಮಾನವೆಂಬ ಮೂರು ಕಾಲಗಳ ಸಮಸ್ತ ಪ್ರಾಣಿಗಳೂ ಆ ಪುರುಷನ ಪಾದ ಮಾತ್ರ (ನಾಲ್ಕನೆಯ ಒಂದಂಶ ಮಾತ್ರ). (ಉಳಿದ) ಆ ಪುರುಷನ ತ್ರಿಪಾತ್ ಸ್ವರೂಪವು (ಮುಕ್ಕಾಲು ಭಾಗ ಸ್ವರೂಪವು) ಅಮೃತರೂಪವಾಗಿದ್ದು ಸ್ವಪ್ರಕಾಶ ರೂಪವಾದ ದಿವಿಯಲ್ಲಿ ನೆಲಸಿದೆ. (ಪರಬ್ರಹ್ಮಕ್ಕೆ ವಸ್ತುತಃ ನಾಲ್ಕು ಭಾಗಗಳಿಲ್ಲ. ಈ ಜಗತ್ತು ಬ್ರಹ್ಮಸ್ವರೂಪಕ್ಕಿಂತಲೂ ಅತ್ಯಲ್ಪವಾದುದು ಎಂದು ತಿಳಿಸಲು ಭಾಗಗಳ ಕಲ್ಪನೆಯನ್ನು ಮಾಡಲಾಗಿದೆ).

ವ್ಯಾಖ್ಯಾನ :

ಅವನ ಮಹಿಮೆಯು ಅಷ್ಟರ ಮಟ್ಟಿನದು. ಹಿಂದಿನ ಮಂತ್ರದಲ್ಲಿ ಏನೇನು ಹೇಳಲಾಗಿದೆಯೋ ಅವುಗಳನ್ನು "ಏತಾವನ್" ಪದವು ಮೊದಲೇ ಭಾವಿಸಿಕೊಂಡಿದೆ. ಅಂದರೆ ಕಾಲ ದೇಶಾದಿ ಚೌಕಟ್ಟಿನಲ್ಲಿ ಇರುವ ಈ ಸಮಸ್ತವೂ ಹಾಗೂ ಈ ಚೌಕಟ್ಟಿನಾಚೆ ಇರುವ ಸಮಸ್ತವೂ ಸಹ ಪುರುಷನೇ, ಮತ್ತು ಅವನು ಅಮರತ್ವದ ಒಡೆಯನಲ್ಲದೇ, ತನ್ನೆಡೆಗೆ ಒಲವು ತೋರುತ್ತಿರುವ ಜೀವಿಗಳಿಂದ ಅಭಿವೃದ್ಧಿ ಹೊಂದುತ್ತಿರುವ ದೃಷ್ಟಿಗೋಚರ ಪ್ರಪಂಚದ ಒಡೆಯನೂ ಸಹ. ಈ ಅಭಿವ್ಯಕ್ತಿಯು ಭೂತ, ವರ್ತಮಾನ ಮತ್ತು ಭವಿಷ್ಯದಲ್ಲಿರುವ ಪ್ರಪಂಚವನ್ನು, ಹಾಗೂ ಸಮಸ್ತ ಪ್ರಕಾರಗಳ ದಿವ್ಯತೆಗಳನ್ನು ಮತ್ತು ಸಮಸ್ತ ವರ್ಗಗಳ ಜೀವಿಗಳ ಪ್ರಪಂಚವನ್ನು ಒಳಗೊಂಡಿದೆ.

ಮಹತ್ ಪದದಿಂದ ಉತ್ಪನ್ನವಾಗಿರುವ ಮಹಿಮಾ ಶಬ್ದವು ಶ್ರೇಷ್ಠತೆ ಶಕ್ತಿ , ಕೀರ್ತಿಭವ್ಯತೆ ಮತ್ತು ಪ್ರಭಾವ ಎಂಬ ಅರ್ಥಗಳನ್ನು ಹೊಂದಿದೆಈ ಮಹಿಮೆಯು ವಿಷ್ಣು ಅಥವಾ ಶಿವನಂಥ ಪ್ರಧಾನ ದೇವತೆಯ ಎಂಟು ವಿಶಿಷ್ಟ ಶಕ್ತಿಗಳಲ್ಲೊಂದು ಎಂದೆನಿಸಿದಾಗ ಅದು ಹದಿನಾಲ್ಕು ಲೋಕಗಳು ಅವನ ಉದರದೊಳಗೆ ಅಡಕವಾಗಿರುತ್ತದೆ ಎಂದು ಸೂಚಿಸುತ್ತದೆ. ಈ ಯಾವುದೇ ಲೋಕಗಳ ನಿವಾಸಿಗಳಿಗೆ, ಅವನಂಥ ದೇವತೆಯ ಬೃಹತ್ ಗಾತ್ರವು ಕಲ್ಪನಾತೀತವಾದುದು.

ಇಲ್ಲಿ ಉಲ್ಲೇಖಿಸಲಾಗಿರುವ ಮಹಿಮಾ ಪದವು ವಿಭೂತಿ (ಎಂದರೆ ವಿಶಿಷ್ಟ ಮತ್ತು ಅಸಾಧಾರಣ ಸಾಮರ್ಥ್ಯ), ಮತ್ತು ವಿಸ್ತಾರ (ಹರಡು, ಫಲಭರಿತ) ಗಳನ್ನು ಸಹ ಒಳಗೊಂಡಿದೆ. ಮೊದಲನೆಯದು, ಅವನ ಸಾಕಾರತೆಯ ಮತ್ತು ಅಸಾಧಾರಣ ಸಾಮರ್ಥ್ಯವನ್ನು ನಿರೂಪಿಸುತ್ತದೆ; ಎರಡನೆಯದು, ಅವನ ಸಂಪೂರ್ಣ ಸ್ವಾತಂತ್ರ್ಯವನ್ನು ಕುರಿತು ಹೇಳುತ್ತದೆ. ಆದರೆ ಇವೆರಡರಲ್ಲಿ ಯಾವುದೂ ಅವನ ಸ್ವ-ಸ್ವರೂಪವೆಂದು ಹೇಳಲಾಗುವುದಿಲ್ಲ, ಏಕೆಂದರೆ ಅದು ಎಲ್ಲಕ್ಕಿಂತಲೂ ಇನ್ನೂ ಹೆಚ್ಚಿನದು.

ಅತೋ ಜ್ಯಾಯಾನ್ ಪೂರುಷಃ :

ಇದು ಚಿತ್ತವನ್ನು ದಿಗ್ಭ್ರಮೆಗೊಳಿಸುವ ಪುರುಷನ ಮಹಿಮೆ ಎಂದು ಭಾವಿಸಿದರೆ, ಅದು ಅವನ ಸಮಸ್ತವೂ ಅಲ್ಲ; ಅವನಲ್ಲಿ ಇದಕ್ಕಿಂತಲೂ ಹೆಚ್ಚಿನ ಭವ್ಯತೆ ಇದೆ. ಅವನ ನೈಜ ಘನತೆ ಅಥವಾ ಶ್ರೇಷ್ಠತೆ ಈ ಕಣ್ಣಿಗೆ ಗೋಚರ ವಾಗುವ ಶಕ್ತಿ ಅಥವಾ ವೈಭವಕ್ಕಿಂತ ಅತಿ ಹೆಚ್ಚಿನದಾಗಿದೆ. ಅತಃ ಪದವು (ಸಂಬಂಧಿಸಿದಂತೆ, ಅದಕ್ಕಿಂತ) ಅಮೃತತ್ವ ಅಂದರೆ ಅಮರತ್ವದ ಒಡೆಯನೂ ಆಗಿರುವ ಹಾಗೂ ಈ ಅಸ್ತಿತ್ವದ ಸಮಸ್ತವೂ ಆಗಿರುವ ಪುರುಷನ ಭವ್ಯತೆ, ಘನತೆ ಅಥವಾ ಶಕ್ತಿ (ಮಹಿಮ್ನಾತಃ) ಯನ್ನು ಉದ್ದೇಶಿಸುತ್ತದೆ. ನಾವು ನಿಸ್ಸಂಶಯವಾಗಿ ಅವನ ಈ ಅದ್ಭುತ ಸೃಷ್ಟಿಯಿಂದ ವಿಸ್ಮಯರಾಗುತ್ತೇವೆ, ಆದರ ನಾವು ಅದರೊಂದಿಗೆ ಪುರುಷನ ಬಗ್ಗೆ ಇರುವ ನಮ್ಮ ತಿಳುವಳಿಕೆಯನ್ನು ಸೀಮಿತಗೊಳಿಸಬಾರದು. ಅವನ ನೈಜ ಶ್ರೇಷ್ಟತೆ ಈ ಸೃಷ್ಟಿಯನ್ನು ಅತಿಶಯಿಸಿದೆ.

ಕಠೋಪನಿಷತ್ತಿನಲ್ಲಿ ಶ್ರೇಣೀಕರಣವನ್ನು ಸೂಚಿಸುವ ಮಂತ್ರವೊಂದಿದೆ. ಅವ್ಯಕ್ತವು ಸೃಷ್ಟಿಯ ಮೂಲಕ್ಕಿಂತ ಎತ್ತರದಲ್ಲಿದೆ; ಪುರುಷನು ಅವ್ಯಕ್ತಕ್ಕಿಂತ ಮೇಲ್ಮಟ್ಟದಲ್ಲಿದ್ದಾನೆ. ಈ ಪುರುಷನಿಗಿಂತ ಉನ್ನತ ಮಟ್ಟದಲ್ಲಿರುವುದು ಯಾವುದೂ ಇಲ್ಲ; ನಿಜಕ್ಕೂ ಅದು ಸರ್ವೂಚ್ಚವು, ಅತ್ಯುತ್ಕೃಷ್ಟವಾದುದು.

ಅವ್ಯಕ್ತವು ಹಾಗೆಂದು ಕರೆಯಲ್ಪಡುತ್ತದೆ, ಏಕೆಂದರೆ ನಾಮ-ರೂಪಾತ್ಮಕಗಳು ಅಲ್ಲಿ ವ್ಯಕ್ತವಾಗಿರುವಿದಿಲ್ಲ ಮತ್ತು ವಿಭಿನ್ನವಾಗಿರುವುದಿಲ್ಲ. ದೃಷ್ಟಿಗೋಚರ ಪ್ರಪಂಚವು ವ್ಯಕ್ತವಿರುತ್ತದೆ. ಅದು ನಾಮ-ರೂಪಾತ್ಮಕಗಳಿಂದ ವಿಶಿಷ್ಟವಾಗಿದೆ. ಅದು ನಮಗೆ ಪುರುಷನ ವೈಭವವನ್ನು ನಿರೂಪಿಸುತ್ತದೆ. ಆದರೆ ಸಾಧ್ಯತೆಯನ್ನು ಉಂಟುಮಾಡುವ ಅಂಶವು ಆದಿಸಂಕಲ್ಪದ ಅಥವಾ ಪ್ರೇರಣೆಯ ಪೂರ್ವಸ್ಥಿತಿಯಾಗಿದೆ. ಸಂಕಲ್ಪವು ಸ್ಫೋಟವಾಗುವ ಮೊದಲು ಒತ್ತಡದ ಸ್ವರೂಪದಲ್ಲಿರುತ್ತದೆ; ಮಹತ್ ಎಂದು ಕರೆಯಲ್ಪಡುವ ಅದು, ನಾಮ ಮತ್ತು ರೂಪಗಳಲ್ಲದೇ, ಒತ್ತಡ ಅಥವಾ ಸಂಕಲ್ಪದಿಂದ ಹೊರತಾಗಿದ್ದರೂ ಸಹ, ಅವ್ಯಕ್ತದೆಸೆಯನ್ನು ಪೂರ್ವಕಲ್ಪಿತವಾಗಿ ನಿರ್ಧರಿಸುತ್ತದೆ. ಅವ್ಯಕ್ತವು ಅಸ್ತಿತ್ವದಲ್ಲಿರದೇ ಇದ್ದಲ್ಲಿ, ಮಹತ್ತು ಇರಲು ಸಾಧ್ಯವಿಲ್ಲ. ಅರ್ಥದಲ್ಲಿ, ಅವ್ಯಕ್ತವು ಮಹತ್ತಿಗಿಂತ ಶ್ರೇಷ್ಠವೆಂದು ಹೇಳಲಾಗಿದೆ. ಆದರೆ ಅವ್ಯಕ್ತವೇ ಮಹತ್ತಿನ ಹಂತದ ಮೂಲಕ ನಾಮರೂಪಾತ್ಮಕ ಪ್ರಪಂಚಕ್ಕೆ ರೂಪಾಂತರ ಹೊಂದುತ್ತದೆ. (ಏತಾವಾನ್ ಅಸ್ಯ ಮಹಿಮಾ). ಅವ್ಯಕ್ತವು ಪುರುಷನ ಒಂದು ಅಂಶ, ಭಾಗವಷ್ಟೇ ಸರಿ. ಪುರುಷನು ಅವ್ಯಕ್ತವನ್ನು ಒಳಗೊಂಡಿದ್ದಾನೆ, ಆದರೆ ಅದಕ್ಕೆ ಬದ್ಧವಾಗಿಲ್ಲ  ಅರ್ಥದಲ್ಲಿ ಪುರುಷನು ಅವ್ಯಕ್ತಕ್ಕಿಂತ ಶ್ರೇಷ್ಠವಾಗಿದ್ದಾನೆ. ಏಕೆಂದರೆ ಪುರುಷನು ಸಮಸ್ತ ದೃಷ್ಟಿಗೋಚರ ಅಸ್ತಿತ್ವದ (ಇದಂ) ಹಿಂದೆ ಇದ್ದ ಎಲ್ಲವನ್ನೂ, ಈಗ ಇರುವುದು, ಮತ್ತು ಮುಂದೆ ಉಂಟಾಗುವ ಎಲ್ಲವನ್ನೂ, ಅಲ್ಲದೇ, ದೃಷ್ಟಿಗೋಚರ ಅಸ್ತಿತ್ವದ ಸತ್ವ ಮತ್ತು ಮೂಲಗಳನ್ನು ಸಂಯೋಜಿದುವ ಎಲ್ಲವನ್ನೂ ಗ್ರಹಿಸುವ ಅವನು ಸರ್ವೋತ್ಕೃಷ್ಟ (ಕಾಷ್ಠಾ). ಯಾವುದೂ ಅವನನ್ನು ಮಿತಿಮೀರಲು ಸಂಭವವಿಲ್ಲ ಅಥವಾ ಅವನಿಂದ ಆಚೆ ಹೋಗಲಾರದು.

ಮುಂಡಕೋಪನಿಷತ್ತಿನಲ್ಲಿ (2.1.5) ಮಂತ್ರದಲ್ಲಿ ಇದೇ ಅಭಿಪ್ರಾಯವು ವ್ಯಕ್ತವಾಗಿದೆ.
ಕಠೋಪನಿಷತ್ತಿನಲ್ಲಿ ಅವ್ಯಕ್ತವು ಅಕ್ಷರವೆಂದು ಕರೆಯಲ್ಪಟ್ಟಿದೆ. ನಾಮರೂಪಾತ್ಮಕ ಪ್ರಪಂಚದ ಮೂಲ ಮತ್ತು ಬೀಜ, ಆದರೆ ಅವೆರಡೂ ಪ್ರತ್ಯೇಕಗೊಂಡಿರದ ಸ್ಥಿತಿ (ಅವ್ಯಾಕೃತ); ಆದ್ದರಿಂದ ವಿನಾಶವಿಲ್ಲದ್ದು ಮತ್ತು ಅವನತಿಯಿಲ್ಲದ್ದು (ಅಕ್ಷರ). ಅದು ಜನನ ಪೂರ್ವ ಸ್ಥಿತಿಯಲ್ಲಿ ಪ್ರಾಣ ಮತ್ತು ಮನಸ್ಸನ್ನು ಹೊಂದಿದೆ. ಅಂದರೆ ಅಸ್ಫುಟ ಮತ್ತು ಅನಿರ್ದೇಶಿತ ಆಗಿರುತ್ತದೆ. ಈ ಅವ್ಯಕ್ತದಿಂದಾಚೆ ಇರುವ ಪುರುಷನು ಸಂಪೂರ್ಣವಾಗಿ ರೂಪರಹಿತನು ಮತ್ತು ಭೂಮಿ ಹಾಗೂ ಅಂತರಿಕ್ಷದ ಮೇಲಿರುವ ಲೋಕದಲ್ಲಿ ಅವನು ನೆಲೆಸಿರುತ್ತಾನೆ, ಉಗಮವನ್ನು ಸೂಚಿಸಲಾಗುವುದಿಲ್ಲ (ಅಜಃ). ಅವನು ವ್ಯಕ್ತಪ್ರಪಂಚದ ಸಮಸ್ತ ಜೀವಿಗಳ ಮತ್ತು ವಸ್ತುಗಳ ಅಂತರಂಗದಲ್ಲಿ ಹಾಗೂ ಅವುಗಳ ಹೊರಗೂ ಸಹ ನೆಲೆಸಿರುತ್ತಾನೆ. ಆದ್ದರಿಂದ, ಅವನು ಅಜ್ಞೇಯವಾದ ಆತ್ಮನು, ಹಾಗೂ ಅದೇ ಸಮಯದಲ್ಲಿ ಸೃಷ್ಟಿಯಲ್ಲಿ ವಿಶ್ವವ್ಯಾಪಿ.
ಸಾಯಣರು ಪ್ರಕಾರ, ಈ ದೃಷ್ಟಿಗೋಚರ ಪ್ರಪಂಚವು ಪುರುಷನ ಅಂತಿಮ ಅಥವಾ ಸಹಜ ಸ್ಥಿತಿಯಲ್ಲ. ಅದನ್ನು ಮೀರಿ, ಅದರಾಚೆ, ಅದರಿಂದ ವಿಭಿನ್ನವಾಗಿರುವುದು ಅವನ ಸಹಜ ಸ್ಥಿತಿ. ಈ ಸ್ಥಿತಿಯಲ್ಲಿ ಬ್ರಹ್ಮನು ಸ್ವಯಂ ತನ್ನ ಭವ್ಯತೆಯಲ್ಲಿ ಸ್ಥಾಪಿಸಲ್ಪಟ್ಟಿದ್ದಾನೆ ಎನ್ನಲಾಗಿದೆ (ಸ್ವೇ ಮಹಿಮ್ನಿ ಪ್ರತಿಷ್ಠಿತಃ).
ಪಾದಃ ಅಸ್ಯ ವಿಶ್ವಾ ಭೂತಾನಿ ತ್ರಿಪಾದ್ ಅಸ್ಯ ಅಮೃತಂ ದಿವಿ :-
ಮೊದಲನೇ ಪಾದದ ಉತ್ತರಾರ್ಧದಲ್ಲಿ ಗೂಢಾರ್ಥದಲ್ಲಿ ಹೇಳಿರುವುದನ್ನು ಇಲ್ಲಿ ಬಹಿರಂಗವಾಗಿ ಹೇಳಲಾಗಿದೆ. ಈ ಅದ್ಭುತ ಸೃಷ್ಟಿಯ ರೂಪದಲ್ಲಿ ಕಂಡುಬರುವ ಪುರುಷನ ಶ್ರೇಷ್ಟತೆ, ಭವ್ಯತೆ ಅಥವಾ ಘನತೆಯು ಅವನ ಸಹಜ ಸ್ವರೂಪವಲ್ಲ ಅಥವಾ ಸಹಜ ಸ್ಥಿತಿಯಲ್ಲ. ವ್ಯಕ್ತಪ್ರಪಂಚದ ಶ್ರೇಷ್ಠತೆಗಿಂತಲೂ ಪುರುಷನ ಹಿರಿಮೆಯು ಹೇಗೆ ಎಣೆಯಿಲ್ಲದ್ದು ಎಂದು ನಿರೂಪಿಸಲು, ಪುರುಷನು ಚತುರ್ ದಿಶೆಗಳನ್ನು ಹೊಂದಿರುವನು (ಚತುರ್ಷ್ವಾತ್ತ್ವ) ಎಂಬ ಕಲ್ಪನೆಯನ್ನು, ಸಾಯಣರು ಪರಿಚಯಿಸಿದ್ದಾರೆ.

ಪುರುಷನು ನಿಜವಾಗಿಯೂ ನಾಲ್ಕು ದಿಕ್ಕುಗಳನ್ನು ಹೊಂದಿದ್ದಾನೆ ಅಥವಾ ಅವನ ಗಾತ್ರವನ್ನು ಇಂಥಹ ಸಾಧನಗಳಿಂದ ಅಳೆಯಬಹುದು ಎಂಬುದಾಗಿ ಕಲ್ಪಿಸಿಕೊಳ್ಳಬಾರದು. ನಾಲ್ಕು ಭಾಗಗಳುಳ್ಳ ಇರುವಿಕೆಯು ಕೇವಲ ಕಲ್ಪನೆಯಲ್ಲಿ ಹೇಗೋ ಹಾಗೆ. ಪುರುಷನು ನಾಲ್ಕು ಭಾಗಗಳನ್ನು ಹೊಂದಿದ್ದಾನೆ ಎಂದು ನಾವು ಭಾವಿಸಿದರೆ, ಇದರಲ್ಲಿ ಒಂದು ಭಾಗದಿಂದ ಮಾತ್ರ ಈ ಸಮಸ್ತ ಸೃಷ್ಟಿಯ ಭವ್ಯತೆಯು ಪೋಷಿಸಲ್ಪಟ್ಟಿಡುತ್ತದೆ. ಮಿಕ್ಕ ಮೂರು ಭಾಗಗಳು ವ್ಯಕ್ತ ಪ್ರಪಂಚದ ಆಯಾಮಗಳ ಮತ್ತು ಸಂಘಟನೆಗಳ ಹಿಡಿತದಿಂದಾಚೆ ಇರುತ್ತವೆ; ಅವು ಒಟ್ಟಾರೆ ನಮಗೆ ಅಗಮ್ಯವಾಗಿ ಉನ್ನತ ಸ್ವರ್ಗಲೋಕಗಳಲ್ಲಿ ನೆಲಸಿರುತ್ತವೆ. "ಭಾಗ" ಕಲ್ಪನೆಯು, ಪುರುಷನ ಸಹಜ ಸ್ವರೂಪಕ್ಕೆ ತದ್ವಿರುದ್ದವಾಗಿ, ಪುರುಷನ ಭವ್ಯತೆಯನ್ನು ನಮಗೆ ಪ್ರಕಟಪಡಿಸುವ ವ್ಯಕ್ತ ಪ್ರಪಂಚವು ಎಷ್ಟು ಅಲ್ಪ ಮಹತ್ವವುಳ್ಳದ್ದೆಂದು ನಮಗೆ ಮನವರಿಕೆ ಮಾಡುವ ಉದ್ದೇಶವನ್ನು ಹೊಂದಿದೆ.

ಶಬ್ದಶಃ "ಪಾದ" ಪದವು ಪ್ರಗತಿ ಅಥವಾ ಚಲನೆಯ ಸಾಧನ (ಪದ್ಯತೇ ಗಮ್ಯತೇ ಅನೇನ) ಎಂದಾಗುತ್ತದೆ, ಮತ್ತು ಮುಖ್ಯವಾಗಿ ಅದು ಚಲಿಸುವ ಪಾದಕ್ಕೆ ಅನ್ವಯಿಸುತ್ತದೆ. ಋಗ್ವೇದದಲ್ಲಿ ಮಂತ್ರದ ನಾಲ್ಕನೇ ಒಂದು ಭಾಗವನ್ನು ಪಾರಿಭಾಷಿಕವಾಗಿ "ಪಾದ" ಎಂದು ಕರೆಯುತ್ತಾರೆ. ಇದನ್ನೇ ವಿಸ್ತರಿಸಿ ಹೇಳುವುದಾದರೆ, ಯಾವುದನ್ನೇ ಆಗಲಿ ನಾಲ್ಕು ಭಾಗಗಳನ್ನಾಗಿ ವಿಭಜಿಸಲು ಸಾಧ್ಯ, ಪ್ರತಿಯೊಂದು ಭಾಗವೂ ಪಾದವೆಂದು ಕರೆಯಲ್ಪಡುತ್ತದೆ.

ವಿಷ್ಣುವು ತ್ರಿವಿಕ್ರಮನಾಗಿ ಕಾಣಿಸಿಕೊಳ್ಳುವ ವಿಖ್ಯಾತ ಸ್ವರೂಪವನ್ನು ಋಗ್ವೇದದಲ್ಲಿ ಪ್ರಸ್ತಾಪಿಸಲಾಗಿದೆ. ವಿಷ್ಣು ಪದವು ಎಲ್ಲದರಲ್ಲೂ ಪ್ರವೇಶಿಸುವಿಕೆ ಮತ್ತು ಎಲ್ಲವನ್ನೂ ವ್ಯಾಪಿಸುವಿಕೆ ಎಂಬ ಅರ್ಥವನ್ನು ಹೊಂದಿದೆ. ಇಲ್ಲಿ ವಿಷ್ಣುವೆಂದರೆ ಎಲ್ಲೆಡೆಯಲ್ಲಿಯೂ ವ್ಯಾಪಿಸುವ ಸೂರ್ಯನೆಂದೂ ಮತ್ತು ಸಕಲದರಲ್ಲೂ ಪ್ರವೇಶಿಸಬಲ್ಲ ಪ್ರಕಾಶಕಿರಣ ಹೊಂದಿದವನೂ ಎಂದು ಅರ್ಥವಾಗುತ್ತದೆ.

ಮೇದಾತಿಥಿ-ಕಣ್ವರಿಗೆ ದರ್ಶನಗೊಂಡ ಈ ಮಂತ್ರವು, ಲಭ್ಯವಾಗಿರುವ ಸಮಸ್ತ ವ್ಯೋಮದ ಮೂರು ಭಾಗಗಳು ವಾಸ್ತವವಾಗಿ ಸ್ವಯಂ ವಿಷ್ಣುವಿನಿಂದಲೇ ಮಾಡಲ್ಪಟ್ಟವು ಮತ್ತು ಅವನು ಈ ಮೂರು ಭಾಗಗಳನ್ನು ಮೀರಿ ನಿಂತನು ಎಂದು ವರ್ಣಿಸುತ್ತದೆ.

ಋಗ್ವೇದದಲ್ಲಿ ಏಳು ಮಂತ್ರಗಳು ಮೂರು ಹೆಜ್ಜೆಗಳು ಅಥವಾ ಭಾಗಗಳ ಕುರಿತು ಹೇಳುತ್ತವೆ. ವಿಷ್ಣುವು ಈ ಮೂರು ದೊಡ್ಡ ಹೆಜ್ಜೆಗಳನ್ನು ಹಾಕಿ, ಅವುಗಳನ್ನು ಮೂರು ಹಂತಗಳಿಂದ ಅತಿಕ್ರಮಿಸಿ, "ತ್ರಿಪಾತ್" ಆಗುತ್ತಾನೆ. ಮುಂದಿನ ಮಂತ್ರವು ಸೂಚಿಸುವಂತೆ ಅವನು ಸರ್ವಸ್ವವನ್ನೂ (ವಿಷ್ವಗ್ಂ ವ್ಯಕ್ರಾಮತ್) ಆವರಿಸಿಕೊಂಡಿದ್ದಾನೆ  ಹೀಗೆ ಈ ಎಲ್ಲಾ ಮೂರು ಭಾಗಗಳು ವಾಸ್ತವವಾಗಿ ಒಂದು ಭಾಗವಷ್ಟೇ ಸರಿ.

ವಿಷ್ಣುವಿನ ನೈಜಧಾಮವು ಈ ಒಂದು ಭಾಗದಿಂದ ವಿಭಿನ್ನವಾಗಿದೆ. ಅದು ಕಾವ್ಯಾತ್ಮಕವಾಗಿ ಸ್ವರ್ಗವೆಂದೂ ಅಥವಾ ಅಮರತ್ವದ ಲೋಕವೆನ್ನಲಾಗುವ ಪರಮೋಚ್ಚ ನೆಲೆ. ಮೂರು ಲೋಕಗಳ ಮೀರುವಿಕೆಯು ವಾಸ್ತವವಾಗಿ ಆಕಾಶದ ವಿಸ್ತಾರವನ್ನು ಬೆಳಗಿಸುವ ಮತ್ತು ತನ್ನ ನೈಜಧಾಮದಲ್ಲಿ ನೆಲೆಸಿರುವ ವಿಷ್ಣುವಿನ ವರ್ಣನೆಯಾಗಿದೆ. ಆದರೆ ಇದನ್ನು ನಾಲ್ಕನೇ ಲೋಕವೆಂದು ಅರ್ಥೈಸಬಾರದು. ವಾಸ್ತವವಾಗಿ, ವಿಷ್ಣುವಿನ ಸಾನ್ನಿಧ್ಯವು ಈ ಎಲ್ಲಾ ಮೂರೂ ಸ್ತರಗಳಲ್ಲಿದೆ. ಆದರೆ ಅವನು ಅವುಗಳಿಗೆ ಸೀಮಿತನಾಗಿಲ್ಲ ಅಥವಾ ಅವುಗಳಿಂದ ನಿಯಂತ್ರಿಸಲ್ಪಟ್ಟಿಲ್ಲ. ಈ ಅರ್ಥದಲ್ಲಿ, ಅದು ನಶ್ವರವಲ್ಲ. ನಶ್ವರ ಜೀವಿಗಳಲ್ಲಿ ಅಂತರ್ಗತನಾಗಿದ್ದು, ಅದು ಅಮರವಾಗಿದೆ. ಇದು ಅತಿರೋಹಣ ಪದದ ನಿಜವಾದ ಅರ್ಥ. ಈ ಎಲ್ಲಾ ಮೂರು ಲೋಕಗಳ ಅತಿಶಯಿಸುವಿಕೆಯು ವ್ಯಾವಹಾರಿಕ ಮತ್ತು ದೃಷ್ಟಿಗೆ ಗೋಚರವಾಗುವ ಅಂಶಗಳ ಆಸರೆಯನ್ನು ಹೊಂದಿ ಸಾಧಿಸಲ್ಪಡುತ್ತದೆ.

ವಾಸ್ತವವಾಗಿ, ಅತೀತತೆಯು ಆಂತರಿಕ ಮುನ್ನಡೆಯ ರೂಪದಲ್ಲಿರುವುದು. ಇದು ಅತ್ಯಂತ ಆಂತರಿಕ ಸತ್ಯದ ದಿಶೆಯತ್ತ ಸಾಗುವ ಚಲನೆ. ಭೂಮಿಯು ತನ್ನೊಳಗೆ ಅಂತರಿಕ್ಷವನ್ನು ಒಳಗೊಂಡಿದೆ; ಮತ್ತು ಅಂತರಿಕ್ಷವು ತನ್ನೊಳಗೆ ಆಕಾಶವನ್ನು ಒಳಗೊಂಡಿದೆ. ಈ ಆಕಾಶದಿಂದಾಚೆ ಆದರೆ ಅದರ ಗುಪ್ತ ಸ್ಥಾನದೊಳಗೆ, ಆತ್ಯಂತಿಕ ಸತ್ಯನಾಗಿ ಪುರುಷನು ನೆಲೆಸಿದ್ದಾನೆ ಎಂದು ಮುಂಡಕೋಪನಿಷತ್ತಿನಲ್ಲಿ (2.2.5) ಮಂತ್ರದಲ್ಲಿ ಹೇಳಿದೆ.
ಪುರುಷನಲ್ಲಿ ಸ್ವರ್ಗ, ಭೂಮಿ ಮತ್ತು ಅಂತರಿಕ್ಷಗಳು, ಸಾದ್ಯಂತವಾಗಿ ಪ್ರಾಣಪ್ರವಾಹಗಳಿಂದ ಒಡಗೂಡಿದ ಮನಸ್ಸು ಅಡಕಗೊಂಡಿವೆ. ಸಮಸ್ತ ಜೀವಿಗಳ ಆತ್ಮನಾದ ಇವನನ್ನು ಗ್ರಹಿಸಲು ಪ್ರತಿಯೊಬ್ಬನೂ ಯತ್ನಿಸಬೇಕು, ಮತ್ತು ಇದರ ಹೊರತಾದ ಏನನ್ನೂ ಬೆನ್ನಟ್ಟಿಕೊಂಡು ಹೋಗಕೂಡದು.

ಮಂತ್ರ - 4 -ಸಂಸ್ಕೃತದಲ್ಲಿ :

ತ್ರಿಪಾತ್ ಊರ್ಧ್ವ ಉದೈತ್ ಪುರುಷಃ ಪಾದೋ ಅಸ್ಯ ಇಹ ಅಭವತ್ ಪುನಃ
ತತೋ ವಿಶ್ವಗ್ಂ ವಿ ಅಕ್ರಾಮತ್ ಸಾಶನ ಅನಶನೇ ಅಭಿ||

ಕನ್ನಡದಲ್ಲಿ :

ಅಲ್ಲಿ ಶೋಭಿಪನು ಮೂರುಪಾದದದಲಿ ಇಹುದು ಪಾದವಿಲ್ಲೊಂದು
ಎಲ್ಲೆಡೆ ವ್ಯಾಪಿಸಿ ನಿಯಮಿಸುವನುಣ್ಣುವ ಉಣ್ಣದ ಎಲ್ಲವನು    

ವಿವರಣೆ :

ತ್ರಿಪಾದ್ರೂಪಿಯಾದ ಪುರುಷನು ಈ ಸಂಸಾರಕ್ಕಿಂತಲೂ ಮೇಲೆ (ಅಂದರೆ ಈ ಸಂಸಾರ ದೋಷಗಳಿಂದ ಅಸ್ಪೃಷ್ಟನಾಗಿ) ನೆಲೆಸಿದ್ದಾನೆ. ಆ ಪುರುಷನ ಅಲ್ಪವಾದ ಪಾದ ಭಾಗವು ಈ ಮಾಯೆಯಲ್ಲಿ ಪುನಃ ಉಂಟಾಯಿತು. ಆ ಪುರುಷನು ಮಾಯೆಯೊಳಗೆ ಬಂದ ಮೇಲೆ ದೇವತಿರ್ಯಕ್ ಮೊದಲಾದ ರೂಪದಿಂದ ನಾನಾ ವಿಧವಾಗಿ ವ್ಯಾಪಿಸಿದನು. ಆ ಪುರುಷನು ಭೋಜನಾದಿಗಳಿಂದ ಸಹಿತವಾದ ಚೇತನರೂಪವಾಗಿಯೂ ಭೋಜನರಹಿತವಾದ ಪರ್ವತ-ನದೀ ಮುಂತಾದ ಅಚೇತನರೂಪವಾಗಿಯೂ ವ್ಯಾಪಿಸಿದನು.

ವ್ಯಾಖ್ಯಾನ :

ತ್ರಿಪಾತ್ ಊರ್ಧ್ವ ಉದೈತ್ ಪುರುಷಃ :-

ಸಾಯಣರು ವರ್ಣನಾತ್ಮಕ ಗುಣವಾಚಕವಾದ ತ್ರಿಪಾತ್ (ಮೂರು ಹೆಜ್ಜೆ) ಪದವು ಪುರುಷನಿಗೆ ಸಲ್ಲುತ್ತದೆ ಎಂಬ ಅರ್ಥದಲ್ಲಿ ಬಳಸುತ್ತಾರೆ. ಅಂದರೆ ಪುನರ್ಜನ್ಮದ ಚಕ್ರಕ್ಕೆ ಒಳಗಾಗದೆ ಪ್ರಪಂಚದಿಂದ ಸಂಪೂರ್ಣವಾಗಿ ಹೊರತಾಗಿರುವವನು (ಸಂಸಾರ-ರಹಿತಃ), ಮತ್ತು ನಿಷ್ಕಳಂಕ ಸ್ವರೂಪನು ಮತ್ತು ಚೇತನಾ ಶಕ್ತಿಯ ಏಕೈಕವೂ ಪರಮ ತತ್ವವೂ ಆದ ಬ್ರಹ್ಮಸ್ವರೂಪನು; ಅವನು ಊರ್ಧ್ವಮುಖವಾಗಿ ಮೇಲೇರಿದನು (ಊರ್ಧ್ವ ಉದೈತ್), ಎಂದರೆ ಅಜ್ಞಾನದಿಂದ ಉತ್ಪನ್ನವಾದ ಈ ಪುನರಾವರ್ತನೆಗೊಳ್ಳುವ ಪ್ರಪಂಚದಿಂದ ಆಚೆಯಿರುವನು ಮತ್ತು ಅದರ ಗುಣದೋಷಗಳಿಂದ ಪ್ರಭಾವಗೊಳ್ಳದ ಬ್ರಹ್ಮನು ಸ್ವಯಂ ತನ್ನ ಮಹಿಮೆಯಲ್ಲಿ ವಿರಮಿಸುತ್ತಾನೆ.

ಆದರೂ, ತ್ರಿಪಾತ್ ಪದವನ್ನು ಸಂಯುಕ್ತವಾಗಿ ಊರ್ಧ್ವ ಉದೈತ್ ಪದದೊಂದಿಗೆ ಬಳಸುವ ಸಾಧ್ಯತೆ ಇರುವುದರಿಂದ, ಸೂಚಿಸಬಹುದಾದ ಅರ್ಥವೆಂದರೆ, ಮೇಲೆ ಪ್ರಸ್ತಾಪಿಸಲ್ಪಟ್ಟಂತೆ, ಪುರುಷನು ಮೂರು ಹೆಜ್ಜೆಗಳಿಂದ ಅಥವಾ ಮುಕ್ಕಾಲು ಭಾಗದ ಅವನ ಶಕ್ತಿಯಿಂದ (ಮಹಿಮೆ, ಭವ್ಯತೆ, ಘನತೆ) ಊರ್ಧ್ವಮುಖವಾಗಿ ಮೇಲೇರಿದನು. ಮೂರು ಹೆಜ್ಜೆಗಳು ಅಥವಾ ಮೂರು ಲೋಕಗಳನ್ನು ಮೂರು ಉನ್ನತ ಲೋಕಗಳೆಂದು (ಮಹಃ, ಜನಃ, ತಪಃ), ಮೂರು ಸ್ತರಗಳೆಂದು (ಭೂಃ, ಭುವಃ, ಸುವಃ), ಮೂರು ಸ್ಥಿತಿಗಳೆಂದು (ಜಾಗೃತ್, ಸ್ವಪ್ನ, ಸುಷುಪ್ತಾವಸ್ಥೆಗಳು), ಮೂರು ವೇದಗಳು (ಋಗ್, ಯಜುರ್, ಸಾಮ); ಗಾಯತ್ರಿಯ ಮೂರು ಪಾದಗಳೆಂದು ಇತ್ಯಾದಿಯಾಗಿ ವಿವಿಧ ಸ್ವರೂಪದಲ್ಲಿ ಕಾಣಬಹುದಾಗಿದೆ. ಪುರುಷನ ನೈಜಲೋಕವು ಈ ಮೂರೂ ಲೋಕಗಳಿಂದಾಚೆ ಇದೆ. ಅಲ್ಲದೇ, ಮೂರು ಹೆಜ್ಜೆಗಳನ್ನು ಉದರದೊಂದಿಗೂ, ಹೃದಯದೊಂದಿಗೂ ಮತ್ತು ಅಂತರಾಕಾಶದೊಂದಿಗೂ ಗುರುತಿಸಲಾಗಿದೆ; ಮತ್ತು ಇವುಗಳಿಂದಾಚೆ ಗಮಿಸಿ, ಹತ್ತು ಅಂಗುಲ ದೂರದಲ್ಲಿರುವ ಸಹಸ್ರಾರವನ್ನು ತಲುಪುವನು.

ಉದೈತ್ ಪದಕ್ಕೆ ಮತ್ತೊಂದು ವ್ಯಾಖ್ಯಾನವಿದೆ. ವ್ಯಾವಹಾರಿಕ ಪ್ರಪಂಚದಿಂದ ಹೊರತಾಗಿರುವ ತನ್ನ ನೈಜ ಇಂದ್ರಿಯಾತೀತ ಸ್ವರೂಪವನ್ನು ಮರೆಮಾಚಿಕೊಂಡು, ಪುರುಷನು ಸಮಸ್ತ ಜೀವಿಗಳ ಹೃದಯದಲ್ಲಿ ಆತ್ಮನೇ ಆಗಿ ಪ್ರವೇಶಿಸಿದನು.

ಕ್ರಮವಾಗಿ ಊರ್ಧ್ವ ಗತಿಯಲ್ಲಿ ಚಲಿಸುವ ಮೂರು ಹೆಜ್ಜೆಗಳು ಅಥವಾ ಭಾಗಗಳು ಆರಾಧನೆಯನ್ನು ಸೂಚಿಸುತ್ತವೆ. ಜೀವಿಯು ತನ್ನ ನಿಮ್ನ ಸ್ವರೂಪವನ್ನು ಅತಿಶಯಿಸುತ್ತಾನೆ ಮತ್ತು ತನ್ನ ಉನ್ನತ ಸ್ವರೂಪದವರೆಗೂ ಚಲಿಸುತ್ತಾ, ಸ್ವಯಂ ತನ್ನ ಜೀವದ ಅಂತರಾಳದಲ್ಲಿ ಅಂತರ್ಗತನಾಗಿರುವ ಪುರುಷನನ್ನೇ ತನ್ನ ಆತ್ಮನೆಂದು ತಿಳಿಯುತ್ತಾನೆ.

ಪಾದೋ ಅಸ್ಯ ಇಹ ಅಭವತ್ ಪುನಃ :

ಈ ವಾಕ್ಯದ ಮಹತ್ವವೇನೆಂದರೆ, ಇಡೀ ವಿಶ್ವವು ಪುರುಷನ ಒಂದು ಸಣ್ಣ ಭಾಗದ ಪ್ರಕಟಣೆ ಅಷ್ಟೇ; ಅದು ಸಮಗ್ರವಾಗಿಲ್ಲ ಅಥವಾ ಪುರುಷನ ಶಕ್ತಿ ಮತ್ತು ಭವ್ಯತೆಗಳನ್ನು ಸಂಪೂರ್ಣವಾಗಿ ಪ್ರಕಟಪಡಿಸಿಲ್ಲ. ಪಾದ ಪದವು ತೃಣ ಎಂಬ ಅರ್ಥವನ್ನು ಸೂಚಿಸುತ್ತದೆ, ಹಾಗೂ ಅತೀಂದ್ರಿಯ ಸ್ವರೂಪದ ತ್ರಿಪಾತ್ ಪದಕ್ಕೆ ತದ್ವಿರುದ್ಧವಾಗಿದೆ. ಈ ಸನ್ನಿವೇಶದಲ್ಲಿ ಪಾದ ಪದವು ನಮಗೆ ಚಿರಪರಿಚಿತವಾಗಿರುವ ವ್ಯಾವಹಾರಿಕ ಪ್ರಪಂಚವನ್ನು ಉದ್ದೇಶಿಸುತ್ತದೆ. ಇಹ ಪದವನ್ನು ಸಂಸಾರ ಎಂಬ ಅರ್ಥದಲ್ಲಿ ತಿಳಿದುಕೊಳ್ಳಬೇಕು.

ಪುನರಾವರ್ತನೆ ಎಂಬ ಅರ್ಥವನ್ನು ಕೊಡುವ (ಅಭವತ್, ಪುನಃ) ಪದವು ನಿರಂತರ ಬದಲಾವಣೆಗೆ ಒಳಗಾಗಿರುವ ಪ್ರಪಂಚಕ್ಕೆ ಮತ್ತು ಒಂದರ ನಂತರ ಮತ್ತೊಂದು ಚಕ್ರದ ಗತಿಯಲ್ಲಿ ಸುತ್ತುವ ಜನನ-ಮರಣಗಳ ಭವಕ್ಕೆ ಅನ್ವಯವಾಗುತ್ತದೆ. ಋಗ್ವೇದದ (10.190.3) ಮಂತ್ರ, ಪ್ರತಿ ಮಹಾಕಲ್ಪದಲ್ಲಿ ಸೂರ್ಯ ಮತ್ತು ಚಂದ್ರರು ಹಿಂದಿನ ಯುಗದಲ್ಲಿ ಅವರು ಇದ್ದಂತೆ ಹೊಸ ಸ್ವರೂಪದಿಂದ ಸೃಷ್ಟಿಸಲ್ಪಡುವರು ಎಂದು ಹೇಳುತ್ತದೆ.

ಪದೇ ಪದೇ ಪುನಃಶ್ಚೇತನಗೊಳಿಸಲ್ಪಡುವ ಪುರುಷನ ಆ ಭಾಗವು ದಿನನಿತ್ಯವೂ ಹತ್ತಾರು ಅಗ್ನಿ ಕುಂಡಗಳಲ್ಲಿ ಪ್ರಜ್ವಲನಗೊಳಿಸಲಾಗುವ ಪವಿತ್ರ ಅಗ್ನಿಯಿಂದ ಸಂಕೇತಿಸಲ್ಪಟ್ಟಿದೆ.

ಮುಂಡಕೋಪನಿಷತ್ತಿನ (1.1.7) ರಲ್ಲಿ, ಜೇಡರ ಹುಳುವು ತನ್ನದೇ ದೇಹದಿಂದ ಉಂಟಾಗುವ ನೂಲುಗಳನ್ನು ಸುತ್ತಲೂ ಹರಡಿ, ತನ್ನ ಬಲೆಯನ್ನು ನೇಯ್ದು ಅದರೊಳಗೇ ಸಿಕ್ಕಿ ಹಾಕಿಕೊಳ್ಳುವ ಚಿತ್ರಣವಿದೆ; ಗಿಡಗಳು ಭೂಮಿಯಿಂದ ಉತ್ಪನ್ನಗೊಳ್ಳುತ್ತವೆ ಮತ್ತು ಭೂಮಿಗೆ ಪುನಃ ಹಿಂದಿರುಗುತ್ತವೆ; ಹಾಗೆಯೇ ಅವಿನಾಶಿಯಾದ ಪುರುಷನಿಂದ ಪ್ರಪಂಚವು ಉತ್ಪನ್ನವಾಗುತ್ತದೆ ಮತ್ತು ಅದು ಅವನಲ್ಲಿ ಲೀನವಾಗುತ್ತದೆ.

ಪುರುಷನು ತನ್ನ ಒಂದು ಹೆಜ್ಜೆಯಿಂದ ಸಮಸ್ತ ದಿಕ್ಕುಗಳಲ್ಲಿ ದಾಪು ಹೆಜ್ಜೆಯಿಟ್ಟನು. ವ್ಯಕ್ರಾಮತ್ ಪದವು ಬೇರೆ ಬೇರೆ ದಿಕ್ಕುಗಳಲ್ಲಿ ಹೆಜ್ಜೆಯನ್ನು ಹಾಕು ಅಥವಾ ವಿಶೇಷ ರೀತಿಯಲ್ಲಿ ಎಂದಾಗುತ್ತದೆ. ವ್ಯಕ್ರಾಮತಿ ಪದವು ವ್ಯಾಪ್ತಿ ಎಂಬ ಅರ್ಥವನ್ನು ಸೂಚಿಸುತ್ತದೆ.

ತತೋ ವಿಶ್ವಂಗ್ ವಿ ಅಕ್ರಾಮತ್ ಸಾಶನ ಅನಶನೇ ಅಭಿ:

ದ್ವಂದ್ವ ಸಂಖ್ಯೆಯ ಸಾಶನಾನಶನೇ ಪದವನ್ನು ಅರ್ಥೈಸುವುದು ಕಷ್ಟ. ಅದು ಸಾಶನ - ಉಣ್ಣುವ ಚೇತನ (ಅಶನದೊಂದಿಗೆ) ಮತ್ತು ಅನಶನ (ಉಣ್ಣದ ಜಡ) (ಅಶನವಿಲ್ಲದೇ) ಸಂಯುಕ್ತ ಪದಗಳಿಂದ ಸಂಯೋಜಿತವಾಗಿದೆ. ಈ ಪ್ರಸಕ್ತ ಸಂದರ್ಭದಲ್ಲಿ ಅಶನ ಪದದ ಮಹತ್ವವು ಅಸ್ಪಷ್ಟವಾಗಿದೆ. ಸಾಮಾನ್ಯವಾಗಿ ಅಶನವೆಂದರೆ ತಿನ್ನುವುದು ಅಥವಾ ಆಹಾರವೆಂಬ ಅರ್ಥ. ಅಲ್ಲದೇ, ಅಶನಾನಶನ ಎಂಬ ಮತ್ತೊಂದು ಪದದ ಅರ್ಥವು ತಿನ್ನುವುದು ಹಾಗೂ (ತಿನ್ನದಿರುವುದು) ಉಪವಾಸ ಎಂದಾಗುತ್ತದೆ. ಆದರೆ ಈ ಅರ್ಥವು ವಿಶ್ವಂಗ್ ವ್ಯಕ್ರಾಮತ್ ಪದಗಳಿಂದ ಸೂಚಿಸಲ್ಪಟ್ಟ ಭಾವವಾದ ಎಲ್ಲೆಡೆಯಲ್ಲೂ ವ್ಯಪ್ತಿಯುಳ್ಳ ಕ್ರಿಯೆಯೊಂದಿಗೆ ಒಡಂಬಡುವುದಿಲ್ಲ.

ಮಂತ್ರ - 5 -ಸಂಸ್ಕೃತದಲ್ಲಿ :

ತಸ್ಮಾದ್ ವಿರಾಟ್ ಅಜಾಯತ ವಿರಾಜೋ ಅಧಿ ಪೂರುಷಃ
ಸ ಜಾತೋ ಅತು ಅರಿಚ್ಯತ ಪಶ್ಚಾತ ಭೂಮಿಮ್ ಅಥೋ ಪುರಃ

ಕನ್ನಡದಲ್ಲಿ :

ಹುಟ್ಟಿತವನಿಂದ ಬ್ರಹ್ಮಾಂಡವದರಿಂದ ಹುಟ್ಟಿದನು ಬ್ರಹ್ಮ
ಮೆಟ್ಟಿನಿಂತನವ ಹುಟ್ಟಿದ ನಂತರ ಬುವಿಯನೆಲ್ಲ ಲೋಕಗಳ  

ವಿವರಣೆ :

ಆ ಆದಿಪುರುಷನಿಂದ ಬ್ರಹ್ಮಾಂಡದೇಹ ರೂಪಿಯಾದ ವಿರಾಟ್ ಪುರುಷನು ಉತ್ಪನ್ನನಾದನು. ಆ ವಿರಾಟ್ ದೇಹದ ಮೇಲೆ ಇದ್ದ ದೇಹವನ್ನೇ ಆಶ್ರಯಿಸಿ ಆ ದೇಹಾಭಿಮಾನಿಯಾದ ಪುರುಷನು ಹುಟ್ಟಿದನು. (ಅಂದರೆ ಸರ್ವವೇದಾಂತವೇದ್ಯನಾದ ಪರಮಾತ್ಮನೇ ತನ್ನ ಮಾಯೆಯಿಂದ ಬ್ರಹ್ಮಾಂಡರೂಪವಾದ ವಿರಾಟ್ ದೇಹವನ್ನು ಸೃಷ್ಟಿಸಿ ಅದರೊಳಗೆ ಜೀವರೂಪದಿಂದ ಪ್ರವೇಶಿಸಿ ಬ್ರಹ್ಮಾಂಡಾಭಿಮಾನಿಯೂ ದೇವತಾ ರೂಪಿಯೂ ಆದ ಜೀವನಾದನು.) ಉತ್ಪನ್ನವಾದ ಆ ವಿರಾಟ್ ಪುರುಷನು ಅತಿರಿಕ್ತವಾಗಿ ಆದನು. (ವಿರಾಟ್ ದೇಹಕ್ಕಿಂತಲೂ ಬೇರೆಯಾಗಿ ದೇವ-ತಿರ್ಯಕ್-ಮನುಷ್ಯ ಮೊದಲಾದ ರೂಪವಾಗಿ ಆದನು). ದೇವ ಮೊದಲಾದ ಜೀವಭಾವನ್ನು ತಾಳಿದ ಮೇಲೆ ಭೂಮಿಯನ್ನು ಸೃಷ್ಟಿಸಿದನು. ಭೂಮಿಯನ್ನು ಸೃಷ್ಟಿಸಿದ ಮೇಲೆ ಆ ಜೀವರುಗಳಿಗೆ ಬೇಕಾದ ಸಪ್ತಧಾತುಮಯ ಪುರರೂಪವಾದ ಶರೀರಗಳನ್ನು ಸೃಷ್ಟಿಸಿದನು.

ವ್ಯಾಖ್ಯಾನ :

ತಸ್ಮಾತ್ ವಿರಾಟ್ ಅಜಾಯತ ವಿರಾಜೋ ಅಧಿ ಪೂರುಷಃ :

ತಸ್ಮಾತ್ (ಅದರಿಂದ ಅಥವಾ ಅವನಿಂದ) ಪದವನ್ನು ಆದಿಪುರುಷಾತ್ ಎಂದು ಅರ್ಥೈಸುತ್ತಾರೆ, ಏಕೆಂದರೆ ಇಲ್ಲಿ ಬ್ರಹ್ಮಾಂಡದಿಂದ ಹುಟ್ಟಿದ ಮತ್ತೊಬ್ಬ ಪುರುಷನ ಬಗ್ಗೆ ಉಲ್ಲೇಖವಿದೆ. ಆದಿಪುರುಷನಿಂದ ಬ್ರಹ್ಮಾಂಡದ ಮಗುವಾದ ಚತುರ್ಮುಖನು ಜನ್ಮ ತಾಳಿದನು. ಈ ಚತುರ್ಮುಖನಿಂದ ವ್ಯಾವಹಾರಿಕ ಲೋಕದಲ್ಲಿ ವ್ಯಕ್ತನಾದ ಪುರುಷ ಪ್ರಕಟಗೊಂಡನು. ಹೀಗೆ ಪುರುಷ ಮತ್ತು ಬ್ರಹ್ಮ ತಮ್ಮ ತಮ್ಮ ಮೂಲ ಸ್ಥಾನದಲ್ಲಿ ಪರಸ್ಪರ ಸಂಬಂಧಿಸಿದ್ದಾರೆ.

ವೇದದ ಕಾಲದ ನಂತರದ ಚಿಂತನೆಯಲ್ಲಿ (ಉದಾ: ಬ್ರಹ್ಮ-ವೈವರ್ತ ಪುರಾಣ, ಪ್ರಕೃತಿ ಖಂಡ, ಅಧ್ಯಾಯ-3) ಬ್ರಹ್ಮಾಂಡ ದೇಹವನ್ನು ಅಧೋಲೋಕದಿಂದ ಬ್ರಹ್ಮಲೋಕದವರೆಗೆ ವ್ಯಾಪಿಸಿರುವ ಪ್ರದೇಶವೆಂದು ಕಲ್ಪಿಸಲಾಗಿ, ಇದರಿಂದಾಚೆ ಇರುವ ಉನ್ನತ ಸ್ಚರ್ಗಲೋಕಗಳನ್ನು (ವೈಕುಂಠ) ಪುರುಷನ ಸ್ವಯಂ ಮಹಿಮೆಯೆಂದು ಅರ್ಥೈಸಲಾಗಿದೆ.

ಅಷ್ಟೇ ಅಲ್ಲದೇ, ಈ ಬ್ರಹ್ಮಾಂಡವು ಅಸ್ತಿತ್ವದ ಅತ್ಯಂತ ಸ್ಥೂಲಾವಸ್ಥೆಯ ಅಂಶವಾಗಿದೆ. ಹೇಗೆ ಅಂತಿಮ ಪರಮಾಣುವು ಸೂಕ್ಷ್ಮಕ್ಕಿಂತ ಸೂಕ್ಷ್ಮವಾಗಿರುವಂತೆ, ಹಾಗೆಯೇ ಬ್ರಹ್ಮಾಂಡವು ಸ್ಥೂಲಕ್ಕಿಂತ ಸ್ಥೂಲವಾಗಿದೆ. ಇದು ಅಸಂಖ್ಯಾತ ಲೋಕಗಳಿಗೆ, ಆದಿ ಸೃಷ್ಟಿಯ ಉನ್ನತ ಹಾಗೂ ಪೂರ್ಣವ್ಯಾಪ್ತಿ ಪ್ರದೇಶಗಳಿಗೆ ಆಧಾರಭೂತವಾಗಿದೆ.

ಈ ಬ್ರಹ್ಮಾಂಡ ದೇಹವು ಪುರುಷನ ಶರೀರವಾಗಿದೆ. ಬೃಹದಾರಣ್ಯಕೋಪನಿಷತ್ತಿನ 5.5.3 ರಲ್ಲಿ ವಿವರಿಸಿರುವಂತೆ, ಭೂಃ ಅಥವಾ ಭೂಮಿಯು ಅವನ ಶಿರಸ್ಸು, ಭುವಃ ಅಥವಾ ಮಧ್ಯವಲಯವು ಅವನ ತೋಳುಗಳು ಮತ್ತು ಸ್ವಃ ಅಥವಾ ಆಕಾಶವು ಅವನ ಪಾದಗಳಾಗಿವೆ. ಪುರುಷನು ಈ ಶರೀರದ ಆತ್ಮನಾಗಿದ್ದಾನೆ. ಈ ಶರೀರವನ್ನು ಆಧಾರವಾಗಿಟ್ಟು ಕೊಂಡು, ಪುರುಷನು ಸ್ವಯಂ ವ್ಯಕ್ತನಾದನು. ಅವನು ಆ ಶರೀರವನ್ನು ಸ್ವಯಂ ತನ್ನ ಶರೀರವೆಂದೇ ಪರಿಗಣಿಸಿ ದನು. ಆ ಶರೀರವು ಅವನಲ್ಲಿನ ಸೃಷ್ಟಿ ಸಂಕಲ್ಪದ ಬಯಕೆಯಿಂದಲೇ ಉಂಟಾಗಿ ಸ್ವಯಂ ಅವನಿಂದ ಹೊರಹೊಮ್ಮಿತು. ಅವನು ಜೀವಾತ್ಮನ ಸ್ವರೂಪವನ್ನು ಧರಿಸಿದನು. ಆ ಜೀವಾತ್ಮನಿಂದ ಆಕಾಶವು ಉಂಟಾಯಿತು, ಆಕಾಶದಿಂದ ವಾಯುವು, ವಾಯುವಿನಿಂದ ಅಗ್ನಿಯು, ಅಗ್ನಿಯಿಂದ ಜಲವು, ಜಲದಿಂದ ಭೂಮಿಯು, ಭೂಮಿಯಿಂದ ಸಸ್ಯರಾಶಿಯು ಮತ್ತು ಸಸ್ಯದಿಂದ ಅನ್ನವೂ ಹಾಗೂ ಅನ್ನದಿಂದ ಸಮಸ್ತ  ಜೀವಿಗಳೂ ಉತ್ಪನ್ನಗೊಂಡವು. ಅಂತಹ ಕ್ರಿಯಾತ್ಮಕ ಕಾರ್ಯಶೀಲತೆಯ ಸಿದ್ಧಾಂತವನ್ನು ಪಾರಿಭಾಷಿಕವಾಗಿ ಪ್ರಜಾಪತಿಯೆಂದು ಕರೆಯಲಾಗಿದೆ. ಆದಿ ಪುರುಷನು ಪ್ರಜಾಪತಿಯೆಂದೆನಿಸಿಕೊಂಡನು; ಮತ್ತು ಪ್ರಜಾಪತಿಯಿಂದ ವಿರಾಜ್ ನೆಂದು ಕರೆಯಲ್ಪಡುವ ಬ್ರಹ್ಮಾಂಡದೇಹವು ಶತಪಥ ಬ್ರಾಹ್ಮಣ (6..1. 1.1 ಮತ್ತು 13.2.6.3) ದಲ್ಲಿ ಹೇಳಿರುವಂತೆ ಉಂಟಾಯಿತು.

ವಾಸ್ತವವಾಗಿ, ಸರ್ವತ್ರದಲ್ಲಿಯೂ, ಸಮಸ್ತ ವಸ್ತುಗಳ ಪ್ರಭುವಾದ ಈ ಪ್ರಜಾಪತಿಯು ಕ್ರಿಯಾತ್ಮಕ ತತ್ವವಾಗಿದ್ದಾನೆ ಮತ್ತು ಇವನು ಬ್ರಹ್ಮ, ಅಗ್ನಿ, ಪುರುಷ ಮತ್ತು ವಿಷ್ಣು ಇವರೆಲ್ಲರ ತದ್ರೂಪವಾಗಿದಾನೆ. ಇದನ್ನು ಅಥರ್ವವೇದದಲ್ಲಿ ಸ್ತ್ರೀ ಶಕ್ತಿಯೆಂದು ಭಾವಿಸಲಾಗಿರುವುದು ಸ್ವಾರಸ್ಯದ ಅಂಶವಾಗಿದೆ.

ಪ್ರಾರಂಭದಲ್ಲಿ ಅಸ್ತಿತ್ವದಲ್ಲಿದ್ದದ್ದು ಜಡಪ್ರಕೃತಿಯೊಂದೇ. ಅವಳು ಅಭಿವ್ಯಕ್ತವಾದಾಗ ಅವಳೇ ಸಮಸ್ತ ವಿಶ್ವವಾಗಬಹುದೆಂಬ ಭಯವಿತ್ತು. ಮತ್ತೊಂದು ಉಲ್ಲೇಖನದಲ್ಲಿ, ತೇಜಸ್ಸಿನ ಮೂಲ ವಸ್ತುಗಳಾದ ಸೃಷ್ಟ್ಯಾದಿಯ ಜಲರಾಶಿಗಳು, ಮತ್ತು ಬ್ರಹ್ಮಾಂಡವು
ಸೃಷ್ಟಿಕರ್ತನಾದ ಬ್ರಹ್ಮನಿಂದ ಉಂಟಾಯಿತು ಮತ್ತು ಯಾವಾಗ ಬ್ರಹ್ಮನು ಶರೀರವನ್ನು ಪ್ರವೇಶಿಸಿದನೋ, (ಆತ್ಮನ ಭೌತಿಕ ವಸ್ತ್ರ) ಅವನು ಅಧೀಶ್ವರನಾದ ಪ್ರಜಾಪತಿಯಾದನು.

ಇಲ್ಲಿ, ಪ್ರಜಾಪತಿಯೆಂದು ಸ್ವಯಂ ತನ್ನನ್ನೇ ಸೃಷ್ಟಿಕರ್ತನಾಗಿ ರೂಪಾಂತರಿಸಿಕೊಂಡ ಪರಬ್ರಹ್ಮಸ್ವರೂಪದ ಬ್ರಹ್ನನ ಅಧೀನಕ್ಕೆ ಬ್ರಹ್ಮಾಂಡವು ಒಳಪಟ್ಟದ್ದಾಗಿದೆ. ಈಗ ಈ ಪ್ರಜಾಪತಿಯೇ ಸ್ವಯಂ ಪುರುಷನಾಗಿದ್ದಾನೆಯೇ ಹೊರತು ಆದಿಪುರುಷ ಅಲ್ಲ, ಆದರೆ, ಬ್ರಹ್ಮಾಂಡದಿಂದ ಹೊರಹೊಮ್ಮಿದ ಎರಡನೆಯ ಪುರುಷನು (ವಿರಾಜೋ ಅಧಿ ಪೂರುಷಃ) ಮತ್ತು ಜೀವಾತ್ಮನೆಂದು ಕರೆಯಲ್ಪಡುವ ಇವನ ದೇಹ-ಮನಗಳ ಸಂಕೀರ್ಣತೆಯನ್ನು ಪ್ರವೇಶಿಸುತ್ತಾನೆ. ಇದರ ನಡುವಿನ ವ್ಯತ್ಯಾಸವೆಂದರೆ ಪುರುಷನು ಜೀವಿಯೂ ಹೌದು ಮತ್ತು ಜೀವಾತ್ಮನೂ ಸಹ. ಆದರೂ, ಇಲ್ಲಿ ಪುರುಷರುಗಳ ಬಗ್ಗೆ ದ್ವಂದ್ವವಿಲ್ಲ.

ಬ್ರಹ್ಮಾಂಡದೇಹದ ವಿರಾಟ್ಪುರುಷನ ರೂಪಗಳು ಪುರುಷನ ಸ್ವರೂಪದ ರಚನೆಯಲ್ಲಿ ಪ್ರವೇಶಿಸುತ್ತವೆ; ಬ್ರಹ್ಮಾಂಡದಲ್ಲಿನ ಸೂರ್ಯನು ಜೀವಿಯ ಚಕ್ಷುಗಳಾಗುತ್ತಾನೆ, ವಾಯುವು ಉಸಿರಾಯಿತು, ಇತ್ಯಾದಿ; ವಾಸ್ತವವಾಗಿ ಪುರುಷನು ಬ್ರಹ್ಮನೇ ಆಗಿರುತ್ತಾನೆ ಮತ್ತು ಸಮಸ್ತ ದೇವತೆಗಳು ಗೋವುಗಳು ಗೋ ದೊಡ್ಡಿಯಲ್ಲಿ ನೆಲೆಸಿರುವಂತೆ ಆ ಬ್ರಹ್ಮಾಂಡದಲ್ಲಿ ನೆಲೆಯಾಗಿರುವರು.

ವಾಸ್ತವವಾಗಿ, ಭೂಮಿ, ಅಂತರಿಕ್ಷ, ವಾಕ್ಕು ಮತ್ತು ಮರಣ ಇವೆಲ್ಲವುಗಳಂತೆಯೇ ಪ್ರಜಾಪತಿಯೂ ಬ್ರಹ್ಮಾಂಡ ಆಗಿದ್ದಾನೆ.

ಬ್ರಹ್ಮಾಂಡ ರೂಪವನ್ನು ಆಧಾರವಾಗಿಟ್ಟುಕೊಂಡು, ಪುರುಷನು ವ್ಯಕ್ತನಾದನು. ಆದ್ದರಿಂದ ಅವನನ್ನು ವೈರಾಜ-ಪುರುಷನೆಂದು ಕರೆಯುತ್ತಾರೆ. ಅವನು ಸಮಸ್ತ ಜೀವಿಗಳಲ್ಲೂ ವಿಶೇಷವಾಗಿ ಉಜ್ವಲವಾದ ಬೆಳಕು ಮತ್ತು ಪ್ರಾಣಾಶಕ್ತಿಯಾಗಿ, ನಿರ್ಮಲ ಮತ್ತು ಸತ್ಯಯುತ ಪ್ರಜ್ಞೆಯಾಗಿ ಪ್ರಕಾಶಿಸುತ್ತಾನೆ. (ವಿ-ರಾಜತಿ) ಇದು ಸಮಸ್ತ ಜೀವಿಗಳ ಚೈತನ್ಯಾತ್ಮವು; ಇದನ್ನು ಮನಸಿನ-ಆತ್ಮವೆಂದು ಹೇಳುತ್ತಾರೆ. ದಶ-ಹೋತ್ರನೆಂದು ಕರೆಯಲ್ಪಡುವ ಪ್ರಜಾಪತಿಯು ಎಲ್ಲ ಚೈತನ್ಯಾತ್ಮಗಳ ಸಮಷ್ಠಿರೂಪನಾಗಿದ್ದಾನೆ. ಇವನನ್ನು ದಶ-ಹೋತ್ರನೆಂದು ಕರೆಯಲು ಕಾರಣವೇನೆಂದರೆ, ಇವನು ಆತ್ಮನ ಹತ್ತು ಗುಣಗಳಿಂದ ಗುರುತಿಸಲ್ಪಡುವನು: ಚಿತ್ತಿ(ಪ್ರಜ್ಞೆ), ಚಿತ್ತ (ಪ್ರತಿಬಿಂಬ), ವಾಕ್ (ವಾಣಿ), ಅಧೀತಾ (ನೆನಪು, ಏಕಾಗ್ರತೆ), ಕೇತ (ಬಯಕೆ, ಸಂಕಲ್ಪ, ಆಹಾರ), ವಿಜ್ಞಾತ (ವಿವೇಚನೆ), ವಾಕ್ಪತಿ (ವಾಕ್ಪಟುತ್ವ), ಮನಸ್, ಪ್ರಾಣ ಮತ್ತು ಸಾಮ (ಪ್ರಶಾಂತತೆ). ಇವುಗಳನ್ನು ಯಾಜ್ಞದಲ್ಲಿ ಹವಿಸ್ಸನ್ನು ಅರ್ಪಿಸಲು ಬಳಸುವ ಸವುಟು (ಸೃಕ್), ಆಹುತಿ (ಆಜ್ಯ), ಯಜ್ಞದ ವೇದಿಕೆ, ದರ್ಭಾಸನ, ಬೆಂಕಿ, ಅಗ್ನಿಪ್ರಜ್ವಲನ, ಆಹುತಿಯನ್ನು ಅರ್ಪಿಸುವ ಪುರೋಹಿತ, ಋತ್ವಿಜ, ಅಗ್ನಿಗೆ ಅರ್ಪಿಸುವ ಕಾಣಿಕೆ (ಹವಿಸ್ಸು), ಮತ್ತು ಪ್ರಧಾನ ಪುರೋಹಿತ (ಅಧ್ವರ್ಯು) ಇತ್ಯಾದಿಗಳನ್ನು ಯಜ್ಞದ ಕಾರ್ಯಕಲಾಪಗಳಿಗೆ ಅನುಕ್ರಮವಾಗಿ ಹೋಲಿಸಬಹುದಾಗಿದೆ.

ಮೊದಲಿನ ಹತ್ತು ಅಂಶಗಳು, ಜೀವಿಗಳ ಕಾರ್ಯ ಅಥವಾ ಮನಃಪ್ರಾಣಾದಿ ಶಕ್ತಿಗಳನ್ನು ಸೂಚಿಸಿದರೆ, ಎರಡನೆಯದು, ಯಜ್ಞದ ಕಾರ್ಯಾಚರಣೆಗಳಿಗೆ ಅಗತ್ಯವಾದ ಸದೃಶವಾದ ವಿವರಗಳನ್ನು ಒಳಗೊಂಡಿದೆ (ಹೋಮ-ನಿಷ್ಪಾದಕಃ). ಆದ್ದರಿಂದ ಪ್ರಜಾಪತಿಯನ್ನು ದಶ-ಹೋತ್ರನೆಂಬ ಉಪಮೆಯಲ್ಲಿ ಕರೆಯಲಾಗಿದೆ.

ಜಾತೋ ಅತಿ ಅರಿಚ್ಯತ ಪಶ್ಚಾತ್ ಭೂಮಿಂ ಅಥೋ ಪುರಃ

ಈ ವಾಕ್ಯದಲ್ಲಿ ಮಹತ್ವಪೂರ್ಣವಾದ ಪದವು ಅತಿ ಅರಿಚ್ಯತ ಆಗಿದೆ. ರಿಚ್ ಎಂಬ ಧಾತುವಿನಿಂದ ಈ ಪದವು ಉತ್ಪತ್ತಿಯಾಗಿದೆ ಹಾಗೂ ಇದರ ಅರ್ಥವು ತೆರವು ಮಾಡು, ಸ್ಥಳಾಂತರಿಸು, ತ್ಯಜಿಸು ಎಂದೆಲ್ಲಾ ಆಗುತ್ತದೆ. ಪುರುಷನು ತನ್ನನ್ನು ವ್ಯಕ್ತಪಡಿಸಿದಾಗ, ಅವನು ಸ್ವಯಂ ತನ್ನನ್ನು ತೆರವು ಮಾಡಿಕೊಂಡನು, ತ್ಯಜಿಸಿಕೊಂಡನು (ಅರಿಚ್ಯತ). ಅವನು ತನ್ನನ್ನು ತಾನು ಸೃಷ್ಟಿಯ ವೇದಿಯಲ್ಲಿ ಬಲಿಪಶುವಾಗಿ ಅರ್ಪಿಸಿಕೊಂಡನು. ಈ ಸ್ವಯಂ ಆತ್ಮಾರ್ಪಣೆಯು ಪುರುಷನ ಆಹುತಿಗೆ ಸಾದೃಶವಾಗಿದೆ. ಈ ಆಹುತಿಯ ಪರಿಣಾಮದಿಂದ, ಭೂಮಿಯು ಸೃಷ್ಟಿಯಾಯಿತು ಮತ್ತು ನಂತರ ಎಲ್ಲಾ ಜೀವಿಗಳ ಶರೀರಗಳು ಅಸ್ತಿತ್ವ ತಳೆದವು.
ಯಾವಾಗ ಭೂಮಿಯು ಈ ಜೀವಾತ್ಮರುಗಳ ಕಾರ್ಯಾಚರಣೆಯ ಕ್ಷೇತ್ರವಾಗಿ ಸೃಷ್ಟಿಸಲ್ಪಟ್ಟಿತೋ, ಆಗಲೇ ಈ ಆತ್ಮರಿಗೆ ಭೌತಿಕ ಶರೀರಗಳು ರೂಪತಾಳಿದವು. ಇವುಗಳನ್ನು ಇಲ್ಲಿ ಪುರಗಳೆಂದು ಕರೆಯಲಾಗಿದೆ. ಇದು ಸೃಷ್ಟಿಪ್ರಕ್ರಿಯೆಯ ಮೊದಲ ಹಂತವನ್ನು ಉದ್ದೇಶಿಸುತ್ತದೆ. ಆದಿಪುರುಷನು ಬ್ರಹ್ಮಾಂಡವನ್ನು ಸೃಷ್ಟಿಸಿ ಅದರೊಳಗೆ ಅದರ ಆತ್ಮವಾಗಿ ಪ್ರವೇಶಿಸಿದನು. ಹೀಗೆ ಜೀವಿಗಳ ಆತ್ಮಗಳುಂಟಾದವು; ತದನಂತರ, ಭೂಮಿಯು ಸೃಷ್ಟಿಸಲ್ಪಟ್ಟಿತು. ನಂತರ ಮೊದಲೇ ರೂಪಗೊಂಡಿದ್ದ ಆ ಜೀವಾತ್ಮರುಗಳಿಗೆ ಶರೀರಗಳು ಸೃಷ್ಟಿಯಾದವು.

ಯಾವಾಗ ಈ ಪುರುಷನು ವ್ಯಕ್ತನಾದನೋ, ಆಗ ಅವನು ಭೂಮಿಯನ್ನು ಹಿಂದುಗಡೆ ಹಾಗೂ ಮುಂದುಗಡೆಯಿಂದ ಎಲ್ಲೆ ಮೀರಿದನು. ಇಲ್ಲಿ ದ್ವಂದ್ವ ಪದಗಳಾದ ನಿರಂತರತೆ ಹಾಗೂ ಸ್ಥಗಿತತೆಗಳು ಒಳಗೊಂಡಿವೆ. ಪುರುಷನು ಜ್ಞಾತೃವು ಎಂದರೆ ಅದು ನಿರಂತರತೆಯ ಸಂಕೇತ, ಪುರುಷನು ಜೀವಿ ಎಂದಾಗ ಅದು ಸ್ಥಗಿತತೆಯ ಸಂಕೇತ. ಅಸ್ಥಿರತೆಯನ್ನು ನಿರಂತರತೆಯ ತ್ಯಾಗ ಎಂದು ತಿಳಿಯಬಹುದು. ಆದರೆ ವಾಸ್ತವಿಕವಾಗಿ ಜ್ಞಾತೃವಿಲ್ಲದೇ ಜೀವಿಯು ಇರಲಾರದು. ಜ್ಞಾತೃವು ಜೀವಿಯಿಂದ ತ್ಯಜಿಸಲ್ಪಟ್ಟಿಲ್ಲ (ಪುರುಷ ಏವ ಇದಂ ಸರ್ವಮ್).

ಮಂತ್ರ - 6 -ಸಂಸ್ಕೃತದಲ್ಲಿ :

ಯತ್ ಪುರುಷೇಣ ಹವಿಷಾ ದೇವಾ ಯಜ್ಞಂ ಅತನ್ವತ
ವಸಂತೋ ಅಸ್ಯಾಸೀತ್ ಆಜ್ಯಂ ಗ್ರೀಷ್ಮ ಇಧ್ಮಃ ಶರದ್ ಹವಿಃ

ಕನ್ನಡದಲ್ಲಿ :

ಪುರುಷನನುಗ್ರಹದಿಂದ ಸುರರು ಹವಿಯೆರೆದು ಯಜ್ಞ ಕೈಗೊಳಲು
ಘೃತವಾಯಿತದಕೆ ವಸಂತ ಗ್ರೀಷ್ಮವಿಂಧನ ಹವಿ ಶರದ ಋತು   

ವಿವರಣೆ :

ಯಾವಾಗ ದೇವತೆಗಳು ಪುರುಷನೆಂಬ ಹವಿಸ್ಸಿನಿಂದ ಒಂದು ಯಜ್ಞವನ್ನು ಅನುಷ್ಠಾನ ಮಾಡಿದರೋ (ಬಾಹ್ಯವಾದ ದ್ರವ್ಯವು ಇನ್ನೂ ಉತ್ಪನ್ನವಾಗಿರಲಿಲ್ಲವಾದ ಕಾರಣ ಬಾಹ್ಯವಾದ ಹವಿಸ್ಸು ಇರಲಿಲ್ಲವಾದ್ದರಿಂದ ಪುರುಷ ರೂಪವನ್ನೇ ಮನಸ್ಸಿನಿಂದ ಹವಿಸ್ಸಿನ ರೂಪವಾಗಿ ಸಂಕಲ್ಪಮಾಡಿ ಆ ಪುರುಷನೆಂಬ ಹವಿಸ್ಸಿನಿಂದಲೇ ಮಾನಸಿಕವಾದ ಯಜ್ಞವನ್ನು ಯಾವಾಗ ಅನುಷ್ಠಾನ ಮಾಡಿದರೋ) ಆಗ ಈ ಯಜ್ಞಕ್ಕೆ ವಸಂತ ಋತುವೇ ಆಜ್ಯವಾಯಿತು; ಗ್ರೀಷ್ಮ ಋತುವೇ ಇಧ್ಮವಾಯಿತು; ಶರದೃತುವೇ ಪುರೋಡಾಶ ಮುಂತಾದ ಹವಿಸ್ಸಿನ ರೂಪವಾಗಿ ಆಯಿತು. (ಮೊದಲು ಪುರುಷನನ್ನು ಸಾಮಾನ್ಯ ಹವಿಸ್ಸಿನ ರೂಪವಾಗಿ ಸಂಕಲ್ಪ ಮಾಡಿ ವಸಂತ ಮೊದಲಾದ ಋತುಗಳನ್ನು ಆಜ್ಯ ಮುಂತಾದ ವಿಶೇಷ ಹವಿಸ್ಸಿನ ರೂಪವಾಗಿ ಸಂಕಲ್ಪ ಮಾಡಿ ಮಾನಸಿಕ ಯಜ್ಞವನ್ನು ಆಚರಿಸಿದರು ಎಂಬ ಅಭಿಪ್ರಾಯ).

ವ್ಯಾಖ್ಯಾನ :

ಯತ್ ಪುರುಷೇಣ ಹವಿಷಾ ದೇವಾ ಯಜ್ಞ ಅತನ್ವತ

ಯತ್ ಪದವನ್ನು ಯದಾ ಅನ್ನುವ ಅರ್ಥದಲ್ಲಿ ಬಳಸಲಾಗಿದ್ದು, ಅದು ಸೃಷ್ಟಿಯ ಎರಡನೆಯ ಹಂತವು ಪ್ರಾರಂಭವಾದ ಕಾಲವನ್ನು ಸೂಚಿಸುತ್ತದೆ. ಇದು ಜೀವಾತ್ಮರುಗಳ ಅನುಕೂಲಕ್ಕಾಗಿ ಶರೀರಗಳು ಅಥವಾ ಶಾರೀರಿಕ ಸಂಯೋಜನೆಯು ಉಂಟಾದ ಕಾಲವಾಗಿರುತ್ತದೆ. ನಂತರ, ದೇವತೆಗಳು ಎರಡನೆ ಹಂತದ ಸೃಷ್ಟಿಕಾರ್ಯವನ್ನೂ ಸಾಧಿಸುವ ಯಜ್ಞವನ್ನು ಆಚರಿಸಲು ಸಂಕಲ್ಪಿಸಿದರು.

ದೇವತೆಗಳು ಮಾನಸಿಕವಾಗಿ ಯಜ್ಞವನ್ನು ಆಚರಿಸಿದರು. ಅವರು, ಪುರುಷನ ಸ್ವರೂಪವನ್ನೇ ಯಜ್ಞ ದ್ರವ್ಯವೆಂದು ಕಲ್ಪಿಸಿ ಯಜ್ಞವನ್ನು ಈಡೇರಿಸಲು ತಮ್ಮಲ್ಲೇ ಸಂಕಲ್ಪಿಸಿದರು. ಆಗ ಹವಿಸ್ಸಾಗಿ ಅಥವಾ ಬಲಿಕೊಡಲು ಯೋಗ್ಯವಾದಂಥ ಮತ್ತೇನೂ ವಸ್ತುವಿರಲಿಲ್ಲ. ಅರ್ಥಾತ್, ಆತ್ಮನಿಂದ ಬಂಧಮುಕ್ತವಾದ ಪ್ರಾಣಶಕ್ತಿಗಳು ಮತ್ತು ಇಂದ್ರಿಯ-ವ್ಯಾಪಾರಗಳು ಕಾರ್ಯವೆಸಗಲು ತೊಡಗಿದವು; ಅವು ಬಾಹ್ಯಾಚರಣೆಯ ನಿಲುವನ್ನು ತಳೆದಿದ್ದವು ಮತ್ತು ಆಂತರಿಕ ಸತ್ಯದ ಬಗ್ಗೆ ಉಪೇಕ್ಷೆ ತಾಳಿದವು. ಇದು ಪುರುಷನ ಯಜ್ಞ ಅಥವಾ ಅರ್ಪಣೆ. ಅದು ಪುರುಷನು ತನ್ನನ್ನು ತಾನು ದೇವತೆಗಳಿಗೆ ಅರ್ಪಿಸಿಕೊಂಡನೇನೋ ಎನ್ನುವಂತಿದೆ.

ಯಜ್ಞದ ಕುರಿತಾದ ವಿವರಗಳೆಂದು ಅವನಿಂದ ಸೃಷ್ಟಿಸಲ್ಪಟ್ಟ ಹತ್ತು ಅಂಶಗಳು ಪ್ರಜಾಪತಿಗೆ ದಶ-ಹೋತ್ರನೆಂಬ ಹೆಸರು ಬಂದಿತು. ಈ ಕಲ್ಪನೆಗೆ ಸಂಬಂಧಿಸಿದಂತೆ ಆಯಾಮವೊಂದನ್ನು ಕಾಣಬಹುದು:-

1. ಬ್ರಾಹ್ಮಣನೆಂದು ತಪಶ್ಚರ್ಯೆಯಲ್ಲಿ ತೊಡಗಿರುವ (ತಪಸ್;
2. ಎರಡು ಪ್ರಕಾರದ ಬೆಂಕಿ ಅಥವಾ ಅಗ್ನಿ ಅಥವಾ ಎರಡು ಪ್ರಕಾರದ ಯಜ್ಞ (ಪಾಕ-ಯಜ್ಞ ಮತ್ತು ಹವಿಸ್ಸಿನ-ಯಜ್ಞ);
3. ಭೂಮಿ ಅಥವಾ ಪೃಥ್ವಿಯೆಂದು, (ಅಗ್ನಿ, ಆಹಾರ ಮತ್ತು ಕರ್ಮಾಚರಣೆಗಳಿಗೆ ಆಧಾರವಾಗಿರುವ ಮೂರು ಅಂಶಗಳು);
4. ಮಧ್ಯವಲಯ ಅಥವಾ ಅಂತರಿಕ್ಷವೆಂದು, (ಶಬ್ದ, ಮಳೆ, ದಿಕ್ಕುಗಳು ಮತ್ತು ಆಕಾಶ) - ಈ ನಾಲ್ಕು ರೀತಿಗಳಲ್ಲಿ ವಿಶ್ವವನ್ನು ಅಧಿಷ್ಠಾನಗೊಳಿಸುವ;
5. ಐದು ಬಗೆಗಳ ಪ್ರಾಣವೆಂದು (ಪ್ರಾಣ, ಅಪಾನ, ಸಮಾನ, ಉದಾನ ಮತ್ತು ವ್ಯಾನ);
6. ಚಂದ್ರ ಅಥವಾ ಚಂದ್ರಮನೆಂದು (ಆರು ಋತುಗಳಲ್ಲಿ ವಿಶ್ವವನ್ನು ಪುಷ್ಟಿಗೊಳಿಸುತ್ತಾನೆ);
7. ಆಹಾರ ಅಥವಾ ಅನ್ನವೆಂದು (ಅದು ಏಳು ಪ್ರಧಾನ ಕ್ರಿಯೆಗಳಿಗೆ ಆಸರೆಯಾಗಿದೆ);
8. ಆಕಾಶ ಅಥವಾ ಸ್ವರ್ಗವೆಂದು (ಅದು ಎಂಟು ಅಂಶಗಳಿಂದ ಪಂಚೇದ್ರಿಯಗಳ ಕ್ರಿಯೆ ಮತ್ತು ಮೂರು ಒಳಗಿನ ಅಂಗಗಳಿಂದ ಆನಂದವನ್ನುಂಟು ಮಾಡುತ್ತದೆ);
9. ಸೂರ್ಯ ಅಥವಾ ಆದಿತ್ಯನೆಂದು (ಅವನು ಸ್ವಯಂ ತನ್ನ ಪ್ರಭೆಯ ಸಹಿತವಾಗಿ ಮೇಲಿನ ಎಂಟು ಅಂಶಗಳೊಂದಿಗೆ ಸಮಸ್ತ ಲೋಕಗಳು ಬೆಳಗುವಂತೆ ಮಾಡುತ್ತಾನೆ); ಮತ್ತು
10. ಪ್ರಜಾಪತಿ;

ಮೇಲೆ ತಿಳಿಸಿರುವ ಎಲ್ಲಾ ಒಂಬತ್ತು ರೀತಿಯಲ್ಲೂ ತನ್ನನ್ನು ಪ್ರಕಟಿಸಿಕೊಂಡರೂ ಸಹ, ಅವನು ಸ್ವಯಂ ತನ್ನ ಅತೀಂದ್ರಿಯ ಸ್ವರೂಪದಲ್ಲೇ ಬದ್ಧನಾಗಿರುತ್ತಾನೆ. ಹೀಗೆ ಯಜ್ಞದ ಸಾಂಕೇತಿಕ ಸ್ವರೂಪವನ್ನು ಸ್ಪಷ್ಟೀಕರಿಸಲಾಗಿದೆ.

ಅಸ್ಯ ವಸಂತೋ ಆಜ್ಯಂ ಆಸೀತ್ ಗ್ರೀಷ್ನ ಇಧ್ಮಃ ಶರದ್ ಹವಿಃ

ದೇವತೆಗಳು ತಾವು ತೊಡಗಿದ ಯಜ್ಞದಲ್ಲಿ, ಸ್ವಯಂ ಪುರುಷನು (ದೇವತೆಗಳ) ಯಜ್ಞದ ಬಲಿಪಶುವಾಗಿ ಸೇವಿಸಕ್ಪಟ್ಟಿದ್ದರಿಂದ, ಯಜ್ಞವು ವೈಶ್ವಿಕ ಮಹತ್ಚವುಳ್ಳದ್ದಾಗಿದೆ. ಶಥಪಥ ಬ್ರಾಹ್ಮಣದ 11.1.6.7 ದಲ್ಲಿ ಈ ಉಧೃತ ಭಾಗವನ್ನು ಒಳಗೊಂಡಿದೆ; ನಂತರ ಸಂವತ್ಸರದಲ್ಲಿ, ಪುರುಷನು ವ್ಯಕ್ತನಾದನು; ಅವನು ಪ್ರಜಾಪತಿಯಾಗಿದ್ದನು.

ಈ ಸಂವತ್ಸರದಲ್ಲಿ, ಯಾರು ಪ್ರಜಾಪತಿಯಾಗಿದ್ದನೋ, ವಾಸ್ತವವಾಗಿ ಅವನು ಯಜ್ಞ ಪುರುಷನೇ ಆಗಿದ್ದನು.

ಇಲ್ಲಿ ಸಂವತ್ಸರ ಮತ್ತು ಯಜ್ಞ ಗುರುತಿಸಲ್ಪಟ್ಟಿವೆ; ಮತ್ತು ಇವೆರಡೂ ಪುರುಷನೊಂದಿಗೆ ಗುರುತಿಸಲ್ಪಟ್ಟಿವೆ. ಶತಪಥ ಬ್ರಾಹ್ಮಣದ 8.4.1.22 ರಲ್ಲಿ  - "ಅದು ಸಮಸ್ತ ಜೀವಿಗಳು ಅಧಿಷ್ಠಾನಿಸಲ್ಪಟ್ಟ ಸಂವತ್ಸರವಾಗಿದ್ದಿತು", ಏಕೆಂದರೆ ಅವರು ಯಜ್ಞದಲ್ಲಿ ಮತ್ತು ಪುರುಷನಲ್ಲಿ ನೆಲೆಯಾಗಿದ್ದರುಸಂವತ್ಸರವು ಅಗ್ನಿಯೆಂದು ಮತ್ತು ಎಲ್ಲ ಋತುಗಳ ಅಧೀಶ್ವರನಾದ ಆದಿತ್ಯನೆಂದು ಹೇಳಲಾಗಿದೆ. ಸಂವತ್ಸರವು ಯಾಜ್ಞಿಕನಾಗಿದ್ದು ಋತುಗಳು ಅವನಿಗೆ ನೆರವಾಗುವುವು. ವಸಂತ ಋತುವು ಆಹುತಿಯಾಗಲ್ಪಟ್ಟ ಅಗ್ನಿಯ ಪ್ರಕಾಶಕನಾಗಿದ್ದಾನೆ; ಗ್ರೀಷ್ಮ ಋತುವು ಪ್ರಮುಖನಾದ ಅಗ್ನಿ- ನಿವೇದಕ (ಪುರೋಹಿತ-ಅಧ್ವರ್ಯು); ವರ್ಷ ಋತುವು ಗಾಯಕನು (ಉದ್ಗಾತೃ); ಹಾಗೂ ಶರತ್ಕಾಲವು ಯಜ್ಞದ ಕರ್ಮಾಚರಣೆಯ ಕರ್ತಾರವಾಗಿದೆ (ಬ್ರಹ್ಮ) (11.2.3.32). ಅದೇ ಗ್ರಂಥವು (11.2.7.1-5) ಸಂವತ್ಸರವನ್ನು ಯಜ್ಞವೆಂದು (ಸಂವತ್ಸರೋ ಯಜ್ಞಃ), ಋತುಗಳನ್ನು ಯಜ್ಞದ ಕಾರ್ಯವನ್ನು ನಿರ್ವಹಿಸುವ ಪುರೋಹಿತರೆಂದು; ಮಾಸಗಳನ್ನು ಯಜ್ಞದಲ್ಲಿ ಅರ್ಪಿಸಲ್ಪಡುವ ಆಹುತಿಯ ಸ್ವರೂಪವೆಂದು, ಪಕ್ಷಗಳನ್ನು (ಅರ್ಧ ಮಾಸ) ಹೋಮದ್ರವ್ಯಗಳನ್ನು ಇಡುವ ಪಾತ್ರೆಗಳೆಂದು ಮತ್ತು ಹಗಲು-ರಾತ್ರಿಗಳನ್ನು ಧಾರ್ಮಿಕ (ಸಾಂಪ್ರದಾಯಿಕ) ಮುಚ್ಚಳಗಳೆಂದು ಹೇಳಲಾಗಿದೆ.

ಯಜ್ಞದ ಸಫಲತೆಗೆ ನೆರವಾಗುವ ಮೂರು ಮುಖ್ಯ ಸಂಯೋಜಿತ ವಿವರಗಳೆಂದರೆ - "ಆಜ್ಯ" (ಕಾಯಿಸಿದ ತುಪ್ಪವು ಅಗ್ನಿಯನ್ನು ಭಗ್ಗನೆ ಹತ್ತಿಸಿ ಉಜ್ವಲವಾಗಿ ಬೆಳಗಿಸುತ್ತದೆ), "ಇಧ್ಮ" (ಯಜ್ಞ ಕುಂಡದ ಅಗ್ನಿಯು ಉರಿಯಲು ನೆರವಾಗುವ ಸಮಿತ್ತಿನ ಕಟ್ಟುಗಳು), .ಮತ್ತು "ಹವಿಸ್ಸು" (ಯಜ್ಞ ಕುಂಡದ ಅಗ್ನಿಯಲ್ಲಿ ಭಕ್ತಿಪೂರ್ವಕವಾಗಿ ಸುರಿಯಲಾಗುವ ಎಲ್ಲಾ ಹೋಮದ್ರವ್ಯಗಳು ಅಥವಾ ಪುರೋಡಾಶ ಎಂಬ ಹವಿಸ್ಸು). ಪ್ರಸ್ತುತ ಮಂತ್ರವು ಕೇವಲ ಮೂರು ಋತುಗಳನ್ನು ಕುರಿತು ನಮೂದಿಸುತ್ತದೆ; ವಸಂತ, ಗ್ರೀಷ್ಮ ಮತ್ತು ಶರದೃತುಗಳು ಅನುಕ್ರಮವಾಗಿ ಯಜ್ಞದ ಈ ಮೂರು ಅಂಶಗಳನ್ನು ಸಾಂಕೇತಿಸುತ್ತವೆ. ಸಾಮಾನ್ಯವಾಗಿ ಒಂದು ಋತುವು ಎರಡು ಮಾಸಗಳಿಂದ ಕೂಡಿದೆ, ಮತ್ತು ಒಂದು ಸಂವತ್ಸರದಲ್ಲಿ ಆರು ಋತುಗಳು ಇರುತ್ತವೆ.

ಶಥಪಥ ಬ್ರಾಹ್ಮಣ (2.2.3.9) ರಲ್ಲಿ ವಿವರಿಸುವಂತೆ, ಈ ಐದು ಋತುಗಳನ್ನು ದಿನದ ಅವಧಿಯಲ್ಲಿ ಸೂರ್ಯನ ಘಟ್ಟಗಳೆಂದು ನಮೂದಿಸುತ್ತದೆ. ಸೂರ್ಯನು ಉದಯಿಸಿದಾಗ, ಅದು ವಸಂತ ಮಾಸ. ಪೂರ್ವಾನ್ಹದಲ್ಲಿ ದೊಡ್ಡಿಯಿಂದ ಹಸುಗಳು ಮೇವಿಗೆ ಕಳಿಸಲ್ಪಡುವ ವೇಳೆಯು, ಗ್ರೀಷ್ಮ ಋತುವಾಗಿರುತ್ತದೆ. ಮಧ್ಯಾನ್ಹದ ವೇಳೆಯನ್ನು ವರ್ಷ ಋತುವೆಂದು ಹೇಳಲಾಗಿದೆ. ನಡು ಮಧ್ಯಾನ್ಹವನ್ನು ಶರದೃತುವೆಂದು ಕಲ್ಪಿಸಲಾಗಿದೆ. ಸೂರ್ಯಾಸ್ತದ ವೇಳೆಯೇ, ಹೇಮಂತ ಋತು. ಈ ಐದರ ಸಂಖ್ಯೆಯು ಧಾರ್ಮಿಕಾಚರಣೆಗಳ ಲ್ಲಿಯೂ ಮುಖ್ಯವಾದ ಅಂಶವೆಂದು ತೋರುತ್ತದೆ. ಶತಪಥ ಬ್ರಾಹ್ಮಣ 6.1.2.18 ರಲ್ಲಿ ಹೇಳುವಂತೆ, ಋತುಗಳ ಸಂಖ್ಯೆಯೂ ಯಜ್ಞ ವೇದಿಕೆಯ ಸಾಲುಗಳೂ ಸಹ ಐದು.

ಆದರೆ, ಮಂತ್ರವು ಕೇವಲ ಮೂರು ಋತುಗಳನ್ನು, ಅಂದರೆ ವಸಂತ, ಗ್ರೀಷ್ಮ ಮತ್ತು ಶರದೃತುಗಳ ಬಗ್ಗೆ ಮಾತ್ರ ಪ್ರಸ್ತಾಪಿಸುತ್ತದೆ. ಈ ಮೂರೂ ಋತುಗಳು ಮೂರು ದೇವತೆಗಳನ್ನು ಪ್ರತಿನಿಧಿಸುತ್ತದೆ (7.2.4.26).

ಆದ್ದರಿಂದ ಈ ಮೂರು ಋತುಗಳು ಯಜ್ಞಕ್ಕೆ ಸಂಬಂಧಿಸಿದಂತೆ ಕರ್ಮಾಚರಣೆಗಳನ್ನು ನೆರವೇರಿಸಲು ಸೂಕ್ತಕಾಲವೆಂದು ನಿಯಮಿಸಲಾಗಿದೆ. ತೈತ್ತರೀಯ ಸಂಹಿತೆ 4.4.11.1 ರ ಪ್ರಕಾರ ಇವುಗಳು ಯಜ್ಞಾಚರಣೆಯ ಉದ್ದೇಶಕ್ಕೆ ಅತ್ಯಂತ ಮಂಗಳಕರ ಮಾಸಗಳಾಗಿವೆ. ಬ್ರಾಹ್ಮಣರಿಗೆ ವಸಂತ ಋತುವು, ಕ್ಷತ್ರಿಯರಿಗೆ ಗ್ರೀಷ್ಮವು ಮತ್ತು ವೈಶ್ಯರಿಗೆ ಶರದೃತುವು ಯೋಗ್ಯಕಾಲ, ತೈ.ಬ್ರಾ (1.1.2.6) ಇತ್ಯಾದಿ.

ಪರ್ಯಾಯವಾಗಿ, ಇಲ್ಲಿ ತಿಳಿಸಲಾಗಿರುವ ಮೂರು ಋತುಗಳು ಆಹುತಿಯನ್ನು (ಸವನ),ಅರ್ಪಿಸಲು ದಿನದ ಮೂರು ವೇಳೆಗಳನ್ನು ಯುಕ್ತ ಕಾಲವೆಂದು ಸಂಕೇತಿಸುತ್ತವೆ. ಸೂರ್ಯನು (ಅಂದರೆ ಪುರುಷ ಅಥವಾ ಅಗ್ನಿಯನ್ನು ಪ್ರತಿನಿಧಿಸುವ) ಮೇಲಕ್ಕೆ ಏರುವ ಕಾಲವು, ಅಂದರೆ ಪೂರ್ವಾನ್ಹವು ವಸಂತ ಋತುವಾಗಿರುತ್ತದೆ; ಸೂರ್ಯನ ಬೇಗೆಯು ಸಮಸ್ತ ವಸ್ತುಗಳನ್ನು ದ್ರವರಹಿತವಾಗಿಸುವ (ಶುಷ್ಕ) ಕಾಲವು, ಅಂದರೆ ಮಧ್ಯಾನ್ಹವು ಗ್ರೀಷ್ಮ ಋತುವಾಗಿರುತ್ತದೆ; ನಡುರಾತ್ರಿ ಅಥವಾ ನಟ್ಟಿರುಳು ಶರತ್ಕಾಲವನ್ನು ಪ್ರತಿನಿಧಿಸುತ್ತದೆ. ಈ ಮೂರು ಕಾಲಗಳು ಅಂದರೆ ಪ್ರಾತಃ-ಸವನ, ಮಾಧ್ಯಂದಿನ-ಸವನ ಮತ್ತು ಸಾಯಂ-ಸವನಗಳು ಕರ್ಮಾಚರಣೆಯ ವೇಳೆಗಳಾಗಿವೆ.

ಮಂತ್ರ - 7 -ಸಂಸ್ಕೃತದಲ್ಲಿ :

ಸಪ್ತಾಸ್ಯಾಸನ್ ಪರಿಧಯಸ್ ತ್ರಿಃ ಸಪ್ತ ಸಮಿಧಃ ಕೃತಾಃ
ದೇವಾ ಯತ್ ಯಜ್ಞಂ ತನ್ವಾನಾ ಅಬದ್ ನನ್ ಪುರುಷಂ ಪಶುಂ

ಕನ್ನಡದಲ್ಲಿ :

ಏಳು ಧಾತುಗಳೆ ಪರಿಧಿ ಮೂರೇಳು ಸಮಿತ್ತುಗಳದಕೆ
ಪುರುಷನ ಬಿಗಿದರು ಪಶುವಾಗಿ ಸುರರೀ ಯಜ್ಞಕ್ಕೆ              

ವಿವರಣೆ :

ಸರ್ವಸೃಷ್ಟಿಗೆ ಮೊದಲು ಪುರುಷರೂಪನಾಗಿ ಉತ್ಪನ್ನನಾದ ಆ ಯಜ್ಞಸಾಧನರೂಪನಾದ ಪುರುಷನನ್ನು ಪಶುತ್ವಭಾವನೆಯಿಂದ ಯೂಪಸ್ತಂಭದಲ್ಲಿ ಕಟ್ಟಿ ಮಾನಸಿಕವಾದ ಯಜ್ಞದಲ್ಲಿ ಪ್ರೋಕ್ಷಿಸಿದರು. ಪಶುವಾಗಿ ಭಾವಿಸಲ್ಪಟ್ಟ ಆ ಪುರುಷನಿಂದಲೇ ದೇವತೆಗಳು (ಪ್ರಜಾಪತಿದೇವನ ಪ್ರಾಣ-ಇಂದ್ರಿಯಗಳು) ಮಾನಸಿಕವಾದ ಯಜ್ಞವನ್ನು ಆಚರಿಸಿದರು. ಸೃಷ್ಟಿಸಾಧನ ಯೋಗ್ಯರಾದ ಪ್ರಜಾಪತಿಯ ಪ್ರಾಣಾದಿಗಳ ರೂಪರಾದ ಸಾಧ್ಯರು ಮತ್ತು ಮಂತ್ರದ್ರಷ್ಟೃಗಳಾದ ಋಷಿಗಳು ಯಾರು ಉಂಟೋ ಅವರೆಲ್ಲರೂ ಸೇರಿ ಮಾನಸಿಕ ಯಜ್ಞವನ್ನು ಆಚರಿಸಿದರು.

ವ್ಯಾಖ್ಯಾನ :

ಈ ಮಂತ್ರವು ಆದಿಯಜ್ಞದ ಸಾಂಕೇತಿಕತೆಯೆಡೆಗೆ ನೋಡುತ್ತದೆ. ಸಕಲ ಸೃಷ್ಟಿಗೆ ಕಾರಣವಾದ ಈ ಆದಿಯಜ್ಞವು ಬ್ರಹ್ಮಾಂಡಗತ ಪುರುಷರೂಪದ ಪುರುಷನೊಂದಿಗೆ ಅನನ್ಯವಾಗಿದೆ.

ಇದರಲ್ಲಿ, ಅವರು ಸ್ವತಃ ಪುರುಷನನ್ನೇ ಅವಲಂಬಿಸಬೇಕಾಯಿತು. ಈ ಶಕ್ತಿಗಳಿಂದ ನಿರ್ಮಿಸಲ್ಪಟ್ಟ ಸೃಷ್ಟಿ ಕಾರ್ಯವು ಯಜ್ಞ ಸ್ವರೂಪವೇ ಆಗಿದ್ದಿತು. ಇದನ್ನು ಅನುಷ್ಟಾನಿಸಲು ತಮ್ಮ ಜನಕನಾದ ಪುರುಷನನ್ನೇ ಅವಲಂಬಿಸಿ ಅವನನ್ನೇ ಕಾಲ್ಪನಿಕವಾಗಿ ಯಜ್ಞ ಪಶುವನ್ನಾಗಿಸಿದರು.

ಯಜ್ಞದ ವರ್ಣನೆಯಲ್ಲಿ ಬರುವ ಏಳು ಮತ್ತು ಇಪ್ಪತ್ತೊಂದು ಸಂಖ್ಯೆಗಳು ವಿಶೇಷ ಅರ್ಥವನ್ನೊಳಗೊಂಡಿದೆ.

ಈ ಮಂತ್ರದಲ್ಲಿ ಬಳಸಲಾದ ಪಾರಿಭಾಷಿಕ ಪದಗಳಾದ "ಪರಿಧಿ"(ಸಂಖ್ಯೆ ಏಳು) ಮತ್ತು "ಸಮಿಧ" (ಸಂಖ್ಯೆ 21)ಗಳ ವಿಶೇಷಾರ್ಥವನ್ನು ಗಮನಿಸೋಣ. ಪರಿಧಿ (ಪರಿ = ಸುತ್ತಲೂ, ಧಿ = ಇಡಲಾಗುವ) - ಅಗ್ನಿಕುಂಡದ ರಕ್ಷಣೆಗಾಗಿ ಸುತ್ತಲೂ ಮಂತ್ರಸಹಿತವಾಗಿ ಪವಿತ್ರ ದರ್ಭೆಗಳು ಅಥವಾ ಒಣಗಿದ ಕಡ್ಡಿಗಳನ್ನು ಕ್ರಮವಾಗಿ ಇರಿಸುವ ವಿಧಾನವನ್ನು ಸೂಚಿಸುತ್ತದೆ. ಯಜ್ಞ ಕುಂಡದ ಸುತ್ತಲಿನ ಈ ಸರಹದ್ದು ಯಜ್ಞದ ವಿಧಿಯನ್ನು ಭಂಗಗೊಳಿಸಲು ಯತ್ನಿಸುವ ಆಸುರೀ ಶಕ್ತಿಗಳನ್ನು ಹೊಡೆದೋಡಿಸುವುದಕ್ಕಾಗಿ. ಈ ವಿಧದ ರಕ್ಷಣಾ ಸಾಧನಗಳನ್ನು ಯಜ್ಞಕುಂಡದ ಮೂರು ದಿಕ್ಕುಗಳಲ್ಲಿ (ಪಶ್ಚಿಮ, ಉತ್ತರ ಹಾಗೂ ದಕ್ಷಿಣ), ಇಡುವುದು ಸಂಪ್ರದಾಯ. ಪೂರ್ವದಿಕ್ಕಿನಲ್ಲಿ ರಕ್ಷಣೆಯ ಅಗತ್ಯವಿರುವುದಿಲ್ಲ, ಏಕೆಂದರೆ ಆ ದಿಕ್ಕಿನಲ್ಲಿ ಉದಯವಾಗುವ ಸೂರ್ಯನೇ ತಾನೇ ಆಸುರೀ ಶಕ್ತಿಗಳನ್ನು ಹೊಡೆದಟ್ಟಿ ಯಜ್ಞಾಚರಣೆಯನ್ನು ರಕ್ಷಿಸುತ್ತಾನೆ ಎಂಬ ನಂಬಿಕೆ.

ಎರಡನೇ ಪದ "ಸಮಿತ್ತು" ಎಂದರೆ "ಪ್ರಕಾಶಮಾನವಾಗಿ ಉರಿಯುವುದು" ಎಂಬ ಅರ್ಥವನ್ನು ಹೊಂದಿದ್ದು, ಪವಿತ್ರವೆಂದು ಪರಿಗಣಿಸಲಾದ ಕೆಲವು ಜಾತಿಯ ಮರಗಳಿಂದ (ಅಶ್ವತ್ಥ, ಪಲಾಶ ಇತ್ಯಾದಿ) ಸಂಗ್ರಹಿಸಿದ ಒಣಗಿದ ಕಡ್ಡಿಗಳು ಎಂದು ಸೂಚಿಸುತ್ತದೆ. ಈ ಕಡ್ಡಿಗಳಿಂದ ಯಜ್ಞಕುಂಡದ ಅಗ್ನಿಯು ಉರಿಯುವುದು. ಇವುಗಳನ್ನು ನಿಯಮಿತ ಸಂಖ್ಯೆಯಲ್ಲಿ ಮಂತ್ರಗಳ ಪಠಣದೊಂದಿಗೆ ನಿಯಮಾನುಸಾರವಾಗಿ ಅಗ್ನಿಕುಂಡದಲ್ಲಿ ಹಾಕಲಾಗುವುದು. ಯಜ್ಞಾಚರಣೆಯಲ್ಲಿ ಇದು ಮುಖ್ಯವಾದ ಅಂಶ. ಸಮಿತ್ತುಗಳು ಎಲ್ಲಾ ಸಂದರ್ಭದಲ್ಲೂ ಗೊತ್ತಾದ ನಿಯಮಿತ ಸಂಖ್ಯೆಯಲ್ಲಿದ್ದು ಅವುಗಳಿಗೆ ತುಪ್ಪವನ್ನು ಸವರಿರುತ್ತಾರೆ. ಆದರೆ ಇಲ್ಲಿ ಯಜ್ಞವು ಮಾನಸಿಕ ರೂಪದಲ್ಲಿರುವುದು. ಅದು ಸಂಕಲ್ಪ ಹಾಗೂ ಉದ್ದೇಶಗಳನ್ನೊಳಗೊಂಡಿದ್ದು ಅದರಲ್ಲಿ ಇಷ್ಟೇ ಸಮಿತ್ತುಗಳು, ಪರಿಧಿಗಳು ಇರಲೇಬೇಕೆಂಬ ನಿಯಮ ಇರುವುದಿಲ್ಲ. ಇಲ್ಲಿ ಎಲ್ಲವೂ ಸಾಂಕೇತಿಕವಾದದ್ದು. ಅವುಗಳ್ಯ ಕೇವಲ ತಮ್ಮ ಇಂಗಿತಗಳಿಂದಾಗಿ ಮಹತ್ವಪೂರ್ಣವಾಗಿದೆ.

ಸಾಯಣರ ಪ್ರಕಾರ, ಏಳು ಪರಿಧಿಗಳು ಏಳು ಛಂದಸ್ಸುಗಳನ್ನು ಪ್ರತಿನಿಧಿಸುತ್ತವೆ. ಈ ಛಂದಸ್ಸುಗಳೇ ವೇದದ ಸಾಹಿತ್ಯದಲ್ಲಿ ಹರಡಿ, ಅದನ್ನು ಕಾಪಾಡುತ್ತಿವೆ. ಛಂದಸ್ಸು ಎಂದರ ಅಡಗಿಸಿಡು ಮತ್ತು ರಕ್ಷಿಸು ಎಂದರ್ಥ. ಪರ್ಯಾಯವಾಗಿ, ಪರಿಧಿ ಎಂದರೆ ಸುತ್ತುವರೆದಿರುವ ಕಡ್ಡಿಗಳು ಎಂದು ಸೂಚಿಸುತ್ತದೆ. ಹಿಂದೆ ಸೂಚಿಸಿದಂತೆ ಎಲ್ಲಾ ಐದು ವೇದಿಕೆಗಳ ಪೂರ್ವ ದಿಕ್ಕನ್ನು ಹೊರತುಪಡಿಸಿ ಉಳಿದ ಮೂರು ದಿಕ್ಕುಗಳು ದರ್ಭೆಯಿಂದ ಆವರಿಸಿಕೊಂಡಿವೆ. ಹೀಗೆ ಆಹವನೀಯ ಹಾಗೂ ಉತ್ತರವೇದಿಗಳು ಆರು ದರ್ಭೆಯ ಪರಿಧಿಗಳನು ಹೊಂದಿರುತ್ತವೆ ಮತ್ತು ಪೂರ್ವ ದಿಕ್ಕಿಗೆ ಸೂರ್ಯನೇ ಏಳನೇ ಪರಿಧಿ. ಯಜುರ್ವೇದದ ವಾಜಸನೇಯ ಸಂಹಿತೆಯ 17.79 ರಲ್ಲಿ ಈ ವಿಧದ ಸಮಂಜಸ ಸೂಚನೆಗಳನ್ನು ಗಮನಿಸಬಹುದು -

"ಸಪ್ತತೇ ಅಗ್ನೇ ಸಮಿಧಃ ಸಪ್ತಜಿಹ್ವಾಃ ಸಪ್ತsಋಷಯಃ ಸಪ್ತಧಾಮಾ ಪ್ರಿಯಾಣಿ |
ಸಪ್ತ ಹೋತ್ರಾಃ ಸಪ್ತಧಾ ತ್ವಾ ಯಜಂತಿ ಸಪ್ತಯೋನೀರಾಪೃಣಸ್ವಘೃತೇನ ಸ್ವಾಹಾ ||"

ಪವಿತ್ರ ಅಗ್ನಿಗೆ (ಸಮಿಧ) ಏಳು ಪ್ರಕಾರದ ಇಂಧನಗಳು, ಏಳು ಪ್ರಜ್ವಲಿಸುವ ಜ್ವಾಲೆಗಳು (ಜಿಹ್ವಾಃ - ಕಾಲೀ, ಕರಾಲೀ, ಮನೋಜವಾ ಇತ್ಯಾದಿ ಹೆಸರುಳ್ಳ ನಾಲಗೆಗಳು), ಏಳು ಋಷಿಗಳು (ಋಷಿ : ಐದು ಪ್ರಮುಖ ಪ್ರಾಣಶಕ್ತಿಗಳಾದ ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನಗಳೊಂದಿಗೆ ಕಿರಿಯ ಪ್ರಾಣ ಶಕ್ತಿಗಳು ದೇವದತ್ತ ಮತ್ತು ಧನಂಜಯ), ಏಳು ಮಮತೆಯ ವಾಸಸ್ಥಾನಗಳು (ಧಾಮ : ಜನ್ಮ, ಸ್ಥಾನ ಅಥವಾ ನೆಲೆ, ನಾಮ ಅಥವಾ ಅಭಿದಾನ, ಧರ್ಮ ಅಥವಾ ಋಜು, ಬದುಕಿನ ನಿಯಮ, ಅರ್ಥ ಅಥವಾ ಲೌಕಿಕ ಸಂಪತ್ತುಗಳು, ಕಾಮ ಅಥವಾ ಇಂದ್ರಿಯ ಸುಖ, ಮೋಕ್ಷ ಅಥವಾ ಜನನ-ಮರಣಗಳಿಂದ ಮುಕ್ತಿ) (ಬಂಧನದಿಂದ ಮುಕ್ತಿ), ಏಳು ಹವಿಸ್ಸುಗಳು (ಹೋತೃ , ಋತುಗಳು : ವಸಂತ, ಗ್ರೀಷ್ಮ, ಶರತ್, ಹೇಮಂತ ಮತ್ತು ಶಿಶಿರ); ಏಳು ವ್ಯಾವಹಾರಿಕ ಮೂಲಗಳು (ಯೋನಿ: ಮಹತ್ತು ಮತ್ತು ಅಹಂಕಾರಗಳೊಂದಿಗೆ ಐದು ಮಹಾಭೂತಗಳು). ಇತರ ಪ್ರಸ್ತಾವನೆಗಳು ಏಳು ಪ್ರಕಾರದ ವಾಕ್ಕುಗಳು (ಧೇನುಗಳು), ಏಳು ಋಷಿಗಳು (ಅಂಗೀರಸ ಋಷಿಗೆ ಸಂಬಂಧಿಸಿದ ಋಷಿಗಳು), ಏಳು ನದಿಗಳು ಮತ್ತು ಸೂರ್ಯನ ಏಳು ಕಿರಣಗಳು, ಇವುಗಳನ್ನು ಕುರಿತಾಗಿದೆ.

ಆದಿಯಜ್ಞವನ್ನು ಆಚರಿಸಬೇಕೆಂದು ಸಂಕಲ್ಪಿಸಿದ ದೇವತೆಗಳು ಪ್ರಜಾಪತಿಯ ಪರಿಣಾಮಕಾರಿ ಪ್ರಾಣ-ಪ್ರವಾಹಗಳು ಮಾತ್ರ ಆಗಿದ್ದಾರೆ.

ಸಾಯಣರು ತಿಳಿಸುವಂತೆ, ಇಪ್ಪತ್ತೊಂದು ಸಂಖ್ಯೆಯ ಸಮಿತ್ತುಗಳ ಬಗ್ಗೆ, ಏಳರ ಮೂರರಷ್ಟು (ತ್ರಿಗುಣೀ-ಕೃತ-ಸಪ್ತ-ಸಂಖ್ಯಾಃ), ಈ ಸಂಖ್ಯೆಯು ಸಂವತ್ಸರದ ಹನ್ನೆರಡು ಮಾಸಗಳನ್ನು, ಐದು ಋತುಗಳನ್ನು (ಶಿಶಿರ ಋತುವನ್ನು ಹೊರತುಪಡಿಸಿ), ಮೂರು ಲೋಕಗಳನ್ನು (ಭೂಮಿ, ಅಂತರಿಕ್ಷ , ಆಕಾಶ), ಸೂರ್ಯನೊಂದಿಗೆ ಪ್ರತಿನಿಧಿಸುತ್ತದೆ. ಮತ್ತೊಂದು ವಿವರಣೆಯ ಪ್ರಕಾರ ಸಂಖ್ಯೆ ಇಪ್ಪತ್ತೊಂದು, ಇಪ್ಪತ್ತೊಂದು ತತ್ವಗಳನ್ನು (ಸತ್ಯದ ಅಂಶಗಳು), ಹತ್ತು ಜ್ಞಾನ-ಕರ್ಮೇಂದ್ರಿಯಗಳನ್ನು (ಇಂದ್ರಿಯ), ಐದು ಪಂಚಭೂತಗಳನ್ನು, ಐದು ಪ್ರಾಣಶಕ್ತಿಗಳನ್ನು ಮತ್ತು ಮನಸ್ಸು - ಇವುಗಳಿಗೆ ಅನ್ವಯಿಸುತ್ತದೆ. ಪರ್ಯಾಯ ಪದಗಳಲ್ಲಿ, ತತ್ವಗಳು ಆದಿಸ್ವರೂಪ ಹಾಗೂ ಅವ್ಯಕ್ತ ಸ್ವರೂಪವಾಗಿವೆ, (ಪ್ರಕೃತಿ), ಅಭಿವ್ಯಕ್ತತೆಯ ಮೊದಲ ಚಾಲಕ ಶಕ್ತಿ (ಮಹತ್ ತತ್ವ), ಅಹಂಕಾರ, ಸ್ಥೂಲ ಪಂಚಭೂತಗಳು, ಸೂಕ್ಷ್ಮ ಪಂಚಭೂತಗಳು, ಪಂಚ ಗ್ರಹಣೇಂದ್ರಿಯಗಳು ಮತ್ತು ಗುಣದ ಮೂರು ಮೂಲಭೂತ ತಂತುಗಳು (ಗುಣ).

ಮಂತ್ರ- 8 -ಸಂಸ್ಕೃತದಲ್ಲಿ :

ತಂ ಯಜ್ಞಂ ಬರ್ಹಿಷಿ ಪ್ರೌಕ್ಷನ್ ಪುರುಷಂ ಜಾತಂ ಅಗ್ರತಃ
ತೇನ ದೇವಾ ಅಯಜಂತ ಸಾಧ್ಯಾ ಋಷಯಃ ಚ ಯೇ

ಕನ್ನಡದಲ್ಲಿ :

ಹವಿ ಚಿಮುಕಿಸಿದರು ಯಜ್ಞದಿ ಮೊದಲಾಹುತಿ ಮೊದಲುದಿಸಿದ ಪುರುಷ
ಯಾಗಮಾಡಿದರು ಸುರರು ಸಾಧ್ಯರು ಋಷಿಗಳೇನು ಹರುಷ    

ವಿವರಣೆ :

ಸರ್ವಾತ್ಮಕನಾದ ಆ ಪುರುಷನೇ ಆ ಯಜ್ಞದಲ್ಲಿ ಹೋಮಮಾಡಲ್ಪಟ್ಟಿದ್ದರಿಂದ ಅವನು ಸರ್ವಹುತನೆನಿಸಿದನು. ಆ ಯಜ್ಞದಿಂದ ಪೃಷದಾಜ್ಯವು (ದಧಿ-ಆಜ್ಯ ಮುಂತಾದ ಭೋಗ್ಯಪದಾರ್ಥ ಸಮೂಹವು) ಸಂಪಾದಿತವಾಯಿತು. ಅಂತೆಯೇ (ಆ ಯಜ್ಞದಿಂದ) ವಾಯುದೇವತಾಕವಾದ ಪಶುಗಳನ್ನೂ ಅರಣ್ಯದಲ್ಲಿ ವಾಸಮಾಡುವ ಪಶುಗಳನ್ನೂ ಸೃಷ್ಟಿಸಿದರು. ಗ್ರಾಮದಲ್ಲಿ ಯಾವ ಪಶುಗಳು ಇರುತ್ತವೆಯೋ ಅವುಗಳನ್ನೂ ಸೃಷ್ಟಿಸಿದರು.

ವ್ಯಾಖ್ಯಾನ :

ತಂ ಯಜ್ಞಂ ಬರ್ಹಿಷಿ ಪ್ರೌಕ್ಷನ್ ಪುರುಷಂ ಜಾತಂ ಅಗ್ರತಃ

ಇಲ್ಲಿ ಬಣ್ಣಿಸಲಾಗಿರುವ ಪುರುಷನು ಸೃಷ್ಟಿಯ ಕಾರ್ಯಾಚರಣೆಯು ಪ್ರಾರಂಭವಾಗುವ ಮೊದಲೇ ಪ್ರಕಟವಾಗಿದ್ದನು ಹಾಗೂ ಅವನು ಯಜ್ಞಪುರುಷನೊಂದಿಗೆ ಅನನ್ಯವಾಗಿದ್ದಾನೆ.

ಬರ್ಹಿ ಪದವು ಅಧಿ-ಯಜ್ಞ ಎಂಬ ನಿಶ್ಚಿತ ಅರ್ಥವನ್ನು ಹೊಂದಿದೆ. ಯಜ್ಞದಲ್ಲಿ ವಿನಿಯೋಗಿಸುವ ದ್ರವ್ಯಪದಾರ್ಥಗಳನ್ನು (ಸಾಧನೆಗಳು, ಪಾತ್ರೆಗಳು ಅಥವಾ ಯಜ್ಞಪಶು) ದರ್ಭೆಯಲ್ಲಿ ಹೆಣೆದ ಚಾಪೆಗಳ ಮೇಲೆ ಮೂರು ಪದರಗಳಲ್ಲಿ ಸ್ಥಾಪಿಸಬೇಕು. ಇದಕ್ಕಾಗಿ ದರ್ಭೆಯನ್ನು ನಿಯಮಿತ ಪರಿಮಾಣದಲ್ಲಿ ಛೇದಿಸಿರಬೇಕು. ಮೂರು ಪದರಗಳು ಜನನಿ, ಜನಕ ಹಾಗೂ ಪುತ್ರರನ್ನು ಪ್ರತಿನಿದ್ಜಿಸುತ್ತದೆಂಬ ಸಾಂಕೇತಿಕತೆ ಇದೆ. ಶುದ್ಧೀಕರಿಸಲಾದ ದರ್ಭಾಸನದ ಮೇಲೆ, ಬಲಿಯಾಗಿ ಅರ್ಪಿಸುವ ಯಜ್ಞ ಪಶುವು (ಪುರುಷನು) ದೇವತೆಗಳ ಸೃಷ್ಟಿಯಾಗುವ ಮೊದಲೇ ವ್ಯಕ್ತನಾಗಿದ್ದನು.

ತೇನ ದೇವಾ ಅಯಜಂತ ಸಾಧ್ಯಾ ಋಷಯಃ ಮೇ

ಯಾವ ಆ ಪುರುಷನು ಯಜ್ಞದ ಸ್ವರೂಪನೋ ಅಥವಾ ಯಜ್ಞಪುರುಷನ ಅವತಾರವಾಗಿದ್ದಾನೆಯೋ, ದೇವತೆಗಳು, ಸಾಧ್ಯರು ಮತ್ತು ಋಷಿಗಳು ಅವನನ್ನು ಹೋಮದ್ರವ್ಯವೆಂದು ಕಲ್ಪಿಸಿ ಯಜ್ಞವನ್ನು ಅನುಷ್ಠಾನ ಮಾಡಿದರು.

ಯಜ್ಞದ ಆಚರಣೆಗೆ ಕತೃವಿನ ಅಗತ್ಯವಿರುತ್ತದೆ. ಅವರು ದೇವತೆಗಳಾಗಿದ್ದರು. ಯಜ್ಞಕ್ಕೆ ಅರ್ಪಿಸುವ ದ್ರವ್ಯಪದಾರ್ಥಗಳ ಅವಶ್ಯಕತೆಯಿರುತ್ತದೆ ಮತ್ತು ಅದು ಪುರುಷ. ದೇವತೆಗಳು ಸ್ವಯಂ ಪ್ರಕಾಶವುಳ್ಳವರು, ಉಜ್ವಲ ಬೆಳಕನ್ನುಂಟು ಮಾಡುವ ನಿಯೋಗಿಗಳು, ದಾನ ಸ್ವರೂಪರು ಹಾಗೂ ಆಕಾಶ ನಿವಾಸಿಗಳು. ಅವರು ಕೈಗೊಳ್ಳುತ್ತಿರುವ ಯಜ್ಞವು ಮಾನಸಿಕವಾಗಿತ್ತು.

ದೇವತೆಗಳಲ್ಲಿ ಪ್ರಥಮರಾದ ಇವರನ್ನು ಸಾಧ್ಯರೆಂದು ಕರೆಯಲಾಗಿದೆ. ಸಾಧ್ಯ ಪದವನ್ನು ಸಾಧಿಸಬೇಕಾದ, ನಿರ್ವಹಿಸಬೇಕಾದ ಎಂದು ಅರ್ಥೈಸಬಹುದು. ಸಾಧ್ಯರನ್ನು ಭೂಮಿಯ ಮೇಲೆ ಆದರೆ ಆಕಾಶದ ಕೆಳಗಿರುವ ಮಧ್ಯ- ಲೋಕ (ಭುವರ್-ಲೋಕ)ದಲ್ಲಿ ನೆಲಸಿರುವ ಒಂದು ವರ್ಗದ ಜೀವಿಗಳೆಂದು ಪರಿಗಣಿಸಲಾಯಿತು. ಆದರೆ ಮೇಲಿನ ಮಂತ್ರದಲ್ಲಿ ವ್ಯಕ್ತಿಯ ಉದ್ದೇಶಿತ ಕಾರ್ಯಗಳನ್ನು ಸಫಲಗೊಳಿಸುವ ಶಕ್ತಿಗಳು ಎಂಬರ್ಥದಲ್ಲಿ ಸಾಧ್ಯರನ್ನು ಬಳಸಲಾಗಿದೆ.

ಅವರು ಪ್ರಜಾಪತಿಯ ಶರೀರದಲ್ಲಿ ಅಂತರ್ಗತರಾಗಿದ್ದರು ಮತ್ತು ಸಮಸ್ತ ಸೃಷ್ಟಿಕಾರ್ಯಕ್ಕೆ ಅಗತ್ಯವಾಗಿದ್ದ ಅಮರತ್ವ ಹಾಗೂ ಪರಿಶುದ್ದತೆಗಳನ್ನು ಒದಗಿಸಿದರು. ಸಾಧ್ಯರ ಇರುವಿಕೆಯಿಂದಲೇ ಪ್ರಜಾಪತಿಗೆ ಸೃಷ್ಟಿಸಲು ಸಾಧ್ಯವಾಯಿತು ಹಾಗೂ ಅವರು ಅವನನ್ನು ಸಾಧ್ಯನನ್ನಾಗಿ ಮಾಡಿದರು.

ಋಷಯಃ ಪದವು ಸಾಧ್ಯಾ ಪದದ ಸಮಾನಾರ್ಥವನ್ನು ಹೊಂದಿದೆ. ಸಾಮಾನ್ಯ ಅರ್ಥದಲ್ಲಿ ಅದು ಋಷಿಗಳು, ಮುನಿಗಳು ಅಥವಾ ಜ್ಞಾನಿಗಳು ಎಂದಾಗುತ್ತದೆ.

ಆದಿಯಲ್ಲಿ, ಕೇವಲ ಅವ್ಯಕ್ತ ದೆಸೆಯು ಮಾತ್ರ ಅಸ್ತಿತ್ವದಲ್ಲಿತ್ತು. ಈ ಅವ್ಯಕ್ತ ದೆಸೆಯೆಂದರೆ ಸಹಜವಾಗಿ ಋಷಿಗಣವೇ ಆಗಿತ್ತು. ಪ್ರಾರಂಭದಲ್ಲಿ ಅವರು ಅಸ್ತಿತ್ವದಲ್ಲಿರಲಿಲ್ಲ. ಅವರು ಶ್ರಮ ಮತ್ತು ತಪಸ್ಸಿನ ಮೂಲಕ ತಮ್ಮನ್ನು ತಾವು ಧರಿಸಿಕೊಂಡರು. ಹೀಗಾಗಿ ಅವರನ್ನು ಋಷಿಗಳೆಂದು ಕರೆಯಲಾಯಿತು.

ಯಾವುದು ಈ ಪ್ರಾಣಶಕ್ತಿಗಳ ನಡುವೆ ಇತ್ತೋ ಅದು ಇಂದ್ರನ ಸ್ವರೂಪದ ಹಾಗಿತ್ತು. ಅದು ತನ್ನ ಅಸಾಧಾರಣ ಸಾಮರ್ಥ್ಯದಿಂದ ತಾನು, ಇದ್ದಲ್ಲಿಂದಲೇ, ಉಳಿದ ಎಲ್ಲ ಪ್ರಾಣಶಕ್ತಿಗಳನ್ನು ಸಚೇತನಗೊಳಿಸುತ್ತದೆ; ಇಂದ್ರನೆಂದು ಅದರ ನಿಗೂಢವಾದ ಹೆಸರು. ಹೀಗಾಗಿ ಏಳು ಪುರುಷರು ಪ್ರಾಣಶಕ್ತಿಗಳಿಂದ ಪ್ರಾದುರ್ಭವಿಸಿದರು.

ನಂತರ ಏಳು ಪ್ರಾಣಶಕ್ತಿಗಳು ಸಮಾಲೋಚಿಸಿದವು, "ಪುರುಷರು ಈ ಪ್ರಕಾರವಾಗಿ ಇರುವುದರಿಂದ, ನಾವು ಸೃಷ್ಟಿಸಲಾರೆವು. ಈ ಏಳು ಪುರುಷರಿಂದ ನಾವು ಒಬ್ಬ ಪುರುಷನನ್ನು ನಿರ್ಮಾಣ ಮಾಡೋಣ." ನಂತರ ಅವರು ಏಳು ಪುರುಷರಿಂದ ಒಬ್ಬ ಪುರುಷನನ್ನು ನಿರ್ಮಾಣ ಮಾಡಿದರು. ಹೊಕ್ಕಳಿನಿಂದ ಮೇಲೆ ಇಬ್ಬರು ಪುರುಷರನ್ನು ಹಾಗೂ ಕೆಳಗೆ ಇಬ್ಬರನ್ನು ಮತ್ತು ಎರಡೂ ಪಾರ್ಶ್ವಗಳಲ್ಲಿ ಒಬ್ಬೊಬ್ಬ ಪುರುಷರನ್ನು ನಿರ್ಮಾಣಮಾಡಿ ಕಡೆಗೆ ಏಳನೇ ಪುರುಷನು ಉಳಿದ ಆರು ಪುರುಷರಿಗೆ ಆಧಾರವಾಗಿ ನೆರವಾದನು.

ಈಗ ಈ ಎಲ್ಲಾ ಏಳು ಪುರುಷರ ಯಾವ ಸಿರಿ, ಮಹಿಮೆ ಮತ್ತು ಸತ್ವಗಳಿದ್ದವೋ ಅವುಗಳು ಮೇಲ್ಮುಖವಾಗಿ ಸಂಚಿತಗೊಂಡು ಅದು ಶಿರಸ್ಸಾಯಿತು ಹಾಗೂ ಎಲ್ಲಾ ಪ್ರಾಣಶಕ್ತಿಗಳು ಈ ಭಾಗದಲ್ಲಿ ಆಸರೆ ಪಡೆದವು. ಈ ರೀತಿಯಲ್ಲಿ ಶರೀರವನ್ನು ಎಲ್ಲದರ ಬಿಂದುಪಥವೆಂದು ಕರೆಯಲಾಗಿದೆ.

ಈ ಸಂಯುಕ್ತ ಪುರುಷನು ಸಮಸ್ತ ಜೀವಿಗಳ ಪಾಲಕ ಮತ್ತು ಸೃಷ್ಟಿಕರ್ತನಾದ ಪ್ರಜಾಪತಿಯಾದನು. ಈ ಪ್ರಜಾಪತಿಯೇ ಯಜ್ಞಾಚರಣೆಗಳನ್ನು ನಿರ್ವಹಿಸುವ ಅಗ್ನಿಸ್ವರೂಪನು.

ಈ ಪ್ರಜಾಪತಿಯು ಸಮಸ್ತ ಜೀವಿಗಳನ್ನು ಸೃಷ್ಟಿಸಿದ ನಂತರ ಊರ್ಧ್ವಮುಖನಾಗಿ ಮೇಲೇರಿ ಸೂರ್ಯನ ಸಾಮ್ರಾಜ್ಯದಲ್ಲಿ ಆರೋಹಿಸಿದನು. ಇದಾದನಂತರ ಇಲ್ಲಿ ಹವಿಸ್ಸಾಗಿ ಅರ್ಪಿಸುವಂಥ ವಸ್ತುಗಳು ಯವುದೂ ಇರಲಿಲ್ಲವಾದ್ದರಿಂದ ದೇವತೆಗಳು ಈ ಪ್ರಜಾಪತಿಯನ್ನು ಅವರೋಹಿಸಿ ಅವನನ್ನು ಹವಿಸ್ಸನ್ನಾಗಿ ಮಾಡಿದರು.

ಮಂತ್ರ - 9 -ಸಂಸ್ಕೃತದಲ್ಲಿ :

ತಸ್ಮಾತ್ ಯಜ್ಞಾತ್ ಸರ್ವಹುತಃ ಸಂಭೃತಂ ಪೃಷತ್- ಆಜ್ಯಂ
ಪಶೂನ್ ತಾನ್ ಚಕ್ರೇ ವಾಯವ್ಯಾನ್ ಆರಣ್ಯಾನ್ ಗ್ರಾಮ್ಯಾಃ ಚ ಯೇ

ಕನ್ನಡದಲ್ಲಿ :

ಎಲ್ಲವ ಭುಜಿಸಿದ ಯಜ್ಞನಿಂದ ಉಂಟಾಯಿತು ತುಪ್ಪವು ಮೊಸರು
ಕಾಡಿನ ನಾಡಿನ ಪಶುಗಳಾದವು ಎಲ್ಲಕು ಕಾರಣವಾಯು    

ವಿವರಣೆ :

ಎಲ್ಲವನ್ನೂ ಆಹುತಿಯಾಗಿಸಿಕೊಂಡ ಈ ಯಜ್ಞದಿಂದ ಕೆನೆಗಟ್ಟಿರುವ ಅಥವಾ ಹೆಪ್ಪುಗಟ್ಟಿರುವ ತುಪ್ಪವು ಕ್ರೋಢೀಕರಿಸಲ್ಪಟ್ಟಿತು; ಮತ್ತು ಸಮಸ್ತ ಪಕ್ಷಿಗಳು, ಕಾಡಿನ ಹಾಗೂ ಸಾಧು ಪ್ರಾಣಿಗಳು ಸೃಷ್ಟಿಸಲ್ಪಟ್ಟವು.

ವ್ಯಾಖ್ಯಾನ :

ತಸ್ಮಾತ್ ಯಜ್ಞಾತ್ ಸರ್ವಹುತಃ

ಯಾವ ಯಜ್ಞದಲ್ಲಿ ಸಮಗ್ರ ಅಸ್ತಿತ್ವದ ಸಂಕೇತವಾದ ಪುರುಷನು ಅರ್ಪಿಸಲ್ಪಟ್ಟನೋ, ಅದನ್ನು ಸರ್ವಹುತ್ ಅಥವಾ ಸರ್ವ-ಮೇಧ ಅಥವಾ ಪುರುಷ-ಮೇಧವೆಂದು ಕರೆಯಲಾಯಿತು. (ಸರ್ವಾತ್ನಕಃ ಪುರುಷೋ ಯಸ್ಮಿನ್ ಯಜ್ಞೇ ಹೂಯತೇ ಸೋಯಂ ಸರ್ವಹುತ್). ಈ ಯಜ್ಞವೂ ಸಹ ಮಾನಸಿಕ ಸ್ವರೂಪದ್ದಾಗಿತ್ತು. (ಮಾನಸಾದ್ ಯಜ್ಞಾತ್).

ಶಥಪಥ ಬ್ರಾಹ್ಮಣ ಪ್ರಕಾರ, ಇದು ಹತ್ತು ದಿನಗಳ ಕಾಲಾವಧಿಯ ಯಜ್ಞವಾಗಿದೆ. ಕೊನೆಯ ದಿನದಲ್ಲಿ ನಡೆಯುವ ವಿಸ್ತೃತ ಸಮಾರಂಭದಲ್ಲಿ "ವಿಶ್ವ-ಜಿದ್-ಅತಿ-ರಾತ್ರ" ಆಚರಣೆಯ ಪ್ರಯೋಜನವೆಂದರೆ ಸಾಧಕನು ತಾನು ಬಯಸಿದ ಸಮಸ್ತ ವಸ್ತುಗಳನ್ನು ಪಡೆಯುತ್ತಾನೆ. ಏಳನೆಯ ದಿನದ ಕರ್ಮವೂ ಪ್ರಧಾನವಾಗಿರುತ್ತದೆ. ಏಕೆಂದರೆ ಈಗಲೇ ಸರ್ವವೂ ಸಮರ್ಪಿಸಲ್ಪಡುತ್ತದೆ - ಸೃಷ್ಟಿಕರ್ತನಿಂದ ಕಲ್ಪಿಸಲ್ಪಟ್ಟ ಎಲ್ಲಾ ದೇವತೆಗಳಲ್ಲದೇ ಅವರಿಗೆ ಸಂಬಂಧಿಸಲ್ಪಟ್ಟ ಎಲ್ಲಾ ಚೇತನಾಚೇತನ ವಸ್ತುಗಳು. ಈ ರೀತಿಯಲ್ಲಿ ಸರ್ವಹುತಃ ಅಥವಾ ಸರ್ವಹೋಮವೆಂಬ ಅಂಕಿತವು ಸಾರ್ಥಕವಾಗುತ್ತದೆ.

ಮುಂದುವರೆದು ಶ.ಬ್ರಾ.13..1.1 ರಲ್ಲಿ ವಿವರಿಸಿರುರುವಂತೆ - ಸ್ವಯಂ-ಭೂಃ, ಬ್ರಹ್ಮನು (ಪುರುಷ ಅಥವಾ ಪ್ರಜಾಪತಿ) ತನ್ನನ್ನು ತಪಸ್ಸಿನಲ್ಲಿ ತೊಡಗಿಸಿಕೊಂಡನು. ಸ್ಚಲ್ಪ ಕಾಲದ ನಂತರ ಕೇವಲ ತಪಶ್ಚರ್ಯವು ಅತ್ಯಲ್ಪ ಉಪಯುಕ್ತತೆಯುಳ್ಳದ್ದು ಎಂದು ಅರಿತು "ನಾನು ಸ್ವಯಂ ನನ್ನನ್ನು ಸಮಸ್ತ ಜೀವಿಗಳಲ್ಲಿ ಯಜ್ಞದ ಆಹುತಿಯಾಗಿ ಸನರ್ಪಿಸಿಕೊಳ್ಳುತ್ತೇನೆ ಮತ್ತು ನನ್ನಲ್ಲೇ ಎಲ್ಲಾ ಜೀವಿಗಳನ್ನ್ಯ ಯಜ್ಞದ ಹವಿಸ್ಸಾಗಿ ಸ್ವೀಕರಿಸುತ್ತೇನೆ" ಎಂದು ನಿರ್ಧರಿಸಿ ಅದನ್ನು ಕಾರ್ಯಗತಗೊಳಿಸಿದನು. ಈ ಪರಸ್ಪರ ಸಮರ್ಪಣೆಯಿಂದಾಗಿ ಅವನು ಜೀವಶ್ರೇಷ್ಠನೂ, ಸ್ವಯಂಪೂರ್ಣನೂ, ಲೋಕಾಧಿಪತಿಯೂ ಆದನು.

ಯಜ್ಞಕ್ಕೆ ಸಂಬಂಧಿಸಿದಂತೆ "ಸಮಸ್ತ ಜೀವಿಗಳು" ಎನ್ನುವ ಪದದ ಮಹತ್ವವೇನು ಎಂಬುದನ್ನು ವಾಜಸನೇಯ ಸಂಹಿತೆಯ 32 ರಲ್ಲಿ ಸೂಚಿಸಲಾಗಿದೆ. ಯಜ್ಞಕ್ಕೆ ಸಮರ್ಪಿಸಲ್ಪಟ್ಟ ಪುರುಷನು ಅಥವಾ ಪ್ರಜಾಪತಿಯು ಈ ಸಮಸ್ತವೆಲ್ಲವೂ ಆಗಿದ್ದಾನೆ.  - ಅಗ್ನಿ, ಸೂರ್ಯ, ವಾಯು, ಚಂದ್ರ, ತೇಜಸ್ವೀ ಬ್ರಹ್ಮ , ಸೃಷ್ಟ್ಯಾದಿ ಜಲರಾಶಿಗಳು. ಸಮಸ್ತ ದೇವತೆಗಳು ಪ್ರಜಾಪತಿಯ ಶರೀರದೊಳಗೆ ನೆಲೆಗೊಂಡಿದ್ದಾರೆ. ಅವರೆಲ್ಲರೂ ಪುರುಷನ ಅಥವಾ ಅಗ್ನಿಯ (ಸರ್ವಮ್ ಜುಹೋತಿ), ಏಕ ಆತ್ಮದಲ್ಲಿ ಆಹುತಿಯಂತಿದ್ದಾರೆ. ದೇವತೆಗಳು ಈ ಒಬ್ಬ ಪುರುಷನ ವಿಶಿಷ್ಟ ವ್ಯಕ್ತ ಸ್ವರೂಪರು. ಸೃಷ್ಟಿಯ ಮುಖ್ಯ ತತ್ವವಾದ ಕಾಲವು ವಾಸ್ತವವಾಗಿ ಈ ಪುರುಷನ ಸಂತತಿಯಾಗಿದೆ. ಇದನ್ನು ಯಾರು ತಾನೇ ಗ್ರಹಿಸಬಲ್ಲರು? ಯಾರಿಗೆ ಇದನ್ನು ಅರಿಯಲು ಸಾಧ್ಯ? ಅವನನ್ನು ಮೇಲಾಗಲಿ, ಮಧ್ಯದಲ್ಲಾಗಲಿ ಅಥವಾ ಕೆಳಗಾಗಲಿ ಅರಿತುಕೊಳ್ಳಲಸಾಧ್ಯ. ಅವನು ಆಕಾಶದಲ್ಲಿ ಅಪ್ರಭೇದನು. ಅವನ ಸಂಕಲ್ಪ ಮಾತ್ರದಿಂದ ಕಾಲ ಮತ್ತು ದೇಶಗಳು ಅವನಿಂದ ವಿಕಸಿತವಾದವು. ಅವನೇ ಏಕೈಕ ಸತ್ಯ, ಹಿರಣ್ಯಗರ್ಭನೆಂದು ವರ್ಣಿಸಲಾಗಿದೆ ಮತ್ತು ಅವನಿಂದ ಹೊರತಾದದ್ದು ಯಾವುದೂ ಇಲ್ಲ (ಯಸ್ಮಾನ್ ನ ಜಾತಃ ಪರಃ). ಅವನು ಸಮಸ್ತ ಜೀವಿಗಳ ಆಂತರಿಕ ನಿಯಾಮಕನಾಗಿದ್ದಾನೆ. ಅವನು ಸಮಗ್ರ ಅಸ್ತಿತ್ವದ ಮೂಲವಲ್ಲದೇ, ಕಾಲ-ದೇಶಾದಿಗಳಲ್ಲಿ ವ್ಯಾಪಿಸಿರುವ ಅಸ್ತಿತ್ವಕ್ಕೂ ಹಿಂದಿನ ಅಸ್ತಿತ್ವವಾಗಿದ್ದಾನೆ. ಅವನು ಸಮಸ್ತ ಭೌತಿಕ ಪ್ರದೇಶವನ್ನು ವ್ಯಾಪಿಸಿದ್ದಾನೆ ಮತ್ತು ಸಮಸ್ತ ಜೀವಿಗಳ ಅಂತರಾಳ ನೆಲೆಯಲ್ಲಿ ನೆಲೆಸಿದ್ದಾನೆ. ಭೂತ, ವರ್ತಮಾನ ಹಾಗೂ ಭವಿಷ್ಯ ಕಾಲದ ಎಲ್ಲಾ ಬೆಳವಣಿಗೆಗಳು ಅವನಿಂದಲೇ ಸಾಧ್ಯವಾಗಿದೆ - ವಾ.ಸಂ (32, 1-4).

ಸಂಭೃತಂ ಪೃಶತ್ ಆಜ್ಯಂ

ಸಾಯಣರು ಪೃಶತ್-ಆಜ್ಯಂ ಪದವನ್ನು ಬೆಣ್ಣೆ ಕಾಯಿಸಿದ ತುಪ್ಪವೆಂದು, ಆಹುತಿಗಾಗಿ ಅರ್ಪಿಸಲಾಗುವ ಮೊಸರು ಬೆರೆತ ತುಪ್ಪವೆಂದು ಅರ್ಥೈಸುತ್ತಾರೆ. ಈ ಪದವು ಜೀವಿಗಳಿಂದ ಭೋಗಿಸಲ್ಪಡುವ ಸಮಸ್ತ ವಸ್ತುಗಳನ್ನು ಸೂಚಿಸುತ್ತದೆಆದರೆ ಭಟ್ಟಭಾಸ್ಕರರು ಪೃಶತ್ ಪದವನ್ನು ನಾನಾ ಬಗೆ ಅಂದರೆ, ವಿಭಿನ್ನ ಜಾತಿಯ ಪ್ರಾಣಿಗಳಾದ ಹಸು, ಎಮ್ಮೆ, ಆಡು, ಇತ್ಯಾದಿಗಳಿಂದ ಸಂಗ್ರಹಿಸಲ್ಪಟ್ಟ ಮಿಶ್ರಿತ ಹಾಲು ಎಂದು ಅಥವಾ ಹಾಲು ಮೊಸರಾಗಿ ಅವಸ್ಥಾಂತರ ಹೊಂದುವ ಸ್ಥಿತಿಯೆಂದು ಸೂಚಿಸುತ್ತಾರೆ. ಐತರೇಯ ಬ್ರಾಹ್ಮಣ (2.37) ದಲ್ಲಿ ಯಜ್ಞದಲ್ಲಿ ತುಪ್ಪದ ಮಹತ್ವದ ಬಗ್ಗೆ ವಿವರಿಸಲಾಗಿದೆ. ಯಜ್ಞವು ದೇವತೆಗಳ ರಥವಾಗಿದೆ; ಮತ್ತು ತುಪ್ಪ ಹಾಗೂ ಪ್ರೌಗಗಳು (ಪಠಿಸಲಾಗುವ ಸೂಕ್ತದ ಹೆಸರು, ರಥದ ಸರಳುಗಳ ಮುಂಭಾಗವೆಂಬ ಅರ್ಥವೂ ಸಹ ಹೊಂದಿದೆ) ರಥದ ಗತಿಯನ್ನು ನಿಯಂತ್ರಿಸುವ ಕಡಿವಾಣಗಳಂತಿವೆ. ತುಪ್ಪವು ಆಕಾಶ ಮತ್ತು ಭೂಮಿಯನ್ನು ಪುಷ್ಟಿಗೊಳಿಸುವ ಅಗತ್ಯವಾದ ಪೌಷ್ಟಿಕಾಂಶವೆಂದು ಹೇಳಲಾಗಿದೆ. "ಎಲ್ಲವನ್ನೂ- ಕಬಳಿಸುವ ಯಜ್ಞ" ದಿಂದ ಹೊರಹೊಮ್ಮಿದ ವೈವಿಧ್ಯಮಯ ಸೃಷ್ಟಿಯ ಆತ್ಮನೇ ಆಹುತಿಯೆಂದು ಇಲ್ಲಿ ಸ್ಪಷ್ಟವಾಗಿದೆ.

ಪಶೂನ್ ತಾನ್ ಚಕ್ರೇ ವಾಯುವ್ಯಾನ್

ಯಜ್ಞದಿಂದ ಈ ರೀತಿಯಾಗಿ ಉತ್ಪನ್ನವಾದ ಆಹಾರದಿಂದ ಸಮಸ್ತ ಜಾತಿಯ ಪ್ರಾಣಿಗಳು ಸೃಷ್ಟಿಸಲ್ಪಟ್ಟವು. ಪ್ರಾಣಿ ಎಂಬರ್ಥವುಳ್ಳ ಪಶು ಪದವು ಗೃಹ, ವ್ಯವಸಾಯ ಅಥವಾ ಯಜ್ಞಾಚರಣೆಯ ಉದ್ದೇಶಗಳಿಗೆ "ಬಂಧಿಸುವಿಕೆ", "ಭದ್ರಗೊಳಿಸುವಿಕೆ", ಇತ್ಯಾದಿಗಳನ್ನು ಸೂಚಿಸುತ್ತದೆ. ಅಥರ್ವ ವೇದವು (11.2.9) ಐದು ಬಗೆಯ ಪಶುಗಳ ಬಗ್ಗೆ ಹೇಳುತ್ತದೆ - ಹಸು(ಜಾನುವಾರು), ಕುದುರೆಗಳು, ಮಾನವರು, ಆಡುಗಳು ಮತ್ತು ಕುರಿಗಳು.

ಸೃಷ್ಟಿಗೆ ಸಂಬಂಧಿಸಿದಂತೆ ಐದು ಸಂಖ್ಯೆ ಮುಖ್ಯವಾದುದು; ಯಜ್ಞವೂ ಸಹ ಐದು ಪ್ರಾಕಾರ ಮತ್ತು ಪುರುಷನು ಐದು ಬಗೆ ಹಾಗೂ ಪ್ರಾಣಿಗಳೂ ಸಹ ಐದು ಪ್ರಕಾರ ಎಂದು ವರ್ಣಿಸಲಾಗಿದೆ. ಬೃಹದಾರಣ್ಯಕ ಉಪನಿಷತ್ತು (1.4.13)ರ ಪ್ರಕಾರ ಸಮಸ್ತವೂ ಐದು ಬಗೆಯದಾಗಿದೆ - "ತವೇಮೇ ಪಂಚ ಪಶವೋ ವಿಭಕ್ತಾ ಗಾವೋ ಅಶ್ವಾಃ ಪುರುಷಾ ಅಜಾವಯಃ".

ಸೃಷ್ಟಿಕಾರ್ಯವೂ ಸಹ ಐದು ಬಗೆ. ಶತಪಥ ಬ್ರಾಹ್ಮಣವು (12.3.4.1) ರಲ್ಲಿ ಪ್ರಸ್ತಾಪಿಸುವಂತೆ ಸೃಷ್ಟಿಕರ್ತನಾದ ಪ್ರಜಾಪತಿಯು ಪುರುಷ-ನಾರಾಯಣನನ್ನು ಆಹುತಿಯಾಗಲು ನಿರ್ದೇಶಿಸಿದನು ಮತ್ತು ಯಜ್ಞದಿಂದ ಐದು ತಂತುಗಳು ಹೊರಹೊಮ್ಮಿದವು.
1. ಪಶುಗಳು;
2. ಋಕ್ ಗಳು; (ಯಜುಸ್ ಮತ್ತು ಸಾಮನ್);
3. ಪುರುಷ; (ಅವನ ಅವಯವಗಳಿಂದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ);
4. ಪುರುಷನ ಇಂದ್ರಿಯಗಳಿಂದ ಚಂದ್ರ, ಸೂರ್ಯ, ಇಂದ್ರ, ವಾಯು;
5. ಪುರುಷನ ಬ್ರಹ್ಮಾಂಡ ದೇಹದಿಂದ ಅಂತರಿಕ್ಷ, ಆಕಾಶ, ಭೂಮಿ ಮತ್ತು ದಿಕ್ಕುಗಳು.
ಯಜ್ಞದ ಈ ಐದು ಸೂತ್ರಗಳನ್ನು ವಿರಾಟ್-ಪುರುಷನ ಪಂಚರಾತ್ರವೆಂದೂ ಹೇಳಲಾಗಿದೆ.

ಶತಪಥ ಬ್ರಾಹ್ಮಣದ 4.4.1.15 ರ ಪ್ರಕಾರ ವಾಯುವು ಸಮಸ್ತ ಜೀವಿಗಳ ಮಾರ್ಗದರ್ಶಕನಾಗಿದ್ದಾನೆ, ಏಕೆಂದರೆ ವಾಯುವು ಪ್ರಾಣವಾಗಿದ್ದಾನೆ ಮತ್ತು ಈ ಜೀವಶಕ್ತಿಯಿಂದಲೇ ಪ್ರಾಣಿಗಳು ಚಲಿಸುತ್ತವೆ.

ಆರಣ್ಯಾನ್ ಗ್ರಾಮ್ಯಾಃ ಯೇ

ಹೀಗೆ ಆವಿರ್ಭವಿಸಲ್ಪಟ್ಟ ಪ್ರಾಣಿಗಳು ಎರಡು ಮುಖ್ಯ ವರ್ಗಕ್ಕೆ ಸೇರಿವೆ - ಕಾಡುಪ್ರಾಣಿಗಳು ಮತ್ತು ಸಾಕುಪ್ರಾಣಿಗಳು. ತೈ..(3.11) ದಲ್ಲಿ ಇವುಗಳನ್ನು ಪ್ರಸ್ತಾಪಿಸಲಾಗಿದೆ :

1. ಅರಣ್ಯ:
. ಎರಡು ಗೊರಸುಳ್ಳ ಪ್ರಾಣಿಗಳು (ದ್ವಿ-ಖುರ);
. ಹಿಂಸ್ರ(ಬೇಟೆಯಾಡುವ ಪ್ರಾಣಿಗಳು);
. ಪಕ್ಷಿಗಳು
. ಹರಿದಾಡುವ ಉರಗ ವರ್ಗದ ಪ್ರಾಣಿಗಳು (ಸರೀಸೃಪ)
. ಆನೆಗಳು
. ಮಂಗಗಳು, ಮತ್ತು
. ಜಲಚರ ಪ್ರಾಣಿಗಳು.

2. ಗ್ರಾಮ್ಯ:
3. . ಹಸುಗಳು
4. . ಕುದುರೆಗಳು
5. . ಕುರಿಗಳು
6. . ಮಾನವರು
7. . ಕತ್ತೆಗಳು, ಮತ್ತು
8. . ಒಂಟೆಗಳು.

ಮಂತ್ರ-  10 -ಸಂಸ್ಕೃತದಲ್ಲಿ :

ತಸ್ಮಾತ್ ಯಜ್ಞಾತ್ ಸರ್ವಹುತ ಋಚಃ ಸಾಮಾನಿ ಜಜ್ಞಿರೇ
ಛಂದಾಂಸಿ ಜಜ್ಞಿರೇ ತಸ್ಮಾತ್ ಯಜುತ್ ತಸ್ಮಾತ್ ಅಜಾಯತ

ಕನ್ನಡದಲ್ಲಿ :

ಎಲ್ಲವ ಭುಜಿಸಿದ ಯಜ್ಞನಿಂದ ಋಗು ಸಾಮಗಳಾಯ್ತು
ಛಂದಗಳುದಿಸಿತವನಿಂದ ಅವನಿಂದಾಯಿತು ಯಜುಸು   

ವಿವರಣೆ :

ಆ ಪುರುಷನು ಸರ್ವಹುತನು. ಆ ಯಜ್ಞದಿಂದ ಋಕ್ ಗಳು, ಸಾಮಗಳು ಹುಟ್ಟಿದವು. ಅದೇ ಯಜ್ಞದಿಂದ ಗಾಯತ್ರೀ ಮೊದಲಾದ ಛಂದಸ್ಸುಗಳು ಹುಟ್ಟಿದವು. ಅದೇ ಯಜ್ಞದಿಂದ ಯಜುಸ್ ಹುಟ್ಟಿತು.

ವ್ಯಾಖ್ಯಾನ :

ಆ ಎಲ್ಲವನ್ನೂ ಸ್ವೀಕರಿಸುವ ಯಜ್ಞದಿಂದ ವೇದದ ಮೂರು ಶಾಖೆಗಳು ಉಂಟಾದವು. ಅದರೊಂದಿಗೆ ಋಷಿಗಳ ದಿವ್ಯದೃಷ್ಟಿಗೆ ಗೋಚರವಾದಂಥ ಲಯಬದ್ಧ ಛಂದಸ್ಸುಗಳ ಪ್ರಕಾರಗಳು ಹೊರಹೊಮ್ಮಿದವು.

1. ಋಚ ಮತ್ತು ಸಾಮ
2. .ಬ್ರಾ. 10.5.1-2 ಮಂತ್ರದ ಪ್ರಕಾರ, ವೇದದ ಮೂರು ಶಾಖೆಗಳಾದ ಋಚಃ (ಅಗ್ನಿ ದೇವತೆಯನ್ನು ಪ್ರತಿನಿಧಿಸುವ ಮತ್ತು ಭೌತಿಕ ಪ್ರಪಂಚಕ್ಕೆ ಸರಿಸಮಾನವಾದ ಭೂಃ ಸ್ತರವು), ಸಾಮನ್ ಗಳು (ಆದಿತ್ಯ ಮತ್ತು ಸುವಃ), ಮತ್ತು ಯಜುಸ್ (ವಾಯು ಮತ್ತು ಭುವಃ) ಮಂತ್ರೋಚ್ಚಾರಣೆಯ ಮೂರು ಮಾದರಿಗಳಾಗಿದ್ದು ಹಾಗೂ ಅಗ್ನಿಗೆ ಸಂಬಂಧಪಟ್ಟ ವಿಧಿಗಳ ಕಾರ್ಯಭಾರತ್ವವನ್ನು ನಿರ್ಧರಿಸುತ್ತವೆ.
ಈ ಎಲ್ಲ ಸೂಕ್ತಗಳು, ಮಂತ್ರಗಳು ಮತ್ತು ಗದ್ಯ ಸಂಯೋಜನೆಯು ಪವಿತ್ರ ಉಚ್ಚಾರಣೆಯ ಉದ್ಗೀತಗಳಾಗಿವೆ. ಛಾಂದೋಗ್ಯ ಉಪನಿಷತ್ 1.3.7ರ ಪ್ರಕಾರ "ಉತ್" ಮಂತ್ರಘೋಷಗಳನ್ನು, "ಗೀ" ಗದ್ಯಸೂತ್ರ ಮತ್ತು "" ಸೂಕ್ತಭಾಗಗಳನ್ನು ಸೂಚಿಸುತ್ತವೆ.

ಛಂದಸ್ಸು

ಈ ಸಾಂಕೇತಿಕ ಯಜ್ಞದಿಂದ ಹೊರಹೊಮ್ಮಿದ ಛಂದಸ್ಸಿನ ಪ್ರಕಾರಗಳು ಪ್ರಮುಖವಾಗಿ ಈ ಕೆಳಗೆ ವಿವರಿಸಲಾಗಿದೆ. ಅವುಗಳ ನಡುವೆ ಸಾಲಿನಲ್ಲಿ ಜೋಡಿಸಲಾಗಿರುವ ಅಕ್ಷರಗಳ ಸಂಖ್ಯೆಗನುಗುಣವಾಗಿ ಪರಸ್ಪರ ವ್ಯತ್ಯಾಸಗಳು ಕಂಡುಬರುವುದು.

ಕ್ರ.ಸಂ. ಛಂದಸ್ಸುಗಳು    ಅಕ್ಷರಗಳು   ಪಾದಗಳು

1. ವಿಪರೀತಾ-ಹ್ರಸೀಯಸಿ         19        3    
2. ಅತಿ-ನಿಚೃತ್                   20        3
3. ಪಾದ-ನಿಚೃತ್                 21         3
4. ವರ್ಧಮಾನಾ                 21         3
5. ಪ್ರತಿಷ್ಠಾ                        21         3
6. ಉಷ್ಣಿಗರ್ಭಾ                   24         3
7. ಯವ-ಮಧ್ಯ                   24         3
8. ಗಾಯತ್ರೀ                     24         3
9. ಪದಪಂಕ್ತಃ                     25(26)  5
10. ಕಕುಪ್ ನ್ಯಂಕುಶಾ          27         3
11. ಉಷ್ಣಿಕ್                       28         3
12. ಕಕುಪ್                        28         3
13. ಉಷ್ಣಿಕ್-ಗರ್ಭಾ              28         4
14. ತನು-ಶಿರಾ                  28         3
15. ಅನುಷ್ಟುಪ್-ಗರ್ಭಾ         29         4
16. ತಾವಿರಾಟ್                  30         3
17. ವಿರಾಟ್                      30        3
18. ಮಹಾಪದ-ಪಂಕ್ತಿಃ           31        6
19. ಕೃತಿ                           32       4
20. ಅನುಷ್ಟುಪ್                    32       4
21. ನಷ್ಟ-ರೂಪೀ                  32       3
22. ವಿರಾಟ್                        33       3
23. ಬೃಹತೀ                        36       4
24. ಅಭಿಸಾರಿಣಿ                    39       4
25. ವೈರಾಜ-ತ್ರಿಷ್ಟುಪ್             39       4
26. ಪಂಕ್ತ್ಃ                           40       5
27. ವಿರಾಟ್-ಸ್ಥಾನಾ                40      4
28. ವಿಪರೀತಾ                        40       4
29. ಪ್ರಗಾಥ                            40       4
30. ವಿಪರೀತಾ-ವಿರಾಡ್-ಸ್ಥಾನಾ    41       4
31. ವಿರಾಡ್ರೂಪ                        41      4
32. ಜ್ಯೋತಿಷ್ಮತಿ                       44      4
33. ಜ್ಯೋತಿ                             44      4
34. ತ್ರಿಷ್ಟುಪ್                            44      4
35. ಯುವ-ಮಧ್ಯಾ                     44       5
36. ಪಂಙತ್ಯುತ್ತರಾ                     44       5
37. ಜಗತೀ                              44       4
38. ಮಹಾಮಂಕ್ತಃ                      48       6
39. ಅತಿ-ಜಗತೀ                        52       5
40. ಶಕ್ವರೀ                               56       7
41. ಅತಿ-ಶಕ್ವರೀ                         60       5
42. ಅಷ್ಟಿಃ                                  64      5
43. ಅತ್ಯಷ್ಟಿಃ                               68       7
44. ಧೃತಿ                                   72      7
45. ಅತಿಧೃತಿ                              72       8

ಮಂತ್ರವು ತಾನು ಹೊರಹೊಮ್ಮಿದ ಸರಣಿಯನ್ನು ಸೂಚಿಸಬಲ್ಲದ್ದಾಗಿದೆ; ಯಜ್ಞದಿಂದ ಸೂಕ್ತಗಳು (ಋಚ) ಮತ್ತು ಮಂತ್ರಗಳು (ಸಾಮಾನಿ) ಪ್ರಥಮವಾಗಿ ಅಭಿವ್ಯಕ್ತವಾದುವು, ಮತ್ತು ಅವುಗಳಿಂದ ಛಂದಸ್ಸಿನ ಪ್ರಕಾರಗಳು; ಮತ್ತು ಅವುಗಳಿಂದ ಕರ್ಮಾಚರಣೆಗಳ (ಯಜುಸ್) ಉದ್ಧೃತಭಾಗವು ನಿರ್ಮಾಣಗೊಂಡವು. ಸಮಸ್ತ ಕರ್ಮಾಚರಣೆಗಳು ಈ ಉದ್ಧೃತಭಾಗದ ಗ್ರಂಥಗಳ ಆಧಾರದಿಂದ ಉತ್ಪನ್ನವಾಗಿವೆ. ತಸ್ಮಾತ್ ಶಬ್ದವನ್ನು ಮೂರು ಬಾರಿ ಪ್ರಯೋಗಿಸಲಾಗಿದೆ. ಮೊದಲ ಸಲ ಮಾತ್ರ ಅದು ಎಲ್ಲವನ್ನು-ಕಬಳಿಸುವ-ಯಜ್ಞಕ್ಕೆ (ಸರ್ವಹುತಃ) ಅನ್ವಯಿಸುತ್ತದೆ. ಎರಡನೆಯ ಸಲದ ಪದದ ಪ್ರಯೋಗದಲ್ಲಿ ಅದು ಸೂಕ್ತಗಳು ಮತ್ತು ಮಂತ್ರ ಪಠನಕ್ಕೆ ಅನ್ವಯಿಸುತ್ತದೆ ಮತ್ತು ಮೂರನೇ ಬಾರಿ ಅದು ಛಂದಸ್ಸಿನ ಪ್ರಕಾರಗಳ ಕುರಿತಾಗಿ ಇದೆ.

ಮಂತ್ರ - 11 -ಸಂಸ್ಕೃತದಲ್ಲಿ :

ತಸ್ಮಾತ್ ಅಶ್ವಾ ಅಜಾಯಂತ ಯೇ ಕೇ ಚ ಉಭಯಾದತಃ
ಗಾವೋ ಹ ಜಜ್ಞಿರೇ ತಸ್ಮಾತ್ ತಸ್ಮಾತ್ ಜಾತಾ ಅಜಾವಯಃ

ಕನ್ನಡದಲ್ಲಿ :

ಅವನಿಂದ ಕುದುರೆಗಳಾದವು ಎರಡೆಡೆ ದವಡೆಯ ಹಲ್ಲಿನವು
ಗೋವುಗಳಾದವು ಅವನಿಂದಲೆ ಅವನಿಂದಲೆ ಕುರಿ ಆಡು   

ವಿವರಣೆ :

ಆ ಯಜ್ಞದಿಂದ ಕುದುರೆಗಳು ಹುಟ್ಟಿದವು. ಮೇಲೆ ಮತ್ತು ಕೆಳಗಿನ ಭಾಗಗಳಲ್ಲಿ ದಂತಗಳುಳ್ಳ ಗರ್ದಭಗಳು, ಅಶ್ವತರ (ಹೇಸರಕತ್ತೆ) ಗಳು ಹುಟ್ಟಿದವು. ಆ ಯಜ್ಞದಿಂದ ಗೋವುಗಳು, ಮೇಕೆಗಳು, ಕುರಿಗಳು ಹುಟ್ಟಿದವು.

ವ್ಯಾಖ್ಯಾನ :

ಗಾವಃ ಪದವನ್ನು ಚತುಷ್ಪಾದಿ ಪ್ರಾಣಿಗಳೆಂದು ಅರ್ಥೈಸಿದರೆ, ಅವುಗಳನ್ನು ಮಂತ್ರ 9 ರಲ್ಲಿ ಸೂಚಿಸಲಾದ  ಗ್ರಾಮ್ಯ ಅಥವಾ ಊರಿನಲ್ಲಿ ವಾಸಮಾಡುವ ಪ್ರಾಣಿಗಳೊಂದಿಗೆ ಸೇರಿಸಿದಂತಾಯಿತು.

ಶಥಪಥ ಬ್ರಾಹ್ಮಣದಲ್ಲಿನ 10.5.1.2 ಮತ್ತು 6.3.1.11 ಮಂತ್ರಗಳ ಪ್ರಕಾರ, ಮೂರು ಪ್ರಕಾರದ ವಾಂಗ್ಮಯಗಳು ಮತ್ತು ಅವಕ್ಕೆ ಅನುಗುಣವಾದಂಥ ಮೂರು ಸ್ವರೂಪದ ಅಗ್ನಿಗಳು ಅವಿಷ್ಕಾರವಾದ ನಂತರ, ಸೃಷ್ಟಿಕರ್ತನಾದ ಪ್ರಜಾಪತಿಯು ಈ ಮೂರು ಬಗೆಯ ದಿವ್ಯ ವಾಂಗ್ಮಯದೊಡನೆ ಜಲರಾಶಿಯನ್ನು ಪ್ರವೇಶಿಸಿದನು.

"ಸ ವಾ ಏಷಾ ವಾಕ್ ತ್ರೇಧಾ .........ತೇನಾಗ್ನಿಃ ತ್ರೇಧಾ ವಿಹಿತಾ, ಅಂದರ್ವ ಋಚಃ ಸಾಮಾನಿ ಮತ್ತು ಯಜುಃ"

"ಪ್ರಜಾಪತಿಸ್ ತ್ರಯ್ಯಾ ವಿದ್ಮಯಾ ಸಹಾಪಃ ಪ್ರಾವಿಶತ್"

ಸಮಸ್ತ ವಸ್ತುಗಳು ಮತ್ತು ಜೀವಿಗಳು ಈ ಮೂರು ಪ್ರಕಾರದ ದಿವ್ಯ ವಾಂಗ್ಮಯದಲ್ಲಿ ಅಡಗಿವೆ ಎಂದು ಅವನು ಅರಿತನು.

ಅದಾದ ಮೇಲೆ, ಸೃಷ್ಟಿಕರ್ತನು ಈ ಮೂರು ಬಗೆಯ ಪವಿತ್ರ ಮಂತ್ರಗಳ ಆಧಾರದ ಮೇಲೆ ಸ್ವಯಂ ತನ್ನ ಶರೀರವನ್ನು ಯೂಪಸ್ತಂಭದ ಆಕಾರದಲ್ಲಿ ನಿರ್ಮಿಸಲು ನಿರ್ಧರಿಸಿದನು. ಹೀಗೆ ಬಲಿಪೀಠವು ಸೃಷ್ಟಿಯ ಮೊದಲನೆ ಬೀಜರೂಪವಾಗಿದೆ.

ಪ್ರಸ್ತುತ ಮಂತ್ರದ ಪ್ರಕಾರ, ಪ್ರಜಾಪತಿಯಿಂದ (ಅಥವಾ ಸರ್ವಹುತ ಎಂಬ ಯಜ್ಞದಿಂದ), ಆಶ್ವಗಳು ಹುಟ್ಟಿದವು. .ಬ್ರಾ. 13.3.1.1 ರ ಪ್ರಕಾರ ಪ್ರಜಾಪತಿಯ ಚಕ್ಷುರಿಂದ್ರಿಯಗಳು ಹಿಗ್ಗಿ, ಉದುರಿತು. ನಂತರ ಅದು ಗಾತ್ರದಲ್ಲಿ ಬೆಳೆಯಿತು. ಆದ್ದರಿಂದ ಅದು ಅಶ್ವವೆಂದು ಕರೆಯಲ್ಪಟ್ಟಿದೆ.

ಅಶ್ವ ಪದಕ್ಜೆ ಎರಡು ಅರ್ಥಗಳಿವೆ.
1. ವ್ಯಾಪ್ತತೆ ("ಅಶೂ" ಪದದಿಂದ ವ್ಯಾಪ್ತರ್ಥ)
2. ಭೋಗಿಸು ಅಥವಾ ತಿನ್ನು (ಅಶ ಪದದಿಂದ, ಭೋಜನಾರ್ಥ).
ಪ್ರಾಣಿಯು (ಗೋಟಕ) ಅಶ್ವವೆಂದು ಕರೆಯಲ್ಪಟ್ಟಿದೆ ಏಕೆಂದರೆ ಅದು ವೇಗವಾಗಿ ಓಡುತ್ತದೆ ಮತ್ತು ಅದು ಹೆಚ್ಚು ತಿನ್ನುತ್ತದೆ. ಆದರೆ ಈ ಮಂತ್ರದಲ್ಲಿ ಬಳಸಲಾದ ಅರ್ಥವು ಈ ಪ್ರಾಣಿಗೆ ಅನ್ವಯಿಸುವುದಿಲ್ಲ. ತೈ.ಬ್ರಾ.ದಲ್ಲಿನ 3.9.16.1 ರ ಪ್ರಕಾರ ಕುದುರೆಯು ವರುಣನನ್ನು ಸೂಚಿಸುತ್ತದೆ. ಋಗ್ವೇದ ಹಾಗೂ ತೈ.ಸಂ ಗ್ರಂಥಗಳಲ್ಲಿ ಅಶ್ವ ಪದವನ್ನು ಸೂರ್ಯನಿಗೆ ಸಂಬಂಧಿಸಿದ ಅರ್ಥದಲ್ಲಿ ಬಳಸುತ್ತವೆ.

ವೇದಗಳ ಕಾಲದಲ್ಲಿ ಅಶ್ವವು ಬಹು ಪ್ರಯೋಜನಕಾರಿಯಾದ ಪ್ರಾಣಿಯಾಗಿತ್ತು ಮತ್ತು ಸಂಚಾರದ ಸೌಲಭ್ಯವನ್ನು ಕಲ್ಪಿಸಿಕೊಟ್ಟಿತ್ತು. ನಂತರದ ಕಾಲದಲ್ಲಿ ಅದನ್ನು ಯಜ್ಞ ಪಶುವೆಂದು ಪರಿಗಣಿಸಲಾಯಿತು. ಈ ಪ್ರಾಣಿಗಳು ಪೌರುಷ ಅಥವಾ ಓಜಸ್ಸುಗಳನ್ನು ಸಂಕೇತಿಸುವುದು ಮತ್ತು ಸೂರ್ಯ, ವಿಷ್ಣು ಹಾಗೂ ಪುರುಷರೊಂದಿಗೆ ಸಮೀಕರಣಗೊಂಡ ಅಗ್ನಿಗೆ ಆಹುತಿಗಳನ್ನು ಅರ್ಪಿಸಲಾಗುವುದು. ಯಜ್ಞವು ಕೇವಲ ಸಾಂಕೇತಿಕವಾಗಿದೆ. ಈ ಮಂತ್ರದಲ್ಲಿ ಹವಿಸ್ಸಾಗಿ ಆಹುತಿಯಾಗಿ ಅರ್ಪಿಸಲ್ಪಟ್ಟ ಈ ಪ್ರಾಣಿಗಳ ಮೂಲವನ್ನು ಅಗ್ನಿಸ್ವರೂಪನಾದ ಪುರುಷನಿಗೆ ಗುರುತಿಸಲಾಗಿದೆ.

ಪುರುಷನು ಸಮಸ್ತ ಜೀವಿಗಳ ಸೃಷ್ಟಿಗೆ ಏಕೈಕ ಮತ್ತು ಸಮಾನ ಮೂಲವೆಂದು ನಿರೂಪಿಸಲೂ ಈ ಮಂತ್ರವನ್ನು ಬಳಸಬಹುದು. ಅಶ್ವಗಳು, ದವಡೆಯ ಎರಡೂ ಕಡೆ ಹಲ್ಲುಗಳುಳ್ಳ ಪ್ರಾಣಿ (ಉಭಯಾದತಃ), ಹಸುಗಳು, ಕುರಿ, ಆಡುಗಳು (ಅಜಾವಯಃ) ಮುನುಷ್ಯನಿಗೆ ಉಪಯೋಗವಿರುವ ಪ್ರಾಣಿಗಳು. ಆದರೆ ಉಭಯಾದತಃ ಪದವನ್ನು ಕಾಲವೆಂದು, ವಿಶೇಷವಾಗಿ ವರ್ತಮಾನ ಕಾಲವೆಂತಲೂ ಅರ್ಥೈಸಬಹುದು. ಗಾವಃ ಪದವು ಭೂಮಿಯನ್ನು, ವಾಕ್ಕುಗಳನ್ನು ಅಥವಾ ಸೂರ್ಯನನ್ನು ಪ್ರತಿನಿಧಿಸುವುದು. ಅಲ್ಲದೆ ಅದು ಅಂತರಿಕ್ಷ ಅಥವಾ ವಾಯು ಮಂಡಲವೆಂತಲೂ ಅರ್ಥವನ್ನು ಹೊಂದಿದೆ.

ಅಜ ಪದವು ಹಿಂಡು, ಮರುತ್ ದೇವತೆಗಳು ಅಥವಾ ರುದ್ರರ ತಂಡವನ್ನು ಪ್ರತಿನಿಧಿಸುತ್ತದೆ. ಅವಿ ಪದವು ಸೂರ್ಯ ಅಥವಾ ಬೆಟ್ಟ ಎನ್ನುವ ಅರ್ಥವನ್ನು ಹೊಂದಿದೆ. ಅಜ ಪದವು ಮೋಡಗಳಲ್ಲಿರುವ ಜಲರಾಶಿಯ ಹೆಸರೂ ಆಗಿದ್ದು ಚಲಿಸಲ್ಪಡುವ ಎಂಬ ಮಹತ್ವವನ್ನೂ ಹೊಂದಿದೆ. ಮೋಡಗಳು ಮಳೆಯಾಗಿ ಸುರಿಯುವುದಕ್ಕೆ ಸೂರ್ಯನ ಕಿರಣಗಳು ಕಾರಣವಾಗಿವೆ (ಅಜಾವಯಃ). ಆಕಾಶ (ಅಶ್ವ), ಅಂತರಿಕ್ಷ (ದವಡೆಯ ಎರಡೂ ಕಡೆ ಹಲ್ಲುಗಳುಳ್ಳ ಪ್ರಾಣಿ) ಮತ್ತು ಭೂಮಿ (ಹಸು), ಈ ಎಲ್ಲಾ ಮೂರು ಲೋಕಗಳಲ್ಲಿರುವ ಜಲರಾಶಿಗಳನ್ನು (ಆಡು ಮೇಕೆಗಳಿಗೆ) ಹೋಲಿಸಲಾಗಿದೆ. ಸೂಕ್ತದ ಋಷಿಯೂ ಆದ ನಾರಾಯಣ ಪದವೂ ಜಲರಾಶಿಯೊಂದಿಗೆ ಸಂಬಂಧವನ್ನು ಹೊಂದಿದೆ.

ಮಂತ್ರ - 12 -ಸಂಸ್ಕೃತದಲ್ಲಿ :

ಯತ್ ಪುರುಷಂ ವಿ ಅದಧುಃ  ಕತಿಧಾ ವಿ ಅಕಲ್ಪಯನ್
ಮುಖಮ್ ಕಿಮ್ ಅಸ್ಯ ಕೌ ಬಾಹೂ ಕಾ ಊರೂ ಪಾದಾ ಉಚ್ಯೇತೇ

ಕನ್ನಡದಲ್ಲಿ :

ಪರಮಪುರುಷನ ಭಾವಿಸುವಲ್ಲೆನಿತು ಬಗೆಯ ಊಹೆ
ಯಾವುದವನ ಮುಖ ತೋಳಾವುದು ಯಾವುದು ಕಾಲು ತೊಡೆ 

ವಿವರಣೆ :

ಪ್ರಜಾಪತಿಯ ಪ್ರಾಣರೂಪರಾದ ದೇವತೆಗಳು ಯಾವಾಗ ವಿರಾಡ್ರೂಪನಾದ ಪುರುಷನನ್ನು ಸಂಕಲ್ಪದಿಂದ ಸೃಷ್ಟಿಸಿದಾಗ ಎಷ್ಟು ಪ್ರಕಾರಗಳಿಂದ ನಾನಾ ವಿಧವಾಗಿ ಕಲ್ಪಿಸಿದರು? ಆ ಪುರುಷನ ಮುಖ ಯಾವುದು, ಬಾಹುಗಳು ಯಾವುವು? ತೊಡೆಗಳು ಯಾವುವು? ಯಾವುವು ಪಾದಗಳಾಗಿ ಉಕ್ತವಾಗುತ್ತವೆ?

ವ್ಯಾಖ್ಯಾನ :

ವ್ಯದಧುಃ ಪದದ ಅರ್ಥ ಬೇರೆಬೇರೆ ರೀತಿಯಲ್ಲಿ (ಆಸರೆ) ಆಧಾರವಾಗಿರು ಅಥವಾ ಧರಿಸು ಎಂದಾಗುತ್ತದೆ. ಸಾಯಣರು ಈ ಪದವನ್ನು "ಅವನ ಸಂಕಲ್ಪದಿಂದ ಸೃಷ್ಟಿಸಲ್ಪಟ್ಟ" ಎಂದು ಅರ್ಥೈಸಿದ್ದಾರೆ. ಈ ಪದವು ವಿಭಜನೆ, ಭಾಗಮಾಡು, ನಿರ್ಮಾಣ ಮಾಡು ಎಂಬ ಅರ್ಥವನ್ನು ಹೊಂದಿದೆ. ಇದಕ್ಕೆ ಸಂಬಂಧಿಸಿದ ವ್ಯಕಲ್ಪಯನ್ ಪದವನ್ನು ವಿವಿಧ ರೀತಿಯಲ್ಲಿ ಕಲ್ಪಿಸಲ್ಪಟ್ಟ ಎಂಬ ಅರ್ಥದಲ್ಲಿ ಉಪಯೋಗಿಸಬೇಕಿದೆ. ಈಗ ವೈವಿಧ್ಯಮಯ ರೀತಿಯಲ್ಲಿ ಪುರುಷನನ್ನು ಉತ್ಪಾದಿಸಿದ ದೇವತೆಗಳು ಪುರುಷನ ಅಂಗಭಾಗಗಳನ್ನು ಎಷ್ಟು ಪ್ರಕಾರದಲ್ಲಿ ಕಲ್ಪಿಸಿದರು? ಇಲ್ಲಿ ದೇವತೆಗಳು ಮಾನವಾಕಾರವನ್ನು ಹೊಂದಿದವರೆಂದು ಮತ್ತು ಅವರಂತೆ ಅಂಗಾಂಗಗಳುಳ್ಳವರು ಎಂಬುದನ್ನು ನೆನಪಿಸಿಕೊಳ್ಳಬೇಕಿದೆ. ದೇವತೆಗಳು ಸರ್ವವನ್ನೂ ಒಳಗೊಂಡ (ಸರ್ವಹುತಃ) ಯಜ್ಞದಾಚರಣೆಯ ಸಲುವಾಗಿಯೇ ಪುರುಷನನ್ನು ನಿರ್ಮಿಸಿದರು. ಪುರುಷನು ಸ್ಥಾಪಿಸಲ್ಪಟ್ಟ ಮತ್ತು ರಚನೆಯುಳ್ಳ ಸಾಧನವಲ್ಲದೇ, ಯಜ್ಞದ ಹೋಮದ್ರವ್ಯವೂ ಸಹ. ಚರಾಚರಾತ್ಮಕ ಅಸ್ತಿತ್ವದ ಪ್ರಕ್ರಿಯೆಗಳೇ ಪುರುಷನೆಂದು ಕರೆಯಲ್ಪಡುವ ವ್ಯಾವಹಾರಿಕ ಆದಿಜೀವಿಯನ್ನು ಉತ್ಪನ್ನ ಮಾಡಿದವು. ಅದು ಸಂಯುಕ್ತ ಅಸ್ತಿತ್ವವಾಗಿದ್ದು, ಚೇತನಾಚೇತನಾತ್ಮಕ ವ್ಯವಸ್ಥೆಗಳ ಐಹಿಕ ಪ್ರಕ್ರಿಯೆಗಳಿಗೆ ತನ್ನ ಸರದಿಯಲ್ಲಿ ಕಾರಣೀಭೂತವಾಗಿತ್ತು.

ಮಂತ್ರ - 13 -ಸಂಸ್ಕೃತದಲ್ಲಿ :

ಬ್ರಾಹ್ಮಣೋ ಅಸ್ಯ ಮುಖಂ ಆಸೀತ್ ಬಾಹೂ ರಾಜನ್ಯಃ ಕೃತಃ
ಊರೂ ತದ್ ಅಸ್ಯ ಯದ್ ವೈಶ್ಯಃ ಪದ್ಭ್ಯಾಂ ಶೂದ್ರೋ ಅಜಾಯತ

ಕನ್ನಡದಲ್ಲಿ :

ಮುಖವಾದನು ಬ್ರಾಹ್ಮಣನು ಕ್ಷತ್ರಿಯ ತಾ ತೋಳುಗಳಾದ
ವೈಶ್ಯನುದಿಸಿದನವನ ತೊಡೆಯಿಂದ ಶೂದ್ರನು ಕಾಲಿಂದ     

ವಿವರಣೆ :

ಬ್ರಾಹ್ಮಣನು ವಿರಾಟ್ ಪುರುಷನ ಮುಖವಾಗಿ ಆದನು. ಕ್ಷತ್ರಿಯನು ಬಾಹುಗಳಾಗಿ ಮಾಡಲ್ಪಟ್ಟನು. ವೈಶ್ಯನೆಂಬುವನು ಈ ವಿರಾಟ್ ಪುರುಷನ ತೊಡೆಗಳು. ಪಾದಗಳಿಂದ ಶೂದ್ರನು. (ಬ್ರಾಹ್ಮಣಾದಿಗಳು ವಿರಾಟ್ ಪುರುಷನ ದೇಹದಿಂದ ಹುಟ್ಟಿದರು).

ವ್ಯಾಖ್ಯಾನ :

ಮೊದಲ ನೋಟಕ್ಕೆ ಈ ಮಂತ್ರವು ಭಾರತೀಯ ಸಮಾಜದ ಚಾತುರ್ವರ್ಣ ವ್ಯವಸ್ಥೆಯ ಉಗಮವನ್ನು ಕುರಿತು ಪ್ರಸ್ತಾಪಿಸುವಂತೆ ಕಾಣುತ್ತದೆ. ಈ ಮಂತ್ರಕ್ಕೆ ಇದೇ ರೀತಿಯ ವಿವರಣೆಯನ್ನು ಹಲವಾರು ಕಡೆಗಳಲ್ಲಿ ಕೊಡಲಾಗಿದೆ. ಸಾಯಣರು ಸೂಚಿಸುವಂತೆ, ಮಂತ್ರವು ಪುರುಷನ ಶರೀರದ ವಿಭಿನ್ನ ಅವಯವಗಳನ್ನು ನಾಲ್ಕು ಜಾತಿಯ ಗುಂಪುಗಳಿಗೆ ನಿಯೋಜಿಸಲು ಯತ್ನಿಸುತ್ತದೆ. ಆದರೆ, ಈ ಜಾತಿವ್ಯವಸ್ಥೆಯು ಋಗ್ವೇದ ಗ್ರಂಥ ಸಂಕಲನೆಯಾದ ಕಾಲದ ಸಮಾಜಕ್ಕೂ ಸಹ ತೀರ ಪರಕೀಯವಾಗಿತ್ತು ಎಂಬುದು ಗಮನಾರ್ಹವಾದ ಅಂಶ.
ಈ ಮಂತ್ರವು ಪ್ರಸಕ್ತ ಸೂಕ್ತದಲ್ಲಿ ಹೇಗೆ ಸೇರ್ಪಡೆಯಾಯಿತು ಎಂಬುದನ್ನು ಊಹೆಗೆ ಬಿಡಲಾಗಿದೆ. ವೇದದ ಅಪೌರುಷೇಯತ್ವದ ಬಗ್ಗೆ ನಂಬಿಕೆ ಇಲ್ಲದಿರುವ ಅವಿಶ್ವಾಸಿಗಳು ಇಡೀ ಸೂಕ್ತವು ಪ್ರಕ್ಷೇಪಿಸಲ್ಪಟ್ಟಿರುವ ಭಾಗವೆಂದು ಸೂಚಿಸುತ್ತಾರೆ. ಋಗ್ವೇದದ ಗ್ರಂಥದಲ್ಲಿ ಈ ಚಾತುರ್ವರ್ಣ ಕಲ್ಪನೆಯು ಎಲ್ಲಿಯೂ ಪುನರಾವರ್ತನೆಯಾಗಿಲ್ಲ. ಶೂದ್ರ ಎಂಬ ಪದವು ಇಡೀ ಋಗ್ವೇದದಲ್ಲಿ ಯಾವ ಸನ್ನಿವೇಶದಲ್ಲೂ ಕಾಣುವುದಿಲ್ಲ. ಹಾಗೇ ಬ್ರಾಹ್ಮಣ ಎಂಬ ಪದವು ಈ ಮಂತ್ರದಲ್ಲಿ ಒಂದೇಬಾರಿ ಪ್ರಯೋಗವಾಗಿದೆ ಹಾಗೂ ಮತ್ತೆಲ್ಲೂ ಪ್ರಯೋಗವಾಗಿಲ್ಲ. ಅದೇ ರೀತಿ ಕ್ಷತ್ರಿಯ ಎಂಬ ಅರ್ಥಕೊಡುವ "ರಾಜನ್ಯ" ಪದವನ್ನು ಕೇವಲ ಈ ಸೂಕ್ತದಲ್ಲಿ ಮಾತ್ರ ಬಳಸಲಾಗಿದೆ ಮತ್ತು ಋಗ್ವೇದ ಸಂಹಿತೆಯಲ್ಲಿ ಬೇರೆಲ್ಲಿಯೂ ಬಳಸಿಲ್ಲ, ಹಾಗೇ ವೈಶ್ಯ ಮತ್ತು ಶೂದ್ರ ಅಭಿದಾನಗಳೂ ಬಳಕೆಯಾಗಿಲ್ಲ.

ಯಜುರ್ವೇದದಲ್ಲೂ ಸಹ, ಈ ನಾಲ್ಕು ಸಾಮಾಜಿಕ ಪಂಗಡಗಳ ಕುರಿತಾದ ಉಲ್ಲೇಖಗಳಲ್ಲಿ ಕೊಡಲಾಗಿರುವ ವಿವರಣೆಯು ಸಾಂಕೇತಿಕವಾದುದಾಗಿದೆ. ವಾ.ಸಂ.14.28.31 ರಲ್ಲಿ ಸೂಚಿಸಲಾಗಿರುವ ಅಭಿಪ್ರಾಯದಲ್ಲಿ, ಪುರುಷನ ಮೂರು (ಪ್ರಾಣ) ಶಕ್ತಿಗಳು ಬ್ರಹ್ಮನನ್ನು (ಅಂದರೆ ಬ್ರಾಹ್ಮಣ), ಪ್ರತಿನಿಧಿಸುತ್ತದೆ, ಕಾಲಿನ ಹತ್ತು ಬೆರಳುಗಳು, ಎರಡು ತೊಡೆಗಳು ಮತ್ತು ಮುಂಡವು ಕ್ಷಾತ್ರ (ಕ್ಷತ್ರಿಯ)ನನ್ನು ಪ್ರತಿನಿಧಿಸುತ್ತದೆ, ಹತ್ತು ಪ್ರಾಣಶಕ್ತಿಗಳು, ಪಂಚಭೂತಗಳು, ಮನಸ್ಸು, ಪ್ರಜ್ಞೆ ಮತ್ತು ಅಹಂಭಾವಗಳು ಶೂದ್ರಾಯೇ (ಶೂದ್ರ ಮತ್ತು ವೈಶ್ಯರನ್ನು)ರನ್ನು ಪ್ರತಿನಿಧಿಸುತ್ತದೆ.

ಇದೇ ವೇದದಲ್ಲಿ ಸಾಮಾನ್ಯವಾಗಿ ಬ್ರಹ್ಮ ಮತ್ತು ಕ್ಷಾತ್ರರನ್ನು ಕುರಿತ ಉಲ್ಲೇಖಗಳು ಹತ್ತಾರು ಬಾರಿ ಕಾಣಸಿಗುತ್ತವೆ ಹಾಗೂ ಯಜ್ಞದಾಚರಣೆಯ ಸಂದರ್ಭದಲ್ಲಿ ಯಜಮಾನರೆಂದು ಅನೇಕ ಮಂತ್ರಗಳಲ್ಲಿ ಕಾಣಸಿಗುತ್ತವೆ. ಐತರೇಯ ಬ್ರಾಹ್ಮಣವು ಪ್ರಜಾಪತಿಯು ಯಜ್ಞವನ್ನು ಸೃಷ್ಟಿಸಿದನು ಮತ್ತು ಅನಂತರ ಬ್ರಹ್ಮ ಮತ್ತು ಕ್ಷತ್ರಿಯರನ್ನು ಸೃಷ್ಟಿಸಿದನು ಎಂದು ತಿಳಿಸುತ್ತದೆ.

ಇವೆರಡೂ ಯಜ್ಞದ ಸಾಧ್ಯತೆಯನ್ನುಂಟು ಮಾಡುವ ಶಕ್ತಿಗಳನ್ನು ಸೂಚಿಸುತ್ತವೆ ಮತ್ತು .ಬ್ರಾ.11.2.7.16 ರ ಪ್ರಕಾರ ಈ ಎರಡೂ ಶಕ್ತಿಗಳು ಸಕಲ ಪ್ರಜೆಗಳಲ್ಲಿ ಅಂದರೆ ವೈಶ್ಯರಲ್ಲಿ ಸ್ಥಾಪಿಸಲ್ಪಟ್ಟಿರುತ್ತದೆ.

ಇದೇ ಗ್ರಂಥವುಬ್ರಹ್ಮ, ಕ್ಷಾತ್ರ ಮತ್ತು ವಿಶ ಈ ಮೂರು ಅಂಶಗಳನ್ನು ಮೂರು ವ್ಯಾಹೃತಿಗಳೊಂದಿಗೆ, ಭೂಃ (ಭೂಮಿ) ಭುವಃ (ಅಂತರಿಕ್ಷ), ಸ್ವಃ (ಆಕಾಶ); ಗುರುತಿಸಿದೆ. ಪ್ರಜಾಪತಿಯು ಮೂರು ಸ್ತರಗಳಿಂದ ಮೂರು ಶಕ್ತಿಗಳನ್ನು ಸೃಷ್ಟಿಸಿದನು.

ಚರಾಚರ ಸಮಸ್ತ ವಿಶ್ವಕ್ಕೆ ಸಾಮಾನ್ಯ ಮೂಲದ ಸಮರ್ಥನೆಯ ಸಾಂದರ್ಭಿಕ ಹಿನ್ನಲೆಯಲ್ಲಿ ಈ ಮಂತ್ರವನ್ನು ಇತರ ಮಂತ್ರಗಳೊಂದಿಗೆ ಸಂಯೋಜಿಸಬೇಕಾಗುತ್ತದೆ. ಅಲಂಕಾರ ಪುರುಷನ ಬೇರೆ ಬೇರೆ ಅವಯವಗಳಿಂದ ದೇವತೆಗಳು, ವೇದಗಳು, ಛಂದಸ್ಸುಗಳು, ಸಮಸ್ತ ಪ್ರಾಣಿಗಳು, ಸೂರ್ಯ, ಚಂದ್ರ, ಭೂಮಿ, ದಿಗಂತಗಳು, ದಿಕ್ಕುಗಳು, ಋತುಗಳು ಹಾಗೂ ಸಮಸ್ತ ಮಾನವ ಜೀವಿಗಳು ಸೃಷ್ಟಿಸಲ್ಪಟ್ಟರು.

ಮಂತ್ರ - 14 -ಸಂಸ್ಕೃತದಲ್ಲಿ :

ಚಂದ್ರಮಾ ಮನಸೋ ಜಾತಃ ಚಕ್ಷೋಃ ಸೂರ್ಯೋ ಅಜಾಯತ
ಮುಖಾತ್ ಇಂದ್ರಃ ಚ ಅಗ್ನಿಃ ಪ್ರಾಣಾತ್ ವಾಯುರ್ ಅಜಾಯತ

ಕನ್ನಡದಲ್ಲಿ :

ಚಂದ್ರನುದಿಸಿದನು ಮನದಿಂದ ರವಿಯುದಿಸಿದ ಕಣ್ಣಿಂದ
ಮುಖದಿಂದಾದರು ಇಂದ್ರಾಗ್ನಿಗಳು ಶ್ವಾಸದಿ ಜನಿಸಿದ ವಾಯು  

ವಿವರಣೆ :

ವಿರಾಟ್ ಪುರುಷನ ಮನಸ್ಸಿನಿಂದ ಚಂದ್ರ, ನೇತ್ರದಿಂದ ಸೂರ್ಯ, ಮುಖದಿಂದ ಇಂದ್ರ ಮತ್ತು ಅಗ್ನಿಗಳು ಹುಟ್ಟಿದರು. ಪ್ರಾಣದಿಂದ ವಾಯುವು ಹುಟ್ಟಿದನು.

ವ್ಯಾಖ್ಯಾನ :

ಹೇಗೆ ಸೂರ್ಯ ಮತ್ತು ದೃಷ್ಟಿಗಳ ನಡುವೆ ಆತ್ಮೀಯ ಸಂಬಂಧವಿರುವುದೋ ಹಾಗೇ ಚಂದ್ರ ಮತ್ತು ಮತ್ತು ಮನಸ್ಸಿನ ನಡುವೆ ಸಹ ಇದೆ. ಮಾನವನ ರೂಪದಲ್ಲಿ ಅತ್ಯಂತ ಆಕರ್ಷಕ ಭಾಗವಾದ, ಮುಖವು ಇಂದ್ರನಿಗೆ ಹಾಗೂ ಅಗ್ನಿಗೆ ಸಂಬಂಧಿಸಿದುದಾಗಿದೆ. ಜೀವಶಕ್ತಿಯು ಪ್ರಾಣವಾಯುವಿನ ರೂಪಗಳಾದ ಪ್ರಾಣಶಕ್ತಿ ರೂಪದಲ್ಲಿರುತ್ತದೆ.

ಚದಿ ಧಾತುವಿನಿಂದ ಉತ್ಪನ್ನವಾಗಿರುವ ಚಂದ್ರ ಪದವು ಮನಸ್ಸಿಗೆ ಆಹ್ಲಾದಕರವಾದದ್ದು ಎಂಬರ್ಥವನ್ನು ಸೂಚಿಸುತ್ತದೆ. ಸೂರ್ಯನನ್ನು ಹಾಗೆಂದು ಕರೆಯಲು ಕಾರಣವೇನೆಂದರೆ ಅವನು ಅಂತರಿಕ್ಷದಲ್ಲಿ ಸಂಚರಿಸುತ್ತಾನೆ; ಅಥವಾ ಅವನು ಸಮಸ್ತ ಜೀವಿಗಳಿಗೆ ಜನ್ಮಕೊಡುತ್ತಾನೆ ಅಥವಾ ಅವನು ಸಮಸ್ತ ಜೀವಿಗಳಲ್ಲಿ ಕ್ರಿಯೆ ಹಾಗೂ ಚಲನೆಯನ್ನು ಪ್ರಚೋದಿಸುತ್ತಾನೆ. ಸೌರವ್ಯೂಹದಲ್ಲಿರುವ ಹಾಗೂ ಎಲ್ಲ ಜೀವಿಗಳ ಬಲಗಣ್ಣಿನಲ್ಲೂ ಸಹ ಇರುವ ಸೂರ್ಯನ ಚೇತನಾತ್ಮದ ಬಗ್ಗೆ ಉಲ್ಲೇಖಗಳಿವೆ.

ಅಗ್ನಿಯು ದೇವತೆಗಳಲ್ಲಿ ಆದಿ ಹಾಗೂ ಅಗ್ರಗಣ್ಯನಂದಷ್ಟೇ ಅಲ್ಲದೆ, ಆಕಾಶದ ಪ್ರಭುವೆಂಬುದಾಗಿಯೂ ವರ್ಣಿಸಲ್ಪಟ್ಟಿದ್ದಾನೆ. ವಾಸ್ತವವಾಗಿ ಇಂದ್ರನು ಸ್ವರ್ಗಲೋಕದ ನಿವಾಸಿಗಳಿಗೆ ಒಡೆಯನು; ಅವನು ದೇವತೆಗಳ ಯಜಮಾನನೂ ಸಹ. ಮಾನವನ ರೂಪದಲ್ಲಿ ಮುಖವು ಪ್ರಧಾನವಾಗಿರುವಂತೆ ಅಗ್ನಿ ಮತ್ತು ಇಂದ್ರರಿಬ್ಬರು ಸಾರ್ವಭೌಮತ್ವ ಮತ್ತು ಶ್ರೇಷ್ಠತೆಯ ಅಂಶವನ್ನು ಪ್ರತಿನಿಧಿಸುತ್ತಾರೆ. ವಾಯುವನ್ನು ಹೀಗೆ ಸಂಬೋಧಿಸಲು ಕಾರಣವೇನೆಂದರೆ (ಪುರುಷನ ಪ್ರಾಣೇಂದ್ರಿಯಕ್ಕೆ ಸಮನಾದ ವಾಯು) ಅವನು ಶರೀರದೆಲ್ಲೆಡೆ ಚಲಿಸುತ್ತಾನೆ ಹಾಗೂ ಎಲ್ಲಾ ಚಲನೆಗಳನ್ನು ಮತ್ತು ಕ್ರಿಯೆಗಳನ್ನು ಉಂಟುಮಾಡುತ್ತಾನೆ.

ಭೌತಿಕ ಚಂದ್ರನು ಒಳಮನಸ್ಸಿನ ಸಂವಾದಿಯಾಗಿದ್ದಾನೆ; ಎಲ್ಲಕ್ಕಿಂತ ಮಿಗಿಲಾದ ಸೂರ್ಯನ ಚಕ್ಷುಗಳಲ್ಲಿನ ದೃಷ್ಟಿಗೂ; ಉಷ್ಣತೆ ಹಾಗೂ ಬೆಳಕಿನ ತತ್ವವು (ಅಗ್ನಿಗೂ) ಮತ್ತು ಇಂದ್ರಿಯಗಳ ಸಾಮರ್ಥ್ಯ(ಇಂದ್ರ)ವು ಶಿರಸ್ಸಿನೊಳಗಿನ ಸಕ್ರಿಯ ಕಾರ್ಯಶೀಲ ತತ್ವಗಳಿಗೂ; ವಾಯುಮಂಡಲದ ಪ್ರಾಣವಾಯು ಭೌತಿಕ ಶರೀರದೊಳಗಿನ ಪ್ರವಾಹ ಶಕ್ತಿಗಳಿಗೆ ಸಮಾನವಾಗಿದೆ.

ಮಂತ್ರ - 15 -ಸಂಸ್ಕೃತದಲ್ಲಿ :

ನಾಭ್ಯಾ ಆಸೀತ್ ಅಂತರಿಕ್ಷಂ ಶೀರ್ಷ್ಣೋ ದ್ಯೌಃ ಸಮವರ್ತತ
ಪದ್ಭ್ಯಾಂ ಭೂಮರ್ ದಿಶಃ ಶ್ರೋತ್ರಾತ್ ತಥಾ ಲೋಕಾನ್ ಅಕಲ್ಪಯನ್

ಕನ್ನಡದಲ್ಲಿ :

ಹೊಕ್ಕುಳಿನಿಂದಾಕಾಶವು ಶಿರದಲಿ ಮೂಡಿದ್ದು ಸ್ವರ್ಗ
ದಿಕ್ಕುಗಳ ಕಿವಿಯಿಂದ ಬುವಿಯ ಕಾಲಿಂದಲಿಂತೆ ಕಲ್ಪಿಸಿದರು ಲೋಕ  

ವಿವರಣೆ :

ನಾಭಿಯಿಂದ ಅಂತರಿಕ್ಷವು, ಶೀರ್ಷದಿಂದ ದಿವಿಯು, ಪಾದಗಳಿಂದ ಭೂಮಿಯು ಉಂಟಾಯಿತು. ಶ್ರೋತ್ರದಿಂದ ದಿಕ್ಕುಗಳು ಉತ್ಪನ್ನವಾದವು. ಹೀಗೆ ಪ್ರಜಾಪತಿಯ ಶರೀರ ಭಾಗದಿಂದ ಅಂತರಿಕ್ಷ ಮೊದಲಾದ ಲೋಕಗಳನ್ನು ಕಲ್ಪಿಸಿದರು.

ವ್ಯಾಖ್ಯಾನ :

ಯಾಸ್ಕರ ಪ್ರಕಾರ (ನಿರುಕ್ತ, 4.21) ಹೊಕ್ಕಳು ಎಂಬ ಕಲ್ಪನೆಯು ಶರೀರದ ಅತ್ಯಂತ ಪ್ರಮುಖ ಬಿಂದು ಅಥವಾ ಸಮಸ್ತ ಅವಯವಗಳ ಕೇಂದ್ರ ಬಿಂದು ಎಂಬ ಸೂಚನೆಯನ್ನೊಳಗೊಂಡಿದೆ. ಪದಶಃ ಮಧ್ಯವಲಯವೆನ್ನಲಗುವ ಅಂತರಿಕ್ಷವು ಪುರುಷನ ಹೊಕ್ಕಳಿನಿಂದ ಉಂಟಾಯಿತು. ಆದರೆ ಈ ಪದವು ಅನೇಕ ಸೂಕ್ಷ್ಮ ಅರ್ಥಗಳನ್ನು ಹೊಂದಿದೆ. ವಾಯುಮಂಡಲವು ಅಥವಾ ಅಂತರಿಕ್ಷವು ಹಾಗೆಂದು ಕರೆಯಲ್ಪಡುತ್ತದೆ, ಏಕೆಂದರೆ ಅದು ಭೂಮಿ ಮತ್ತು ಆಕಾಶಗಳ ನಡುವೆ ಸ್ಥಾಪಿತವಾಗಿದೆ ಅಥವಾ ಅದು (ಕ್ಷಾ) ಭೂಮಿಯ ಕೊನೆಯ ತುದಿಯಾಗಿದೆ ಅಥವಾ ಅದರಲ್ಲಿ ಭೂಮಿ ಮತ್ತು ಆಕಾಶವು ಒಳಗೊಂಡಿರುವುದು ಅಥವಾ ಅದು ಶರೀರದೊಳಗಿನ ಅಮರವಾದ ಹಾಗೂ ನಿರ್ವಿಕಾರವಾದ ಆಕಾಶವಾಗಿದೆ.

ಅದು ಗುಣದೋಷವುಳ್ಳ ವಸ್ತುಗಳ ನಡುವೆ ನಿರ್ವಿಕಾರ ರೂಪವುಳ್ಳದ್ದಾಗಿ, ನಶ್ವರ ವಸ್ತುಗಳ ನಡುವೆ ಅನಂತ ಸ್ವರೂಪವುಳ್ಳದ್ದಾಗಿದೆ. ಪುರುಷನ ಹೊಕ್ಕಳಿನಂತೆ, ಅದು ಸಮಸ್ತ ಸೃಷ್ಟಿಯ ಕೇಂದ್ರ ಸ್ಥಾನವಾಗಿದೆ. ವಾಸ್ತವವಾಗಿ ಸಮಸ್ತ ವಿಶ್ವವೂ ಇದರಲ್ಲಿ ನೆಲೆಗೊಂಡಿದೆ. ಶಾಂತ ಅಂತರಿಕ್ಷವು ಭೂಮಿ ಮತ್ತು ಆಕಾಶ ಇವುಗಳ ನಡುವೆ ಅಂತರವಿರಿಸುತ್ತದೆ. ಭೂಮಿಯು ಪುರುಷನ ಪಾದಗಳಿಂದ ಪ್ರತಿನಿಧಿಸಲ್ಪಟ್ಟಿದ್ದರೆ, ಆಕಾಶವು ಪುರುಷನ ಶಿರಸ್ಸಿನ ಸಂಕೇತವಾಗಿದೆ. ಅಂತರಿಕ್ಷದ ಸುತ್ತಲೂ ಪುರುಷನ ಕಿವಿಗಳಿಂದ ಉಂಟಾದ ದಿಕ್ಕುಗಳಿವೆ. ಈ ರೀತಿಯಲ್ಲಿ ಸಮಸ್ತ ಲೋಕಗಳು ಮತ್ತು ನಮ್ಮ ಅನುಭವ ಜ್ಞಾನದ ಸ್ತರಗಳು ಪುರುಷನ ಶರೀರದಿಂದ ನಿರ್ಮಾಣಗೊಂಡಿವೆ.

ಮಂತ್ರ - 16 -ಸಂಸ್ಕೃತದಲ್ಲಿ :

ವೇದಾಹಮೇತಂ ಪುರುಷಂ ಮಹಾಂತಮ್ ಆದಿತ್ಯವರ್ಣಂ ತಮಸಸ್ತು ಪಾರೇ
ಸರ್ವಾಣಿ ರೂಪಾಣಿ ವಿಚಿತ್ಯ ಧೀರಃ
ನಾಮಾನಿ ಕೃತ್ವಾಭಿವದನ್, ಯದಾಸ್ತೇ

ಕನ್ನಡದಲ್ಲಿ :

ಬಲ್ಲೆ ನಾನೀ ಪರಮಪುರುಷನನು
ಸೂರ್ಯನೊಲು ಬಣ್ಣ ಕತ್ತಲಾಚೆಗಿಹನು
ಎಲ್ಲ ರೂಪಿಸಿದ ಸರ್ವಜ್ಞ ತಾನು
ಹೆಸರುಗಳನಿರಿಸಿ ನೋಡುತಿಹನು                 

ವಿವರಣೆ :

ಯಾವ ಪುರುಷನು ದೇವ-ಮನುಷ್ಯ-ಇತ್ಯಾದಿ ರೂಪವಾದ ಸಮಸ್ತ ಶರೀರಗಳನ್ನೂ ವಿಶೇಷವಾಗಿ ಉತ್ಪಾದಿಸಿ ಇವನು ದೇವ-ಇವನು ಮನುಷ್ಯ-ಇದು ಪಶುವು  - ಎಂದು ಹೆಸರುಗಳನ್ನು ಮಾಡಿ ಆ ಹೆಸರುಗಳಿಂದ ಸರ್ವವಿಧವಾಗಿ ವ್ಯವಹರಿಸುತ್ತಾ ಇದ್ದಾನೆಯೋ ಅಂತಹ ಸಮಸ್ತ ಗುಣಗಳಿಂದಲೂ ಅಧಿಕನಾಗಿರುವ ಆದಿತ್ಯನಂತೆ ಸ್ವಪ್ರಕಾಶ ರೂಪನಾಗಿರುವ ಈ ವಿರಾಟ್ ಪುರುಷನನ್ನು ನಾನು ಧ್ಯಾನದಿಂದ ಸದಾ ಅನುಭವರೂಪವಾಗಿ ತಿಳಿಯುತ್ತೇನೆ. ಆ ಪುರುಷನು ತಮಸ್ಸಿನ ರೂಪವಾದ ಅಜ್ಞಾನಕ್ಕಿಂತಲೂ ಆಚೆ ಬೆಳಗುತ್ತಾನೆ.

ಮಂತ್ರ- 17 -ಸಂಸ್ಕೃತದಲ್ಲಿ :

ಧಾತಾ ಪುರಸ್ತಾದ್ಯಮುದಾಜಹಾರ
ಶಕ್ರಃ ಪ್ರವಿದ್ವಾನ್-ಪ್ರದಿಶಶ್ಚತಸ್ರಃ
ತಮೇವಂ ವಿದ್ವಾನಮೃತ ಇಹ ಭವತಿ
ನಾನ್ಯಃ ಪಂಥಾ ಅಯನಾಯ ವಿದ್ಯತೇ

ಕನ್ನಡದಲ್ಲಿ :

ಸೃಷ್ಟಿಗೂ ಮೊದಲವನ ಪಾಡಿದನು ಬ್ರಹ್ಮ
ಶತವರುಷ ತಪಗೈದು ನಾಲ್ದೆಸೆಗಳರಿತವನು
ಅವನನಿಂತರಿವವನೆ ಗೆಲುವ ಸಾವನ್ನು
ಬೇರೆದಾರಿಯೆ ಇರದು ಆ ಪಯಣಕಿನ್ನು

ವಿವರಣೆ :

ಪ್ರಜಾಪತಿಯು ಯಾವ ವಿರಾಟ್ ಪುರುಷನನ್ನು ಮೊದಲು ಧ್ಯಾನಿಸುವವರ ಉಪಕಾರಕ್ಕಾಗಿ ಪ್ರಖ್ಯಾತಗೊಳಿಸಿ ದನೋ, ನಾಲ್ಕು ದಿಕ್ಕುಗಳಲ್ಲಿ ಮತ್ತು ನಾಲ್ಕು ಅವಾಂತರ (ಆಗ್ನೇಯ ಇತ್ಯಾದಿ) ದಿಕ್ಕುಗಳಲ್ಲಿ ಇರುವ ಸಮಸ್ತ ಪ್ರಾಣಿಗಳನ್ನೂ ಚೆನ್ನಾಗಿ ಬಲ್ಲವನಾದ ಇಂದ್ರನು ಧ್ಯಾನಿಸುವವರ ಅನುಗ್ರಹಕ್ಕಾಗಿ ಯಾವ ಪುರುಷನನ್ನು ಪ್ರಖ್ಯಾತಗೊಳಿಸಿದನೋ ಆ ವಿರಾಟ್ ಪುರುಷನನ್ನು ಈ ರೀತಿಯಾಗಿ (ಇಂದ್ರನ ಉಪದೇಶದಿಂದ) ಸಾಕ್ಷಾತ್ಕರಿಸಿಕೊಂಡವನು ಈ ಜನ್ಮದಲ್ಲೇ ಅಮೃತನಾಗುತ್ತಾನೆ. ಅಮೃತತ್ವಪ್ರಾಪ್ತಿಗೆ ಬೇರೆ ದಾರಿಯಿಲ್ಲ.

ಮಂತ್ರ - 18 -ಸಂಸ್ಕೃತದಲ್ಲಿ :

ಯಜ್ಞೇನ ಯಜ್ಞಮಯಜಂತ ದೇವಾಃ  ತಾನಿ ಧರ್ಮಾಣಿ ಪ್ರಥಮಾನ್ಯಾಸನ್
ತೇ ಹ ನಾಕಂ ಮಹಿಮಾನಃ ಸಚಂತೇ ಯತ್ರ ಪೂರ್ವೇ ಸಾಧ್ಯಾ ಸಂತಿ ದೇವಾಃ

ಕನ್ನಡದಲ್ಲಿ :

ಪೂಜೆಗೈಯಲು ಸುರರು ಯಜ್ಞದಿಂ-
ದಾಧರ್ಮಗಳುತ್ತಮವೆನಿಸಿದವು
ಮಹಿಮೆಯುಳ್ಳವರವರು ಮುಕುತಿ ಹೊಂದುವರು
ಇಹರಲ್ಲಿ ಮುನ್ನಿನ ಸಾಧಕರೂ ಸುರರೂ           




ವಿವರಣೆ :

ಪ್ರಜಾಪತಿಯ ಪ್ರಾಣರೂಪರಾದ ದೇವತೆಗಳು ಮಾನಸಿಕ ಸಂಕಲ್ಪರೂಪವಾದ ಯಜ್ಞದಿಂದ ಯಜ್ಞಸ್ವರೂಪನಾದ ಪ್ರಜಾಪತಿಯನ್ನು ಯಜ್ಞರೂಪವಾಗಿ ಪೂಜಿಸಿದರು. ಆ ಯಜ್ಞರೂಪವಾದ ಪೂಜೆಯಿಂದ ಜಗತ್ತಿನ ರೂಪಗಳನ್ನು ಭರಿಸುವ ಮುಖ್ಯರೂಪವಾದ ಧರ್ಮಗಳು ಉಂಟಾದವು. ಯಾವ ವಿರಾಟ್ ಪುರುಷಪ್ರಾಪ್ತಿ ರೂಪವಾದ ಸ್ವರ್ಗದಲ್ಲಿ (ಪಾಪವಿಲ್ಲದ ಸ್ಥಾನದಲ್ಲಿ) ಪುರಾತನವಾದರೂ ವಿರಾಟ್ ಪುರುಷನ ಉಪಾಸನಾರೂಪ ಸಾಧನೆಯನ್ನು ಮಾಡುವವರೂ ಆದ ದೇವತೆಗಳು ಇದ್ದಾರೆಯೋ ಅಂತಹ ಪಾಪರಹಿತವಾದ ಸ್ವರ್ಗಲೋಕವನ್ನು ವಿರಾಟ್ ಪುರುಷನ ಉಪಾಸಕರಾದ ಮಹಾತ್ಮರು ಹೊಂದುತ್ತಾರೆ. ಓಂ ಭಗವಂತನಾದ ರುದ್ರನಿಗೆ ನಮಸ್ಕಾರ.

ಛಂದೋವಿಚಾರ:
ಮೂಲ: ಪದ್ಯ 1-15 ಅನುಷ್ಟುಭ್; 16-18: ತ್ರಿಷ್ಟುಭ್
ಕನ್ನಡ: ರುದ್ರಗಣಪ್ರಧಾನವಾದ ಅಂಶಲಯ⁠⁠⁠⁠
ಸಂಸ್ಕೃತ ಹಾಗೂ ಕನ್ನಡದ ಮಂತ್ರಗಳು - ಶ್ರೀ.ಬಿ.ಎಸ್.ಚಂದ್ರಶೇಖರ ಅವರಸವಿಗನ್ನಡ ಸ್ತೋತ್ರ ಚಂದ್ರಿಕೆ
ವಿವರಣೆಗಳು : ಸಸ್ವರ ಮಹಾನ್ಯಾಸಾದಿ ಮಂತ್ರ - ವಿದ್ವಾನ್ ಶೇಷಾಚಲ ಶರ್ಮ
ವ್ಯಾಖ್ಯಾನಗಳು : ಪುರುಷ ಸೂಕ್ತ - ಎಸ್.ಕೆ.ರಾಮಚಂದ್ರ ರಾವ್


Comments

Popular posts from this blog

ಶಿವ ಸಂಕಲ್ಪ ಸೂಕ್ತ ( ಶುಕ್ಲಯಜುರ್ವೇದ, ವಾಜಸನೇಯ ಸಂಹಿತಾ)

ಮಂತ್ರಪುಷ್ಪ (ತೈತ್ತರೀಯ ಆರಣ್ಯಕ)

ಪುರುಷ ಸೂಕ್ತ